
ಥಾಯ್ಲೆಂಡ್ ವಾಯುದಾಳಿ ನಡೆಸುತ್ತಿರುವುದರಿಂದ ಕಾಂಬೋಡಿಯಾದ ಸಿಯೆಮ್ ರೀಪ್ ಪ್ರಾಂತ್ಯದ ನಿವಾಸಿಗಳು ತಮ್ಮ ವಾಹನಗಳಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಿದರು
ಹಮಾಸ್–ಇಸ್ರೇಲ್ ಸಂಘರ್ಷ ಮತ್ತು ರಷ್ಯಾ–ಉಕ್ರೇನ್ ಯುದ್ಧದ ಬೆನ್ನಲ್ಲೇ ಈಗ ಮತ್ತೆರಡು ರಾಷ್ಟ್ರಗಳ ನಡುವೆ ಸಂಘರ್ಷ ತಲೆದೋರಿದೆ. ಥಾಯ್ಲೆಂಡ್–ಕಾಂಬೋಡಿಯಾ ಪರಸ್ಪರ ಕಾದಾಟಕ್ಕಿಳಿದಿದ್ದು, ಎರಡೂ ಕಡೆ ಸಾವು–ನೋವು ವರದಿಯಾಗಿವೆ. ವಾಸ್ತವವಾಗಿ ಈ ಎರಡು ದೇಶಗಳ ನಡುವಿನ ವೈಮನಸ್ಸಿಗೆ ಶತಮಾನದ ಇತಿಹಾಸವಿದೆ. ಹಾಗೆಯೇ ದೀರ್ಘಕಾಲದಿಂದಲೂ ಇವುಗಳ ನಡುವೆ ಕದನ ವಿರಾಮ ಜಾರಿಯಲ್ಲಿತ್ತು. ಆದರೆ, ಈ ವರ್ಷ ಪದೇ ಪದೇ ಕದನ ವಿರಾಮ ಉಲ್ಲಂಘನೆಯಾಗಿದ್ದು, ಪ್ರಸ್ತುತ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ
ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಜಗತ್ತಿನಲ್ಲಿ ಅತ್ಯಂತ ಸ್ನೇಹದಿಂದಿರುವ ರಾಷ್ಟ್ರಗಳು ಎಂದು ಒಂದು ಕಾಲದಲ್ಲಿ ಹೆಸರಾಗಿದ್ದವು. ಶತಮಾನದ ವೈಮನಸ್ಸಿನ ಹೊರತಾಗಿಯೂ ಗಡಿಯಲ್ಲಿ ಶಾಂತಿ ನೆಲಸಿತ್ತು. ‘ನಾವು ಅತಿ ಉದ್ದದ ಗಡಿ ಹಂಚಿಕೊಂಡಿದ್ದೇವೆ. ಜತೆಗೇ ಬದುಕಬೇಕು, ಜತೆಗೇ ಬೆಳೆಯಬೇಕು ಎನ್ನುವುದು ನಮಗೆ ಗೊತ್ತಿದೆ’ ಎಂದು ಐದು ವರ್ಷಗಳ ಹಿಂದೆ ಎರಡೂ ರಾಷ್ಟ್ರಗಳು ಪುನರುಚ್ಚರಿಸಿದ್ದವು. ಆದರೆ, ಅವುಗಳ ಸ್ನೇಹದ ಮಾತುಗಳು ಹಿಂದೆ ಸರಿದಿದ್ದು, ಸಂಘರ್ಷದ ಮಾತುಗಳು ಮುನ್ನೆಲೆಗೆ ಬಂದಿವೆ.
