ADVERTISEMENT

ಆಳ–ಅಗಲ| ಕ್ರೀಡಾ ಆಡಳಿತ ಮಸೂದೆಯಲ್ಲೇನಿದೆ?

ಕ್ರೀಡಾ ಸಂಸ್ಥೆಗಳಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಗೆ ಒತ್ತು; ಬಿಸಿಸಿಐ ನಿರಂಕುಶಾಧಿಕಾರಕ್ಕೆ ಕುತ್ತು?

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 22:30 IST
Last Updated 23 ಜುಲೈ 2025, 22:30 IST
   
ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯನ್ನು ತರಲು ಮುಂದಾಗಿದ್ದು, ಈ ಸಂಬಂಧ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ–2025 ಅನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಿದೆ. ದೇಶದ ಕ್ರೀಡಾ ರಂಗದಲ್ಲಿ ಇದು ಮಹತ್ವದ ಬದಲಾವಣೆಗಳಿಗೆ ಕಾರಣವಾಗಲಿದೆ; ಮುಖ್ಯವಾಗಿ, ಕ್ರೀಡಾ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಲಿದೆ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯನ್ನು ತರಲು ಮುಂದಾಗಿದ್ದು, ಈ ಸಂಬಂಧ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ–2025 ಅನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಿದೆ. ದೇಶದ ಕ್ರೀಡಾ ರಂಗದಲ್ಲಿ ಇದು ಮಹತ್ವದ ಬದಲಾವಣೆಗಳಿಗೆ ಕಾರಣವಾಗಲಿದೆ; ಮುಖ್ಯವಾಗಿ, ಕ್ರೀಡಾ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಲಿದೆ ಎನ್ನಲಾಗುತ್ತಿದೆ. ಪ್ರಸ್ತುತ ದೇಶದಲ್ಲಿರುವ 55ಕ್ಕೂ ಹೆಚ್ಚು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ (ಎನ್‌ಎಸ್‌ಎಫ್‌) ಮಾನ್ಯತೆ, ಉಸ್ತುವಾರಿಗಾಗಿ ರಾಷ್ಟ್ರೀಯ ಕ್ರೀಡಾ ಮಂಡಳಿ ಸ್ಥಾಪಿಸುವುದು, ಕ್ರೀಡಾಸಂಸ್ಥೆಗಳ ಪದಾಧಿಕಾರಿಗಳ ವಯಸ್ಸು ಮತ್ತು ಅವಧಿಯ ಮಿತಿ ಬದಲಾವಣೆ, ವ್ಯಾಜ್ಯಗಳ ಪರಿಹಾರಕ್ಕಾಗಿ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ ಸ್ಥಾಪನೆ, ಎಲ್ಲ ಕ್ರೀಡಾ ಸಂಸ್ಥೆಗಳನ್ನು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ತರುವುದು ಸೇರಿದಂತೆ ಹಲವು ಅಂಶಗಳು ಮಸೂದೆಯಲ್ಲಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆ ಎಂದೇ ಹೆಸರಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯೂ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದು, ಅದಕ್ಕೆ ಮೂಗುದಾರ ಹಾಕುವ ಯತ್ನ ಇದಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. 2036ರ ಒಲಿಂಪಿಕ್ಸ್‌ನ ಆತಿಥ್ಯ ವಹಿಸಲು ಭಾರತವು ಬಿಡ್ ಸಲ್ಲಿಸುವ ಉದ್ದೇಶ ಹೊಂದಿದೆ. ಕಾಯ್ದೆ ತರಲು ಮುಂದಾಗಿರುವುದಕ್ಕೆ ಇದು ಕೂಡ ಒಂದು ಕಾರಣ ಎನ್ನಲಾಗುತ್ತಿದೆ. ಮಸೂದೆಯಲ್ಲಿನ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ...

