ಕಾಲ್ತುಳಿತವು ದೇಶದಲ್ಲಿ ಸಾಮಾನ್ಯ ಎನ್ನುವಂತಾಗಿದೆ. ತಮ್ಮ ಅಭಿಮಾನದ ಕ್ರೀಡಾ ಪಟುಗಳು, ಸಿನಿಮಾ ತಾರೆಯರನ್ನು ನೋಡಲು, ರಾಜಕೀಯ ಸಮಾವೇಶಗಳಲ್ಲಿ ಭಾಗವಹಿಸಲು, ಆಧ್ಯಾತ್ಮಿಕ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದವರು, ದೇವಾಲಯಗಳಿಗೆ ತೆರಳಿದವರು ಕಾಲ್ತುಳಿತಕ್ಕೆ ಸಿಲುಕಿರುವುದು ದೇಶದಲ್ಲಿ ನಡೆದಿವೆ. ಕೊನೆಗೆ, ಹಬ್ಬದ ಸಂದರ್ಭದ ದಟ್ಟಣೆಯಿಂದಾಗಿ ಊರಿಗೆ ಹೋಗಲು ರೈಲು ನಿಲ್ದಾಣಕ್ಕೆ ಬಂದವರು ಕೂಡ ನೂಕುನುಗ್ಗಲಿನಿಂದ ಸಾವಿಗೀಡಾದದ್ದು ಇದೆ.
ಜಗತ್ತಿನ ಹಲವೆಡೆ ಕಾಲ್ತುಳಿತಗಳು ನಡೆದಿವೆ, ನಡೆಯುತ್ತಿವೆ. ಆದರೆ, ಭಾರತದಲ್ಲಿ ಬೃಹತ್ ಸಮಾವೇಶಗಳು ಹೆಚ್ಚಾಗಿ ನಡೆಯುವುದರಿಂದ ಮತ್ತು ಅವು ಅವ್ಯವಸ್ಥಿತವಾಗಿರುವುದರಿಂದ ಸಹಜವಾಗಿಯೇ ಸಾವು–ನೋವಿನ ಪ್ರಮಾಣವೂ ಹೆಚ್ಚಿರುತ್ತದೆ.
ಸಿದ್ಧತೆಯ ಕೊರತೆ: ಬಹುತೇಕ ಎಲ್ಲ ಕಾಲ್ತುಳಿತ ಘಟನೆಗಳಿಗೂ ಸಿದ್ಧತೆಯ ಕೊರತೆ, ಪೊಲೀಸರ ವೈಫಲ್ಯವೇ ಮುಖ್ಯ ಕಾರಣವಾಗಿರುತ್ತವೆ. ಜತೆಗೆ, ಬೃಹತ್ ಸಂಖ್ಯೆಯಲ್ಲಿ ಜನ ಸೇರಿದಾಗ, ಕೆಲವರ ಆತುರ, ಆತಂಕ, ಆಸೆಯಿಂದ ಘಟಿಸುವ ಒಂದು ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಕರೂರಿನಲ್ಲಿ ನಡೆದ ಘಟನೆಯನ್ನೇ ನೋಡುವುದಾದರೆ, ರ್‍ಯಾಲಿಯಲ್ಲಿ ಒಂದಷ್ಟು ಜನ ತಮ್ಮ ನೆಚ್ಚಿನ ನಟನನ್ನು ನೋಡಲು ಸಮೀಪದ ಮರ ಏರಿ, ಆಯ ತಪ್ಪಿ ಅಲ್ಲಿಂದ ಕೆಳಗಿರುವ ಜನರ ಮೇಲೆ ಬಿದ್ದದ್ದು ನೂಕುನುಗ್ಗಲು ಉಂಟಾಗಲು ಕಾರಣ ಎನ್ನಲಾಗುತ್ತಿದೆ.
