ADVERTISEMENT

ವಾರದ ವಿಶೇಷ: ಭಾರತದ ನಗರಗಳ ಜಲಸಂಕಷ್ಟ

ಬೇಸಿಗೆಯಲ್ಲಿ ಹನಿ ಹನಿಗೂ ಹಾಹಾಕಾರ, ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 19:30 IST
Last Updated 14 ನವೆಂಬರ್ 2025, 19:30 IST
   
ಭಾರತದ ನಗರ ಪ್ರದೇಶಗಳ ಜಲ ಬಿಕ್ಕಟ್ಟು, ವೈಪರೀತ್ಯಗಳಿಗೆ ಮೂಲ ಹಾಗೂ ಅಂತಿಮ ಪರಿಹಾರ ಸಿಗಬೇಕು ಎಂದರೆ, ದೇಶದ ಅನೇಕ ರಾಜ್ಯಗಳಲ್ಲಿ ಒಂದು ನಗರದ ಬೆಳವಣಿಗೆಗೆ ಕೊಡುತ್ತಿರುವ ಅಪರಿಮಿತ ಪ್ರಾಮುಖ್ಯ ಮತ್ತು ಚಿಕ್ಕ ಚಿಕ್ಕ ಪಟ್ಟಣಗಳ ಅಭಿವೃದ್ಧಿಯ ನಿರ್ಲಕ್ಷ್ಯ- ಇವೆರಡಕ್ಕೂ ಕಡಿವಾಣ ಬೀಳಬೇಕು. ಒಂದೇ ನಗರಕ್ಕೆ ಹರಿದುಹೋಗುತ್ತಿರುವ ಅಪರಿಮಿತ ಹೂಡಿಕೆ, ಶ್ರೀಮಂತಿಕೆಯ ಕೇಂದ್ರೀಕರಣ ಮತ್ತು ಇದರ ಕಾರಣವಾಗಿ ಮಹಾನಗರಗಳ ಅನಿಯಂತ್ರಿತ 360 ಡಿಗ್ರಿಯ ವಿಸ್ತರಣೆ- ಇವೆಲ್ಲದರ ಕಡಿವಾಣವೇ ಮಹಾನಗರಗಳ ಮಹಾವೈಪರೀತ್ಯಗಳಾದ ಬರ/ಪ್ರವಾಹಗಳಿಗೆ ನೀಡಬಹುದಾದ ಮೂಲ ಚಿಕಿತ್ಸೆ

ನೀರು ಜೀವಸಂಕುಲದ ಅಮೃತ. ಸಕಲ ಚರಾಚರಗಳ ಅಳಿವು ಉಳಿವಿನ ಸಂಜೀವಿನಿ. ಆದರೆ, ಬೇಸಿಗೆ ಬಂತೆಂದರೆ ಈ ಸಂಜೀವಿನಿಗಾಗಿ ಭಾರತದ ಮಹಾನಗರಗಳಲ್ಲಿ ಹಾಹಾಕಾರ. ಮಳೆಗಾಲದಲ್ಲಿ ಅದೇ ನೀರಿನ ರುದ್ರನರ್ತನಕ್ಕೆ ನಲುಗಿ ಹೋಗುವವು ಈ ನಗರಗಳು. ನಮ್ಮ ಬೆಂಗಳೂರು ಇರಲಿ, ರಾಷ್ಟ್ರ ರಾಜಧಾನಿ ದೆಹಲಿಯಾಗಲಿ, ಮುಂಬೈ ಮಹಾನಗರಿಯಾಗಲಿ, ಕೋಲ್ಕತ್ತ ಅಥವಾ ಚೆನ್ನೈ ಇರಲಿ, ಬಹುತೇಕ ಎಲ್ಲ ಮಹಾನಗರಗಳೂ ಜಲಸಂಕಷ್ಟದ ಈ ಎರಡು ವೈಪರೀತ್ಯಗಳಿಂದ ಪ್ರತಿ ವರ್ಷ ನಲುಗಿ ಹೋಗುತ್ತಿವೆ.  

