ADVERTISEMENT

Budget session | ಜಂಟಿ ಅಧಿವೇಶನ ಉದ್ದೇಶಿಸಿ ಮುರ್ಮು ಭಾಷಣ: ಪ್ರಮುಖಾಂಶಗಳು

ಏಜೆನ್ಸೀಸ್
Published 28 ಜನವರಿ 2026, 11:25 IST
Last Updated 28 ಜನವರಿ 2026, 11:25 IST
   
ನವದೆಹಲಿ: ಸಂಸತ್‌ ಬಜೆಟ್‌ ಅಧಿವೇಶನ ಇಂದಿನಿಂದ (ಜ.28) ಆರಂಭವಾಗಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಮಾರು ಒಂದು ಗಂಟೆ ಭಾಷಣ ಮಾಡಿದ್ದಾರೆ. ವಿವಿಧ ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ ಭಾರತವು, ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ಸಾಮಾಜಿಕ ನ್ಯಾಯ ಸರ್ಕಾರದ ದೂರದೃಷ್ಟಿಯ ನಿಲುವು ಎಂದು ಅವರು ಹೇಳಿದ್ದಾರೆ.

‌ಭಾಷಣದ ಪ್ರಮುಖಾಂಶಗಳು..

  • ತಮ್ಮ ಭಾಷಣದ ಆರಂಭದಲ್ಲಿಯೇ ಡಾ. ಬಿ.ಆರ್‌ ಅಂಬೇಡ್ಕರ್ ಅವರ ದೂರದೃಷ್ಟಿಯ ನಿಲುವನ್ನು ಸ್ಮರಿಸಿದ ರಾಷ್ಟ್ರಪತಿ ಮುರ್ಮು, ಸಂವಿಧಾನದಲ್ಲಿ ಪ್ರತಿಪಾದಿಸಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಂವಿಧಾನವು ಯಾವುದೇ ಜಾತಿ–ಮತಗಳ ಬೇಧವಿಲ್ಲದೇ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳನ್ನು ನೀಡಿದೆ. ಸಾಮಾಜಿಕ ನ್ಯಾಯ ಎಂಬುದು ಕೇವಲ ಘೋಷಣೆಯಾಗಿ ಉಳಿಯದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬುದೇ ಸರ್ಕಾರದ ಮೂಲ ಉದ್ದೇಶ ಎಂದು ಪ್ರತಿಪಾದಿಸಿದ್ದಾರೆ.

  • ಕಳೆದ 10 ವರ್ಷಗಳಲ್ಲಿ ದೇಶವು ಸಾಧಿಸಿದ ಪ್ರಗತಿಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿದ ರಾಷ್ಟ್ರಪತಿ, ಸರ್ಕಾರ ಜಾರಿಗೆ ತಂದ ಜನಪರ ಕಾರ್ಯಕ್ರಮಗಳ ಪರಿಣಾಮ ದೇಶದಲ್ಲಿ ಸುಮಾರು 25 ಕೋಟಿ ಜನ ಬಡತನದ ರೇಖೆಯಿಂದ ಹೊರಬಂದಿದ್ದಾರೆ. ಇದು ದೇಶದ ಆರ್ಥಿಕ ಸಬಲೀಕರಣದ ವೇಗಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

  • ಅಲ್ಲದೇ ಮೂಲಸೌಕರ್ಯ, ಡಿಜಿಟಲೀಕರಣ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಸುಧಾರಣೆಗಳು ಸಾಮಾನ್ಯ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿವೆ ಎಂದೂ ಹೇಳಿದ್ದಾರೆ.

    ADVERTISEMENT
  • ಭಾರತ ಶೀಘ್ರದಲ್ಲಿಯೇ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಸಜ್ಜಾಗಿದೆ. ಲಖ್ಪತಿ ದೀದಿ, ಮಹಿಳಾ ಮೀಸಲಾತಿ ಜಾರಿ ಸೇರಿದಂತೆ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳು ಅವರ (ಮಹಿಳೆಯರ) ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನವನ್ನು ಅಮೂಲಾಗ್ರವಾಗಿ ಬದಲಿಸುತ್ತಿವೆ ಎಂದು ಅವರು ನುಡಿದಿದ್ದಾರೆ.

