ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇದರ ನಡುವೆಯೂ ನ್ಯಾಯ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ ಇರುವುದು ಅಂಕಿಅಂಶಗಳಿಂದ ತಿಳಿಯುತ್ತದೆ. ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಇಬ್ಬರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಸುಪ್ರೀಂ ಕೋರ್ಟ್‌ನ 75 ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆಯೂ ಮುಖ್ಯ ನ್ಯಾಯಮೂರ್ತಿ ಆಗಿಲ್ಲ. ದೇಶದ 25 ಹೈಕೋರ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 763 ನ್ಯಾಯಮೂರ್ತಿಗಳ ಪೈಕಿ 110 ಮಹಿಳಾ ನ್ಯಾಯಮೂರ್ತಿಗಳು ಇದ್ದಾರೆ.
ಮಹಿಳೆಯರು ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಕೆಳಹಂತದ ನ್ಯಾಯಾಲಯಗಳ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ನ್ಯಾಯಾಂಗ ಅಧಿಕಾರಿಗಳ ಹುದ್ದೆಗೆ ನೇಮಕವಾಗುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ ಒಟ್ಟಾರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ ಇದೆ ಎನ್ನುವ ಮಾತು ವ್ಯಾಪಕವಾಗಿದೆ. ಅಂಕಿಅಂಶಗಳು ಕೂಡ ಇದನ್ನು ಪುಷ್ಟೀಕರಿಸುತ್ತವೆ. ಸೆಂಟರ್ ಫಾರ್ ಲಾ ಆ್ಯಂಡ್ ಪಾಲಿಸಿ ರಿಸರ್ಚ್ (ಸಿಎಲ್‌ಪಿಆರ್) ನ್ಯಾಯಾಂಗದಲ್ಲಿ ಮಹಿಳೆಯರ ಪ್ರಮಾಣದ ಬಗ್ಗೆ ಇತ್ತೀಚೆಗೆ ವರದಿ ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ತನ್ನ 75 ವರ್ಷಗಳ ಇತಿಹಾಸದಲ್ಲಿ 279 ನ್ಯಾಯಮೂರ್ತಿಗಳನ್ನು ಕಂಡಿದೆ. ಅವರಲ್ಲಿ 11 ಮಂದಿ (ಶೇ 3.94) ಮಾತ್ರ ಮಹಿಳಾ ನ್ಯಾಯಮೂರ್ತಿಗಳು. ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಇಬ್ಬರು ಮಹಿಳಾ ನ್ಯಾಯಮೂರ್ತಿಗಳು ಮಾತ್ರ (ಬಿ.ವಿ.ನಾಗರತ್ನ ಮತ್ತು ಬೇಲಾ ತ್ರಿವೇದಿ) ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ನ್ಯಾ. ಬೇಲಾ ತ್ರಿವೇದಿ ಅವರು 2025ರ ಜೂನ್‌ನಲ್ಲಿ ನಿವೃತ್ತರಾಗಲಿದ್ದು, ನಂತರ ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಒಬ್ಬರು ಮಹಿಳಾ ನ್ಯಾಯಮೂರ್ತಿ ಮಾತ್ರವೇ ಇರುತ್ತಾರೆ.
ಸುಪ್ರೀಂ ಕೋರ್ಟ್‌ನಲ್ಲಿ 75 ವರ್ಷದಲ್ಲಿ 51 ಮಂದಿ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರಿದ್ದಾರೆ. ಆದರೆ, ಅವರಲ್ಲಿ ಒಬ್ಬರೂ ಮಹಿಳೆ ಇಲ್ಲ. ಕರ್ನಾಟಕದ ಬಿ.ವಿ.ನಾಗರತ್ನ ಅವರು ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ. ಆದರೆ, ಮುಖ್ಯ ನ್ಯಾಯಮೂರ್ತಿಯಾಗಿ ಅವರು 36 ದಿನ ಮಾತ್ರ ಕಾರ್ಯನಿರ್ವಹಿಸಲಿದ್ದು, ನಂತರ ನಿವೃತ್ತರಾಗಲಿದ್ದಾರೆ.
