ADVERTISEMENT

ಆಳ–ಅಗಲ: ಬೆಳ್ಳಿಗೇಕೆ ಬೆರಗಿನ ಬೆಲೆ?

ಸೂರ್ಯನಾರಾಯಣ ವಿ.
Published 19 ಅಕ್ಟೋಬರ್ 2025, 23:30 IST
Last Updated 19 ಅಕ್ಟೋಬರ್ 2025, 23:30 IST
   
ಚಿನಿವಾರ ಪೇಟೆಯಲ್ಲಿ ಬೆಳ್ಳಿಯ ಧಾರಣೆಯು ಚಿನ್ನದ ಮಾದರಿಯಲ್ಲಿ ಹೆಚ್ಚಾಗುತ್ತಿದೆ. ಮೂರು ದಿನಗಳ ಹಿಂದೆ ಗರಿಷ್ಠ ಮಟ್ಟಕ್ಕೇರಿ ದಾಖಲೆ ಬರೆದಿದೆ. ಒಂದು ವರ್ಷದ ಅವಧಿಯಲ್ಲಿ ಬೆಳ್ಳಿಯ ದರವು ಶೇ 70ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಚಿನ್ನದ ದರ ಗಗನಮುಖಿಯಾಗುತ್ತಿರುವುದನ್ನು ನೋಡುತ್ತಾ ಬಂದಿದ್ದ ಜನರಿಗೆ, ಬೆಳ್ಳಿಯ ಧಾರಣೆಯ ಏರಿಕೆಯ ರಾಕೆಟ್‌ ವೇಗ ಬೆರುಗು ಮೂಡಿಸಿದೆ

ಬೆಳಕಿನ ಹಬ್ಬ ದೀಪಾವಳಿಗೂ ಮುನ್ನ ಧನತ್ರಯೋದಶಿಯ ಅಂಗವಾಗಿ ಆಭರಣಗಳ ಖರೀದಿಗೆ ಚಿನ್ನಾಭರಣ ಮಳಿಗೆಗಳಿಗೆ ಮುಗಿ ಬಿದ್ದ ಗ್ರಾಹಕರಿಗೆ ಬೆಳ್ಳಿಯ ಗಟ್ಟಿ, ನಾಣ್ಯಗಳು, ಬೆಳ್ಳಿಯ ಆಭರಣಗಳು ಹಾಗೂ ಇನ್ನಿತರ ವಸ್ತುಗಳು ಬೇಕಾದಷ್ಟು ಪ್ರಮಾಣದಲ್ಲಿ ಸಿಗಲಿಲ್ಲ. ಬೇಡಿಕೆಗೆ ತಕ್ಕಂತೆ ಪೂರೈಸಲು ಮಳಿಗೆಗಳ ಮಾಲೀಕರಿಗೂ ಸಾಧ್ಯವಾಗಲಿಲ್ಲ. ‘ಬಿಳಿ ಲೋಹ’ದ ಕೊರತೆ ಮತ್ತು ಅದರ ಧಾರಣೆ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದರಿಂದ ವ್ಯಾಪಾರಿಗಳು ಬೆಳ್ಳಿಯ ವಹಿವಾಟಿಗೆ ಮಿತಿ ಹೇರಿದ್ದರು. ಈ ಸನ್ನಿವೇಶ ನಮ್ಮ ರಾಜ್ಯದಲ್ಲಷ್ಟೇ ಅಲ್ಲ; ಇಡೀ ದೇಶದಲ್ಲಿ ಕಂಡು ಬಂದಿದೆ. 

ಚಿನಿವಾರ ಪೇಟೆಯಲ್ಲೀಗ ಚಿನ್ನಕ್ಕಿಂತಲೂ ಬೆಳ್ಳಿಗೆ ಹೆಚ್ಚು ಬೇಡಿಕೆ. ಚಿನ್ನದ ಬೆಲೆ ಏರು ಹಾದಿಯಲ್ಲಿದ್ದರೂ, ಬೆಲೆ ಹೆಚ್ಚಳದಲ್ಲಿ ಬೆಳ್ಳಿಯು ಬಂಗಾರವನ್ನು ಹಿಂದಿಕ್ಕಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಳ್ಳಿ ಧಾರಣೆ ಶೇ 75ಕ್ಕೂ ಹೆಚ್ಚಿನ ಏರಿಕೆ ಕಂಡಿದೆ. ಇದೇ 15ರಂದು ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳಿ ಧಾರಣೆ ಕೆಜಿಗೆ ₹2.06 ಲಕ್ಷ ತಲುಪಿತ್ತು. ದಾಖಲೆ ಮಟ್ಟಕ್ಕೆ ಏರಿದ ನಂತರ ಬೆಲೆ ಇಳಿದಿದ್ದರೂ, ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿಗೆ ₹1.80 ಲಕ್ಷ ಇದೆ. ದೆಹಲಿಯಲ್ಲಿ ₹1.70 ಲಕ್ಷ ಇದೆ (ಶನಿವಾರದ ಧಾರಣೆ).‌

