ADVERTISEMENT

ಆಳ–ಅಗಲ | ರಷ್ಯಾ–ಭಾರತ ಸಂಬಂಧ: ಬಿಕ್ಕಟ್ಟಿನ ಕಾಲದ ಸ್ನೇಹಬಂಧ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 23:30 IST
Last Updated 4 ಡಿಸೆಂಬರ್ 2025, 23:30 IST
   
ಭಾರತ ಮತ್ತು ರಷ್ಯಾವು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಎರಡೂ ದೇಶಗಳಿಗೆ ಈ ಭೇಟಿ ಮಹತ್ವದ್ದು. ಉಕ್ರೇನ್ ಯುದ್ಧದಿಂದ ಜಾಗತಿಕವಾಗಿ ರಷ್ಯಾ ಒಬ್ಬಂಟಿಯಾಗಿದ್ದರೆ, ರಷ್ಯಾದಿಂದ ತೈಲ ಖರೀದಿಸುತ್ತಿರುವುದು ಮತ್ತು ಅಮೆರಿಕದ ಸುಂಕ ಹೇರಿಕೆಯಿಂದ ಭಾರತವೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇನ್ನೊಂದೆಡೆ, ಚೀನಾ ಪೈಪೋಟಿ ಮತ್ತು ಬೆದರಿಕೆ. ಇಂಥ ಸ್ಥಿತಿಯಲ್ಲಿ ಪುಟಿನ್–ಮೋದಿ ಮಾತುಕತೆಯು ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ

ಭಾರತ–ರಷ್ಯಾ ಸಂಬಂಧಕ್ಕೆ 78 ವರ್ಷಗಳ ಇತಿಹಾಸವಿದೆ. ಸುಮಾರು ಎಂಟು ದಶಕಗಳಿಂದಲೂ ಎರಡೂ ದೇಶಗಳ ನಡುವೆ ಹಲವು ಬಗೆಯ ಒಪ್ಪಂದಗಳು ಜಾರಿಯಲ್ಲಿವೆ. ಸೇನೆ, ಅಣ್ವಸ್ತ್ರ ಮತ್ತು ಖಗೋಳ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವೆ ಬಹಳ ಹಿಂದಿನಿಂದಲೂ ಕೊಡು–ಕೊಳ್ಳುವಿಕೆ ನಡೆಯುತ್ತಿದೆ. ಇವುಗಳ ಜತೆಗೆ ಮೂರು ವರ್ಷಗಳಿಂದ ವ್ಯಾಪಾರ ಸಂಬಂಧವು ಮತ್ತಷ್ಟು ವೃದ್ಧಿಯಾಗಿದೆ. ಈ ವೇಳೆ, ರಷ್ಯಾ–ಭಾರತದ ನಡುವಿನ 22ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಬಂದಿದ್ದಾರೆ. ಉಕ್ರೇನ್ ಯುದ್ಧ ಆರಂಭವಾದ ನಂತರ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ದ್ವಿಪಕ್ಷೀಯ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸುವುದು ಮತ್ತು ಜಾಗತಿಕ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎರಡೂ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವುದು ಭೇಟಿಯ ಪ್ರಮುಖ ಉದ್ದೇಶವಾಗಿದೆ.

ಜಾಗತಿಕ ರಾಜಕಾರಣದಲ್ಲಿ ಏನೇ ಬದಲಾವಣೆಗಳು ಘಟಿಸಿದರೂ, ಭಾರತ–ರಷ್ಯಾ ಸ್ನೇಹಕ್ಕೆ ಚ್ಯುತಿ ಬಂದಿಲ್ಲ. ಪರಸ್ಪರ ವ್ಯಾಪಾರವೂ ಹೆಚ್ಚಾಗುತ್ತಿದೆ. ಭಾರತದ ಕಂಪನಿಗಳು ರಷ್ಯಾದ ತೈಲ, ಅನಿಲ, ಔಷಧ ಮತ್ತು ಐಟಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರೆ, ಅಲ್ಲಿನ ಕಂಪನಿಗಳು ಭಾರತದ ಇಂಧನ, ಮೂಲ ಸೌಕರ್ಯ, ಉತ್ಪಾದನಾ ವಲಯಗಳಲ್ಲಿ ಹೂಡಿಕೆ ಮಾಡಿವೆ.

ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನಕ್ಕೆ ಅಡಿಯಿಡುವವರೆಗೆ ಭಾರತ–ರಷ್ಯಾದ ವ್ಯಾಪಾರಕ್ಕೆ ಯಾವ ತೊಡಕೂ ಇರಲಿಲ್ಲ. ಆದರೆ, ಟ್ರಂಪ್ ಅವರಿಗೆ ಭಾರತವು ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದು ಇಷ್ಟವಾಗಲಿಲ್ಲ. ಉಕ್ರೇನ್‌ ಯುದ್ಧವನ್ನು ಮುಂದಿಟ್ಟುಕೊಂಡು ತೈಲ ಖರೀದಿಸಬಾರದು ಎಂದು ಭಾರತದ ಮೇಲೆ ಒತ್ತಡ ಹಾಕಿದರು. ಅದು ಫಲಿಸದೇ ಇದ್ದಾಗ, ಸುಂಕ ಹೆಚ್ಚಳ, ನಿರ್ಬಂಧಗಳ ಮೊರೆ ಹೋದರು. ಈಗ ಭಾರತ ಖಾಸಗಿ ಕಂಪನಿಗಳು ರಷ್ಯಾದಿಂದ ಖರೀದಿಸುತ್ತಿದ್ದ ತೈಲದ ಪ್ರಮಾಣವನ್ನು ಕಡಿಮೆ ಮಾಡಿವೆ. ಇತರೆ ಕ್ಷೇತ್ರಗಳಲ್ಲಿ ವ್ಯಾಪಾರಕ್ಕೆ ಇರುವ ಅವಕಾಶಗಳ ಬಗ್ಗೆ ಮೋದಿ ಮತ್ತು ಪುಟಿನ್ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ADVERTISEMENT
ಬದಲಾದ ಜಾಗತಿಕ ಸ್ಥಿತಿ:
ನಾಲ್ಕು ವರ್ಷಗಳ ಹಿಂದೆ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಕೋವಿಡ್ ಕಾರಣದಿಂದ ಅಲ್ಪಾವಧಿಯಲ್ಲಿಯೇ ಹಿಂದಿರುಗಿದ್ದರು. ಅದಾದ ಮೂರು ತಿಂಗಳಲ್ಲೇ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿತ್ತು. ಯುದ್ಧ ನಿಲ್ಲಿಸುವಂತೆ ಅಮೆರಿಕವು ರಷ್ಯಾ ಮೇಲೆ ಒತ್ತಡ ಹೇರುತ್ತಲೇ ಇದೆ. ಇದೇ ಕಾರಣಕ್ಕೆ ಅಮೆರಿಕವೂ ಸೇರಿ ಪಶ್ಚಿಮದ ಅನೇಕ ದೇಶಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸಿವೆ. ಯುರೋಪ್‌ನಲ್ಲಿ ರಷ್ಯಾ ಒಬ್ಬಂಟಿಯಾಗಿದೆ.