ಈ ವರ್ಷದ ಜುಲೈನಲ್ಲಿ ಐದು ದಿನ ತೀವ್ರ ಸಂಘರ್ಷ ನಡೆದಿತ್ತು. ಚೀನಾ, ಅಮೆರಿಕ, ಮಲೇಷ್ಯಾದ ಪ್ರಯತ್ನದಿಂದಾಗಿ ನಂತರ ಕದನವಿರಾಮ ಘೋಷಿಸಲಾಗಿತ್ತು. ಅಕ್ಟೋಬರ್ ಕೊನೆಯವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಕ್ವಾಲಾಲಂಪುರದಲ್ಲಿ ಎರಡೂ ರಾಷ್ಟ್ರಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದಾಗಿ, ಒಂದೂವರೆ ತಿಂಗಳಲ್ಲಿ ಒಪ್ಪಂದ ಮುರಿದು ಬಿದ್ದಿದೆ. ಡಿ.8ರಿಂದ ಆರಂಭವಾಗಿರುವ ಸಂಘರ್ಷ ತೀವ್ರ ಸ್ವರೂಪ ಪಡೆಯುತ್ತಿದೆ.
ಕಾಂಬೋಡಿಯಾವು 1953ರವರೆಗೆ ಫ್ರಾನ್ಸ್‌ನ ವಶದಲ್ಲಿತ್ತು. ಫ್ರೆಂಚರ ವಸಾಹತುಶಾಹಿ ಆಡಳಿತದಲ್ಲೇ, 1907ರಲ್ಲಿ ಎರಡೂ ರಾಷ್ಟ್ರಗಳ ಗಡಿಯನ್ನು ಗುರುತಿಸಲಾಗಿತ್ತು. ಆದರೆ, ಥಾಯ್ಲೆಂಡ್ ಅದಕ್ಕೆ ಒಪ್ಪಿಲ್ಲ. ಹೀಗಾಗಿ ಎರಡೂ ರಾಷ್ಟ್ರಗಳ ನಡುವೆ ಆಗಾಗ್ಗೆ ಗಡಿ ತಗಾದೆ ಹುಟ್ಟಿಕೊಳ್ಳುತ್ತಿತ್ತು. ಅದು ತೀರಾ ವಿಕೋಪಕ್ಕೆ ಹೋಗುವುದಕ್ಕೆ ಎರಡೂ ರಾಷ್ಟ್ರಗಳು ಆಸ್ಪದ ನೀಡಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವರ್ಷ ಅದು ಗಂಭೀರ ಸ್ಥಿತಿಗೆ ತಲುಪಿದೆ.
ಪ್ರಹ್ ವಿಹಿಯರ್ ದೇವಾಲಯ ಸಂಕೀರ್ಣದ ನೋಟ
ಸಂಘರ್ಷದ ಹಾದಿ:
ಮೇ 28ರಂದು ‘ಎಮರಾಲ್ಡ್ ಟ್ರಯಾಂಗಲ್’ ಎಂಬ ಪ್ರದೇಶದಲ್ಲಿ ಎರಡೂ ಸೇನೆಗಳ ನಡುವೆ ಸಂಘರ್ಷ ನಡೆದಿತ್ತು. ಆ ಪ್ರದೇಶದ ಒಡೆತನದ ಬಗ್ಗೆ ಎರಡೂ ರಾಷ್ಟ್ರಗಳು ಹಕ್ಕು ಸಾಧಿಸುತ್ತಿವೆ. ಸಂಘರ್ಷದಲ್ಲಿ ಕಾಂಬೋಡಿಯಾದ ಒಬ್ಬ ಸೈನಿಕ ಹತನಾಗಿದ್ದ. ಕೆರಳಿದ ಕಾಂಬೋಡಿಯಾ ಪ್ರತ್ಯುತ್ತರ ನೀಡುವುದರೊಂದಿಗೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಎರಡೂ ದೇಶಗಳಲ್ಲಿನ ಆಂತರಿಕ ಒತ್ತಡದಿಂದ ಪರಿಸ್ಥಿತಿ ಬಿಗಡಾಯಿಸಿತ್ತು. ಥಾಯ್ಲೆಂಡ್ ಸೇನೆಯು ಗಡಿಯಲ್ಲಿನ ಚೆಕ್ ಪೋಸ್ಟ್‌ಗಳನ್ನು ಹಿಡಿತಕ್ಕೆ ತೆಗೆದುಕೊಂಡಿತು ಮತ್ತು ವಿದ್ಯುತ್ ಪೂರೈಕೆಯನ್ನು, ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವ ಬೆದರಿಕೆ ಹಾಕಿತು. ಅದಕ್ಕೆ ಪ್ರತ್ಯುತ್ತರವಾಗಿ ಕಾಂಬೋಡಿಯಾವು ಥಾಯ್ ಟಿವಿ ಚಾನೆಲ್‌ಗಳು, ಸಿನಿಮಾಗಳು ಮತ್ತು ಥಾಯ್ಲೆಂಡ್‌ನಿಂದ ವಸ್ತುಗಳು ರಫ್ತಾಗದಂತೆ ನಿರ್ಬಂಧ ವಿಧಿಸಿತು. ಕಾಂಬೋಡಿಯಾ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಪತ್ರವನ್ನೂ ಬರೆಯಿತು. ಥಾಯ್ಲೆಂಡ್ ದ್ವಿಪಕ್ಷೀಯ ಮಾತುಕತೆ ಮೂಲಕ ಮಾತ್ರವೇ ಗಡಿ ವಿವಾದ ಬಗೆಹರಿಸಿಕೊಳ್ಳಬೇಕು ಎನ್ನುವ ನಿಲುವಿಗೆ ಅಂಟಿಕೊಂಡಿತು.
ಜುಲೈನಲ್ಲಿ ಗಡಿಭಾಗದಲ್ಲಿ ಗಸ್ತು ತಿರುಗುತ್ತಿದ್ದ ಥಾಯ್ಲೆಂಡ್ ಸೈನಿಕನೊಬ್ಬ ನೆಲಬಾಂಬ್ ಸ್ಫೋಟಗೊಂಡು ಸಾವಿಗೀಡಾಗಿದ್ದ. ಇದಕ್ಕೆ ಕಾಂಬೋಡಿಯಾ ಕಾರಣ ಎಂದು ಥಾಯ್ಲೆಂಡ್ ಆರೋಪಿಸಿತ್ತು. ಈ ಘಟನೆ ತೀವ್ರ ಘರ್ಷಣೆಗೆ ಕಾರಣವಾಯಿತು. ಯುದ್ಧವಿಮಾನ, ಡ್ರೋನ್ ಸೇರಿದಂತೆ ಇನ್ನಿತರ ಶಸ್ತ್ರಾಸ್ತ್ರಗಳ ಸಹಿತ ನಡೆದ ಸಮರವು ಐದು ದಿನಗಳಲ್ಲಿ ತಾತ್ಕಾಲಿಕವಾಗಿ ಕೊನೆಗೊಂಡಿತ್ತು. ಸೈನಿಕರು, ನಾಗರಿಕರು ಸೇರಿ 48 ಜನರು ಮೃತಪಟ್ಟಿದ್ದರು. ಮೂರು ಲಕ್ಷದಷ್ಟು ಜನರು ನಿರಾಶ್ರಿತರಾಗಿದ್ದರು.