ಇದೇ ಜೂನ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ್ದ ಘಟನೆಗೆ ಪ್ರಾಯೋಜಕರು–ಸರ್ಕಾರದ ನಡುವಿನ ಸಮನ್ವಯದ ಕೊರತೆ, ಕಡಿಮೆ ಸಂಖ್ಯೆಯಲ್ಲಿ ಇದ್ದ ಪೊಲೀಸರು, ಆಟಗಾರರ ಪರೇಡ್ ಕುರಿತ ಗೊಂದಲ, ಉಚಿತ ಪಾಸ್‌ಗಳ ಬಗ್ಗೆ ಹರಡಿದ್ದ ವದಂತಿಗಳು... ಹೀಗೆ ಹಲವು ಕಾರಣ ಎನ್ನಲಾಗಿತ್ತು. ಹೈದರಾಬಾದ್‌ನಲ್ಲಿ ‘ಪುಷ್ಪ–2’ ಚಿತ್ರದ ಪ್ರದರ್ಶನದ ವೇಳೆ ನಾಯಕ ನಟ ಅಲ್ಲು ಅರ್ಜುನ್ ಮತ್ತು ಇತರರು ಥಿಯೇಟರ್‌ಗೆ ಭೇಟಿ ನೀಡಿದ್ದರಿಂದ ನೂಕುನುಗ್ಗಲು ಉಂಟಾಗಿ ಒಬ್ಬ ಮಹಿಳೆ ಮೃತಪಟ್ಟಿದ್ದರು. ಪೊಲೀಸರಿಗೆ ಪೂರ್ವಭಾವಿಯಾಗಿ ಮಾಹಿತಿ ನೀಡದೇ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದೇ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದರು.
ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಅಲ್ಲಿನ ಅವ್ಯವಸ್ಥೆ, ಪೊಲೀಸ್ ವೈಫಲ್ಯ ಕಾರಣವಾಗಿತ್ತು. ದೇವರ ದರ್ಶನಕ್ಕೆ ಕಾದಿದ್ದವರು, ಟಿಕೆಟ್ ಪಡೆಯಲು ಏಕಾಏಕಿ ಮುಗಿಬಿದ್ದಾಗ ಅವರನ್ನು ನಿಭಾಯಿಸುವ ಸೂಕ್ತ ವ್ಯವಸ್ಥೆ ಇಲ್ಲದೇ ಕಾಲ್ತುಳಿತ ಉಂಟಾಗಿ ಹಲವು ಭಕ್ತರು ಮೃತಪಟ್ಟರು. ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಕಳೆದ ವರ್ಷ ಭೋಲೆ ಬಾಬಾ ಅವರ ‘ಸತ್ಸಂಗ’ದಲ್ಲಿಯೂ ಇಂಥದ್ದೇ ಅವಘಡ ಸಂಭವಿಸಿತ್ತು. ಗರಿಷ್ಠ 80 ಸಾವಿರ ಮಂದಿ ಸೇರಬಹುದಾಗಿದ್ದ ಕಾರ್ಯಕ್ರಮದಲ್ಲಿ 2.5 ಲಕ್ಷ ಮಂದಿ ಸೇರಿದ್ದು, ಅಷ್ಟು ದೊಡ್ಡ ಜನಸಂಖ್ಯೆಯನ್ನು ನಿರ್ವಹಿಸುವ ವ್ಯವಸ್ಥೆ ಇಲ್ಲದಿದ್ದುದು ದುರ್ಘಟನೆಗೆ ಕಾರಣವಾಗಿತ್ತು. ಇವುಗಳ ಜತೆಗೆ, ಧಾರ್ಮಿಕ ಮುಖಂಡರು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ರಾಜಕಾರಣಿಗಳ ಬಗ್ಗೆ ಜನರಲ್ಲಿ ಇರುವ ಹುಚ್ಚು ಅಭಿಮಾನವೂ ಅವಘಡಗಳಿಗೆ ಕಾರಣವಾಗುತ್ತಿದೆ.
