ಭಾರತದ ಚೆಸ್ ಭವಿಷ್ಯ: ಗ್ರ್ಯಾಂಡ್‌ಮಾಸ್ಟರ್‌ಗಳಾದ ಪ್ರಜ್ಞಾನಂದ, ಅಧಿಬನ್ ಭಾಸ್ಕರನ್, ರೌನಕ್ ಸಧ್ವಾನಿ, ನಿಹಾಲ್ ಸರಿನ್ ಅವರೊಂದಿಗೆ ವಿಶ್ವ ಚಾಂಪಿಯನ್ ಗುಕೇಶ್ ದೊಮ್ಮರಾಜು
ಒಂದು ಕಾಲದಲ್ಲಿ ವಿಶ್ವ ಚೆಸ್‌ನಲ್ಲಿ ಪ್ರಬಲ ಶಕ್ತಿಯಾಗಿದ್ದ ರಷ್ಯಾ ಈಗ ಸೊರಗಿದೆ. ಪೂರ್ವ ಯುರೋಪಿನ ರಾಷ್ಟ್ರಗಳೂ ಶಕ್ತಿಗುಂದಿವೆ. ಏಷ್ಯಾದ ರಾಷ್ಟ್ರಗಳು ಪ್ರವರ್ಧಮಾನಕ್ಕೆ ಬಂದಿದ್ದು, ಭಾರತ ಮುಂಚೂಣಿಯಲ್ಲಿದೆ. ಇತ್ತೀಚೆಗೆ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ಅವರಿಗೆ ಎದುರಾಳಿ ಆಗಿದ್ದವರು ಚೀನಾದ ಡಿಂಗ್ ಲಿರೆನ್. ಚಾಂಪಿಯನ್ ಪಟ್ಟಕ್ಕಾಗಿ ಏಷ್ಯಾದ ಇಬ್ಬರು ಕ್ರೀಡಾಪಟುಗಳು ಪೈಪೋಟಿ ನಡೆಸಿದ್ದು ಇದೇ ಮೊದಲು. ಏಷ್ಯಾದಲ್ಲಿ ಚೆಸ್‌ನ ಬೆಳವಣಿಗೆಯನ್ನು ಇದು ತೋರಿಸುತ್ತದೆ
ಭಾರತದ ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ದೊಮ್ಮರಾಜು ಸಿಂಗಪುರದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವದ ಅತಿ ಕಿರಿಯ ಚೆಸ್ ಚಾಂಪಿಯನ್ ಆಗಿ ಸಂಭ್ರಮಿಸಿದರು. ದೀರ್ಘ ಇತಿಹಾಸದ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಏಷ್ಯಾದ ಇಬ್ಬರು ಮುಖಾಮುಖಿಯಾಗಿದ್ದು ಅದೇ ಮೊದಲು. ಇದಕ್ಕೆ ಕೇವಲ ಮೂರು ತಿಂಗಳ ಹಿಂದೆ (ಸೆಪ್ಟೆಂಬರ್‌ನಲ್ಲಿ) ಹಂಗೆರಿಯ ಬುಡಾಪೆಸ್ಟ್‌ನಲ್ಲಿ 45ನೇ ಚೆಸ್ ಒಲಿಂಪಿಯಾಡ್ ನಡೆದಿತ್ತು. ಇದರಲ್ಲಿ ಓಪನ್ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದು ಅಮೆರಿಕ. ಇದರ ಜೊತೆಗೆ ಪ್ರಶಸ್ತಿಗೆ ಇತರ ನೆಚ್ಚಿನ ತಂಡಗಳೆನಿಸಿದ್ದು ಭಾರತ, ಚೀನಾ, ಉಜ್ಬೇಕಿಸ್ತಾನ ತಂಡಗಳು. ಅಮೆರಿಕ ಬಿಟ್ಟರೆ ಉಳಿದ ಮೂರೂ ಏಷ್ಯಾದ ತಂಡಗಳೇ. ಮಹಿಳಾ ವಿಭಾಗದಲ್ಲಿ ಭಾರತ ಅಗ್ರ ಶ್ರೇಯಾಂಕ ಪಡೆದಿತ್ತು.
