ಹಾಂಗ್ ಕಾಂಗ್ ಅಗ್ನಿ ದುರಂತ
ಎಕ್ಸ್ ಚಿತ್ರ
ಬೆಂಗಳೂರು: ಕಾಳ್ಗಿಚ್ಚಿನಂತೆ ತ್ವರಿತವಾಗಿ ವ್ಯಾಪಿಸಿದ ಹಾಂಗ್ ಕಾಂಗ್ ಬೆಂಕಿ ದುರಂತದಲ್ಲಿ ಈವರೆಗೂ 55 ಜನ ಮೃತಪಟ್ಟಿದ್ದಾರೆ. ನಿರ್ಮಾಣಕ್ಕೆ ಬಳಕೆಯಾದ ಪದಾರ್ಥಗಳೇ ತ್ವರಿತವಾಗಿ ಬೆಂಕಿ ವ್ಯಾಪಿಸಲು ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ದುರಂತಕ್ಕೀಡಾದ ಈ ಬಹುಮಹಡಿ ಕಟ್ಟಡದ ಪ್ರತಿ ಫ್ಲಾಟ್‌ನ ಕಿಟಕಿಗಳಲ್ಲಿ ಬಳಕೆಯಾಗಿರುವ ದಹಿಸುವ ಗುಣ ಹೊಂದಿರುವ ಸ್ಟೈರೊಫೋಮ್, ಬೆಂಕಿ ವ್ಯಾಪಿಸದ ಕಟ್ಟಡಗಳಲ್ಲಿ ಹಾರಿ ಬಿದ್ದಿರುವುದು ಪತ್ತೆಯಾಗಿದೆ. ಇದು ಹೊಸ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಕಟ್ಟಡ ನವೀಕರಣ ಕಾರ್ಯ ಕೈಗೊಂಡಿದ್ದ ಎಂಜಿನಿಯರಿಂಗ್ ಕಂಪನಿಯ ಮೂವರು ಹಿರಿಯ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಒಂದಾದ ಪ್ಲಾಸ್ಟಿಕ್‌ನ ಪಾಲಿಸ್ಟಿರಿನ್‌ನಿಂದ ತಯಾರಿಸಲಾಗಿರುವುದೇ ಸ್ಟೈರೊಫೋಮ್. ನಿರ್ಮಾಣ ಕಾಮಗಾರಿಗಳಲ್ಲಿ ಇನ್ಸುಲೇಷನ್‌ನಿಂದ ಹಿಡಿದು ಆಹಾರ ಉದ್ಯಮದಲ್ಲಿ ಪ್ಯಾಕೇಜಿಂಗ್‌ವರೆಗೂ ಬಳಕೆಯಲ್ಲಿದೆ. ಐರೋಪ್ಯ ರಾಷ್ಟ್ರಗಳನ್ನೂ ಒಳಗೊಂಡಂತೆ ಜಗತ್ತಿನ ಬಹಳಷ್ಟು ರಾಷ್ಟ್ರಗಳು ಇದರ ಬಳಕೆಯನ್ನು ನಿಷೇಧಿಸಿವೆ. ಇದಕ್ಕೆ ಪ್ರಮುಖ ಕಾರಣ, ಇದು ಮಣ್ಣಿನಲ್ಲಿ ಕರಗದು ಮತ್ತು ಕ್ಯಾನ್ಸರ್ ಕಾರಕವೂ ಹೌದು ಎಂಬುದಾಗಿದೆ.
ಕಡಿಮೆ ಶಾಖದಲ್ಲೂ ತ್ವರಿತವಾಗಿ ದಹಿಸುವ ಮತ್ತು ವೇಗವಾಗಿ ಸುಡುವ ಗುಣವನ್ನು ಸ್ಟೈರೊಫೋಮ್ ಹೊಂದಿದೆ. ಕಡುಗಪ್ಪು ಹೊಗೆ ಇದರಿಂದ ಉತ್ಪಾದನೆಯಾಗುತ್ತದೆ ಮತ್ತು ಅದು ವಿಷಕಾರಿಯಾದ ಕಾರ್ಬನ್ ಮೊನಾಕ್ಸೈಡ್ ಹೊಂದಿದೆ. ಗಾಳಿಯಲ್ಲಿ ತೇಲುವ ಗುಣವಿರುವ ಇದು ತ್ವರಿತವಾಗಿ ಶೇ 95ರಷ್ಟು ಆವರಿಸಿಕೊಳ್ಳುವ ಗುಣವನ್ನು ಮತ್ತು ಇದರಿಂದ ಬೆಂಕಿಯನ್ನು ಇತರಡೆ ವ್ಯಾಪಿಸಲು ನೆರವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಹಾಂಗ್ ಕಾಂಗ್‌ನ ಸುದ್ದಿ ಸಂಸ್ಥೆ ‘ದಿ ಸ್ಟಾಂಡರ್ಡ್’ ವರದಿ ಮಾಡಿರುವಂತೆ, ‘ಕಳೆದ ವರ್ಷ ಅವಘಡಕ್ಕೆ ತುತ್ತಾದ ಕಟ್ಟಡದಲ್ಲಿ ಮನೆಗಳ ಖರೀದಿಸಿರುವ ಮಾಲೀಕರ ಸಂಘವು ವಾಂಗ್‌ಫುಕ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿತ್ತು. ಅದಕ್ಕೆ ಉತ್ತರವಾಗಿ ಪ್ರಸ್ಟೀಜ್ ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿ ನೀಡಿದ ಉತ್ತರದಲ್ಲಿ ‘ಫೋಮ್ ಬೋರ್ಡ್’ (ಸ್ಟೈರೊಫೋಮ್) ಬಳಸಿದ್ದನ್ನು ಉಲ್ಲೇಖಿಸಲಾಗಿತ್ತು. ಮರಳು ಮತ್ತು ಕಲ್ಲಿನ ಅತಿ ಸೂಕ್ಷ್ಮ ಪುಡಿಗಳಿಂದ ಗಾಜುಗಳನ್ನು ರಕ್ಷಿಸಲು ಇದನ್ನು ಬಳಸಲಾಗಿದೆ. ಆದರೆ ಹಲವು ಜನರ ಜೀವ ಪಡೆದ ಅಗ್ನಿ ಅವಗಢದಲ್ಲಿ ಈ ಫೋಮ್ ಬೋರ್ಡ್ ಬಳಕೆಯಾಗಿರುವುದೇ ತನಿಖೆಯ ಕೇಂದ್ರ ಬಿಂದುವಾಗಿದೆ.