ಅವಘಡಗಳ ಪುನರಾವರ್ತನೆ: ಜಗತ್ತಿನ ವಿವಿಧ ದೇಶಗಳಲ್ಲಿ ಕಾಲ್ತುಳಿತ ಪ್ರಕರಣಗಳು ನಡೆದಿವೆ. ಹೆಚ್ಚಿನ ದೇಶಗಳಲ್ಲಿ ಅವು ಪುನರಾವರ್ತನೆಯಾಗದಂತೆ ಅಲ್ಲಿನ ಸರ್ಕಾರಗಳು ಕ್ರಮ ವಹಿಸುತ್ತವೆ. ಆದರೆ, ಭಾರತದ ಸಂದರ್ಭದಲ್ಲಿ ಈ ದಿಸೆಯಲ್ಲಿ ಹೆಚ್ಚಿನ ಪ್ರಯತ್ನಗಳು ನಡೆದಿಲ್ಲ. ನಿಯಮ ಪಾಲನೆ ಮಾಡದೇ ಹೆಚ್ಚು ಜನರನ್ನು ಸೇರಿಸುವುದು, ಸಿದ್ಧತೆ ನಡೆಸದೇ ಕಾರ್ಯಕ್ರಮಗಳನ್ನು ಆಯೋಜಿಸುವುದು ನಡೆಯುತ್ತಲೇ ಇದೆ. ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಪದೇ ಪದೇ ಕಾಲ್ತುಳಿತ ಸಂಭವಿಸುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂದರೆ, ಉತ್ತರ ಪ್ರದೇಶದಲ್ಲಿ ನಡೆಯುವ ಕುಂಭಮೇಳ. ಆದರೂ ಸರ್ಕಾರಗಳು ಎಚ್ಚೆತ್ತುಕೊಂಡಿಲ್ಲ. ಜನಸಂದಣಿಯನ್ನು ನಿಯಂತ್ರಿಸುವ ಸೂಕ್ತ ವ್ಯವಸ್ಥೆಯನ್ನು ರೂಪಿಸಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನ ಕಾಲ್ತುಳಿತದ ನಂತರ ಕರ್ನಾಟಕ ಸರ್ಕಾರವು ಸಾರ್ವಜನಿಕ ಸಭೆಗಳಲ್ಲಿ ಜನಜಂಗುಳಿ ನಿಯಂತ್ರಿಸಲು ‘ಕರ್ನಾಟಕ ಜನಸಂದಣೆ ನಿಯಂತ್ರಣ ಮಸೂದೆ–2025’ ಜಾರಿಗೆ ತರಲು ಮುಂದಾಗಿರುವುದು ಉಲ್ಲೇಖಾರ್ಹ.
ಜನಜಂಗುಳಿಯ ನಿಯಂತ್ರಣಕ್ಕೆ ಎಲ್ಲ ಪ್ರದೇಶ, ಎಲ್ಲ ಕಾಲಕ್ಕೂ ಸಲ್ಲುವಂಥ ಒಂದು ನಿಯಮ ಎನ್ನುವುದಿಲ್ಲ. ಸ್ಥಳ, ಕಾರ್ಯಕ್ರಮ/ಸಮಾವೇಶ, ಸಮಯ, ಅಲ್ಲಿ ಎಂಥ ಜನ ಸೇರುತ್ತಾರೆ ಇತ್ಯಾದಿ ಅಂಶಗಳನ್ನು ಆಧರಿಸಿ ವ್ಯವಸ್ಥೆ ಕೈಗೊಳ್ಳಬೇಕಾಗುತ್ತದೆ. ಸೂಕ್ತ ನಿಯಮಾವಳಿ ರೂಪಿಸುವುದು ಮತ್ತು ಅಸ್ತಿತ್ವದಲ್ಲಿರುವ ನಿಯಮಾವಳಿಯನ್ನು ಪಾಲಿಸುವಂತೆ ಕ್ರಮ ಜರುಗಿಸದ ಹೊರತು ಸಾವುಗಳನ್ನು ತಡೆಯಲಾಗದು.