ಒಂದೆಡೆ ನಗರಗಳನ್ನು ನಿಷ್ಕ್ರಿಯಗೊಳಿಸುವ ಪ್ರವಾಹಗಳು, ಇನ್ನೊಂದೆಡೆ ಲಕ್ಷಾಂತರ ಜನರು ಹನಿ ನೀರಿಗೆ ಹೆಣಗಾಡುತ್ತಿರುವ ದೃಶ್ಯ- ಈ ವಿರೋಧಾಭಾಸವು ಮುಂಬೈ, ಬೆಂಗಳೂರು, ಚೆನ್ನೈ, ದೆಹಲಿ ಮತ್ತು ಕೋಲ್ಕತ್ತಾದಂತಹ ಮಹಾನಗರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಹಿಂದೆ ಸಾಲುಸಾಲು ನಿಂತ ಜನರು, ಮಳೆಗಾಲದಲ್ಲಿ ರಸ್ತೆಯನ್ನೇ ನದಿಯನ್ನಾಗಿ ಮಾಡಿರುವ ಪ್ರವಾಹಗಳು; ಈ ‘ಹೈಡ್ರೊ-ಸ್ಕಿಜೋಫ್ರೀನಿಯಾ’ ಎಂಬ ಜಲ ವಿಕೃತಿಯು ಮಹಾನಗರಗಳ ಅನಿಯಂತ್ರಿತ ಬೆಳವಣಿಗೆಯ ಪ್ರತಿಬಿಂಬವಾಗಿದೆ.

ಅಸಮಾನತೆಯ ಬೇರುಗಳು 

ADVERTISEMENT

ಮಾರ್ಗನ್ ಸ್ಟಾನ್ಲಿಯ ಆರ್ಥಿಕ ತಜ್ಞ ರುಚಿರ್ ಶರ್ಮಾ ಅವರು ತಮ್ಮ ‘10 ರೂಲ್ಸ್ ಆಫ್ ಸಕ್ಸಸ್‌ಫುಲ್ ನೇಷನ್ಸ್’ ಪುಸ್ತಕದಲ್ಲಿ ರಾಷ್ಟ್ರಗಳ ಬೆಳವಣಿಗೆಯ ಅಸಮತೋಲನದ ಕುರಿತು ಎಚ್ಚರಿಸುತ್ತಾರೆ. ರಾಷ್ಟ್ರದ ಅಥವಾ ಒಂದು ಪ್ರದೇಶ/ರಾಜ್ಯದ ಮೊದಲ ಅತಿ ದೊಡ್ಡ ನಗರ ಮತ್ತು ಎರಡನೆಯ ದೊಡ್ಡ ನಗರದ ನಡುವಿನ ಅಗಾಧವಾದ ಆರ್ಥಿಕ ಅಸಮಾನತೆಯ ಪ್ರಮಾಣವು ದೇಶದ ಸಮತೋಲನದ ಪ್ರಗತಿಗೆ ಮಾರಕವಾಗಬಲ್ಲದು ಎಂಬುದನ್ನು ಅವರು ವಿವರಿಸುತ್ತಾರೆ. 

