ತೆಲಂಗಾಣದಲ್ಲಿ 2018ರಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆಯ ಪ್ರಮುಖ ಆರೋಪಿಗೆ ಅಲ್ಲಿನ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿಯೂ ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿಗೆ ಇದೇ ಜನವರಿಯಲ್ಲಿ ಮರಣ ದಂಡನೆ ವಿಧಿಸಲಾಗಿತ್ತು. ಇಂಥ ಪ್ರಕರಣಗಳ ಕೆಲವು ವಿರಳ ತೀರ್ಪುಗಳ ಹೊರತಾಗಿ ಮರ್ಯಾದೆಯ ಹೆಸರಿನಲ್ಲಿ ಪ್ರಬಲ ಜಾತಿಗಳವರು ದಲಿತರೂ ಸೇರಿದಂತೆ ಇತರ ದುರ್ಬಲ ಜಾತಿಗಳ ಜನರ ಮೇಲೆ ಎಸಗುತ್ತಿರುವ ಕ್ರೌರ್ಯ, ಹಲ್ಲೆ, ಕೊಲೆಗಳ ವಿಚಾರದಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುತ್ತಿಲ್ಲ ಎನ್ನುವ ದೂರು ವ್ಯಾಪಕವಾಗಿದೆ. ಈ ಉದ್ದೇಶಕ್ಕೆ ಪ್ರತ್ಯೇಕ ಕಾಯ್ದೆ ತರಬೇಕು ಎನ್ನುವ ಬೇಡಿಕೆಯೂ ಇದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ 2018ರಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಎಸ್‌ಸಿ/ಎಸ್‌ಟಿ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಪ್ರಮುಖ ಆರೋಪಿಗೆ ಮೂರು ದಿನಳ ಹಿಂದೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದು, ಇತರೆ ಆರು ಮಂದಿಗೆ ಜೀವಾವಧಿ ಶಿಕ್ಷೆ ನೀಡಿದೆ. ಬುಧವಾರ (12.03.2025) ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ 24 ವರ್ಷದ ಯುವಕ ಮತ್ತು 17 ವರ್ಷದ ಬಾಲಕಿಯ ಶವಗಳು ಸೇತುವೆಯೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಮರ್ಯಾದೆಗೇಡು ಹತ್ಯೆ ಎಂದು ಅಲ್ಲಿನ ಪೊಲೀಸರು ಶಂಕಿಸಿದ್ದಾರೆ. ತೆಲಂಗಾಣದಲ್ಲಿ ನ್ಯಾಯಾಲಯ ಹೊರಡಿಸಿರುವ ಆದೇಶದ ಬೆನ್ನಲ್ಲೇ, ಜಾತಿ, ಕುಟುಂಬದ ಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಿದ್ದ ಹತ್ಯೆಗಳು ಮತ್ತು ಇಂತಹ ಹೇಯ ಕೃತ್ಯ ಎಸಗಿದವರಿಗೆ ಶಿಕ್ಷೆ ನೀಡುವ ವಿಚಾರವು ಮತ್ತೆ ಮುನ್ನೆಲೆಗೆ ಬಂದಿದೆ.
ಮರ್ಯಾದೆಯ ಹೆಸರಿನಲ್ಲಿ ಪ್ರತಿವರ್ಷ ಜಗತ್ತಿನಲ್ಲಿ 5,000 ಮಹಿಳೆಯರ ಹತ್ಯೆಗಳು ನಡೆಯುತ್ತಿವೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಐ) ಹೇಳಿದೆ. ಜಗತ್ತಿನ ಬಹುತೇಕ ಎಲ್ಲ ಧರ್ಮ ಮತ್ತು ಪ್ರದೇಶಗಳಲ್ಲಿಯೂ ಈ ಅಮಾನವೀಯ ನಡವಳಿಕೆ ಜಾರಿಯಲ್ಲಿದೆ ಎಂದೂ ಅದು ವರದಿಯಲ್ಲಿ ಉಲ್ಲೇಖಿಸಿದೆ. ಅದರ ಪ್ರಕಾರ, ಜಗತ್ತಿನಲ್ಲಿಯೇ ಅತಿ ಹೆಚ್ಚು ಮರ್ಯಾದೆಗೇಡು ಹತ್ಯೆಗಳು ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿವೆ.
