1947ರಲ್ಲಿ ಭಾರತದಿಂದ ಪಾಕಿಸ್ತಾನ ಬೇರ್ಪಟ್ಟ ನಂತರ ಎರಡೂ ದೇಶಗಳ ನಡುವೆ ನಾಲ್ಕು ಯುದ್ಧಗಳು ನಡೆದಿವೆ. ಲೆಕ್ಕವಿಲ್ಲದಷ್ಟು ಬಾರಿ ಸಂಘರ್ಷ, ಆರೋಪ ಪ್ರತ್ಯಾರೋಪಗಳು, ವಾಗ್ವಾದಗಳು ವರದಿಯಾಗಿವೆ. ಭಾರತದಲ್ಲಿ ಅನೇಕ ಭಯೋತ್ಪಾದನಾ ಕೃತ್ಯಗಳು ಘಟಿಸಿವೆ. ಭಾರತವು ಪಾಕಿಸ್ತಾನದ ವಿರುದ್ಧ ಹಲವು ಬಾರಿ ವಿವಿಧ ರೀತಿಯ ಪ್ರತೀಕಾರದ ಕ್ರಮಗಳನ್ನು ಕೈಗೊಂಡಿದೆ. 2016ರಲ್ಲಿ ಉರಿ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿತ್ತು. 2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನದ ಬಾಲಾಕೋಟ್‌ನ ಉಗ್ರ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು. ಹಲವು ಬಾರಿ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ. ವೀಸಾ ನಿಯಮಗಳನ್ನು ಬಿಗಿಗೊಳಿಸಿದೆ. ಆದರೆ, ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿರುವುದು ಇದೇ ಮೊದಲು.
ಸಿಂಧೂ ನದಿ ವ್ಯವಸ್ಥೆಯು ಸಿಂಧೂ ನದಿ ಮತ್ತು ಅದರ ಐದು ಉಪನದಿಗಳನ್ನು (ಸಟ್ಲೇಜ್, ರಾವಿ, ಬ್ಯಾಸ್, ಝೇಲಮ್, ಚಿನಾಬ್) ಒಳಗೊಂಡಿದೆ. ಹಿಮಾಲಯದಲ್ಲಿ ಹುಟ್ಟುವ ಇವು ಭಾರತದಲ್ಲಿ ಹರಿಯುತ್ತಾ ಪಾಕಿಸ್ತಾನ ಪ್ರವೇಶಿಸಿ ನಂತರ ಅಂತಿಮವಾಗಿ ಅರಬ್ಬಿ ಸಮುದ್ರ ಸೇರುತ್ತವೆ. ಸಿಂಧೂ ನದಿ ವ್ಯವಸ್ಥೆ ಎರಡೂ ರಾಷ್ಟ್ರಗಳಿಗೂ ಮಹತ್ವದ್ದು. ಕೃಷಿ, ನೀರಾವರಿ ಉದ್ದೇಶಕ್ಕೆ ಎರಡೂ ರಾಷ್ಟ್ರಗಳು ಬಳಸಿಕೊಳ್ಳುತ್ತಿವೆ.
ನೀರಿನ ಹಂಚಿಕೆಯ ಸಂಬಂಧ ಸುದೀರ್ಘ ಒಂಬತ್ತು ವರ್ಷಗಳ ಮಾತುಕತೆಯ ನಂತರ, ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960ರ ಸೆ.19ರಂದು ಕರಾಚಿಯಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿದ್ದವು. ಪೂರ್ವ ನದಿಗಳ ಪಾಲು ಸಂಪೂರ್ಣವಾಗಿ ಭಾರತದ್ದಾದರೆ, ಪಶ್ಚಿಮ ನದಿಗಳ ನೀರು ಪಾಕಿಸ್ತಾನಕ್ಕೆ ಸೇರುತ್ತದೆ ಎನ್ನುವುದು ಒಪ್ಪಂದದ ತಿರುಳು. ಪಶ್ಚಿಮದ ನದಿಗಳ ನೀರಿನಲ್ಲಿ ಭಾರತವು ನೀರಾವರಿ ಮತ್ತು ವಿದ್ಯುತ್ ಉತ್ಪಾದನೆ ಉದ್ದೇಶಗಳಿಗೆ ಬಳಸಲು ಅವಕಾಶವಿದೆ. ಅಲ್ಲದೆ 34 ಲಕ್ಷ ಎಕರೆ ಅಡಿಗಳಷ್ಟು ಪ್ರಮಾಣದ ನೀರನ್ನು ಸಂಗ್ರಹಿಸಲೂ ಒಪ್ಪಂದ ಅವಕಾಶ ನೀಡುತ್ತದೆ.
