ADVERTISEMENT

ಆಳ–ಅಗಲ: ಸಂಸತ್‌ ಭವನದ ಭದ್ರತೆ ಬಿಗಿಯಾಗಿದ್ದರೂ ಲೋಪ!

ಸಮಗ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 20:29 IST
Last Updated 13 ಡಿಸೆಂಬರ್ 2023, 20:29 IST
<div class="paragraphs"><p>ನವದೆಹಲಿಯ ಸಂಸತ್‌ ಭವನದ ಲೋಕಸಭೆಗೆ ನುಗ್ಗಿದ ಆಗಂತುಕರನ್ನು ಸೆರೆಹಿಡಿಯಲು ನಡೆಸಿದ ಯತ್ನ</p></div>

ನವದೆಹಲಿಯ ಸಂಸತ್‌ ಭವನದ ಲೋಕಸಭೆಗೆ ನುಗ್ಗಿದ ಆಗಂತುಕರನ್ನು ಸೆರೆಹಿಡಿಯಲು ನಡೆಸಿದ ಯತ್ನ

   

ಪಿಟಿಐ ಚಿತ್ರ

ಸಂಸತ್ ಭವನದ ಮೇಲೆ 2001ರ ಡಿಸೆಂಬರ್ 13ರಂದು ಭಯೋತ್ಪಾದನಾ ದಾಳಿ ನಡೆದಿತ್ತು. ಆನಂತರ ಸಂಸತ್ ಭವನದ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. 2023ರಲ್ಲಿ ನೂತನ ಸಂಸತ್ ಭವನವು ಕಾರ್ಯಾರಂಭ ಮಾಡಿದ ನಂತರ ಅಲ್ಲೂ ಅದೇ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳಿತ್ತು. ಸಂಸತ್ ಭವನದ ಮೇಲೆ ನಡೆದಿದ್ದ ದಾಳಿಯ 22ನೇ ವರ್ಷಾಚರಣೆಯ ದಿನವೇ ಈ ಭದ್ರತೆಯನ್ನು ಭೇದಿಸಲಾಗಿದೆ.

ADVERTISEMENT

–––––

‘ಸಂಸತ್ ಭವನದಲ್ಲಿ ಹಲವು ಹಂತದ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ’ ಎನ್ನುತ್ತದೆ ಸಂಸತ್ ಭವನದ ಭದ್ರತಾ ಕೈಪಿಡಿ. ಸಂಸತ್ ಭವನದ ಆವರಣ, ಸಂಸತ್ ಭವನದ ಸಂಕೀರ್ಣ, ‌ಕೇಂದ್ರ ಸಭಾಂಗಣ, ಲೋಕಸಭೆ, ರಾಜ್ಯಸಭೆ ಮತ್ತು ಸಂಸತ್ ಭವನದ ಕಾರಿಡಾರ್‌ಗಳಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಇದರಲ್ಲಿ ವಿವರಿಸಲಾಗಿದೆ. ಅಧಿವೇಶನದ ಕಲಾಪ ವೀಕ್ಷಣೆಗೆ ಬರುವ ಸಾರ್ವಜನಿಕರು ಅನುಸರಿಸಬೇಕಾದ ನಿಯಮಗಳು, ಸಂಸದರು ಪಾಲಿಸಬೇಕಾದ ಭದ್ರತಾ ನಿಯಮಗಳು ಮತ್ತು ಭದ್ರತಾ ಸಿಬ್ಬಂದಿಯ ಕರ್ತವ್ಯಗಳನ್ನು ಈ ಕೈಪಿಡಿಯಲ್ಲಿ ವಿವರಿಸಲಾಗಿರುತ್ತದೆ.