ಸೆ.2021ರಿಂದ ಸುಪ್ರೀಂ ಕೋರ್ಟ್‌ಗೆ 23 (ಈಗಿನ ಸಂಖ್ಯೆಯಲ್ಲಿ ಶೇ 69.7ರಷ್ಟು) ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಒಬ್ಬರೂ ಮಹಿಳೆಯರಿಲ್ಲ. ಕಳೆದ 75 ವರ್ಷಗಳಲ್ಲಿ ಒಂಬತ್ತು ವಕೀಲರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇರವಾಗಿ ನೇಮಿಸಲಾಗಿದೆ; ಅವರಲ್ಲಿ ಒಬ್ಬರು ಮಾತ್ರ ಮಹಿಳೆ (ಇಂದು ಮಲ್ಹೋತ್ರಾ–2018).
ಹೈಕೋರ್ಟ್‌ಗಳ ಸ್ಥಿತಿಯೂ ಭಿನ್ನವಾಗಿಲ್ಲ. ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿರುವ ಮಹಿಳಾ ನ್ಯಾಯಮೂರ್ತಿಗಳ ಪ್ರಮಾಣ ಶೇ 14.42. (763 ನ್ಯಾಯಮೂರ್ತಿಗಳ ಪೈಕಿ 110). ಎಂಟು ಹೈಕೋರ್ಟ್‌ಗಳಲ್ಲಿ ತಲಾ ಒಬ್ಬರು ಮಾತ್ರ ಮಹಿಳಾ ನ್ಯಾಯಮೂರ್ತಿ ಇದ್ದಾರೆ. ಉತ್ತರಾಖಂಡ, ಮೇಘಾಲಯ ಮತ್ತು ತ್ರಿಪುರಾ ಹೈಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಯೇ ಇಲ್ಲ. ದೇಶದಲ್ಲಿ ಅತಿ ದೊಡ್ಡ ಹೈಕೋರ್ಟ್ ಆಗಿರುವಾ ಅಲಹಾಬಾದ್ ಹೈಕೋರ್ಟ್‌ನಲ್ಲಿ (79 ನ್ಯಾಯಮೂರ್ತಿಗಳು) ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಮೂರು ಮಾತ್ರ. ತೆಲಂಗಾಣ ಹೈಕೋರ್ಟ್‌ನಲ್ಲಿ ಅತಿ ಹೆಚ್ಚು (30 ನ್ಯಾಯಮೂರ್ತಿಗಳ ಪೈಕಿ 10– ಶೇ 33.3ರಷ್ಟು) ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ದೇಶದಲ್ಲಿರುವ 25 ಹೈಕೋರ್ಟ್‌ಗಳ ಪೈಕಿ ಗುಜರಾತ್ ಹೈಕೋರ್ಟ್‌ನಲ್ಲಿ ಮಾತ್ರ ಮುಖ್ಯ ನ್ಯಾಯಮೂರ್ತಿ ಮಹಿಳೆಯಾಗಿದ್ದಾರೆ. ಮೂರು ಹೈಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳೇ ಇಲ್ಲ
ಜಿಲ್ಲಾ ನ್ಯಾಯಾಲಯಗಳಿಂದ ಮತ್ತು 10 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಹಿರಿಯ ವಕೀಲರ ಸಮೂಹದಿಂದ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸಲಾಗುತ್ತದೆ. ಈ ಎರಡೂ ವಿಧಾನಗಳಲ್ಲಿಯೂ ಮಹಿಳೆಯರಿಗೆ ಕಡಿಮೆ ಪ್ರಾತಿನಿಧ್ಯ ಸಿಗುತ್ತಿದೆ. ಹೈಕೋರ್ಟ್‌ಗಳ ನ್ಯಾಯಮೂರ್ತಿಗಳನ್ನು ಹಿರಿತನದ ಆಧಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗುತ್ತದೆ. ಹೈಕೋರ್ಟ್‌ಗಳಿಗೆ ಪುರುಷ ನ್ಯಾಯಮೂರ್ತಿಗಳು ನೇಮಕವಾಗುತ್ತಿರುವ ಸರಾಸರಿ ವಯಸ್ಸು 51.86 ವರ್ಷ. ಆದರೆ, ಮಹಿಳಾ ನ್ಯಾಯಮೂರ್ತಿಗಳ ನೇಮಕದ ಸರಾಸರಿ ವಯಸ್ಸು 53.17 ವರ್ಷ. ಇದು ಮಹಿಳಾ ನ್ಯಾಯಮೂರ್ತಿಗಳು ನ್ಯಾಯಾಂಗದಲ್ಲಿ ಅತ್ಯುನ್ನತ ಪದವಿಗೇರುವ ವಿಚಾರದಲ್ಲಿ ತೊಡಕಾಗಿದೆ.
ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಾಗಿ ಮಹಿಳೆಯರು ಪುರುಷರಿಗಿಂತ ತಡವಾಗಿ ನೇಮಕವಾಗುತ್ತಿರುವುದರಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಸುಪ್ರೀಂ ಕೋರ್ಟ್‌ಗೆ ನೇಮಕವಾಗುತ್ತಿರುವ ಮಹಿಳಾ ನ್ಯಾಯಮೂರ್ತಿಗಳ ಸರಾಸರಿ ಸೇವಾವಧಿ ಪುರುಷ ನ್ಯಾಯಮೂರ್ತಿಗಳ ಸರಾಸರಿ ಸೇವಾವಧಿಗಿಂತ ಒಂದು ವರ್ಷ ಕಡಿಮೆ ಇದೆ. ಹೀಗಾಗಿಯೇ ಒಬ್ಬ ಮಹಿಳಾ ನ್ಯಾಯಮೂರ್ತಿಗೂ ದೇಶದ ಅತ್ಯುನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರಲು ಇದುವರೆಗೆ ಸಾಧ್ಯವಾಗಿಲ್ಲ.
ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಇತರ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾಗಬೇಕು; ಅದರಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕು ಎನ್ನುವ ಆಶಯ ವ್ಯಕ್ತವಾಗಿದೆ.
ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರ ಪರಿಸ್ಥಿತಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಬೆಳಕು ಚೆಲ್ಲಿದೆ.
‘ಕಾರ್ಯವೈಖರಿ ಸಮಾಧಾನಕರವಾಗಿಲ್ಲ’ ಎಂಬ ಕಾರಣಕ್ಕೆ 2023ರಲ್ಲಿ ಮಧ್ಯಪ್ರದೇಶದಲ್ಲಿ ಕಿರಿಯ ವಿಭಾಗದ ಇಬ್ಬರು ಸಿವಿಲ್ ನ್ಯಾಯಾಧೀಶರನ್ನು ಕೆಲಸದಿಂದ ವಜಾ ಮಾಡಿದ್ದನ್ನು ಸುಪ್ರೀಂ ಕೋರ್ಟ್ ಈ ವರ್ಷದ ಫೆಬ್ರುವರಿ 29ರಂದು ರದ್ದುಪಡಿಸಿತ್ತು.