ಉದಾಹರಣೆಗೆ, ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಶಂಸಿಸಲ್ಪಡುವ ನಮ್ಮ ಬೆಂಗಳೂರಿನ ಜನಸಂಖ್ಯೆ ಮೈಸೂರಿಗಿಂತ 10 ಪಟ್ಟು ಹೆಚ್ಚು. ಮುಂಬೈ ಜನಸಂಖ್ಯೆಯು ಪುಣೆಗಿಂತ 4 ಪಟ್ಟು ಜಾಸ್ತಿ. ಕೋಲ್ಕತ್ತ ಜನಸಂಖ್ಯೆ ಅಸನ್ಸೋಲ್‌ಗಿಂತ 10 ಪಟ್ಟು ಇದೆ. ಚೆನ್ನೈ ಮಹಾನಗರದ್ದು ಕೊಯಮತ್ತೂರಿಗಿಂತ 5ರಷ್ಟು ಮತ್ತು 3 ಕೋಟಿಗಿಂತಲೂ ಹೆಚ್ಚು ಇರುವ ದೆಹಲಿಯು ಉತ್ತರ ಭಾರತದಲ್ಲಿ ಅಸಾಧಾರಣ ಜನಸಂಖ್ಯೆ ಹೊಂದಿದೆ. ಈ ಅಸಮಾನತೆಗಳು ಕೇವಲ ಜನಸಂಖ್ಯೆಯಲ್ಲಿ ಅಲ್ಲ, ಹೂಡಿಕೆಯಲ್ಲಿ, ಮೂಲಸೌಕರ್ಯದಲ್ಲಿ, ನೀರಿನ ಒತ್ತಡದಲ್ಲೂ ಕಾಣಿಸುತ್ತವೆ.

ರುಚಿರ್ ಶರ್ಮಾರ ಈ ಸಂಶೋಧನೆಯು ಭಾರತದ ಮಹಾನಗರ ಪ್ರದೇಶಗಳಲ್ಲಿನ ನೀರಿನ ವೈಪರೀತ್ಯಗಳಿಗೆ ಹಾಗೂ ಬಿಕ್ಕಟ್ಟಿನ ಪ್ರಮುಖ ಸುಳಿವನ್ನು ನೀಡುತ್ತದೆ.

ನೀರು ಸಂಜೀವಿನಿಯೂ ಹೌದು, ಮರೀಚಿಕೆಯೂ ಹೌದು

ಭಾರತದ ಮಹಾನಗರಗಳ ಅಸಹಜ ಜನಸಂಖ್ಯೆ, ಅಡ್ಡಾದಿಡ್ಡಿ ವಿಸ್ತೀರ್ಣ ಹಾಗೂ ಹೂಡಿಕೆಯ ಫಲಿತಂಶವೇ ಈ ಎಲ್ಲ ಜಲಸಂಕಷ್ಟಗಳಿಗೆ ಪ್ರಮುಖ ಕಾರಣ. ಹಾಗೆ ನೀರಿನ ಬೇಡಿಕೆಯ ಮೇಲಿನ ಇವೆಲ್ಲದರ ಪರಿಣಾಮವನ್ನು ಒಮ್ಮೆ ನೋಡೋಣ: 2015ರಲ್ಲಿ ದೆಹಲಿಯಲ್ಲಿ ಸುಮಾರು 4,760 ಎಂಎಲ್‌ಡಿ ನೀರಿನ ಬೇಡಿಕೆಯಿದ್ದರೆ ಪೂರೈಕೆ ಮಾತ್ರ 3,546 ಎಂಎಲ್‌ಡಿ ಇತ್ತು. ಎರಡರ ನಡುವೆ ಸುಮಾರು 1,000 ಎಂಎಲ್‌ಡಿಯಷ್ಟು ಅಂತರವಿತ್ತು; ಇವತ್ತಿನ ದಿನ, ಕೋಲ್ಕತ್ತ ಸುಮಾರು 1,875 ಎಂಎಲ್‌ಡಿ ನೀರಿನ ಬೇಡಿಕೆಯನ್ನು ಹೊಂದಿದೆ ಮತ್ತು ಸೋರಿಕೆ, ಕಳ್ಳತನ ಮತ್ತು ವಿತರಣಾ ಅಂತರವನ್ನು ಪರಿಗಣಿಸಿದರೆ ಸುಮಾರು 400 ಎಂಎಲ್‌ಡಿ ಕೊರತೆ ಕಾಣುತ್ತದೆ. ಚೆನ್ನೈ ನಗರ ಪ್ರದೇಶದ ನೀರಿನ ಬೇಡಿಕೆ 1,850 ಎಂಎಲ್‌ಡಿ ಆಗಿದ್ದು, ಪೂರೈಕೆ ಮಾತ್ರ 1,510 ಎಂಎಲ್‌ಡಿ. ಇದರಿಂದ ಸುಮಾರು 300 ಎಂಎಲ್‌ಡಿ ಕೊರತೆ ಇದೆ. ಮುಂದಿನ ವರ್ಷ (2026) ನಮ್ಮ ಬೆಂಗಳೂರು ನಗರ ಪ್ರದೇಶದ ಬೇಡಿಕೆ ಮತ್ತು ಪೂರೈಕೆ ಕ್ರಮವಾಗಿ 3,437 ಎಂಎಲ್‌ಡಿ ಮತ್ತು 2,235 ಎಂಎಲ್‌ಡಿ ಇರಲಿದ್ದು, ಇನ್ನೂ 1,262 ಎಂಎಲ್‌ಡಿಯಷ್ಟು ಕೊರತೆ ಉಂಟಾಗಲಿದೆ. ಇದರಿಂದ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಲಿದೆ.

