ADVERTISEMENT

ಆಳ –ಅಗಲ | ಆರ್‌ಟಿಐ ಕಾಯ್ದೆ: ಹಾವಿಗೀಗ ಹಲ್ಲಿಲ್ಲ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 0:17 IST
Last Updated 10 ಅಕ್ಟೋಬರ್ 2025, 0:17 IST
   

2005ರ ಅ.12ರಂದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿಗೆ ಬಂದಾಗ ಅದರ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಸರ್ಕಾರಿ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ, ಪಾರದರ್ಶಕತೆ ತರುವ ಮತ್ತು ಅಧಿಕಾರಿಗಳ ಭ್ರಷ್ಟಾಚಾರವನ್ನು ತಡೆಯುವ ದಿಸೆಯಲ್ಲಿ ಆರ್‌ಟಿಐ ಪ್ರಮುಖ ಪಾತ್ರ ವಹಿಸಲಿದೆ ಎಂದೂ ಭಾವಿಸಲಾಗಿತ್ತು.

ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಎಲ್ಲ ಮಾಹಿತಿಯನ್ನೂ ತಿಳಿಯುವ ಹಕ್ಕು ಪ್ರಜೆಗಳಿಗಿದೆ ಎನ್ನುವುದು ಆರ್‌ಟಿಐನ ಮೂಲತತ್ವ. ಸರ್ಕಾರವು ಎಲ್ಲ ಮಾಹಿತಿಯನ್ನೂ ಜನರಿಗೆ ಹಂಚಿಕೊಳ್ಳುವಂತಾಗಬೇಕು ಎನ್ನುವುದು ಕಾಯ್ದೆಯ ಧ್ಯೇಯವಾಗಿತ್ತು. ಕಾಯ್ದೆಯ ಸೆಕ್ಷನ್ 8 (1)ರ ಅನ್ವಯ ನಿರ್ದಿಷ್ಟ 10 ಇಲಾಖೆ/ಸಂಸ್ಥೆಗಳನ್ನು ಬಿಟ್ಟು ಸರ್ಕಾರದ ಉಳಿದ ಎಲ್ಲ ಇಲಾಖೆ/ವಿಭಾಗ, ಸಂಸ್ಥೆಗಳೂ ಮಾಹಿತಿ ನೀಡಬೇಕಿತ್ತು. 

ಆರಂಭದ ಕೆಲವು ವರ್ಷಗಳಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಮತ್ತು ಆಡಳಿತಾರೂಢರಿಗೆ ಆರ್‌ಟಿಐ ಆತಂಕ ಮೂಡಿಸಿದ್ದೂ ನಿಜ. ಪತ್ರಕರ್ತರು, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತರಿಗೆ ಆರ್‌ಟಿಐ ಒಂದು ಅಸ್ತ್ರವೂ ಆಗಿತ್ತು. ಸರ್ಕಾರದ ಯೋಜನೆ, ಕಾರ್ಯಕ್ರಮ ಅನುಷ್ಠಾನದ ಖರ್ಚುವೆಚ್ಚ, ಗಡುವು ಇತ್ಯಾದಿಗಳನ್ನು ಆರ್‌ಟಿಐ ಮೂಲಕ ತಿಳಿಯುವುದು ಹೆಚ್ಚಾಯಿತು. ಸಂಸತ್ತು, ವಿಧಾನಸಭೆಗಳಿಂದ ಗ್ರಾಮ ಪಂಚಾಯ್ತಿ ಮಟ್ಟದವರೆಗೆ, ದಿಲ್ಲಿಯಿಂದ ಹಳ್ಳಿಯವರೆಗೆ ಸರ್ಕಾರದ ಇಲಾಖೆಗಳಲ್ಲಿ ಆರ್‌ಟಿಐ ಅರ್ಜಿಗಳು ದಾಖಲಾಗತಡೊಗಿದವು. ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆ ಬರತೊಡಗಿದವು. ಅವ್ಯವಹಾರ ನಡೆಸಿದ ಮಂತ್ರಿಗಳು, ಅಧಿಕಾರಿಗಳಿಗೆ ಇರಿಸುಮುರುಸು, ಸಮಸ್ಯೆಗಳು ಎದುರಾದವು. ಅನೇಕ ಅಧಿಕಾರಿಗಳು ಕಾನೂನು ಕ್ರಮ ಎದುರಿಸಬೇಕಾಗಿ ಬಂತು. ಸರ್ಕಾರದಿಂದ ಮಾಹಿತಿ ಪಡೆಯಲು ಮಾಧ್ಯಮಗಳಿಗೂ ಇದು ಉತ್ತಮ ಅಸ್ತ್ರವಾಯಿತು. ಸಾಮಾಜಿಕ ಕಾರ್ಯಕರ್ತರು ಕಾಯ್ದೆಯಡಿ ಮಾಹಿತಿ ಪಡೆದು, ಅದನ್ನು ಮಾಧ್ಯಮಗಳ ಮೂಲಕ ಜನರಿಗೆ ಮುಟ್ಟಿಸತೊಡಗಿದರು. ಸರ್ಕಾರಿ ವ್ಯವಸ್ಥೆಯಲ್ಲಿ ಸಣ್ಣ ಮಟ್ಟದ ಉತ್ತರದಾಯಿತ್ವ ಕಂಡುಬರತೊಡಗಿತು. ಆದರೆ, ಇದು ಹೆಚ್ಚು ದಿನ ಮುಂದುವರಿಯಲಿಲ್ಲ.

