Space Casino Background 3D
ದೇಶದ ಮಧ್ಯಮ ವರ್ಗದ ಜನ ಮತ್ತು ಯುವಕರನ್ನು ಹಣ ಆಧಾರಿತ ಆನ್‌ಲೈನ್ ಆಟಗಳಿಂದ ರಕ್ಷಿಸಲು ಮತ್ತು ಇತರ ಆನ್‌ಲೈನ್ ಆಟಗಳನ್ನು ಪ್ರಚಾರ ಮಾಡಲು ಮತ್ತು ನಿಯಂತ್ರಿಸಲು ಕೇಂದ್ರ ಸರ್ಕಾರವು ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಮಸೂದೆ –2025’ ಮಂಡಿಸಿದ್ದು, ಅದಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆತು ರಾಷ್ಟ್ರಪತಿಯವರ ಅಂಕಿತವನ್ನೂ ಪಡೆದಿದೆ. ಈ ಕಾಯ್ದೆಯಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವಾದರೂ ಜನರ ಜೀವ ಮತ್ತು ಆಸ್ತಿಪಾಸ್ತಿ ಉಳಿಸುವ ದಿಸೆಯಲ್ಲಿ ಇದು ಸ್ವಾಗತಾರ್ಹ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ವೇಳೆ, ಹಲವು ಆನ್‌ಲೈನ್ ಗೇಮಿಂಗ್ ಕಂಪನಿಗಳು ಕಾಯ್ದೆಯನ್ನು ವಿರೋಧಿಸಿವೆ
ಆನ್‌ಲೈನ್ ಆಟಗಳಿಗೆ (ಗೇಮಿಂಗ್) ಸಂಬಂಧಿಸಿದಂತೆ, ಅದರಲ್ಲೂ ವಿಶೇಷವಾಗಿ ಹಣ ಆಧಾರಿತ ಆನ್‌ಲೈನ್ ಆಟಗಳ ವಿಚಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಥಿಕ ಹಾಗೂ ಕಾನೂನು ಚೌಕಟ್ಟು ಈವರೆಗೂ ಇರಲಿಲ್ಲ. ಬೆರಳೆಣಿಕೆಯಷ್ಟು ರಾಜ್ಯಗಳು ಇವುಗಳನ್ನು ನಿಷೇಧಿಸುವ ಪ್ರಯತ್ನ ಮಾಡಿದ್ದವು. ಮಧ್ಯಮ ವರ್ಗ ಮತ್ತು ಯುವಜನರ ನಡುವೆ ಜನಪ್ರಿಯವಾಗಿರುವ ಈ ಆಟಗಳಿಗೆ ಒಂದು ಕಾನೂನು ಚೌಕಟ್ಟು ರೂಪಿಸಲು, ಅವುಗಳನ್ನು ನಿಯಂತ್ರಿಸಲು, ಅವುಗಳ ಚಟುವಟಿಕೆ, ಸಂಪನ್ಮೂಲ, ಮೂಲಸೌಕರ್ಯ ಮತ್ತು ಸಂಶೋಧನೆಗೆ ವ್ಯವಸ್ಥಿತ ರೂಪ ನೀಡಲು ಕೇಂದ್ರ ಸರ್ಕಾರವು ಮೊಟ್ಟ ಮೊದಲ ಬಾರಿಗೆ ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಮಸೂದೆ 2025’ ಕಾಯ್ದೆಯನ್ನು ಕೆಲವು ದಿನಗಳ ಹಿಂದೆಯಷ್ಟೇ ರೂಪಿಸಿದೆ.