ರಾಷ್ಟ್ರೀಯ ಕ್ರೀಡಾ ಮಂಡಳಿ ಸ್ಥಾಪನೆ

ದೇಶದಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳ ನಿರ್ವಹಣೆ, ನಿಯಂತ್ರಣ ಮತ್ತು ಮೇಲ್ವಿಚಾರಣೆಗಾಗಿ ಹೊಸದಾಗಿ ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಬಿ) ಎಂಬ ಸಂಸ್ಥೆಯನ್ನು ಸ್ಥಾಪಿಸುವುದು ಮಸೂದೆಯ ಅತ್ಯಂತ ‍ಪ್ರಮುಖ ಅಂಶ. ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್‌ಎಸ್‌ಎಫ್‌) ಮಾನ್ಯತೆ ನೀಡುವ, ಇಲ್ಲವೇ ಅಮಾನತಿನಲ್ಲಿಡುವ ಅಧಿಕಾರವನ್ನು ಇದು ಹೊಂದಿರಲಿದೆ. ಜತೆಗೆ, ಆಟಗಾರರ ಒಳಿತಿಗಾಗಿ ಅಂತರರಾಷ್ಟ್ರೀಯ ಕ್ರೀಡಾ ಒಕ್ಕೂಟ ಮತ್ತು ಸಂಸ್ಥೆಗಳೊಂದಿಗೆ ಸಹಭಾಗಿಯಾಗುವ ಅಧಿಕಾರವೂ ಅದಕ್ಕೆ ಇರಲಿದೆ. ಸಂಪುಟ ಕಾರ್ಯದರ್ಶಿ / ಕ್ರೀಡಾ ಕಾರ್ಯದರ್ಶಿ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಶಿಫಾರಸಿನ ಆಧಾರದಲ್ಲಿ ಕೇಂದ್ರವು ರಾಷ್ಟ್ರೀಯ ಕ್ರೀಡಾ ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಲಿದೆ. 

ಯಾವುದೇ ಕ್ರೀಡಾ ಸಂಸ್ಥೆಯು ತನ್ನ ಕಾರ್ಯಕಾರಿ ಸಮಿತಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವಲ್ಲಿ ವಿಫಲವಾದರೆ ಅಥವಾ ಚುನಾವಣಾ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದರೆ, ಅದರ ಆಡಳಿತ ಮಂಡಳಿಯನ್ನು ಪುನರ್ ರಚಿಸುವ ಅಧಿಕಾರವೂ ಎನ್‌ಎಸ್‌ಬಿಗೆ ಇರಲಿದೆ. ಜತೆಗೆ, ಕ್ರೀಡಾ ಸಂಸ್ಥೆಯು ತನ್ನ ವಾರ್ಷಿಕ ಲೆಕ್ಕಪತ್ರವನ್ನು ಪ್ರಕಟಿಸಲು ವಿಫಲವಾದರೆ ಅಥವಾ ಹಣಕಾಸು ಅವ್ಯವಹಾರ ನಡೆಸಿದ್ದರೆ, ಅದನ್ನು ಅಮಾನತಿನಲ್ಲಿಡಬಹುದಾಗಿದೆ. ಆದರೆ, ಹಾಗೆ ಮಾಡುವ ಮುನ್ನ ಜಾಗತಿಕ ಕ್ರೀಡಾ ಸಂಸ್ಥೆಯನ್ನು ಸಂಪರ್ಕಿಸಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಇದರಿಂದ ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಮಾತ್ರ ಕೇಂದ್ರ ಸರ್ಕಾರದ ಧನಸಹಾಯ ಪಡೆಯಲು ಅರ್ಹವಾಗಿರುತ್ತವೆ.