ಯುದ್ಧ ನಿಲ್ಲಿಸುವಂತೆ ಪುಟಿನ್ ಅವರ ಮನವೊಲಿಸಲು ಭಾರತದ ಮೇಲೂ ಒತ್ತಡ ಹೇರಲಾಗುತ್ತಿದೆ. ಆದರೆ, ಭಾರತವು ಈ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸುತ್ತಿದೆ; ಅಮೆರಿಕ ಮತ್ತು ರಷ್ಯಾ ಎರಡೂ ‘ಸೂಪರ್ ಪವರ್‌’ಗಳ ಜತೆಗಿನ ಸಂಬಂಧವನ್ನು ಜಾಗರೂಕತೆಯಿಂದ ನಿರ್ವಹಿಸುತ್ತಿದೆ. ಆದರೆ, ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ನಂತರ ಭಾರತದ ಮೇಲೆ ಒತ್ತಡ ಹೆಚ್ಚಾಗಿದ್ದು, ಸಂದಿಗ್ಧ ಉಂಟಾಗಿದೆ. ಈ ದಿಸೆಯಲ್ಲಿ, ದ್ವಿಪಕ್ಷೀಯ ವ್ಯಾಪಾರವನ್ನು ಮುಂದಿನ ದಿನಗಳಲ್ಲಿ ಹೇಗೆ ಮುಂದುವರಿಸಬೇಕು ಎನ್ನುವುದರ ಬಗ್ಗೆ ಮೋದಿ–ಪುಟಿನ್ ಮಾತುಕತೆ ನಡೆಸಲಿದ್ದಾರೆ.

ಭಾರತಕ್ಕೆ ಏಕೆ ಮುಖ್ಯ?:
ರಷ್ಯಾಕ್ಕೆ ಅಷ್ಟೇ ಅಲ್ಲ, ಈ ಭೇಟಿಯು ಭಾರತದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಅಮೆರಿಕದ ಒತ್ತಡಕ್ಕೆ ಮಣಿದು ಭಾರತ ತೈಲ ಆಮದು ಕಡಿಮೆ ಮಾಡಿರುವುದರಿಂದ ಮೋದಿ ಅವರಿಗೆ ಕೊಂಚ ಹಿನ್ನಡೆ ಆದಂತಾಗಿದೆ. ಕೆಲವು ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಮುಖ್ಯವಾಗಿ, ಚೀನಾದ ಪೈಪೋಟಿ ಮತ್ತು ಬೆದರಿಕೆ ಇದ್ದೇ ಇದೆ. ಇಂಥ ಸಂದರ್ಭದಲ್ಲಿ ರಷ್ಯಾ ಜತೆ ಮಾತುಕತೆ ನಡೆಸುವ ಮೂಲಕ ಅಮೆರಿಕಕ್ಕೆ ದಿಟ್ಟ ಸಂದೇಶ ನೀಡಬಹುದು, ಜಾಗತಿಕ ಮಟ್ಟದಲ್ಲಿ ಸಂದೇಶ ರವಾನಿಸಬಹುದು ಎನ್ನುವ ಲೆಕ್ಕಾಚಾರವೂ ಮೋದಿ ಅವರಿಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ, ಭಾರತವು ಅಮೆರಿಕ ಮತ್ತು ಯುರೋಪ್ ಜತೆಗೂ ಉತ್ತಮ ಸಂಬಂಧ ಕಾಪಾಡಿಕೊಳ್ಳುವ ಎಚ್ಚರಿಕೆಯಿಂದಲೇ ಹೆಜ್ಜೆ ಹಾಕುವ ಅನಿವಾರ್ಯವೂ ಇದೆ.

ದ್ವಿಪಕ್ಷೀಯ ವ್ಯಾಪಾರ: ₹9 ಲಕ್ಷ ಕೋಟಿ ಗುರಿ

ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಮೂರು ವರ್ಷಗಳಿಂದೀಚೆಗೆ ಭಾರತವು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಖರೀದಿಸಲು ಆರಂಭಿಸಿದ ಬಳಿಕ ದ್ವಿಪಕ್ಷೀಯ ವ್ಯಾಪಾರ ಗಣನೀಯವಾಗಿ ಹೆಚ್ಚಳವಾಗಿದೆ.