ಸಾವಿರಾರು ಸಾವುಗಳು
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) 1996ರಿಂದಲೂ (2022ರವರೆಗೆ) ಕಾಲ್ತುಳಿತ ಪ್ರಕರಣಗಳ ದತ್ತಾಂಶವನ್ನು ಸಂಗ್ರಹಿಸಿದೆ. ದೇಶದಲ್ಲಿ ಮೂರು ದಶಕಗಳಲ್ಲಿ ಸುಮಾರು ನಾಲ್ಕು ಸಾವಿರ ಕಾಲ್ತುಳಿತ ಘಟನೆಗಳು ನಡೆದಿವೆ ಎಂದು ಅದು ಹೇಳಿದೆ. ಕಳೆದ, ಎರಡು ದಶಕಗಳಲ್ಲಿ (2000–2022) 3,074 ಮಂದಿ ನೂಕುನುಗ್ಗಲಿನಲ್ಲಿ ಸಾವಿಗೀಡಾಗಿದ್ದಾರೆ ಎಂದು ಎನ್‌ಸಿಆರ್‌ಬಿ ದತ್ತಾಂಶ ಹೇಳುತ್ತದೆ.
ಮಾರ್ಗಸೂಚಿ ಹೇಳುವುದೇನು?
ದೊಡ್ಡ ಪ್ರಮಾಣದಲ್ಲಿ ಜನರು ಸೇರುವ ಸ್ಥಳಗಳಲ್ಲಿ ಕಾಲ್ತುಳಿತದಂತಹ ದುರ್ಘಟನೆಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಎಂಎ) 2014ರಲ್ಲಿಯೇ ಮಾರ್ಗಸೂಚಿಯನ್ನು ಹೊರಡಿಸಿದೆ.
ಜನಸಂದಣಿಯನ್ನು ನಿರ್ವಹಿಸಲು ಕಾರ್ಯಕ್ರಮಗಳ ಆಯೋಜಕರು, ರಾಜ್ಯ ಸರ್ಕಾರ (ಪೊಲೀಸ್ ಹಾಗೂ ಇತರ ಇಲಾಖೆಗಳು), ಸ್ಥಳೀಯ ಆಡಳಿತಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಇದರಲ್ಲಿ ವಿವರಿಸಲಾಗಿದೆ.
* ಯಾವ ಕಾರ್ಯಕ್ರಮ, ಯಾವ ರೀತಿ ನಡೆಯುತ್ತದೆ, ಎಷ್ಟು ಜನ ಸೇರಬಹುದು, ಯಾವ ವಯಸ್ಸಿನವರು ಭಾಗವಹಿಸುತ್ತಾರೆ ಎಂಬುದೂ ಸೇರಿದಂತೆ ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ಸ್ಪಷ್ಟ ಚಿತ್ರಣ, ಜನ ಧಾರಣಾ ಸಾಮರ್ಥ್ಯ ಮುಂತಾದ ವಿವರಗಳನ್ನು ಆಯೋಜಕರು ಮೊದಲೇ ತಿಳಿದಿರಬೇಕು
* ಜನದಟ್ಟಣೆಯನ್ನು ನಿರ್ವಹಿಸುವ ಕ್ರಮಗಳ (ಸಂಚಾರ ನಿರ್ವಹಣೆ, ಮಾರ್ಗ ನಕ್ಷೆ, ತಡೆ ಬೇಲಿಗಳ ನಿರ್ಮಾಣ, ಗಣ್ಯರ ನಿರ್ವಹಣೆ ಇತ್ಯಾದಿ) ಅನುಷ್ಠಾನದ ಬಗ್ಗೆ ನಿಖರವಾದ ಯೋಜನೆಗಳಿರಬೇಕು
* ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡಬೇಕು. ಅಂದರೆ, ಅಗ್ನಿಶಾಮಕ ದಳದ ನಿಯೋಜನೆ, ಸಿ.ಸಿ.ಟಿ.ವಿ. ಕ್ಯಾಮೆರಾಗಳ ಮೂಲಕ ನಿಗಾ, ಸಾಕಷ್ಟು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಬೇಕು
* ಪರಿಣಾಮಕಾರಿ ಸಂವಹನ ವ್ಯವಸ್ಥೆ (ತುರ್ತು ಸಂದರ್ಭಗಳಲ್ಲಿ ಸ್ಥಳದಲ್ಲಿ ಸೇರಿರುವ ಜನರಿಗೆ ಮಾಹಿತಿಗಳನ್ನು ನೀಡುವ, ಜನರಲ್ಲಿನ ಆತಂಕ ದೂರಮಾಡಲು ತುರ್ತು ಸಂದೇಶಗಳನ್ನು ನೀಡುವ ವ್ಯವಸ್ಥೆ) ಇರಬೇಕು