ಹಣ ಆಧಾರಿತ ಆನ್‌ಲೈನ್ ಆಟವು ಜಾಗತಿಕ ಮಟ್ಟದ ಸಮಸ್ಯೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಒಂದು ವ್ಯಾಧಿ ಎಂದೇ ವ್ಯಾಖ್ಯಾನಿಸಿದೆ. ಆನ್‌ಲೈನ್ ಜೂಜಿನಲ್ಲಿ ತೊಡಗುವ ಜನರ ಸಂಖ್ಯೆ ಭಾರತದಲ್ಲಿಯೂ ದೊಡ್ಡ ಪ್ರಮಾಣದಲ್ಲಿದೆ. ಜನರು, ಅಪಾಯ ಮತ್ತು ನಷ್ಟದ ಅರಿವೇ ಇಲ್ಲದಂತೆ, ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಕಳೆದುಕೊಂಡು, ಕೆಲಸ ಕಾರ್ಯ ಬಿಟ್ಟು ಆನ್‌ಲೈನ್ ಜೂಜಿನಲ್ಲಿ ಹಣ ತೊಡಗಿಸುತ್ತಿದ್ದಾರೆ. ಅನೇಕರು ಶೀಘ್ರವಾಗಿ ಹಣ ಮಾಡುವ ಉದ್ದೇಶದಿಂದ ತಮ್ಮ ಬಳಿ ಇದ್ದ ಹಣ, ಆಸ್ತಿ ಕಳೆದುಕೊಂಡು, ಮಾನಸಿಕ ಖಿನ್ನತೆಗೆ ಗುರಿಯಾಗಿ, ಸಾಮಾಜಿಕವಾಗಿಯೂ ಪೆಟ್ಟು ತಿನ್ನುತ್ತಿದ್ದಾರೆ. ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಇಂಥವರ ರಕ್ಷಣೆಯೇ ಕಾಯ್ದೆಯ ಉದ್ದೇಶ ಎಂದು ಕೇಂದ್ರವು ಪ್ರತಿಪಾದಿಸಿದೆ.
ಆನ್‌ಲೈನ್ ಜೂಜಿನ ಆ್ಯಪ್‌ಗಳು ಆಕರ್ಷಕವಾದ, ಅಷ್ಟೇ ಕ್ಲಿಷ್ಟವಾದ ವಿನ್ಯಾಸವನ್ನು ಹೊಂದಿದ್ದು, ಅನೇಕ ಬಾರಿ ಬಳಕೆದಾರರನ್ನು ದಾರಿ ತಪ್ಪಿಸುವಂತೆಯೂ ಇರುತ್ತವೆ. ಅವುಗಳಲ್ಲಿ ಬಳಕೆದಾರರ ರಕ್ಷಣೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯ ಕೊರತೆಯೂ ಇರುತ್ತದೆ. ಆನ್‌ಲೈನ್ ಜೂಜನ್ನು ಆಕರ್ಷಕವಾದ ಜಾಹೀರಾತುಗಳ ಮೂಲಕ ಪ್ರಚಾರ ಮಾಡಲಾಗುತ್ತದೆ. ಈ ಮೂಲಕ ಭಾರಿ ಪ್ರಮಾಣದಲ್ಲಿ ಯುವಕರನ್ನು ಮತ್ತು ಬಡ, ದುಡಿಯುವ ವರ್ಗಗಳನ್ನು ತನ್ನತ್ತ ಸೆಳೆದುಕೊಳ್ಳಲಾಗುತ್ತಿದೆ. ಜತೆಗೆ, ಆರ್ಥಿಕ ವಂಚನೆ, ಹಣ ಅಕ್ರಮ ವರ್ಗಾವಣೆ, ತೆರಿಗೆ ವಂಚನೆಗೆ ಕಾರಣವಾಗುತ್ತಿರುವುದಲ್ಲದೇ, ಭಯೋತ್ಪಾದನೆಯಂಥ ಕೃತ್ಯಗಳಿಗೆ ಹಣಕಾಸಿನ ಬೆಂಬಲ ಒದಗಿಸುವ ಮೂಲಕ ದೇಶದ ರಕ್ಷಣೆ, ಸಮಗ್ರತೆ ಮತ್ತು ಕಾನೂನು ಸುವ್ಯವಸ್ಥೆಗೂ ಕಂಟಕವಾಗುತ್ತಿವೆ.
ಡಿಜಿಟಲ್ ತಾಂತ್ರಿಕತೆಯ ಆಧಾರದಲ್ಲಿ ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್‌ನೆಟ್‌ಗಳ ಮೂಲಕ ನಡೆಯುತ್ತಿರುವ ಆನ್‌ಲೈನ್ ಆಟಗಳಿಂದ ವ್ಯಕ್ತಿ, ಕುಟುಂಬ, ಸಮಾಜ ಮತ್ತು ದೇಶವನ್ನು ರಕ್ಷಣೆ ಮಾಡುವ ಸಲುವಾಗಿ ಕಾಯ್ದೆ ಅಗತ್ಯವಾಗಿತ್ತು. ಜತೆಗೆ, ಅನೇಕ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳು ವಿದೇಶಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ನೆಲದ ಕಾನೂನನ್ನು ಉಲ್ಲಂಘಿಸುತ್ತಿವೆ; ಈ ಮೂಲಕ ಕಾನೂನು ಮತ್ತು ರಾಜ್ಯಗಳ ವ್ಯಾಪ್ತಿ ಮೀರಿ ಹಲವು ಸಮಸ್ಯೆ ಗಳಿಗೆ ಕಾರಣವಾಗುತ್ತಿವೆ. ಈ ಕಾರಣಗಳಿಂದ ಹಣ ಆಧಾರಿತ ಆನ್‌ಲೈನ್ ಆಟಗಳನ್ನು ನಿಷೇಧಿಸುವ ಕಾಯ್ದೆ ರೂಪಿಸಲಾಗಿದೆ. ಜತೆಗೆ, ಆರೋಗ್ಯಕರವಾದ ಪರ್ಯಾಯ ಆನ್‌ಲೈನ್ ಆಟಗಳನ್ನು ಉತ್ತೇಜಿಸುವುದು ಕಾಯ್ದೆಯ ಉದ್ದೇಶ ಎಂದು ಕೇಂದ್ರ ವಿವರಿಸಿದೆ.