ADVERTISEMENT

ದೇಶದ ಭದ್ರತೆಯ ನೆ‍ಪ‍ವೊಡ್ಡಿ ಮಾಹಿತಿ ನಿರಾಕರಿಸುವ ಪ್ರವೃತ್ತಿ ಹೆಚ್ಚಾಯಿತು. ಗಿರೀಶ್ ರಾಮಚಂದ್ರ ದೇಶಪಾಂಡೆ ಮತ್ತು ಕೇಂದ್ರ ಮಾಹಿತಿ ಆಯೋಗ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮಾಹಿತಿ ನಿರಾಕರಿಸುವವರಿಗೆ ಸಮರ್ಥನೆಯಾಯಿತು. ಕಾನೂನನ್ನು ತಪ್ಪಾಗಿ ವ್ಯಾಖ್ಯಾನಿಸಿ, ವೈಯಕ್ತಿಕತೆಯ ಹೆಸರಿನಲ್ಲಿ ಮಾಹಿತಿ ನಿರಾಕರಿಸುವ ಪ್ರವೃತ್ತಿ ಹೆಚ್ಚಾಯಿತು. ಇದರ ಜತೆಯಲ್ಲೇ, ಕಾಯ್ದೆಗೆ ಕೇಂದ್ರ ಸರ್ಕಾರವು ಕ್ರಮೇಣ ಹಲವು ತಿದ್ದುಪಡಿಗಳನ್ನೂ ತರತೊಡಗಿತು. ಈ ಮೂಲಕ ಕಾಯ್ದೆಯ ಆಶಯಗಳಿಗೆ ಪೆಟ್ಟು ಬೀಳತೊಡಗಿತು. 

ಮಾಹಿತಿ ಆಯುಕ್ತರ ಹುದ್ದೆಗಳು ಖಾಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್‌ಟಿಐ ಅನ್ನು ದುರ್ಬಲಗೊಳಿಸುವ, ನಿಷ್ಕ್ರಿಯಗೊಳಿಸುವ ವ್ಯವಸ್ಥಿತ ಕಾರ್ಯತಂತ್ರ ಅನುಸರಿಸತೊಡಗಿದವು. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಬೆಳೆಸಲು ಶ್ರಮಿಸುತ್ತಿರುವ ದೆಹಲಿಯ ‘ಸಾತರ್ಕ್ ನಾಗರಿಕ ಸಂಘಟನೆ’ಯು ಆರ್‌ಟಿಐ ಬಗ್ಗೆ ಅಧ್ಯಯನ ನಡೆಸಿ ‘ರಿಪೋರ್ಟ್ ಕಾರ್ಡ್ 2024–25’ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯಗಳ ಮಟ್ಟದಲ್ಲಿರುವ ಮಾಹಿತಿ ಆಯೋಗಗಳಲ್ಲಿ ಮಾಹಿತಿ ಆಯುಕ್ತರ ಹುದ್ದೆಗಳು ಖಾಲಿ ಇದ್ದು, ಅದರಿಂದ ಮಾಹಿತಿಗಾಗಿ ಸಲ್ಲಿಕೆಯಾಗಿರುವ ಲಕ್ಷಾಂತರ ಅರ್ಜಿಗಳು ಬಾಕಿ ಇವೆ.

