ADVERTISEMENT

National Startup Day: ಹಿರಿಯರಿಗೂ, ಅನ್ನದಾತರಿಗೂ ನೆರವಾದ ನವೋದ್ಯಮಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2026, 10:34 IST
Last Updated 16 ಜನವರಿ 2026, 10:34 IST
   

ನವೋದ್ಯಮವನ್ನು ಪ್ರೋತ್ಸಾಹಿಸಲು ಮತ್ತು ಭಾರತದ ಸ್ವಾವಲಂಬನೆಯ ಗುರಿಯನ್ನು ಸಾಧಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 16 ರಂದು ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಲಾಗುತ್ತದೆ.

ಕೃಷಿ ಕಲ್ಪ: ರೈತರ ಉತ್ಪನ್ನಗಳ, ಎಫ್‌ಪಿಒಗಳ ಬಲ

ಕೃಷಿ ದೇಶದ ಬೆನ್ನೆಲುಬಾಗಿದೆ. ಇಂದಿನ ಡಿಜಿಟಲ್‌ ಯುಗದಲ್ಲಿ ರೈತರೂ ಆಧುನಿಕತೆಗೆ ತೆರೆದುಕೊಳ್ಳುವ ಅನಿವಾರ್ಯತೆಯಿದೆ. ಹೀಗಾಗಿ ಕೃಷಿ ಪರಿಸರ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಕರ್ನಾಟಕದಲ್ಲಿ ಹುಟ್ಟಿಕೊಂಡ ಲಾಭರಹಿತ ಸಂಸ್ಥೆ ‘ಕೃಷಿ ಕಲ್ಪ’.

ತಂತ್ರಜ್ಞಾನದ ಅಳವಡಿಕೆ ಮತ್ತು ಮಾರುಕಟ್ಟೆ ಸಂಪರ್ಕಗಳ ಮೂಲಕ ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳನ್ನು (FPO) ಸಬಲೀಕರಣಗೊಳಿಸುವ ಉದ್ದೇಶದಿಂದ 2020ರಲ್ಲಿ ಆರಂಭಗೊಂಡ ಈ ನವೋದ್ಯಮ ಈಗ ಕರ್ನಾಟಕದಲ್ಲಿ ಯಶಸ್ಸುಗಳಿಸಿ ಅನೇಕ ಎಫ್‌ಪಿಒಗಳ ಸುಧಾರಣೆಗೆ ಕಾರಣವಾಗಿದೆ.

ADVERTISEMENT

ಪದ್ಮಶ್ರೀ ಪುರಸ್ಕೃತಿ ಪ್ರಶಾಂತ್‌ ಪ್ರಕಾಶ್ ಅವರು ಶ್ಯಾಮ್‌ ಶೆಟ್ಟಿ, ಅಶೋಕ್‌ ಮೇಧಾ, ಮನೋಜ್‌ ಜತೆಗೂಡಿ ಈ ‘ಕೃಷಿ ಕಲ್ಪ’ ನವೋದ್ಯಮ ಆರಂಭಿಸಿದ್ದರು.