ಕಾನೂನು ಜಾರಿಗೆ ಬಂದರೂ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್ ಜೂಜಿಗೆ ತಡೆ ಒಡ್ಡಲು ಸಾಧ್ಯವೇ ಎಂಬ ಪ್ರಶ್ನೆಯೂ ಎದ್ದಿದೆ. ಯಾಕೆಂದರೆ ಕೆಲವು ರಾಜ್ಯಗಳಲ್ಲಿ ನಿಷೇಧ ಇದ್ದರೂ, ನಿಯಮ ಉಲ್ಲಂಘಿಸಿ ಆನ್‌ಲೈನ್ ಆಟಗಳನ್ನು ಜನ ಆಡುತ್ತಿದ್ದರು. ಗೇಮಿಂಗ್ ವೇದಿಕೆಯ ಡೊಮೈನ್ ಹೆಸರನ್ನು ಬದಲಾಯಿಸುವುದು, ಡಾರ್ಕ್‌ವೆಬ್ ಮೂಲಕ ಆಟ ಆಡುವುದು ಸೇರಿದಂತೆ ಕಾನೂನು ಉಲ್ಲಂಘಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಾಯ್ದೆಯ ಪ್ರಮುಖ ಅಂಶಗಳು
* ಕಾಯ್ದೆಯು ಇಡೀ ಭಾರತದ ವ್ಯಾಪ್ತಿ ಹೊಂದಿರುತ್ತದೆ. ದೇಶದ ಒಳಗೆ ಹಣ ಆಧಾರಿತ ಆನ್‌ಲೈನ್ ಆಟಗಳ ಸೇವೆ ಒದಗಿಸುತ್ತಿರುವ ಅಥವಾ ವಿದೇಶಗಳಿಂದ ಕಾರ್ಯಾಚರಿಸುತ್ತಿರುವ ಕಂಪನಿಗಳಿಗೂ ಇದು ಅನ್ವಯಿಸುತ್ತದೆ
* ಹಣ ಆಧಾರಿತ ಆನ್‌ಲೈನ್ ಆಟಗಳನ್ನು ಕಾಯ್ದೆಯು ಸಂಪೂರ್ಣವಾಗಿ ನಿಷೇಧಿಸುತ್ತದೆ. ಅವಕಾಶದ ಆಟಗಳು, ಕೌಶಲದ ಆಟಗಳು ಮತ್ತು ಇವರೆಡರ ಮಿಶ್ರಣವಾಗಿರುವ ಆಟಗಳಿಗೂ ನಿಷೇಧ ಅನ್ವಯವಾಗುತ್ತದೆ
* ಜಾಹೀರಾತುಗಳ ಮೂಲಕ ಅವುಗಳ ಉತ್ತೇಜನ, ಪ್ರಚಾರ ಮಾಡುವುದಕ್ಕೆ ನಿರ್ಬಂಧ
* ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅನುಸಾರ ಕಾನೂನುಬಾಹಿರ ಆನ್‌ಲೈನ್ ಜೂಜಿನ ವೇದಿಕೆಗಳನ್ನು ಅಧಿಕಾರಿಗಳು ನಿರ್ಬಂಧಿಸಬಹುದು
* ತಪ್ಪುಗಳಿಗೆ ಕಂಪನಿಗಳು ಮತ್ತು ಅವುಗಳ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಲಾಗುತ್ತದೆ. ಆದಾಗ್ಯೂ, ಸ್ವತಂತ್ರ ನಿರ್ದೇಶಕರು ಮತ್ತು ದೈನಂದಿನ ನಿರ್ಧಾರಗಳಲ್ಲಿ ಪಾತ್ರ ವಹಿಸದ ಕಾರ್ಯನಿರ್ವಾಹಕೇತರ ನಿರ್ದೇಶಕರು, ತಮ್ಮ ಪಾತ್ರದ ಬಗ್ಗೆ ಸೂಕ್ತ ದಾಖಲೆ ತೋರಿಸಿದರೆ, ಅವರಿಗೆ ಶಿಕ್ಷೆ ವಿಧಿಸಲಾಗುವುದಿಲ್ಲ
ಏನೇನು ಶಿಕ್ಷೆ?
