ADVERTISEMENT

ವಾರದ ವಿಶೇಷ: ರಿಜಿಸ್ಟರ್ಡ್ ಪೋಸ್ಟ್ ನೇಪಥ್ಯಕ್ಕೆ

ಸೆ.1ರಿಂದ ಸ್ಪೀಡ್ ಪೋಸ್ಟ್ ಸೇವೆಯೊಂದಿಗೆ ವಿಲೀನ

ಎನ್.ಜಗನ್ನಾಥ ಪ್ರಕಾಶ್
Published 29 ಆಗಸ್ಟ್ 2025, 23:06 IST
Last Updated 29 ಆಗಸ್ಟ್ 2025, 23:06 IST
ರಿಜಿಸ್ಟರ್ಡ್‌ ಪೋಸ್ಟ್‌ನೊಂದಿಗೆ ಸುಶೀಲ್ ಮೆಹ್ರಾ
ರಿಜಿಸ್ಟರ್ಡ್‌ ಪೋಸ್ಟ್‌ನೊಂದಿಗೆ ಸುಶೀಲ್ ಮೆಹ್ರಾ   

ಭಾರತೀಯ ಅಂಚೆ ವ್ಯವಸ್ಥೆಯಲ್ಲಿ ಬಹುಮುಖ್ಯ ಸ್ಥಾನ ಪಡೆದಿದ್ದ ನೋಂದಾಯಿತ ಅಂಚೆ (ರಿಜಿಸ್ಟರ್ಡ್‌ ಪೋಸ್ಟ್) ಸೇವೆ ಭಾನುವಾರ (ಆಗಸ್ಟ್‌ 31) ನೇಪಥ್ಯಕ್ಕೆ ಸರಿಯಲಿದೆ. ತ್ವರಿತ ಅಂಚೆ (ಸ್ಪೀಡ್‌ ಪೋಸ್ಟ್‌) ಸೇವೆಯೊಂದಿಗೆ ಅದು ವಿಲೀನಗೊಳ್ಳಲಿದೆ. 

ಈಸ್ಟ್ ಇಂಡಿಯಾ ಕಂಪನಿಯು ಮದ್ರಾಸ್ (ಈಗಿನ ಚೆನ್ನೈ), ಮುಂಬೈ ಹಾಗೂ ಕಲ್ಕತ್ತಾಗಳಲ್ಲಿ (ಈಗಿನ ಕೋಲ್ಕತ್ತಾ) 1774ರಿಂದ 1794 ಅವಧಿಯಲ್ಲಿ ಕಂಪನಿ ಉಪಯೋಗಕ್ಕಾಗಿ ಅಂಚೆ ಕಚೇರಿಗಳನ್ನು ಆರಂಭಿಸಿತ್ತು. ವಾರನ್ ಹೇಸ್ಟಿಂಗ್ಸ್ ಅವರು 1774ರಲ್ಲಿ ಸಾರ್ವಜನಿಕರಿಗೂ ಈ ಸೇವೆಯನ್ನು ಒದಗಿಸುವ ನಿರ್ಧಾರ ತೆಗೆದುಕೊಂಡಿದ್ದರು.