ಜಗತ್ತಿನಲ್ಲೇ ಭಾರತವು ಬೆಳ್ಳಿಯ ಅತಿ ದೊಡ್ಡ ಗ್ರಾಹಕ ರಾಷ್ಟ್ರ. ತನ್ನ ಬೇಡಿಕೆಯಲ್ಲಿ ಶೇ 80ರಷ್ಟು ಬಿಳಿ ಲೋಹವನ್ನು ಆಮದು ಮಾಡಿಕೊಳ್ಳುತ್ತದೆ. ಅಮೆರಿಕ ಮತ್ತು ಚೀನಾಗ ಕೂಡ ಬೆಳ್ಳಿ ಬಳಕೆಯಲ್ಲಿ ಮುಂಚೂಣಿಯಲ್ಲಿವೆ. ಬೆಳ್ಳಿಯ ಧಾರಣೆ ಹೆಚ್ಚಳ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಜಗತ್ತಿನೆಲ್ಲೆಡೆ ಈ ಪ್ರವೃತ್ತಿ ಕಂಡು ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬೆಳ್ಳಿಯ ಕೊರತೆ. ಇದರ ಜತೆಗೆ ಜಾಗತಿಕ ಆರ್ಥಿಕ, ರಾಜಕೀಯ ಕಾರಣಗಳೂ ಇವೆ.

ADVERTISEMENT

ಬೇಡಿಕೆ ಹೆಚ್ಚಳ, ಪೂರೈಕೆ ಕಡಿಮೆ

ಭಾರತ ಸೇರಿದಂತೆ ಜಾಗತಿಕವಾಗಿ ಬೆಳ್ಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ನಾಲ್ಕು ವರ್ಷಗಳಿಂದ ಬೇಡಿಕೆ ಮತ್ತು ಪೂರೈಕೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡು ಬರುತ್ತಿದೆ. ಸಿಲ್ವರ್‌ ಇನ್‌ಸ್ಟಿಟ್ಯೂಟ್‌ನ ವಾರ್ಷಿಕ ವರದಿಯ ಅಂಕಿ ಅಂಶಗಳು ಇದನ್ನು ಹೇಳುತ್ತಿವೆ. 2024ರಲ್ಲಿ 36,217 ಟನ್‌ ಬೆಳ್ಳಿಗೆ ಬೇಡಿಕೆ ಇತ್ತು. ಆದರೆ, ಪೂರೈಕೆ ಆಗಿದ್ದು 31,570 ಟನ್‌ಗಳಷ್ಟು ಮಾತ್ರ. ಈ ವರ್ಷ ಅಂದರೆ 2025ರಲ್ಲಿ ‌35,713 ಟನ್‌ಗಳಿಗೆ ಬೇಡಿಕೆ ಬರಬಹುದು. ಇದಕ್ಕೆ ಪ್ರತಿಯಾಗಿ 32,056 ಟನ್‌ಗಳಷ್ಟು ಪೂರೈಕೆ ಮಾತ್ರ ಸಾಧ್ಯವಾಗಲಿದೆ ಎಂದು ಸಿಲ್ವರ್‌ ಇನ್‌ಸ್ಟಿಟ್ಯೂಟ್‌ ತನ್ನ ‘ವಿಶ್ವ ಬೆಳ್ಳಿ ಸಮೀಕ್ಷೆ–2025’ ವರದಿಯಲ್ಲಿ ಅಂದಾಜಿಸಿದೆ.

ಬೆಳ್ಳಿಯು ತಾಮ್ರ, ಸತುವಿನಂತಹ ಮೂಲ ಲೋಹಗಳ ಉಪ ಉತ್ಪನ್ನ. ಈ ಲೋಹಗಳ ಉತ್ಪಾದನೆಯಲ್ಲಿ ವ್ಯತ್ಯಾಸವಾದರೆ ಅದು ಬೆಳ್ಳಿಯ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ.

