ರವಿಚಂದ್ರನ್ ಅಶ್ವಿನ್
ಪಿಟಿಐ ಚಿತ್ರ
ಟೆನಿಸ್ ವೃತ್ತಿಜೀವನದ ಉತ್ತುಂಗದಲ್ಲಿದ್ದ 25 ವರ್ಷ ವಯಸ್ಸಿನ ಆಟಗಾರ್ತಿ ಆ್ಯಶ್ಲೆ ಬಾರ್ಟಿ ಅವರು 2022ರಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆದ ಕೆಲವೇ ವಾರಗಳಲ್ಲಿ ನಿವೃತ್ತಿ ಘೋಷಿಸಿ ಕ್ರೀಡಾ ಜಗತ್ತನ್ನು ಅಚ್ಚರಿಗೆ ಕೆಡವಿದ್ದರು. ಈಗ ಭಾರತದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮಧ್ಯದಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದ್ದಾರೆ. ದಿಢೀರ್ ತೀರ್ಮಾನಕ್ಕೆ ಕಾರಣಗಳೇನು ಎಂದು ಅವರು ಹೇಳಿಲ್ಲ. ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಕ್ರಿಕೆಟ್ ಲೋಕದಲ್ಲಿ ಹಿಂದೆಯೂ ಹಲವರು ನಿವೃತ್ತಿಯ ಬಗ್ಗೆ ದಿಢೀರ್ ನಿರ್ಧಾರ ಕೈಗೊಂಡಿದ್ದರು. ಪ್ರಮುಖ ಆಟಗಾರರನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕಾಏಕಿ ವಿದಾಯ ಘೋಷಿಸಿದವರು ಹಲವರು
ರವಿ ಶಾಸ್ತ್ರಿ
ರವಿ ಶಾಸ್ತ್ರಿ, ಹಲವು ಪ್ರಮುಖ ಟೂರ್ನಿಗಳಲ್ಲಿ ಭಾರತ ಕ್ರಿಕೆಟ್ ತಂಡದ ಗೆಲುವಿಗೆ ಕಾರಣವಾಗಿದ್ದ ಪ್ರತಿಭಾವಂತ ಆಲ್‌ರೌಂಡರ್. 1981ರಿಂದ 1992ರವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡದ ಭಾಗವಾಗಿದ್ದ ಶಾಸ್ತ್ರಿ, ಕೋಚ್ ಆಗಿ, ವೀಕ್ಷಕ ವಿವರಣೆಗಾರರಾಗಿಯೂ ಜನಪ್ರಿಯರು. ಏಕದಿನ ಪಂದ್ಯಗಳಲ್ಲಿ 29.04 ಸರಾಸರಿಯೊಂದಿಗೆ 3,108 ರನ್‌ಗಳನ್ನು, 80 ಟೆಸ್ಟ್‌ಗಳಲ್ಲಿ 35.79 ಸರಾಸರಿಯೊಂದಿಗೆ 3,830 ರನ್‌ಗಳನ್ನು ಅವರು ಮಾಡಿದ್ದಾರೆ.
1992ರಲ್ಲಿ ಭಾರತವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾಗ, ಮೊದಲ ಪಂದ್ಯದಲ್ಲಿಯೇ ಶಾಸ್ತ್ರಿ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಜೊಹಾನೆಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ನಂತರ ಮೊಣಕಾಲು ನೋವು ಹೆಚ್ಚಾಗಿತ್ತು. ಮೂರನೇ ಪಂದ್ಯದ ನಂತರ ಇನ್ನು ಆಟ ಆಡಲಾರೆ ಎನ್ನುವ ಸ್ಥಿತಿ ಮುಟ್ಟಿದ ಶಾಸ್ತ್ರಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಅನಿಲ್ ಕುಂಬ್ಳೆ
ಅಶ್ವಿನ್ ಅವರ ನಿರ್ಧಾರದ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರು ಕೂಡಾ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದವರು (ಏಕದಿನ ಕ್ರಿಕೆಟ್‌ಗೆ 2007ರಲ್ಲೇ ನಿವೃತ್ತಿ ಘೋಷಿಸಿದ್ದರು). ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಗಳಿಸಿದ (619) ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಪಡೆದಿರುವ ಸ್ಪಿನ್ನರ್ ಕುಂಬ್ಳೆ, 2008ರಲ್ಲಿ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮಧ್ಯದಲ್ಲೇ (ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಬಳಿಕ) ನಿವೃತ್ತಿ ಘೋಷಿಸಿದರು. ಆಗ ಅವರು ಭಾರತ ತಂಡದ ನಾಯಕರಾಗಿದ್ದರು. 132 ಟೆಸ್ಟ್‌ಗಳನ್ನು ಆಡಿರುವ ಕುಂಬ್ಳೆ ಅವರು ಭುಜದ ಗಾಯದ ಕಾರಣಕ್ಕೆ ಮೊಹಾಲಿಯಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಆಗಲೇ ಅವರಿಗೆ 39 ವರ್ಷ ವಯಸ್ಸಾಗಿತ್ತು. ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಹಿರಿಯ ಆಟಗಾರರು ಕ್ರಿಕೆಟ್‌ನಿಂದ ಹಿಂದೆ ಸರಿಯಬೇಕು ಎಂಬ ಚರ್ಚೆಯೂ ಆಗ ಜೋರಾಗಿತ್ತು. ನಂತರ, ಧೋನಿ ನಾಯಕರಾದರು.
