ಭಾರ್ಗವಾಸ್ತ್ರ
ಎಕ್ಸ್ ಚಿತ್ರ
ಕಡಿಮೆ ಖರ್ಚಿನಲ್ಲಿ ಪರಿಣಾಮಕಾರಿ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಭಾರತ ಈಗ ಜಗತ್ತಿಗೇ ಮಾದರಿಯಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ, ಶತ್ರುಗಳ ಡ್ರೋನ್‌ಗಳನ್ನು ನಾಶಪಡಿಸುವ ಭಾರ್ಗವಾಸ್ತ್ರ.
ಸೋಲಾರ್ ಡಿಫೆನ್ಸ್ ಅಂಡ್ ಏರೊಸ್ಪೇಸ್ ಲಿಮಿಟೆಡ್ (SDAL) ಅಭಿವೃದ್ಧಿಪಡಿಸಿರುವ ಈ ಅಸ್ತ್ರವನ್ನು ಇತ್ತೀಚೆಗೆ ಗೋಪಾಲಪುರದಲ್ಲಿರುವ ಸಮುದ್ರಮುಖಿ ಫೈರಿಂಗ್ ರೇಂಜ್‌ನಲ್ಲಿ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಆಪರೇಷನ್ ಸಿಂಧೂರ ನಂತರದಲ್ಲಿ ಭವಿಷ್ಯದಲ್ಲಿ ವ್ಯಾಪಕವಾಗಿ ಬಳಕೆಯಾಗಬಹುದಾದ ಡ್ರೋನ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಅಸ್ತ್ರವೊಂದು ಭಾರತದ ಬತ್ತಳಿಕೆ ಸೇರಿದೆ.
ಎಸ್‌ಡಿಎಎಲ್‌ನ ಅಂಗ ಸಂಸ್ಥೆಯಾದ ಎಕನಾಮಿಕ್ ಎಕ್ಸ್‌ಪ್ಲೊಸಿವ್ ಲಿಮಿಟೆಡ್ (EEL) ಭಾರ್ಗವಾಸ್ತ್ರ ಅಭಿವೃದ್ಧಿಪಡಿಸಿದೆ. ರಾಡಾರ್ ಮಾಹಿತಿ ಆಧರಿಸಿ 2.5 ಕಿ.ಮೀ.ನಿಂದ 6 ಕಿ.ಮೀ. ವ್ಯಾಪ್ತಿಯಲ್ಲಿ ಪತ್ತೆಯಾಗುವ ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಸ್ಫೋಟಕಗಳನ್ನು ಹೊತ್ತು ಸಾಗುವ ಭಾರ್ಗವಾಸ್ತ್ರ ಹೊಂದಿದೆ. ಭಾರತದ ಭೂಪ್ರದೇಶ ಮತ್ತು ಇಂದಿನ ಯುದ್ಧ ಶೈಲಿಯನ್ನು ಆಧರಿಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.