ಪೂರೈಕೆ ಮತ್ತು ಬೇಡಿಕೆ

ಜಾಗತಿಕ ಆರ್ಥಿಕ, ರಾಜಕೀಯ ಅನಿಶ್ಚಿತ ಸ್ಥಿತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ನೀತಿಯು ಜಾಗತಿಕ ರಾಜಕೀಯದಲ್ಲಿ ಅಸ್ಥಿರತೆ ಉಂಟು ಮಾಡಿದೆ. ಅಮೆರಿಕ–ಚೀನಾ, ಅಮೆರಿಕ–ಭಾರತ ಸುಂಕ ಸಮರ, ಪ್ರಾದೇಶಿಕವಾಗಿ ನಡೆಯುತ್ತಿರುವ ಸಂಘರ್ಷಗಳು ಜಾಗತಿಕ ಆರ್ಥಿಕ ಸ್ಥಿತಿಗತಿ, ಬೆಲೆಬಾಳುವ ಲೋಹಗಳ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ. ಅಲ್ಲದೇ, ಟ್ರಂಪ್‌ ಆಡಳಿತವು ಬೆಳ್ಳಿಯನ್ನು ಅಪರೂಪದ ಲೋಹ ಖನಿಜಗಳ (rare mineral) ಪಟ್ಟಿಗೆ ಸೇರ್ಪಡೆಗೊಳಿಸಲು ಮುಂದಾಗಿದೆ. ದೇಶದ ಭದ್ರತೆ, ಹಿತಾಸಕ್ತಿ ಕಾಪಾಡುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಟ್ರಂಪ್‌ ಆಡಳಿತ ಹೇಳುತ್ತಿದೆ. ಹೀಗಾಗಿ, ಚೀನಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಅಧಿಕ ಪ್ರಮಾಣದಲ್ಲಿ ಬೆಳ್ಳಿ ಖರೀದಿಸಿ ದಾಸ್ತಾನು ಮಾಡಲು ಮುಂದಾಗಿವೆ. 

ಕೈಗಾರಿಕೆಗಳಲ್ಲಿ ಹೆಚ್ಚಿದ ಬೇಡಿಕೆ

ಕೃತಕ ಬುದ್ಧಿಮತ್ತೆ (ಎಐ), ಸೋಲಾರ್‌ನಂತಹ ನವೀಕರಿಸಬಹುದಾದ ಇಂಧನ, ವಿದ್ಯುತ್‌ ಚಾಲಿತ ವಾಹನಗಳ (ಇವಿ) ತಯಾರಿಕೆ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚಿದೆ. ಇವೆಲ್ಲ ಆಧುನಿಕ ತಂತ್ರಜ್ಞಾನ ಆಧಾರಿತ ಉದ್ಯಮಗಳಾಗಿದ್ದು ,ಇತ್ತೀಚಿನ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬಂದವು. ಹಾಗಾಗಿ, ಬೆಳ್ಳಿ ಲೋಹಕ್ಕೆ ಬೇಡಿಕೆ ಜಾಸ್ತಿಯಾಗಿದೆ. ಸೌರ ವಿದ್ಯುತ್‌ ಕ್ಷೇತ್ರದಲ್ಲಿ ಚೀನಾ ದಾಪುಗಾಲು ಇಡುತ್ತಿದ್ದು, ಅಲ್ಲಿಯೇ ಬೆಳ್ಳಿಗೆ ಹೆಚ್ಚು ಬೇಡಿಕೆ ಇದೆ. ಸೌರ ವಿದ್ಯುತ್‌ ಉತ್ಪಾದನೆ, ಇ.ವಿ ತಯಾರಿಕೆ ಸೇರಿದಂತೆ ಆಧುನಿಕ ತಂತ್ರಜ್ಞಾನ ಆಧಾರಿತ ಉದ್ದಿಮೆಗಳಲ್ಲಿ ಭಾರತವೂ ಗಣನೀಯ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿದ್ದು, ಇವುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳಿಯ ಅಗತ್ಯವಿದೆ.

ಭಾರತದ ಕೈಗಾರಿಗಳು 2021ರಲ್ಲಿ 1,064 ಟನ್‌ ಬೆಳ್ಳಿಗೆ ಬೇಡಿಕೆ ಇಟ್ಟಿದ್ದವು. 2022, 2023 ಮತ್ತು 2024ರಲ್ಲಿ ಕ್ರಮವಾಗಿ 1,325, 1,288 ಮತ್ತು 1,334 ಟನ್‌ಗಳಷ್ಟು ಬೆಳ್ಳಿ ಬಳಸಿದ್ದವು.