2021–22ರಲ್ಲಿ ದ್ವಿಪಕ್ಷೀಯ ವ್ಯಾಪಾರ ಮೌಲ್ಯ ₹98 ಸಾವಿರ ಕೋಟಿ ಇದ್ದುದು, 2022–23ರಲ್ಲಿ ಏಕಾಏಕಿ ₹3.99 ಲಕ್ಷ ಕೋಟಿಗೆ ತಲುಪಿತ್ತು. ಕಳೆದ ವರ್ಷ ಇದು ₹5.80 ಲಕ್ಷ ಕೋಟಿಗೆ ಏರಿಕೆ ಕಂಡಿದೆ. 2030ರ ವೇಳೆಗೆ ಇದನ್ನು ₹9 ಲಕ್ಷ ಕೋಟಿಗೆ (10,000 ಕೋಟಿ ಡಾಲರ್‌) ಹೆಚ್ಚಿಸಲು ಎರಡೂ ರಾಷ್ಟ್ರಗಳು ಗುರಿ ಹಾಕಿಕೊಂಡಿವೆ.

ವ್ಯಾಪಾರ ಕೊರತೆ:
ಭಾರತವು ರಷ್ಯಾದೊಂದಿಗೆ ಭಾರಿ ಪ್ರಮಾಣದ ವ್ಯಾಪಾರ ಕೊರತೆ ಹೊಂದಿದೆ. ಭಾರತವು ರಷ್ಯಾಕ್ಕೆ ಕಡಿಮೆ ಪ್ರಮಾಣದಲ್ಲಿ ರಫ್ತು ಮಾಡಿದರೆ, ಅಲ್ಲಿಂದ ಹೆಚ್ಚಿನ ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಕಚ್ಚಾ ತೈಲದ್ದೇ ಸಿಂಹಪಾಲು. 2024–25ರಲ್ಲಿ ಭಾರತವು ₹41,243 ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಿದ್ದರೆ, ₹5.39 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಕಳೆದ ವರ್ಷದ ವ್ಯಾಪಾರ ಕೊರತೆ ಮೌಲ್ಯ ₹4.98 ಲಕ್ಷ ಕೋಟಿ.
ರಕ್ಷಣೆ: ದೊಡ್ಡ ಪಾಲುದಾರ

ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧ ಹೆಚ್ಚು ಸದೃಢವಾಗಿರುವುದು ರಕ್ಷಣಾ ಪಾಲುದಾರಿಕೆಯಿಂದ. ಸೋವಿಯತ್‌ ಒಕ್ಕೂಟದ ಕಾಲದಿಂದಲೂ ಈ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳು ಪಾಲುದಾರಿಕೆ ಹೊಂದಿವೆ. ಈಗ ಭಾರತ ಅಮೆರಿಕ, ಫ್ರಾನ್ಸ್‌ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳೊಂದಿಗೆ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿದ್ದರೂ ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಷ್ಯಾವು ಈಗಲೂ ಬಹುದೊಡ್ಡ ಪಾಲುದಾರ ರಾಷ್ಟ್ರವಾಗಿದೆ.

‘ಆಪರೇಷನ್‌ ಸಿಂಧೂರ’ದ ನಂತರ ನಡೆದ ಸಂಘರ್ಷದಲ್ಲಿ ಪಾಕಿಸ್ತಾನವು ಭಾರತದ ಮುಂದೆ ಮಂಡಿಯೂರುವಂತೆ ಮಾಡಿದ್ದು, ಬ್ರಹ್ಮೋಸ್‌ ಕ್ಷಿಪಣಿ ಮತ್ತು ಎಸ್‌–400 ವಾಯು ರಕ್ಷಣಾ ವ್ಯವಸ್ಥೆ ಎಂದು ಹೇಳಲಾಗಿದೆ. ಇವೆರಡಲ್ಲೂ ರಷ್ಯಾದ ಕೊಡುಗೆ ಇದೆ. ನಿಖರ ದಾಳಿಯ ಮೂಲಕ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಬ್ರಹ್ಮೋಸ್‌ ಕ್ಷಿಪಣಿ ವ್ಯವಸ್ಥೆಯನ್ನು ಭಾರತ ಮತ್ತು ರಷ್ಯಾವು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಅದೇ ರೀತಿ, ಪಾಕಿಸ್ತಾನದ ಕ್ಷಿಪಣಿ, ಡ್ರೋನ್‌ ದಾಳಿಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್‌–400 ವ್ಯವಸ್ಥೆ ರಷ್ಯಾ ಸೃಷ್ಟಿ. ಸುಖೋಯ್‌ ಯುದ್ಧವಿಮಾನಗಳು (ಎಸ್‌ಯು–30, ಎಸ್‌ಯು–30ಎಂಕೆಐ) ಸೇರಿದಂತೆ ರಷ್ಯಾ ನಿರ್ಮಿತ ಹಲವು ಯುದ್ಧ ಸಲಕರಣೆಗಳು ಭಾರತದ ಸೇನಾ ಬತ್ತಳಿಕೆಯಲ್ಲಿವೆ.