ಆನ್‌ಲೈನ್ ಜೂಜಾಡುವವರು ಮಾತ್ರವಲ್ಲ, ಆ ಆಟಗಳನ್ನು ರೂಪಿಸುವ ಕಂಪನಿಗಳು, ಅವುಗಳ ಜಾಹೀರಾತು ಪ್ರಕಟಿಸಿ ಅವುಗಳಿಗೆ ಪ್ರೋತ್ಸಾಹ ನೀಡುವ ಮಾಧ್ಯಮಗಳು, ಜಾಹೀರಾತುಗಳಲ್ಲಿ ಅಭಿನಯಿಸಿ ಪ್ರೋತ್ಸಾಹ ನೀಡುವ ಸೆಲಬ್ರೆಟಿಗಳು, ಹಣಕಾಸು ನೆರವು ನೀಡುವ ಬ್ಯಾಂಕುಗಳು, ಪಾವತಿ ಸೇವೆ ಒದಗಿಸುವ ಸಂಸ್ಥೆಗಳು, ಆನ್‌ಲೈನ್ ಜೂಜಾಟಕ್ಕಾಗಿ ಇಂಟರ್‌ನೆಟ್ ಸೇವೆ ಒದಗಿಸುವ ಸಂಸ್ಥೆಗಳು... ಹೀಗೆ ಆನ್‌ಲೈನ್ ಬೆಟ್ಟಿಂಗ್‌ಗೆ ಬೆಂಬಲ ನೀಡುವ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ಹೊಸ ಕಾಯ್ದೆಯಲ್ಲಿದೆ.
* ಹಣ ಆಧಾರಿತ ಆನ್‌ಲೈನ್ ಆಟಗಳನ್ನು ನಡೆಸುವುದು ಅಥವಾ ಅದಕ್ಕೆ ಸಂಬಂಧಿಸಿದಂತೆ ಹಣಕಾಸು ವ್ಯವಹಾರಗಳನ್ನು ನಡೆಸುವುದು ವಿಚಾರಣೆಗೆ ಅರ್ಹವಾದ ಮತ್ತು ಜಾಮೀನುರಹಿತ ಅಪರಾಧ. ಹೀಗಾಗಿ ಆರೋಪಿಗಳನ್ನು ಪೊಲೀಸರು ವಾರಂಟ್ ಇಲ್ಲದೆ ಬಂಧಿಸಬಹುದು ಮತ್ತು ಪೂರ್ವಾನುಮತಿ ಇಲ್ಲದೆಯೇ ಸ್ಥಳ ಶೋಧನೆ ಮಾಡಬಹುದು
* ಆನ್‌ಲೈನ್ ಜೂಜಾಟಕ್ಕೆ ಅವಕಾಶ ನೀಡುವ ವ್ಯಕ್ತಿಗೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹1 ಕೋಟಿಯವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಅಪರಾಧವನ್ನು ಪುನರಾವರ್ತಿಸಿದರೆ ಕನಿಷ್ಠ ಮೂರು ವರ್ಷಗಳಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ₹1 ಕೋಟಿಯಿಂದ ಗರಿಷ್ಠ ₹2 ಕೋಟಿಯವರೆಗೂ ದಂಡ ವಿಧಿಸಬಹುದು
* ಯಾವುದೇ ವ್ಯಕ್ತಿ ಜಾಹೀರಾತುಗಳನ್ನು ನಿರ್ಮಿಸಿದರೆ ಅಥವಾ ಮಾಧ್ಯಮದಲ್ಲಿ ಅವುಗಳನ್ನು ಪ್ರಸಾರ ಮಾಡಿದರೆ ಗರಿಷ್ಠ ಎರಡು ವರ್ಷ ಜೈಲು ಶಿಕ್ಷೆ ಅಥವಾ ಗರಿಷ್ಠ ₹50 ಲಕ್ಷ ದಂಡ ಅಥವಾ ಎರಡನ್ನೂ ವಿಧಿಸಬಹುದು
* ಬ್ಯಾಂಕುಗಳು, ಹಣಪಾವತಿ ಸೇವಾ ಸಂಸ್ಥೆಗಳು ಅಥವಾ ಇತರ ಹಣಕಾಸು ಸಂಸ್ಥೆಗಳು ನಿಷೇಧಿತ ಆಟಗಳಿಗೆ ಸಂಬಂಧಿಸಿದ ಹಣಕಾಸು ವ್ಯವಹಾರಕ್ಕೆ ಅವಕಾಶ ಅಥವಾ ಅದನ್ನು ದೃಢೀಕರಿಸುವಂತಿಲ್ಲ
ಕೆಲವು ಆಟಗಳಿಗೆ ಉತ್ತೇಜನ