ಹೂಡಿಕೆಯತ್ತ ಒಲವು

ಚಿನ್ನ, ಬೆಳ್ಳಿಯಂತಹ ಬೆಲೆಬಾಳುವ ಲೋಹಗಳ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಎಂಬ ಭಾವನೆ ಜನರಲ್ಲಿದೆ. ಹಾಗಾಗಿ, ‌ಭಾರತ ಸೇರಿದಂತೆ ಜಗತ್ತಿನಾದ್ಯಂತ ಚಿನ್ನದ ರೀತಿಯಲ್ಲೇ ಬೆಳ್ಳಿಯ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಎಕ್ಸ್‌ಚೇಂಜ್‌ ಟ್ರೇಡೆಡ್‌ ಪ್ರಾಡಕ್ಟ್ಸ್‌ (ಇಟಿಪಿ) ಎಕ್ಸ್‌ಚೇಂಜ್‌ ಟ್ರೇಡ್‌ ಫಂಡ್‌ಗಳಲ್ಲಿ (ಇಟಿಎಫ್‌) ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಕಳೆದ ತಿಂಗಳು ಬೆಳ್ಳಿ ಇಎಫ್‌ಟಿಯ ಮೇಲೆ ದೇಶದಲ್ಲಿ ₹5,342 ಕೋಟಿಯಷ್ಟು ಹೂಡಿಕೆ ಮಾಡಲಾಗಿದೆ. ಬಂಗಾರವು ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿರುವುದರಿಂದ ಜನರು ಚಿನ್ನದ ಬದಲು ಬೆಳ್ಳಿಯತ್ತ ಮುಖ ಮಾಡಿದ್ದಾರೆ. ಬೆಳ್ಳಿ ಗಟ್ಟಿ, ನಾಣ್ಯಗಳನ್ನು ಹೆಚ್ಚೆಚ್ಚು ಖರೀದಿಸುತ್ತಿದ್ದಾರೆ. ಇದರ ಜೊತೆಗೆ ಬೆಳ್ಳಿ ಆಭರಣ, ವಸ್ತುಗಳ ಖರೀದಿಯನ್ನೂ ಮುಂದುವರಿಸಿದ್ದಾರೆ.

ರೂಪಾಯಿ ಮೌಲ್ಯ ಕುಸಿತ
ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಬಂದಿರುವುದು ಕೂಡ ಬೆಳ್ಳಿ ಧಾರಣೆಯ ಏರಿಕೆಗೆ ಇನ್ನೊಂದು ಕಾರಣ. ಭಾರತವು ತನ್ನ ಬೇಡಿಕೆಯ ಬಹುಪಾಲು ಬೆಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ದುರ್ಬಲ ರೂಪಾಯಿ ಮೌಲ್ಯ, ಆಮದು ಸುಂಕ, ಜಿಎಸ್‌ಟಿ, ಸಾಗಣೆ ವೆಚ್ಚಗಳು ಒಟ್ಟಾರೆ ಆಮದು ವೆಚ್ಚವನ್ನು ಜಾಸ್ತಿಯಾಗುವಂತೆ ಮಾಡುತ್ತಿದೆ.
ಇಳಿಯಲಿದೆಯೇ ಬೆಲೆ?
ಅ. 15ರಂದು ದಾಖಲೆ ಮಟ್ಟಕ್ಕೆ ಏರಿದ್ದ ಬೆಳ್ಳಿ ಧಾರಣೆ, ನಂತರ ಇಳಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಈ ಹಿಂದೆ ಬೆಳ್ಳಿ ಧಾರಣೆ ದಿಢೀರ್‌ ಏರಿಕೆಯಾಗಿ ನಂತರ ಕುಸಿದ ಉದಾಹರಣೆಗಳಿವೆ. ಅದೀಗ ಪುನರಾವರ್ತನೆಯಾಗಲಿದೆಯೇ ಎಂಬ ಕುತೂಹಲವೂ ಉಂಟಾಗಿದೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗದು ಎಂದು ಹೂಡಿಕೆ ತಜ್ಞರು ಹೇಳಿದ್ದಾರೆ. 
ಆಧಾರ: ಪಿಟಿಐ, ಸಿಲ್ವರ್‌ಇನ್‌ಸ್ಟಿಟ್ಯೂಟ್‌. ಒಆರ್‌ಜಿ, ರಾಯಿಟರ್ಸ್‌, ಬ್ಯಾಂಕ್ ಬಜಾರ್.ಕಾಂ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.