ADVERTISEMENT

ಆಳ–ಅಗಲ | USAID ಏನು, ಎತ್ತ...: ಕೇಂದ್ರ ಸರ್ಕಾರದ ಯೋಜನೆಗಳಿಗೇ ಹೆಚ್ಚಿನ ನೆರವು

ಜಯಸಿಂಹ ಆರ್.
Published 24 ಫೆಬ್ರುವರಿ 2025, 22:52 IST
Last Updated 24 ಫೆಬ್ರುವರಿ 2025, 22:52 IST
   
ಅಂತರರಾಷ್ಟ್ರೀಯ ನೆರವಿಗಾಗಿ 1951ರಲ್ಲಿ ಅಮೆರಿಕ ಸರ್ಕಾರವೇ ಯುಎಸ್‌ಏಡ್‌ ಇಲಾಖೆಯನ್ನು ರಚಿಸಿತ್ತು. ಈ ಇಲಾಖೆ ಆಯಾ ಸರ್ಕಾರಕ್ಕೆ ಮತ್ತು ಸರ್ಕಾರದ ಜತೆಗೆ ಒಪ್ಪಂದ ಮಾಡಿಕೊಂಡ ಸ್ವಯಂಸೇವಾ ಸಂಸ್ಥೆಗಳಿಗೆ ನೆರವು ನೀಡುತ್ತದೆಯೇ ಹೊರತು ರಾಜಕೀಯ ಪಕ್ಷಗಳಿಗೆ ಸಹಾಯಾನುದಾನ ಒದಗಿಸುವುದಿಲ್ಲ.

ಯುಎಸ್‌ಏಡ್‌ ಎಂಬುದು ಯುಎಸ್‌–ಅಡ್ಮಿನಿಸ್ಟ್ರೇಷನ್‌ ಫಾರ್ ಇಂಟರ್‌ನ್ಯಾಷನಲ್‌ ಡೆವಲಪ್‌ಮೆಂಟ್‌ ಎಂಬುದರ ಸಂಕ್ಷಿಪ್ತ ರೂಪ. ಇದು ಯಾವುದೇ ಸ್ವಯಂಸೇವಾ ಸಂಸ್ಥೆಯಾಗಿರದೆ, ಅಮೆರಿಕ ಸರ್ಕಾರದ ಒಂದು ಇಲಾಖೆಯಾಗಿದೆ. ಅಮೆರಿಕದ ವಿದೇಶಾಂಗ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಪ್ರತಿನಿಧಿಗಳನ್ನು ಹೊಂದಿರುವ ಈ ಇಲಾಖೆ ಅಮೆರಿಕ ಅಧ್ಯಕ್ಷರ ಸುಪರ್ದಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಮತ್ತು ಬೇರೊಂದು ದೇಶದಲ್ಲಿ ಕಾರ್ಯನಿರ್ವಹಿಸುವಾಗ ಅಲ್ಲಿನ ಸರ್ಕಾರದ ಸಹಯೋಗದಲ್ಲೇ ಸಹಾಯಾನುದಾನವನ್ನು ಹಂಚಿಕೆ ಮಾಡುತ್ತದೆ.

ಭಾರತ ಮತ್ತು ಯುಎಸ್‌ಏಡ್‌ನ ಸಂಬಂಧವೂ ಇದಕ್ಕೆ ಹೊರತಾಗಿಲ್ಲ. 1951ರಿಂದಲೂ ಅಮೆರಿಕವು ಯುಎಸ್‌ಏಡ್‌ ಮೂಲಕ ಭಾರತಕ್ಕೆ ಆರ್ಥಿಕ ನೆರವು ನೀಡುತ್ತಲೇ ಇದೆ. ಯುಎಸ್‌ಏಡ್‌, ಭಾರತದಲ್ಲಿ ಕೈಗೊಂಡ ಮತ್ತು ಜಾರಿಗೆ ತಂದಿರುವ ಬಹುತೇಕ ಕಾರ್ಯಕ್ರಮಗಳನ್ನು ಭಾರತ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಕ್ಕೆ ತರುತ್ತದೆ. ಮುಖ್ಯವಾಗಿ ಸರ್ಕಾರದ ಕಾರ್ಯಕ್ರಮಗಳಿಗೆ ತಾಂತ್ರಿಕ ಮತ್ತು ಆರ್ಥಿಕ ನೆರವು ಒದಗಿಸುತ್ತಾ ಬಂದಿದೆ. ಈಚಿನ ದಶಕದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಿಗೆಲ್ಲಾ ಯುಎಸ್‌ಏಡ್‌ ಒಂದಿಲ್ಲೊಂದು ರೀತಿಯಲ್ಲಿ ಸಹಾಯಾನುದಾನ ಒದಗಿಸಿದೆ. ಬಹುತೇಕ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಜತೆಗೆ ಸಹಯೋಗ ಮಾಡಿಕೊಂಡ ಸ್ವಯಂಸೇವಾ ಸಂಸ್ಥೆಗಳಿಗೆ ಸಹಾಯಾನುದಾನ ಒದಗಿಸುತ್ತದೆ. ಸ್ವತಃ ಯುಎಸ್‌ಏಡ್‌ ಇದನ್ನು ದೃಢಪಡಿಸಿದೆ.