ADVERTISEMENT

‌ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ 

ರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ 350ಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಅವು ಕ್ರೀಡಾ ಸಂಸ್ಥೆಗಳ ಮತ್ತು ಕ್ರೀಡಾಪಟುಗಳ ಸಾಧನೆಯ ಮೇಲೆ ಪರಿಣಾಮ ಬೀರುತ್ತಿವೆ. ಕ್ರೀಡೆಗಳಿಗೆ ಸಂಬಂಧಿಸಿದ ದೂರು, ಕುಂದುಕೊರತೆ, ವಿವಾದ, ಬಿಕ್ಕಟ್ಟುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದಕ್ಕಾಗಿ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (ಎನ್‌ಎಸ್‌ಟಿ) ಸ್ಥಾಪನೆಗೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಒಬ್ಬ ಅಧ್ಯಕ್ಷ ಮತ್ತು ಇಬ್ಬರು ಸದಸ್ಯರು ಇರುತ್ತಾರೆ. ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅದರ ಮುಖ್ಯಸ್ಥರಾಗಿರಲಿದ್ದಾರೆ. ಅವರನ್ನು ನೇಮಕ ಮಾಡುವ ಅಧಿಕಾರವೂ ಕೇಂದ್ರದ ಕೈಯಲ್ಲಿ ಇರಲಿದೆ.

ಕೇಂದ್ರದ ಇಲಾಖಾ ಕಾರ್ಯದರ್ಶಿ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅವರನ್ನೊಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನ ಆಧಾರದಲ್ಲಿ ಕೇಂದ್ರವು ನ್ಯಾಯಮಂಡಳಿಗೆ ನೇಮಕ ಮಾಡಲಿದೆ. ನಿಯಮಗಳ ಉಲ್ಲಂಘನೆ ನಡೆದರೆ ನ್ಯಾಯಮಂಡಳಿ ಸದಸ್ಯರನ್ನು ವಜಾಗೊಳಿಸುವ ಅಧಿಕಾರವೂ ಕೇಂದ್ರ ಸರ್ಕಾರದ ಕೈಯಲ್ಲಿ ಇರುತ್ತದೆ. ನ್ಯಾಯಮಂಡಳಿಯ ತೀರ್ಪುಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಬಹುದಾಗಿದೆ. ನ್ಯಾಯಮಂಡಳಿ ತೀರ್ಪು ನೀಡಿದ ನಂತರ 30 ದಿನಗಳ ಒಳಗೆ ಮಾತ್ರ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಅದು ಮೀರಿದರೆ ಮೇಲ್ಮನವಿ ಸಲ್ಲಿಕೆಗೂ ಸುಪ್ರೀಂ ಕೋರ್ಟ್‌ನ ಅನುಮತಿ ಬೇಕಾಗುತ್ತದೆ.

ಕ್ರೀಡಾ ಚುನಾವಣಾ ಸಮಿತಿ

ಎನ್‌ಎಸ್‌ಬಿ ಶಿಫಾರಸಿನ ಆಧಾರದಲ್ಲಿ ರಾಷ್ಟ್ರೀಯ ಕ್ರೀಡಾ ಚುನಾವಣಾ ಸಮಿತಿಯನ್ನು ಕೇಂದ್ರ ಸರ್ಕಾರವೇ ರಚಿಸಲಿದೆ. ಕೇಂದ್ರ ಚುನಾವಣಾ ಆಯೋಗದ ಸದಸ್ಯರು ಅಥವಾ ರಾಜ್ಯ ಚುನಾವಣಾ ಆಯೋಗಗಳ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ‘ಅನುಭವಿ’ಗಳನ್ನು ಸಮಿತಿಗೆ ನೇಮಕ ಮಾಡಲಾಗುತ್ತದೆ. ಕ್ರೀಡಾ ಸಂಸ್ಥೆಗಳ ಕಾರ್ಯಕಾರಿ ಸಮಿತಿ ಮತ್ತು ಆಟಗಾರರ ಸಮಿತಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಇದರ ಜವಾಬ್ದಾರಿಯಾಗಿದೆ. ಮಸೂದೆಯ ಮತ್ತೊಂದು ಮುಖ್ಯ ಅಂಶವೆಂದರೆ, ಮಾನ್ಯತೆ ಪಡೆದಿರುವ ಎಲ್ಲ ಕ್ರೀಡಾ ಸಂಸ್ಥೆಗಳೂ ಮಾಹಿತಿ ಹಕ್ಕು ಕಾಯ್ದೆ–2005ರ (ಆರ್‌ಟಿಐ) ಅಡಿ ಬರಲಿವೆ. 

