
ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಐವರು ವೈದ್ಯರನ್ನು ಬಂಧಿಸಿದ ಬಳಿಕ ‘ವೈಟ್ ಕಾಲರ್ ಭಯೋತ್ಪಾದನೆ’ಯ ಚರ್ಚೆ ಆರಂಭವಾಗಿದೆ. ವೃತ್ತಿಪರ ಶಿಕ್ಷಣ ಅಥವಾ ಉನ್ನತ ಶಿಕ್ಷಣ ಪಡೆದಿರುವವರು ಭಯೋತ್ಪಾದನೆಯಲ್ಲಿ ತೊಡಗಿದರೆ ಅದನ್ನು ‘ವೈಟ್ ಕಾಲರ್ ಭಯೋತ್ಪಾದನೆ’ ಎನ್ನಲಾಗುತ್ತದೆ. ಧಾರ್ಮಿಕ ಮೂಲಭೂತವಾದಿ ಗಳಿಂದ ‘ಬ್ರೈನ್ ವಾಶ್’ಗೆ ಒಳಗಾದ ಬಡವರು, ಅನಕ್ಷರಸ್ಥರು ಉಗ್ರರಾಗಿ ಬದಲಾಗುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಈಗ ಅದು ಬದಲಾಗಿದೆ. ಉನ್ನತ ಶಿಕ್ಷಣ ಪಡೆದು, ಉತ್ತಮ ಉದ್ಯೋಗದಲ್ಲಿ ಇರುವವರು ಕೂಡ ಉಗ್ರರಾಗುತ್ತಿದ್ದಾರೆ.
2008ರ ನವೆಂಬರ್ 26ರಂದು ನಡೆದಿದ್ದ ಮುಂಬೈ ಭಯೋತ್ಪಾದನಾ ದಾಳಿ ಸಂಬಂಧ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್. ಪಾಕಿಸ್ತಾನದ ಉಗ್ರ ಸಂಘಟನೆಗಳು ಯುವಕರನ್ನು ಹೇಗೆ ‘ಸೆಳೆಯುತ್ತವೆ’ ಎನ್ನುವುದು ಕಸಬ್‌ನಿಂದ ಸ್ಪಷ್ಟವಾಗಿತ್ತು. ಹಬ್ಬದ ದಿನ ಅಪ್ಪ ಹೊಸ ಬಟ್ಟೆ ಕೊಡಿಸಲಿಲ್ಲ ಎಂದು ಮುನಿಸಿಕೊಂಡು ಮನೆ ತೊರೆದಿದ್ದ ಅವನು, ಸಣ್ಣಪುಟ್ಟ ಅಪರಾಧ ಕೃತ್ಯಗಳಲ್ಲಿ ತೊಡಗಿ ಹಣ ಸಂಪಾದನೆ ಮಾಡುತ್ತಿದ್ದ. ಅವನನ್ನು ಲಷ್ಕರ್–ಎ–ತಯಬಾ (ಎಲ್‌ಇಟಿ) ಹಣದ ಆಮಿಷ ತೋರಿಸಿ ಸಂಘಟನೆಗೆ ಸೆಳೆದಿತ್ತು. ಅವನಿಗೆ ತರಬೇತಿ ನೀಡಿ ಉಗ್ರನನ್ನಾಗಿ ಮಾಡಿತ್ತು. ₹1.5 ಲಕ್ಷವನ್ನು ಅವನ ಕುಟುಂಬಕ್ಕೆ ಕೊಡುವುದಾಗಿ ಆಸೆ ಹುಟ್ಟಿಸಿ, ಕಸಬ್‌ನನ್ನು ಮುಂಬೈ ಮೇಲೆ ದಾಳಿ ಮಾಡಲು ಮನವೊಲಿಸಲಾಗಿತ್ತು.
