ADVERTISEMENT

ಆಳ ಆಗಲ | ಜಗತ್ತಿನ ದಿಕ್ಕನ್ನೇ ಬದಲಿಸಿದ 20 ವಾರಗಳು

​ಪ್ರಜಾವಾಣಿ ವಾರ್ತೆ
Published 15 ಮೇ 2020, 20:00 IST
Last Updated 15 ಮೇ 2020, 20:00 IST
ಕೊರೊನಾ ಸೋಂಕು ಬಾಧಿಸಿದ ಆ 20 ವಾರಗಳು
ಕೊರೊನಾ ಸೋಂಕು ಬಾಧಿಸಿದ ಆ 20 ವಾರಗಳು   
""

ಕಳೆದ 20 ವಾರಗಳು ಜಗತ್ತಿನ ದಿಕ್ಕನ್ನೇ ಸಂಪೂರ್ಣವಾಗಿ ಬದಲಿಸಿಬಿಟ್ಟಿವೆ. ಕೊರೊನಾವೈರಸ್‌ನ ಅಟ್ಟಹಾಸ ಕಂಡ ಈ ಅವಧಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹತ್ತಿರ ಹತ್ತಿರ 50 ಲಕ್ಷದಷ್ಟು ಜನ ಸೋಂಕಿನಿಂದ ಬಳಲಿದ್ದಾರೆ. ಕಳೆದ ಎರಡೂವರೆ ತಿಂಗಳಿನಿಂದ ಆರ್ಥಿಕ ಚಟುವಟಿಕೆಗಳು ಅಕ್ಷರಶಃ ಸ್ತಬ್ಧವಾಗಿವೆ. ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಹಲವು ಕೆಲಸಗಳ ಸ್ವರೂಪ ಸಂಪೂರ್ಣ ಬದಲಾಗಿದೆ. ಸಿರಿವಂತ ರಾಷ್ಟ್ರಗಳ ಆರೋಗ್ಯ ವ್ಯವಸ್ಥೆಯ ಹುಳುಕುಗಳು ಸಹ ಬಟಾಬಯಲಾಗಿವೆ.

ಲಾಕ್‌ಡೌನ್‌ ಕಾರಣದಿಂದ ನೂರಾರು ಕೋಟಿ ಮಂದಿ ಮನೆಗಳಲ್ಲೇ ಬಂದಿಯಾಗಿದ್ದರಿಂದ ಅವರಲ್ಲಿ ಒಂದು ರೀತಿಯ ಅಸಹನೆ ಮನೆಮಾಡಿದೆ. ಇದೀಗ ಒಂದೊಂದೇ ದೇಶಗಳು ನಿರ್ಬಂಧಗಳನ್ನು ಸಡಿಲಿಸುತ್ತಿದ್ದು, ಜನ ಮನೆಯಿಂದ ಆಚೆ ಬರುತ್ತಿದ್ದಾರೆ.

ಲಾಕ್‌ಡೌನ್‌ ಕಾರಣದಿಂದ ಸೋಂಕು ಪ್ರಸರಣಕ್ಕೆ ತಕ್ಷಣ ತಡೆಹಾಕಿದ್ದ ದೇಶಗಳಲ್ಲಿ ನಿರ್ಬಂಧ ಸಡಿಲಿಕೆ ಆಗುತ್ತಿದ್ದಂತೆಯೇ ಹೊಸ ಪ್ರಕರಣಗಳು ವರದಿಯಾಗಿರುವುದು ಕಳವಳ ಮೂಡಿಸಿದೆ. ಉದಾಹರಣೆಗೆ ದಕ್ಷಿಣ ಕೊರಿಯಾದಲ್ಲಿ ಸಂಪೂರ್ಣವಾಗಿ ತಹಬಂದಿಗೆ ಬಂದಿದ್ದ ಕಾಯಿಲೆ, ಈಗ ಮತ್ತೆ ಹರಡುತ್ತಿದೆ.

