ADVERTISEMENT

ಆಳ–ಅಗಲ | ತ್ರಿಭಾಷಾ ಸೂತ್ರ: ಕೇಂದ್ರ vs ತಮಿಳುನಾಡು

ಕೇಂದ್ರದ ತ್ರಿಭಾಷಾ ಸೂತ್ರಕ್ಕೆ ತಮಿಳುನಾಡು ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 0:33 IST
Last Updated 24 ಫೆಬ್ರುವರಿ 2025, 0:33 IST
   
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಅನ್ನು ತಮಿಳುನಾಡಿನಲ್ಲಿ ಜಾರಿ ಮಾಡದೇ ಇರುವುದರಿಂದ ರಾಜ್ಯಕ್ಕೆ ಸಮಗ್ರ ಶಿಕ್ಷಣ ಅಭಿಯಾನ ಅಡಿ ಕೇಂದ್ರದ ಪಾಲಿನ ಅನುದಾನ ಬಿಡುಗಡೆಯಾಗಿಲ್ಲ. ಈ ವಿಚಾರವು ಕೇಂದ್ರ ಮತ್ತು ತಮಿಳುನಾಡಿನ ನಡುವೆ ಆರೋಪ–ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಅನುದಾನದ ನೆಪದಲ್ಲಿ ತ್ರಿಭಾಷಾ ಸೂತ್ರ ಸೇರಿದಂತೆ ತನ್ನ ಸಿದ್ಧಾಂತಗಳನ್ನು ರಾಜ್ಯಗಳ ಮೇಲೆ ಹೇರುತ್ತಿದೆ ಎನ್ನುವುದು ತಮಿಳುನಾಡಿನ ವಾದ.

ಎನ್‌ಇಪಿ ವಿರುದ್ಧ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ₹10,000 ಕೋಟಿ ಕೊಟ್ಟರೂ ನಾನು ರಾಜ್ಯದಲ್ಲಿ ಎನ್‌ಇಪಿ ಜಾರಿ ಮಾಡುವುದಿಲ್ಲ ಎಂದಿದ್ದಾರೆ. ಎನ್‌ಇಪಿ ಪ್ರತಿಗಾಮಿ ಯೋಜನೆಯಾಗಿದ್ದು ಅದನ್ನು ಜಾರಿ ಮಾಡಿ, ರಾಜ್ಯವನ್ನು ಎರಡು ಸಾವಿರ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುವಂತಹ ಪಾಪಕೃತ್ಯವನ್ನು ಎಸಗಲಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಎನ್‌ಇಪಿ ಜಾರಿ ಸಂಬಂಧ ಒಪ್ಪಂದಕ್ಕೆ (ಎಂಒಯು) ಸಹಿ ಹಾಕದೇ ಇರುವುದರಿಂದ ಕೇಂದ್ರವು ಸಮಗ್ರ ಶಿಕ್ಷಣ ಅಭಿಯಾನದ (ಎಸ್‌ಎಸ್‌ಎ) ತನ್ನ ಪಾಲನ್ನು ತಮಿಳುನಾಡು, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಿಗೆ ಬಿಡುಗಡೆ ಮಾಡಿಲ್ಲ.

ಸಮಗ್ರ ಶಿಕ್ಷಣ ಅಭಿಯಾನಕ್ಕೂ ಎನ್‌ಇಪಿಯೂ ಸಂಬಂಧವಿಲ್ಲ. ಹಾಗಿದ್ದರೂ, ಅನುದಾನ ನೀಡದೇ ಬೆದರಿಕೆ ತಂತ್ರ ಹೂಡಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಆರೋಪಿಸಲಾಗಿದೆ. 

ಸರ್ವ ಶಿಕ್ಷ ಅಭಿಯಾನ (ಎಸ್‌ಎಸ್‌ಎ), ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಶಿಕ್ಷಕರ ಶಿಕ್ಷಣ ಯೋಜನೆಗಳನ್ನು ಒಟ್ಟುಗೂಡಿಸಿ 2018ರಲ್ಲಿ ಸಮಗ್ರ ಶಿಕ್ಷಣ ಅಭಿಯಾನವನ್ನು ಜಾರಿಗೊಳಿಸಲಾಗಿತ್ತು. ಈ ಯೋಜನೆಯ ಶೇ 60ರಷ್ಟು ವೆಚ್ಚವನ್ನು ಕೇಂದ್ರ ಭರಿಸಿದರೆ, ಉಳಿದ ಶೇ 40ರಷ್ಟನ್ನು ರಾಜ್ಯಗಳು ಭರಿಸುತ್ತವೆ. ಇದರ ಅಡಿಯಲ್ಲಿ ತಮಿಳುನಾಡಿಗೆ ಕೇಂದ್ರ ಸರ್ಕಾರವು ನೀಡಬೇಕಿದ್ದ ಸುಮಾರು ₹2,500 ಕೋಟಿಯನ್ನು ನೀಡಿಲ್ಲ (2024–25ರ ₹2,151 ಕೋಟಿ ಸೇರಿ) ಎನ್ನುವುದು ಸ್ಟಾಲಿನ್ ದೂರು. 