ಜಾಗತಿಕ ಮಟ್ಟದಲ್ಲಿಯೂ ಬಹುತೇಕ ಉಗ್ರಸಂಘಟನೆಗಳು ಇದೇ ಮಾದರಿಯಲ್ಲಿ ಸಂಘಟನೆಗೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದವು. ಬಡವರು, ದಿಕ್ಕಿಲ್ಲದವರು, ಅನಕ್ಷರಸ್ಥರು, ಶಾಲೆ ತೊರೆದ ಯುವಕರೇ ಉಗ್ರ ಸಂಘಟನೆಗಳ ಗುರಿಯಾಗಿದ್ದರು. ಲೋಕಜ್ಞಾನ ಇಲ್ಲದ ಮಕ್ಕಳನ್ನೂ ಭಯೋತ್ಪಾದನಾ ಸಂಘಟನೆಗಳು ಆರ್ಥಿಕ ನೆರವು ಸೇರಿದಂತೆ ಹಲವು ರೀತಿಯ ಆಮಿಷ, ಒತ್ತಡ, ಬೆದರಿಕೆ ಒಡ್ಡಿ ಸಂಘಟನೆಗಳಿಗೆ ನೇಮಿಸಿಕೊಂಡು, ಅವರಿಂದ ದುಷ್ಕೃತ್ಯಗಳನ್ನು ಮಾಡಿಸುತ್ತವೆ. ಯುನಿಸೆಫ್‌ನ ಒಂದು ವರದಿಯ ಪ್ರಕಾರ, 2005ರಿಂದ 2022ರವರೆಗೆ 1.05 ಲಕ್ಷ ಮಕ್ಕಳು ಉಗ್ರ ಸಂಘಟನೆಗಳಿಗೆ ಸೇರಿದ್ದಾರೆ. ವಾಸ್ತವ ಸಂಖ್ಯೆಯು ಅದಕ್ಕಿಂತಲೂ ಹೆಚ್ಚಿರುವ ಸಾಧ್ಯತೆ ಇದೆ ಎಂದೂ ವರದಿ ಹೇಳಿದೆ. ಇವು ಭಯೋತ್ಪಾದನಾ ಜಾಲ ರೂಪಿಸುವ ಪಾರಂಪರಿಕ ವಿಧಾನಗಳಾಗಿದ್ದವು.
ದೆಹಲಿಯಲ್ಲಿ ಮೂರು ದಿನಗಳ ಹಿಂದೆ ನಡೆದ ಕಾರು ಸ್ಫೋಟ ಘಟನೆಯು ಹೊಸ ರೀತಿಯ ಭಯೋತ್ಪಾದನಾ ಜಾಲ ಸಕ್ರಿಯವಾಗಿರುವುದನ್ನು ಬಹಿರಂಗ ಪಡಿಸಿದೆ. ಭದ್ರತಾ ಪಡೆಗಳು, ತನಿಖಾ ಸಂಸ್ಥೆಗಳು ಇದನ್ನು ‘ವೈಟ್ ಕಾಲರ್’ ಭಯೋತ್ಪಾದನಾ ಜಾಲ ಎಂದು ವಿಶ್ಲೇಷಿಸುತ್ತಿವೆ. ಉನ್ನತ ವಿದ್ಯಾಭ್ಯಾಸ ಪಡೆದ, ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದ ಮೂವರು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ತನಿಖೆಯ ಭಾಗವಾಗಿ ಅಧಿಕಾರಿಗಳು ಬಂಧಿಸಿರುವವರಲ್ಲಿ ಐವರು ವೈದ್ಯರಿದ್ದಾರೆ. ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಭಯೋತ್ಪಾದನಾ ಕೃತ್ಯದಲ್ಲಿ ಅವರು ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.
ಹರಿಯಾಣದ ಫರೀದಾಬಾದ್‌ನಲ್ಲಿರುವ ಅಲ್ ಫಲಾಹ್ ವೈದ್ಯಕೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಪುಲ್ವಾಮಾದ ಡಾ.ಉಮರ್ ನಬಿ, ವೈದ್ಯ, ಅದೇ ವಿ.ವಿಯ ಬೋಧಕ ಡಾ.ಮುಜಮ್ಮಿಲ್ ಗನೈ, ಅದೇ ಕಾಲೇಜಿನ ಪ್ರಾಧ್ಯಾಪಕಿ, ವೈದ್ಯೆ ಡಾ.ಶಾಹೀನ್ ಸಯೀದ್, ವೈದ್ಯ ಡಾ. ಪರ್ವೇಜ್ ಅನ್ಸಾರಿ, ಅನಂತನಾಗ್‌ನ ಡಾ.ಆದಿಲ್ ಅಹ್ಮದ್ ಅವರು ಭಯೋತ್ಪಾದನೆ ಸಂಘಟನೆಗಳೊಂದಿಗೆ ನಂಟು ಹೊಂದಿದ್ದರು ಎನ್ನಲಾಗಿದೆ. ನಿಷೇಧಿತ ಜೈಷ್–ಎ–ಮೊಹಮ್ಮದ್ (ಜೆಇಎಂ) ಮತ್ತು ಅನ್ಸಾರ್ ಗಜ್ವತ್–ಉಲ್–ಹಿಂದ್ ಉಗ್ರ ಸಂಘಟನೆಗಳೊಂದಿಗೆ ಸೇರಿ ಇವರು ಸಂಚು ರೂಪಿಸಿದ್ದರು ಎನ್ನುವ ಆರೋಪ ಇದೆ.
