ADVERTISEMENT

ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಿ 72 ವರ್ಷ:ಬೋಸ್‌ಗೆ ಘೋಷಣೆಯಾದರೂ ಸಿಗಲಿಲ್ಲವೇಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2026, 11:04 IST
Last Updated 2 ಜನವರಿ 2026, 11:04 IST
   

ಭಾರತ ಸರ್ಕಾರವು ನಾಗರಿಕರಿಗೆ ನೀಡುವ ದೇಶದ ಪರಮೋಚ್ಚ ಗೌರವವಾದ ‘ಭಾರತ ರತ್ನ ಪ್ರಶಸ್ತಿ’ ಸ್ಥಾಪನೆಯಾಗಿ ಇಂದಿಗೆ (ಜ.2) 72 ವರ್ಷ ಪೂರ್ಣಗೊಂಡಿದೆ.

ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅಸಾಧಾರಣ ಕೊಡುಗೆ ಸಲ್ಲಿಸಿದವರಿಗೆ ನೀಡಲಾಗುವ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಭಾರತ ರತ್ನ ಸ್ಥಾಪನೆಯಾಗಿದ್ದು 1954ರ ಜನವರಿ 2ರಂದು.

‘ಭಾರತ ರತ್ನ ಪ್ರಶಸ್ತಿ’ ಸ್ಥಾಪನೆಯ ಉದ್ದೇಶ

ಕಲೆ, ಸಾಹಿತ್ಯ, ಸಮಾಜ ಸೇವೆ, ವಿಜ್ಞಾನ ರಂಗದಲ್ಲಿ ಗಣನೀಯ ಸಾಧನೆ ಮಾಡಿರುವವರನ್ನು ಗುರುತಿಸುವ ಉದ್ದೇಶದಿಂದ ‘ಭಾರತ ರತ್ನ ಪ್ರಶಸ್ತಿ’ಯನ್ನು ಸ್ಥಾಪಿಸಲಾಯಿತು. ನಂತರ 2011ರಿಂದ ರಾಜಕಾರಣ, ಕ್ರೀಡೆ, ತಂತ್ರಜ್ಞಾನ, ಉದ್ಯಮ ಹೀಗೆ ಯಾವುದೇ ವಲಯಗಳಲ್ಲಿ ಅಸಮಾನ್ಯ ಸಾಧನೆ ಮಾಡಿರುವ ದೇಶದ ನಾಗರಿಕರಿಗೆ ಯಾವುದೇ ಜಾತಿ, ಧರ್ಮ, ಲಿಂಗ, ಉದ್ಯೋಗಗಳನ್ನು ಗಣನೆಗೆ ತೆಗೆದುಕೊಳ್ಳದೇ, ಆಯಾ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ. 1966ರಿಂದ ಮರಣೋತ್ತರವಾಗಿಯೂ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದುವರೆಗೂ 18 ಜನರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ.

ADVERTISEMENT

ಮೊದಲ ‘ಭಾರತ ರತ್ನ’ ಪಡೆದವರಿವರು

ಮೊದಲ ಭಾರತ ರತ್ನ ಪ್ರಶಸ್ತಿಯನ್ನು ಮೂವರಿಗೆ ಪ್ರದಾನ ಮಾಡಲಾಯಿತು. ಭಾರತ ಒಕ್ಕೂಟದ ಕೊನೆಯ ಗವರ್ನರ್ ಜನರಲ್ ಸಿ. ರಾಜಗೋಪಾಲಚಾರಿ, ಭಾರತದ ಮೊದಲ ಉಪ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ವಿಜ್ಞಾನಿ ಸಿ.ವಿ. ರಾಮನ್‌ ಅವರಿಗೆ 1954ರಲ್ಲಿ ಮೊದಲ ‘ಭಾರತ ರತ್ನ ಪ್ರಶಸ್ತಿ’ ನೀಡಲಾಯಿತು.

‘ಭಾರತ ರತ್ನ’ ಪಡೆದ ಪ್ರಮುಖರು

ಇದುವರೆಗೂ 54 ಜನರಿಗೆ ‘ಭಾರತ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗಿದೆ. ವಿಜ್ಞಾನಿ ಸಿ.ವಿ ರಾಮನ್, ಸಿ.ಎನ್‌.ಆರ್. ರಾವ್, ಎಂ.ಎಸ್‌. ಸ್ವಾಮಿನಾಥನ್‌, ಸರ್ ಎಂ. ವಿಶ್ವೇಶ್ವರಯ್ಯ, ಮಾಜಿ ಪ್ರಧಾನಿ ಜವಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮೊರಾರ್ಜಿ ದೇಸಾಯಿ, ಅಟಲ್‌ ಬಿಹಾರಿ ವಾಜಪೇಯಿ, ಚರಣ್ ಸಿಂಗ್, ಮಾಜಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್, ಜಾಕೀರ್‌ ಹುಸೇನ್, ವಿ.ವಿ. ಗಿರಿ, ‌‌ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿ, ಸಮಾಜ ಸುಧಾರಕರಾದ ಮದರ್ ಥೆರೆಸಾ, ವಿನೋಬಾ ಬಾವೆ, ಅಂಬೇಡ್ಕರ್, ಜಯಪ್ರಕಾಶ್ ನಾರಾಯಣನ್, ಉದ್ಯಮಿ ಜೆ.ಆರ್.ಡಿ. ಟಾಟಾ, ನಿರ್ದೇಶಕ ಸತ್ಯಜಿತ್ ರೇ, ಸಂಗೀತಗಾರ ರವಿ ಶಂಕರ್, ಲತಾ ಮಂಗೇಶ್ಕರ್, ಭೀಮಸೇನ ಜೋಶಿ, ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್ ಅವರಿಗೆ ‘ಭಾರತ ರತ್ನ’ ನೀಡಲಾಗಿದೆ.

‘ಭಾರತ ರತ್ನ’ ಪಡೆದ ವಿಶ್ವಮಾನವರು

‘ಭಾರತ ರತ್ನ ಪ್ರಶಸ್ತಿ’ಯನ್ನು ದೇಶದ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ. ಆದರೆ, ಭಾರತದ ಅತ್ಯುನ್ನತ ಪ್ರಶಸ್ತಿಯನ್ನು ದೇಶದ ನಾಗರಿಕರಲ್ಲದ ಮೂವರಿಗೆ, ಅವರ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಭಾರತದಲ್ಲಿ ಜನಿಸಿರದಿದ್ದರೂ, ದೇಶದ ನಾಗರಿಕರ ಸೇವೆ ಮಾಡಿದ ಮದರ್‌ ಥೆರೆಸಾ, ಬ್ರಿಟಿಷ್‌ ಇಂಡಿಯಾದಲ್ಲಿ ಜನಿಸಿ ನಂತರ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಅಬ್ದುಲ್‌ ಗಫರ್ ಖಾನ್ ಹಾಗೂ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ನೆಲ್ಸನ್‌ ಮಂಡೇಲಾ ಅವರು ‘ಭಾರತ ರತ್ನ’ ಪಡೆದ ವಿಶ್ವಮಾನವರಾಗಿದ್ದಾರೆ.

‘ಭಾರತ ರತ್ನ’ ಪಡೆದ ಕನ್ನಡಿಗರು

ಭಾರತ ರತ್ನ ಪ್ರಶಸ್ತಿಗೆ ಕನ್ನಡಿಗರು ಕೂಡ ಭಾಜನರಾಗಿದ್ದಾರೆ. ಮೈಸೂರಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ 1955ರಲ್ಲಿ, ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಭೀಮಸೇನ ಜೋಶಿ ಅವರಿಗೆ 2009ರಲ್ಲಿ, ವಿಜ್ಞಾನಿ ಸಿ.ಎನ್‌.ಆರ್. ರಾವ್ ಅವರಿಗೆ 2010ರಲ್ಲಿ ಪ್ರಶಸ್ತಿ ನೀಡಲಾಗಿದೆ.

‘ಭಾರತ ರತ್ನ’ ಪ್ರಶಸ್ತಿಯ ಕುರಿತು..

‘ಭಾರತ ರತ್ನ’ ಪ್ರಶಸ್ತಿಗಾಗಿ ಯಾವುದೇ ಔಪಚಾರಿಕ ನಾಮನಿರ್ದೇಶನ ಪ್ರಕ್ರಿಯೆಯನ್ನು ಮಾಡಲಾಗುವುದಿಲ್ಲ. ಪ್ರಧಾನ ಮಂತ್ರಿಯು, ರಾಷ್ಟ್ರಪತಿ ಅವರಿಗೆ ಹೆಸರುಗಳನ್ನು ಸೂಚಿಸುತ್ತಾರೆ. ರಾಷ್ಟ್ರಪತಿ ಒಪ್ಪಿಗೆ ಮೇರೆಗೆ ಪ್ರಶಸ್ತಿ ಘೋಷಣೆ ಮಾಡಲಾಗುತ್ತದೆ. ‘ಭಾರತ ರತ್ನ’ ಪ್ರಶಸ್ತಿಯು ರಾಷ್ಟ್ರಪತಿ ಸಹಿಯಿರುವ ಪ್ರಮಾಣ ಪತ್ರ ಹಾಗೂ ಅರಳಿ ಎಲೆ ಆಕಾರದ ಪದಕವನ್ನು ಒಳಗೊಂಡಿದೆ. ಅದರಲ್ಲಿ ದೇವನಾಗರಿ ಲಿಪಿಯಲ್ಲಿ ‘ಭಾರತ ರತ್ನ’ ಎಂದು ಬರೆಯಲಾಗಿರುತ್ತದೆ. ಪ್ರಶಸ್ತಿಗೆ ಯಾವುದೇ ನಗದು ನೀಡಲಾಗುವುದಿಲ್ಲ. ಭಾರತದ ರಾಷ್ಟ್ರಪತಿ, ಪ್ರಶಸ್ತಿ ಪ್ರದಾನ ಮಾಡುತ್ತಾರೆ.