ಈ ಕ್ರಮದ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್, 15 ದಿನಗಳ ಒಳಗಾಗಿ ಇಬ್ಬರನ್ನೂ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿತ್ತು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ನ್ಯಾಯಪೀಠವು ‘ನ್ಯಾಯಾಂಗ ಅಧಿಕಾರಿಗಳ ವಜಾ ನಿರ್ಧಾರವು ಶಿಕ್ಷಾರೂಪದ, ಮನಸೋಇಚ್ಛೆ ಮತ್ತು ಕಾನೂನುಬಾಹಿರ ಕ್ರಮ’ ಎಂದು ಅಭಿಪ್ರಾಯಪಟ್ಟಿತ್ತು.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ಪೀಠವು ಮಹಿಳಾ ನ್ಯಾಯಾಧೀಶರು ಎದುರಿಸುವ ಸವಾಲುಗಳ ಬಗ್ಗೆಯೂ ತೀರ್ಪಿನಲ್ಲಿ ಪ್ರಸ್ತಾಪಿಸಿತ್ತು. ‘ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರಿಗೆ ಅಗತ್ಯವಾದ ಸೂಕ್ಷ್ಮ ಕೆಲಸದ ವಾತಾವರಣ ಮತ್ತು ಪೂರಕ ಮಾರ್ಗದರ್ಶನ ಒದಗಿಸದೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ನ್ಯಾಯಾಂಗ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಸಮಾಧಾನ ಪಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥ ಇಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ದೇಶದ ಅತ್ಯುನ್ನತ ನ್ಯಾಯಾಲಯಗಳಲ್ಲಿ ಹಿಂದುಳಿತ, ದಲಿತ ಮತ್ತು ಅಲ್ಪಸಂಖ್ಯಾತ ನ್ಯಾಯಮೂರ್ತಿಗಳ ಪ್ರಮಾಣ ಕಡಿಮೆ ಇದ್ದು, ಸಾಮಾಜಿಕ ನ್ಯಾಯಕ್ಕೆ ತಕ್ಕಂತೆ ಮೀಸಲಾತಿ ಕಲ್ಪಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದಲೂ ಕೇಳಿಬರುತ್ತಲೇ ಇದೆ. ಆದರೆ, ಸಂವಿಧಾನದ 124, 217 ಮತ್ತು 224ನೇ ವಿಧಿಗಳ ಅನ್ವಯ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಯಾವುದೇ ಜಾತಿ ಮತ್ತು ವರ್ಗಗಳಿಗೆ ಮೀಸಲಾತಿ ಇರುವುದಿಲ್ಲ ಎಂದು ಕೇಂದ್ರದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ (2024ರ ನವೆಂಬರ್ 28) ತಿಳಿಸಿದ್ದರು.
ಆದರೆ, 2018ರ ನಂತರ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಸಂದರ್ಭದಲ್ಲಿ ಅವರ ಸಾಮಾಜಿಕ ಹಿನ್ನೆಲೆಯ ಮಾಹಿತಿ ಪಡೆಯಲಾಗುತ್ತಿದೆ. ಅದರ ಆಧಾರದಲ್ಲಿ 2018ರಿಂದ ನೇಮಕವಾದ ವಿವಿಧ ರಾಜ್ಯಗಳ ಒಟ್ಟು 684 ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ 21 ಎಸ್‌ಸಿ, 14 ಎಸ್‌ಟಿ, 82 ಹಿಂದುಳಿದ ಜಾತಿ (ಒಬಿಸಿ), 37 ಅಲ್ಪಸಂಖ್ಯಾತ ನ್ಯಾಯಮೂರ್ತಿಗಳು ಇದ್ದಾರೆ (2024 ಅಕ್ಟೋಬರ್ 31ರವರೆಗಿನ ಮಾಹಿತಿ) ಎಂದು ಸಚಿವರು ಹೇಳಿದ್ದರು.
ಆಧಾರ: ಸಿಎಲ್‌ಪಿಆರ್‌ನ ‘ಈಕ್ವಲ್ ಜಸ್ಟೀಸ್’ ವರದಿ, ಸುಪ್ರೀಂ ಕೋರ್ಟ್ ವೆಬ್‌ಸೈಟ್, ಕರ್ನಾಟಕ ಹೈಕೋರ್ಟ್ ವೆಬ್‌ಸೈಟ್, ಲೋಕಸಭೆಯಲ್ಲಿ ಸಚಿವರ ಉತ್ತರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.