ADVERTISEMENT

ಆಳ ಅಗಲ: ‘ಆಪರೇಷನ್‌ ಕನ್ವಿಕ್ಷನ್‌’– ತ್ವರಿತ ವಿಚಾರಣೆ, ತ್ವರಿತ ದಂಡನೆ

ಉತ್ತರ ಪ್ರದೇಶ: ಶೀಘ್ರ ನ್ಯಾಯದಾನಕ್ಕಾಗಿ ‘ಆಪರೇಷನ್‌ ಕನ್ವಿಕ್ಷನ್‌’

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 23:10 IST
Last Updated 2 ಜುಲೈ 2025, 23:10 IST
<div class="paragraphs"><p>ಯೋಗಿ ಆದಿತ್ಯನಾಥ್</p></div>

ಯೋಗಿ ಆದಿತ್ಯನಾಥ್

   
ಉತ್ತರ ಪ್ರದೇಶದಲ್ಲಿ ಹೊಸ ನ್ಯಾಯ‌ದಾನ ವ್ಯವಸ್ಥೆಯೊಂದು ಸದ್ದು ಮಾಡುತ್ತಿದೆ. ಸಂಘಟಿತ ಅಪರಾಧಗಳು ಸೇರಿದಂತೆ ಮಾಫಿಯಾ ಮಟ್ಟ ಹಾಕುವುದು, ಪೋಕ್ಸೊ, ಕೊಲೆಯಂಥ ಗಂಭೀರ ಪ್ರಕರಣಗಳ ತ್ವರಿತ ವಿಲೇವಾರಿಗೆ ರೂಪಿಸಲಾಗಿರುವ ‘ಆಪರೇಷನ್ ಕನ್ವಿಕ್ಷನ್’ ಹೆಸರಿನ ವ್ಯವಸ್ಥೆ ಜಾರಿಗೆ ಬಂದ ಎರಡು ವರ್ಷಗಳಲ್ಲಿ 97,158 ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಎನ್‌ಕೌಂಟರ್‌ ಹತ್ಯೆಗಳು, ಬುಲ್ಡೋಜರ್‌ ಬಳಸಿ ಆರೋಪಿಗಳು, ಅಪರಾಧಿಗಳ ಆಸ್ತಿಯನ್ನು ಧ್ವಂಸಗೊಳಿಸುವುದಕ್ಕೆ ನ್ಯಾಯಾಂಗ ಸೇರಿದಂತೆ ವಿವಿಧ ವಲಯಗಳಿಂದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಟೀಕೆಗೆ ಗುರಿಯಾಗಿತ್ತು. ಆದರೆ, ಎರಡು ವರ್ಷಗಳ ಹಿಂದೆ ಅದು ಅನುಷ್ಠಾನಗೊಳಿಸಿರುವ ‘ಆಪರೇಷನ್‌ ಕನ್ವಿಕ್ಷನ್‌’ ಈಗ ದೇಶದ ಗಮನ ಸೆಳೆದಿದೆ

ಉತ್ತರ ಪ್ರದೇಶ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯ. ಅತಿ ಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುವ ರಾಜ್ಯಗಳ ಪೈಕಿ ಅದೂ ಒಂದಾಗಿದೆ. ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ನಂತರ ಅಪರಾಧಗಳ ಬಗ್ಗೆ ‘ಶೂನ್ಯ ಸಹನೆ’ ನೀತಿಯನ್ನು ಅಳವಡಿಸಿಕೊಂಡರು. ಅವರ ಈ ನೀತಿ ಟೀಕೆಗೂ ಗುರಿಯಾಗಿತ್ತು. 2022ರ ಚುನಾವಣೆಯಲ್ಲಿ ಯೋಗಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ  ಅಪರಾಧ ಪ್ರಕರಣಗಳ ತ್ವರಿತ ವಿಲೇವಾರಿಗೆ ರೂಪಿಸಲಾದ ಹೊಸ ವ್ಯವಸ್ಥೆ ಅಥವಾ ಅಭಿಯಾನ ‘ಆಪರೇಷನ್ ಕನ್ವಿಕ್ಷನ್’.