ಟ್ರಂಪ್ ಮಧ್ಯಸ್ಥಿಕೆಯಲ್ಲಿ ಅಕ್ಟೋಬರ್‌ನಲ್ಲಿ ನಡೆದ ಶಾಂತಿ ಒಪ್ಪಂದದ ನಂತರ ಪರಿಸ್ಥಿತಿ ತಿಳಿಯಾಗಬಹುದು ಎಂಬ ನಿರೀಕ್ಷೆ ನವೆಂಬರ್‌ನಲ್ಲಿ ಮತ್ತೊಂದು ನೆಲಬಾಂಬ್ ಸ್ಫೋಟಗೊಂಡಾಗ ಹುಸಿಯಾಯಿತು. ಆ ಘಟನೆಯಲ್ಲಿ ಥಾಯ್ಲೆಂಡ್‌ನ ಸೈನಿಕನೊಬ್ಬ ಗಾಯಗೊಂಡಿದ್ದ. ಡಿಸೆಂಬರ್ 8ರಂದು ಕಾಂಬೋಡಿಯಾ ಸೇನೆಯು ತನ್ನ ಸೈನಿಕನನ್ನು ಹತ್ಯೆ ಮಾಡಿದೆ ಎಂದು ಥಾಯ್ಲೆಂಡ್ ಆರೋಪಿಸಿದ ನಂತರ ಸಂಘರ್ಷ ತೀವ್ರಗೊಂಡಿದೆ. ಪ್ರಸ್ತುತ, ಕಾಂಬೋಡಿಯಾದ ಮೇಲೆ ಥಾಯ್ಲೆಂಡ್ ವಾಯುದಾಳಿಯನ್ನು ಮುಂದುವರಿಸುತ್ತಿದೆ. ಎರಡೂ ಕಡೆ ಸೈನಿಕರು, ನಾಗರಿಕರ ಸಾವುಗಳು ಸಂಭವಿಸಿವೆ. 32 ಜನರು ಮೃತಪಟ್ಟು, ಎಂಟು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಎರಡೂ ರಾಷ್ಟ್ರಗಳು ಪರಸ್ಪರರನ್ನು ಕದನ ವಿರಾಮ ಉಲ್ಲಂಘನೆಗೆ ಕಾರಣ ಎನ್ನುತ್ತಿವೆ. ಸಂಘರ್ಷವು ತೀವ್ರಗೊಳ್ಳುವ ಸೂಚನೆಗಳು ಕಾಣುತ್ತಿವೆ.
ಸಂಘರ್ಷದ ಕೇಂದ್ರಬಿಂದು ದೇವಾಲಯ ಸಂಕೀರ್ಣ
ಎರಡೂ ದೇಶಗಳ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣ ಒಂದು ದೇವಾಲಯ ಮತ್ತು ಅದರ ಆಸ್ತಿ, ಗಡಿ ಭಾಗದಲ್ಲಿರುವ ಪ್ರಹ್ ವಿಹಿಯರ್ ದೇವಾಲಯದ ಸಂಕೀರ್ಣದ ಮಾಲೀಕತ್ವ ಯಾರಿಗೆ ಸೇರಬೇಕು ಎಂಬುದು. 11ನೇ ಶತಮಾನದಲ್ಲಿ ನಿರ್ಮಿಸಲಾಗಿರುವ, ಯುನೆಸ್ಕೊ ಪಾರಂಪರಿಕ ತಾಣ ಎಂಬ ಸ್ಥಾನಮಾನ ಪಡೆದಿರುವ ಈ ಶಿವನ ದೇವಾಲಯಗಳ ಸಂಕೀರ್ಣವು ತನ್ನದು ಎಂಬುದು ಥಾಯ್ಲೆಂಡ್ ವಾದ. ಆದರೆ, ಇದರ ನಿಯಂತ್ರಣವನ್ನು ಕಾಂಬೋಡಿಯಾ ಹೊಂದಿದೆ. ಅಂತರರಾಷ್ಟ್ರೀಯ ನ್ಯಾಯಾಲಯ ಕೂಡ ಈ ಸಂಕೀರ್ಣ ಹಾಗೂ ಸುತ್ತಮುತ್ತಲಿನ ಆಸ್ತಿ ಕಾಂಬೋಡಿಯಾಕ್ಕೆ ಸೇರಿದ್ದು ಎಂದು 1962ರಲ್ಲಿ ಮತ್ತು 2013ರಲ್ಲಿ ತೀರ್ಪು ನೀಡಿದೆ.