ಒಲಿಂಪಿಯಾಡ್ ಇತಿಹಾಸದಲ್ಲಿ ಮೊದಲ ಬಾರಿ ಫೇವರಿಟ್ ತಂಡಗಳಲ್ಲಿ ರಷ್ಯಾ ಇರಲಿಲ್ಲ. ಇದರ ಜೊತೆಗೆ ಪೂರ್ವ ಯುರೋಪಿನ ಹಂಗೆರಿ, ಬಲ್ಗೇರಿಯಾ, ರುಮೇನಿಯಾ, ಪೋಲೆಂಡ್ ತಂಡಗಳೂ ದಿಗ್ಗಜ ರಾಷ್ಟ್ರಗಳ ಪಟ್ಟಿಯಿಂದ ಹೊರಬಿದ್ದಿವೆ. ಚೆಸ್ ವಿಶ್ವದಲ್ಲಿ ಈ ಭಾಗದ ಪ್ರಭಾವ ಒಂದು ಕಾಲದಲ್ಲಿ ಕಣ್ಣು ಕೋರೈಸುವಂತೆ ಇತ್ತು. ಮೊದಲು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಜ್ಬೇಕಿಸ್ತಾನ ಈಗ ಏಷ್ಯಾ ಖಂಡದಲ್ಲಿದೆ.
ಚೆಸ್ ಆಟ ಕಂಡ ಘಟಾನುಘಟಿ ಆಟಗಾರರೆನಿಸಿದ ಅಲೆಕ್ಸಾಂಡರ್ ಅಲೆಖಿನ್, ಮಿಖಾಯಿಲ್ ಬೊತ್ವಿನಿಕ್, ಮೈಕೆಲ್ ತಾಲ್, ಟಿಗ್ರಾನ್ ಪೆಟ್ರೋಸಿಯಾನ್, ಅನತೋಲಿ ಕಾರ್ಪೋವ್, ಗ್ಯಾರಿ ಕ್ಯಾಸ್ಪರೋವ್.... ಈ ಎಲ್ಲರೂ ಅವಿಭಜಿತ ಸೋವಿಯತ್ ರಷ್ಯಾಕ್ಕೆ ಸೇರಿದವರು. ಇವರೆಲ್ಲರೂ ವಿಶ್ವ ಚಾಂಪಿಯನ್ ಆಗಿ ಮೆರೆದವರು. ತಾಲ್ ಅವರು ಲಾತ್ವಿಯಾ ದೇಶದ ರಿಗಾ ಎಂಬ ಪಟ್ಟಣದ ಆಟಗಾರ. ಅದ್ಭುತ ಆಟಕ್ಕಾಗಿ ‘ರಿಗಾದ ಜಾದೂಗಾರ’ ಎಂದೇ ಪ್ರಸಿದ್ಧರಾದವರು. 1975ರಲ್ಲಿ ಮೊದಲ ಬಾರಿ ಚಾಂಪಿಯನ್ ಆದ ಕಾರ್ಪೋವ್ ಪೊಸಿಷನಲ್ ಚೆಸ್‌ನಲ್ಲಿ (ಶಾಸ್ತ್ರಬದ್ಧವಾಗಿ ಪಡೆಗಳನ್ನು ಸಜ್ಜುಗೊಳಿಸುವ) ಬಲಾಢ್ಯ ಆಟಗಾರ. ಅದೇ ದೇಶದವರಾದರೂ ಸೈದ್ಧಾಂತಿಕವಾಗಿ ಅವರ ಎದುರಾಳಿಯಾದ ಕ್ಯಾಸ್ಪರೋವ್ ಆಕ್ರಮಣದ ಆಟದ ಶೈಲಿಗೆ ವಿಶ್ವಪ್ರಸಿದ್ಧರಾದವರು.