1837ರಲ್ಲಿ ಜಾರಿಗೆ ಬಂದ ಬ್ರಿಟಿಷ್ ಆಡಳಿತ ಅಂಚೆ ಕಚೇರಿ ಕಾಯ್ದೆಯು ಎಲ್ಲಾ ನಾಗರಿಕರಿಗೂ ಅಂಚೆ ಸೌಲಭ್ಯ ಬಳಸುವ ಹಕ್ಕು ನೀಡಿತು. ಎಲ್ಲಾ ಅಂಚೆ ಕಚೇರಿಗಳ ದಾಖಲೆಯ ಪುಸ್ತಕಗಳಲ್ಲಿ ನಮೂದು ಮಾಡಿ ನಿರ್ದಿಷ್ಟ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ನೋಂದಾಯಿತ ಅಂಚೆ ರವಾನೆ ಸೇವೆಯ ಸೌಲಭ್ಯವು 171 ವರ್ಷಗಳಷ್ಟು ಸುದೀರ್ಘ ಕಾಲ ಭಾರತೀಯರಿಗೆ ಲಭಿಸಿದೆ. ಶುರುವಿನಲ್ಲಿ ಈ ಸೇವೆಗಳಿಗೆ ಹೆಚ್ಚಿನ ಶುಲ್ಕವಿರಲಿಲ್ಲ. 1850ರ ಡಿಸೆಂಬರ್ 27ರಿಂದ ನೋಂದಾಯಿತ ಶುಲ್ಕವಾಗಿ ಪ್ರತಿ ಅಂಚೆ ಲಕೋಟೆಗೆ 8 ಆಣೆಯನ್ನು ಇಲಾಖೆ ಪಡೆಯಲಾರಂಭಿಸಿತು. 

ADVERTISEMENT

ಸಂವಹನ ಮಾಧ್ಯಮವಾಗಿ ರೂಪುಗೊಂಡ ಅಂಚೆ ಸೇವೆಗಳು ಅಂಚೆ ಚೀಟಿಗಳೊಂದಿಗೆ ಮುಂದುವರಿಕೆಯಾಗಿದ್ದು 1840ರಲ್ಲಿ; ಫೆನ್ನಿ ಬ್ಲಾಕ್ ಅಂಚೆ ಚೀಟಿ ಉಪಯೋಗದ ಮೂಲಕ. ಇಂಗ್ಲೆಂಡಿನಲ್ಲಿ ಪ್ರಾರಂಭವಾಗಿ ಇತರ ಯುರೋಪ್ ದೇಶಗಳಿಗೂ ಈ ಆಧುನಿಕ ಸಂದೇಶ ವಾಹಕ ವ್ಯವಸ್ಥೆ ಹರಡಿತು. 

ಪಾರಿವಾಳಗಳ ಮೂಲಕ ಸಂದೇಶ ರವಾನಿಸುವ ಏರ್ಪಾಡು ಭಾರತದಲ್ಲಿ ಬಹು ಹಿಂದಿನಿಂದಲೂ ಇತ್ತು. ನಂತರ ಓಲೆಕಾರರು ಹಾಗೂ ಹರಿಕಾರರ ಮೂಲಕ ಕಾಗದ ಪತ್ರಗಳನ್ನು ರವಾನಿಸುವ ವ್ಯವಸ್ಥೆಯೂ ಆರಂಭಗೊಂಡಿತು. ಯುರೋಪ್ ನಂತರ ಅಂಟು ಲೇಪಿತ ಅಂಚೆ ಚೀಟಿಗಳನ್ನು ಕಾಗದ ಪತ್ರಗಳ ರವಾನೆಗೆ ಬಳಸಲು ಮುಂದಾದ ಏಷ್ಯಾದ ದೇಶಗಳಲ್ಲೂ ಭಾರತವೇ ಮುಂದು. ಅಖಂಡ ಭಾರತದಲ್ಲಿ ಮೊದಲ ಅಂಚೆ ಚೀಟಿ ಸಿಂಧ್ ಡಾಕ್ ಬಿಡುಗಡೆಯಾಗಿದ್ದು 1852ರಲ್ಲಿ.