ಈ ಅಂಕಿಅಂಶಗಳು, ನಗರಗಳಲ್ಲಿನ ಬೆಳವಣಿಗೆಗೆ ಸಂಬಂಧಿಸಿದ, ಪ್ರಜ್ಞಾಪೂರ್ವಕ ನೀತಿಗಳ ಕೊರತೆಯ ಪ್ರತಿರೂಪಗಳಾಗಿವೆ.

ಅನಿಯಂತ್ರಿತ ನಗರ ವಿಸ್ತರಣೆ

ಪ್ರತಿ ವರ್ಷ ಬರ ಹಾಗೂ ಪ್ರವಾಹದಂತಹ ವೈಪರೀತ್ಯಗಳು ಬಂದು ಅಪ್ಪಳಿಸುತ್ತಿದ್ದರೂ ಇದರ ಬಗ್ಗೆ ಯಾವುದೇ ಕಾಳಜಿ ಇಲ್ಲದಂತೆ, ದೇಶದ ಮಹಾನಗರಗಳು ದಿಕ್ಕು ದೆಸೆಯಿಲ್ಲದೆ ಅಗಾಧವಾಗಿ ಬೆಳೆಯುತ್ತಾ ಹೋಗುತ್ತಿವೆ. ಆದರೆ, ಈ ಬೆಳವಣಿಗೆಯ ಅಂತ್ಯದ ಅರಿವು ಮಾತ್ರ ಯಾರಿಗೂ ಇಲ್ಲ. ಈ ಏಕಪಕ್ಷೀಯ ಬೆಳವಣಿಗೆ ಎಲ್ಲಿಯವರೆಗೆ ವಿಸ್ತರಿಸುತ್ತದೆ, ಹತ್ತಿರದ ಎಷ್ಟು ಪಟ್ಟಣಗಳನ್ನು ​​ಕಬಳಿಸುತ್ತದೆ ಮತ್ತು ಇದೆಲ್ಲವೂ ಎಲ್ಲಿ ಕೊನೆಗೊಳ್ಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಮುಂಬೈ ನಗರವು ಈಗಾಗಲೇ ಠಾಣೆ ಜಿಲ್ಲೆಗೆ ಪ್ರವೇಶಿಸಿದರೆ, ಬೆಂಗಳೂರು ನಗರ ಉತ್ತರದಲ್ಲಿ ತುಮಕೂರು, ಪಶ್ಚಿಮದಲ್ಲಿ ರಾಮನಗರ ಮತ್ತು ಪೂರ್ವದಲ್ಲಿ ಕೋಲಾರ ಹತ್ತಿರದ ಪಟ್ಟಣಗಳನ್ನು ಭಕ್ಷಿಸುವತ್ತ ಸಾಗಿದೆ. ದೇಶದ ಇತರೆ ಮಹಾನಗರಗಳು ಇದಕ್ಕೆ ಭಿನ್ನವಾಗಿಲ್ಲ.

