ADVERTISEMENT

2047ರಲ್ಲಿ 1 ಕೋಟಿ ಟನ್‌ ಸೌರ ತ್ಯಾಜ್ಯ: ಕಸದಿಂದ ರಸ ತೆಗೆಯುವ ಲಾಭದಾಯಕ ಉದ್ಯಮ

ಪಿಟಿಐ
Published 7 ನವೆಂಬರ್ 2025, 7:20 IST
Last Updated 7 ನವೆಂಬರ್ 2025, 7:20 IST
   

ನವದೆಹಲಿ: ಸೌರ ಇಂಧನ ಉತ್ಪಾದನೆಗೆ ವ್ಯಾಪಕ ಉತ್ತೇಜನ ನೀಡಲಾಗುತ್ತಿದೆ. ಮತ್ತೊಂದೆಡೆ ಸೌರ ಶಕ್ತಿ ಉತ್ಪಾದನೆಯಿಂದ 2047ರ ಹೊತ್ತಿಗೆ 1.1 ಕೋಟಿ ಟನ್‌ ತ್ಯಾಜ್ಯ ಸಂಗ್ರಹವಾಗಲಿದೆ ಎಂದು ಎರಡು ಪ್ರತ್ಯೇಕ ಅಧ್ಯಯನ ವರದಿಗಳು ಹೇಳಿವೆ.

ಈ ಸೌರ ತ್ಯಾಜ್ಯವನ್ನು ನಿರ್ವಹಿಸಲು ಸುಮಾರು 300 ಪುನರ್ಬಳಕೆ ಘಟಕಗಳನ್ನು ದೇಶದಾದ್ಯಂತ ಸ್ಥಾಪಿಸುವ ಅಗತ್ಯವಿದ್ದು, ಅದಕ್ಕೆ ₹4,200 ಕೋಟಿ ಹೂಡಿಕೆಯ ಅಗತ್ಯವಿದೆ ಎಂದು ದೆಹಲಿ ಮೂಲದ ಥಿಂಕ್ ಟ್ಯಾಂಕ್ ಕೌನ್ಸಿಲ್‌ ಆನ್ ಎನರ್ಜಿ, ಎನ್ವಿರಾನ್ಮೆಂಟ್‌ ಅಂಡ್‌ ವಾಟರ್‌ ಎಂಬ ಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ.

‘ಬಳಕೆಯಲ್ಲಿಲ್ಲದ ಸೌರ ಫಲಕಗಳಲ್ಲಿ ನವೀಕರಿಸಬಲ್ಲ ವಸ್ತುಗಳನ್ನು ಸಂಗ್ರಹಿಸಿದರೆ, ಅದು ಸುಮಾರು ₹3,700 ಕೋಟಿ ಮಾರುಕಟ್ಟೆ ಅವಕಾಶವನ್ನು 2047ರ ಹೊತ್ತಿಗೆ ಸೃಷ್ಟಿಯಾಗಲಿದೆ. ಅದರಲ್ಲಿ ಪ್ರಮುಖವಾಗಿ ಸಿಲಿಕಾನ್, ತಾಮ್ರ, ಅಲ್ಯುಮಿನಿಯಂ ಮತ್ತು ಬೆಳ್ಳಿಯನ್ನು ಮರುಬಳಕೆ ಮಾಡಬಹುದು. ಇದು ಮುಂದಿನ 22 ವರ್ಷಗಳಲ್ಲಿ ಸೌರ ಫಲಕ ಸಿದ್ಧಪಡಿಸಲು ಅಗತ್ಯವಿರುವ ಕಚ್ಚಾ ಸಾಮಗ್ರಿಗಳ ಕೊರತೆಯನ್ನು ನೀಗಿಸಲಿದೆ. ಜತೆಗೆ ಪುನರ್‌ಬಳಕೆಯಿಂದ 3.7 ಕೋಟಿ ಟನ್‌ ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸಲಿದೆ’ ಎಂದೂ ಹೇಳಲಾಗಿದೆ.