ಈ ಪ್ರಕಾರ ಸಂಸತ್ ಭವನ ಸಂಕೀರ್ಣ ಮತ್ತು ಸಂಸತ್ ಭವನದ ಭದ್ರತೆಯ ಸಂಪೂರ್ಣ ಹೊಣೆ ‘ಸಂಸತ್ ಭದ್ರತಾ ಪಡೆ’ಯದ್ದಾಗಿದೆ. ಇದು ಕೇಂದ್ರದ ಅರೆಸೇನಾಪಡೆಗಳ ವಿವಿಧ ಪಡೆಗಳು ಮತ್ತು ಸಂಸತ್ ಭವನದ ಭದ್ರತಾ ಸಿಬ್ಬಂದಿಯನ್ನು ಒಳಗೊಂಡ ಪ್ರತ್ಯೇಕ ಪಡೆಯಾಗಿದೆ. ಈ ಸಿಬ್ಬಂದಿಯ ನೆರವಿಗಾಗಿ ದೆಹಲಿ ಪೊಲೀಸ್‌ ಇಲಾಖೆಯ ಕೆಲ ಸಿಬ್ಬಂದಿಯನ್ನು ಸಹಾಯಕರನ್ನಾಗಿ ನಿಯೋಜಿಸಲಾಗಿರುತ್ತದೆ. ಸಂಸತ್ ಭದ್ರತಾ ಪಡೆಯೇ ಎಲ್ಲಾ ಸ್ವರೂಪದ ತಪಾಸಣಾ ಕಾರ್ಯಗಳನ್ನು ನಡೆಸುತ್ತದೆ. ಲೋಕಸಭೆ ಮತ್ತು ರಾಜ್ಯಸಭೆಯ ಗ್ಯಾಲರಿಗಳಲ್ಲೂ ಭದ್ರತೆ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆ ಈ ಪಡೆಯದ್ದೇ ಆಗಿದೆ.

ಸಂಸತ್ ಭವನದ ಆವರಣಕ್ಕೆ ಪ್ರವೇಶ ನೀಡುವ ಮುಖ್ಯ ದ್ವಾರಗಳು ಮತ್ತು ಸಂಸತ್ ಕಟ್ಟಡದ ದ್ವಾರಗಳು, ಗ್ಯಾಲರಿ ಪ್ರವೇಶದ್ವಾರಗಳು ಮತ್ತು ಗ್ಯಾಲರಿಯಲ್ಲೂ ತಪಾಸಣಾ ಹಾಗೂ ಭದ್ರತಾ ವ್ಯವಸ್ಥೆ ಇರುತ್ತದೆ. ಗ್ಯಾಲರಿಗೆ ಪ್ರವೇಶ ಪಡೆಯುವ ಪ್ರತಿ ಸಾರ್ವಜನಿಕನೂ/ಳೂ ಈ ಎಲ್ಲೆಡೆ ತಪಾಸಣೆಗೆ ಒಳಗಾಗಲೇಬೇಕು. ಆತ/ಆಕೆಯ ಬ್ಯಾಗ್‌, ವಾಲೆಟ್‌, ಮೊಬೈಲ್‌, ಬ್ರೀಫ್‌ಕೇಸ್‌ಗಳನ್ನೂ ತಪಾಸಣೆಗೆ ಒಳಪಡಿಸಲೇಬೇಕು. ಇಷ್ಟೆಲ್ಲಾ ತಪಾಸಣಾ ಕೇಂದ್ರಗಳನ್ನು ದಾಟಿ ಇಬ್ಬರು ‘ಸ್ಮೋಕ್‌ ಕ್ಯಾನ್‌’ಗಳನ್ನು ಲೋಕಸಭೆಯ ಗ್ಯಾಲರಿಯ ಒಳಗೆ ಒಯ್ದಿದ್ದಾರೆ. ‘ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಇದ್ದರೂ, ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಹೀಗಾಗಿಯೇ ಭದ್ರತಾ ಲೋಪವಾಗಿದೆ’ ಎಂದು ಕಾಂಗ್ರೆಸ್‌ ಮತ್ತು ಶಿವಸೇನಾದ (ಉದ್ಧವ್‌ ಬಣ) ಸಂಸದರು ಆರೋಪಿಸಿದ್ದಾರೆ.