ದೇಶದ ಮಹಾನಗರಗಳ ಈ ಗೊತ್ತು ಗುರಿ ಇಲ್ಲದ ವಿಸ್ತರಣೆಗೆ ಯಾವುದೇ ಮಿತಿಗಳಿಲ್ಲದಿರಬಹುದು, ಆದರೆ ಅದು ನೀರಿಗೆ ಮಾತ್ರ ಅನ್ವಯಿಸುವುದಿಲ್ಲ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ನದಿಗಳಿಗಾಗಲಿ ಅಥವಾ ಭೂಜಲಕ್ಕಾಗಲಿ ಒಂದು ಪರಿಮಿತಿ ಇದ್ದೇ ಇದೆ. ಉದಾಹರಣೆ, ಜಲಸಂಪನ್ಮೂಲ ‘ವರುಣ’ನ ಅನುಗ್ರಹ ಮತ್ತು ಅನುಕಂಪದಲ್ಲಿದೆ. ಇದಲ್ಲದೆ ದೇಶದಾದ್ಯಂತ ಅನೇಕ ನ್ಯಾಯಮಂಡಳಿಗಳು ತಮ್ಮ ತೀರ್ಪುಗಳಿಂದ ರಾಜ್ಯಗಳಿಗೆ ಜಲ ಸಂಪನ್ಮೂಲವನ್ನು ಹಂಚಿಕೆಯ ಮೂಲಕ ಸೀಮಿತಗೊಳಿಸಿವೆ. ಆದುದರಿಂದ ನೀರನ್ನು ಮನಬಂದಂತೆ ಬಳಕೆ ಮಾಡುವಂತಿಲ್ಲ. 

ಜಲಸಂಪನ್ಮೂಲಗಳಿಗೆ ಇಷ್ಟೆಲ್ಲಾ ನಿರ್ಬಂಧಗಳಿದ್ದರೂ ಕೆಲವರು ಸಾವಿರಾರು ಕಿಲೋಮೀಟರ್ ದೂರದ ನದಿಗಳಿಂದ ಮಹಾನಗರಗಳಿಗೆ ನೀರು ಹರಿಸುವ ಪ್ರಸ್ತಾವಗಳನ್ನು ಮುಂದಿಡುತ್ತಾರೆ. ಈ ಪ್ರಸ್ತಾವಗಳು ಕಾಗದದ ಮೇಲೆ ಆಕರ್ಷಕವಾಗಿ ಕಾಣುತ್ತವೆ. ಇದಕ್ಕೆ ತಗಲುವ ಆರ್ಥಿಕ ವೆಚ್ಚ, ತಾಂತ್ರಿಕ ತೊಂದರೆಗಳು, ನೀರಿನ ಸಂಘರ್ಷಗಳು ಹಾಗೂ ಪರಿಸರ ಹಾನಿ ಇವೆಲ್ಲವೂ ಇದರ  ಸದುದ್ದೇಶಗಳನ್ನು ಮೀರುವ ಸಾಧ್ಯತೆಗಳಿವೆ. ಇವೆಲ್ಲಕ್ಕಿಂತ, ಮಹಾನಗರಗಳು ಇನ್ನಷ್ಟು ಬೆಳೆದು, ಮತ್ತಷ್ಟು ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾದರೆ ನೀರನ್ನು ದೇಶದ ಯಾವ ನದಿಯಿಂದ, ಇನ್ನೆಷ್ಟು ದೂರದಿಂದ ಮತ್ತು ಎಲ್ಲಿಯವರೆಗೆ ತರಬಹುದು ಎಂಬ ಅಂಶವನ್ನು ದೇಶದ ಜನರು ನಿರ್ಧರಿಸಬೇಕಿದೆ. ಉದಾಹರಣೆಗೆ, ಕೇವಲ 70 ಕಿ.ಮೀ. ದೂರದಲ್ಲಿರುವ ತುಮಕೂರಿನ ಹತ್ತಿರ ಬೆಳೆದ ಬೆಂಗಳೂರು, ಅಲ್ಲಿಗೇ ನಿಲ್ಲುತ್ತದೆ ಎಂಬುದಕ್ಕೆ ಖಾತರಿ ಏನು? 