ಕೇಂದ್ರ ಮಾಹಿತಿ ಆಯೋಗಕ್ಕೆ ಪ್ರಸ್ತುತ ಮುಖ್ಯಸ್ಥರೇ ಇಲ್ಲ; ಕೇವಲ ಇಬ್ಬರು ಮಾಹಿತಿ ಆಯುಕ್ತರು ಮಾತ್ರ ಇದ್ದಾರೆ. ಜಾರ್ಖಂಡ್‌ನಲ್ಲಿ ಐದು ವರ್ಷಗಳಿಂದ ಮತ್ತು ಹಿಮಾಚಲ ಪ್ರದೇಶದಲ್ಲಿ ಮೂರು ತಿಂಗಳಿನಿಂದ ಆಯುಕ್ತರಿಲ್ಲದೇ ಆಯೋಗ ನಿಷ್ಕ್ರಿಯವಾಗಿದೆ. ಕರ್ನಾಟಕದ ಮಾಹಿತಿ ಆಯೋಗದಲ್ಲಿ ಪ್ರಸ್ತುತ ಮುಖ್ಯಸ್ಥರೂ ಸೇರಿ ಏಳು ಮಾಹಿತಿ ಆಯುಕ್ತರು ಕೆಲಸ ಮಾಡುತ್ತಿದ್ದಾರೆ. ಆದರೆ, ಇದೇ ಜನವರಿವರೆಗೆ, ಕೇವಲ ಮೂವರು ಆಯುಕ್ತರೊಂದಿಗೆ ಆಯೋಗ ಕಾರ್ಯನಿರ್ವಹಿಸುತ್ತಿತ್ತು.

ಪೂರ್ಣ ಪ್ರಮಾಣದಲ್ಲಿ ಆಯುಕ್ತರು ಇಲ್ಲದಿರುವುದರಿಂದ ಅನೇಕ ರಾಜ್ಯಗಳಲ್ಲಿ ಲಕ್ಷಾಂತರ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಇವೆ. ವರದಿಯ ಪ್ರಕಾರ, ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ತೆಲಂಗಾಣ ಮಾಹಿತಿ ಆಯೋಗಕ್ಕೆ 29 ವರ್ಷ ಬೇಕು, ತ್ರಿಪುರಾದ ಆಯೋಗಕ್ಕೆ 23 ವರ್ಷ ಬೇಕು. ಇದರ ಜೊತೆಗೆ, ಅರ್ಹರಲ್ಲದವರನ್ನೂ ಸರ್ಕಾರಗಳು ಆಯುಕ್ತರನ್ನಾಗಿ ನೇಮಕ ಮಾಡುತ್ತಿವೆ ಎಂಬ ದೂರುಗಳೂ ಇವೆ.

ರಾಯಚೂರಿನ ದೇವದುರ್ಗದ ಜಾಲಹಳ್ಳಿಯ ಅತಿಥಿ ಗೃಹದ ದುರಸ್ತಿ ಸಂಬಂಧ ಮಾಹಿತಿ ಬಯಸಿ 2015ರಲ್ಲಿ ಅರ್ಜಿ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಅಳ್ಳಪ್ಪ ಅಮರಾಪುರ ಮಾಹಿತಿ ಸಿಗದೇ ಮೇಲ್ಮನವಿ ಸಲ್ಲಿಸಿದ್ದರು. ಬರೋಬ್ಬರಿ ಎಂಟೂವರೆ ವರ್ಷಗಳ ನಂತರ ಮೇಲ್ಮನವಿ ವಿಚಾರಣೆಗೆ ಹಾಜರಾಗಲು ಇತ್ತೀಚೆಗೆ ನೋಟಿಸ್ ಬಂದಿರುವುದಾಗಿ ಅವರು ಹೇಳಿದ್ದು ಸುದ್ದಿಯಾಗಿತ್ತು. ‘ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಮಾಹಿತಿ ಒದಗಿಸಬೇಕು. ಆದರೆ, ಮಾಹಿತಿ ಆಯೋಗವು 10 ವರ್ಷ ವಿಳಂಬ ಮಾಡುವ ಮೂಲಕ ಭ್ರಷ್ಟ ಅಧಿಕಾರಿಗಳ ರಕ್ಷಣೆ ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದರು. ಆರ್‌ಟಿಐಗೆ 20 ವರ್ಷ ತುಂಬಿದ ಸಂದರ್ಭದಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ಇಂಥದ್ದೇ ಸ್ಥಿತಿ ಕಂಡುಬರುತ್ತಿದೆ.

