ADVERTISEMENT

ಆಳ–ಅಗಲ: ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ: ‘ಡಿಸಿಆರ್‌ಇ’ಗೆ ಹೆಚ್ಚು ಬಲ

ಪೊಲೀಸ್‌ ಠಾಣೆ ಸ್ಥಾನಮಾನ; ಸ್ವತಂತ್ರವಾಗಿ ಎಫ್‌ಐಆರ್ ದಾಖಲಿಸುವ ಅಧಿಕಾರ

ಆದಿತ್ಯ ಕೆ.ಎ
Published 18 ಡಿಸೆಂಬರ್ 2024, 22:07 IST
Last Updated 18 ಡಿಸೆಂಬರ್ 2024, 22:07 IST
<div class="paragraphs"><p>ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕಚೇರಿ</p></div>

ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕಚೇರಿ

   
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ‘ರಕ್ಷಣಾ ಘಟಕ’ವಾಗಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ವಿಶೇಷ ಪೊಲೀಸ್‌ ಠಾಣೆ ಮಾನ್ಯತೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದುವರೆಗೂ ಸೀಮಿತ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿಸಿಆರ್‌ಇಗೆ ಹೊಸ ಆದೇಶದಿಂದ ಹೆಚ್ಚಿನ ಬಲ ಬಂದಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಲು, ಅನ್ಯಾಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಇದು ದಿಟ್ಟ ಹೆಜ್ಜೆ ಎಂದು ಹೇಳಲಾಗುತ್ತಿದೆ.

ದಶಕಗಳ ಹೋರಾಟದ ಬಳಿಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ವಿಶೇಷ ಪೊಲೀಸ್‌ ಠಾಣೆ ಮಾನ್ಯತೆ ಲಭಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಡಿಸಿಆರ್‌ಇಗೆ ಬಲ ಸಿಕ್ಕಿದೆ.

ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ 10 ಡಿಸಿಆರ್‌ಇ ಘಟಕಗಳು ಈವರೆಗೂ ಸೀಮಿತ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ ಹೆಚ್ಚಿನ ಅಧಿಕಾರ ಲಭಿಸಿದ್ದು, ಬಲವರ್ಧನೆಗೊಂಡಿವೆ.

ADVERTISEMENT

ಬೆಂಗಳೂರಿನಲ್ಲಿ ಎರಡು, ಪ್ರತಿ ಜಿಲ್ಲೆಗೆ ಒಂದರಂತೆ ಒಟ್ಟು 33 ವಿಶೇಷ ಪೊಲೀಸ್‌ ಠಾಣೆ ಸ್ಥಾಪಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಲು, ಅನ್ಯಾಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಕಲ್ಪಿಸಲು ಮುಂದಾಗಿದೆ. 

ಸರ್ಕಾರವು 2023ರಲ್ಲಿ ಡಿಸಿಆರ್‌ಇ ಘಟಕವನ್ನು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ‘ರಕ್ಷಣಾ ಘಟಕ’ವಾಗಿ ಘೋಷಣೆ ಮಾಡಿತ್ತು. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ’ದ ರಕ್ಷಣಾ ಕೋಶವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದ್ದರು.

ಅದರಂತೆ ಅಸ್ಪೃಶ್ಯತಾ ನಿಷೇಧ ಕಾಯ್ದೆ–1955 ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ–1989ರ ಅಡಿಯಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ವಿಶೇಷ ಪೊಲೀಸ್‌ ಠಾಣೆಗಳ ಮೂಲಕ ಆರೋಪಿಗಳ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

