
ರಕ್ಷಣಾ ಸಚಿವ ರಾಜನಾಥ ಸಿಂಗ್ ಫೆ.17ರಂದು ಫ್ರೆಂಚ್ ರಕ್ಷಣಾ ಸಚಿವ ಕ್ಯಾಥರೀನ್ ವಾಟ್ರಿನ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದಾರೆ. ಈ ಸಭೆ ಭಾರತ - ಫ್ರಾನ್ಸ್ ರಕ್ಷಣಾ ಸಹಕಾರವನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಈ ಭೇಟಿಯ ಸಂದರ್ಭದಲ್ಲಿ, ಉಭಯ ಸಚಿವರು ಕರ್ನಾಟಕದ ವೇಮಗಲ್‌ನಲ್ಲಿ ಡಾಟಾ - ಏರ್‌ಬಸ್ ಎಚ್-125 ಹೆಲಿಕಾಪ್ಟರ್ ಜೋಡಣಾ ಘಟಕದ ಆನ್‌ಲೈನ್ ಉದ್ಘಾಟನಾ ಸಮಾರಂಭವನ್ನೂ ವೀಕ್ಷಿಸಲಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ಆನ್‌ಲೈನ್ ಮೂಲಕ ಉದ್ಘಾಟಿಸಲಿದ್ದಾರೆ.
ರಾಜನಾಥ ಸಿಂಗ್ ಮತ್ತು ಕ್ಯಾಥರೀನ್ ವಾಟ್ರಿನ್ ಅವರು ಆರನೇ ಭಾರತ - ಫ್ರಾನ್ಸ್ ರಕ್ಷಣಾ ಸಂವಾದದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಭೆ ಉಭಯ ದೇಶಗಳ ನಡುವಿನ ಸಂಪೂರ್ಣ ರಕ್ಷಣಾ ಸಹಕಾರವನ್ನು ಪರಾಮರ್ಶಿಸಲಿದ್ದು, ಔದ್ಯಮಿಕ ಸಹಭಾಗಿತ್ವದ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ರಕ್ಷಣೆ ಯಾವತ್ತೂ ಭಾರತ - ಫ್ರಾನ್ಸ್ ಸಂಬಂಧದ ಪ್ರಮುಖ ಸ್ತಂಭವಾಗಿದ್ದು, ಉನ್ನತ ಹಂತದ ಮಾತುಕತೆಗಳ ಮೂಲಕ ಇದು ಇನ್ನಷ್ಟು ಬಲವರ್ಧನೆಗೊಂಡಿದೆ. 2023ರಲ್ಲಿ ಫ್ರಾನ್ಸಿನ ಬಾಸ್ಟಿಲ್ ಡೇ ಪೆರೇಡಿನಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿದ್ದರೆ, 2024ರಲ್ಲಿ ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಫ್ರೆಂಚ್ ಅಧ್ಯಕ್ಷರು ಮುಖ್ಯ ಅತಿಥಿಯಾಗಿದ್ದರು.
ಪ್ರಸ್ತುತ ಸಭೆ ಹಲವಾರು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ್ದರೂ, ಈ ಸಭೆಯ ಅತ್ಯಂತ ಮಹತ್ವದ ಅಂಶ ಭಾರತದ ರಫೇಲ್ ಯುದ್ಧ ವಿಮಾನಗಳಲ್ಲಿ ಬಳಸುವ ಹ್ಯಾಮರ್ ಆಯುಧ ವ್ಯವಸ್ಥೆಗೆ ಸಂಬಂಧಿಸಿರಲಿದೆ.
ಹ್ಯಾಮರ್ ಎನ್ನುವುದು ಹೈಲಿ ಅಜೈಲ್ ಮಾಡ್ಯುಲರ್ ಮ್ಯುನಿಷನ್ ಎಕ್ಸ್‌ಟೆಂಡೆಡ್ ರೇಂಜ್ ಎನ್ನುವುದರ ಹೃಸ್ವರೂಪವಾಗಿದೆ. ಭಾರತ ಇಲ್ಲಿಯ ತನಕ ಈ ಕ್ಷಿಪಣಿಯನ್ನು ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಪ್ರಸ್ತಾಪಿತ ಯೋಜನೆಯಡಿ ಕ್ಷಿಪಣಿಯ ಉತ್ಪಾದನೆ ಭಾರತಕ್ಕೆ ವರ್ಗಾವಣೆಗೊಳ್ಳುವ ನಿರೀಕ್ಷೆಯಿದ್ದು, ಇದು ಭಾರತದ ರಕ್ಷಣಾ ಸ್ವಾವಲಂಬನೆಗೆ ಉತ್ತೇಜನ ನೀಡಲಿದೆ.