ADVERTISEMENT

ಅನುದಾನದ ಕೊರತೆಯಿಂದ ಶಾಲೆಗಳಿಗೆ ಮೂಲಸೌಕರ್ಯದ ಕೊರತೆ ಉಂಟಾಗಿ, ಲಕ್ಷಾಂತರ ಮಕ್ಕಳು ಮತ್ತು ಶಿಕ್ಷಕರ ಭವಿಷ್ಯಕ್ಕೆ ಪೆಟ್ಟು ಬೀಳಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ. ಶಿಕ್ಷಕರ ವೇತನ ಪಾವತಿಗೂ ತೊಂದರೆಯಾಗಿದೆ ಎಂದೂ ವರದಿಯಾಗಿದೆ.

ತ್ರಿಭಾಷಾ ಸೂತ್ರ ಜಾರಿಗೆ ಒತ್ತಾಯ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎನ್‌ಇಪಿ ಜಾರಿಗೊಳಿಸಬೇಕು ಎಂದು ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಮಿಳುನಾಡು ಸರ್ಕಾರವು ಪ್ರತ್ಯೇಕತೆಯ ಭಾವದಿಂದ ಕೂಡಿದ್ದು, ಎನ್‌ಇ‍ಪಿ ವಿಚಾರದಲ್ಲಿ ರಾಜಕೀಯಪ್ರೇರಿತ ನಿಲುವು ತೆಗೆದುಕೊಂಡಿದೆ ಎಂದು ಅವರು ಸ್ಟಾಲಿನ್ ಸರ್ಕಾರವನ್ನು ಟೀಕಿಸಿದ್ದಾರೆ. ಸಂವಿಧಾನದ ನಿಯಮಗಳಿಗೆ ಬದ್ಧರಾಗಿರಬೇಕು ಎಂದೂ ಹೇಳಿದ್ದಾರೆ.

ಎನ್‌ಇಪಿ–2020ಯು ತ್ರಿಭಾಷಾ ನೀತಿ ಸೂತ್ರವನ್ನು ಜಾರಿಗೊಳಿಸಬೇಕು ಎಂದು ಪ್ರತಿಪಾದಿಸುತ್ತದೆ.  ತಮಿಳುನಾಡು ಎನ್‌ಇಪಿಯನ್ನು ವಿರೋಧಿಸಲು ಇದುವೇ ಮುಖ್ಯ ಕಾರಣ. ಆರಂಭದಿಂದಲೂ ತ್ರಿಭಾಷಾ ಸೂತ್ರವನ್ನು ಬಲವಾಗಿ ವಿರೋಧಿಸಿಕೊಂಡೇ ಬಂದಿರುವ ತಮಿಳುನಾಡು, 1968ರಿಂದಲೂ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿದೆ. ಆಡಳಿತಾರೂಢ ಡಿಎಂಕೆ ಕೂಡ ಮೊದಲಿನಿಂದಲೂ ತ್ರಿಭಾಷಾ ಸೂತ್ರದ ವಿರೋಧಿ ನಿಲುವು ಹೊಂದಿದೆ.  ‘ಸಂವಿಧಾನದ ಯಾವ ಭಾಗದಲ್ಲಿ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಲಾಗಿದೆ ಎನ್ನುವುದನ್ನು ತಿಳಿಸಿ’ ಎಂದು ಸ್ಟಾಲಿನ್ ಅವರು ಧರ್ಮೇಂದ್ರ ಪ್ರಧಾನ್ ಅವರಿಗೆ ಮರುಪ್ರಶ್ನೆ ಹಾಕಿದ್ದಾರೆ. ‌‌

ಕೇಂದ್ರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ, ಎನ್‌ಇಪಿ ಅಡಿಯಲ್ಲಿ ಬರುವ ‘ಪಿಎಂ ಶ್ರೀ’ಯನ್ನೂ ವಿರೋಧಿಸಿರುವ ತಮಿಳುನಾಡು,  ಸಮಗ್ರ ಶಿಕ್ಷಣ ಅಭಿಯಾನ ಮತ್ತು ‘ಪಿಎಂ ಶ್ರೀ’ ಯೋಜನೆಗಳ ಅನುದಾನ ಬಿಡುಗಡೆಗೆ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು ಎಂದು ಒತ್ತಾಯಿಸಿದೆ.