ಹೊಸ ಪರಿಕಲ್ಪನೆ ಅಲ್ಲ
ವೈಟ್ ಕಾಲರ್ ಭಯೋತ್ಪಾದನೆ ಪರಿಕಲ್ಪನೆ ಹೊಸದೇನಲ್ಲ. ಉನ್ನತ ಶಿಕ್ಷಣ ಪಡೆದವರು, ಆರ್ಥಿಕವಾಗಿ ಸದೃಢ ಕುಟುಂಬಗಳಿಗೆ ಸೇರಿದವರು ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಕೊಂಡ ಉದಾಹರಣೆಗಳು ಸಾಕಷ್ಟಿವೆ.
ಬಹುತೇಕ ಭಯೋತ್ಪಾದಕ ಸಂಘಟನೆಗಳಲ್ಲಿ ಉನ್ನತ ಸ್ಥಾನಗಳಲ್ಲಿ ಇದ್ದವರು, ಇರುವವರಲ್ಲಿ ಹೆಚ್ಚಿನವರು ಉನ್ನತ ಶಿಕ್ಷಣ ಪಡೆದವರೇ. ಇವರು ಆರ್ಥಿಕವಾಗಿ ಅನುಕೂಲಸ್ಥ ಕುಟುಂಬಗಳಿಗೆ ಸೇರಿದವರು. ಅಧ್ಯಯನಗಳೇ ಇದನ್ನು ಹೇಳಿವೆ
ಶ್ರೀಲಂಕಾದಲ್ಲಿ ಸಕ್ರಿಯವಾಗಿದ್ದ ಎಲ್‌ಟಿಟಿಇ ಬಂಡುಕೋರ ಸಂಘಟನೆಯು ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು, ಸಂಶೋಧಕರನ್ನು ನೇಮಕಾತಿ ಮಾಡಿಕೊಳ್ಳುತ್ತಿತ್ತು. ಆ ಸಂಘಟನೆಯ ಅಂತರರಾಷ್ಟ್ರೀಯ ಜಾಲದಲ್ಲಿ ಉನ್ನತ ಹುದ್ದೆಗಳಲ್ಲಿ ಉನ್ನತ ಶಿಕ್ಷಣ ಪಡೆದವರೇ ಇದ್ದರು
ಖಾಲಿಸ್ತಾನಕ್ಕಾಗಿ ಹೋರಾಟ ನಡೆಸುತ್ತಿರುವ ಸಿಖ್ ಪ್ರತ್ಯೇಕತಾವಾದಿಗಳಲ್ಲಿ ಬಹುತೇಕರು ಉನ್ನತ ಶಿಕ್ಷಣ ಪಡೆದವರು ಮತ್ತು ವಿದೇಶದಲ್ಲಿ ದೊಡ್ಡ ಹುದ್ದೆಗಳಲ್ಲಿ ಇರುವವರು
2011ರ ಸೆಪ್ಟೆಂಬರ್ 9ರಂದು ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆಸಿದ ವಿಮಾನ ಅಪಹರಣಕಾರರ ನಾಯಕತ್ವ ವಹಿಸಿದ್ದ ಮೊಹಮ್ಮದ್ ಅಟ್ಟಾ ನಗರ ಯೋಜನೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ
ಅಲ್ ಕೈದಾ ಮುಖ್ಯಸ್ಥನಾಗಿದ್ದ ಒಸಾಮ ಬಿನ್ ಲಾಡೆನ್ ಸಿವಿಲ್ ಎಂಜಿನಿಯರಿಂಗ್ ಕಲಿತವನು. ಅವನ ಉತ್ತರಾಧಿಕಾರಿಯಾಗಿದ್ದ ಅಯ್ಮನ್ ಅಲ್–ಜವಾಹಿರಿ ವೈದ್ಯಕೀಯ ಪದವೀಧರ
ಈಗ ಭಾರತದ ಜೈಲಿನಲ್ಲಿರುವ, 26/11 ಮುಂಬೈ ದಾಳಿಯ ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿ, ಪಾಕಿಸ್ತಾನದ ಸೈನಿಕ ಶಾಲೆಯಲ್ಲಿ ಕಲಿತವ. ಅಮೆರಿಕದಲ್ಲಿ ಉದ್ಯಮಿಯಾಗಿದ್ದುಕೊಂಡು ಆರ್ಥಿಕವಾಗಿ ಪ್ರಬಲನಾಗಿದ್ದ