ಸಂಸದರ ಶಿಫಾರಸು ಇದ್ದರಷ್ಟೇ ಸಾರ್ವಜನಿಕರಿಗೆ ‍ಪಾಸ್

ಸಂಸತ್ತಿನ ಒಳಗೂ ಹಾಗೂ ಹೊರಗೂ ಬಿಗಿ ಭದ್ರತೆ ನಿಯೋಜಿಸಲಾಗಿರುತ್ತದೆ. ಸಂಸತ್ತಿನ ಒಳಗಡೆಗೆ ಸ್ಪೀಕರ್‌ ಒಪ್ಪಿಗೆ ಇಲ್ಲದೆ ಒಂದು ಸಣ್ಣ ಚೀಟಿ ಕರಪತ್ರವನ್ನೂ ತರುವಂತಿಲ್ಲ. ಸಂಸದರ ಸಂಸತ್ತಿನ ಅಧಿಕಾರಿಗಳ ಅಧಿವೇಶನದ ಕಲಾಪ ವೀಕ್ಷಿಸಲು ಬರುವ ಸಾರ್ವಜನಿಕರ ಪ್ರತಿ ನಡೆಯನ್ನೂ ಇಲ್ಲಿ ತನಿಖಾ ಕಣ್ಣುಗಳಿಂದ ವೀಕ್ಷಿಸಲಾಗುತ್ತಿರುತ್ತದೆ.