ಹೊಸ ಕಾಯ್ದೆಯು ಹಣ ಕಟ್ಟುವ ಆನ್‌ಲೈನ್ ಆಟಗಳ ನಿಯಂತ್ರಣ ಮಾತ್ರ ಅಲ್ಲ, ಬದಲಿಗೆ ಕೌಶಲವನ್ನು ಬೇಡುವ ಮತ್ತು ಮನರಂಜನೆ ನೀಡುವ ಆನ್‌ಲೈನ್ ಆಟಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನೂ ಹೊಂದಿದೆ.
ಕಾಯ್ದೆಯು ಮೂರು ರೀತಿಯ ಆನ್‌ಲೈನ್ ಆಟಗಳನ್ನು ಪಟ್ಟಿಮಾಡಿ, ಅವುಗಳನ್ನು ವ್ಯಾಖ್ಯಾನಿಸಿದೆ.
1. ಇ–ಕ್ರೀಡೆ: ಇದು ಸ್ಪರ್ಧಾತ್ಮಕವಾದ ಡಿಜಿಟಲ್ ಕ್ರೀಡೆ. ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿರುವ ಡಿಜಿಟಲ್ ಟೂರ್ನಿಗಳಲ್ಲಿ ತಂಡಗಳು ಅಥವಾ ಕ್ರೀಡಾಪಟುಗಳು ಭಾಗವಹಿಸಬಹುದು. ಡಿಜಿಟಲ್ ಕ್ರೀಡೆಗಳು ಇತ್ತೀಚೆಗೆ ರೂಪಿಸಲಾಗಿರುವ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಇ–ಕ್ರೀಡೆಯಲ್ಲಿ ಯಶಸ್ಸು ಪಡೆಯಲು ಕ್ರೀಡಾಳುಗಳು ಕಾರ್ಯತಂತ್ರ ರೂಪಿಸಬೇಕು, ಪರಸ್ಪರ ಸಮನ್ವಯ ಮತ್ತು ಕ್ಷಿಪ್ರ ನಿರ್ಧಾರದ ಕೌಶಲ ಹೊಂದಿರಬೇಕು. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ತಂಡಗಳು ಅಥವಾ ಕ್ರೀಡಾಳುಗಳು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗಬಹುದು. ಆದರೆ, ಬಾಜಿ ಕಟ್ಟುವುದಕ್ಕೆ ಇದರಲ್ಲಿ ಅವಕಾಶವಿಲ್ಲ
2.ಆನ್‌ಲೈನ್ ಸಾಮಾಜಿಕ ಆಟಗಳು: ಇವು ಆನ್‌ಲೈನ್‌ನಲ್ಲಿ ಮನರಂಜನೆ, ಕಲಿಕೆ, ಕೌಶಲ ಅಭಿವೃದ್ಧಿ ಉದ್ದೇಶದಿಂದ ಆಡುವ ಆಟಗಳು. ಹಣದ ರೂಪದಲ್ಲಿ ಲಾಭ ಪಡೆಯುವ ಉದ್ದೇಶದ ಆಟಗಳು ಇವಲ್ಲ. ಆಟದಲ್ಲಿ ಭಾಗವಹಿಸುವುದಕ್ಕಾಗಿ ಒಂದು ಬಾರಿ ಪ್ರವೇಶ ಶುಲ್ಕ ಇರಬಹುದು. ಇ–ಕ್ರೀಡೆಗಿಂತ ಇದು ಭಿನ್ನವಾಗಿರುತ್ತದೆ
3.ಹಣ ಆಧಾರಿತ ಆನ್‌ಲೈನ್ ಆಟ/ಜೂಜು: ಇದು ಕೌಶಲ ಆಧಾರಿತ ಅಥವಾ ಅದೃಷ್ಟ ಆಧಾರಿತ ಅಥವಾ ಈ ಎರಡನ್ನೂ ಒಳಗೊಂಡಿರುವ ಆಟ. ಜೂಜು ಎಂದೇ ಕರೆಯಬಹುದು. ಈ ಆಟವನ್ನು ಆಡುವುದಕ್ಕೆ ಶುಲ್ಕ ಪಾವತಿಸಬೇಕು, ಹಣವನ್ನು ಠೇವಣಿ ಇರಿಸಬೇಕು. ಕಟ್ಟಿದ ಹಣಕ್ಕೆ ಪ್ರತಿಯಾಗಿ ಹೆಚ್ಚು ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿ ಆಡಲಾಗುತ್ತದೆ
ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ‘ಎ23’
ಆರ್‌ಎಂಜಿ ನಿರ್ವಹಿಸುವ ಕಂಪನಿಗಳು ಹೊಸ ಕಾನೂನನ್ನು ವಿರೋಧಿಸಿವೆ. ರಮ್ಮಿ ಮತ್ತು ಪೋಕರ್ ಆನ್‌ಲೈನ್ ಆಟಗಳನ್ನು ನಿರ್ವಹಿಸುತ್ತಿರುವ ಎ23 ಎಂಬ ಕಂಪನಿಯು ಈ ಕಾಯ್ದೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. 7 ಕೋಟಿ ಆನ್‌ಲೈನ್ ಆಟಗಾರರು ಈ ಕಂಪನಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಹಣ ಆಧಾರಿತ ಆನ್‌ಲೈನ್ ಆಟಗಳು ಕೆಲವು ವರ್ಷಗಳಿಂದೀಚೆಗೆ ತ್ವರಿತವಾಗಿ ಬೆಳವಣಿಗೆ ಕಾಣುತ್ತಿದ್ದವು. ಸರ್ಕಾರ ಅವುಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದರೂ ಈ ಕಂಪನಿಗಳು ಭಾರಿ ಪ್ರಮಾಣದಲ್ಲಿ ಆದಾಯ ಗಳಿಸುತ್ತಿದ್ದವು. ಆನ್‌ಲೈನ್ ಆಟದ ಮಾರುಕಟ್ಟೆಯ ಒಟ್ಟು ಮೌಲ್ಯದಲ್ಲಿ ಆರ್‌ಎಂಜಿಗಳ ಪಾಲು ಶೇ 86ರಷ್ಟಿದೆ.
ಹೊಸ ಕಾನೂನು ಆರ್‌ಎಂಜಿ ಕಂಪನಿಗಳಿಗೆ ತೀವ್ರ ಹೊಡೆತ ನೀಡಿದೆ. ಭಾರತ ಕ್ರಿಕೆಟ್ ತಂಡದ ಪ್ರಾಯೋಜಕರಾಗಿದ್ದ ಡ್ರೀಮ್ 11 ಮತ್ತು ಐಪಿಎಲ್ ಪಾಲುದಾರರಾದ ಮೈ11ಸರ್ಕಲ್ ಎರಡೂ ತಮ್ಮ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ.
ಹಣ ಆಧಾರಿತ ಆನ್‌ಲೈನ್ ಆಟಗಳನ್ನು ಜೂಜು ಎಂದು ಪರಿಗಣಿಸಲಾಗದು, ಅವು ಕೌಶಲದ ಅಡಿಯಲ್ಲಿ ಬರುತ್ತವೆ ಎಂದು ಈ ಹಿಂದೆ ಹಲವು ರಾಜ್ಯಗಳ ಹೈಕೋರ್ಟ್‌ಗಳು ತೀರ್ಪು ನೀಡಿವೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ರಾಜ್ಯ ಮಟ್ಟದ ನಿಷೇಧವನ್ನೂ ನ್ಯಾಯಾಲಯಗಳು ರದ್ದುಪಡಿಸಿದ್ದವು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ಇಂಥದ್ದೇ ತೀರ್ಪನ್ನು ಸುಪ್ರೀಂ ಕೋರ್ಟ್ 2022ರಲ್ಲಿ ಎತ್ತಿಹಿಡಿದಿತ್ತು.
ಆಧಾರ: ಪಿಟಿಐ, ರಾಯಿಟರ್ಸ್, ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ, ಬಿಬಿಸಿ
Electronic devices for online casino game
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.