ಭಾರತದಲ್ಲಿ ತಮ್ಮ ಇಷ್ಟಕ್ಕೆ ವಿರುದ್ಧವಾಗಿ, ಸಾಮಾಜಿಕವಾಗಿ ಕೆಳಜಾತಿಯ, ಭಿನ್ನ ಧರ್ಮದ ಯುವಕ/ಯುವತಿಯನ್ನು ಪ್ರೀತಿಸುವ/ಮದುವೆಯಾಗುವವರನ್ನು ಹತ್ಯೆ ಮಾಡುವ ಕೆಟ್ಟ ನಡವಳಿಕೆ ಬಹಳ ಹಿಂದಿನಿಂದಲೂ ಇದೆ. ಜಾತಿ, ಮನೆತನದ ಮರ್ಯಾದೆಗೆ ಕುತ್ತು ತಂದರು ಎಂದು ಮಹಿಳೆಯರ ಮೇಲೆ ಹಲ್ಲೆ ಮಾಡುವುದು, ಸುಡುವುದು, ನೇಣಿಗೆ ಹಾಕುವುದು, ಗುಂಡು ಹಾರಿಸುವುದು ಹೀಗೆ ಹಲವು ರೀತಿಯಲ್ಲಿ ಹಿಂಸೆಗೀಡುಮಾಡಿ ಕೊಲ್ಲಲಾಗುತ್ತಿದೆ. ಪ್ರಬಲ ಜಾತಿ/ ಧರ್ಮಗಳ ಜನರು ತಮ್ಮ ಜಾತಿ, ಕುಟುಂಬದ ಮರ್ಯಾದೆಯ ನೆಪದಲ್ಲಿ ದಲಿತ ಮತ್ತು ಹಿಂದುಳಿದ ಹಾಗೂ ದುರ್ಬಲ ಜಾತಿಗಳ ಮೇಲೆ ಕ್ರೌರ್ಯ ನಡೆಸಿರುವುದು ಅನೇಕ ಪ್ರಕರಣಗಳ ಮೂಲಕ ಸಾಬೀತಾಗಿದೆ.
ಜೋರ್ಡನ್‌ನಂಥ ಕೆಲವು ರಾಷ್ಟ್ರಗಳಲ್ಲಿ ಮರ್ಯಾದೆಗೇಡು ಹತ್ಯೆಗಳನ್ನು ಎಸಗುವುದು ಗುರುತರ ಅಪರಾಧವೇನಲ್ಲ. ಹೆಚ್ಚಿನ ಸಲ ಅವರನ್ನು ತಪ್ಪಿತಸ್ಥರು ಎಂದೇ ಪರಿಗಣಿಸಲಾಗುವುದಿಲ್ಲ. ಕೆಲವೊಮ್ಮೆ ಮಾತ್ರ ಅವರಿಗೆ ಸಣ್ಣಪುಟ್ಟ ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಭಾರತದ ಸಂವಿಧಾನದ ಪ್ರಕಾರ, ಮರ್ಯಾದೆಯ ಹೆಸರಿನಲ್ಲಿ ನಡೆಯುವ ಹತ್ಯೆಗಳು ಸೇರಿದಂತೆ ಎಲ್ಲ ಹತ್ಯೆಗಳೂ ಶಿಕ್ಷಾರ್ಹ ಅಪರಾಧ.
ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆ/ಪದ್ಧತಿಗಳ ಉಲ್ಲಂಘನೆಯ ಕಾರಣಕ್ಕೆ ನಡೆಸಲಾಗುವ ಯಾವುದೇ ರೀತಿಯ ಹಿಂಸೆ, ಒತ್ತಾಯ, ಹಲ್ಲೆ, ಕೊಲೆಯನ್ನು ಅಪರಾಧ ಎಂದೇ ಭಾರತದಲ್ಲಿ ಪರಿಗಣಿಸಲಾಗುತ್ತದೆ. ದೇಶದ ಪ್ರತಿಯೊಬ್ಬ ವಯಸ್ಕ ಹೆಣ್ಣು/ಗಂಡು ಜಾತಿ, ಧರ್ಮ, ಪ್ರಾಂತ್ಯ ಭೇದ ಇಲ್ಲದೇ ತಮಗೆ ಇಷ್ಟವಾದವರನ್ನು ಪ್ರೀತಿಸುವ, ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ, ಮದುವೆಯಾಗುವ ಹಕ್ಕು ಸಂವಿಧಾನದ 19 ಮತ್ತು 20ನೇ ವಿಧಿಗಳಲ್ಲಿ ಇದೆ.