ಸಾರ್ವಜನಿಕರಿಗೆ ಸಂಸತ್ತಿನ ಒಳಗಡೆ ಪ್ರವೇಶಿಸಲು ಪಾಸ್‌ ನೀಡುವ ವೇಳೆಯಲ್ಲಿಯೂ ಭಾರಿ ಎಚ್ಚರಿಕೆ ವಹಿಸಲಾಗುತ್ತದೆ. ಜೊತೆಗೆ ವ್ಯಕ್ತಿಯ ಕುರಿತ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ. ಇಷ್ಟೆಲ್ಲ ಭದ್ರತೆಯ ನಡುವೆ ಪಾಸ್‌ ಪಡೆದುಕೊಂಡಿದ್ದ ಇಬ್ಬರು ಲೋಕಸಭೆಯ ವೀಕ್ಷಕರ ಗ್ಯಾಲರಿಯವರೆಗೆ ‘ಸ್ಮೋಕ್‌ ಕ್ಯಾನ್‌’ಗಳನ್ನು ಗುಪ್ತವಾಗಿ ಒಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ದೊಡ್ಡ ಮಟ್ಟದ ಭದ್ರತ ಲೋಪವಾಗಿದೆ. ಸಾರ್ವಜನಿಕರಿಗಷ್ಟೇ ಯಾಕೆ ಸಂಸದರಿಗೂ ಸಂಸತ್ತು ಪ್ರವೇಶಿಸಲು ಪಾಸು ನೀಡುವುದು ಸಾಮಾನ್ಯ ಪಾಸ್‌ ಪ್ರಾಧಿಕಾರ (ಸಿಪಿಐಸಿ). ವೀಕ್ಷಕರ ಗ್ಯಾಲರಿಗೆ ಪ್ರವೇಶ ಪಡೆದುಕೊಳ್ಳಲು ಸಹ ಇದೇ ಪ್ರಾಧಿಕಾರ ಪಾಸ್‌ ನೀಡುತ್ತದೆ. ಆದರೆ ಸಾರ್ವಜನಿಕರಿಗೆ ಪಾಸ್‌ ನೀಡಬೇಕಾದರೆ ಸಾರ್ವಜನಿಕರ ಪರವಾಗಿ ಸಂಸ‌ದರು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಎಂಥ ವ್ಯಕ್ತಿಗೆ ಪಾಸ್‌ ನೀಡಬೇಕು ಮತ್ತು ಪ್ರಾಧಿಕಾರಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತೂ ಕಟ್ಟುನಿಟ್ಟಿನ ನಿಯಮಗಳಿವೆ. ಸಾರ್ವಜನಿಕರಿಗೆ ಪಾಸ್‌ ನೀಡಬೇಕು ಎಂದಾದರೆ ಸಂಸ‌ದರು ಪತ್ರದ ಮೂಲಕವಾಗಿ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸಂಸದರ ಪಕ್ಷದ ಕಚೇರಿಯ ಅಧಿಕಾರಿಗಳು ಶಿಫಾರಸು ಮಾಡದ ಹೊರತು ಯಾರಿಗೂ ಪಾಸ್‌ ನೀಡಲಾಗುವುದಿಲ್ಲ. ಸಚಿವರ ಆಪ್ತರು ಹಿರಿಯ ಅಧಿಕಾರಿಗಳು ಪಕ್ಷದ ಅಧಿಕಾರಿಗಳೊಂದಿಗೆ ಪ್ರಾಧಿಕಾರವು ನಿರಂತರ ಸಂಪರ್ಕ ಇಟ್ಟುಕೊಳ್ಳುತ್ತದೆ. ಬರವಣಿಗೆ ಮೂಲಕವೇ ಅರ್ಜಿ ನೀಡುವ ಕಲಾಪವನ್ನು ವೀಕ್ಷಿಸುವ ಸದುದ್ದೇಶ ಹೊಂದಿರುವ ವ್ಯಕ್ತಿಗೆ ಮಾತ್ರವೇ ಪ್ರಾಧಿಕಾರ ಪಾಸ್‌ ನೀಡಬೇಕು. ಇನ್ನು ವೀಕ್ಷಕರ ಗ್ಯಾಲರಿಯ ಪಾಸ್‌ ಪಡೆದ ಬಳಿಕ ವ್ಯಕ್ತಿಯ ತಪಾಸಣೆಗೂ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಜೊತೆಗೆ ಆತ ಗ್ಯಾಲರಿಯಲ್ಲಿ ಕುಳಿತ ಬಳಿಕವೂ ಆತನ ಚಲನವಲನಗಳನ್ನು ತೀವ್ರ ನಿಗಾದಲ್ಲಿ ಇರಿಸಲಾಗುತ್ತದೆ.

ಮೋದಿಗೆ ಜೈಕಾರ ಕೂಗಿದ್ದ ವೀಕ್ಷಕರು!

ಸೆಪ್ಟೆಂಬರ್‌ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿತ್ತು. ಅದು ಅಂಗೀಕಾರಗೊಂಡ ಬಳಿಕ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಕೆಲವರು ಮೋದಿಗೆ ಜೈಕಾರ ಕೂಗಿದ್ದರು. ಹೀಗೆ ವೀಕ್ಷಕರ ಗ್ಯಾಲರಿಯಲ್ಲಿ ಜೈಕಾರ ಕೂಗುವುದೂ ಸಂಸತ್ತಿನ ನಿಯಮಾವಳಿಯ ಉಲ್ಲಂಘನೆಯಾಗಿದೆ. ಈ ಘಟನೆಯ ಬಗ್ಗೆ ಅಂದೇ ಕೆಲವು ಸಂಸದರು ಆತಂಕ ವ್ಯಕ್ತಪಡಿಸಿದ್ದರು.