ದುರ್ಬಲಗೊಂಡ ಕಾನೂನು

2005ರಲ್ಲಿ ಜಾರಿಗೆ ಬಂದ ಮೂಲಕಾಯ್ದೆಗೆ ಹೋಲಿಸಿದರೆ, ಇತ್ತೀಚಿನ ವರ್ಷಗಳಲ್ಲಿ ಈ ಕಾನೂನನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಇದೆ. ಕೇಂದ್ರ ಸರ್ಕಾರವು 2023ರಲ್ಲಿ ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣೆ (ಡಿಪಿಡಿಪಿ) ಕಾಯ್ದೆಯ ಸೆಕ್ಷನ್‌ 44 (3)ರ ಮೂಲಕ ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8 (1) (ಜೆ)ಗೆ ಮಾಡಿರುವ ತಿದ್ದುಪಡಿಯು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ. 

ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8(1)(ಜೆ) ಪ್ರಕಾರ, ಯಾವುದೇ ವ್ಯಕ್ತಿಯ ಖಾಸಗಿ ಮಾಹಿತಿಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದು ಅಲ್ಲದಿದ್ದರೆ ಅಥವಾ ನೀಡುವ ಮಾಹಿತಿಯು ವ್ಯಕ್ತಿಯ ಖಾಸಗಿತನಕ್ಕೆ ಅನಗತ್ಯವಾಗಿ ಧಕ್ಕೆ ತರುವಂತೆ ಇದ್ದರೆ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರಗಳು ಕಾಯ್ದೆಯ ಅಡಿಯಲ್ಲಿ ಕೇಳಲಾದ ಮಾಹಿತಿಯನ್ನು ತಡೆ ಹಿಡಿಯಬಹುದು.  

ಅಂದರೆ, ಅರ್ಜಿದಾರರು ಕೇಳಿದ ಮಾಹಿತಿಯು ಖಾಸಗಿ ವ್ಯಕ್ತಿಯಾಗಿದ್ದರೂ, ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದ್ದರೆ ಮಾಹಿತಿ ಅಧಿಕಾರಿಯು ಅಥವಾ ಮೇಲ್ಮನವಿ ಪ್ರಾಧಿಕಾರಗಳು ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಮಾಹಿತಿ ನೀಡುವುದಕ್ಕೆ ಈ ಸೆಕ್ಷನ್‌ ಅವಕಾಶ ನೀಡುತ್ತಿತ್ತು.  

ಆದರೆ, ಡಿಪಿಡಿಪಿ ಕಾಯ್ದೆಯ ಸೆಕ್ಷನ್‌ 44 (3)ರಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಗೂ ಇತರ ವಿಚಾರಗಳ ಉಲ್ಲೇಖಗಳನ್ನು ತೆಗೆಯಲಾಗಿದ್ದು, ವ್ಯಕ್ತಿಯ ಖಾಸಗಿ ಮಾಹಿತಿಗಳನ್ನು ತಡೆ ಹಿಡಿಯುವುದಕ್ಕೆ ಅವಕಾಶ ನೀಡಿದೆ. 