1974ರಲ್ಲಿ ಡಿಸಿಆರ್‌ಇ ಸ್ಥಾ‍ಪನೆ ಆಗಿದ್ದು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕೆಲವು ವಿಷಯಗಳಲ್ಲಿ ವಿಚಾರಣೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವ ಅಧಿಕಾರ ಹೊಂದಿತ್ತು. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡುತ್ತಿಲ್ಲವೆಂದು ಆರೋಪಿಸಿ ಡಿಸಿಆರ್‌ಇ ಘಟಕದ ಬಾಗಿಲು ತಟ್ಟುತ್ತಿದ್ದರು. ಆದರೆ, ಪೊಲೀಸ್‌ ಠಾಣೆ ಮಾನ್ಯತೆಯಿಲ್ಲದೇ ಕಾನೂನು ಪ್ರಕ್ರಿಯೆ ಕಾರ್ಯಗತ ಮಾಡುವುದು ಡಿಸಿಆರ್‌ಇ ಘಟಕಕ್ಕೆ ಅಸಾಧ್ಯವಾಗಿತ್ತು. ಅಧಿಕಾರಿಗಳು ಕೇವಲ ವಿಚಾರಣೆ ನಡೆಸಿ, ಕ್ರಮ ಜರುಗಿಸುವಂತೆ ಸ್ಥಳೀಯ ಠಾಣೆಗೆ ಶಿಫಾರಸು ಮಾಡಿ, ನೊಂದವರನ್ನು ಮತ್ತೆ ಸ್ಥಳೀಯ ಠಾಣೆಗಳಿಗೇ ಕಳುಹಿಸುತ್ತಿದ್ದರು.

ಸ್ಥಳೀಯ ಠಾಣೆಗಳಲ್ಲಿ ಇರುವ ಇತರ ಕೆಲಸಗಳ ಒತ್ತಡದಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾತಿ ಪ್ರಕ್ರಿಯೆ, ತನಿಖೆ, ದೋಷಾರೋಪ ಪಟ್ಟಿ ಸಲ್ಲಿಸುವುದು ವಿಳಂಬ ಆಗುತ್ತಿತ್ತು. ತನಿಖಾಧಿಕಾರಿಗಳು, ತನಿಖೆಯನ್ನು 60 ದಿನಗಳಲ್ಲಿ ಪೂರ್ಣಗೊಳಿಸಿ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಅದೂ ಸಾಧ್ಯವಾಗುತ್ತಿರಲಿಲ್ಲ.

‘ಈಗ ಡಿಸಿಆರ್‌ಇ ಘಟಕಗಳಿಗೆ ವಿಶೇಷ ಠಾಣೆ ಮಾನ್ಯತೆ ಲಭಿಸಿರುವ ಕಾರಣ, ಎಫ್‌ಐಆರ್‌ ದಾಖಲಿಸುವ ಅಧಿಕಾರ ದತ್ತವಾಗಿದೆ. ತ್ವರಿತವಾಗಿ ತನಿಖೆ ನಡೆಸಿ, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಕ್ಕೂ ನೆರವಾಗಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಒಂದಂಕಿ ದಾಟದ ಶಿಕ್ಷೆ ಪ್ರಮಾಣ: ಛತ್ತೀಸಗಢ, ಮಧ್ಯಪ್ರದೇಶ, ಜಾರ್ಖಂಡ್‌ ಹಾಗೂ ಬಿಹಾರ ರಾಜ್ಯಗಳಲ್ಲಿ ಹಲವು ವರ್ಷಗಳ ಹಿಂದೆಯೇ ವಿಶೇಷ ಪೊಲೀಸ್‌ ಠಾಣೆ ಸ್ಥಾಪನೆ ಮಾಡಲಾಗಿದೆ. ಆ ರಾಜ್ಯಗಳಲ್ಲಿ ಶಿಕ್ಷೆ ಪ್ರಮಾಣವೂ ಹೆಚ್ಚಿದೆ. ಆದರೆ, ಕರ್ನಾಟಕದಲ್ಲಿ ಶಿಕ್ಷೆ ಪ್ರಮಾಣ ಒಂದಂಕಿ (ಶೇ 3.71) ದಾಟಿಲ್ಲ.

ಕೇಂದ್ರ ಸ್ಥಾನ ಬೆಂಗಳೂರು, ಪ್ರಾದೇಶಿಕ ಕೇಂದ್ರಗಳಾದ ಮೈಸೂರು, ದಾವಣಗೆರೆ, ಕಲಬುರಗಿ, ಮಂಗಳೂರು, ಬೆಳಗಾವಿ, ಕೋಲಾರ, ತುಮಕೂರು, ಬಾಗಲಕೋಟೆ, ವಿಜಯಪುರದಲ್ಲಿ ಡಿಸಿಆರ್‌ಇ ಘಟಕಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದರೂ ದೌರ್ಜನ್ಯಕ್ಕೆ ಒಳಗಾದವರು ನ್ಯಾಯಕ್ಕಾಗಿ ಅಲೆದಾಡುವ ಪರಿಸ್ಥಿತಿಯಿತ್ತು. ಇನ್ನು ಮುಂದೆ ಅದು ತಪ್ಪಲಿದೆ ಎಂಬುದು ಅಧಿಕಾರಿಗಳ ಹೇಳಿಕೆ. 