ಎಂ.ಎಸ್.ಧೋನಿ
ತಮ್ಮ ವಿಶಿಷ್ಟ ‘ಹೆಲಿಕಾಪ್ಟರ್’ ಹೊಡೆತಗಳ ಮೂಲಕ ಕ್ರಿಕೆಟ್ ಲೋಕದಲ್ಲಿ ಉಜ್ವಲ ತಾರೆಯಾಗಿ ಮೆರೆದವರು ಮಹೇಂದ್ರ ಸಿಂಗ್ ಧೋನಿ; ಭಾರತ ತಂಡದ ನಾಯಕನಾಗಿ ಹಲವು ದಾಖಲೆ ಮಾಡಿದವರು. ಇವರ ನಾಯಕತ್ವದಲ್ಲಿ ಭಾರತವು 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು. ತಂಡದ ನಾಯಕನಾಗಿದ್ದಾಗಲೇ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. 2014ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಭಾರತ ತಂಡವು, ಮೊದಲೆರಡು ಪಂದ್ಯ ಸೋತು ಮೂರನೇ ಪಂದ್ಯವನ್ನು ಮೆಲ್ಬರ್ನ್‌ನಲ್ಲಿ ಆಡುತ್ತಿತ್ತು. ಪಂದ್ಯ ಮುಗಿದ ಮೇಲೆ ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿದ ಧೋನಿ, ಎಲ್ಲ ಮಾದರಿ ಪಂದ್ಯಗಳನ್ನು ಆಡಿ ಬಳಲಿರುವುದೇ ತಮ್ಮ ನಿರ್ಧಾರಕ್ಕೆ ಕಾರಣ ಎಂದಿದ್ದರು. ನಂತರ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡರು.
ಬೆನ್ ಸ್ಟೋಕ್ಸ್
ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಆಗಿದ್ದ ಬೆನ್ ಸ್ಟೋಕ್ಸ್, 2011ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 104 ಪಂದ್ಯಗಳಿಂದ ಮೂರು ಶತಕಗಳೊಂದಿಗೆ 2,919 ರನ್ ಗಳಿಸಿ, 74 ವಿಕೆಟ್ ಗಳಿಸಿದ್ದರು. 2019ರ ವಿಶ್ವಕಪ್ ಫೈನಲ್‌ನಲ್ಲಿ ತಮ್ಮ ಅದ್ಭುತ ಆಟದಿಂದ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದರು. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಕೂಡ ಆಗಿದ್ದರು. ಸ್ಟೋಕ್ಸ್ 2022ರ ಜುಲೈನಲ್ಲಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಮೂರು ಮಾದರಿಯ ಕ್ರಿಕೆಟ್ ಆಡಲು ತಮ್ಮ ದೇಹ ಸಹಕರಿಸುತ್ತಿಲ್ಲ. ಜತೆಗೆ, ಹೊಸಬರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ತಾನು ನಿವೃತ್ತಿ ಹೊಂದುತ್ತಿದ್ದೇನೆ ಎಂದು ಅವರು ಹೇಳಿದ್ದರು.