  • ಆಪರೇಷನ್ ಸಿಂಧೂರ ಕಾರ್ಯಾಚರಣೆ ಶ್ಲಾಘಿಸಿದ ಅವರು, ಯಾವುದೇ ಭಯೋತ್ಪಾದಕ ದಾಳಿಗೆ ದೇಶ ತಕ್ಕ ಉತ್ತರ ನೀಡುತ್ತದೆ. ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಧೈರ್ಯವನ್ನು ಜಗತ್ತು ನೋಡಿದೆ ಎಂದು ಹೇಳಿದ್ದಾರೆ.

  • ಮಾವೋವಾದಿಗಳ ವಿರುದ್ಧ ನಿರ್ಣಾಯಕ ಕ್ರಮ, ಜತೆಗೆ ಸಾಮಾಜಿಕ ನ್ಯಾಯ, ಕೃಷಿ, ಮೂಲಸೌಕರ್ಯ, ಶಿಕ್ಷಣ ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆಗಳನ್ನು ಅವರು ಶ್ಲಾಘಿಸಿದ್ದಾರೆ.

  • ಕೃತಕ ಬುದ್ಧಿಮತ್ತೆಯ ದುರುಪಯೋಗದಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ರಾಷ್ಟ್ರಪತಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಜಾಗರೂಕರಾಗಿರುವುದು ಅಗತ್ಯ ಎಂದಿದ್ದಾರೆ. ಸುಳ್ಳು, ತಪ್ಪು ಮಾಹಿತಿಗಳು ಪ್ರಜಾಪ್ರಭುತ್ವ, ಸಾಮಾಜಿಕ ಸಾಮರಸ್ಯ ಮತ್ತು ಸಾರ್ವಜನಿಕ ನಂಬಿಕೆಗೆ ಬೆದರಿಕೆಯಾಗುತ್ತಿವೆ. ಈ ಗಂಭೀರ ವಿಷಯದ ಬಗ್ಗೆ ನೀವೆಲ್ಲರೂ ಚರ್ಚಿಸುವುದು ಅತ್ಯಗತ್ಯ ಎಂದೂ ಅವರು ಒತ್ತಿ ಹೇಳಿದ್ದಾರೆ.

  • ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌‍ ಎಂಬುದು ಕೇವಲ ಘೋಷಣೆಯಾಗಿ ಉಳಿದಿಲ್ಲ. 2014ರಲ್ಲಿ ದೇಶದ 25 ಕೋಟಿ ಜನರಿಗೆ ಸಾಮಾಜಿಕ ಭದ್ರತೆಯನ್ನು ಸರ್ಕಾರದ ವಿವಿಧ ಯೋಜನೆಗಳ ಮೂಲಕ ಒದಗಿಸಲಾಗಿತ್ತು. ಇದರ ಸಂಖ್ಯೆ ಈಗ 95 ಕೋಟಿಗೆ ಏರಿದೆ ಎಂದು ತಿಳಿಸಿದ್ದಾರೆ.

  • ಸರ್ಕಾರ ಭ್ರಷ್ಟಾಚಾರ ಮತ್ತು ಹಗರಣಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ ಎಂದ ರಾಷ್ಟ್ರಪತಿ, ತೆರಿಗೆದಾರರ ಪ್ರತಿಯೊಂದು ರೂಪಾಯಿಯನ್ನು ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

  • ಇದೇ ವೇಳೆ ನರೇಗಾ ಬದಲಾಗಿ ನೂತನವಾಗಿ ತಂದಿರುವ ವಿಬಿ-ಜಿರಾಮ್​ ಜಿ ಕಾಯ್ದೆಯ ಕುರಿತು ಮಾತನಾಡುತ್ತಿದ್ದಂತೆ ಆಡಳಿತ ಪಕ್ಷದ ಸಂಸದರು ಮೇಜು ಕುಟ್ಟಿ ಸಂಭ್ರಮಿಸಿದರೆ, ವಿರೋಧ ಪಕ್ಷದ ಸಂಸದರು ಎದ್ದು ನಿಂತು ಪ್ರತಿಭಟಿಸಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

  • ಈ ಬಾರಿ ಬಜೆಟ್ ಅಧಿವೇಶನ 65 ದಿನಗಳ ಕಾಲ ನಡೆಯಲಿದ್ದು, ಏಪ್ರಿಲ್ 2ರಂದು ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.