ದೇವಾಲಯ ಮತ್ತು ಅದರ ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಬಿಕ್ಕಟ್ಟು 1954ರಿಂದಲೂ ಇದ್ದರೂ, ಅದು ತೀವ್ರ ಸ್ವರೂಪ ಪಡೆದಿದ್ದು 2008ರ ನಂತರ. ಆ ದೇವಾಲಯಕ್ಕೆ ಪಾರಂಪರಿಕ ತಾಣ ಸ್ಥಾನ ನೀಡಬೇಕು ಎಂದು ಕಾಂಬೋಡಿಯಾ ಆಡಳಿತ ಯುನೆಸ್ಕೊಗೆ ಆ ವರ್ಷ ಮನವಿ ಮಾಡಿತ್ತು. ಅಂದಿನಿಂದಲೂ ಉಭಯ ದೇಶಗಳ ನಡುವಿನ ಗಡಿ ಭಾಗದಲ್ಲಿ ಉದ್ವಿಗ್ನತೆ ನೆಲಸಿದೆ.
ಕಾಂಬೋಡಿಯಾದಲ್ಲಿನ ಪುರಾತನ ದೇವಾಲಯಗಳ ಸಂರಕ್ಷಣೆಯಲ್ಲಿ ಭಾರತದ ಪುರಾತತ್ವ ಇಲಾಖೆಯೂ ತೊಡಗಿದೆ. ಪ್ರಹ್ ವಿಹಿಯರ್ ದೇವಾಲಯದ ಪುನರುಜ್ಜೀವನದಲ್ಲೂ ಭಾರತ ಪಾಲುದಾರ. ಆದರೆ, ಎರಡೂ ದೇಶಗಳ ನಡುವಿನ ಘರ್ಷಣೆಯು ಈ ದೇವಾಲಯವೂ ಸೇರಿದಂತೆ ಗಡಿ ಭಾಗದಲ್ಲಿರುವ ಪುರಾತನ ದೇವಸ್ಥಾನಗಳಿಗೂ ಹಾನಿಯಾಗುತ್ತಿದೆ. ಭಾರತವು ಕಳೆದ ವರ್ಷವೇ ಈ ಬಗ್ಗೆ ಕಳವಳ ವ್ಯಕ್ತಪಡಿಸಿ, ಎರಡೂ ದೇಶಗಳು ಮಾತುಕತೆಯ ಮೂಲಕ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿತ್ತು.
ಕಾಂಬೋಡಿಯಾದ ನಿರಾಶ್ರಿತರ ಶಿಬಿರವೊಂದರ ನೋಟ
ಗಡಿ ಒಪ್ಪದ ಥಾಯ್ಲೆಂಡ್
ಕಾಂಬೋಡಿಯಾವು ಫ್ರಾನ್ಸ್ ವಸಾಹತುಶಾಹಿ ಆಡಳಿತದಲ್ಲಿದ್ದಾಗ, 1907ರಲ್ಲಿ ಎರಡೂ ದೇಶಗಳ ನಡುವೆ ಗಡಿಯನ್ನು ಗುರುತಿಸಲಾಗಿತ್ತು. ಆಗ ಗುರುತಿಸಿರುವ ಗಡಿ ಸರಿ ಇಲ್ಲ ಎಂಬುದು ಥಾಯ್ಲೆಂಡ್‌ನ ವಾದ. ಅಂತರರಾಷ್ಟ್ರೀಯ ನ್ಯಾಯಾಲಯವು ಎರಡು ಬಾರಿ (1962 ಮತ್ತು 2013) ಕಾಂಬೋಡಿಯಾದ ಪರವಾಗಿ ತೀರ್ಪು ನೀಡಿದ್ದರೂ, ಥಾಯ್ಲೆಂಡ್ ಅನ್ನು ಒಪ್ಪಿಲ್ಲ. ಈ ಕಾರಣಕ್ಕೆ 2008 ಮತ್ತು 2011ರ ನಡುವೆ ಹಲವು ಬಾರಿ ಸೇನಾ ಸಂಘರ್ಷ ನಡೆದಿತ್ತು.
