‘ಸಂಪಾಜೆ ಘಾಟಿ’ ಎಂದೇ ಹೆಸರಾದ ರಾಷ್ಟ್ರೀಯ ಹೆದ್ದಾರಿ 275 ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 60 ಕಿ.ಮೀ ಇದೆ. ಇಲ್ಲಿ ಪ್ರತಿ ಮಳೆಗಾಲದಲ್ಲೂ ಅಲ್ಲಲ್ಲಿ ರಸ್ತೆಗೆ ಮಣ್ಣು ಕುಸಿದು ಸಂಚಾರ ಸ್ಥಗಿತಗೊಳ್ಳುತ್ತಿರುತ್ತದೆ. ಆಗ ಬಳಸು ಮಾರ್ಗದಲ್ಲಿ ವಾಹನಗಳು ಸಂಚರಿಸಬೇಕಿದೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ರ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿದ್ದ ವೇಳೆ ಸಂಪಾಜೆ ಘಾಟಿಯಲ್ಲೂ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಆ ಬಳಿಕ, ಪ್ರತಿ ಮಳೆಗಾಲದಲ್ಲೂ ರಸ್ತೆಗೆ ಮಣ್ಣು ಕುಸಿದು ಸಂಚಾರ ಸ್ಥಗಿತಗೊಳ್ಳುತ್ತಿದೆ. ಬಳಸು ಮಾರ್ಗ ಅನಿವಾರ್ಯವಾಗುತ್ತಿದೆ.
30 ಕಿ.ಮೀ ಉದ್ದದ ಈ ಘಾಟಿ ರಸ್ತೆಯಲ್ಲಿ ಬರುವ ಮದೆನಾಡು ಸಮೀಪದ ಕತ್ರೋಜಿ ಎಂಬಲ್ಲಿ ಮಳೆ ಹೆಚ್ಚಾದಾಗ ಗುಡ್ಡದ ಮಣ್ಣು ನಿರಂತರವಾಗಿ ರಸ್ತೆಗೆ ಜಾರುತ್ತದೆ. ಮಣ್ಣನ್ನು ತೆಗೆದು, ಲಾರಿಗಳಲ್ಲಿ ಸಾಗಿಸುವ ಕೆಲಸ ಮಳೆಗಾಲ ಮುಗಿಯುವವರೆಗೂ ನಡೆಯುತ್ತಿರುತ್ತದೆ. ರಸ್ತೆಯ ಒಂದೇ ಬದಿಯಲ್ಲಿ ವಾಹನಗಳು ಸಂಚರಿಸುವುದರಿಂದ ದಟ್ಟಣೆ ಉಂಟಾಗಿ, ಸಂಚಾರ ಯಾತನಾಮಯವಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ ವಾಗಿಲ್ಲ. 2019–20ರಲ್ಲಿ 18 ಕಡೆ ತಡೆಗೋಡೆ ಕಟ್ಟಿದ್ದರೂ, ಸಮಸ್ಯೆ ಹಾಗೆಯೇ ಇದೆ.
ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದರೂ, ಎಲ್ಲೂ ಭೂಕುಸಿತ ಸಂಭವಿಸಿಲ್ಲ. ಸದ್ಯಕ್ಕೆ ಕುಸಿಯುವ ಭೀತಿ ಕಾಣುತ್ತಿಲ್ಲ. ವಾಹನಗಳ ಸಂಚಾರ ಸರಾಗವಾಗಿದೆ. ಘಾಟಿ ರಸ್ತೆಯಲ್ಲಿ ₹ 94 ಕೋಟಿ ವೆಚ್ಚದಲ್ಲಿ 21 ಕಡೆ ತಡೆಗೋಡೆ ಕಟ್ಟುವ ಕಾಮಗಾರಿಗೆ ಟೆಂಡರ್ ಆಗಿದ್ದು, ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆ ಮೂಡಿಸಿದೆ.