ಭಾರತದ ಚೆಸ್ ಭವಿಷ್ಯ: ಗ್ರ್ಯಾಂಡ್‌ಮಾಸ್ಟರ್‌ಗಳಾದ ಪ್ರಜ್ಞಾನಂದ, ಅಧಿಬನ್ ಭಾಸ್ಕರನ್, ರೌನಕ್ ಸಧ್ವಾನಿ, ನಿಹಾಲ್ ಸರಿನ್ ಅವರೊಂದಿಗೆ ವಿಶ್ವ ಚಾಂಪಿಯನ್ ಗುಕೇಶ್ ದೊಮ್ಮರಾಜು
ಪ್ರಬಲ ರಷ್ಯಾ ಮಂಕಾಗಿದ್ದು ಹೇಗೆ?
ರಷ್ಯಾದಲ್ಲಿ 1960ರ ದಶಕದಿಂದ ಸಾಂಪ್ರದಾಯಿಕ ಚೆಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದವು. ರಷ್ಯನ್ ಚೆಸ್ ಶಾಲೆ ಎಂದೇ ಅವುಗಳನ್ನು ಕರೆಯಲಾಗುತಿತ್ತು. ವ್ಲಾದಿಮಿರ್ ಕ್ರಾಮ್ನಿಕ್, ಕ್ಯಾಸ್ಪರೋವ್ ಮೊದಲಾದ ಆಟಗಾರರೂ ಇಂಥ ಶಾಲೆಗಳಿಂದ ಚೆಸ್ ಕಲಿತವರು. ನುರಿತ ಚೆಸ್ ತರಬೇತುದಾರರು ಇಲ್ಲಿ ಪ್ರತಿಭಾನ್ವಿತ ಆಟಗಾರರನ್ನು ಸಜ್ಜುಗೊಳಿಸುತ್ತಿದ್ದರು. ಚಾಂಪಿಯನ್ ಆಟಗಾರರ ಯಶಸ್ಸಿನ ಪ್ರೇರಣೆ ಒಂದೆಡೆ, ಇಂಥ ಮಾದರಿ ಶಾಲೆಗಳ ವ್ಯವಸ್ಥಿತ ತರಬೇತಿ ಇನ್ನೊಂದೆಡೆ. ಇವುಗಳು ಸರ್ಕಾರದ ಆಸರೆಯಲ್ಲೇ ನಡೆಯುತ್ತಿದ್ದವು.
ದೇಶದ ಹಲವು ಕಡೆ ಇಂಥ ಶಾಲೆಗಳಲ್ಲಿ ಉನ್ನತ ಮಟ್ಟದ ತರಬೇತಿ ನೀಡಲಾಗುತಿತ್ತು. ಆಗಿನ ಕಾಲದಲ್ಲಿ ಈಗಿನಷ್ಟು ಸಂಪರ್ಕ ವ್ಯವಸ್ಥೆ, ಇಂಟರ್‌ನೆಟ್ ಇರಲಿಲ್ಲ. ಹೀಗಾಗಿ ಹೊರಜಗತ್ತಿಗೆ ಗೊತ್ತಾಗದ ರೀತಿ ತರಬೇತಿ ವ್ಯವಸ್ಥೆಯಿತ್ತು ಎಂದು ಹಿಂದೊಮ್ಮೆ ಮಾಜಿ ವಿಶ್ವ ಚಾಂಪಿಯನ್ ವ್ಲಾದಿಮಿರ್ ಕ್ರಾಮ್ನಿಕ್ ಚೆಸ್ ವೆಬ್‌ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಆದರೆ 1990ರಲ್ಲಿ ಮತ್ತು ನಂತರ ಸೋವಿಯತ್ ಒಕ್ಕೂಟ ವಿಭಜನೆಯಾಗುತ್ತಿದ್ದಂತೆ ಸಮಸ್ಯೆಗಳು ಶುರುವಾದವು. ಇವುಗಳಿಗೆ ಮೊದಲಿನಂತೆ ಹಣಕಾಸಿನ ಹರಿವು ನಿಂತುಹೋಯಿತು. ಕೆಲವು ತರಬೇತುದಾರರು ವಲಸೆ ಹೋದರು. ಕೆಲವು ಆಟಗಾರರು ತಾವು ಜನಿಸಿದ ದೇಶಗಳಿಗೆ (ಲಾತ್ವಿಯಾ, ಅಜರ್‌ಬೈಜಾನ್, ಕಜಕಸ್ತಾನ್, ಜಾರ್ಜಿಯಾ, ಉಕ್ರೇನ್, ಉಜ್ಬೇಕಿಸ್ತಾನ) ಹಂಚಿಹೋದರು. ಇನ್ನು ಕೆಲವರು ಅಮೆರಿಕ (ಉದಾಹರಣೆಗೆ ಗಾತಾ ಕಾಮ್‌ಸ್ಕಿ), ಇಸ್ರೇಲ್ (ಬೋರಿಸ್ ಗೆಲ್ಫಾಂಡ್), ಸ್ಪೇನ್ (ಅಲೆಕ್ಸಿ ಶಿರೋವ್), ಜರ್ಮನಿ, ನೆದರ್ಲೆಂಡ್ಸ್, ಸ್ವಿಜರ್ಲೆಂಡ್ ಮೊದಲಾದ ದೇಶಗಳಿಗೆ ವಲಸೆ ಹೋದರು ಅಥವಾ ಆಶ್ರಯ ಪಡೆದರು. ಹೀಗಾಗಿ ರಷ್ಯಾದಲ್ಲಿ ಪ್ರಬಲವಾಗಿದ್ದ ಚೆಸ್ ಕ್ರೀಡೆ ನಿಧಾನವಾಗಿ ಸೊರಗತೊಡಗಿತು.
ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರ ವೆಸ್ಟ್‌ಬ್ರಿಜ್– ಆನಂದ್ ಚೆಸ್ ಅಕಾಡೆಮಿ (WACA) ಕೂಡ ಇಂಥ ಶಾಲೆಗಳ ಪ್ರೇರಣೆಯಿಂದ ಆರಂಭವಾಗಿದ್ದು. ‘ನಾನು ಮೂರು ದಶಕಗಳ ಹಿಂದೆ ಸೋವಿಯತ್ ರಷ್ಯಾಕ್ಕೆ ಭೇಟಿ ನೀಡಿದ್ದ ವೇಳೆ ಚೆಸ್ ಶಾಲೆಗಳಿಗೆ ಹೋಗಿದ್ದೆ. ನಾನು ಅವುಗಳ ಕಾರ್ಯಶೈಲಿಯಿಂದ ಪ್ರಭಾವಿತನಾಗಿದ್ದೆ’ ಎಂದು ಭಾರತ ತಂಡಗಳು ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಬಳಿಕ ಆನಂದ್ ಹೇಳಿದ್ದರು.