2001ರಿಂದ 2024ರ ಅಂತ್ಯದವರೆಗೆ ಭಾರತಕ್ಕೆ ನೇರವಾಗಿ ಒದಗಿಸಿದ ಸಹಾಯಾನುದಾನದ ದತ್ತಾಂಶವನ್ನು ಯುಎಸ್‌ಏಡ್‌ ಸಾರ್ವಜನಿಕರಿಗೆ ಮುಕ್ತಗೊಳಿಸಿದೆ. ಈ 24 ವರ್ಷಗಳಲ್ಲಿ ಭಾರತವು ಯುಸ್‌ಏಡ್‌ನಿಂದ ಸಹಾಯಾನುದಾನ ಪಡೆದುಕೊಳ್ಳುವ ರೀತಿಯಲ್ಲಿ ಆಗಿರುವ ಬದಲಾವಣೆಯನ್ನು ಈ ದತ್ತಾಂಶಗಳು ತೋರಿಸುತ್ತವೆ. ಈಚಿನ ನಾಲ್ಕು ವರ್ಷಗಳಲ್ಲೇ ಅತಿಹೆಚ್ಚು ಸಹಾಯಾನುದಾನ ಯುಎಸ್‌ಏಡ್‌ನಿಂದ ಭಾರತಕ್ಕೆ ಬಂದಿದೆ. 

ADVERTISEMENT

ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರವು ಪ್ರತಿ ವರ್ಷ ಪಡೆದ ಸಹಾಯಾನುದಾನದ ಮೊತ್ತವು ಮನಮೋಹನ ಸಿಂಗ್‌ ಅವರ ಸರ್ಕಾರದ ಅವಧಿಯಲ್ಲಿ ಕಡಿಮೆಯಾಗಿದೆ. ಪ್ರತಿ ವರ್ಷ ಸಹಾಯಾನುದಾನದ ಒಟ್ಟು ಮೊತ್ತ ಇಳಿಕೆಯಾಗುತ್ತಲೇ ಬಂದಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಆರಂಭದ ಅವಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿಲ್ಲವಾದರೂ ಸ್ವಯಂಸೇವಾ ಸಂಸ್ಥೆಗಳ ವಿದೇಶಿ ದೇಣಿಗೆ ನಿಯಮಗಳಿಗೆ ತಿದ್ದುಪಡಿ ತಂದು, ವಿದೇಶಿ ದೇಣಿಗೆಯನ್ನು ನಿಯಂತ್ರಿಸಲು ಯತ್ನಿಸಿದೆ. ಬಳಿಕ ನೆರವು ಕಡಿತವಾಗಿದೆ ಎಂದು ಎನ್‌ಜಿಒಗಳು ಹೇಳುತ್ತಿವೆ. ಆದರೆ, ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಎನ್‌ಜಿಒಗಳಿಗೆ ಯುಎಸ್‌ಏಡ್‌ನ ಸಹಾಯಾನುದಾನ ಏರಿಕೆಯಾಗಿರುವುದು ಕಾಣುತ್ತದೆ.