‘ಆಂಧ್ರಪ್ರದೇಶದ ಕೃಷಿ ಇನ್ ಫ್ರಾಟೆಕ್ ಕಂಪನಿ ಟೆಂಡರ್ ಪಡೆದುಕೊಂಡಿದ್ದು, ಒಂದೂವರೆ ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆ. ಕುಶಾಲನಗರದಿಂದ ಸಂಪಾಜೆಯವರೆಗೆ ತಡೆಗೋಡೆಗಳನ್ನು ಕಟ್ಟಲಾಗುತ್ತದೆ. ಪ್ರತಿ ವರ್ಷ ಕುಸಿಯುವ ಕತ್ರೋಜಿಯೂ ಇದರಲ್ಲಿ ಸೇರಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜನಿಯರ್ ಜಿ.ಎಚ್.ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮುಗಿಯದ ತಡೆಗೋಡೆ ಕಾಮಗಾರಿ: ಮಡಿಕೇರಿಯಲ್ಲಿ ಇದೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯ ಸ್ಲ್ಯಾಬ್‌ಗಳೂ ಆಗಾಗ್ಗೆ ಹೊರಚಾಚಿ ಕುಸಿತದ ಭೀತಿ ಮೂಡಿಸುತ್ತಿವೆ. ಎರಡು ವರ್ಷಗಳ ಹಿಂದೆ ಇಲ್ಲಿ ಸಂಚಾರವನ್ನು ಬಂದ್ ಮಾಡಲಾಗಿತ್ತು. 15 ದಿನಗಳ ಕಾಲ 15 ಕಿ.ಮೀ ಬಳಸು ಮಾರ್ಗದಲ್ಲಿ ಮಂಗಳೂರು ರಸ್ತೆ ತಲುಪಬೇಕಿತ್ತು. ಆದರೆ, ತಡೆಗೋಡೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ವಹಿಸದೇ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ.
ಹಲವು ವರ್ಷಗಳಾದರೂ ಕಾಮಗಾರಿ ಮುಗಿದಿಲ್ಲ. ಅದು ಪೂರ್ಣಗೊಳ್ಳದ ಹೊರತು ಹೆದ್ದಾರಿಯಲ್ಲಿ ನಿರಾತಂಕವಾಗಿ ಸಂಚರಿಸುವುದು ಅಸಾಧ್ಯ.
‘ತಡೆಗೋಡೆ ಕಾಮಗಾರಿ ಮುಗಿದಿದೆ. ಆದರೆ, ಮೇಲ್ಭಾಗದಲ್ಲಿ ಕೆಲವು ಕೆಲಸಗಳು ನಡೆಯುತ್ತಿವೆ. ಜೂನ್ 15ರ ಒಳಗೆ ಮುಗಿಯಬೇಕಿತ್ತು. ಮಳೆ ಬಂದಿದ್ದರಿಂದ ತಡವಾಗಬಹುದು. ಸ್ಲ್ಯಾಬ್‌ಗಳು ಬೀಳುವ ಸಾಧ್ಯತೆ ಇಲ್ಲ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಇಬ್ರಾಹಿಂ ತಿಳಿಸಿದ್ದಾರೆ.
ಆಂಧ್ರಪ್ರದೇಶದ ಕೃಷಿ ಇನ್ಫ್ರಾಟೆಕ್ ಕಂಪನಿ ಟೆಂಡರ್ ಪಡೆದುಕೊಂಡಿದ್ದು ಒಂದೂವರೆ ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆ. ಕುಶಾಲನಗರದಿಂದ ಸಂಪಾಜೆಯವರೆಗೆ ತಡೆಗೋಡೆಗಳನ್ನು ಕಟ್ಟಲಾಗುತ್ತದೆ. ಪ್ರತಿ ವರ್ಷ ಕುಸಿಯುವ ಕತ್ರೋಜಿಯೂ ಇದರಲ್ಲಿ ಸೇರಿದೆಜಿ.ಎಚ್.ಗಿರೀಶ್ ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.