ಪಶ್ಚಿಮದ ನದಿಗಳಿಂದ ಪಾಕಿಸ್ತಾನಕ್ಕೆ ಸ್ವಾಭಾವಿಕವಾಗಿ ಹರಿದುಹೋಗುವ ನೀರಿಗೆ ಅಡ್ಡಿಯೇನೂ ಇಲ್ಲ. ಆದರೆ, ನಿಯಂತ್ರಿತ ಹರಿವಿನ ಮೂಲಕ ಸಾಗುವ ನೀರನ್ನು (ಚಿನಾಬ್‌ಗೆ ಕಟ್ಟಲಾಗಿರುವ ಬಗ್ಲಿಹಾರ್‌ನಂಥ ಹಲವು ಅಣೆಕಟ್ಟುಗಳು ಮತ್ತು ವಿದ್ಯುತ್ ಯೋಜನೆಗಳ ನೀರು) ಸ್ಥಗಿತಗೊಳಿಸಲು ಭಾರತಕ್ಕೆ ಸಾಧ್ಯವಿದೆ. ಈ ನೀರು ಪಾಕಿಸ್ತಾನದ ನೀರಾವರಿ ಮತ್ತು ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ.
ಪಾಕಿಸ್ತಾನಕ್ಕೆ ಹೊಡೆತ ನೀಡಬಹುದಾದ ಮತ್ತೊಂದು ಸಂಗತಿ ಎಂದರೆ, ಪಶ್ಚಿಮ ನದಿಗಳಿಗೆ ಸಂಬಂಧಿಸಿ ಪಕಲ್ ದುಲ್ ಮತ್ತು ಸವಾಲ್‌ಕೋಟ್‌ನಂಥ ಅಣೆಕಟ್ಟುಗಳ ನಿರ್ಮಾಣ ಮತ್ತಿತರ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು. ಇದರಿಂದ ಹೆಚ್ಚು ನೀರು ಸಂಗ್ರಹ ಮಾಡಲು ಅವಕಾಶವಾಗಲಿದ್ದು, ಭವಿಷ್ಯದಲ್ಲಿ ನದಿ ನೀರಿನ ವಿಚಾರದಲ್ಲಿ ಭಾರತಕ್ಕೆ ಹೆಚ್ಚು ಹಿಡಿತ ಸಿಗಲಿದೆ.
ಪುಲ್ವಾಮಾ ದಾಳಿಯ ನಂತರ 2019ರಲ್ಲಿ ಭಾರತವು ಎಂಟು ಜಲವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಸಿಂಧೂ ಜಲಾನಯನ ಪ್ರದೇಶದಲ್ಲಿ ಭಾರತ ಕೈಗೆತ್ತಿಕೊಳ್ಳುವ ಯೋಜನೆಗಳ ಪರಿಶೀಲನೆಗೆ ಬರಲು ಪಾಕಿಸ್ತಾನದ ಅಧಿಕಾರಿಗಳಿಗೆ ಅವಕಾಶ ನೀಡುವುದೂ ಒಪ್ಪಂದದ ಒಂದು ಭಾಗ. ಇನ್ನು ಮುಂದೆ, ಒಪ್ಪಂದಕ್ಕೆ ಭಾರತ ಬದ್ಧವಾಗಿರುವುದಿಲ್ಲವಾದ್ದರಿಂದ ಭಾರತದ ಅಣೆಕಟ್ಟು, ಜಲಾಶಯಗಳ ನಿರ್ಮಾಣಕ್ಕೆ ಮುಂಚೆಯೇ ಅವುಗಳ ವಿನ್ಯಾಸವನ್ನು ಪಾಕಿಸ್ತಾನಕ್ಕೆ ತೋರಿಸಿ ಅನುಮತಿ ಪಡೆಯುವ ಅಗತ್ಯವಿಲ್ಲ.