ರಷ್ಯಾದ ತರಬೇತುದಾರರು ಬೇರೆ ದೇಶಗಳಲ್ಲಿ ನೆಲಸಿದ ಬಳಿಕ ಚೀನಾ, ಪಾಶ್ಚಾತ್ಯ ರಾಷ್ಟ್ರಗಳೂ ಚೆಸ್‌ನಲ್ಲಿ ಪ್ರಗತಿ ಕಂಡವು ಎನ್ನುತ್ತಾರೆ ಕ್ರಾಮ್ನಿಕ್. ಅವರು 1980ರ ದಶಕದಲ್ಲಿ ಬೊತ್ವಿನಿಕ್ ಚೆಸ್ ಸ್ಕೂಲ್ ಮೂಲಕ ತರಬೇತುಗೊಂಡವರು. ‘ಈ ಚೆಸ್ ಶಾಲೆಗಳು ವರ್ಷಕ್ಕೆ ಎರಡು ಬಾರಿ ಎರಡು ವಾರಗಳ ತರಬೇತಿ ನೀಡುತ್ತಿದ್ದವು. ಆದರೆ ಹೊರಜಗತ್ತು ತಿಳಿದುಕೊಂಡಂತೆ ಅವು ಶಿಕ್ಷಾ ಕೇಂದ್ರಗಳ ರೀತಿ ಇರುತ್ತಿರಲಿಲ್ಲ. ತರಬೇತಿ ತುಂಬಾ ಕಠಿಣವೇನೂ ಇರಲಿಲ್ಲ’ ಎನ್ನುತ್ತಾರೆ ಅವರು.
ಗುಕೇಶ್ ದೊಮ್ಮರಾಜು
ಏಷ್ಯಾ ರಾಷ್ಟ್ರಗಳ ಏಳಿಗೆ
ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರು 2000ದಿಂದ 2013ರ ಅವಧಿಯಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ಆಗಿ ಮೊದಲ ಬಾರಿ ರಷ್ಯಾದ ಪ್ರಾಬಲ್ಯಕ್ಕೆ ಸಡ್ಡು ಹೊಡೆದರು.
2015ರಿಂದೀಚೆಗೆ ಭಾರತ, ಇರಾನ್, ಚೀನಾ, ಉಜ್ಬೇಕಿಸ್ತಾನ ಮೊದಲಾದ ರಾಷ್ಟ್ರಗಳಲ್ಲೂ ಬಹಳಷ್ಟು ಪ್ರತಿಭಾನ್ವಿತರು ಪ್ರವರ್ಧಮಾನಕ್ಕೆ ಬಂದಿದ್ದಾರೆ. ಆನಂದ್ ಹಾಕಿಕೊಟ್ಟ ಪರಂಪರೆಯಲ್ಲಿ ಪ್ರಜ್ಞಾನಂದ, ಅರ್ಜುನ್ ಇರಿಗೇಶಿ, ಗುಕೇಶ್ ಸಾಗಿ ಬಹುಬೇಗ ರ್‍ಯಾಂಕಿಂಗ್ ಪಟ್ಟಿಯಲ್ಲಿ ಮೇಲೇರಿದರು. ಪ್ರತಿಷ್ಠಿತ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡರು.
2014ರ ಟ್ರೊಮ್ಸೊ (ನಾರ್ವೆ) ಒಲಿಂಪಿಯಾಡ್‌ನಲ್ಲಿ ಭಾರತ ತಂಡ ಮೊದಲ ಬಾರಿ ಕಂಚಿನ ಪದಕ ಪಡೆಯಿತು. 2022ರ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆದ್ದ ತಂಡ ಮಧ್ಯ ಏಷ್ಯಾದ ಉಜ್ಬೇಕಿಸ್ತಾನ. ಭಾರತ ಓಪನ್ ಮತ್ತು ಮಹಿಳಾ ತಂಡಗಳು ಕಂಚಿನ ಪದಕ ಪಡೆದವು. 2024ರ ಬುಡಾಪೆಸ್ಟ್‌ನ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಮೊದಲ ಬಾರಿ ಭಾರತದ ಪಾಲಾಯಿತು. ಗುಕೇಶ್, ಅರ್ಜುನ್ ವೈಯಕ್ತಿಕ ಚಿನ್ನಗಳನ್ನೂ ಗೆದ್ದುಕೊಂಡಿದ್ದು ಭಾರತದ ಪ್ರಾಬಲ್ಯ ಸಾಬೀತುಪಡಿಸಿತು. ನಾಲ್ಕನೇ ಬೋರ್ಡ್ ಚಿನ್ನ ಗೆದ್ದಿದ್ದು ಉಜ್ಬೇಕಿಸ್ತಾನದ ಸಂಶುದ್ದೀನ್ ವಾಖಿಡೋವ್.