ರಣಾಂಗಣದಲ್ಲಿ ಚೀನಾ ಶಸ್ತಾಸ್ತ್ರಗಳ ಪ್ರಯೋಗ
ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತವು ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ವೇಳೆ ಪಾಕಿಸ್ತಾನವು ಚೀನಾದ ಶಸ್ತ್ರಾಸ್ತ್ರಗಳನ್ನು ಬಳಸಿತ್ತು. ಭಾರತದ ರಷ್ಯಾ ಮತ್ತು ಫ್ರಾನ್ಸ್ ನಿರ್ಮಿತ ಕ್ಷಿಪಣಿಗಳು ಮತ್ತು ರಫೇಲ್ ಯುದ್ಧವಿಮಾನ, ಎಸ್–400 ವಾಯು ರಕ್ಷಣಾ ವ್ಯವಸ್ಥೆಗಳಿಗೆ ವಿರುದ್ಧವಾಗಿ ಪಾಕಿಸ್ತಾನವು ಚೀನಾದಿಂದ ಆಮದು ಮಾಡಿಕೊಂಡಿದ್ದ ಅಸ್ತ್ರಗಳನ್ನು ಪ್ರಯೋಗಿಸಿತ್ತು.
ಈಗ ಮತ್ತೊಮ್ಮೆ ಚೀನಾದ ಶಸ್ತ್ರಾಸ್ತ್ರಗಳು ಪ್ರಯೋಗಕ್ಕೆ ಒಳಗಾಗುತ್ತಿವೆ. ಎರಡು ದಶಕಗಳಿಂದಲೂ ಚೀನಾ ಕಾಂಬೋಡಿಯಾಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಇನ್ನೊಂದೆಡೆ, ಥಾಯ್ಲೆಂಡ್ ಕೂಡ ಚೀನಾದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ. ತನ್ನ ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆಯನ್ನು ಕಂಡುಕೊಳ್ಳಲು ಚೀನಾಗೆ ಉತ್ತಮ ಅವಕಾಶ ದೊರಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಂದೇನು?
ಡಿ.8ರಂದು ಆರಂಭಗೊಂಡಿರುವ ಸಂಘರ್ಷ ಮುಂದುವರಿಯುತ್ತಲೇ ಇದ್ದು, ಹಿಂದಿನಕ್ಕಿಂತಲೂ ಹೆಚ್ಚು ತೀವ್ರವಾಗಿದೆ. ಮೊದಲು ಕಾಂಬೋಡಿಯಾ ಕದನ ವಿರಾಮ ಘೋಷಿಸಬೇಕು ಎಂದು ಥಾಯ್ಲೆಂಡ್ ಪಟ್ಟು ಹಿಡಿದಿದೆ. ಇದರ ಬಗ್ಗೆ ಕಾಂಬೋಡಿಯಾ ಇನ್ನೂ ಪ್ರತಿಕ್ರಿಯಿಸಿಲ್ಲ. ಸದ್ಯಕ್ಕೆ ಘರ್ಷಣೆ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಈ ಸಂಘರ್ಷದಲ್ಲಿ ತಾನು ಸಂತ್ರಸ್ತ ಎಂದು ಬಿಂಬಿಸಿಕೊಳ್ಳಲು ಕಾಂಬೋಡಿಯಾ ಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಸೇನಾ ದೃಷ್ಟಿಯಿಂದ ಥಾಯ್ಲೆಂಡ್ ಹೆಚ್ಚು ಶಕ್ತಿಯನ್ನು ಹೊಂದಿದೆ.
ಮಲೇಷ್ಯಾ ಅಧ್ಯಕ್ಷತೆಯಲ್ಲಿ ಆಸಿಯಾನ್ ರಾಷ್ಟ್ರಗಳ ವಿದೇಶಾಂಗ ಸಚಿವರ ವಿಶೇಷ ಸಭೆ ಇದೇ 22ರಂದು ನಡೆಯಲಿದೆ. ಅಲ್ಲಿ ಈ ಸಂಘರ್ಷದ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ. ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಿಸಲು ಆಸಿಯಾನ್ ಯತ್ನಿಸಲಿದೆ ಎನ್ನಲಾಗುತ್ತಿದೆ.