ಸಂಸ್ಥೆಯ ಸಿಇಒ ಸಿಎಂ ಪಾಟೀಲ್‌ ಅವರು ‘ಪ್ರಜಾವಾಣಿ ಡಿಜಿಟಲ್‌’ನೊಂದಿಗೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ರಾಮನಗರದಲ್ಲಿ ಆರಂಭ: 2021ರಲ್ಲಿ ರಾಮನಗರದಲ್ಲಿ ಪ್ರಯೋಗ ಮಾಡಿದ್ದೆವು. ಸ್ಥಳೀಯ ಆಡಳಿತಗಳ ನೆರವಿನಿಂದ ಎರಡು ಎಫ್‌ಪಿಒ ಮೂಲಕ ನೇರವಾಗಿ ಖರೀದಿದಾರರಿಗೆ ಅಂದರೆ ದೇಹಾತ್‌ ಕಿಸಾನ್‌, ಬಿಗ್‌ಬಾಸ್ಕೆಟ್‌ನಂತಹ ಕಂಪನಿಗಳಿಗೆ ಸಂಪರ್ಕ ಕಲ್ಪಿಸಿದ್ದೆವು. ಇದರಿಂದ ಖರೀದಾರರು ಮತ್ತು ಎಫ್‌ಪಿಇಗಳು ನೇರವಾಗಿ ವ್ಯವಹಾರ ಮಾಡುವಂತೆ ಮಾಡಿದ್ದೆವು. ಇದರಿಂದ ನಾವು ಆಯ್ಕೆ ಮಾಡಿದ್ದ ಎಫ್‌ಪಿಒ ಉತ್ತಮ ವ್ಯವಹಾರ ಕುದುರಿಸಿತ್ತು. 

ಇದರ ಯಶಸ್ಸಿನ ಆಧಾರದ ಮೇಲೆ ರಾಜ್ಯದ ಇತರ ಜಿಲ್ಲೆಗಳಲ್ಲಿಗೆ ನಮ್ಮ ಉದ್ಯಮದ ಯೋಜನೆಯನ್ನು ವಿಸ್ತರಿಸಿದೆವು. ಪ್ರತಿ ಜಿಲ್ಲೆಯಲ್ಲಿ ಒಂದು ಅಥವಾ ಎರಡು ಎಫ್‌ಪಿಒಗಳಲ್ಲಿ ಪ್ರಾಯೋಗಿಕವಾಗಿ ನಿರ್ವಹಣೆಯನ್ನು ಮಾಡಿ ತೋರಿಸಲಾಗುತ್ತದೆ. ಜಿಲ್ಲೆಗಳಲ್ಲಿನ ಎಫ್‌ಪಿಒಗೆ ಅಗತ್ಯವಿರುವ ಉದ್ಯೋಗಿಗಳನ್ನೂ ನೇಮಕ ಮಾಡಿದ್ದೇವೆ ಎನ್ನುತ್ತಾರೆ ಸಿಎಂ ಪಾಟೀಲ್‌ ಅವರು.

ಕೃಷಿ ಕಲ್ಪ ಹೆಸರೇಕೆ?: ಕೃಷಿ ಕ್ಷೇತ್ರವನ್ನು ಸುಧಾರಿಸುವುದರ ಮೇಲೆ ಹೆಚ್ಚು ಗಮನ ಇದ್ದ ಕಾರಣ, ಉದ್ಯಮವನ್ನು ಅರಳಿಸುವ ಉದ್ದೇಶದಿಂದ ‘ಕೃಷಿ ಕಲ್ಪ’ ಎಂದು ಈ ಉದ್ಯಮಕ್ಕೆ ಹೆಸರಿಟ್ಟಿದ್ದೆವು.

ಹಿರಿಯರ ಆರೈಕೆಗಾಗಿ ಆರಂಭವಾದ ‘ಸುಕೂನ್‌ ಅನ್‌ಲಿಮಿಟೆಡ್’

ಹಲವು ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೆಣ್ಣಿಗಿದೆ. ಮನೆ, ಕುಟುಂಬ ಮಾತ್ರವಲ್ಲದೆ ಉದ್ಯಮಿಯಾಗಿ ಕೆಲಸದ ಸ್ಥಳದಲ್ಲಿ ಪ್ರೋತ್ಸಾಹಕರ ವಾತಾವರಣ ನಿರ್ಮಿಸುವುದರಿಂದ ಹಿಡಿದು ದೂರ ದೃಷ್ಟಿಕೋನದ ಯೋಜನೆಯನ್ನು ರೂಪಿಸುವ ಧೀಮಂತಿಕೆ ಮಹಿಳೆಯದ್ದು ಎನ್ನುತ್ತಾರೆ ಸುಕೂನ್‌ ಅನ್‌ಲಿಮಿಟೆಡ್‌ ಸಂಸ್ಥೆಯ ಸ್ಥಾಪಕಿ ವಿಭಾ ಸಿಂಘಾಲ್‌.