ಸರಳವಾಗಿ ಹೇಳುವುದಾದರೆ, ಹ್ಯಾಮರ್ ಒಂದು ಸ್ಮಾರ್ಟ್, ನಿಖರ - ನಿರ್ದೇಶಿತ ಬಾಂಬ್ ವ್ಯವಸ್ಥೆಯಾಗಿದ್ದು, ಆಗಸದಿಂದ ಭೂಮಿಗೆ ದಾಳಿ ನಡೆಸಲು ಬಳಕೆಯಾಗುವಂತೆ ನಿರ್ಮಾಣಗೊಂಡಿದೆ. ಆದ್ದರಿಂದಲೇ ಇದನ್ನು ಏರ್ ಟು ಸರ್ಫೇಸ್ ಆಯುಧ ಎಂದು ಕರೆಯಲಾಗುತ್ತದೆ.
ತಾಂತ್ರಿಕವಾಗಿ, ಹ್ಯಾಮರ್ ಒಂದು 'ಅಪ್‌ಗ್ರೇಡ್ ಕಿಟ್' ರೀತಿಯಲ್ಲಿ ಕಾರ್ಯಾಚರಿಸುತ್ತದೆ. ಅಂದರೆ, ಇದು ಒಂದು ಸಾಮಾನ್ಯ ಬಾಂಬನ್ನು ನಿಖರ ಆಯುಧವನ್ನಾಗಿ ಪರಿವರ್ತಿಸುತ್ತದೆ. ಇದು ಎರಡು ಮುಖ್ಯ ಭಾಗಗಳನ್ನು ಹೊಂದಿದೆ. ಮೊದಲನೆಯದು, ನಿರ್ದೇಶನ ಕಿಟ್. ಇದು ಆಯುಧಕ್ಕೆ ತನ್ನ ಗುರಿಯನ್ನು ಗುರುತಿಸಿ, ನಿಖರವಾಗಿ ಅದರ ಮೇಲೆ ದಾಳಿ ನಡೆಸಲು ನೆರವಾಗುತ್ತದೆ. ಎರಡನೆಯದು ಪ್ರೊಪಲ್ಷನ್ ಕಿಟ್ ಆಗಿದ್ದು, ಆಯುಧಕ್ಕೆ ಹೆಚ್ಚುವರಿ ಶಕ್ತಿಯನ್ನು ಒದಗಿಸಿ, ನೇರವಾಗಿ ಕೆಳಗೆ ಬೀಳುವ ಬದಲು, ಅದು ದೂರಕ್ಕೆ ಪ್ರಯಾಣಿಸಲು ಬೇಕಾದ ಹೆಚ್ಚುವರಿ ಶಕ್ತಿಯನ್ನು ಒದಗಿಸುತ್ತದೆ.
ಈ ಕಿಟ್‌ಗಳ ಕಾರಣದಿಂದ, ಹ್ಯಾಮರ್ 60ರಿಂದ 70 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಗುರಿಗಳ ಮೇಲೂ ದಾಳಿ ನಡೆಸಬಲ್ಲದು. ಇದು ಯುದ್ಧ ವಿಮಾನಗಳು ಸುರಕ್ಷಿತ ದೂರದಲ್ಲಿ ಉಳಿದು, ಶತ್ರುಗಳ ಬಂಕರ್‌ಗಳು, ಕಟ್ಟಡಗಳು, ಅಥವಾ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಲು ಸಹಾಯಕವಾಗಿದೆ. ಹ್ಯಾಮರ್ ಪರ್ವತ ಪ್ರದೇಶಗಳಲ್ಲಿ ಮತ್ತು ಅತ್ಯಂತ ಹೆಚ್ಚಿನ ರಕ್ಷಣೆ ಹೊಂದಿರುವ ಪ್ರದೇಶಗಳಲ್ಲೂ ಪರಿಣಾಮಕಾರಿ ಎಂದು ಸಾಬೀತುಪಡಿಸಿದೆ.