ADVERTISEMENT

ಶೈಶವಾವಸ್ಥೆಯಲ್ಲಿರುವ ಸೌರ ಸಾಧನಗಳ ಪುನರ್‌ಬಳಕೆ

‘ಸೌರ ಸಾಧನಗಳ ಪುನರ್‌ಬಳಕೆ ಮಾರುಕಟ್ಟೆಯು ಭಾರತದಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿದೆ. ಇದು ಮನೆಗಳ ಮೇಲೆ ಹಾಕಿರುವ ಸೌರ ಫಲಕಗಳ ಮರುಬಳಕೆಗೆ ಪೂರಕ ವಾತಾವರಣ ಸೃಷ್ಟಿಸುವ ಮೂಲಕ ಈ ಕ್ಷೇತ್ರವನ್ನು ಉತ್ತೇಜಿಸಬಹುದು. ಇದರಿಂದ ಶುದ್ಧ ಇಂಧನ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಭಾರತದ ಸೌರ ಕ್ರಾಂತಿಯು ಹೊಸ ಹಸಿರು ಕೈಗಾರಿಕಾ ಅವಕಾಶಗಳಿಗೆ ಉತ್ತೇಜನ ನೀಡಲಿದೆ. ಶುದ್ಧ ಇಂಧನ ಪಡೆಯುವ ಪೂರಕ ವ್ಯವಸ್ಥೆಯಲ್ಲಿ ಹಲವಾರು ಅಪರೂಪದ ಕ್ಲಿಷ್ಟಕರ ಖನಿಜಗಳನ್ನು ಸಂಗ್ರಹಿಸಬಹುದು. ಪೂರಕ ಸರಪಳಿಯನ್ನು ಬಲಿಷ್ಠಗೊಳಿಸಬಹುದು. ಉದ್ಯೋಗ ಸೃಜನೆಯ ಜತೆಗೆ ವ್ಯರ್ಥವಾಗುತ್ತಿದ್ದ ಪದಾರ್ಥಗಳನ್ನು ನಿರಂತರ ಬಳಕೆಗೆ ಅಣಿಗೊಳಿಸಬಹುದು. ಭಾರತದ ಸ್ಥಿತಿಸ್ಥಾಪಕತ್ವ ಮತ್ತು ಜವಾಬ್ದಾರಿಯುತ ಬೆಳವಣಿಗೆಯಲ್ಲಿ ಈ ವರ್ತುಲ ಆರ್ಥಿಕತೆ ಬಹುಮುಖ್ಯ’ ಎಂದು ಈ ಅಧ್ಯಯನ ನಡೆಸಿದ ಸಂಸ್ಥೆಯ ರಿಶಭ್ ಜೈನ್ ಹೇಳಿದ್ದಾರೆ.

ಸಿಲಿಕಾನ್‌, ಬೆಳ್ಳಿ ಸಂಗ್ರಹಿಸಿದರೆ ಹೆಚ್ಚಿನ ಲಾಭ

ಸದ್ಯದ ಪರಿಸ್ಥಿತಿಯಲ್ಲಿ ಪುನರ್‌ಬಳಕೆ ವ್ಯವಸ್ಥೆ ಭಾರತದಲ್ಲಿ ಲಭ್ಯವಿಲ್ಲದ ಕಾರಣ ಈ ಕ್ಷೇತ್ರದಲ್ಲಿ ಪ್ರತಿ ತ್ಯಾಜ್ಯದಿಂದ ₹10 ಸಾವಿರದಿಂದ ₹12 ಸಾವಿರದವರೆಗೆ ನಷ್ಟ ಉಂಟಾಗುತ್ತಿದೆ. ಇದರಲ್ಲಿ ತ್ಯಾಜ್ಯ ಎಂಬುದನ್ನು ಮರು ಖರೀದಿಸುವುದೇ ದೊಡ್ಡ ಹೊರೆಯಾಗಿದೆ. ಪ್ರತಿ ಪ್ಯಾನಲ್‌ಗೆ ₹600 ಅಗತ್ಯವಿದ್ದು, ಇದರಲ್ಲಿ ಸಂಸ್ಕರಣೆ, ಸಂಗ್ರಹ ಮತ್ತು ವಿಲೇವಾರಿ ಶುಲ್ಕ ಒಳಗೊಂಡಿದೆ.