ಕೋಲ್ಕತ್ತ ಮೂಲದ ವಿಭಾ, ಎಂಬಿಎ ಪದವೀಧರೆ. ಐದಕ್ಕೂ ಹೆಚ್ಚು ಐ.ಟಿ ಕಂಪನಿಗಳಲ್ಲಿ ಕೆಲಸ ಮಾಡಿದ ಬಳಿಕ 2024ರಲ್ಲಿ ಹಿರಿಯರ ಆರೈಕೆಗಾಗಿ ಸುಕೂನ್‌ ಅನ್‌ಲಿಮಿಟೆಡ್ ಎನ್ನುವ ಸಂಸ್ಥೆ ಆರಂಭಿಸಿ ಮುನ್ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇದರ ಪ್ರಧಾನ ಕಚೇರಿಯಿದೆ.

ರೈತರಿಗಾಗಿ ಆ್ಯಪ್‌ ಅಭಿವೃದ್ಧಿ

ನಮ್ಮ ರೈತರು ಕನಿಷ್ಠ ಸೌಲಭ್ಯಗಳಲ್ಲಿಯೇ ಬದುಕುವವರು; ಕಷ್ಟಗಳ ನಡುವೆಯೇ ದುಡಿಯುವವರು. ಹೆಚ್ಚು ಕೆಲಸ, ಕಡಿಮೆ ಆದಾಯ ನಮ್ಮ ರೈತರ ಸ್ಥಿತಿ. ಇಂದಿನ ಡಿಜಿಟಲ್‌ ಯುಗದಲ್ಲೂ ಅವರು ಹಲವು ಸೌಲಭ್ಯಗಳಿಂದ ವಂಚಿತರೇ ಹೌದು. ರೈತರು ಪ್ರತಿಯೊಂದು ಸೌಲಭ್ಯಕ್ಕೂ ಅಲೆದಾಡುವ ಸ್ಥಿತಿಯಿದೆ. ಇಂಥ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ರೈತರಿಗೆ ಡಿಜಿಟಲ್‌ ಯುಗದ ಪರಿಚಯ ಮಾಡಿಸಿ ಕೆಲಸಗಳನ್ನು ಸುಲಭವಾಗಿಸುವ ನಿಟ್ಟಿನಲ್ಲಿ ‘ಕೃಷಿ ಸೆಂಟ್ರಲ್‌’ ಹೆಸರಿನ ರೈತಸ್ನೇಹಿ ಆ್ಯಪ್‌‌ವೊಂದನ್ನು ರೈತಮಿತ್ರರೊಬ್ಬರು ಅಭಿವೃದ್ಧಿಪಡಿಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ವಿನಯ್‌ ಶಿವಪ್ಪ ಎನ್ನುವವರು ಈ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ. ಐಟಿ ಉದ್ಯೋಗದಲ್ಲಿರುವ ವಿನಯ್‌ ಶಿವಪ್ಪ, ತಮ್ಮ ಭಾಗದ ರೈತರ ಬವಣೆಯನ್ನು ನೀಗಬೇಕೆಂದು ಕೃಷಿ ಆಧಾರಿತ ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ತಮ್ಮ ಉತ್ಪನ್ನಗಳನ್ನು ಈ ಆ್ಯಪ್‌ ಮೂಲಕ ಮಾರಾಟ ಮಾಡಬಹುದು. ಅದೇ ರೀತಿ ರೈತರಿಗೆ ಅಗತ್ಯವಿರುವ ಉತ್ಪನ್ನಗಳನ್ನು ಈ ಆ್ಯಪ್‌ ಮೂಲಕವೇ ಖರೀದಿಸುವ ಸೌಲಭ್ಯ ಈ ಆ್ಯಪ್‌ನಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.