ಹ್ಯಾಮರ್ ಒಂದು 'ಫೈರ್ ಆ್ಯಂಡ್ ಫಾರ್ಗೆಟ್' ವ್ಯವಸ್ಥೆಯಲ್ಲಿ ಕಾರ್ಯಾಚರಿಸುತ್ತದೆ. ಅಂದರೆ, ಒಂದು ಬಾರಿ ಗುರಿಯನ್ನು ಲಾಕ್ ಮಾಡಿ, ಆಯುಧವನ್ನು ಪ್ರಯೋಗಿಸಿದರೆ, ಅದಕ್ಕೆ ಮತ್ತೆ ಯಾವುದೇ ಮಾರ್ಗದರ್ಶನದ ಅಗತ್ಯವಿಲ್ಲ. ಇದು ಪೈಲಟ್ ಮೇಲಿನ ಒತ್ತಡವನ್ನೂ ಕಡಿಮೆಗೊಳಿಸಿ, ಯುದ್ಧದ ಸಂದರ್ಭದಲ್ಲಿ ಪೈಲಟ್ ಪಾರಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಈ ವ್ಯವಸ್ಥೆ ಕಟ್ಟಡಗಳು, ಬಂಕರ್‌ಗಳಂತಹ ಸ್ಥಿರ ಗುರಿಗಳು ಮತ್ತು ಚಲಿಸುವ ಗುರಿಗಳ ಮೇಲೂ ದಾಳಿ ನಡೆಸಬಲ್ಲದು. ಇದು ಆಧುನಿಕ ನ್ಯಾವಿಗೇಶನ್ ತಂತ್ರಜ್ಞಾನವನ್ನು ಬಳಸುತ್ತಿದ್ದು, ಗುರಿ ತಪ್ಪುವ ಸಾಧ್ಯತೆಗಳು ಕಡಿಮೆ. ಹ್ಯಾಮರ್ ಹಗಲು ಮತ್ತು ರಾತ್ರಿಗಳಲ್ಲಿ, ಎಂತಹ ಹವಾಮಾನದಲ್ಲೂ ಕಾರ್ಯಾಚರಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ.
ಈ ಆಯುಧ ಅಂದಾಜು 330 ಕೆಜಿ ತೂಕ ಹೊಂದಿದ್ದು, ಎತ್ತರ ಪ್ರದೇಶಗಳಲ್ಲಿನ ಕಾರ್ಯಾಚರಣೆಗಳಿಗೂ ಸೂಕ್ತವಾಗಿದೆ. ಇದು 125 ಕೆಜಿಯಿಂದ 1,000 ಕೆಜಿ ತನಕ ವಿಭಿನ್ನ ಸಿಡಿತಲೆಗಳ ಆಯ್ಕೆ ಹೊಂದಿದ್ದು, ಕಾರ್ಯಾಚರಣೆಯ ಆಧಾರದಲ್ಲಿ ಸಿಡಿತಲೆಯನ್ನು ಬಳಸಲಾಗುತ್ತದೆ. ಒಂದು ರಫೇಲ್ ಯುದ್ಧ ವಿಮಾನ ತಲಾ 250 ಕೆಜಿಯ ಆರು ಹ್ಯಾಮರ್ ಕ್ಷಿಪಣಿಗಳನ್ನು ಒಯ್ಯಬಲ್ಲದು. ಇದು ವಿಮಾನಕ್ಕೆ ಒಂದೇ ಕಾರ್ಯಾಚರಣೆಯಲ್ಲಿ ಅರು ಗುರಿಗಳ ಮೇಲೆ ದಾಳಿ ನಡೆಸಲು ಅವಕಾಶ ಮಾಡಿಕೊಡುತ್ತದೆ.