ಬೆಂಕಿ ಅವಘಡದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ ಎಂದು ವರದಿಯಾಗಿದೆ. ಬೆಂಕಿ ನಂದಿಸಲು ತೀವ್ರ ಪ್ರಯತ್ನ ನಡೆಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಯ ಪ್ರಕಾರ, ನೆಟ್ ಬಳಕೆ, ಕಿಟಕಿಗೆ ಅಂಟಿಸಿರುವ ತಂಪು ಹಾಳೆ, ಕೆಲವೆಡೆ ವಾಟರ್‌ಪ್ರೂಫ್ ಕ್ಯಾನ್ವಾಸ್, ಪ್ಲಾಸ್ಟಿಕ್ ಹಾಳೆ ಇತ್ಯಾದಿಗಳು ಬೆಂಕಿ ತ್ವರಿತವಾಗಿ ವ್ಯಾಪಿಸಲು ಕಾರಣ ಎಂದು ಅಂದಾಜಿಸಿವೆ.
ಆದರೆ ಇದೇ ತಂಡವು ಅತ್ಯಂತ ವಿಶಿಷ್ಟವಾದ ಪದಾರ್ಥವಾದ ಫೋಮ್ ಬೋರ್ಡ್ ಕೂಡಾ ಪತ್ತೆ ಮಾಡಿದೆ. ಇದು ಕಟ್ಟಡ ನಿರ್ಮಾಣದ ಗುಣಮಟ್ಟಕ್ಕೆ ಪೂರಕವಾಗಿಲ್ಲದಿದ್ದರೆ ಮತ್ತು ಬೇಗನೆ ಬೆಂಕಿ ಹೊತ್ತಿಕೊಳ್ಳುವ ಗುಣವಿದ್ದರೆ ಅಂಥದ್ದನ್ನು ಬಳಕೆ ಮಾಡಿದಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಅವಕಾಶವೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಈ ಬೆಂಕಿ ಅವಘಡದಲ್ಲಿ 55 ಮಂದಿ ಮೃತಪಟ್ಟು, 300 ಮಂದಿ ನಾಪತ್ತೆಯಾಗಿದ್ದಾರೆ. ಕಟ್ಟಡಗಳಲ್ಲಿದ್ದ 500ಕ್ಕೂ ಅಧಿಕ ಜನರನ್ನು ತಾತ್ಕಾಲಿಕ ಆಶ್ರಯತಾಣಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಮಾಣ ಕಾಮಗಾರಿಗಾಗಿ ಕಟ್ಟಡಗಳ ಸುತ್ತಲೂ ಬಿದಿರಿನ ಕಂಬಗಳನ್ನು ಅಳವಡಿಸಿದ್ದರಿಂದ ಬೆಂಕಿಯು ಮತ್ತಷ್ಟು ತೀವ್ರವಾಗಿ ವ್ಯಾಪಿಸಿತ್ತು. ದಟ್ಟ ಹೊಗೆ ಮತ್ತು ಜ್ವಾಲೆ ಕಟ್ಟಡಗಳನ್ನು ಆವರಿಸಿಕೊಂಡಿತು ಎಂದೂ ಹೇಳಲಾಗುತ್ತಿದೆ.
‘ಘಟನೆ ನಡೆದ ಪ್ರದೇಶದಲ್ಲಿ ಎಂಟು ಬ್ಲಾಕ್‌ಗಳಿದ್ದು, 2,000 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಇವುಗಳಲ್ಲಿ 4,600ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರು. ಗುರುವಾರ ಬೆಳಿಗ್ಗೆಯ ಹೊತ್ತಿಗೆ ನಾಲ್ಕು ಬ್ಲಾಕ್‌ಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದೇವೆ. ಜತೆಗೆ, ಮೂರು ಬ್ಲಾಕ್‌ಗಳಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.