ವಯಸ್ಸು ಮತ್ತು ಅವಧಿಯ ಮಿತಿ

ಕ್ರೀಡಾ ಸಂಸ್ಥೆಗಳ ಅಧ್ಯಕ್ಷ, ಮಹಾ ಪ್ರಧಾನ ಕಾರ್ಯದರ್ಶಿ, ಖಜಾಂಚಿ ಹುದ್ದೆಗಳ ಅಧಿಕಾರವನ್ನು ಸತತ ಮೂರು ಅವಧಿಗೆ (12 ವರ್ಷಗಳವರೆಗೆ) ಮಿತಿಗೊಳಿಸಲಾಗಿದೆ. ಪ್ರಸ್ತುತ, ಸಂಸ್ಥೆಗಳ ಪದಾಧಿಕಾರಿಗಳ ಗರಿಷ್ಠ ವಯಸ್ಸನ್ನು 70ಕ್ಕೆ ಮಿತಿಗೊಳಿಸಲಾಗಿದೆ. ಅಂತರರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಅನುಮೋದನೆಯೊಂದಿಗೆ ಅದನ್ನು 75 ವರ್ಷಕ್ಕೆ ವಿಸ್ತರಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕ್ರೀಡಾ ಸಂಸ್ಥೆಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ಅವುಗಳ ಕಾರ್ಯಕಾರಿ ಮಂಡಳಿಯ ಸದಸ್ಯ ಬಲವನ್ನು 15ಕ್ಕೆ ನಿಗದಿಪಡಿಸಲಾಗಿದೆ. ಈ ಪೈಕಿ ಇಬ್ಬರು ಅತ್ಯುತ್ತಮ ಕ್ರೀಡಾಪಟುಗಳು, ನಾಲ್ವರು ಮಹಿಳೆಯರು ಇರುವುದು ಕಡ್ಡಾಯವಾಗಿದೆ.    

ಅಂತರರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತೆ ಕ್ರೀಡಾ ಸಂಸ್ಥೆಗಳಲ್ಲಿ ಲಿಂಗ ಸಮಾನತೆಗೆ ಒತ್ತು ನೀಡಲಾಗಿದ್ದು, ಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿದ ನೀತಿ ನಿರ್ಧಾರ ಕೈಗೊಳ್ಳುವ ವಿಷಯದಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಮನ್ನಣೆ ನೀಡುವುದು ಮಸೂದೆಯ ಉದ್ದೇಶವಾಗಿದೆ. 

ಕೇಂದ್ರದ ವಿವೇಚನಾ ಅಧಿಕಾರ

ಯಾವುದೇ ಕ್ರೀಡಾ ಸಂಸ್ಥೆಯು ‘ಭಾರತ’, ‘ಭಾರತೀಯ’, ‘ರಾಷ್ಟ್ರೀಯ’ ಎನ್ನುವ ಪದಗಳನ್ನು ಅಥವಾ ದೇಶಕ್ಕೆ ಸಂಬಂಧಿಸಿದ ಚಿಹ್ನೆಗಳನ್ನು ಬಳಸಬೇಕು ಎಂದು ಉದ್ದೇಶಿಸಿದರೆ, ಅದಕ್ಕೆ ಕೇಂದ್ರ ಸರ್ಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಜತೆಗೆ, ಕೇಂದ್ರ ಸರ್ಕಾರವು ಅಗತ್ಯ ಬಿದ್ದರೆ, ‘ಸಾರ್ವಜನಿಕ ಹಿತಾಸಕ್ತಿ’ ಇದೆ ಎನಿಸಿದರೆ, ಮಸೂದೆಯಲ್ಲಿರುವ ಯಾವುದೇ ನಿಯಮದಿಂದ ಕ್ರೀಡಾ ಸಂಸ್ಥೆಗಳಿಗೆ ವಿನಾಯಿತಿ ನೀಡಬಹುದಾಗಿದೆ. 