ನವೀಕರಣವನ್ನು ಲಾಭದಾಯಕವಾಗಿ ಪರಿವರ್ತಿಸಲು ಸಾಧ್ಯವಿದೆ. ಇದರಿಂದ ಈ ಮಾದರಿಗೆ ತಗಲುವ ಒಟ್ಟು ಶುಲ್ಕವು ₹330 ಅಥವಾ ಪುನರ್‌ಬಳಕೆ ಬೆಂಬಲಿತ ಪ್ರಮಾಣಪತ್ರ ಸಿಗಲಿದೆ. ಇದರಿಂದ ತೆರಿಗೆ ವಿನಾಯ್ತಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರೋತ್ಸಾಹವೂ ಸಿಗಲಿದೆ. ಅದರಲ್ಲೂ ಸಿಲಿಕಾನ್ ಮತ್ತು ಬೆಳ್ಳಿಯನ್ನು ಸಂಗ್ರಹಿಸಿದರೆ ಲಾಭ ಹೆಚ್ಚು ಎನ್ನುತ್ತದೆ ವರದಿ

ಸೌರ ಫಲಕಗಳ ತ್ಯಾಜ್ಯ ಸಂಗ್ರಹ ದಾಸ್ತಾನು ಘಟಕ ಅಗತ್ಯ

ಈ ಅಧ್ಯಯನ ಕಾರ್ಯಕ್ರಮ ಮುಖ್ಯಸ್ಥೆ ಆಕಾಂಕ್ಷಾ ತ್ಯಾಗಿ ಮಾಹಿತಿ ನೀಡಿ, ‘ಸೌರ ಪುನರ್‌ಬಳಕೆ ಕ್ಷೇತ್ರವು ಭಾರತದ ಶುದ್ಧ ಇಂಧನ ಉತ್ಪಾದನೆ ಮತ್ತು ತಯಾರಿಕಾ ವಲಯದ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. ತ್ಯಾಜ್ಯವನ್ನು ನಿರ್ವಹಿಸುವುದರ ಆಚೆಗೆ, ಪುನರ್‌ ಬಳಕೆಗೆ ಅನುಕೂಲವಾಗುವಂತ ಪ್ಯಾನಲ್‌ಗಳ ವಿನ್ಯಾಸಕ್ಕೂ ಇದು ಅವಕಾಶ ಮಾಡಿಕೊಡಲಿದೆ. ಜತೆಗೆ ಸೌರ ಫಲಕಗಳಲ್ಲಿ ಬಳಕೆಯಾಗುವ ವಸ್ತುಗಳ ಶುದ್ಧತೆಯ ಕಡೆಗೂ ಆದ್ಯತೆ ಸಿಗಲಿದೆ ಮತ್ತು ಅಪರೂಪದ ಖನಿಜಗಳ ಪೂರಕ ಸರಪಳಿಯ ಮೌಲ್ಯವೂ ಹೆಚ್ಚಾಗಲಿದೆ’ ಎಂದು ತಿಳಿಸಿದ್ದಾರೆ.

‘ಇವೆಲ್ಲದಕ್ಕೂ ಕೇಂದ್ರೀಕೃತ ಸೌರ ದಾಸ್ತಾನು ಘಟಕವನ್ನು ಸ್ಥಾಪಿಸಬೇಕು. ಆ ಮೂಲಕ ತ್ಯಾಜ್ಯ ಹೆಚ್ಚು ಸಂಗ್ರಹವಾಗುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿಯೇ ಘಟಕ ಸ್ಥಾಪಿಸಿ ಪುನರ್ ಬಳಕೆಯ ವಸ್ತುಗಳನ್ನು ಸಂಗ್ರಹಿಸಬಹುದು. ಜತೆಗೆ ಫಲಕಗಳಿಂದ ಸುಲಭವಾಗಿ ಪುನರ್‌ಬಳಕೆಯ ವಸ್ತುಗಳನ್ನು ಪ್ರತ್ಯೇಕಿಸುವ ಮಾದರಿಯನ್ನೂ ವಿನ್ಯಾಸಗೊಳಿಸಬೇಕಿದೆ’ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.