ಹಾಗಾಗಿ, ಜಲ ಸಂಕಷ್ಟದ ದೃಷ್ಟಿಯಿಂದ ಈ ದಿಕ್ಕು ದೆಸೆಯಿಲ್ಲದ ಅಸಮಾನತೆಯ ಬೆಳವಣಿಗೆಯನ್ನು ನಿಲ್ಲಿಸಲು ರಾಜಕೀಯ, ಆಡಳಿತ ಮತ್ತು ಯೋಜನಾ ತಂತ್ರಜ್ಞರು ಈಗಲಾದರೂ ಚಿಂತನೆ ಮಾಡಲೇಬೇಕಾಗಿದೆ.

ತಾತ್ಕಾಲಿಕ ಪರಿಹಾರಗಳು

ಭಾರತದ ಮಹಾನಗರ ಪ್ರದೇಶಗಳಲ್ಲಿನ ನೀರಿನ ವೈಪರೀತ್ಯಗಳಿಗೆ ಮೂಲ ಕಾರಣ ನಗರ ಪ್ರದೇಶಗಳ ಬಿರುಸಿನ ವಿಸ್ತರಣೆ, ಸ್ಫೋಟಗೊಳ್ಳುತ್ತಿರುವ ಜನಸಂಖ್ಯೆ, ಕ್ಷೀಣಿಸುತ್ತಿರುವ ಮೂಲಗಳು ಮತ್ತು ಶಿಥಿಲಗೊಂಡ ಒಳಚರಂಡಿಯ ಅವ್ಯವಸ್ಥೆ. ಇವುಗಳ ಮುಂದೆ ಬರ/ಪ್ರವಾಹಗಳಿಗೆ ಪರಿಹಾರಗಳೆಂದು ಹೇಳಲ್ಪಡುವ ಮಳೆನೀರು ಸಂಗ್ರಹ, ಅಂತರ್ಜಲ ಮರುಪೂರಣ, ಚಾವಣಿಯ ಮಳೆನೀರು ಸಂಗ್ರಹ, ತ್ಯಾಜ್ಯ ನೀರಿನ ಮರುಬಳಕೆ... ಮುಂತಾದವು ಕೇವಲ ತಾತ್ಕಾಲಿಕ ಪರಿಹಾರಗಳು. ಅಂದರೆ ‘ಬ್ಯಾಂಡ್ ಏಡ್‌’ನಂತೆ. ಏಕೆಂದರೆ ಈ ಪರಿಹಾರಗಳು ಆಸ್ಪಿರಿನ್‌ನಂತೆ ನೋವನ್ನು ಮಾತ್ರ ಕಡಿಮೆ ಮಾಡುತ್ತವೆ; ಮೂಲ ರೋಗವನ್ನು ಗುಣಪಡಿಸುವುದಿಲ್ಲ. 

ಭಾರತದ ನಗರ ಪ್ರದೇಶಗಳ ಜಲ ಬಿಕ್ಕಟ್ಟು, ವೈಪರೀತ್ಯಗಳಿಗೆ ಮೂಲ ಹಾಗೂ ಅಂತಿಮ ಪರಿಹಾರ ಸಿಗಬೇಕು ಎಂದರೆ, ದೇಶದ ಅನೇಕ ರಾಜ್ಯಗಳಲ್ಲಿ ಒಂದು ನಗರದ ಬೆಳವಣಿಗೆಗೆ ಕೊಡುತ್ತಿರುವ ಅಪರಿಮಿತ ಪ್ರಾಮುಖ್ಯ ಮತ್ತು ಚಿಕ್ಕ ಚಿಕ್ಕ ಪಟ್ಟಣಗಳ ಅಭಿವೃದ್ಧಿಯ ನಿರ್ಲಕ್ಷ್ಯ- ಇವೆರಡಕ್ಕೂ ಕಡಿವಾಣ ಬೀಳಬೇಕು.

