ADVERTISEMENT

ರೋಚಕ ಇನ್ವಿಟೇಶನ್‌ ಕಪ್‌

ರವಿ ಕುಮಾರ್‌
Published 22 ಫೆಬ್ರುವರಿ 2015, 19:30 IST
Last Updated 22 ಫೆಬ್ರುವರಿ 2015, 19:30 IST

ಚಂಚಲತೆಗೆ ಇನ್ನೊಂದು ಹೆಸರು ಕುದುರೆ ರೇಸ್‌. ಪ್ರತಿಯೊಂದು ರೇಸ್‌ಗೂ  ಮೊದಲು ದಿನಗಟ್ಟಲೆ  ಚರ್ಚೆ  ನಡೆಯುತ್ತವೆ. ಈಗ ಚರ್ಚೆಗೆ ಗ್ರಾಸ ವಾಗಿರು ವುದು ಮುಂಬೈನಲ್ಲಿ ಮಾರ್ಚ್‌ 1 ರಂದು ನಡೆಯಲಿರುವ ಇನ್ವಿಟೇಶನ್‌ ಕಪ್‌. ಅಲ್ಲಿ ಬೀ ಸೇಫ್‌ ಮತ್ತು ಅಮೇಜಿಂಗ್‌ ಗ್ರೇಸ್‌ ಮೊದಲ ಸಲ ಪೈಪೋಟಿ ನಡೆಸುತ್ತಿರು ವುದು ಕುತೂಹಲ ಕೆರಳಿಸಿದೆ.

ಹತ್ತು ರೇಸ್‌ಗಳಲ್ಲಿ 9 ಬಾರಿ ವಿವಿಧ ದೂರದ ರೇಸ್‌ಗಳನ್ನು ಗೆದ್ದು  ಬೀ ಸೇಫ್‌ ತಾನು ಸಮರ್ಥ ಕುದುರೆಯೆಂದು ಸಾಬೀತು ಪಡಿಸಿತ್ತು.  ಬೀ ಸೇಫ್‌ ದಾಖಲೆಯ ಸಮಯದಲ್ಲಿ ಇಂಡಿಯನ್‌ ಡರ್ಬಿಯನ್ನು ಗೆದ್ದು ತಾನು 2014–15 ಋತುವಿನ 4 ವರ್ಷದ ಶ್ರೇಷ್ಠ ಕುದುರೆಯೆಂದು ಮತ್ತೊಮ್ಮೆ ಸಾಬೀತುಪಡಿಸಿತು. ಬೀ ಸೇಫ್‌ ರಾಮಸ್ವಾಮಿ ಒಡೆತನಕ್ಕೆ ಸೇರಿದ್ದು, ಮಲ್ಲೇಶ್‌ ನರೇಡು ತರಬೇತುದಾರರಾಗಿದ್ದಾರೆ.

ಹೋಲಿ ರೋಮನ್‌ ಎಂಪರರ್‌–ಓರಿಯೆಂಟಲ್‌ ಬ್ಯೂಟಿ ಜೋಡಿಯ ಮಗನಾದ ನಾಲ್ಕು ವರ್ಷದ ಈ ಕುದುರೆಯ ಎದುರು ಈಗಾಗಲೇ ನಾಲ್ಕು ವರ್ಷದ ಬಹುತೇಕ ಕುದುರೆಗಳು ಸೋತಿವೆ. ಹಾಗಂತ ಬೀ ಸೇಫ್‌ಗೆ ಇನ್ವಿಟೇಶನ್‌ ಕಪ್‌ ಪಟ್ಟದ ಹಾದಿ  ಸುಲಭವಾಗಿಲ್ಲ. ಏಕೆಂದರೆ, ಇನ್ವಿಟೇಶನ್‌ ಕಪ್‌ ರೇಸ್‌ನಲ್ಲಿ ನಾಲ್ಕು ವರ್ಷ ಮಾತ್ರವಲ್ಲದೆ ಹೆಚ್ಚಿನ ವಯಸ್ಸಿನ ಕುದುರೆಗಳು ಭಾಗವಹಿಸುತ್ತವೆ. ಅವುಗಳಲ್ಲಿ ಪ್ರಬಲ ಸ್ಪರ್ಧಿ  ಐದು ವರ್ಷದ ಅಮೇಜಿಂಗ್‌ ಗ್ರೇಸ್‌.