ಹ್ಯಾಮರ್ ಅನ್ನು ಮೊದಲ ಬಾರಿಗೆ 2007ರಲ್ಲಿ ಪ್ಯಾರಿಸ್ ವೈಮಾನಿಕ ಪ್ರದರ್ಶನದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿತ್ತು. ಅಲ್ಲಿ ಇದನ್ನು ಎಎಎಸ್ಎಂ (ಆರ್ಮೆಮೆಂಟ್ ಏರ್ ಸೋಲ್ ಮಾಡ್ಯುಲೇರ್) ಎಂದು ಕರೆಯಲಾಗಿತ್ತು. ಬಳಿಕ, 2011ರಲ್ಲಿ, ಇದಕ್ಕೆ ಹ್ಯಾಮರ್ ಎಂದು ಮರುನಾಮಕರಣ ಮಾಡಲಾಯಿತು. ಇದನ್ನು ಮಧ್ಯಮ ವ್ಯಾಪ್ತಿಯ ಗಾಳಿಯಿಂದ ಭೂಮಿಗೆ ದಾಳಿ ನಡೆಸುವ ಆಯುಧ ಎಂದು ಗುರುತಿಸಲಾಗಿದೆ.
ಒಂದು ಮಹತ್ವದ ಹೆಜ್ಜೆ ಎಂದರೆ, ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಫ್ರಾನ್ಸಿನ ಸಫ್ರಾನ್ ಇಲೆಕ್ಟ್ರಾನಿಕ್ಸ್ ಆ್ಯಂಡ್ ಡಿಫೆನ್ಸ್ (ಎಸ್ಇಪಿ) ಜೊತೆ ಪ್ರಾಜೆಕ್ಟ್ ಹ್ಯಾಮರ್‌ಗಾಗಿ ಒಂದು ಜಂಟಿ ಉದ್ಯಮ ಆರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ, ಭಾರತದಲ್ಲಿ ಒಂದು ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಈ ಕೇಂದ್ರ ಹ್ಯಾಮರ್ ಆಯುಧ ವ್ಯವಸ್ಥೆಯಲ್ಲಿ ಬಳಸುವ ಗೈಡೆನ್ಸ್ ಕಿಟ್‌ನ (ಜಿಕೆ) ಉತ್ಪಾದನೆ, ಪೂರೈಕೆ, ನಿರ್ವಹಣೆ ಮತ್ತು ದುರಸ್ತಿಯ ತಂತ್ರಜ್ಞಾನ ಮತ್ತು ಬೆಂಬಲ ಸಹಯೋಗಿಯಾಗಿ ಕಾರ್ಯಾಚರಿಸಲಿದೆ.
ಈ ಜಂಟಿ ಉದ್ಯಮ ವ್ಯವಸ್ಥೆ ನಾಲ್ವರು ನಿರ್ದೇಶಕರನ್ನು ಹೊಂದಿದ್ದು, ಇಬ್ಬರನ್ನು ಬಿಇಎಲ್ ಮತ್ತು ಇಬ್ಬರನ್ನು ಸಾಫ್ರನ್ ನಾಮ ನಿರ್ದೇಶನಗೊಳಿಸಲಿವೆ. ಅಧ್ಯಕ್ಷರನ್ನು ಈ ನಾಮನಿರ್ದೇಶಿತರು ಆರಿಸಲಿದ್ದು, ಇದಕ್ಕಾಗಿ ಯಾವುದೇ ಮತದಾನ ಇರುವುದಿಲ್ಲ. ಈ ಜಂಟಿ ಉದ್ಯಮ ಕಂಪನಿ ಬಿಇಎಲ್ ಮತ್ತು ಸಾಫ್ರನ್ ನಡುವೆ 50:50 ಪಾಲುದಾರಿಕೆಯಡಿ ಸ್ಥಾಪನೆಗೊಳ್ಳಲಿದೆ.