ಕರ್ನಾಟಕದ ಹೆಮ್ಮೆ ಮೈಸೂರು ಅಂಚೆ: ಸ್ವಾತಂತ್ರ್ಯಪೂರ್ವದಲ್ಲೂ ಭಾರತದ ಅನೇಕ ದೇಶೀಯ ಸಂಸ್ಥಾನಗಳು ಪ್ರತ್ಯೇಕ ಅಂಚೆ ವ್ಯವಸ್ಥೆ ಹೊಂದಿದ್ದವು. ಮೈಸೂರು ಒಡೆಯರ್ ರಾಜಮನೆತನದ ಆಳ್ವಿಕೆಯಲ್ಲಿ ಇಡೀ ಸಂಸ್ಥಾನಕ್ಕೆ ಅನ್ವಯವಾಗುವಂತಹ ಮೈಸೂರು ಅಂಚೆ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ನಂತರ ಎಲ್ಲಾ ಸ್ಥಳೀಯ ಅಂಚೆ ವ್ಯವಸ್ಥೆಗಳೂ ಬ್ರಿಟಿಷರು ಆರಂಭಿಸಿದ ಇಂಡಿಯನ್‌ ಪೋಸ್ಟ್ ಜತೆಗೆ ವಿಲೀನವಾದವು. ಒಂದೂವರೆ ಶತಮಾನಕ್ಕೂ ಹೆಚ್ಚು ಬಹುಮುಖ್ಯ ಕಾಗದ ಪತ್ರಗಳು ವಸ್ತುಗಳ ರವಾನೆಗೆ ಬಳಕೆಯಾಗುತ್ತಿದ್ದ ನೋಂದಾಯಿತ ಅಂಚೆ ವಿಶ್ವಾಸಾರ್ಹ ಅಂಚೆ ಸೇವೆಯಾಗಿತ್ತು.

ಎಲ್ಲಾ ವಲಯಗಳಿಗಿಂತ ನೋಂದಾಯಿತ ಅಂಚೆಯನ್ನು ಹೆಚ್ಚು ಅವಲಂಬನೆಯಾಗಿರುವುದು ನ್ಯಾಯಾಂಗ. ನ್ಯಾಯಾಲಯಗಳು, ವಕೀಲರು ನೋಂದಾಯಿತ ಅಂಚೆಯ ಮುದ್ರೆ ಹಾಗೂ ಸ್ವೀಕೃತಿ ಪತ್ರಗಳನ್ನು ವಿಶ್ವಾಸಾರ್ಹ ದಾಖಲೆಗಳೆಂದು ಪರಿಗಣಿಸುವುದು, ಸಾಕ್ಷ್ಯವೆಂದು ಒಪ್ಪಿರುವುದು ಇಂದಿಗೂ ಇದೆ. ನ್ಯಾಯಾಂಗ ಪತ್ರ ವ್ಯವಹಾರಗಳಲ್ಲಿ ನೋಂದಾಯಿತ (ರಿಜಿಸ್ಟರ್ಡ್‌) ನೋಟಿಸ್‌ಗಳಿಗೆ ಬಹುಮುಖ್ಯ ಸ್ಥಾನ. ನೋಂದಾಯಿತ ಅಂಚೆ ಮೂಲಕ ಕಾಗದ ಹಾಗೂ ಅಮೂಲ್ಯ ವಸ್ತುಗಳನ್ನು ರವಾನಿಸುವುದು ನಂಬಿಕೆಯ ವಿಚಾರ. 

ಅಂಚೆ ಕಚೇರಿಯ ನೋಂದಣಿ ಪುಸ್ತಕದಲ್ಲಿ (ರಿಜಿಸ್ಟರ್‌) ದಾಖಲಾಗಿ ಅಂಚೆಯ ಜತೆಯಲ್ಲೇ ಹೋಗುವ ಪತ್ರಕ್ಕೆ ಸ್ವೀಕೃತಿ ಪಡೆಯುವುದು ಈ ಸೇವೆಯ ಬಹುಮುಖ್ಯ ದಾಖಲೆ. ನ್ಯಾಯಾಲಯ ಸೇರಿದಂತೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲೂ ಇದಕ್ಕೇ ಮುನ್ನಣೆ. 