* ವೈದ್ಯಕೀಯ ಮತ್ತು ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಿರಬೇಕು
* ಜನರ ನಿರ್ವಹಣೆಯಲ್ಲಿ ಎನ್‌ಜಿಒಗಳು, ಸ್ಥಳೀಯ ಸಮುದಾಯಗಳು ಪೊಲೀಸರು ಹಾಗೂ ಇತರ ಇಲಾಖೆಗಳೊಂದಿಗೆ ಭಾಗಿಯಾಗಬೇಕು
* ಮಾಧ್ಯಮಗಳು ಕೂಡ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು
* ಜನದಟ್ಟಣೆ ನಿರ್ವಹಣೆ ಮತ್ತು ವಿಪತ್ತುಗಳನ್ನು ಎದುರಿಸುವ ಕೌಶಲಗಳ ಸುಧಾರಣೆಗಾಗಿ ಆಯೋಜಕರು, ಪೊಲೀಸರು, ಸ್ವಯಂ ಸೇವಕರಿಗೆ ನಿರಂತರ ತರಬೇತಿಗಳನ್ನು ನೀಡಬೇಕು
ಕಾಲ್ತುಳಿತ: ದೇಶದಲ್ಲಿ ನಡೆದ ಪ್ರಮುಖ ಘಟನೆಗಳು
ಜುಲೈ 25, 2025: ಉತ್ತರಾಖಂಡದ ಹರಿದ್ವಾರದ ಮಾನಸ ದೇವಿ ದೇವಾಲಯಕ್ಕೆ ಹೋಗುವ ಪಾದಚಾರಿ ಮಾರ್ಗದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ 8 ಭಕ್ತರ ಸಾವು
ಜೂನ್ 29, 2025: ಒಡಿಶಾದ ಜಗದ್ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ಗುಂಡಿಚಾ ದೇವಾಲಯದ ಸಮೀಪ ಕಾಲ್ತುಳಿತ ಸಂಭವಿಸಿ 3 ಜನರು ಸಾವು
ಜೂನ್ 4, 2025: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಅಭಿಮಾನಿಗಳ ಸಾವು
ಮೇ 3, 2025: ಗೋವಾದ ಶಿರ್ಗಾವೊದಲ್ಲಿ ಶ್ರೀ ಲೈರಾಯಿ ದೇವಿ ದೇವಾಲಯದ ವಾರ್ಷಿಕ ಜಾತ್ರೆಯಲ್ಲಿ ಕಾಲ್ತುಳಿತ ಉಂಟಾಗಿ 7 ಭಕ್ತರ ಮರಣ
ಫೆ.15, 2025: ದೆಹಲಿಯ ರೈಲ್ವೆ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ದುರಂತ. ಮಹಾ ಕುಂಭ ಮೇಳಕ್ಕೆ ಹೊರಟಿದ್ದ 18 ಯಾತ್ರಾರ್ಥಿಗಳು ಮೃತ
ಜನವರಿ 29, 2025: ಉತ್ತರಪ್ರದೇಶದ ಪ್ರಯಾಗರಾಜ್ ಮಹಾ ಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆ ದಿನ, ಏಕಾ ಏಕಿ ಭಾರಿ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರಿಂದ ಉಂಟಾದ ಕಾಲ್ತುಳಿತದಿಂದಾಗಿ ಕನಿಷ್ಠ 30 ಭಕ್ತರ ಸಾವು
ಜನವರಿ 9, 2025: ಆಂಧ್ರಪ್ರದೇಶದ ತಿರುಪತಿಯಲ್ಲಿ ದೇವರ ದರ್ಶನದ ಟಿಕೆಟ್ ಕೌಂಟರ್‌ನಲ್ಲಿ ಉಂಟಾದ ಕಾಲ್ತುಳಿತದಲ್ಲಿ 6 ಭಕ್ತರು ಸಾವು
