ADVERTISEMENT

13 ವರ್ಷಕ್ಕೆ ವಿಮಾನ ನಿರ್ಮಿಸಿದ ಭವಿಷ್ಯದ ಐನ್‌ಸ್ಟಿನ್‌ ಈ ‘ಫಿಸಿಕ್ಸ್‌ ಗರ್ಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2026, 11:07 IST
Last Updated 14 ಜನವರಿ 2026, 11:07 IST
   

ಆಕೆಯ ಹೆಸರು ಸಬ್ರಿನಾ ಪಾಸ್ಟರ್ಸ್ಕಿ. ಅಮೆರಿಕ ಮೂಲದ ಈಕೆ ಕೇವಲ 13 ವರ್ಷಕ್ಕೆ ತನ್ನದೇ ವಿಮಾನವೊಂದನ್ನು ನಿರ್ಮಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಇವಳು, ಕಳೆದ ಒಂದು ದಶಕದಿಂದ ವಿಜ್ಞಾನ ಲೋಕದಲ್ಲಿ ಹಲವು ಅಚ್ಚರಿಯ ಸಾಧನೆಗಳಿಗೆ ಕಾರಣಳಾಗಿದ್ದಾಳೆ. ವಿಜ್ಞಾನ ಲೋಕದಲ್ಲಿ ‘ಫಿಸಿಕ್ಸ್‌ ಗರ್ಲ್‌’ ಎಂದೇ ಪ್ರಖ್ಯಾತಿ ಪಡೆದಿದ್ದಾಳೆ.

1993ರ ಜೂನ್‌ 3ರಂದು ಅಮೆರಿಕದ ಷಿಕಾಗೋದಲ್ಲಿ ಜನಿಸಿದ ಸಬ್ರಿನಾ ಪಾಸ್ಟರ್ಸ್ಕಿ, ತನ್ನ ವಯಸ್ಸಿನವರು ಶಾಲೆಯ ಮೆಟ್ಟಿಲೇರುವ ಸಮಯದಲ್ಲೇ ಭೌತವಿಜ್ಞಾನದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದಳು.

ಎಡಿಸನ್ ಪ್ರಾದೇಶಿಕ ಕೇಂದ್ರದಲ್ಲಿ ಕಲಿಕೆ ಆರಂಭಿಸಿದ ಸಬ್ರಿನಾ ಪಾಸ್ಟರ್ಸ್ಕಿ, ಆಗಲೇ ವಿಜ್ಞಾನದ ಕಡೆಗೆ ಕುತೂಹಲ ಹೊಂದಿದ್ದಳು. ಎಲ್ಲರೂ ಗೊಂಬೆಯೊಂದಿಗೆ ಆಟವಾಡುವ ವಯಸ್ಸಿನಲ್ಲಿ, ತನ್ನ ತಂದೆಯ ಗ್ಯಾರೇಜ್‌ನಲ್ಲಿ ಎನ್‌5886ಕ್ಯೂ ಹೆಸರಿನ ಸ್ಥಿರ-ರೆಕ್ಕೆಯ ಏಕ ಎಂಜಿನ್ ವಿಮಾನವನ್ನು ನಿರ್ಮಿಸುವ ಮೂಲಕ ವಿಜ್ಞಾನ ಲೋಕದ ಗಮನ ಸೆಳೆದಿದ್ದಳು.

ADVERTISEMENT

ತನ್ನ 10ನೇ ವಯಸಿನಲ್ಲೇ ವಿಮಾನದ ಬಿಡಿ ಭಾಗಗಳನ್ನು ಸಂಗ್ರಹಿಸಿ, ವಿಮಾನ ನಿರ್ಮಿಸುವ ಕೆಲಸವನ್ನು ಆರಂಭಿಸಿದ್ದಾಗಿ ಆಕೆಯೇ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದಾಳೆ. 23ನೇ ವಯಸಿನಲ್ಲೇ ವಿಮಾನ ಚಾಲನೆಯ ಪರವಾನಗಿ ಪಡೆದ ಸಬ್ರಿನಾ ಪಾಸ್ಟರ್ಸ್ಕಿ, ತಾನೇ ನಿರ್ಮಿಸಿದ ವಿಮಾನವನ್ನು ಆಗಸದಲ್ಲಿ ಹಾರಿಸಿದ್ದರು.

2010ರಲ್ಲಿ ಮೆಸಾಚ್ಯುಸಾಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಅಲ್ಲಿ 5.0 ಜಿಪಿಎ ಅಂಕ ಪಡೆಯುವ ಮೂಲಕ, ಅದುವರೆಗೂ ಯಾರೂ ಮಾಡಿರದ ಸಾಧನೆ ಮಾಡಿದ್ದಳು. ನಂತರ ಹಾರ್ವಡ್‌ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪದವಿ ಕೂಡ ಪಡೆದಿದ್ದಾಳೆ.

ಸಬ್ರಿನಾ ಪಾಸ್ಟರ್ಸ್ಕಿ ತನ್ನ ಶಿಕ್ಷಣವನ್ನು ಪೂರ್ತಿಗೊಳಿಸುವ ಮುನ್ನವೇ, ಅಮೆಜಾನ್‌ನ ಜೆಫ್‌ ಬೆಜೋಸ್‌ ತನ್ನ ಏರೋಸ್ಪೇಸ್ ಕಂಪನಿ ಬ್ಲೂ ಒರಿಜಿನ್ ಅಲ್ಲಿ ಅವಳಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ತನ್ನಲ್ಲಿ ಕೆಲಸಕ್ಕೆ ಆಹ್ವಾನ ನೀಡಿತ್ತು.

ಭೌತಶಾಸ್ತ್ರಜ್ಞೆಯಾಗಿರುವ 32 ವರ್ಷದ ಸಬ್ರಿನಾ ಪಾಸ್ಟರ್ಸ್ಕಿ, ಬಾಹ್ಯಾಕಾಶ ವಿಜ್ಞಾನ ಹಾಗೂ ಸೆಲೆಸ್ಟ್ರಿಯಲ್‌ ಹೊಲೋಗ್ರಾಫಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಬ್ಲಾಕ್‌ ಹೋಲ್, ಸ್ಪೇಸ್‌ ಟೈಮ್‌ ಹಾಗೂ ಗುರುತ್ವಾಕರ್ಷಣ ಶಕ್ತಿಯ ಕುರಿತು ಹೆಚ್ಚಿನ ಅಧ್ಯಯನ ಮಾಡಿದ್ದಾರೆ.‘ಫಿಸಿಕ್ಸ್‌ ಗರ್ಲ್‌’ ಯೂಟ್ಯೂಬ್‌ ಚಾನೆಲ್‌ ಮೂಲಕ, ಜಗತ್ತಿನಾದ್ಯಂತ ಇರುವ ಆಸಕ್ತರಿಗೆ ಭೌತವಿಜ್ಞಾನದ ಕುತೂಹಲ ಸಂಗತಿಗಳನ್ನು ತಿಳಿಸುತ್ತಿದ್ದಾಳೆ.

‘ಫಿಸಿಕ್ಸ್‌ ಗರ್ಲ್‌’ಎಂದೇ ಕರೆಯಲ್ಪಡುವ ಇವಳನ್ನು, ಭವಿಷ್ಯದ ಐನ್‌ಸ್ಟಿನ್‌ ಅಥವಾ ಸ್ಟೀಪನ್‌ ಹಾಕಿಂಗ್ಸ್‌ ಎಂದೇ ವಿಜ್ಞಾನ ಲೋಕ ಗುರುತಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.