ಹಿಂದೂ ವಿವಾಹ ಕಾಯ್ದೆಯ ಅನ್ವಯ ಅಂತರ್‌ಜಾತೀಯ ಮದುವೆಗಳು ನಿಷಿದ್ಧವಲ್ಲ ಎಂದು ಲತಾ ಸಿಂಗ್ ಮತ್ತು ಉತ್ತರ ಪ್ರದೇಶ ರಾಜ್ಯ ಹಾಗೂ ಇತರರ ಪ್ರಕರಣದಲ್ಲಿ (2006ರ ಜು.7) ಪುನರುಚ್ಚರಿಸಿದ್ದ ಸುಪ್ರೀಂ ಕೋರ್ಟ್, ದೇಶದಲ್ಲಿ ಜಾತಿ ಮೀರಿ ಮದುವೆಯಾಗುವ ದಂಪತಿಗೆ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿತ್ತು.
ಆದರೆ, ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮರ್ಯಾದೆಗೇಡು ಹತ್ಯೆಗಳು ವರದಿಯಾಗುತ್ತಲೇ ಇವೆ. ಉತ್ತರ ಭಾರತದ ರಾಜ್ಯಗಳಲ್ಲಿ ಖಾಪ್ ಪಂಚಾಯತ್‌ಗಳು, ದಕ್ಷಿಣದಲ್ಲಿ ಜಾತಿ ಸಂಘಟನೆ/ಗುಂಪುಗಳು ಪ್ರಬಲವಾಗಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಈ ಪ್ರಕರಣಗಳಲ್ಲಿ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗದಿರುವುದು ಕೂಡ ಪ್ರಕರಣಗಳು ಹೆಚ್ಚಾಗಲು ಕಾರಣ ಎನ್ನುವ ಅಭಿಪ್ರಾಯ ಕಾನೂನು ತಜ್ಞರಲ್ಲಿದೆ.
ಮರ್ಯಾದೆಗೇಡು ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾಯ್ದೆಯನ್ನು ತರಬೇಕು ಎನ್ನುವ ಒತ್ತಾಯ ಬಹಳ ವರ್ಷಗಳಿಂದಲೂ ಕೇಳಿಬರುತ್ತಿದ್ದರೂ ಈ ದಿಕ್ಕಿನಲ್ಲಿ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರಗಳಾಗಲಿ ದೃಢವಾದ ಹೆಜ್ಜೆ ಇಟ್ಟಿಲ್ಲ. ಮರ್ಯಾದೆಗೇಡು ಹತ್ಯೆಯ ಪ್ರವೃತ್ತಿ ಇರುವ ಜಿಲ್ಲೆಗಳನ್ನು ಗುರುತಿಸುವುದು, ಜಾತಿ ಮೀರಿ ಮದುವೆಯಾದ ದಂಪತಿಗೆ ರಕ್ಷಣೆ ನೀಡುವುದು, ಅಕ್ರಮವಾಗಿ ಗುಂಪು ಸೇರುವುದನ್ನು ನಿಷೇಧಿಸುವುದು, 24/7 ಸಹಾಯವಾಣಿ ಸ್ಥಾಪನೆ ಮಾಡುವುದು, ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಮಾಡಬೇಕು ಎಂದು ಸುಪ್ರಿಂ ಕೋರ್ಟ್ ಶಕ್ತಿವಾಹಿನಿ ಮತ್ತು ಭಾರತ ಸರ್ಕಾರ (2018) ಪ್ರಕರಣದಲ್ಲಿ ಮಾರ್ಗಸೂಚಿ ಪ್ರಕಟಿಸಿತ್ತು.
ಮರ್ಯಾದೆಗೇಡು ಹತ್ಯೆಗಳನ್ನು ತಡೆಯುವ ಸಂಬಂಧ ಪ್ರತ್ಯೇಕ ಕಾಯ್ದೆ ತರುವ ವಿಚಾರದ ಬಗ್ಗೆ ಆಗಲಿ, ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಪಾಲನೆಯ ವಿಚಾರದ ಬಗ್ಗೆ ಆಗಲಿ, ರಾಜ್ಯಗಳು ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ಇದರಿಂದ ಮರ್ಯಾದೆಗೇಡು ಪ್ರಕರಣಗಳು ವರದಿಯಾದ ಪ್ರಮಾಣದಲ್ಲಿಯೇ ಅವುಗಳ ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ ಎನ್ನುವ ದೂರು ವ್ಯಾಪಕವಾಗಿದೆ.