ಅಮೇಜಿಂಗ್‌ ಗ್ರೇಸ್‌ ತನ್ನ ಜೀವಿತದ ಮೊದಲನೇ ರೇಸ್‌ ಅನ್ನು 2000 ಮೀಟರ್ಸ್‌ ದೂರದ ರೇಸ್‌ನಲ್ಲಿ ಗೆದ್ದು,  ಭಾರೀ ಭರವಸೆ ಮೂಡಿಸಿದ್ದರೂ ‘ಫಿಟ್‌ನೆಸ್‌’ ಸಮಸ್ಯೆಯಿಂದ 2013–14ರ ಕ್ಲಾಸಿಕ್‌ ರೇಸ್‌ಗಳಲ್ಲಿ ಭಾಗವಹಿಸಿರಲಿಲ್ಲ.  2014ರ ಮುಂಬೈ ಇಂಡಿಯನ್‌ ಡರ್ಬಿಯಲ್ಲಿ ಹೆಸರಿಗೆ ಮಾತ್ರ ಭಾಗವಹಿಸಿತ್ತು. ಕಳೆದ ವರ್ಷ ಮುಂಬೈ ರೇಸ್‌ಗಳು ಮುಕ್ತಾಯಗೊಳ್ಳುವ ವೇಳೆಗೆ ‘ಫಿಟ್‌ನೆಸ್‌’ ಕಂಡುಕೊಂಡ ನಂತರ ಬೆಂಗಳೂರು ಬೇಸಿಗೆ ಮತ್ತು ಪುಣೆ ರೇಸ್‌ಗಳಲ್ಲಿ ತೋರಿದ ಸಾಮರ್ಥ್ಯ ಅದ್ಭುತವಾಗಿದೆ. 

ಇದುವರೆಗೂ ಪಡೆದ ಗೆಲುವುಗಳನ್ನು ನೋಡಿದರೆ ಈ ಹೆಣ್ಣು ಕುದುರೆಗೆ ದೂರದ ರೇಸ್‌ಗಳಲ್ಲಿ ಸರಿ ಸಾಟಿಯಾಗಿ ನಿಲ್ಲಬಹುದಾದ ಕುದುರೆ ಎಂದರೆ ಬೀ ಸೇಫ್‌ ಮಾತ್ರ. ಹರಿಕೇನ್‌ ರನ್‌–ಎಫ್ರಿನಾ ಸಂತತಿ ಅಮೇಜಿಂಗ್‌ ಗ್ರೇಸ್‌ ಇದುವರೆಗೆ ಹನ್ನೊಂದು ಬಾರಿ ಸ್ಪರ್ಧಿಸಿ, ಒಂಬತ್ತು ರೇಸ್‌ಗಳನ್ನು ಗೆದ್ದುಕೊಂಡಿದೆ.

ಕಳೆದ ವರ್ಷದ ಇಂಡಿಯನ್‌ ಡರ್ಬಿ ಮತ್ತು ಇನ್ವಿಟೇಶನ್‌ ಕಪ್‌ ವಿಜೇತ ಅಲೈಂಡರ್‌ ಅನ್ನು  ಪುಣೆಯಲ್ಲಿ 2800 ಮೀಟರ್ಸ್‌ ದೂರದ ರೇಸ್‌ನಲ್ಲಿ ಸುಲಭವಾಗಿ ಏಳು ಲೆಂಗ್ತ್‌ಗಳಿಂದ ಸೋಲಿಸಿದ ವೈಖರಿ ಈ ಹೆಣ್ಣು ಕುದುರೆಯ ಸಾಮರ್ಥ್ಯ ವನ್ನು ತೋರಿಸುತ್ತದೆ.  ವಿಜಯ್‌ ಮಲ್ಯ ಒಡೆತನದ ಈ ಕುದುರೆಯ ತರಬೇತುದಾರರು ಪೆಸಿ ಶ್ರಾಫ್‌. ಇನ್ವಿಟೇಶನ್‌ ಕಪ್‌ನಲ್ಲಿ ಖಂಡಿತವಾಗಿಯೂ ಪೈಪೋಟಿ ಇರುವುದು ಬೀ ಸೇಫ್‌ ಮತ್ತು ಅಮೇಜಿಂಗ್‌ ಗ್ರೇಸ್‌ ನಡುವೆ ಮಾತ್ರ.  

ಅಮೇಜಿಂಗ್‌ ಗ್ರೇಸ್‌ ತನ್ನ ಕೊನೆಯ ರೇಸ್‌ ಗೆಲ್ಲುವ ಮೊದಲು 134 ರೇಟಿಂಗ್‌ ಪಡೆದಿತ್ತು. ಆದರೆ, ಗೆದ್ದ ನಂತರ ರೇಟಿಂಗ್‌ ಅನ್ನು ಹೆಚ್ಚಿಸಿಲ್ಲ.  ಬೀ ಸೇಫ್‌ ತನ್ನ ಕೊನೆಯ ರೇಸ್‌ ಇಂಡಿಯನ್‌ ಡರ್ಬಿ ಗೆದ್ದ ನಂತರ ರೇಟಿಂಗ್‌ ಅನ್ನು 97ರಿಂದ 126ಕ್ಕೆ ಹೆಚ್ಚಿಸಿದೆ.  ಈ ಕಾರಣದಿಂದ ಮತ್ತು ಪುಣೆಯಲ್ಲಿ ಅಲೈಂಡರ್‌ ವಿರುದ್ಧ ಗೆದ್ದ ರೀತಿಯನ್ನು ಆಧಾರವಾಗಿಟ್ಟುಕೊಂಡು ನೋಡಿದಲ್ಲಿ, ಅಮೇಜಿಂಗ್‌ ಗ್ರೇಸ್‌ ಸ್ವಲ್ಪ ಹೆಚ್ಚಿನ ಅವಕಾಶ ಹೊಂದಿದೆ ಎನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.