ಈ ತಿದ್ದುಪಡಿಯಿಂದಾಗಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇಲ್ಲದಾಗಿದೆ ಎಂಬುದು ವಿರೋಧ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ. ಆದರೆ, ಸರ್ಕಾರ ಇದನ್ನು ಸಮರ್ಥಿಸಿಕೊಂಡಿದ್ದು, ಕಾಯ್ದೆಯ ದುರ್ಬಳಕೆ ತಡೆಯುವುದಕ್ಕಾಗಿ ಈ ತಿದ್ದುಪಡಿತರಲಾಗಿದೆ ಎಂದು ಹೇಳಿದೆ. 

ವಿವಿಧ ಆರೋಪಗಳನ್ನು ಹೊತ್ತಿರುವ ಅಧಿಕಾರಿಗಳು, ಸಚಿವರು ಹಾಗೂ ಸಾರ್ವಜನಿಕ ಜೀವನದಲ್ಲಿರುವವರ ಜಾತಿ ಪ್ರಮಾಣ ಪತ್ರ, ಪದವಿ ಪ್ರಮಾಣಪತ್ರ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿಗಳನ್ನು ಕಾಯ್ದೆಯ ಅಡಿಯಲ್ಲಿ ಕೇಳಿದಾಗ, ಈ ತಿದ್ದುಪಡಿಯ ಕಾರಣ ನೀಡಿ ಮಾಹಿತಿಗಳನ್ನು ನಿರಾಕರಿಸಿರುವ ಹಲವು ನಿದರ್ಶನಗಳು ಇವೆ. ‌

ಮಾಹಿತಿ ಹಕ್ಕು ಕಾರ್ಯಕರ್ತರ ಕೊಲೆ

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ, ಸರ್ಕಾರಿ ಅಧಿಕಾರಿಗಳ ಮತ್ತು ಆಡಳಿತ ವ್ಯವಸ್ಥೆಯ ಹುಳುಕುಗಳನ್ನು ಬಹಿರಂಗಪಡಿಸುವುದು ಹೆಚ್ಚಾಯಿತು. ಅದರ ಜತೆಯಲ್ಲೇ, ಮಾಹಿತಿ ಹಕ್ಕು ಕಾರ್ಯಕರ್ತರನ್ನು ಬೆದರಿಸುವ, ಕೊಲ್ಲುವ ಪ್ರವೃತ್ತಿಯೂ ಹುಟ್ಟಿಕೊಂಡಿತು. ಕಾಮನ್‌ವೆಲ್ತ್ ಮಾನವ ಹಕ್ಕುಗಳ ಕಾರ್ಯಕ್ರಮ (ಸಿಎಚ್‌ಆರ್‌ಐ) ಪ್ರಕಾರ, ಕಾಯ್ದೆ ಜಾರಿಯಾದಾಗಿನಿಂದ ಪ್ರತಿ ವರ್ಷವೂ ಹತ್ಯೆಗಳು ನಡೆಯುತ್ತಲೇ ಇವೆ. ಇದುವರೆಗೆ ಕನಿಷ್ಠ 107 ಮಂದಿ ಮಾಹಿತಿ ಹಕ್ಕು ಕಾರ್ಯಕರ್ತರು ಕೊಲೆಯಾಗಿದ್ದಾರೆ ಮತ್ತು ಬೆದರಿಕೆ, ಒತ್ತಡಗಳಿಂದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಲೆಯಾದವರು ಯಾರೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನಾಗಲಿ, ಸೂಕ್ಷ್ಮ ದಾಖಲೆಗಳಿಗೆ ಸಂಬಂಧಿಸಿದ ಮಾಹಿತಿಯನ್ನಾಗಲಿ ಕೇಳಿದ್ದವರಲ್ಲ; ಸ್ಥಳೀಯ ಆಡಳಿತಗಳನ್ನು ಉತ್ತರದಾಯಿಯಾಗಿಸುವಂಥ ಮಾಹಿತಿ ಬಯಸಿದ್ದವರು ಎನ್ನುವುದು ಗಮನಾರ್ಹ. ರಿಯಲ್ ಎಸ್ಟೇಟ್‌, ಮರಳು ಮಾಫಿಯಾಗೆ ಸೇರಿದವರು ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ನಡೆಸುವ ಘಟನೆಗಳು ದೇಶದ ನಾನಾ ಭಾಗಗಳಲ್ಲಿ ವರದಿಯಾಗುತ್ತಲೇ ಇವೆ.