ದೂರವಾಣಿ ಕರೆ ಸೋರಿಕೆ, ಪ್ರಧಾನಿ ವಜಾ
ಜುಲೈನಲ್ಲಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ಸೇನಾ ಸಂಘರ್ಷ ನಡೆಯುತ್ತಿದ್ದ ಸಂದರ್ಭದಲ್ಲೇ ಆಗ ಥಾಯ್ಲೆಂಡ್ ಪ್ರಧಾನಿಯಾಗಿದ್ದ ಪ್ಯಾಂಟೋಗ್ಟರ್ನ್ ಶಿನವಾತ್ರ ಅವರು ಕಾಂಬೋಡಿಯಾದ ಮಾಜಿ ನಾಯಕ ಹುನ್ ಸೆನ್ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದ ವಿವರ ಸೋರಿಕೆಯಾಗಿದ್ದು ಶಿನವಾತ್ರ ಅಧಿಕಾರಕ್ಕೆ ಕುತ್ತು ತಂದಿತ್ತು.
ದೂರವಾಣಿಯಲ್ಲಿ ಮಾತನಾಡುವಾಗ ಶಿನವಾತ್ರ ಅವರು ಹುನ್ ಸೆನ್ ಅವರನ್ನು ‘ಅಂಕಲ್’ ಎಂದು ಕರೆದಿದ್ದಲ್ಲದೇ, ಥಾಯ್ಲೆಂಡ್‌ನ ಸೇನೆಯನ್ನು ಟೀಕಿಸಿದ್ದರು. ಹುನ್ ಸೆನ್ ಅವರೇ ಈ ಕರೆಯ ವಿವರಗಳನ್ನು ಸೋರಿಕೆ ಮಾಡಿದ್ದರು. ಇದು ಥಾಯ್ಲೆಂಡ್‌ನಲ್ಲಿ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿತ್ತು. ಪ್ರಧಾನಿಯಾಗಿ ಪ್ಯಾಂಟೋಗ್ಟರ್ನ್ ಅವರು ನೈತಿಕತೆಯ ಗೆರೆಯನ್ನು ಉಲ್ಲಂಘಿಸಿದ್ದಾರೆ, ವಿರೋಧಿ ರಾಷ್ಟ್ರದ ನಾಯಕನೊಂದಿಗೆ ಸೇರಿ ದೇಶದ ಸೈನ್ಯವನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ನ್ಯಾಯಾಲಯವು ಶಿವವಾತ್ರ ಅವರನ್ನು ಪ್ರಧಾನಿ ಹುದ್ದೆಯಿಂದ ವಜಾ ಮಾಡುವಂತೆ ತೀರ್ಪು ನೀಡಿತ್ತು. ಶಿನವಾತ್ರ ರಾಜಕೀಯ ಮನೆತನಕ್ಕೆ ಸೇರಿದ ಪ್ಯಾಂಟೋಗ್ಟರ್ನ್ ಅಸಾಧಾರಣ ರೀತಿಯಲ್ಲಿ 2024ರಲ್ಲಿ ಅಧಿಕಾರಕ್ಕೇರಿದ್ದರು. ಆದರೆ, ಅನಿರೀಕ್ಷಿತವಾಗಿ ಅವರ ಅಧಿಕಾರ ಅಂತ್ಯ ಕಂಡಿತ್ತು.
ಆಧಾರ: ಎಪಿ, ಎಎಫ್‌ಪಿ, ಬಿಬಿಸಿ, ರಾಯಿಟರ್ಸ್, ಟೈಮ್, ದಿ ಗಾರ್ಡಿಯನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.