
ಮೊದಲ ಗಣರಾಜ್ಯೋತ್ಸವ ಮೆರವಣಿಗೆ
(ಚಿತ್ರ: ಫೇಸ್‌ಬುಕ್/ರಾಜೀವ್ ಚಂದ್ರಶೇಖರ್)
ದೇಶದಲ್ಲಿ (ಭಾರತ) ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದಿತು. ಅಲ್ಲದೇ ಆ ದಿನದಂದು(ಜ.26) ದೇಶವು ಔಪಚಾರಿಕವಾಗಿ ತನ್ನನ್ನು ಸ್ವತಂತ್ರ, ಸಾರ್ವಭೌಮ ಮತ್ತು ಪ್ರಜಾಸತಾತ್ಮಕ ಗಣರಾಜ್ಯವೆಂದು ಘೋಷಿಸಿಕೊಂಡಿತ್ತು. ಆದಾಗ್ಯೂ ದೇಶದ ಮೊದಲ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ಇದು ದೆಹಲಿಯ ಗವರ್ನ್‌ಮೆಂಟ್ ಹೌಸ್ (Government House) ಮತ್ತು ಇರ್ವಿನ್ ಆಂಫಿಥಿಯೇಟರ್ ಸುತ್ತ ಕೇಂದ್ರೀಕೃತವಾಗಿತ್ತು.
ಭಾರತ ಸಂವಿಧಾನ ಪೂರ್ತಿ ಸಿದ್ಧವಾಗಿ, ಸಂವಿಧಾನ ರಚನಾ ಸಭೆಯು ಅದನ್ನು 1949ರ ನವೆಂಬರ್ 26ರಂದೇ ಅಂಗೀಕರಿಸಿತ್ತು. ಆದರೆ ಅದು ಜಾರಿಗೆ ಬಂದದ್ದು 2 ತಿಂಗಳ ಬಳಿಕ. 1930ರ ಜನವರಿ 26ರಂದು ಲಾಹೋರಿನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಾರ್ಷಿಕ ಅಧಿವೇಶನದಲ್ಲಿ ಭಾರತ ‘ಪೂರ್ಣ ಸ್ವರಾಜ್ಯ’ವನ್ನು ಘೋಷಿಸಿತ್ತು. ಆ ದಿನದ ಸ್ಮರಣಾರ್ಥ 1950ರ ಜ. 26ರಂದು ಭಾರತದ ಸಂವಿಧಾನವನ್ನು ಜಾರಿಗೊಳಿಸಲಾಯಿತು. ಆ ಮೂಲಕ ಭಾರತ, ಬ್ರಿಟಿಷ್ ಸಾಮ್ರಾಜ್ಯದೊಂದಿಗಿನ ತನ್ನ ಸಾಂವಿಧಾನಿಕ ಸಂಬಂಧಗಳನ್ನು ಕಡಿದುಕೊಂಡಿತು.
ಸಂವಿಧಾನ ಜಾರಿಗೆ ಬರುವುದರೊಂದಿಗೆ ಭಾರತ ಬ್ರಿಟಿಷ್ ಪ್ರಭುತ್ವದಿಂದ ಮುಕ್ತಗೊಂಡು ತನ್ನದೇ ಆದ ಚುನಾಯಿತ ರಾಷ್ಟ್ರ ಮುಖ್ಯಸ್ಥರೊಂದಿಗೆ ಸಾರ್ವಭೌಮ ಗಣರಾಜ್ಯವಾಗಿ ಹೊರಹೊಮ್ಮಿತು. ಇದು ದೇಶದ ರಾಜಕೀಯ ಪ್ರಯಾಣದಲ್ಲಿ ನಿರ್ಣಾಯಕ ತಿರುವಾಗಿತ್ತು.
ಗಣರಾಜ್ಯ ಘೋಷಣೆಯ ಅಧಿಕೃತ ಸಮಾರಂಭ ಅಂದಿನ ಗವರ್ನ್‌ಮೆಂಟ್ ಹೌಸ್‌ನಲ್ಲಿರುವ (ಇಂದಿನ ರಾಷ್ಟ್ರಪತಿ ಭವನ) ಭವ್ಯವಾದ ದರ್ಬಾರ್ ಹಾಲ್‌ನಲ್ಲಿ ನಡೆಯಿತು. 1950 ರ ಫೆಬ್ರುವರಿ 4ರ ವರದಿಯ ಪ್ರಕಾರ, ಅಂದು(1950 ಜ.26) ಬೆಳಿಗ್ಗೆ 10 ಗಂಟೆ 18 ನಿಮಿಷಕ್ಕೆ ಸರಿಯಾಗಿ ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಲಾಯಿತು.
ಆರು ನಿಮಿಷಗಳ ಬಳಿಕ ಡಾ.ರಾಜೇಂದ್ರ ಪ್ರಸಾದ್ ಅವರು ದೇಶದ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸಮಾರಂಭದಲ್ಲಿ ನಿವೃತ್ತ ಗವರ್ನರ್ ಜನರಲ್ ಸಿ.ರಾಜಗೋಪಾಲಾಚಾರಿ ಅವರು ಗಣರಾಜ್ಯದ ಘೋಷಣೆಯನ್ನು ಓದಿದರು. ನಂತರ ಡಾ. ರಾಜೇಂದ್ರ ಪ್ರಸಾದ್ ಪ್ರಮಾಣ ವಚನ ಸ್ವೀಕರಿಸಿ, ಮೊದಲು ಹಿಂದಿಯಲ್ಲಿ ನಂತರ ಇಂಗ್ಲಿಷ್‌ನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಸಂಕ್ಷಿಪ್ತ ಭಾಷಣ ಮಾಡಿದ್ದರು.