‘ಬೋಸ್‌’ಗೆ ಪ್ರಶಸ್ತಿ ಘೋಷಣೆಯಾಗಿತ್ತು, ಆದರೆ ಸಿಗಲಿಲ್ಲ

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್‌ ಅವರಿಗೆ 1992ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯು ಘೋಷಣೆಯಾಗಿತ್ತು. ಆದರೆ, ಬೋಸ್‌ ಅವರ ಸಾವನ್ನು ಒಪ್ಪಿಕೊಳ್ಳದ ಕೆಲವರು, ಮರಣೋತ್ತರ ಪ್ರಶಸ್ತಿ ನೀಡುವುದನ್ನು ವಿರೋಧಿಸಿದರು. 1997ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನಂತೆ, ಬೋಸ್‌ ಅವರಿಗೆ ನೀಡಬೇಕಿದ್ದ ಪ್ರಶಸ್ತಿಯನ್ನು ರದ್ದು ಮಾಡಲಾಯಿತು. ಭಾರತ ರತ್ನ ಪ್ರಶಸ್ತಿಯ ಇತಿಹಾಸದಲ್ಲೇ, ಪ್ರಶಸ್ತಿ ಘೋಷಣೆಯಾದ ಬಳಿಕ ಪ್ರಶಸ್ತಿ ಪ್ರಧಾನ ಮಾಡದೇ ಇರುವ ಏಕೈಕ ಘಟನೆ ಇದಾಗಿದೆ.

ಕೆಲವು ವಿಶೇಷತೆಗಳು

* ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮರಣೋತ್ತರವಾಗಿ ‘ಭಾರತ ರತ್ನ ಪ್ರಶಸ್ತಿ’ ಪಡೆದ ಮೊದಲನೇ ವ್ಯಕ್ತಿಯಾಗಿದ್ದಾರೆ.

* ಕ್ರಿಕೆಟ್‌ ದೇವರು ಎಂದೇ ಖ್ಯಾತವಾಗಿರುವ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರಿಗೆ 2014ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸುವಾಗ ಅವರಿಗೆ 40 ವರ್ಷ ವಯಸ್ಸಾಗಿತ್ತು. ಅವರು ಭಾರತ ರತ್ನ ಪಡೆದ ಅತಿ ಕಿರಿಯ ವ್ಯಕ್ತಿಯಾಗಿದ್ದಾರೆ.

* ಸಮಾಜ ಸುಧಾರಕ ಧೋಂಡೋ ಕೇಶವ ಕರ್ವೆ ಅವರಿಗೆ 100ನೇ ವಯಸ್ಸಿನಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಅವರು ಪ್ರಶಸ್ತಿ ಸ್ವೀಕರಿಸಿದ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ.

* ಕೇಂದ್ರ ಸರ್ಕಾರದಲ್ಲಿ ಅಧಿಕಾರ ಬದಲಾವಣೆಯ ಕಾರಣ 1977 ಜುಲೈ ತಿಂಗಳಿನಿಂದ 1980ರ ಜನವರಿ ವರೆಗೆ ಪ್ರಶಸ್ತಿ ನೀಡುವುದನ್ನು ನಿಲ್ಲಿಸಲಾಗಿತ್ತು. ನಂತರ 1992ರಲ್ಲಿ ಕೋರ್ಟ್‌ನಲ್ಲಿ ಭಾರತ ರತ್ನ ಪ್ರಶಸ್ತಿಯ ‘ಸಾಂವಿಧಾನಿಕ ಸಿಂಧುತ್ವ’ ಪ್ರಶ್ನಿಸಿದ್ದ ಕಾರಣ 1992 ರಿಂದ 1995ರವರೆಗೆ ಯಾರಿಗೂ ಪ್ರಶಸ್ತಿ ಪ್ರಧಾನ ಮಾಡಲಾಗಿಲ್ಲ.