ಪಾಠವಾಗಲಿ ಮಿರ‍್ಯಾಲಗೂಡದ ಪ್ರಕರಣ
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ‍್ಯಾಲಗೂಡದ ದಲಿತ ಪ್ರಣಯ್ ಕುಮಾರ್ ಮತ್ತು ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದ ಅಮೃತ ವರ್ಷಿಣಿ ಚಿಕ್ಕಂದಿನಿಂದಲೂ ಸ್ನೇಹಿತರಾಗಿದ್ದರು. ತಾರುಣ್ಯಕ್ಕೆ ಅಡಿಯಿಡುವ ವೇಳೆಗೆ ಅವರು ಪ್ರೇಮಿಗಳಾಗಿ ಬದಲಾಗಿದ್ದರು. ಉದ್ಯಮಿಯಾಗಿದ್ದ ಅಮೃತ ವರ್ಷಿಣಿ ತಂದೆ ಮಾರುತಿರಾವ್ ಅವರಿಗೆ ಮಗಳು ದುರ್ಬಲ ಜಾತಿಯ ಯುವಕನನ್ನು ಮದುವೆಯಾಗಿದ್ದನ್ನು ಅರಗಿಸಿಕೊಳ್ಳಲಾಗದೇ, ಸುಪಾರಿ ಹಂತಕರ ನೆರವಿನಿಂದ 2018ರ ಸೆ.14ರಂದು ಪ್ರಣಯ್‌ನನ್ನು ಕೊಲೆ ಮಾಡಿಸಿದರು. ಪ್ರಕರಣದ ಸಂಬಂಧ ಪೊಲೀಸರು 2019ರ ಜೂನ್‌ನಲ್ಲಿ ಎಂಟು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆಯ ಹಂತದಲ್ಲಿದ್ದಾಗಲೇ, ಮೊದಲ ಆರೋಪಿ ಆರೋಪಿ ಮಾರುತಿರಾವ್ ಶಿಕ್ಷೆಯಾಗಬಹುದು ಎನ್ನುವ ಭಯದಿಂದ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. 78 ಸಾಕ್ಷಿಗಳು ಇದ್ದ ಪ್ರಕರಣದ ಬಗ್ಗೆ ಕೋರ್ಟ್ 250 ವಿಚಾರಣೆಗಳನ್ನು ನಡೆಸಿ ಆದೇಶ ನೀಡಿತು. ಸುಪಾರಿ ಹಂತಕನಾಗಿದ್ದ ಆರೋಪಿ (ಎ2) ಸುಭಾಷ್‌ಕುಮಾರ್ ಶರ್ಮಗೆ ಮರಣ ದಂಡನೆ ವಿಧಿಸಿ, ಉಳಿದ ಆರು ಮಂದಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ.
ಬೆಳಕಿಗೆ ಬರುವುದು ಕಡಿಮೆ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (ಎನ್‌ಸಿಆರ್‌ಬಿ) ವೆಬ್‌ತಾಣದಲ್ಲಿ 2022ರವರೆಗಿನ ಅಂಕಿ ಅಂಶಗಳು ಲಭ್ಯವಿವೆ. ಅದರ ಪ್ರಕಾರ, 2017ರಿಂದೀಚೆಗೆ ಕರ್ನಾಟಕದಲ್ಲಿ 2021ರಲ್ಲಿ ಮಾತ್ರ ಒಂದು ಮರ್ಯಾದೆಗೇಡು ಪ್ರಕರಣ ನಡೆದಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಅವು ಹೊರಗೆ ಬರುವುದಿಲ್ಲ. ಜಾತಿಪೀಡಿತ ಸಮಾಜವಾದ್ದರಿಂದ ಅನೇಕ ಪ್ರಕರಣಗಳು ಪೊಲೀಸ್, ನ್ಯಾಯಾಲಯದಲ್ಲಿ ದಾಖಲಾಗುವುದೇ ಇಲ್ಲ. ಒಂದು ವೇಳೆ ಪ್ರಕರಣ ದಾಖಲಾದರೂ ನ್ಯಾಯಬದ್ಧ ರೀತಿಯಲ್ಲಿ ಪ್ರಕ್ರಿಯೆಗಳು ನಡೆದು, ಸೂಕ್ತ ಸಾಕ್ಷ್ಯಗಳು ಸಿಕ್ಕಿ, ಆರೋಪ ಸಾಬೀತಾಗಬೇಕು. ಈ ಬಗ್ಗೆ ಅಧಿಕೃತ ಅಂಕಿಸಂಖ್ಯೆ ಲಭ್ಯವಿಲ್ಲವಾದರೂ ಮರ್ಯಾದೆಗೇಡು ಹತ್ಯೆಗಳ ಸಂಬಂಧ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತಿರುವ ಪ್ರಮಾಣ ಕಡಿಮೆ ಇದ್ದು, ಈ ನಿಟ್ಟಿನಲ್ಲಿ ವಿಶೇಷ ಕಾನೂನು ಜಾರಿ ಮಾಡಬೇಕು ಎನ್ನುವ ಒತ್ತಾಯ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ.