ಇದರ ಅಡಿಯಲ್ಲಿ ಅಪರಾಧಿಗಳಿಗೆ, ಮಾಫಿಯಾಗೆ ತ್ವರಿತ ಶಿಕ್ಷೆ ಆಗುತ್ತಿದ್ದು, ಅದು ದೇಶದ ಗಮನ ಸೆಳೆದಿದೆ. ಇತ್ಯರ್ಥಪಡಿಸಲಾದ ಪ್ರಕರಣಗಳಲ್ಲಿ ಸಣ್ಣಪುಟ್ಟ ಪ್ರಕರಣಗಳು ಮಾತ್ರವಲ್ಲದೇ, ಕೊಲೆ, ಅತ್ಯಾಚಾರ, ಮಕ್ಕಳ ಮೇಲಿನ ದೌರ್ಜನ್ಯದಂಥ ಗಂಭೀರ ಸ್ವರೂಪದ ಪ್ರಕರಣಗಳೂ ಇದ್ದು, ಅವುಗಳನ್ನು ಎಸಗಿದ ಅಪರಾಧಿಗಳು ಮರಣ ದಂಡನೆ, ಜೀವಾವಧಿ ಶಿಕ್ಷೆಗಳಿಗೆ ಗುರಿಯಾಗಿದ್ದಾರೆ.  

ADVERTISEMENT

2023ರ ಜುಲೈ 1ರಿಂದ ‘ಆಪರೇಷನ್‌ ಕನ್ವಿಕ್ಷನ್’ ಅನುಷ್ಠಾನಕ್ಕೆ ಬಂದಿದ್ದು, 2025ರ ಜೂನ್‌ ಮಧ್ಯಭಾಗದವರೆಗೆ 97,158 ಅಪರಾಧಿಗಳಿಗೆ ಶಿಕ್ಷೆ ಯಾಗಿದೆ. ಹೀಗಾಗಿ, ಇದು ನ್ಯಾಯದಾನ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗೆ ಕಾರಣವಾದ ವ್ಯವಸ್ಥೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. 

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು (ಪೋಕ್ಸೊ), ಗೋ ಹತ್ಯೆ, ಮತಾಂತರ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶೀಘ್ರ ಶಿಕ್ಷೆ ಆಗುವಂತೆ ಮಾಡುವ ಉದ್ದೇಶದಿಂದ ‘ಆಪರೇಷನ್‌ ಕನ್ವಿಕ್ಷನ್’ ಅನ್ನು ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿತ್ತು. 

‘ಈವರೆಗೆ ಇದರಡಿ 1.14 ಲಕ್ಷ ಪ್ರಕರಣಗಳನ್ನು ಗುರುತಿಸಲಾಗಿದ್ದು, 74 ಸಾವಿರದಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಮಾಫಿಯಾಗಳಿಗೂ ಇದರ ಮೂಲಕ ಅಂಕುಶ ಹಾಕಲಾಗಿದೆ. ಗುರುತಿಸಲಾದ 69 ಮಾಫಿಯಾಗಳ ಪೈಕಿ 29 ಮಾಫಿಯಾಗಳನ್ನು ಶಿಕ್ಷೆಗೊಳಪಡಿಸಲಾಗಿದೆ. ಸಂಘಟಿತ ಅಪರಾಧಗಳನ್ನೂ ಮಟ್ಟಹಾಕುವ ಪ್ರಯತ್ನ ನಡೆಸಲಾಗಿದ್ದು, 272 ಪ್ರಕರಣಗಳಲ್ಲಿ 10 ಕುಖ್ಯಾತ ಅಪರಾಧಿಗಳು ಸೇರಿದಂತೆ 395 ಆರೋಪಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ’ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.     

ತಂತ್ರಜ್ಞಾನದ ನೆರವು: ತ್ವರಿತ ವಿಚಾರಣೆಗಾಗಿ ಪೊಲೀಸರು ಮತ್ತು ಸರ್ಕಾರದ ಪ್ರತಿನಿಧಿಗಳು ನ್ಯಾಯಾಲಯಕ್ಕೆ ಪದೇ ಪದೆ ಖುದ್ದಾಗಿ ಹಾಜರಾಗುವುದನ್ನು ತಪ್ಪಿಸಲು 2024ರ ಜುಲೈ 1ರಿಂದ ವಿಡಿಯೊ ಕಾನ್ಫರೆನ್ಸ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಜತೆಗೆ, ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಅವನ್ನು ಅದೇ ರೂಪದಲ್ಲಿಯೇ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೂ ಉಳಿತಾಯವಾಗುತ್ತಿದೆ. ಈ ರೀತಿ 25,000 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಅದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು ₹25 ಕೋಟಿ ಉಳಿತಾಯವಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಹೊಸ ಕಾನೂನುಗಳ ಅಡಿಯಲ್ಲಿ 457 ಪ್ರಕರಣ ಇತ್ಯರ್ಥ