ಡಾ. ರಾಜೇಂದ್ರ ಪ್ರಸಾದ್ ಅವರು ತಮ್ಮ ಭಾಷಣದಲ್ಲಿ, ಆ ಕ್ಷಣದ ಮಹತ್ವವನ್ನು ಕುರಿತಿ ಹೇಳಿದ್ದರು. ಒಂದೇ ಸಂವಿಧಾನದ ಅಡಿಯಲ್ಲಿ ದೇಶ ಏಕೀಕರಣಗೊಂಡ ಬಗ್ಗೆ ಅವರು ವಿವರಿಸಿದ್ದರು.
ದೀರ್ಘ ಮತ್ತು ವೈವಿಧ್ಯಮಯ ಇತಿಹಾಸದಲ್ಲಿ ಮೊದಲ ಬಾರಿಗೆ, ಉತ್ತರದಲ್ಲಿ ಕಾಶ್ಮೀರದಿಂದ ದಕ್ಷಿಣದಲ್ಲಿ ಕೇಪ್ ಕೊಮೊರಿನ್‌ವರೆಗೆ, ಪಶ್ಚಿಮದಲ್ಲಿ ಕಥಿಯಾವಾಡ ಮತ್ತು ಕಚ್‌ನಿಂದ ಪೂರ್ವದಲ್ಲಿ ಕೊಕೊನಾಡಾ ಮತ್ತು ಕಾಮರೂಪ ವರೆಗೆ ವ್ಯಾಪಿಸಿರುವ ಈ ವಿಶಾಲವಾದ ಭೂ ಭಾಗವನ್ನು ಒಂದೇ ಸಂವಿಧಾನ ಮತ್ತು ಒಂದೇ ಒಕ್ಕೂಟದ ಅಧಿಕಾರ ವ್ಯಾಪ್ತಿಗೆ ತರಲಾಗಿದೆ ಎಂದು ಅವರು ಹೇಳಿದ್ದರು.
ಸಮಾರಂಭದ ನಂತರ, ರಾಷ್ಟ್ರಪತಿ ಅವರ ಮೆರವಣಿಗೆ ದೆಹಲಿಯ ಬೀದಿಗಳಲ್ಲಿ ಸಂಚರಿಸಿತು. ಜನರು ಮನೆಗಳ ಛಾವಣಿ ಮತ್ತು ಮರಗಳ ಮೇಲೆ ಹತ್ತಿ ಮೆರವಣಿಗೆಯನ್ನು ವೀಕ್ಷಿಸುತ್ತಾ, ದೇಶದ ಮೊದಲ ರಾಷ್ಟ್ರಪತಿಗೆ ಕೈಮುಗಿದು ವಂದಿಸಿದ್ದರು.
ಮೆರವಣಿಗೆ ಮಧ್ಯಾಹ್ನ 3.45ಕ್ಕೆ ಇರ್ವಿನ್ ಆಂಪಿಥಿಯೇಟರ್‌ನಲ್ಲಿ ಮುಕ್ತಾಯವಾಯಿತು. ಬಳಿಕ ಈ ಸ್ಥಳಕ್ಕೆ ನ್ಯಾಷನಲ್ ಸ್ಟೇಡಿಯಂ(ರಾಷ್ಟ್ರೀಯ ಕ್ರೀಡಾಂಗಣ) ಎಂದು ಮರುನಾಮಕರಣ ಮಾಡಲಾಯಿತು. ಮೆರವಣಿಗೆಯಲ್ಲಿ ಸಶಸ್ತ್ರ ಪಡೆಗಳು, ಪೊಲೀಸ್ ಇಲಾಖೆಯ ಸುಮಾರು 3,000 ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಸುಮಾರು 15 ಸಾವಿರ ಜನ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು.
ಯಾವುದೇ ಭದ್ರತೆ ಇಲ್ಲದೇ ಡಾ.ರಾಜೇಂದ್ರ ಪ್ರಸಾದ್ ಗ್ರೇಟ್ ಪ್ಲೇಸ್ (ಇಂದಿನ ವಿಜಯ್ ಚೌಕ್)ನಲ್ಲಿ ಮೆರವಣಿಗೆ ಮಾಡಿದ ಕ್ಷಣಗಳು ಹಾಗೂ ಸೇನಾಪಡೆಗಳು ಪರೇಡ್ ನಡೆಸಿದ ದೃಶ್ಯಗಳು ಆ ದಿನದ ಅವಿಸ್ಮರಣೀಯ ಚಿತ್ರಗಳಾಗಿ ಉಳಿದಿವೆ.
ನಂತರದ ವರ್ಷದಿಂದ ಗಣರಾಜ್ಯೋತ್ಸವ ಆಚರಣೆ ರಾಜಪಥಕ್ಕೆ (ಇಂದಿನ ಕರ್ತವ್ಯ ಪಥ) ಸ್ಥಳಾಂತರಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.