ಮಿಚೆಲ್ ಜಾನ್ಸನ್
ಉತ್ತಮ ಪ್ರದರ್ಶನ ನೀಡುತ್ತಿರುವಾಗಲೇ ಕ್ರಿಕೆಟ್‌ಗೆ ವಿದಾಯ ಹೇಳಿ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೆ ಕೆಡವಿದವರು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್. ಆಗ ಅವರಿಗೆ ಇನ್ನೂ 34 ವರ್ಷ. ‘ಇನ್ನೂ ಮೂರ್ನಾಲ್ಕು ವರ್ಷಗಳ ಕ್ರಿಕೆಟ್ ನಿನ್ನಲ್ಲಿ ಬಾಕಿ ಉಳಿದಿದೆ’ ಎಂದು ಅವರ ಮಾರ್ಗದರ್ಶಕ ಡೆನ್ನಿಸ್ ಲಿಲ್ಲಿ ಹೇಳಿದ್ದರು. ಆದರೆ, ‘ನನ್ನಲ್ಲಿ ಕ್ರಿಕೆಟ್ ಹಸಿವು ಇಳಿದಿದೆ. ಇನ್ನು ಮೊದಲಿನ ವೇಗದಲ್ಲಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದರು. 2014ರಲ್ಲಿ ತಲೆಗೆ ಚೆಂಡು ಬಡಿದು ತಂಡದ ಯುವ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಮೃತಪಟ್ಟ ಪ್ರಕರಣ ಜಾನ್ಸನ್ ಅವರನ್ನು ತುಂಬಾ ಕಾಡಿತ್ತು. ಇದೆಲ್ಲದರ ಪರಿಣಾಮವಾಗಿ 2015ರ ನವೆಂಬರ್‌ನಲ್ಲಿ ಪರ್ತ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನ ನಿವೃತ್ತಿ ಘೋಷಿಸಿದ್ದರು. ಆ ಹೊತ್ತಿಗೆ 73 ಟೆಸ್ಟ್‌ಗಳನ್ನು ಆಡಿದ್ದ ಅವರು, 313 ವಿಕೆಟ್‌ಗಳನ್ನು ಗಳಿಸಿದ್ದರು. ಆ ಬಳಿಕವೂ ಐಪಿಎಲ್ ಸೇರಿದಂತೆ ಜಗತ್ತಿನ ವಿವಿಧ ಕಡೆಗಳಲ್ಲಿ ಟಿ20 ಪಂದ್ಯಗಳನ್ನು ಆಡಿದ್ದರು. 2018ರ ಆಗಸ್ಟ್‌ನಲ್ಲಿ ಟಿ20 ಮಾದರಿ ಕ್ರಿಕೆಟ್‌ಗೂ ವಿದಾಯ ಹೇಳಿದರು.
ಅಲನ್ ಡೊನಾಲ್ಡ್
ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಯಶಸ್ಸಿನ ಹಿಂದಿನ ಶಕ್ತಿ ಅಲನ್ ಡೊನಾಲ್ಡ್ ಅವರು 36 ವರ್ಷ ವಯಸ್ಸಿಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದವರು. 2001–02ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ತಂಡದ ಹೀನಾಯ ಸೋಲಿನ ಬಳಿಕ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಮುಂದಿನ ವರ್ಷ ನಡೆದ ವಿಶ್ವಕಪ್ ಟೂರ್ನಿ ಬಳಿಕ ಏಕದಿನ ಮಾದರಿ ಕ್ರಿಕೆಟ್‌ನಿಂದಲೂ ದೂರ ಸರಿದಿದ್ದರು. ಗಾಯಗಳು ಅವರನ್ನು ತೀವ್ರ ಗಾಸಿಗೊಳಿಸಿದ್ದವು. ಹಿಂದಿನ ರೀತಿಯಲ್ಲಿ ಬೌಲಿಂಗ್ ಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅವರ ನಿವೃತ್ತಿಯ ಬಗ್ಗೆ ಮೊದಲೇ ಊಹಾಪೋಹಗಳಿದ್ದವು. ಹಾಗಾಗಿ, ವಿದಾಯ ಘೋಷಿಸಿದ್ದು ದಿಢೀರ್ ಎಂದೆನಿಸದಿದ್ದರೂ, ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೆ ಕೆಡವಿತ್ತು. 10 ವರ್ಷಗಳ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಅವರು 72 ಪಂದ್ಯಗಳನ್ನು ಆಡಿದ್ದು, 330 ವಿಕೆಟ್‌ಗಳನ್ನು ಕಬಳಿಸಿದ್ದರು.