ADVERTISEMENT

ರೋಗನಿರೋಧಕ ಶಕ್ತಿ ಇಲ್ಲದವರು ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಗಳಲ್ಲೇ ಉಳಿದಿದ್ದರಿಂದ ಅವರಿಗೆ ಸೋಂಕು ಹರಡಿರಲಿಲ್ಲ. ಈಗ ಅವರು ಹೊರಗೆ ಬಿದ್ದಿರುವುದರಿಂದ ಸೋಂಕಿನ ಸಂಪರ್ಕಕ್ಕೆ ಬಂದ ಕೂಡಲೇ ಕಾಯಿಲೆ ಪೀಡಿತರಾಗುತ್ತಿದ್ದಾರೆ ಎಂದು ವಿಜ್ಞಾನಿಗಳು ವಿಶ್ಲೇಷಿಸುತ್ತಿದ್ದಾರೆ. ಕಾಯಿಲೆ ನಿಯಂತ್ರಣಕ್ಕೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ನಡೆದಿವೆಯಾದರೂ ಪರೀಕ್ಷಾ ಹಂತಗಳನ್ನೆಲ್ಲ ದಾಟಿ, ಜನಸಾಮಾನ್ಯರಿಗೆ ಸಿಗುವಂತಾಗಲು ಇನ್ನೊಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಸೋಂಕಿನ ತೀವ್ರವಾಗಿ ಬಾಧಿಸಿದರೆ ಇದೊಂದು ಮಾರಣಾಂತಿಕ ಕಾಯಿಲೆಯೇ ಸರಿ ಎಂದು ವ್ಯಾಖ್ಯಾನಿಸುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು. ಆದರೆ, ಆರಂಭಿಕ ಲಕ್ಷಣಗಳು ಮಾತ್ರ ಇದ್ದವರನ್ನು ಸದ್ಯ ಲಭ್ಯವಿರುವ ಚಿಕಿತ್ಸಾ ವಿಧಾನಗಳಿಂದಲೇ ಗುಣಪಡಿಸಲು ಸಾಧ್ಯವಾಗುತ್ತಿದೆ. ಜಗತ್ತು ನಿಧಾನವಾಗಿ ಕೊರೊನಾ ಸೋಂಕಿನ ಬಿಗಿಹಿಡಿತದಿಂದ ಹೊರಬರುತ್ತಿದೆ. ಆದರೆ, ಭಾರತದಲ್ಲಿ ಇದುವರೆಗೆ ಲಾಕ್‌ಡೌನ್‌ ಕಾರಣದಿಂದ ಕೆಲಸದ ಸ್ಥಳದಲ್ಲೇ ಉಳಿದಿದ್ದ ವಲಸೆ ಕಾರ್ಮಿಕರು ತವರಿಗೆ ಮರಳುತ್ತಿದ್ದು, ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ತಪಾಸಣಾ ಪ್ರಮಾಣ ಹೆಚ್ಚಿಸಿರುವುದು ಸಹ ಪ್ರಕರಣಗಳ ಸಂಖ್ಯೆ ಹೆಚ್ಚಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಸೋಂಕಿನ ತೀವ್ರತೆ ಹೇಗಿದೆ?
80.9%
ಸೋಂಕುಪೀಡಿತರನ್ನು ವೈರಾಣು ಲಘುವಾಗಿ ಬಾಧಿಸಿದೆ
13.8%
ಸೋಂಕುಪೀಡಿತರು ತೀವ್ರವಾಗಿ ಬಳಲಿದ್ದಾರೆ. ಆಸ್ಪತ್ರೆಯಲ್ಲಿ ಅವರಿಗೆ ಹೆಚ್ಚಿನ ಸಮಯದ ಆರೈಕೆ ಮಾಡಲಾಗಿದೆ
4.7%
ಸೋಂಕುಪೀಡಿತರು ಪ್ರಾಣಾಪಾಯ ಎದುರಿಸಿದ್ದಾರೆ. ಅವರಿಗೆ ತುರ್ತು ನಿಗಾ ಘಟಕದಲ್ಲೇ ಚಿಕಿತ್ಸೆ ನೀಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.