ಪ್ರಸ್ತುತ ಫಿಡೆ ರ್‍ಯಾಂಕಿಂಗ್‌ನ ಮೊದಲ ಹತ್ತು ಆಟಗಾರರಲ್ಲಿ ಭಾರತದ ಮೂವರು ಸೇರಿದಂತೆ ಏಷ್ಯಾದ ಐವರು ಇದ್ದಾರೆ. ಅರ್ಜುನ್ ಇರಿಗೇಶಿ, ಡಿ.ಗುಕೇಶ್, ವಿಶ್ವನಾಥನ್ ಕ್ರಮವಾಗಿ ನಾಲ್ಕು, ಐದು, ಹತ್ತನೇ ಸ್ಥಾನದಲ್ಲಿದ್ದಾರೆ. ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ಆರನೇ ಸ್ಥಾನದಲ್ಲಿ ಮತ್ತು ಚೀನಾದ ವೀ ಯಿ 9ನೇ ಸ್ಥಾನ ಪಡೆದಿದ್ದಾರೆ. ಏಳನೇ ಸ್ಥಾನದಲ್ಲಿರುವ ಅಲಿರೇಝಾ ಫಿರೋಝ್ ಅವರು ಫ್ರಾನ್ಸ್ ದೇಶ ಪ್ರತಿನಿಧಿಸುತ್ತಿದ್ದರೂ, ಇರಾನ್‌ನಲ್ಲಿ ಆಡಿ ಗ್ರ್ಯಾಂಡ್‌ಮಾಸ್ಟರ್ ಆದವರು.
ವಿಯೆಟ್ನಾಮಿನ ಕ್ವಾಮ್ ಲೀಮ್ ಲೀ ಮತ್ತು ಭಾರತದ ಪ್ರಜ್ಞಾನಂದ ಆರ್. ಕ್ರಮವಾಗಿ 15 ಮತ್ತು 17ನೇ ಸ್ಥಾನದಲ್ಲಿದ್ದಾರೆ. ಆದರೆ ಈ ಪಟ್ಟಿಯಲ್ಲಿ ರಷ್ಯಾದ ಒಬ್ಬರಷ್ಟೇ ಇದ್ದಾರೆ. ಕಳೆದ ವರ್ಷ ವಿಶ್ವ ಚಾಂಪಿಯನ್ ಪಟ್ಟಕ್ಕೆ ಡಿಂಗ್ ಲಿರೆನ್ ಎದುರಾಳಿಯಾಗಿದ್ದ ಇಯಾನ್ ನಿಪೊಮ್‌ನಿಷಿ (ಎಂಟನೇ ಸ್ಥಾನ) ಮಾತ್ರ ಆ ಆಟಗಾರ.
ಚೀನಾದ ಡಿಂಗ್ ಲಿರೆನ್ ಮತ್ತು ಭಾರತದ ವಿದಿತ್ ಗುಜರಾತಿ ಕ್ರಮವಾಗಿ 22 ಮತ್ತು 23ನೇ ಸ್ಥಾನದಲ್ಲಿದ್ದಾರೆ.