ಭಾರ್ಗವಾಸ್ತ್ರದ ಮತ್ತೊಂದು ವಿಶೇಷವೆಂದರೆ ಭಾರತದ ಯಾವುದೇ ಭೂಪ್ರದೇಶಕ್ಕೂ ಇದು ಹೊಂದಿಕೊಳ್ಳುವ ಗುಣ ಹೊಂದಿದೆ. ಅದು ರಾಜಸ್ಥಾನದ ಮರುಭೂಮಿಯೇ ಆಗಿರಲಿ ಅಥವಾ, 5 ಸಾವಿರ ಮೀಟರ್ ಎತ್ತರದ ಹಿಮಾಲಯದ ಪರ್ವತಶ್ರೇಣಿಗಳೇ ಆಗಿರಲಿ. ಅಷ್ಟು ಮಾತ್ರವಲ್ಲ, ಎಲೆಕ್ಟ್ರಾನಿಕ್ ಜಾಮಿಂಗ್ ಮತ್ತು ರಾಡಾರ್ ಕಣ್ಣಿಗೆ ಬೀಳದಂತೆ ಸ್ವಾಯತ್ತ ಡ್ರೋನ್‌ಗಳನ್ನೂ ಇದು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಡ್ರೋನ್ ಎದುರಿಸುವ ಮಾದರಿಯಲ್ಲಿ ಹಲವು ಹಂತಗಳ ಪ್ರತಿಕ್ರಿಯೆಯಲ್ಲಿ ಭಾರ್ಗವಾಸ್ತ್ರ ಎಲ್ಲಾ ಹಂತಗಳನ್ನು ಭೇದಿಸಿ ಗುರಿತಲುಪುವ ಸಾಮರ್ಥ್ಯ ಹೊಂದಿದೆ. ಇದರ ನಿಯಂತ್ರಣ ಕೇಂದ್ರದಲ್ಲಿ C4I ಅತ್ಯಾಧುನಿಕ ವ್ಯವಸ್ಥೆ ಇದ್ದು, ಇಲ್ಲಿ ಆದೇಶ, ನಿಯಂತ್ರಣ, ಸಂಪರ್ಕ, ಕಂಪ್ಯೂಟರ್‌ಗಳು ವ್ಯವಸ್ಥೆಯೂ ಇದೆ. ಇದರಿಂದಾಗಿ ವಾಸ್ತವ ನೆಲಗಟ್ಟಿನಲ್ಲಿ ಎಲ್ಲಾ ರೀತಿಯ ಡ್ರೋನ್‌ಗಳನ್ನು ಎದುರಿಸುವ ಸಾಮರ್ಥ್ಯ ಇದು ಹೊಂದಿದೆ.
ಗಡಿ ರಕ್ಷಣಾ ವ್ಯವಸ್ಥೆಯಲ್ಲಿ ಭಾರ್ಗವಾಸ್ತ್ರ ಕಾರ್ಯನಿರ್ವಹಿಸಲಿದ್ದು, ನೆಟ್‌ವರ್ಕ್ ಆಧಾರಿತ ಕದನದಲ್ಲಿ ಇದನ್ನು ಬಳಸುವ ಸಾಧ್ಯತೆಗಳಿವೆ ಎಂದು ಸೇನಾ ಮೂಲಗಳು ತಿಳಿಸಿವೆ.
* ಡ್ರೋನ್ ವ್ಯವಸ್ಥೆಯನ್ನು ಸಮರ್ಥವಾಗಿ ಎದುರಿಸಲಿದೆ. 6 ಕಿ.ಮೀ. ದೂರದಲ್ಲಿರುವ ಡ್ರೋನ್ ಅನ್ನು ಪತ್ತೆ ಮಾಡಿ ಅದನ್ನು ನಾಶಪಡಿಸುವ ಸಾಮರ್ಥ್ಯ ಇದಕ್ಕಿದೆ.
* ಭಾರ್ಗವಾಸ್ತ್ರವು ಏಕಕಾಲಕ್ಕೆ 64 ಕಿರು ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದೆ.
* ಎಕನಾಮಿಕ್ ಎಕ್ಸ್‌ಪ್ಲೊಸಿವ್ ಲಿಮಿಟೆಡ್ ಕಂಪನಿಯು ಭಾರ್ಗವಾಸ್ತ್ರ ಉಡ್ಡಯನಕ್ಕೆ ವೇದಿಕೆ ಕಲ್ಪಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಅಪಾಯಕಾರಿ ಪ್ರದೇಶದಲ್ಲಿ ಸ್ಥಾಪಿಸಲಾಗುವುದು
* ಯಾವುದೇ ಭೂಪ್ರದೇಶದಲ್ಲಿ ಇದು ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸಮುದ್ರಮಟ್ಟದಿಂದ 5 ಸಾವಿರ ಮೀಟರ್ ಎತ್ತರದಲ್ಲಿ ಹಾಗೂ ಬಿರುಬಿಸಿಲಿನ ಮರುಭೂಮಿಯಲ್ಲೂ ಇದು ಕಾರ್ಯನಿರ್ವಹಿಸಲಿದೆ
* ಭೂಸೇನೆ ಮತ್ತು ವಾಯು ಸೇನೆಗಾಗಿ ಅಭಿವೃದ್ಧಿಪಡಿಸಲಾದ ಕಿರು ಕ್ಷಿಪಣಿಯ ಭಾರ್ಗವಾಸ್ತ್ರವನ್ನು ಶತ್ರುಗಳ ಡ್ರೋನ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಬಳಸಬಹುದಾಗಿದೆ. ಈ ಅಸ್ತ್ರವನ್ನು ಹೊಂದುವ ನಿಟ್ಟಿನಲ್ಲಿ ಈಗಾಗಲೇ ವಾಯು ಸೇನೆ ಆಸಕ್ತಿ ತೋರಿಸಿದೆ.