ಈ ಅವಧಿಯಲ್ಲಿ ಹೆಚ್ಚು ಸಹಾಯಾನುದಾನ ಪಡೆದ ಹಲವು ಸ್ವಯಂಸೇವಾ ಸಂಸ್ಥೆಗಳು 2016ರ ನಂತರವೇ ಸ್ಥಾಪನೆಯಾಗಿವೆ ಮತ್ತು ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿವೆ. ಕೆಲವು ಸಂಸ್ಥೆಗಳು ಸಿಎಸ್‌ಆರ್‌ ನಿಧಿಯ ಮೂಲಕ ಯುಎಸ್‌ಏಡ್‌ನ ಹಣವನ್ನು ಬಳಕೆ ಮಾಡಿವೆ. ಅಂತಹ ಸಂಸ್ಥೆಗಳಲ್ಲಿ ಹಲವು, ಕೇಂದ್ರ ಸರ್ಕಾರದ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳ ರೂಪುರೇಷೆ ಸಿದ್ಧಪಡಿಸುವಲ್ಲಿ, ಪ್ರಚಾರ ಸೇವೆ ಮತ್ತು ಪೋರ್ಟಲ್‌ ಅಭಿವೃದ್ಧಿ ಸೇವೆ ಒದಗಿಸಿವೆ. ವಿಕಸಿತ ಭಾರತ, ಸ್ವಚ್ಛ ಭಾರತ ಅಭಿಯಾನ, ಆಯುಷ್ಮಾನ್‌ ಭಾರತ, ಹಸಿರು ಜಲಜನಕ, ಸೂರ್ಯಘರ್‌ ಮೊದಲಾದ ಕಾರ್ಯಕ್ರಮಗಳು ಆ ಪಟ್ಟಿಯಲ್ಲಿವೆ.

2024ರ ಕೆಲವು ಯೋಜನೆಗಳು

ನಿಶಾತಾ

ಇದು ಅಮೆರಿಕದ ಜಾನ್‌ ಹಾಕಿನ್ಸ್‌ ವಿಶ್ವವಿದ್ಯಾಲಯವು ಭಾರತದಲ್ಲಿ ಕೈಗೊಂಡಿರುವ ಪ್ರಮುಖ ಯೋಜನೆಗಳಲ್ಲಿ ಒಂದು. ದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ತರಬೇತಿ, ತರಬೇತಿ ಪಠ್ಯಕ್ರಮ ರೂಪಿಸುವ ಕೆಲಸವನ್ನು ಯುಎಸ್‌ಏಡ್‌ ಸಹಾಯಾನುದಾನದಲ್ಲಿ ನಡೆಸುತ್ತಿದೆ. ಈ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರದ ಕುಟುಂಬ ಮತ್ತು ಆರೋಗ್ಯ ಸಚಿವಾಲಯದ ಸಹಯೋಗದಲ್ಲಿ ನಡೆಸುತ್ತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಆಯುಷ್ಮಾನ್‌ ಭಾರತ’ದ ರೂ‍ಪುರೇಷೆಗಳನ್ನು ಸಿದ್ಧಪಡಿಸುವಲ್ಲಿ, ಯೋಜನೆ ನಿರ್ವಹಣಾ ವ್ಯವಸ್ಥೆ ನೀಡುವಲ್ಲಿ, ಸಿಬ್ಬಂದಿಗೆ ತಾಂತ್ರಿಕ ತರಬೇತಿ ನೀಡುವಲ್ಲಿ ಕೆಲಸ ಮಾಡುತ್ತಿದೆ. ದೇಶದಾದ್ಯಂತ 45,000 ಆರೋಗ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಕೇಂದ್ರ ಸರ್ಕಾರದೊಂದಿಗೆ ನೇರವಾಗಿ ಕೆಲಸ ಮಾಡಿರುವುದಾಗಿ ಎಂದು ವಿಶ್ವವಿದ್ಯಾಲಯವು ಹೇಳಿಕೊಂಡಿದೆ.

ಕೋವಿಡ್‌ ಅವಧಿಯಲ್ಲಿ ದೇಶದಾದ್ಯಂತ ಕೋವಿಡ್‌ ಲಸಿಕೆ ನೀಡಿಕೆ ತರಬೇತಿ, ಲಸಿಕಾ ಕೇಂದ್ರಗಳ ಮಾದರಿ ರೂಪಿಸುವಲ್ಲಿ ಯುಎಸ್‌ಏಡ್‌ ಸಹಾಯಾನುದಾನದಲ್ಲಿ ಈ ವಿಶ್ವವಿದ್ಯಾಲಯವು ಕೆಲಸ ಮಾಡಿತ್ತು.