ಒಂದೇ ನಗರಕ್ಕೆ ಹರಿದುಹೋಗುತ್ತಿರುವ ಅಪರಿಮಿತ ಹೂಡಿಕೆ, ಶ್ರೀಮಂತಿಕೆಯ ಕೇಂದ್ರೀಕರಣ ಮತ್ತು ಇದರ ಕಾರಣವಾಗಿ ಮಹಾನಗರಗಳ ಅನಿಯಂತ್ರಿತ 360 ಡಿಗ್ರಿಯ ವಿಸ್ತರಣೆ- ಇವೆಲ್ಲದರ ಕಡಿವಾಣವೇ ಮಹಾನಗರಗಳ ಮಹಾವೈಪರೀತ್ಯಗಳಾದ ಬರ/ಪ್ರವಾಹಗಳಿಗೆ ನೀಡಬಹುದಾದ ಮೂಲ ಚಿಕಿತ್ಸೆ. ಇದನ್ನು ನಿರ್ಲಕ್ಷಿಸಿ ತಾತ್ಕಾಲಿಕ ‘ಬ್ಯಾಂಡ್ ಏಡ್‌’ ಪರಿಹಾರಗಳನ್ನು ಅವಲಂಬಿಸಿದರೆ ಸಮಸ್ಯೆಯು ಪರಿಹಾರವಾಗುವ ಬದಲು ಮತ್ತಷ್ಟು ಜಟಿಲವಾಗುತ್ತದೆ. 

ಪುನರ್ ವಿತರಣೆಯೇ ಪರಿಹಾರ

ಆದುದರಿಂದ ತುರ್ತಾಗಿ, ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತ ಮತ್ತು ಚೆನ್ನೈನಂತಹ ಮಹಾನಗರಗಳ ಸುತ್ತಮುತ್ತ ಇರುವ, ಹತ್ತಿರವಿರುವ ಸಣ್ಣ ನಗರಗಳಿಗೆ ದೇಶದ/ರಾಜ್ಯದ ಸಂಪತ್ತಿನ ಪುನರ್ ವಿತರಣೆಯಾಗಬೇಕಿದೆ. ಈ ಬಗ್ಗೆ ಆರ್ಥಿಕ ತಜ್ಞರು/ಯೋಜನೆ ರೂಪಿಸುವವರು ತುರ್ತು ಗಮನ ಹರಿಸಬೇಕು. ನೈಸರ್ಗಿಕ ವಿಕೋಪಗಳನ್ನು ನಿಭಾಯಿಸುವ ಶಕ್ತಿಗನುಗುಣವಾಗಿ ಈ ಸಣ್ಣ ನಗರಗಳಿಗೆ ಹೂಡಿಕೆ, ಅಭಿವೃದ್ಧಿ ಮತ್ತು ಸಂಪತ್ತು ಪುನರ್ ವಿತರಣೆ ಮಾಡಬೇಕು. ಬೆಂಗಳೂರಿಗೆ ಬರುವ ಹೂಡಿಕೆಯ ಶೇಕಡ ಒಂದು ಭಾಗವನ್ನಾದರೂ ತುಮಕೂರು, ರಾಮನಗರ, ಹಾಸನ, ಮಂಡ್ಯದಂತಹ ಸಣ್ಣ ನಗರಗಳಿಗೆ ವಿತರಿಸಲು ಚಿಂತನೆ ಮಾಡಬೇಕು. 

ಹಾಗೆ ಮಹಾನಗರಗಳ ಕಡೆ ಹೊರಟಿರುವ ಮತ್ತು ಜಲ ಬಿಕ್ಕಟ್ಟಿಗೆ ಕಾರಣವಾಗುತ್ತಿರುವ ಜನರ ವಲಸೆಯನ್ನು ಸಣ್ಣ ನಗರಗಳ ಕಡೆ ತಿರುಗಿಸಬೇಕಿದೆ. ಭಾರತದ ಮಹಾನಗರಗಳ ಹೈಡ್ರೊ-ಸ್ಕಿಜೋಫ್ರೀನಿಯಾದ ಸಮಸ್ಯೆಗಳಾದ ಬೇಸಿಗೆಯ ಕೊರತೆ ಮತ್ತು ಮುಂಗಾರಿನ ಪ್ರವಾಹ ಇವುಗಳನ್ನು ನಿವಾರಿಸಲು ಇರುವ ಏಕೈಕ ಸಂಭಾವ್ಯ ಮಾರ್ಗ ಇದು.