450 ಹೊಸ ಹುದ್ದೆ: ವಿಶೇಷ ಪೊಲೀಸ್‌ ಠಾಣೆಗಳ ಕಾರ್ಯ ನಿರ್ವಹಣೆಗೆ ಡಿಸಿಆರ್‌ಇ ಘಟಕದಲ್ಲಿ ಹಾಲಿರುವ 340 ಹುದ್ದೆಗಳ ಜತೆಗೆ ಹೆಚ್ಚುವರಿಯಾಗಿ 450 ಹುದ್ದೆ ಸೃಜಿಸಲಾಗಿದೆ. ಹುದ್ದೆಗಳ ಸಂಖ್ಯೆ 790ಕ್ಕೇರಿದೆ. ಠಾಣೆಗಳ ಸ್ಥಾಪನೆಗೆ ಜಿಲ್ಲಾವಾರು ಬಾಡಿಗೆ ಕಟ್ಟಡಗಳಿಗೆ ಹುಡುಕಾಟವೂ ನಡೆಯುತ್ತಿದೆ.

ದಶಕದ ಬಳಿಕ ಶಿಕ್ಷೆ ಪ್ರಕಟ
ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆ, ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬದಿಂದ ದಶಕದ ನಂತರ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾದ ಹಲವು ಪ್ರಕರಣಗಳಿವೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ದಲಿತರು ಹಾಗೂ ಸವರ್ಣೀಯರ ನಡುವಿನ ಜಾತಿ ಸಂಘರ್ಷ, ಹಲ್ಲೆ, ಹಿಂಸಾಚಾರ ಪ್ರಕರಣ ಸಂಬಂಧ ದಶಕದ ನಂತರ ತಪ್ಪಿತಸ್ಥರಿಗೆ ಶಿಕ್ಷೆ ಪ್ರಕಟವಾಗಿತ್ತು. 2014ರ ಆಗಸ್ಟ್‌ 28ರಂದು ಘಟನೆ ನಡೆದಿತ್ತು. ಈ ವರ್ಷದ ಅಕ್ಟೋಬರ್‌ನಲ್ಲಿ ಶಿಕ್ಷೆ ಪ್ರಮಾಣ ಪ್ರಕಟವಾಗಿದೆ. 

ತನಿಖಾ ಅಧಿಕಾರ ವ್ಯಾಪ್ತಿ

  • ಅಸ್ಪೃಶ್ಯತಾ ನಿಷೇಧ ಕಾಯ್ದೆ– 1955

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ–1989

  • ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಇನ್ನಿತರೆ ಹಿಂದುಳಿದ ವರ್ಗಗಳ (ಮೀಸಲಾತಿ ಮತ್ತು ನೇಮಕಾತಿ) ಕಾಯ್ದೆ– 1990

ಡಿಸಿಆರ್‌ಇ ಕರ್ತವ್ಯಗಳು

ಸಮಾಜ ಕಲ್ಯಾಣ ಇಲಾಖೆಯು 1974ರಲ್ಲಿ ಹೊರಡಿಸಿದ ಆದೇಶದ ಪ್ರಕಾರ ಡಿಸಿಆರ್‌ಇ ಘಟಕವು 14 ಅಂಶಗಳ ಬಗ್ಗೆ ವಿಚಾರಣೆ ನಡೆಸಿ, ವರದಿ ನೀಡುವ ಅಧಿಕಾರವನ್ನು ಹೊಂದಿದೆ. ಅದರಲ್ಲಿ ‌ಪ್ರಮುಖವಾದವು:

  • ಶೇ 18 ಮೀಸಲಾತಿ ಉಲ್ಲಂಘನೆ

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಕಲ್ಯಾಣಕ್ಕಾಗಿ ನೀಡಿದ ಅನುದಾನದ ದುರುಪಯೋಗ