ಸಂವೇಗ

ಗರ್ಭಿಣಿ, ಬಾಣಂತಿ ಮತ್ತು ಶಿಶು ಆರೈಕೆಗೆಂದು ಐಪಿಇ ಗ್ಲೋಬಲ್‌ ಲಿಮಿಟೆಡ್‌ ಎಂಬ ಸಂಸ್ಥೆ ಯುಎಸ್‌ಏಡ್‌ ಸಹಾಯಾನುದಾನದಲ್ಲಿ ಭಾರತದಲ್ಲಿ 2021ರಲ್ಲಿ ಆರಂಭಿಸಿದ ಕಾರ್ಯಕ್ರಮವಿದು. ಯೋಜನೆ ಅಡಿ ಪೌಷ್ಟಿಕಾಂಶಯುಕ್ತ ಆಹಾರ ಪೂರೈಕೆ, ಆರೈಕೆ ಮತ್ತು ಸಿಬ್ಬಂದಿ ತರಬೇತಿ ಮಾದರಿ ರೂಪಿಸುವ ಕೆಲಸವನ್ನು ಈ ಕಂಪನಿ ಭಾರತ ಸರ್ಕಾರದ ಸಹ ಯೋಗದಲ್ಲಿ ನಡೆಸಿದೆ. 2017ರಲ್ಲಿ ಇದೇ ಸಂಸ್ಥೆ ‘ಪಹಲ್‌’ ಎಂಬ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಕ್ಕೆ ತಂದಿತ್ತು. 2021ರಲ್ಲಿ ಅದನ್ನೇ ಸುಧಾರಿಸಿ, ‘ಸಂವೇಗ’ವನ್ನು ರೂಪಿಸಿತು. 2024ರ ಅಂತ್ಯಕ್ಕೆ ಈ ಯೋಜನೆಯು ಪೂರ್ಣಗೊಂಡಿದೆ. ಇದರ ಜತೆಯಲ್ಲಿ ಆರೋಗ್ಯ ಸಚಿವಾಲಯದ ಸಹಯೋಗದಲ್ಲಿ ಕ್ಷಯ ನಿರ್ಮೂಲನೆ ಕಾರ್ಯಕ್ರಮಗಳನ್ನೂ ಕೈಗೊಂಡಿದೆ.

ಸ್ವಚ್ಛ ಭಾರತ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಸ್ವಚ್ಛ ಭಾರತ–ಗ್ರಾಮೀಣ ಅಭಿಯಾನ’ಕ್ಕೂ ಯುಎಸ್‌ಏಡ್‌ನ ಸಹಾಯಾನುದಾನವನ್ನು ಬಳಸಿಕೊಳ್ಳಲಾಗಿದೆ. ಈ ಅಭಿಯಾನದ ರೂಪುರೇಷೆಗಳನ್ನು ಸಿದ್ಧಪಡಿಸುವ, ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯದ ಮಾದರಿ ರೂಪಿಸುವ ಮತ್ತು ಶೌಚಾಲಯ ಬಳಕೆ ಹಾಗೂ ಅಗತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ತಿಳಿವಳಿಕಾ ಸಾಮಗ್ರಿಗಳನ್ನು ರೂಪಿಸುವ ಕೆಲಸವನ್ನು ಆರ್‌ಟಿಐ ಇಂಟರ್‌ನ್ಯಾಷನಲ್‌ ಎಂಬ ಸ್ವಯಂಸೇವಾ ಸಂಸ್ಥೆ ಕೇಂದ್ರ ಸರ್ಕಾರಕ್ಕಾಗಿ ಮಾಡಿಕೊಟ್ಟಿತ್ತು. ಈಗಲೂ ತಿಳಿವಳಿಕಾ ಸಾಮಗ್ರಿಗಳನ್ನು ರೂಪಿಸಿಕೊಡುವ, ನಿರ್ವಹಿಸುವ, ಸಮೀಕ್ಷೆ ನಡೆಸುವ ಕೆಲಸವನ್ನು ಯುಎಸ್‌ಏಡ್‌ ಸಹಾಯಾನುದಾನದಲ್ಲಿ ಮಾಡಿಕೊಡುತ್ತಿದೆ.