ಅಸಮಾನತೆಯ ಬೆಳವಣಿಗೆ ಬದಲಾವಣೆ ಅಗತ್ಯ 

ಮುಂಗಾರು ಈಗ ತಾನೇ ಮುಗಿದಿದೆ, ಹಿಂಗಾರು ಆರಂಭವಾಗಿದೆ. ಬೇಸಿಗೆ ಮುಂದಿದೆ. ಬೇಸಿಗೆಯಲ್ಲಿ ಜಲಕ್ಷಾಮಕ್ಕೆ ಒಳಗಾಗಿದ್ದ ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳು ಮುಂಗಾರಿನ ನಂತರ ಈಗ ಪುನಃ ಹಿಂಗಾರಿನ ಪ್ರವಾಹದ ಬಿಕ್ಕಟ್ಟನ್ನು ಎದುರಿಸುವ ಅಪಾಯವಿದೆ. ನಂತರ ಬೇಸಿಗೆ–‍ ನೀರಿಗೆ ಪುನಃ ಹಾಹಾಕಾರ. ಇದು ಎಚ್ಚರಿಕೆಯ ಗಂಟೆ ಮತ್ತು ನೀತಿನಿರೂಪಕರಿಗೆ ಆಪತ್ಕಾಲದ ಕರೆಯಾಗಿದೆ. ‘ಅದೇ ರಾಗ ಅದೇ ಹಾಡು’ ಎಂಬಂತೆ ಪ್ರತಿವರ್ಷವೂ ಬಂದೆರಗುವ ಈ ಹಾಹಾಕಾರದ ಪುನರಾವರ್ತಿತ ಪ್ರದರ್ಶನ ನಿಲ್ಲಿಸಬೇಕಾದರೆ, ನಾವೆಲ್ಲರೂ ಮಹಾನಗರಗಳ ವಿನ್ಯಾಸದ ದಿಕ್ಕು ಬದಲಿಸಲೇಬೇಕಿದೆ. 

ಆದುದರಿಂದ ಜಲ ಹಾಗೂ ಆರ್ಥಿಕ ತಜ್ಞರು/ಯೋಜಕರು (ಮತ್ತು ನಾವು/ನೀವು) ಜೊತೆಗೂಡಿ ದೇಶದ ನಗರ/ಪಟ್ಟಣಗಳ ಈ ಆರ್ಥಿಕ ಅಸಮಾನತೆಯನ್ನು, ಏಕಪಕ್ಷೀಯ ಬೆಳವಣಿಗೆಯನ್ನು ಎಷ್ಟು ಬೇಗ ಅರಿತು ಬದಲಾಯಿಸುವೆವೋ, ಅಷ್ಟು ಬೇಗ ಮಹಾನಗರಗಳ ಬೆನ್ನತ್ತಿರುವ ಹೈಡ್ರೊ-ಸ್ಕಿಜೋಫ್ರೀನಿಯಾ ಅಂದರೆ ಈ ನೀರಿನ ಹಾಹಾಕಾರ/ಪ್ರವಾಹಗಳ ಅವಳಿ ಬಿಕ್ಕಟಿಗೆ ಅಂತಿಮ ತೆರೆ ಎಳೆಯಬಹುದಾಗಿದೆ. 

ಲೇಖಕ: ಬೆಂಗಳೂರಿನಲ್ಲಿರುವ ಕೇಂದ್ರ ಜಲ ಆಯೋಗದ ನಿರ್ದೇಶಕ

(ಈ ಬರಹದಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.