ಕೇಂದ್ರವು ರಾಷ್ಟ್ರೀಯ ಕ್ರೀಡಾ ಮಂಡಳಿಗೆ, ಯಾವುದೇ ಘಟಕಕ್ಕೆ ಅಥವಾ ವ್ಯಕ್ತಿಗೆ ಉತ್ತಮ ಆಡಳಿತ ನೀಡುವ ದೃಷ್ಟಿಯಿಂದ ನಿರ್ದೇಶನ ನೀಡುವ ಅಧಿಕಾರ ಹೊಂದಿರುತ್ತದೆ. ಹಾಗೆಯೇ, ಅಪರೂಪದ ಸಂದರ್ಭಗಳಲ್ಲಿ, ದೇಶದ ಹಿತಾಸಕ್ತಿಗನುಗುಣವಾಗಿ ಯಾವುದೇ ಕ್ರೀಡೆಗೆ ಸಂಬಂಧಿಸಿದ ರಾಷ್ಟ್ರೀಯ ತಂಡದ ಭಾಗವಹಿಸುವಿಕೆಯನ್ನು ನಿಯಂತ್ರಿಸುವ ಅಧಿಕಾರವನ್ನೂ ಹೊಂದಿರುತ್ತದೆ.

ಬಿಸಿಸಿಐಗೆ ಮೂಗುದಾರ?

ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಈ ಮಸೂದೆಯ ವ್ಯಾಪ್ತಿಗೆ ಬರಲಿದೆ. ಕಾಯ್ದೆ ಜಾರಿಗೆ ಬಂದ ನಂತರ ಬಿಸಿಸಿಐ ಕೂಡ ಇತರ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಂತೆ ಸರ್ಕಾರದ ನಿಯಂತ್ರಣಕ್ಕೆ ಒಳಪಡಲಿದೆ. 

‘ಬಿಸಿಸಿಐ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಪಡೆಯುತ್ತಿಲ್ಲ. ಹಾಗಿದ್ದರೂ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದ ನಂತರ ಎಲ್ಲ ನಿಯಮಗಳು ಬಿಸಿಸಿಐಗೂ ಅನ್ವಯವಾಗುತ್ತದೆ. ಸಂಸತ್‌ ರೂಪಿಸಿದ ಕಾನೂನನ್ನು ಬಿಸಿಸಿಐ ಆಡಳಿತ ಪಾಲಿಸಲೇ ಬೇಕಾಗುತ್ತದೆ’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಕಾಯ್ದೆಯ ವ್ಯಾಪ್ತಿಯಲ್ಲಿ ಬಂದರೂ ಬಿಸಿಸಿಐನ ಸ್ವಾಯತ್ತೆಗೆ ಧಕ್ಕೆಯಾಗುವುದಿಲ್ಲ. ದೇಶದ ಇತರ ಎಲ್ಲ ಕ್ರೀಡಾ ಒಕ್ಕೂಟಗಳಂತೆ ಕ್ರಿಕೆಟ್‌ ಮಂಡಳಿ ಕೂಡ ಕಾರ್ಯನಿರ್ವಹಿಸಬಹುದು. ಆದರೆ, ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ರಾಷ್ಟ್ರೀಯ ಕ್ರೀಡಾ ಮಂಡಳಿಯ ಅಧೀನದಲ್ಲಿ ಅದು ಬರಲಿದೆ. ಬಿಸಿಸಿಐಯು ಈ ಮಂಡಳಿಯಿಂದ ಮಾನ್ಯತೆಯನ್ನೂ ಪಡೆಯಬೇಕಾಗುತ್ತದೆ. ಜತೆಗೆ, ಆಡಳಿತ ಮಂಡಳಿಯ ಚುನಾವಣೆ, ಆಯ್ಕೆ, ಕ್ರೀಡಾಪಟುಗಳಿಗೆ ಸಂಬಂಧಿಸಿದ ಎಲ್ಲ ದೂರುಗಳು, ವಿವಾದಗಳನ್ನು ಕಾಯ್ದೆಯ ಅಡಿಯಲ್ಲಿ ಸ್ಥಾಪನೆಯಾಗಲಿರುವ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿಯ ಮೂಲಕವೇ ಬಗೆಹರಿಸಿಕೊಳ್ಳಬೇಕಾಗುತ್ತದೆ. 