ಸುವಾಸಿ

ಸ್ವಚ್ಛಭಾರತ ಅಭಿಯಾನದ ಭಾಗವಾಗಿ ನಗರಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಶೌಚ ನಿರ್ವಹಣೆ ಸಂಬಂಧ ಕೆಪಿಎಂಜಿ ಇಂಟರ್‌ನ್ಯಾಷನಲ್‌ ಎಂಬ ಸ್ವಯಂಸೇವಾ ಸಂಸ್ಥೆಯು ಸ್ಥಳೀಯ ಸಂಸ್ಥೆಗಳ ಜತೆಗೆ ಅನುಷ್ಠಾನಕ್ಕೆ ತಂದಿರುವ ಜಾಗೃತಿ ಕಾರ್ಯಕ್ರಮ ಇದು.

ಸಮಗ್ರ

ಗರ್ಭಿಣಿ, ಬಾಣಂತಿ ಮತ್ತು ಶಿಶು ಆರೈಕೆಗೆಂದು ಪಾಪುಲೇಷನ್‌ ಸರ್ವಿಸಸ್‌ ಇಂಟರ್‌ನ್ಯಾಷನಲ್‌ ಎಂಬ ಸ್ವಯಂ ಸೇವಾ ಸಂಸ್ಥೆ ಯುಎಸ್‌ಏಡ್‌ ಸಹಾಯಾನುದಾನ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದಲ್ಲಿ ಅನುಷ್ಠಾನಕ್ಕೆ ತರುತ್ತಿರುವ ಕಾರ್ಯಕ್ರಮ.

ಮತದಾನ ಜಾಗೃತಿಗೆ ಅನುದಾನವಿಲ್ಲ
ಭಾರತದಲ್ಲಿ ಮತದಾರರ ಜಾಗೃತಿ ಸಂಬಂಧಿ ಕಾರ್ಯಕ್ರಮಕ್ಕೆ 2021ರಿಂದ 2024ರ ಅವಧಿಯಲ್ಲಿ ಯುಎಸ್‌ಏಡ್‌ ಯಾವುದೇ ಸಹಾಯಾನುದಾನ ಒದಗಿಸಿಲ್ಲ ಎಂದು ಆ ಇಲಾಖೆಯ ದಾಖಲೆಗಳು ಮತ್ತು ದತ್ತಾಂಶಗಳು ಹೇಳುತ್ತವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೇಳಿರುವಂತೆ 2008ರಲ್ಲಾಗಲೀ, 2022ರಲ್ಲಾಗಲೀ ಮತದಾರರ ಜಾಗೃತಿಗೆ ಯುಎಸ್‌ಏಡ್‌ನಿಂದ ಭಾರತಕ್ಕೆ ಯಾವುದೇ ನೆರವು ಸಿಕ್ಕಿಲ್ಲ. ಬೇರೆ ದೇಶಗಳಲ್ಲಿ ಮತದಾರರ ಜಾಗೃತಿಗೆ ಯುಎಸ್‌ಏಡ್‌ ಸಹಾಯಾನುದಾನ ನೀಡುತ್ತದೆಯಾದರೂ ಭಾರತದಲ್ಲಿ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿನ ಕಾರ್ಯಕ್ರಮಗಳಿಗಷ್ಟೇ ನೆರವು ನೀಡುತ್ತದೆ. ಟಿಬೆಟ್‌ನ ಬೌದ್ಧ ನಿರಾಶ್ರಿತರ ಪುನರ್ವಸತಿಗೆ ಯುಎಸ್‌ಏಡ್‌ 70ರ ದಶಕದಿಂದಲೂ ನೆರವು ನೀಡುತ್ತಾ ಬಂದಿದೆ. ಅಮೆರಿಕದ ವಿದೇಶಾಂಗ ಸಚಿವಾಲಯ ಕೈಗೊಳ್ಳುವ ಹಲವು ಕಾರ್ಯಕ್ರಮಗಳನ್ನು ಯುಎಸ್‌ಏಡ್‌ ಇಲಾಖೆಯೇ ಭಾರತದಲ್ಲಿ ನೇರವಾಗಿ ಅನುಷ್ಠಾನಕ್ಕೆ ತರುತ್ತದೆ. ಅದು ಅಮೆರಿಕ ಮತ್ತು ಭಾರತ ಸರ್ಕಾರದ ನಡುವಣ ಪಾಲುದಾರಿಕೆಯ ಕಾರ್ಯಕ್ರಮಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.