ಈ ಘಟನೆಯ ಬಗ್ಗೆ ಕೆಲವು ಸಂಸದರು ಸ್ಪೀಕರ್‌ ಅವರಿಗೆ ಪತ್ರವನ್ನೂ ಬರೆದಿದ್ದರು. ‘ಭದ್ರತಾ ವ್ಯವಸ್ಥೆಯ ಬಗ್ಗೆ ಅನುಮಾನ ಹುಟ್ಟುವಂತಾಗಿದೆ. ಮಹಿಳಾ ಮೀಸಲಾತಿ ಮಸೂದೆಯು ಅಂಗೀಕಾರಗೊಂಡಾಗ ವೀಕ್ಷಕರ ಗ್ಯಾಲರಿಯಲ್ಲಿದ್ದ ಕೆಲವರು ಪ್ರಧಾನಿ ಮೋದಿ ಅವರಿಗೆ ಜೈಕಾರ ಕೂಗಿದ್ದರು. ಅಂದೇ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು. ನಾಳೆ ಯಾರೋ ಬಂದು ‘ಧಿಕ್ಕಾರ’ವನ್ನೂ ಕೂಗುತ್ತಾರೆ. ಕೆಲವರು ಏನನ್ನಾದರೂ ಬಿಸಾಡಬಹುದು... ಅಂದು ಆರಂಭವಾಗಿದ್ದು ಇಂದು ಹೇಗೆ ಮುಂದುವರಿದಿದೆ ಎಂದು ನಾವು ನೋಡುತ್ತಿದ್ದೇವೆ’ ಎಂದು ಆರ್‌ಜೆಡಿ ಸಂಸ‌ದ ಮನೋಜ್‌ ಝಾ ಆತಂಕ ವ್ಯಕ್ತಪಡಿಸಿದ್ದಾರೆ.

‘ಅಧಿವೇಶನ ನಡೆಯುವಾಗ ಘೋಷಣೆಗಳನ್ನು ಹಾಕಲಾಗುತ್ತದೆ. ಇಂಥ ವ್ಯಕ್ತಿಗಳಿಗೆ ಸಂಸತ್ತು ಪ್ರವೇಶಿಸಲು ಯಾವ ಸಂಸದರು ಅನುವು ಮಾಡಿಕೊಡುತ್ತಿದ್ದಾರೆ ಎನ್ನುವ ಕುರಿತು ತನಿಖೆ ನಡೆಸಬೇಕು ಎಂದು ನಾನು ಸ್ಪೀಕರ್‌ ಅವರಿಗೆ ಪತ್ರ ಬರೆದಿದ್ದೆ’ ಎಂದಿದ್ದಾರೆ ಶಿವಸೇನಾ (ಉದ್ಧವ್‌ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ. ಹೊಸ ಸಂಸತ್‌ ಭವನದ ಭದ್ರತೆಯ ಕುರಿತು ಅನುಮಾನಗಳು ಎದ್ದಿವೆ ಎನ್ನುವುದು ವಿರೋಧ ಪಕ್ಷಗಳ ಕೆಲವು ಸಂಸ‌ದರ ಅಭಿಪ್ರಾಯ.

‘ಹೊಸ ಸಂಸತ್‌ ಭವನದ ಭದ್ರತೆಯ ವ್ಯವಸ್ಥೆಯು ಕಟ್ಟುನಿಟ್ಟಾಗಿಲ್ಲ. ಹಳೆಯ ಸಂಸತ್ತು ಭವನದ ಕಟ್ಟಡ ಭದ್ರತೆಯೇ ಹೆಚ್ಚು ಬಿಗಿಯಾಗಿತ್ತು ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕಿದೆ’ ಎಂದು ಕಾಂಗ್ರೆಸ್‌ ಸಂಸ‌ದ ಶಶಿ ತರೂರ್‌ ಅಭಿಪ್ರಾಯಪಡುತ್ತಾರೆ.

––––

–ಆಧಾರ: ಸಂಸತ್ ಭವನದ ಭದ್ರತಾ ಕೈ‍ಪಿಡಿ, ಲೋಕಸಭೆಯ ವ್ಯವಹಾರಗಳ ಬುಲೆಟಿನ್‌, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.