ಅಮೆರಿಕ, ಫ್ರಾನ್ಸ್‌ ಹಾಗೂ ಇತರ ದೇಶಗಳು ರಕ್ಷಣಾ ಸಾಮಗ್ರಿಗಳನ್ನು ಮಾತ್ರ ನೀಡುತ್ತವೆಯೇ ವಿನಾ, ಅವುಗಳ ತಂತ್ರಜ್ಞಾನವನ್ನು ವರ್ಗಾವಣೆ ಮಾಡುವುದಿಲ್ಲ. ಆದರೆ, ರಷ್ಯಾ ಉಪಕರಣಗಳ ಜೊತೆಗೆ, ಅವುಗಳ ತಂತ್ರಜ್ಞಾನಗಳನ್ನೂ ಭಾರತಕ್ಕೆ ನೀಡುತ್ತಾ ಬಂದಿದೆ. ಟಿ–90 ಟ್ಯಾಂಕ್‌ಗಳು, ಎಸ್‌–30ಎಂಕೆಐ ಯುದ್ಧವಿಮಾನಗಳು ಸೇರಿದಂತೆ ಹಲವು ಸೇನಾ ಸಲಕರಣೆಗಳನ್ನು ಭಾರತದಲ್ಲೇ ಜೋಡಿಸಲಾಗುತ್ತಿದೆ ಇಲ್ಲವೇ ತಯಾರಿಸಲಾಗುತ್ತಿದೆ. ರಷ್ಯಾದ ಅತ್ಯಾಧುನಿಕ ಯುದ್ಧವಿಮಾನವಾದ ಎಸ್‌ಯು–57 ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸಿ, ಇಲ್ಲೇ ಅದನ್ನು ತಯಾರಿಸುವ ಮಾತುಗಳು ಈಗ ಕೇಳಿಬರುತ್ತಿವೆ. ಶಸ್ತ್ರಾಸ್ತ್ರ ಮತ್ತು ಸೇನಾ ಸಲಕರಣೆಗಳಿಗೆ ಸಂಬಂಧಿಸಿದಂತೆ ಜಂಟಿ ಸಂಶೋಧನೆ, ಅಭಿವೃದ್ಧಿ, ತಯಾರಿಕೆ ಮತ್ತು ಮಾರಾಟದ ನಂತರದ ಸೇವಾ ನೆರವಿಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳು 2021–2031ರ ಅವಧಿಗೆ ಸೇನಾ–ತಂತ್ರಜ್ಞಾನ ಸಹಕಾರ ಒಪ್ಪಂದಕ್ಕೆ 2021ರ ಡಿ.6ರಂದು ಸಹಿ ಹಾಕಿವೆ.

ಆಧಾರ: ಪಿಟಿಐ, ದಿ ಗಾರ್ಡಿಯನ್, ಬಿಬಿಸಿ, ಮಾಸ್ಕೊದಲ್ಲಿನ ಭಾರತದ ರಾಯಭಾರ ಕಚೇರಿ, ಹಣಕಾಸು ಸಚಿವಾಲಯ    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.