ಹಿಂದಿನಿಂದಲೂ ವಿರೋಧ: ₹18,760 ಕೋಟಿಯಷ್ಟು ಮೌಲ್ಯ ಹೊಂದಿರುವ ಬಿಸಿಸಿಐ, 1975ರ ತಮಿಳುನಾಡು ಸಹಕಾರ ಸಂಘಗಳ ನೋಂದಣಿ ಕಾಯ್ದೆಯ ಅಡಿಯಲ್ಲಿ ನೋಂದಣಿಯಾಗಿರುವ ಸಂಸ್ಥೆ. ಅದರ ಆಡಳಿತ ದಲ್ಲಿ ಸಾಮಾನ್ಯವಾಗಿ ಪ್ರಭಾವಿ ರಾಜಕಾರಣಿಗಳು, ಸಂಸದರು, ಆಡಳಿತ ಪಕ್ಷಗಳ ಜೊತೆ ಅಥವಾ ಆಡಳಿತದಲ್ಲಿರುವವರ ಜೊತೆ ಗುರುತಿಸಿಕೊಂಡವರೇ ಇರುತ್ತಾರೆ. 

ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ (ಎನ್‌ಎಸ್‌ಎಫ್‌) ವ್ಯಾಪ್ತಿಗೆ ಬಿಸಿಸಿಐ ಅನ್ನು ತರುವ ಪ್ರಯತ್ನ ಹಿಂದೆಯೂ ನಡೆದಿತ್ತು. ಆದರೆ, ದೇಶದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಕ್ರೀಡಾ ಸಚಿವಾಲಯದ ಅನುದಾನವನ್ನು ತಾನು ಅವಲಂಬಿಸಿಲ್ಲ ಎಂಬ ಕಾರಣವನ್ನು ನೀಡಿ, ಈ ಪ್ರಸ್ತಾವವನ್ನು ಬಿಸಿಸಿಐ ವಿರೋಧಿಸುತ್ತಾ ಬಂದಿತ್ತು. 