ದೇಶದಲ್ಲಿ ಕಳೆದ ವರ್ಷದ ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್‌ ಕಾನೂನುಗಳನ್ನು (ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ) ಜಾರಿಗೊಳಿಸಲಾಗಿತ್ತು. ಈ ಮೂರು ಹೊಸ ಕಾನೂನುಗಳ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ 457 ಪ್ರಕರಣಗಳನ್ನು ‘ಆಪರೇಷನ್‌ ಕನ್ವಿಕ್ಷನ್’ನಲ್ಲಿ ವರ್ಷದ ಒಳಗಾಗಿ ಇತ್ಯರ್ಥಪಡಿಸಲಾಗಿದೆ. ನಾಲ್ವರು ಅಪರಾಧಿಗಳಿಗೆ ಮರಣದಂಡನೆ, 10 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದರೆ, 424 ಮಂದಿ ತಪ್ಪಿತಸ್ಥರು 20 ವರ್ಷದ ಒಳಗಿನ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾರೆ. 19 ಮಂದಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

ಪೋಕ್ಸೊ: 17 ಮಂದಿಗೆ ಗಲ್ಲು

ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನೂ ಈ ಅಭಿಯಾನದ ವ್ಯಾಪ್ತಿಗೆ ಸೇರಿಸಲಾಗಿದೆ. ಪೋಕ್ಸೊ ಪ್ರಕರಣಗಳ ಅಪರಾಧಿಗಳ ಪೈಕಿ 17 ಮಂದಿ ಮರಣದಂಡನೆಗೆ ಗುರಿಯಾಗಿದ್ದರೆ, 619 ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಶೀಘ್ರ ವಿಲೇವಾರಿ ಹೇಗೆ?

‘ಆಪರೇಷನ್‌ ಕನ್ವಿಕ್ಷನ್’ ಅಡಿಯಲ್ಲಿ ಪ್ರಕರಣಗಳನ್ನು ಗುರುತಿಸುವುದು, ಅವುಗಳ ತನಿಖೆ, ವಿಚಾರಣೆ, ಉಸ್ತುವಾರಿ ಎಲ್ಲವನ್ನೂ ಅತ್ಯಂತ ವ್ಯವಸ್ಥಿತವಾಗಿ ಮತ್ತು ತ್ವರಿತವಾಗಿ ಮಾಡಲಾಗುತ್ತಿದೆ ಎಂಬುದು ಸರ್ಕಾರದ ಹೇಳಿಕೆ. 

ಅಪರಾಧಗಳ ತ್ವರಿತ ವಿಲೇವಾರಿ ಮಾಡುವ ದಿಸೆಯಲ್ಲಿ ಮೊದಲು ಆರೋಪಿಗಳನ್ನು ಬಂಧಿಸಲಾಗುತ್ತಿತ್ತು. ನಂತರ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು. ಅದಾದ ನಂತರ ತನಿಖೆ ನಡೆಸಿ, ನ್ಯಾಯಾಲಯದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಆರೋ‍ಪ ಸಾಬೀತಾಗುವಂತೆ ಮಾಡುವುದು ಈ ವ್ಯವಸ್ಥೆಯ ಮುಖ್ಯ ಭಾಗವಾಗಿದೆ.

ಈ ವ್ಯವಸ್ಥೆಯಲ್ಲಿ ಪ್ರಕರಣದ ಆರೋಪಪಟ್ಟಿ ಸಲ್ಲಿಕೆಯಾದ ಮೂರು ದಿನಗಳ ಒಳಗೆ ದೋಷಾರೋಪ ನಿಗದಿ ಮಾಡಲಾಗುತ್ತದೆ. ಈ ದಿಸೆಯಲ್ಲಿ ಜಿಲ್ಲಾ ಪೊಲೀಸರು ಆಯಾ ಜಿಲ್ಲಾ ವ್ಯಾಪ್ತಿಯ ನ್ಯಾಯಾಲಯಗಳಿಗೆ ಅಗತ್ಯ ದಾಖಲೆ ಒದಗಿಸುತ್ತಾರೆ. ಜತೆಗೆ, ಪ್ರತಿದಿನವೂ ಪ್ರಕರಣದ ವಿಚಾರಣೆ ಮಾಡುವಂತೆ ವಿನಂತಿ ಮಾಡಿಕೊಳ್ಳಲಾಗುತ್ತದೆ. ಮತ್ತೊಂದೆಡೆ, ಪ್ರಕರಣಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ವಿಧಿ ವಿಜ್ಞಾನ ಪ್ರಯೋಗಾಲಯದೊಂದಿಗೆ ಸಂಪರ್ಕದಲ್ಲಿದ್ದು, ವಿಚಾರಣೆಯ ಸಲುವಾಗಿ ವರದಿಗಳು ತ್ವರಿತವಾಗಿ ಸಿಗುವುದನ್ನು ಖಾತರಿಪಡಿಸಿಕೊಳ್ಳುತ್ತಾರೆ. ಇಷ್ಟೆಲ್ಲ ಸಿದ್ಧತೆಗಳ ಕಾರಣಕ್ಕೆ ಬಹುತೇಕ ಪ್ರಕರಣಗಳ ವಿಚಾರಣೆ 30 ದಿನಗಳ ಒಳಗೆ ಪೂರ್ಣಗೊಳ್ಳುತ್ತಿದೆ. 