ಜುಲೈ 2, 2024: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಧರ್ಮ ಬೋಧಕರೊಬ್ಬರ ಆಶೀರ್ವಚನ ಕೇಳಲು ಸೇರಿದ್ದ ಸ್ಥಳದಲ್ಲಿ ದುರ್ಘಟನೆ. 121 ಮಂದಿ ಮರಣ
ಅಕ್ಟೋಬರ್ 13, 2013: ಮಧ್ಯಪ್ರದೇಶದ ದತಿಯಾ ಜಿಲ್ಲೆಯ ರತನಗಢ ಮಾತಾ ದೇವಾಲಯದ ಸಮೀಪದ ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 121 ಭಕ್ತರ ಸಾವು
ಫೆಬ್ರುವರಿ 10, 2013: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿದ್ದ ಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿ 40ಕ್ಕೂ ಹೆಚ್ಚು ಯಾತ್ರಿಗಳ ಸಾವು
ಜನವರಿ 14, 2011: ಕೇರಳದ ಶಬರಿಮಲೆಯಲ್ಲಿ ನಡೆದ ದುರ್ಘಟನೆಯಲ್ಲಿ 102 ಅಯ್ಯಪ್ಪ ವ್ರತಧಾರಿಗಳ ಸಾವು
ಸೆಪ್ಟೆಂಬರ್ 30, 2008: ರಾಜಸ್ಥಾನದ ಜೋಧಪುರದ ಚಾಮುಂಡಿ ದೇವಿ ದೇವಾಲಯದಲ್ಲಿ ಉಂಟಾದ ಕಾಲ್ತುಳಿತದಲ್ಲಿ 249 ಭಕ್ತರ ಸಾವು
ಆಗಸ್ಟ್ 3, 2008: ಹಿಮಾಚಲ ಪ್ರದೇಶದ ಬಿಲಸಾಪುರದ ನೈನಾ ದೇವಿ ದೇವಾಲಯದಲ್ಲಿ ದುರ್ಘಟನೆ. 162 ಭಕ್ತರು ಬಲಿ
ಜನವರಿ 25, 2005: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಾಯಿಯ ಮಂಧರ್‌ದೇವ್ ದೇವಿ ದೇವಾಲಯದಲ್ಲಿ ನಡೆದ ದುರಂತದಲ್ಲಿ 293 ಭಕ್ತರ ದಾರುಣ ಸಾವು
ಜೂನ್ 13, 1997: ದೆಹಲಿಯ ಉಪಾಹಾರ್ ಸಿನಿಮಾ ಮಂದಿರದಲ್ಲಿ ಉಂಟಾದ ಅಗ್ನಿ ಆಕಸ್ಮಿಕದಿಂದ ಭಯಭೀತರಾಗಿ ಪ್ರೇಕ್ಷಕರು ಹೊರಗೆ ಬರುವ ವೇಳೆ ಕಾಲ್ತುಳಿತ.
59 ಜನರು ಸಾವು
ಫೆಬ್ರುವರಿ 24, 1997: ಒಡಿಶಾದ ಬಾರಿಪದಾದಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ದುರ್ಘಟನೆ ನಡೆದು 206 ಜನರು ಮರಣ
ಡಿಸೆಂಬರ್ 23, 1995: ಹರಿಯಾಣದ ಡಬ್‌ವಾಲಿಯಲ್ಲಿ ಶಾಲೆಯೊಂದರ ಕಾರ್ಯಕ್ರಮದಲ್ಲಿ ಬೆಂಕಿ ಅವಘಡದಿಂದಾಗಿ ಕಾಲ್ತುಳಿತ ಸಂಭವಿಸಿ 446 ಜನರ ಸಾವು
ಫೆಬ್ರುವರಿ 3, 1954: ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ನಡೆಯುತ್ತಿದ್ದ ಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿ 800ಕ್ಕೂ ಹೆಚ್ಚು ಭಕ್ತರ ದುರ್ಮರಣ
ಆಧಾರ: ಪಿಟಿಐ, ಎನ್‌ಡಿಎಂಎ ಮಾರ್ಗಸೂಚಿ, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.