ಏಷ್ಯಾದ ಇನ್ನೊಂದು ರಾಷ್ಟ್ರ ಇರಾನ್ ಕೂಡ ಹಿಂದೆ ಬಿದ್ದಿಲ್ಲ. ಅಲಿರೇಝಾ ಫಿರೋಜ್ ಫ್ರಾನ್ಸ್ ಪ್ರಜೆಯಾದ ಬಳಿಕ ಪರ್ಹಾಮ್ ಮಘಸೂಡ್ಲು (ರೇಟಿಂಗ್ 2703), ಮೊಹಮ್ಮದ್ ಅಮೀನ್ ತಬಾತಬೇಯಿ (2695) ಕ್ರಮವಾಗಿ 29 ಮತ್ತು 37ನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿಶ್ವ ಚಾಂಪಿಯನ್ ರೇಸ್‌ನಿಂದ ಹಿಂದೆ ಸರಿದರೂ ಅವರು ನಿರ್ವಿವಾದವಾಗಿ ಈಗ ವಿಶ್ವ ಶ್ರೇಷ್ಠ ಆಟಗಾರ. ಭಾರತ ಯುವ ಪಡೆಯ ಯಶಸ್ಸನ್ನು ಅವರು ಹಲವು ಬಾರಿ ಶ್ಲಾಘಿಸಿದ್ದಾರೆ. ಪ್ರಜ್ಞಾನಂದ ಅವರು ಕಳೆದ ವರ್ಷ ವಿಶ್ವಕಪ್ ಫೈನಲ್ ಆಡಿ ಕಾರ್ಲ್‌ಸನ್ ಎದುರು ಸೋತಿದ್ದರು. ಕ್ಯಾಂಡಿಡೇಟ್ಸ್ ಓಪನ್ ವಿಭಾಗದ ಎಂಟು ಮಂದಿಯಲ್ಲಿ ಭಾರತದ ಮೂವರು, ಮಹಿಳಾ ವಿಭಾಗದಲ್ಲಿ ಇಬ್ಬರು ಆಡಿದ್ದರು ಎಂಬುದು ಗಮನಾರ್ಹ. ಟೊರಾಂಟೊದಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು ವಿಶ್ವ ಚೆಸ್ ಪಟ್ಟಕ್ಕೆ ಅತಿ ಕಿರಿಯ ಚಾಲೆಂಜರ್ ಎನಿಸಿದ್ದ ಗುಕೇಶ್ ಈಗ ಅತಿ ಕಿರಿಯ ಚಾಂಪಿಯನ್ ಎನಿಸಿದ್ದಾರೆ. ಯುವ ಪಡೆಯ ಆಟಗಾರರಿಂದಾಗಿ ಭಾರತ ಏಷ್ಯಾದ ಜೊತೆಗೆ ವಿಶ್ವದ ಚೆಸ್ ರಾಷ್ಟ್ರಗಳ ಸಾಲಿನಲ್ಲಿ ಅಗ್ರಗಣ್ಯನಾಗಿದೆ.
ಮ್ಯಾಗ್ನಸ್ ಕಾರ್ಲ್‌ಸನ್
ಸೋವಿಯತ್ ರಷ್ಯಾದ ವಿಶ್ವ ಚಾಂಪಿಯನ್ನರು
ಅಲೆಕ್ಸಾಂಡರ್ ಅಲೆಖಿನ್ (ರಷ್ಯಾ)
ಮಿಖಾಯಿಲ್ ಬೊತ್ವಿನಿಕ್
ಮೈಕೆಲ್ ತಾಲ್ (ಈಗಿನ ಲಾತ್ವಿಯಾ)
ಟಿಗ್ರಾನ್ ಪೆಟ್ರೋಸಿಯಾನ್ (ಈಗಿನ ಜಾರ್ಜಿಯಾ)
ಬೋರಿಸ್ ಸ್ಪಾಸ್ಕಿ
ಅನತೋಲಿ ಕಾರ್ಪೋವ್
ಗ್ಯಾರಿ ಕ್ಯಾಸ್ಪರೋವ್ (ಬಾಕು, ಅಜರ್‌ಬೈಜಾನ್)
ಅಲೆಕ್ಸಾಂಡರ್ ಖಾಲಿಫ್‌ಮನ್
ರಸ್ಲಾನ್ ಪೊನೊಮರಿಯೇವ್
ರುಸ್ತಾಮ್ ಕಾಸಿಮ್‌ಝನೋವ್
ವ್ಲಾದಿಮಿರ್ ಕ್ರಾಮ್ನಿಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.