ವಿವಿಧ ಕ್ಷೇತ್ರಗಳ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ 2025ನ್ನು ನಾರ್ವೆ ನೋಬೆಲ್ ಸಮಿತಿ ಘೋಷಣೆ ಮಾಡಿದೆ. ಇದರಲ್ಲಿ, ಶಾಂತಿ ಸ್ಥಾಪನೆ, ಸಾಹಿತ್ಯ, ಭೌತ ವಿಜ್ಞಾನ, ರಸಾಯನ ವಿಜ್ಞಾನ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಜಗತ್ತಿನ ಹಲವು ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಹಾಗಿದ್ರೆ, ಯಾವ ಕ್ಷೇತ್ರದಲ್ಲಿ ಯಾರಿಗೆ ಪ್ರಶಸ್ತಿ ಲಭಿಸಿದೆ ಎಂಬುದನ್ನು ನೋಡೋಣ.
ಮಾರಿಯಾ ಕೊರಿನಾ ಮಚಾದೊ:
ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸಲು ಹೋರಾಟ ನಡೆಸಿದ್ದಕ್ಕಾಗಿ ಇವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.
ಲಾಸ್‌ಲೋ ಕ್ರಾಸ್‌ನಹೊರಕೈ (László Krasznahorkai)
ಸಾಹಿತ್ಯಕ್ಕಾಗಿ ನೀಡಲಾಗುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಹಂಗೇರಿಯ ಲೇಖಕ ಲಾಸ್‌ಲೋ ಕ್ರಾಸ್‌ನಹೊರಕೈ ಅವರಿಗೆ ನೀಡಲಾಗಿದೆ. ಅಪೋಕ್ಯಾಲಿಪ್ಸ್ ಭಯೋತ್ಪಾದನೆಯ ಮಧ್ಯೆ, ಕಲೆಯ ಶಕ್ತಿಯನ್ನು ಪುನರುಚ್ಚರಿಸುವ ಅವರ ಪ್ರಭಾವಶಾಲಿ ಮತ್ತು ದಾರ್ಶನಿಕ ಕೃತಿಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಶರೀರ ವಿಜ್ಞಾನ ಅಥವಾ ವೈದ್ಯಕೀಯ ಕ್ಷೇತ್ರ
ವೈದ್ಯಕೀಯ ಕ್ಷೇತ್ರದಲ್ಲಿ ಬಾಹ್ಯ ರೋಗನಿರೋಧಕ ಸಹಿಷ್ಣುತೆ ಕುರಿತಾದ ಸಂಶೋಧನೆಗಾಗಿ ಮೂವರಿಗೆ 2025ರ ನೋಬೆಲ್ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಅಮೆರಿಕ ದೇಶದ ಮೇರಿ ಇ. ಬ್ರಂಕೋವ್ ಹಾಗೂ ಫ್ರೆಡ್ ರಾಮ್ಸ್‌ಡೆಲ್ ಮತ್ತು ಜಪಾನ್ ದೇಶದ ಶಿಮೊನ್ ಸಕಾಗುಚಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಸಾಯನ ವಿಜ್ಞಾನ:
ರಸಾಯನ ವಿಜ್ಞಾನ ವಿಭಾಗದಲ್ಲಿ ಲೋಹ-ಸಾವಯವ ಚೌಕಟ್ಟುಗಳ ಅಭಿವೃದ್ಧಿಪಡಿಸಿದ್ದಕ್ಕಾಗಿ 2025ರ ನೊಬೆಲ್ ಪ್ರಶಸ್ತಿ ಲಭಿಸಿದೆ. ಜಪಾನ್ ದೇಶದ ಸುಸುಮು ಕಿಟಗಾವಾ, ಆಸ್ಟ್ರೇಲಿಯಾದ ರಿಚರ್ಡ್ ರಾಬ್ಸನ್ ಹಾಗೂ ಜೋರ್ಡಾನ್‌ನ ಒಮರ್ ಎಂ. ಯಾಘಿ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಭೌತ ವಿಜ್ಞಾನ:
ಭೌತ ವಿಜ್ಞಾನ ವಿಭಾಗದಲ್ಲಿ ವಿದ್ಯುತ್ ಸರ್ಕ್ಯೂಟ್‌ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನಲಿಂಗ್ ಮತ್ತು ಶಕ್ತಿ ಕ್ವಾಂಟೀಕರಣದ ಆವಿಷ್ಕಾರಕ್ಕಾಗಿ ಇಂಗ್ಲೆಂಡ್ ದೇಶದ ಜಾನ್ ಕ್ಲಾರ್ಕ್, ಫ್ರೆಂಚ್‌ನ ಮೈಕೆಲ್ ಎಚ್. ಡೆವೊರೆಟ್, ಅಮೇರಿಕಾದ ಜಾನ್ ಎಂ. ಮಾರ್ಟಿನಿಸ್ ಅವರಿಗೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.