ಎಬಿ ಡಿ ವಿಲಿಯರ್ಸ್
ಎಬಿಡಿ ಎಂದೇ ಅಭಿಮಾನಿಗಳು ಕರೆಯುವ ಎಬಿ ಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾದ ಆಟಗಾರ. ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ‘360 ಡಿಗ್ರಿ ಬ್ಯಾಟರ್’ ಎಂದೇ ಹೆಸರಾದವರು. 2004ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, 114 ಟೆಸ್ಟ್, 228 ಏಕದಿನ ಕ್ರಿಕೆಟ್ ಪಂದ್ಯ ಮತ್ತು 78 ಟಿ20 ಪಂದ್ಯಗಳನ್ನು ಆಡಿ, 20,014 ರನ್‌ಗಳನ್ನು ಗಳಿಸಿ ಕೋಟ್ಯಂತರ ಕ್ರೀಡಾ ಪ್ರೇಮಿಗಳ ನೆಚ್ಚಿನ ಬ್ಯಾಟರ್ ಆಗಿದ್ದರು.
ಎಬಿಡಿ 2018ರ ಮೇ ತಿಂಗಳಲ್ಲಿ ನಿವೃತ್ತಿ ಘೋಷಿಸಿದ್ದರು. ‘ನನ್ನ ಮಗ ಆಕಸ್ಮಿಕವಾಗಿ ಆತನ ಕಾಲಿನಿಂದ ನನ್ನ ಕಣ್ಣಿಗೆ ಒದ್ದಿದ್ದ. ಅದರಿಂದ ನನ್ನ ದೃಷ್ಟಿ ಸ್ವಲ್ಪ ಮಂಜಾಗಿತ್ತು. ಆ ಕಾರಣದಿಂದ ನಾನು ನಿವೃತ್ತಿ ಪಡೆಯಬೇಕಾಯಿತು’ ಎಂದು ಅವರು ನಂತರ ಹೇಳಿಕೊಂಡಿದ್ದರು.
ಗ್ರೇಮ್ ಸ್ವಾನ್
ಗ್ರೇಮ್ ಸ್ವಾನ್ ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿದ್ದವರು. ತಮ್ಮ 20ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಪಂದ್ಯ ಆಡಲು ಆರಂಭಿಸಿದ ಅವರು, ಆರಂಭದ ಕೆಲವು ವರ್ಷ ಪರದಾಡಿದರೂ ನಂತರ ಪಂದ್ಯ ಗೆದ್ದುಕೊಡುವ ಬೌಲರ್ ಆಗಿ ಬೆಳೆದರು. 60 ಟೆಸ್ಟ್‌ಗಳನ್ನು ಆಡಿ, 255 ವಿಕೆಟ್ ಗಳಿಸಿದ್ದರು. 2013ರಲ್ಲಿ ಮೊಣಕೈ ನೋವಿನಿಂದ ಶಸ್ತ್ರಚಿಕಿತ್ಸೆ ಮೊರೆ ಹೋಗಿದ್ದರು. ಅದೇ ವರ್ಷ ಆ್ಯಷಸ್ ಸರಣಿ ಆಡಲು ಆಸ್ಟ್ರೇಲಿಯಾಗೆ ತೆರಳಿದ ಗ್ರೇಮ್, ಸರಣಿ ಮಧ್ಯೆಯೇ ತಮ್ಮ ನಿವೃತ್ತಿ ಘೋಷಿಸಿದ್ದರು.
ಹೆನ್ರಿಚ್ ಕ್ಲಾಸೆನ್
ಹೊಡಿ–ಬಡಿ ಆಟಕ್ಕೆ ಹೆಸರಾಗಿರುವ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಈ ವರ್ಷದ ಜನವರಿ 8ರಂದು ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ಆಗಿ ನಿವೃತ್ತಿ ಘೋಷಿಸಿದರು. ಐದು ವರ್ಷಗಳ (2019–2023) ಕ್ರಿಕೆಟ್ ಪಯಣದಲ್ಲಿ ಅವರು ಆಡಿದ್ದು ನಾಲ್ಕೇ ಟೆಸ್ಟ್‌ಗಳು. ಈ ವರ್ಷದ ಆರಂಭದಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಕ್ಲಾಸೆನ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಈ ಕಾರಣಕ್ಕೆ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡರು ಎಂದು ಹೇಳಲಾಗಿತ್ತು. ನಾಲ್ಕು ಪಂದ್ಯಗಳಲ್ಲಿ ಅವರು 104 ರನ್‌ಗಳನ್ನು ಗಳಿಸಿದ್ದರು. ಏಕದಿನ, ಟಿ20 ಮಾದರಿ ಕ್ರಿಕೆಟ್‌ನಲ್ಲಿ ಅವರು ಮುಂದುವರಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.