ಆರ್‌ಟಿಐ ಅಡಿ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಮಾಹಿತಿ ಹಕ್ಕು ಕಾರ್ಯಕರ್ತರ ಕೊಲೆಗಳಲ್ಲಿಯೂ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದು ಕುಖ್ಯಾತಿ ಗಳಿಸಿದೆ.

ಇನ್ನೊಂದು ವಾದವೂ ಇದೆ; ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಿಸಿಕೊಂಡು ಕೆಲವು ಮಾಹಿತಿ ಹಕ್ಕು ಕಾರ್ಯಕರ್ತರು ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿ, ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಆ ವಾದ. ಇದರಲ್ಲಿ ಅಲ್ಪ ಮಟ್ಟಿಗಿನ ಸತ್ಯಾಂಶವೂ ಇರಬಹುದು. ಆದರೆ, ಹೀಗೆ ಆರೋಪ ಮಾಡುವ ಬಹುತೇಕರು ಸರ್ಕಾರಿ ವ್ಯವಸ್ಥೆಗೆ ಸಂಬಂಧಿಸಿದವರು, ಅಧಿಕಾರಿಗಳು ಎನ್ನುವುದು ವಾಸ್ತವ.

ಬಾಕಿ ಅರ್ಜಿಗಳು ಹೆಚ್ಚಳ

ವಿವಿಧ ಮಾಹಿತಿಗಳನ್ನು ಕೋರಿ ಆರ್‌ಟಿಐ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳು ಮತ್ತು ಮೇಲ್ಮನವಿಗಳು ಸಮರ್ಪಕವಾಗಿ ಇತ್ಯರ್ಥವಾಗುತ್ತಿಲ್ಲ. ಇಂತಹ ಅರ್ಜಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಮಾಹಿತಿ ಆಯೋಗಗಳ ಮುಂದೆ ಇಂತಹ 4.13 ಲಕ್ಷ ಅರ್ಜಿಗಳಿವೆ. ಅತ್ಯಂತ ಹೆಚ್ಚು ಅರ್ಜಿಗಳು ಬಾಕಿ ಇರುವ ಮೊದಲ ಮೂರು ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿವೆ. 

ಸಕಾಲದಲ್ಲಿ ಮಾಹಿತಿ ಆಯುಕ್ತರ ನೇಮಕವಾಗದೇ ಇರುವುದರಿಂದ ಇಂಥ ಸನ್ನಿವೇಶ ನಿರ್ಮಾಣವಾಗಿದೆ ಎಂದು ‘ಸಾತರ್ಕ್‌ ನಾಗರಿಕ ಸಂಘಟನೆ’ ಸಿದ್ಧಪಡಿಸಿರುವ ಭಾರತದ ಮಾಹಿತಿ ಆಯೋಗಗಳ ಸಾಧನೆ ಕುರಿತ 2024–25ರ ವರದಿ ಉಲ್ಲೇಖಿಸಿದೆ.  

ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಆಯೋಗಗಳು ಆದೇಶ ನೀಡದೇ ದೂರುಗಳು ಮತ್ತು ಮೇಲ್ಮನವಿಗಳನ್ನು ವಾಪಸ್‌ ಕಳುಹಿಸುತ್ತಿರುವುದರ ಬಗ್ಗೆ ವರದಿಯು ಕಳವಳ ವ್ಯಕ್ತಪಡಿಸಿದೆ. ಕಾಯ್ದೆಯ ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ಮಾಹಿತಿ ನೀಡಲು ನಿರಾಕರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯೋಗಗಳು ಮೀನ –ಮೇಷ ಎಣಿಸುತ್ತಿರುವುದರ ಬಗ್ಗೆಯೂ ವರದಿ ಆಕ್ಷೇಪಿಸಿದೆ.

ಆಧಾರ: ಪಿಟಿಐ, ಡೌನ್ ಟು ಅರ್ಥ್, ಆರ್‌ಟಿಐ ಕಾಯ್ದೆ –2005, ಡಿಪಿಡಿಪಿ ಕಾಯ್ದೆ –2023, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.