ನಿಷೇಧಿತ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಅಬ್ದುಲ್ ಶುಭನ್ ಖುರೇಷಿ ಸಾಫ್ಟ್‌ವೇರ್ ಎಂಜಿನಿಯರ್ ಆಗಸಂಘಟನೆಯ ಆಯಕಟ್ಟಿನ ಹುದ್ದೆಯಲ್ಲಿರುವ ವೈಟ್ ಕಾಲರ್ ಭಯೋತ್ಪಾದಕರು ಹೊರ ದೇಶಗಳ ಸಂಘಟನೆಗಳು, ಭಯೋತ್ಪಾದಕರೊಂದಿಗೆ ಸಂಪರ್ಕ, ಸಂವಹನ ಸಾಧಿಸುವ ಕೆಲಸ ಮಾಡುತ್ತಾರೆ. ಇದರೊಂದಿಗೆ ನೇಮಕಾತಿ, ಸಾರಿಗೆ ಯೋಜನೆ, ಶಸ್ತ್ರ, ಸ್ಫೋಟಕಗಳ ಖರೀದಿ, ಸಂಗ್ರಹ, ದೇಣಿಗೆ ಸಂಗ್ರಹ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ
ಉಗ್ರರಾಗುವುದೇಕೆ?
ಉನ್ನತ ಶಿಕ್ಷಣ ಪಡೆದವರು, ಆರ್ಥಿಕವಾಗಿ ಸದೃಢರಾದವರು ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಿದ್ದರೂ ಭಯೋತ್ಪಾದನಾ ಸಂಘಟನೆಗಳಿಗೆ ಸೇರುವುದಕ್ಕೆ ಹಲವು ಕಾರಣಗಳಿವೆ
ತಮ್ಮನ್ನು ಶೋಷಿಸಲಾಗುತ್ತಿದೆ, ಸಮಾಜದಲ್ಲಿ ಗೌರವ ಸಿಗುತ್ತಿಲ್ಲ, ಸಮುದಾಯದ ಉಳಿವಿಗೆ ಬೆದರಿಕೆ ಒಡ್ಡಲಾಗುತ್ತಿದೆ ಮುಂತಾದ ಭಾವನಾತ್ಮಕ ಕಾರಣಗಳು
ಮೂಲಭೂತವಾದದ ಸೆಳೆತ
ಸಂಘಟನೆ ಆಧಾರಿತವಾಗಿ ಗುರುತಿಸಿಕೊಳ್ಳುವ ಬಯಕೆ
ಭಯೋತ್ಪಾದನಾ ಜಾಲಗಳೊಂದಿಗೆ ಕುಟುಂಬದ ಸದಸ್ಯರು, ಸ್ನೇಹಿತರು ಹೊಂದಿರುವ ಸಂಪರ್ಕ
ಸಂಘಟನೆಗಳ ಸಿದ್ಧಾಂತ, ನಿಲುವುಗಳ ಆಕರ್ಷಣೆ
ಆರ್ಥಿಕ ಸಂಕಷ್ಟ; ಇನ್ನಷ್ಟು ಹಣ ಸಂಪಾದಿಸುವ ಉದ್ದೇಶ
ಗೌರವ, ಜನಪ್ರಿಯತೆ ಗಳಿಸುವ ಆಸೆ
ಆಧಾರ: ಪಿಟಿಐ, ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್ ವರದಿ, ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗ, ದಿ ಗಾರ್ಡಿಯನ್, ಎಫ್‌ಬಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.