ಕಿಶನ್‌ಗಂಗಾ ಸೇರಿದಂತೆ ಪಶ್ಚಿಮ ನದಿಗಳಿಗೆ ಕಟ್ಟಲಾಗಿರುವ ಜಲಾಶಯಗಳ ಹೂಳೆತ್ತುವ ಕಾರ್ಯವನ್ನು ಆಗಸ್ಟ್‌ನಲ್ಲಿ (ಮಳೆಗಾಲ) ಮಾತ್ರವೇ ಮಾಡಬೇಕು ಎನ್ನುವುದು ಒಪ್ಪಂದದ ಮತ್ತೊಂದು ಅಂಶ. ಆದರೆ, ಒಪ್ಪಂದ ಅಮಾನತುಗೊಂಡಿರುವುದರಿಂದ ಯಾವ ಋತುವಿನಲ್ಲಾದರೂ ಹೂಳು ತೆಗೆದು, ಜಲಾಶಯಗಳನ್ನು ತುಂಬಿಸಿಕೊಳ್ಳಬಹುದಾಗಿದೆ.
ಸಿಂಧೂ ನದಿ
ನೀರಿನ ಹರಿವಿಗೆ ಸಂಬಂಧಿಸಿದ ದತ್ತಾಂಶವನ್ನು ಹಂಚಿಕೊಳ್ಳಬೇಕು ಎನ್ನುವುದು ಒಪ್ಪಂದದಲ್ಲಿನ ಮತ್ತೊಂದು ಷರತ್ತು. ಅದರ ಪ್ರಕಾರ, ಕಾಲುವೆ, ಜಲಾಶಯ, ಅಣೆಕಟ್ಟುಗಳ ನೀರಿನ ಒಳಹರಿವು ಮತ್ತು ಹೊರಹರಿವು, ಬಳಕೆಯ ಪ್ರಮಾಣ, ಪ್ರವಾಹದ ಸ್ಥಿತಿಗತಿ ಬಗ್ಗೆ ಭಾರತವು ಪಾಕಿಸ್ತಾನದೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು. ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ನದಿಗಳಲ್ಲಿ ಹರಿಯುವುದರಿಂದ ಈ ಮಾಹಿತಿ ಪಾಕಿಸ್ತಾನಕ್ಕೆ ಬಹಳ ಮುಖ್ಯವಾದುದಾಗಿದೆ. ಒಪ್ಪಂದ ಅಮಾನತಿನಲ್ಲಿರುವುದರಿಂದ, ಭಾರತವು ಇನ್ನು ಮುಂದೆ ಮಾಹಿತಿ ಹಂಚಿಕೊಳ್ಳದೇ ಇರಬಹುದಾಗಿದೆ.
ಈಗಾಗಲೇ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಪಾಕಿಸ್ತಾನಕ್ಕೆ ಭಾರತದ ನಿರ್ಧಾರದಿಂದ ತಕ್ಷಣಕ್ಕೆ ಹೊಡೆತ ಬೀಳದಿದ್ದರೂ ದೀರ್ಘಾವಧಿಯಲ್ಲಿ ಅದರ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ನದಿಗಳ ನೀರಿನ ಆಧಾರದಲ್ಲಿ ಭಾರತ ಕೈಗೆತ್ತಿಕೊಂಡಿರುವ ಹಲವು ಅಣೆಕಟ್ಟು ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲದೇ ಇರುವುದರಿಂದ ತನ್ನ ಪಾಲಿನ ಸಂಪೂರ್ಣ ನೀರನ್ನು ಬಳಸಿಕೊಳ್ಳುವುದಕ್ಕೆ, ಹೆಚ್ಚು ನೀರು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ, ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ವೇಗ ನೀಡಿ, ಬೇಗ ಪೂರ್ಣಗೊಳಿಸಿ ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದಿಡಲು ಸಾಧ್ಯವಾದರೆ ಅದು ಪಾಕಿಸ್ತಾನದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಿಂಧೂ ಜಲ ಒಪ್ಪಂದದ ಪ್ರಕಾರ, ಅದರಲ್ಲಿರುವ ಯಾವುದೇ ಅಂಶವನ್ನು ಬದಲಾಯಿಸಬೇಕಾದರೂ ಎರಡೂ ದೇಶಗಳಲ್ಲದೆ ವಿಶ್ವಸಂಸ್ಥೆ ಅನುಮತಿಯೂ ಬೇಕು. ಒಪ್ಪಂದದಲ್ಲಿ ಕೆಲವು ನಿಯಮಗಳನ್ನು ಬದಲಾಯಿಸುವ ಅಗತ್ಯದ ಬಗ್ಗೆ ಭಾರತ ಕಳೆದ ವರ್ಷ ಪಾಕಿಸ್ತಾನಕ್ಕೆ ನೋಟಿಸ್ ಕೂಡ ನೀಡಿತ್ತು. ಹೀಗಿರುವಾಗ ಭಾರತವು ಈಗ ಏಕಪಕ್ಷೀಯವಾಗಿ ಅದನ್ನು ಅಮಾನತಿನಲ್ಲಿಡುವ ತೀರ್ಮಾನ ಕೈಗೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವವಾಗಿದೆ. ಭಾರತದ ನಿರ್ಧಾರವು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಪಾಕಿಸ್ತಾನ ಆರೋಪಿಸಿದ್ದು, ಅಲ್ಲಿನ ತಜ್ಞರು, ಮಾಜಿ ರಾಜತಾಂತ್ರಿಕ ಅಧಿಕಾರಿಗಳು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಕ್ಕೆ ರಸ್ತೆ ಮೂಲಕ ಸಂಪರ್ಕ ಕಲ್ಪಿಸುವ ಅಟ್ಟಾರಿ – ವಾಘಾ ಗಡಿಯನ್ನು ತಕ್ಷಣದಿಂದ ಮುಚ್ಚುವ ಘೋಷಣೆಯನ್ನೂ ಭಾರತ ಮಾಡಿದೆ. ಪಂಜಾಬ್ ರಾಜಧಾನಿ ಅಮೃತಸರದಿಂದ 28 ಕಿ.ಮೀ ದೂರದಲ್ಲಿರುವ ಅಟ್ಟಾರಿ ಗಡಿಯು ಭಾರತ ಮತ್ತು ಪಾಕಿಸ್ತಾನದ ನಡುವೆ ಕಾನೂನುಬದ್ಧ ಸಂಚಾರಕ್ಕೆ ಇರುವ ಏಕೈಕ ರಸ್ತೆ ಮಾರ್ಗ. ಪಾಕಿಸ್ತಾನ ಮಾತ್ರವಲ್ಲದೆ ಅಫ್ಗಾನಿಸ್ತಾನದೊಂದಿಗಿನ ಸರಕುಗಳ ವ್ಯಾಪಾರಕ್ಕೂ ಇದೇ ಗಡಿಯನ್ನು ಬಳಸಲಾಗುತ್ತದೆ. ಪ್ರತಿ ವರ್ಷ ಸಾವಿರಾರು ಮಂದಿ ಈ ಗಡಿಯ ಮೂಲಕ ಉಭಯ ದೇಶಗಳ ನಡುವೆ ಪ್ರಯಾಣವನ್ನೂ ಮಾಡುತ್ತಾರೆ. ಈ ಗಡಿಯನ್ನು ಮುಚ್ಚಿರುವುದು ಉಭಯ ದೇಶಗಳ ನಡುವಿನ ವ್ಯಾಪಾರಕ್ಕೆ ಮಾತ್ರವಲ್ಲದೆ ಭಾರತದೊಂದಿಗೆ ಅಫ್ಗಾನಿಸ್ತಾನ ಮಾಡುತ್ತಿರುವ ವಹಿವಾಟಿನ ಮೇಲೂ ಪರಿಣಾಮ ಬೀರಲಿದೆ. 2018ರ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಸಂಬಂಧ ಹಳಸಿದ್ದರೂ ಸಣ್ಣ ಪ್ರಮಾಣದ ವ್ಯಾಪಾರ ಮುಂದುವರಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.