* ಜಾಗತಿಕ ಮಟ್ಟದಲ್ಲಿ ಇಂಥ ಸಾಮರ್ಥ್ಯವಿರುವ ಕೆಲವೇ ಕ್ಷಿಪಣಿಗಳ ಸಾಲಿಗೆ ಭಾರ್ಗವಾಸ್ತ್ರ ಸೇರಿದೆ.
ಭಾರ್ಗವಾಸ್ತ್ರಕ್ಕೆ ಜೋಡಿಸಿರುವ ರಾಡಾರ್‌ಗಳು ಮಧ್ಯಮ ಮತ್ತು ದೊಡ್ಡ ಗಾತ್ರದ ಮಾನವ ರಹಿತ ಯುದ್ಧ ವಿಮಾನಗಳನ್ನು 10 ಕಿ.ಮೀ. ದೂರದಲ್ಲೇ ಪತ್ತೆ ಮಾಡಿ ನಾಶಪಡಿಸಬಲ್ಲದು. ಇದರಲ್ಲಿ ಎಲೆಕ್ಟ್ರೊ ಆಪ್ಟಿಕಲ್/ ಇನ್‌ಫ್ರಾರೆಡ್ ಸಾಧನಗಳನ್ನೂ ಅಳವಡಿಸಿರುವುದರಿಂದ ಶತ್ರುಗಳ ಡ್ರೋನ್ ಅಥವಾ ಮಾನವ ರಹಿತ ವಿಮಾನಗಳನ್ನು ಪತ್ತೆ ಮಾಡಿ, ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಹೆಚ್ಚಾಗಿ, ಗುರುತು ಮರೆಮಾಚಿ ದಾಳಿ ನಡೆಸುವ ಡ್ರೋನ್‌ಗಳನ್ನು ಇದು ನಿಖರವಾಗಿ ಪತ್ತೆ ಮಾಡಲಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಯೂರಿದ್ದ ಭಯೋತ್ಪಾದಕರನ್ನು ಧ್ವಂಸಗೊಳಿಸಲು ಭಾರತ ಆರಂಭಿಸಿದ ಆಪರೇಷನ್ ಸಿಂಧೂರ ಹಾಗೂ ನಂತರ ಪಾಕಿಸ್ತಾನ ಸೇನೆಯ ದಾಳಿಯ ಯತ್ನವನ್ನು ಹಿಮ್ಮೆಟ್ಟಿಸುವಲ್ಲಿ ರಷ್ಯಾ ನಿರ್ಮಿತ ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಯಶಸ್ಸಿನ ಬೆನ್ನಲ್ಲೇ, ಭಾರ್ಗವಾಸ್ತ್ರದ ಯಶಸ್ಸು ಭಾರತದ ರಕ್ಷಣಾ ವ್ಯವಸ್ಥೆಯ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ.
ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಜಮ್ಮು, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ ಗಡಿಯಲ್ಲಿ ಸೇನೆ ಬಳಸಿಕೊಂಡಿತ್ತು. ಪಾಕಿಸ್ತಾನದ ಕ್ಷಿಪಣಿಗಳನ್ನು ಪುಡಿಗಟ್ಟುವಲ್ಲಿ ಇದು ಮಹತ್ವದ ಪಾತ್ರ ವಹಿಸಿತು ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.