ನೋಂದಾಯಿತ ಅಂಚೆ ಲಕೋಟೆ, ಕಾರ್ಡು, ಇನ್‌ಲ್ಯಾಂಡ್ ಪತ್ರಗಳ ಮುಂಭಾಗದಲ್ಲಿ ನೋಂದಾಯಿತ ಅಂಚೆ ಎಂದು ಪ್ರತ್ಯೇಕ ಮುದ್ರೆ (ಠಸ್ಸೆ) ಈಗಲೂ ಇರುವುದಾದರೂ ನೋಂದಾಯಿತ ಪತ್ರವೆಂದು ತಕ್ಷಣಕ್ಕೆ ಗೊತ್ತಾಗುವಂತೆ ಅದಕ್ಕೆ ಸ್ಥಳೀಯ ನಮೂದಿತ ಸಂಖ್ಯೆ ನೀಡುವುದು, ನಮೂದಿತ ಸಂಖ್ಯೆ ಇರುವ ಸ್ಟ್ಯಾಂಪು ಹಚ್ಚುವ ರೂಢಿಯೂ ಇದೆ. ಇದಲ್ಲದೆ 1886ರಲ್ಲೇ ಯುರೋಪ್‌ನಲ್ಲಿ ನೋಂದಾಯಿತ ಅಂಚೆ ಎಂದು ಲಕೋಟೆಯ ಮೇಲ್ಭಾಗದಲ್ಲೇ ಮುದ್ರಿಸುವ ವ್ಯವಸ್ಥೆಯೂ ಇತ್ತು.

ಭಾರತದಲ್ಲಿ ಅಂಚೆ ಚೀಟಿಗಳ ಮುದ್ರಣ ಮೊದಲು ಶುರುವಾಗಿದ್ದು ನಾಸಿಕ್ ಸೆಕ್ಯೂರಿಟಿ ಪ್ರೆಸ್‌ನಲ್ಲಿ. ಭಾರತದಲ್ಲಿ ನೋಂದಾಯಿತ ಅಂಚೆ ಎಂದು ಮುದ್ರಿಸಿದ ಲಕೋಟೆಗಳ ಬೇಡಿಕೆ ಹೆಚ್ಚಿ ಅಂಚೆ ಚೀಟಿ ಮುದ್ರಿಸುವ ನಾಸಿಕ್ ಸೆಕ್ಯೂರಿಟಿ ಪ್ರೆಸ್‌ನಲ್ಲೇ ಇಂತಹ ಲಕೋಟೆಗಳನ್ನು ಮುದ್ರಿಸಿ ದೇಶದ ಅಂಚೆ ಕಚೇರಿಗಳಿಗೆ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು.

ಪ್ರಾರಂಭದಲ್ಲಿ ನೋಂದಾಯಿತ ಅಂಚೆಗೆ ಪತ್ರ ತಲುಪುವ ಸ್ಥಳದ ದೂರದ ಮೇಲೆ ಶುಲ್ಕ ನಿರ್ಧಾರವಾಗುವ ಮೊದಲು ಕೆಲಕಾಲ ಏಕರೂಪದ ಶುಲ್ಕ ವ್ಯವಸ್ಥೆ ಇತ್ತು. ನೋಂದಾಯಿತ ಅಂಚೆ ಶುಲ್ಕ ಮೊದಲಿಗೆ ಇದ್ದಿದ್ದು ಎಂಟು ಆಣೆ. ಕೆಲಕಾಲದ ಬಳಿಕ ಅಂತರದೇಶೀಯ ಶುಲ್ಕವನ್ನು ನಾಲ್ಕು ಆಣೆಗಳಿಗೆ ಇಳಿಸಲಾಯಿತು. ವಿದೇಶಗಳಿಗೆ ರವಾನೆಯಾಗುವ ನೋಂದಾಯಿತ ಅಂಚೆ ಶುಲ್ಕ ಅದು ಕ್ರಮಿಸುವ ದೂರ ಹಾಗೂ ಕಾಗದ ಪತ್ರಗಳಿರುವ ಲಕೋಟೆಯ ತೂಕವನ್ನು ಆಧರಿಸಿರುತ್ತದೆ.