ಪ್ರತಿ ಕಮಿಷನರೇಟ್/ಜಿಲ್ಲೆಯ ವ್ಯಾಪ್ತಿಯಲ್ಲಿ ಪೋಕ್ಸೊ ಪ್ರಕರಣಗಳ ಜತೆಗೆ ಪ್ರತಿ ವಿಭಾಗದಲ್ಲಿಯೂ 20 ಪ್ರಕರಣಗಳನ್ನು ಗುರುತಿಸಿ, ಅವುಗಳನ್ನು ಅತ್ಯುತ್ತಮ ತನಿಖೆಗೆ ಒಳಪಡಿಸಿ, ವೈಜ್ಞಾನಿಕ ರೀತಿಯಲ್ಲಿ ಸಾಕ್ಷ್ಯ ಸಂಗ್ರಹ ಮಾಡಲಾಗುತ್ತದೆ. ಇವುಗಳ ಉಸ್ತುವಾರಿಯ ಭಾಗವಾಗಿಯೇ ರಾಜ್ಯ ಮಟ್ಟದ ವೆಬ್ ಪೋರ್ಟಲ್ ರೂ‍ಪಿಸಲಾಗಿದೆ. ಪ್ರತಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ಪ್ರಕರಣಗಳ ಪ್ರತಿದಿನದ ಪ್ರಗತಿಯ ಉಸ್ತುವಾರಿಗಾಗಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯಲಾಗಿದೆ. ಗೆಜೆಟೆಡ್ ಅಧಿಕಾರಿಗೆ ಅದರ ಉಸ್ತುವಾರಿ ವಹಿಸಲಾಗಿದೆ. ಪ್ರಕರಣದ ತ್ವರಿತ ವಿಚಾರಣೆ ಖಾತರಿಪಡಿಸಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ.

ಭಿನ್ನ ದಾರಿಗೆ ಬಂದಿತ್ತು ಆಕ್ಷೇಪ

ಉತ್ತರ ಪ್ರದೇಶ ಹಿಂದಿನಿಂದಲೂ ಅಪರಾಧಗಳಿಗೆ ಕುಖ್ಯಾತಿ ಗಳಿಸಿದೆ. ಹೆಚ್ಚು ಅಪರಾಧಗಳು ನಡೆಯುವ ರಾಜ್ಯಗಳ ಪಟ್ಟಿಯಲ್ಲಿ ಈಗಲೂ ಮುಂಚೂಣಿಯಲ್ಲಿದೆ.

2017ರಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಭಿನ್ನ ಹಾದಿ ತುಳಿದಿತ್ತು. ಎನ್‌ಕೌಂಟರ್‌ಗಳ ಮೂಲಕ ಆರೋಪಿಗಳು, ಕ್ರಿಮಿನಲ್‌ಗಳು, ಗ್ಯಾಂಗ್‌ಸ್ಟರ್‌ಗಳನ್ನು ಹತ್ಯೆ ಮಾಡುವುದು, ವಿವಿಧ ಪ್ರಕರಣಗಳ ಆರೋಪಿಗಳಿಗೆ ಸೇರಿದ ಮನೆ, ಕಟ್ಟಡ ಧ್ವಂಸ ಮಾಡುವುದು, ಆಸ್ತಿ ಮುಟ್ಟುಗೋಲು ಹಾಕುವಂಥ ಕ್ರಮಗಳನ್ನು ಕೈಗೊಂಡಿತ್ತು.

ಇದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಸಂವಿಧಾನಬಾಹಿರವಾಗಿ ಎನ್‌ಕೌಂಟರ್‌ ನಡೆಸಲಾಗುತ್ತಿದೆ. ಅವರಿಗೆ ಸೇರಿದ ಕಟ್ಟಡಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದವು.

ಬುಲ್ಡೋಜರ್‌ಗಳ ಮೂಲಕ ಕಟ್ಟಡಗಳನ್ನು ಧ್ವಂಸಗೊಳಿಸುವುದಕ್ಕೆ ಸುಪ್ರೀಂ ಕೋರ್ಟ್‌ ಕೂಡ ಆಕ್ಷೇಪಿಸಿತ್ತು. ‘ಬುಲ್ಡೋಜರ್‌ ನ್ಯಾಯ’ ಪರಿಕಲ್ಪನೆಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಅಂಕುಶ ಹಾಕಿದ್ದ ‘ಸುಪ್ರೀಂ’, ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. 

ಆಧಾರ: ಪಿಟಿಐ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.