ಭಾರತದಲ್ಲಿ ಹ್ಯಾಮರ್ ಕ್ಷಿಪಣಿಗಳ ಉತ್ಪಾದನೆ, ಪೂರೈಕೆ ಮತ್ತು ನಿರ್ವಹಣೆಗಳನ್ನು ಸ್ಥಳಿಯಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಆಯುಧಗಳನ್ನು ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನಗಳು ಮತ್ತು ನೌಕಾಪಡೆಯ ರಫೇಲ್ ಮರೀನ್ ಯುದ್ಧ ವಿಮಾನಗಳಲ್ಲಿ ಅಳವಡಿಸಿ, ಉಭಯ ವಿಭಾಗಗಳ ಕಾರ್ಯಾಚರಣಾ ಅವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸಲಾಗುತ್ತದೆ.
ಹ್ಯಾಮರ್ ಕ್ಷಿಪಣಿ ಸ್ವಾಯತ್ತವಾಗಿ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿರುವುದು ಮತ್ತು ಶತ್ರುಗಳ ಜಾಮಿಂಗ್ ಪ್ರಯತ್ನಕ್ಕೆ ತುತ್ತಾಗದಿರುವುದೂ ಸಹ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತ ಇದನ್ನು ಬಳಸುವುದಕ್ಕೆ ಕಾರಣವಾಗಿರಬಹುದು ಎಂದು ಬಹಳಷ್ಟು ರಕ್ಷಣಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಸಾಕಷ್ಟು ಕಡಿಮೆ ಎತ್ತರದಿಂದಲೂ ಪ್ರಯೋಗಿಸಲು ಸಾಧ್ಯವಿದ್ದು, ಇದು ಪ್ರಬಲ ರಚನೆಗಳ ವಿರುದ್ಧ ಹ್ಯಾಮರ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ. ಇದು ಬಹವಲ್ಪುರದ ಮರ್ಕಜ಼್ ಸುಭಾನ್ ಅಲ್ಲಾ ಮತ್ತು ಮರ್ಕಜ಼್ ತೈಬಾ ಕಂಪೌಂಡಿನಂತಹ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಲು ಹ್ಯಾಮರ್ ಅನ್ನು ಸೂಕ್ತ ಆಯ್ಕೆಯಾಗಿಸಿತು. ಈ ತಾಣಗಳು ಜೈಷ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತೈಬಾಗಳ ಪ್ರಮುಖ ಕಾರ್ಯಾಚರಣಾ ಕೇಂದ್ರಗಳಾಗಿದ್ದವು ಎನ್ನಲಾಗಿದೆ.
ಹ್ಯಾಮರ್ ಖರೀದಿ ಮಾತುಕತೆಗಳ ಜೊತೆಗೆ, 114 ರಫೇಲ್ ಯುದ್ಧ ವಿಮಾನಗಳ ಖರೀದಿಯ ಕುರಿತೂ ಚರ್ಚೆಯಾಗುವ ನಿರೀಕ್ಷೆಗಳಿವೆ. ಈ ವಿಮಾನಗಳ ಪೈಕಿ, 96 ಯುದ್ಧ ವಿಮಾನಗಳು ಭಾರತದಲ್ಲೇ ನಿರ್ಮಾಣಗೊಳ್ಳಲಿದ್ದು, ಉಳಿದ ವಿಮಾನಗಳನ್ನು ಡಸಾಲ್ಟ್ ಏವಿಯೇಷನ್ ಸಂಸ್ಥೆ ಹಾರಾಟ ಸನ್ನದ್ಧ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಲಿದೆ.
ಒಟ್ಟಾರೆಯಾಗಿ, ಬೆಂಗಳೂರು ರಕ್ಷಣಾ ಸಭೆ ಭಾರತದ ಗಮನ ಈಗ ಕೇವಲ ಆಧುನಿಕ ಆಯುಧಗಳ ಖರೀದಿಯತ್ತ ಮಾತ್ರ ಇಲ್ಲದೆ, ಅವುಗಳನ್ನು ಭಾರತದಲ್ಲೇ ನಿರ್ಮಿಸುವ, ಅಭಿವೃದ್ಧಿ ಪಡಿಸುವ, ಮತ್ತು ಆ ಮೂಲಕ ದೀರ್ಘಾವಧಿಯ ಕಾರ್ಯತಂತ್ರದ ಶಕ್ತಿಯನ್ನು ವೃದ್ಧಿಸುವತ್ತಲೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.