ತ್ವರಿತ ಅಂಚೆ (ಸ್ಪೀಡ್ ಪೋಸ್ಟ್) ಸೇವೆಯು ಪಿನ್‌ಕೋಡ್‌ಗಳಿರುವ ಎಲ್ಲಾ ಸ್ಥಳಗಳಲ್ಲೂ ಲಭ್ಯವಿಲ್ಲದೇ ಇರುವುದರಿಂದ ಭಾರತೀಯ ಅಂಚೆ ಇಲಾಖೆಯು ನೋಂದಾಯಿತ ಅಂಚೆ ಸೇವೆಯನ್ನು ಈವರೆಗೂ ಮುಂದುವರಿಸಿತ್ತು. ಈಗ ನೋಂದಾಯಿತ ಅಂಚೆ ಸೇವೆಯನ್ನು ತ್ವರಿತ ಅಂಚೆ ಸೇವೆಯಲ್ಲಿ ವಿಲೀನಗೊಳಿಸುವ ನಿರ್ಧಾರವನ್ನು ಇಲಾಖೆ ಕೈಗೊಂಡಿದ್ದು, ಸೋಮವಾರದಿಂದ (ಸೆ.1) ಅದು ಜಾರಿಗೂ ಬರಲಿದೆ. 

ಅಧ್ಯಯನ ಶೀಲ ಸುಶೀಲ್ ಮೆಹ್ರಾ

‘ನೋಂದಾಯಿತ ಅಂಚೆ’ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ನೋಂದಾಯಿತ ಅಂಚೆ ಚರಿತ್ರೆಯನ್ನು ಅಧ್ಯಯನ ನಡೆಸಿ, ಅಂಚೆ ಲಕೋಟೆಗಳು, ಅಂಚೆ ಚೀಟಿ ಸೇರಿದಂತೆ ಅಂಚೆಗೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದಾರೆ ಸುಶೀಲ್‌ ಮೆಹ್ರಾ.

ಕರ್ನಾಟಕ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷರಾಗಿರುವ 74ರ ಹರೆಯದ ಸುಶೀಲ್ ಮೆಹ್ರಾ ನವದೆಹಲಿಯಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ, ಮಹಾ ಸತ್ಯಾಗ್ರಹಿ ಮಹಾತ್ಮ ಗಾಂಧಿ‌, ಕರ್ನಾಟಕದಲ್ಲಿ ಬಾಪೂ ಹೆಜ್ಜೆಗಳು, ಬಾಲಗಂಗಾಧರ ತಿಲಕ್... ಮತ್ತಿತರ ವಿಷಯಗಳ ಕುರಿತು ಅಸಂಖ್ಯ ಅಂಚೆ ಚೀಟಿಗಳನ್ನು ಸಂಗ್ರಹಿಸಿ ಅನೇಕ ಪ್ರದರ್ಶನಗಳನ್ನು ಏರ್ಪಡಿಸಿರುವ ಮೆಹ್ರಾ ಅವರಿಗೆ ಹಲವಾರು ಗೌರವ ಪುರಸ್ಕಾರಗಳು ಸಂದಿವೆ.

ಅಂಚೆ ಚೀಟಿ ಸಂಗ್ರಹ, ಕಾಯಂ ಚಿತ್ರ ಮುದ್ರೆಗಳು, ಜೈ ಹಿಂದ್ ಅಂಚೆ ಚರಿತ್ರೆ ಮೊದಲಾದ ಮೌಲಿಕ ಕೃತಿಗಳನ್ನು ಸುಶೀಲ್ ರಚಿಸಿ ಅದಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

.
.
.
.
.
.
.
ಭಾರತೀಯ ಅಂಚೆ ಪ್ರಮುಖ ಮೈಲಿಗಲ್ಲುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.