ಇದೇ ರೀತಿ, ಮಾಹಿತಿ ಹಕ್ಕು ಕಾಯ್ದೆಯ  (ಆರ್‌ಟಿಐ) ಅಡಿಯಲ್ಲಿ ಸಂಸ್ಥೆಯನ್ನು ತರುವುದನ್ನೂ ಅದು ವಿರೋಧಿಸುತ್ತಾ ಬಂದಿದೆ. ಬಿಸಿಸಿಐನ ಆಡಳಿತ ನಿರ್ವಹಣೆ ಮತ್ತು ಅದು ಅಳವಡಿಸಿಕೊಂಡಿರುವ ನಿಯಮಗಳಲ್ಲಿ ಆಗಬೇಕಾಗಿರುವ ಬದಲಾವಣೆಗಳ ಬಗ್ಗೆ ಸಲಹೆ ನೀಡುವುದಕ್ಕಾಗಿ 2015ರ ಜನವರಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ.ಲೋಧಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಹಲವು ಸುಧಾರಣೆಗಳ ಬಗ್ಗೆ ಶಿಫಾರಸು ಮಾಡಿದ್ದ ಸಮಿತಿಯು ಬಿಸಿಸಿಐ ಅನ್ನು ಆರ್‌ಟಿಐ ವ್ಯಾಪ್ತಿಯಲ್ಲಿ ತರಬೇಕು ಎಂದೂ ಹೇಳಿತ್ತು. ಆದರೆ, ಬಿಸಿಸಿಐ ಆಡಳಿತ ಇದನ್ನು ವಿರೋಧಿಸಿತ್ತು. ಇದಕ್ಕಾಗಿ ಸುಪ್ರೀಂ ಕೋರ್ಟ್‌ ಬಿಸಿಸಿಐ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. 2018ರಲ್ಲಿ ಕಾನೂನು ಆಯೋಗ ಕೂಡ ಬಿಸಿಸಿಐಯನ್ನು ಆರ್‌ಟಿಐ ಅಡಿಯಲ್ಲಿ ತರಬೇಕು ಎಂದು ವರದಿ ನೀಡಿತ್ತು. ಹಾಗಿದ್ದರೂ ಅದು ಈವರೆಗೂ ಈ ಕಾಯ್ದೆಯ ಅಡಿಯಲ್ಲಿ ಬಂದಿಲ್ಲ. ಈಗ ಮಂಡಿಸಲಾಗಿರುವ ಕ್ರೀಡಾ ಆಡಳಿತ ಮಸೂದೆಯು ಎಲ್ಲ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳನ್ನೂ ಆರ್‌ಟಿಐ ವ್ಯಾಪ್ತಿಗೆ ತರುವ ಬಗ್ಗೆ ಪ್ರಸ್ತಾಪಿಸಿದೆ.  

ಎಚ್ಚರಿಕೆಯ ಪ್ರತಿಕ್ರಿಯೆ

ತನ್ನ ಕಾರ್ಯಚಟುವಟಿಕೆಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಇಷ್ಟಪಡದ ಬಿಸಿಸಿಐ, ಈ ಮಸೂದೆಯ ಬಗ್ಗೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದೆ. 

ಮಸೂದೆ ಮಂಡನೆಯ ಬಳಿಕ ಸಂಸತ್ತಿನ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಉಪಾಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ರಾಜೀವ್‌ ಶುಕ್ಲಾ, ‘ನಾವು ಈ ಮಸೂದೆ ಹಾಗೂ ಅದರ ನಿಯಮಗಳನ್ನು ಅಧ್ಯಯನ ಮಾಡಲಿದ್ದೇವೆ. ಮಂಡಳಿಯ ಅತ್ಯುನ್ನತ ಸಮಿತಿಯ ಮುಂದೆ ಈ ವಿಚಾರವನ್ನು ಇಡುವ ಬಗ್ಗೆಯೂ ಚರ್ಚಿಸಲಿದ್ದೇವೆ. ನಂತರ ಏನು ಮಾಡಬಹುದು ಎಂದು ಯೋಚಿಸುತ್ತೇವೆ. ಸರ್ಕಾರದೊಂದಿಗೂ ನಾವು ಮಾತುಕತೆ ನಡೆಸಲಿದ್ದೇವೆ’ ಎಂದು ಹೇಳಿದ್ದಾರೆ. 

ಕ್ರಿಕೆಟ್‌ ಈಗ ಒಲಿಂಪಿಕ್ ಕ್ರೀಡಾಕೂಟದ ಭಾಗ. 2028ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕೂಡ ಭಾಗವಾಗಲಿದ್ದು, ಭಾರತ ತಂಡ ಟಿ20 ಪಂದ್ಯಗಳನ್ನು ಆಡಲಿದೆ.

ಆಧಾರ: ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.