ಮಗು ತನ್ನ ಶಿಕ್ಷಣದ ಆರಂಭಿಕ ಹಂತದಲ್ಲಿಯೇ ಹೆಚ್ಚು ಭಾಷೆಗಳನ್ನು ಕಲಿಯಲು ಎನ್‌ಇಪಿಯು ಉತ್ತೇಜಿಸುತ್ತದೆ. ಇದರಿಂದಾಗಿಯೇ ಎನ್‌ಇಪಿ ಅಳವಡಿಸಿಕೊಂಡ ರಾಜ್ಯಗಳು ತ್ರಿಭಾಷಾ ಸೂತ್ರ ಪಾಲಿಸಬೇಕು ಎಂಬ ನಿಯಮವನ್ನು ಕೇಂದ್ರ ರೂಪಿಸಿದೆ.  ಮಗುವಿನ ಮಾತೃಭಾಷೆ, ಇಂಗ್ಲಿಷ್ ಜತೆಗೆ ಯಾವುದಾದರೊಂದು (ಪೋಷಕರ ಆಯ್ಕೆಯ) ಸ್ಥಳೀಯ ಭಾಷೆ ಆಯ್ಕೆ ಮಾಡಿಕೊಳ್ಳಬಹುದು ಎನ್ನುವುದು ಕೇಂದ್ರದ ವಾದ. ಆದರೆ, ಮೂರನೇ ಭಾಷೆಯ ನೆಪದಲ್ಲಿ ಕೇಂದ್ರವು ಹಿಂದಿ ಹೇರಿಕೆಗೆ ಮುಂದಾಗಿದೆ ಎನ್ನುವುದು ಎನ್‌ಇಪಿ ವಿರೋಧಿಸುತ್ತಿರುವ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳ ವಾದ. 

ಸಿದ್ಧಾಂತ ಹೇರಿಕೆ: ‘ಪಿಎಂ ಶ್ರೀ’ ವ್ಯವಸ್ಥೆಯ ಅಡಿ ಮಗುವನ್ನು ಮೂರನೇ ವಯಸ್ಸಿಗೆ ಶಾಲೆಗೆ ಸೇರಿಸಬೇಕು. ತಮಿಳುನಾಡಿನಲ್ಲಿ ಸದ್ಯ ಇದಕ್ಕಿಂತ ಭಿನ್ನ ಶಿಕ್ಷಣ ಪದ್ಧತಿ ಅನುಸರಿಸಲಾಗುತ್ತಿದೆ. ತಮಿಳುನಾಡು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದೆ ಎನ್ನುವುದು ರಾಜ್ಯದ ವಾದ. 2030ರ ಹೊತ್ತಿಗೆ ವಿದ್ಯಾರ್ಥಿಗಳ ಒಟ್ಟು ದಾಖಲಾತಿ ಅನುಪಾತವು (ಜಿಇಆರ್) ಶೇ 50ರಷ್ಟು ಇರಬೇಕು ಎನ್ನುವುದು ಎನ್‌ಇಪಿಯ ಒಂದು ಗುರಿ. ಆದರೆ, ತಮಿಳುನಾಡಿನಲ್ಲಿ ಸದ್ಯ ಜಿಇಆರ್ ಶೇ 51ರಷ್ಟು ಇದೆ. ಹೆಣ್ಣುಮಕ್ಕಳ ಶಿಕ್ಷಣ ಉತ್ತೇಜಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಎನ್‌ಇಪಿ ಅಡಿ ನಿಗದಿಪಡಿಸಿರುವ ಗುರಿಗಳನ್ನು ದಾಟಿ ಮುಂದೆ ಸಾಗಿದ್ದೇವೆ ಎನ್ನುವುದು ತಮಿಳುನಾಡಿನ ವಾದ. ಎನ್‌ಇಪಿಯಲ್ಲಿ ಮೂರು, ಐದು ಮತ್ತು ಎಂಟನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಬೇಕಾಗುತ್ತದೆ. ಹಾಗೆ ಮಾಡುವುದರಿಂದ ಅನೇಕ ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದಿಂದ ಹೊರಗುಳಿಯುವಂತಾಗುತ್ತದೆ ಎಂದು ತಮಿಳುನಾಡು ಹೇಳುತ್ತಿದೆ.

ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ, ಪಂಜಾಬ್ ರಾಜ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಲಿಂಗ ಅಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ತಕ್ಕಂತೆ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿವೆ. ಹೀಗಿದ್ದರೂ ಕೇಂದ್ರ ಸರ್ಕಾರವು ಅನುದಾನದ ಹೆಸರಿನಲ್ಲಿ ರಾಜ್ಯಗಳ ಮೇಲೆ ತನ್ನ ಸಿದ್ಧಾಂತವನ್ನು ಹೇರುತ್ತಿದೆ ಎನ್ನುವುದು ತಮಿಳುನಾಡು ಆರೋಪ.

ಕೇಂದ್ರದ ಪಾಲಿನ ಅನುದಾನ ಬಾರದೇ ಈ ರಾಜ್ಯಗಳು ತೀವ್ರ ಸಮಸ್ಯೆ ಎದುರಿಸುತ್ತಿವೆ. ಕಳೆದ ವರ್ಷವೂ ಹಲವು ರಾಜ್ಯಗಳಲ್ಲಿ ಇಂಥದ್ದೇ ಸ್ಥಿತಿ ಉದ್ಭವಿಸಿತ್ತು. ಕೇಂದ್ರ ಸರ್ಕಾರವು ತಮಿಳುನಾಡು, ಕೇರಳ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳಿಗೆ ಎಸ್‌ಎಸ್‌ಎ ಅನುದಾನವನ್ನು ತಡೆಹಿಡಿದಿತ್ತು. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ಮತ್ತು ಶಿಕ್ಷಕರಿಗೆ ಸಂಬಳ ನೀಡಲು ಹಣವಿಲ್ಲದೇ ರಾಜ್ಯಗಳು ಸಮಸ್ಯೆ ಎದುರಿಸಿದ್ದವು.

ಹಿಂದೆಯೂ ವಿರೋಧ
ತಮಿಳುನಾಡು ಸರ್ಕಾರವು ಭಾಷೆ, ಶಿಕ್ಷಣಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಮೊದಲಿನಿಂದಲೂ ಅನುಮಾನದಿಂದಲೇ ನೋಡುತ್ತಾ ಬಂದಿದೆ. ಕೇಂದ್ರ ಸರ್ಕಾರವು ಜವಾಹರ್‌ ನವೋದಯ ವಿದ್ಯಾಲಯಗಳನ್ನು ಆರಂಭಿಸಿದಾಗಲೂ ಅದನ್ನು ವಿರೋಧಿಸಿತ್ತು. ತಮಿಳುನಾಡಿನಲ್ಲಿ ನವೋದಯ ಶಾಲೆಗಳಿಲ್ಲ ಎಂದು ಹೇಳುತ್ತದೆ ಕೇಂದ್ರ ಸರ್ಕಾರದ ಮಾಹಿತಿ. ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಟ್ಟ ಶಾಲೆಗಳ ಪೈಕಿ ಕೇಂದ್ರೀಯ ವಿದ್ಯಾಲಯಗಳು ಮಾತ್ರ ಅಲ್ಲಿವೆ. ಈ ಸಂಸ್ಥೆಗಳು 34 ಇವೆ.

ಕೇರಳ, ಪಶ್ಚಿಮ ಬಂಗಾಳಕ್ಕೂ ಇಲ್ಲ ಅನುದಾನ

ತಮಿಳುನಾಡು ಮಾದರಿಯಲ್ಲೇ ಎನ್‌ಇಪಿ/ಪಿಎಂ ಶ್ರೀ ವಿರೋಧಿಸುತ್ತಿರುವ ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯ ಪಾಲನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿಲ್ಲ.

ಆಧಾರ: ಪಿಟಿಐ, ಪಿಎಂ ಶ್ರೀ ಡ್ಯಾಶ್‌ ಬೋರ್ಡ್‌, ಕೇಂದ್ರ ಶಿಕ್ಷಣ ಸಚಿವಾಲಯದ ವೆಬ್‌ಸೈಟ್‌, ಸಂಸತ್ತಿನಲ್ಲಿ ಶಿಕ್ಷಣ ಸಚಿವರ ಉತ್ತರಗಳು, ತಮಿಳುನಾಡು ಶಿಕ್ಷಣ ಇಲಾಖೆ ವೆಬ್‌ಸೈಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.