ಈ ಹಿಂದೆ ರಾಜ್ಯದ ಮಂಡ್ಯ, ಕೋಲಾರ, ತುಮಕೂರು, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ವರದಿಯಾಗಿವೆ.
* 2023ರಲ್ಲಿ ಕೋಲಾರ ಜಿಲ್ಲೆಯೊಂದರಲ್ಲೇ ಮೂರು ಮರ್ಯಾದೆಗೇಡು ಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಅದೇ ವರ್ಷ ರಾಜಧಾನಿ ಬೆಂಗಳೂರಿನಲ್ಲೂ ಒಂದು ಪ್ರಕರಣ ವರದಿಯಾಗಿತ್ತು. ಕಳೆದ ತಿಂಗಳು ಬೆಂಗಳೂರು ಸಮೀಪದ ಆನೇಕಲ್‌ನಲ್ಲಿ ಶಂಕಿತ ಮರ್ಯಾದೆಗೇಡು ಹತ್ಯೆ ಪ್ರಕರಣ ವರದಿಯಾಗಿದೆ
* 2017ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅಂತರಧರ್ಮೀಯ ಮದುವೆಯಾಗಿದ್ದಕ್ಕೆ ಗರ್ಭಿಣಿಯನ್ನು ಆಕೆಯ ಕುಟುಂಬಸ್ಥರು ಕೊಂದಿದ್ದರು. ವಿಜಯಪುರದ ನ್ಯಾಯಾಲಯವು ಹತ್ಯೆ ಮಾಡಿದ್ದ ಇಬ್ಬರಿಗೆ ಗಲ್ಲು ಶಿಕ್ಷೆ ಹಾಗೂ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಳೆದ ವರ್ಷದ ಮೇ ತಿಂಗಳಲ್ಲಿ ಆದೇಶ ಹೊರಡಿಸಿತ್ತು
* 2019ರಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನಲ್ಲಿ, ಕುಟುಂಬಸ್ಥರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ಜೋಡಿಯನ್ನು ಕೊಲೆ ಮಾಡಲಾಗಿತ್ತು. ಕೃತ್ಯ ಎಸಗಿದ್ದ ಮಹಿಳೆಯ ನಾಲ್ವರು ಸಂಬಂಧಿಕರಿಗೆ ಈ ವರ್ಷದ ಜನವರಿ 31ರಂದು ಗದಗದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿ ಆದೇಶಿಸಿದೆ.
ಪೊಲೀಸರು ಮರ್ಯಾದೆಗೇಡು ಹತ್ಯೆ ಪ್ರಕರಣಗಳ ತನಿಖೆಯನ್ನೂ ಕೊಲೆ ಪ್ರಕರಣದ ಸೆಕ್ಷನ್ ಅಡಿಯೇ ನಡೆಸುತ್ತಾರೆ. ಭಾರತೀಯ ನ್ಯಾಯ ಸಂಹಿತೆ ಅಥವಾ ಹಿಂದಿನ ಐಪಿಸಿಯಲ್ಲೂ ಈ ಪ್ರಕರಣಗಳಿಗೆ ಪ್ರತ್ಯೇಕ ಸೆಕ್ಷನ್ ಇಲ್ಲ. ತನಿಖೆ ನಡೆಸುವ ಪೊಲೀಸರು ಕೋರ್ಟ್‌ಗೆ ಸಲ್ಲಿಸುವ ಆರೋಪಪಟ್ಟಿಯಲ್ಲಿ ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದನ್ನು ಉಲ್ಲೇಖಿಸುತ್ತಾರೆ. ಮರ್ಯಾದೆಗೇಡು ಹತ್ಯೆ ಪ್ರಕರಣವು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103ರ (ಹಿಂದಿನ ಐಪಿಸಿ ಸೆಕ್ಷನ್ 302) ವ್ಯಾಪ್ತಿಗೆ ಬರುತ್ತದೆ. ಎನ್‌ಸಿಆರ್‌ಬಿಯು 2014ರಿಂದ ಮರ್ಯಾದೆಗೇಡು ಹತ್ಯೆ ಪ್ರಕರಣಗಳನ್ನು ತನ್ನ ವರದಿಯಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸುತ್ತಿದೆ.
ಆಧಾರ: ಪಿಟಿಐ, ಸೆಂಟರ್ ಫಾರ್ ಲಾ ಪಿಲಿಸಿ ಆ್ಯಂಡ್ ರಿಸರ್ಚ್, ಸಂಸತ್ತಿನಲ್ಲಿ ಸಚಿವರ ಉತ್ತರಗಳು, ಎನ್‌ಸಿಆರ್‌ಬಿ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.