  • ಸರ್ಕಾರಿ ಭೂಮಿ ಮಂಜೂರು ಮಾಡುವ ಆದೇಶದ ಉಲ್ಲಂಘನೆ

  • ದಲಿತರನ್ನು ಗೋಮಾಳ ಭೂಮಿಯಿಂದ ಕಾನೂನಿಗೆ ವಿರುದ್ಧವಾಗಿ ಒಕ್ಕಲೆಬ್ಬಿಸಿದ ಪ್ರಕರಣಗಳು

  • ದಲಿತರಿಗೆ ನೀಡಲಾದ ಇನಾಮ್‌ ಜಮೀನು, ನಿವೇಶನಗಳನ್ನು ನಿಯಮ ಬಾಹಿರವಾಗಿ ಪರಭಾರೆ ಮಾಡಿದ ಪ್ರಕರಣ

  • ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಪ್ರಕರಣಗಳು

  • ಜೀತ ನಿರ್ಮೂಲನಾ ಪದ್ಧತಿ–1975ರ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳು

  • ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರ್ಕಾರಿ ಅನುದಾನಿತ ವಸತಿನಿಲಯಗಳಲ್ಲಿ ಆಗುವ ಅನುದಾನದ ದುರುಪಯೋಗ

  • ಎಸ್‌.ಸಿ/ಎಸ್.ಟಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ಕಾನೂನು/ನಿಯಮಗಳ ಉಲ್ಲಂಘನೆ 

ಐತಿಹಾಸಿಕ ನಿರ್ಧಾರ
ರಾಜ್ಯ ಸರ್ಕಾರವು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಹಿಂದಿನ ಯಾವುದೇ ಸರ್ಕಾರಗಳಿಗೂ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಸ್ಥಳೀಯ ಪೊಲೀಸರು ಪರಿಣಾಮಕಾರಿಯಾಗಿ ಪ್ರಕರಣಗಳ ತನಿಖೆ ನಡೆಸದಿರುವ ಕಾರಣಕ್ಕೆ ಶಿಕ್ಷೆ ಪ್ರಮಾಣ ಕಡಿಮೆಯಿತ್ತು. ದಲಿತರ ಜಮೀನು ಕಬಳಿಸುವುದು, ಬೆಳೆ ನಾಶಪಡಿಸಲು ಬೇರೆಯವರಿಗೆ ಯಾವುದೇ ಹಕ್ಕಿಲ್ಲ. ಸಂವಿಧಾನ ನೀಡಿರುವ ನಾಗರಿಕರ ಹಕ್ಕುಗಳ ರಕ್ಷಣೆ ಆಗಬೇಕು, ಯೋಜನೆಗಳು ನಿಗದಿತ ಫಲಾನುಭವಿಗಳಿಗೇ ದೊರೆಯಬೇಕು ಎಂಬ ದಿಸೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.
–ಡಾ.ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
ನ್ಯಾಯೋಚಿತ ತನಿಖೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಮೇಲೆ‌ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ನ್ಯಾಯೋಚಿತವಾಗಿ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕಿದೆ. ಇದಕ್ಕಾಗಿ ವಿಶೇಷ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸಲಿವೆ.
–ಡಾ.ಜಿ.ಪರಮೇಶ್ವರ, ಗೃಹ ಸಚಿವ
ಬೇರೆ ರಾಜ್ಯಗಳಲ್ಲಿ ಅಧ್ಯಯನ
ರಾಜ್ಯದಲ್ಲೂ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಐದು ರಾಜ್ಯಗಳಿಗೆ ತಂಡ ತೆರಳಿ ಅಧ್ಯಯನ ನಡೆಸಿತ್ತು. ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ದೇಶದ ಇತರೆ ರಾಜ್ಯಗಳು ಹೇಗೆ ಕಾರ್ಯನಿರ್ವಹಣೆ ಮಾಡುತ್ತಿವೆ ಎಂಬ ವರದಿ ತಯಾರಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಪೊಲೀಸ್‌ ಠಾಣೆ ಸ್ಥಾನಮಾನದ ನಂತರ ಡಿಸಿಆರ್‌ಇ ಘಟಕವು ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಬಲವಾದ ಸಂಸ್ಥೆಯಾಗಿ ಹೊರಹೊಮ್ಮಲಿದೆ.
–ಅರುಣ್‌ ಚಕ್ರವರ್ತಿ, ಎಡಿಜಿಪಿ–ಡಿಸಿಆರ್‌ಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.