
ಸೋಮನಾಥ ದೇಗುಲ
ಚಿತ್ರ: ಗುಜರಾತ್ ಪ್ರವಾಸೋದ್ಯಮ ಇಲಾಖೆ
ನಿರಂತರ ದಾಳಿಗೆ ಒಳಗಾಗಿ ಇಂದಿಗೂ ಹಿಂದೂಗಳ ಪವಿತ್ರ ಕ್ಷೇತ್ರವಾಗಿ ನಿಂತಿರುವ ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ಪ್ರಭಾಸ್ ಪಠಾಣ್‌ನ ನಗರದಲ್ಲಿರುವ ಸೋಮನಾಥ ದೇಗುಲದ ಮೇಲೆ ಮೊದಲ ಬಾರಿ ದಾಳಿ ನಡೆದು ಸಾವಿರ ವರ್ಷಗಳು ಸಂದಿವೆ.
ಶಿವನ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಮೊದಲು ನಿರ್ಮಾಣವಾಗಿದ್ದೇ ಸೋಮನಾಥ ದೇವಾಲಯ. ಶಿವನು ಮೊದಲು ಲಿಂಗದ ರೂಪದಲ್ಲಿ ಕಾಣಿಸಿಕೊಂಡ ಸ್ಥಳ ಎಂದೂ ನಂಬಲಾಗಿದೆ.
ಈ ಸ್ಥಳ ತ್ರಿವೇಣಿ ಸಂಗಮವೂ ಆಗಿದ್ದು, ಕಪಿಲ, ಹಿರಣ ಮತ್ತು ಸರಸ್ವತಿ ನದಿಗಳು ಸಂದಿಸುತ್ತವೆ.
ಸೋಮನಾಥ ದೇಗುಲ ಮುಂಭಾಗ
ಸೋಮನಾಥ ದೇಗುಲ ಧ್ವಜಸ್ತಂಬ
ಸೋಮನಾಥ ದೇಗುಲದ ಕೆತ್ತನೆ
ಸೋಮನಾಥ ದೇಗುಲ
ಸೋಮನಾಥ ದೇಗುಲ
ಸೋಮನಾಥ ದೇಗುಲದ ಶಿವಲಿಂಗ
ಗುಜರಾತ್ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ, 1025–1026ರ ಸಂದರ್ಭದಲ್ಲಿ ಅಫ್ಗಾನಿಸ್ತಾನದ ಘಜನಿ ಮೊಹಮದ್ ಆಕ್ರಮಣ ನಡೆಸಿದ್ದ. ಆ ವೇಳೆ ನಗರದಲ್ಲಿ ಸುಮಾರು 70 ಸಾವಿರ ಸೈನಿಕರು ಮೃತಪಟ್ಟಿದ್ದರು. ಎರಡು ದಿನಗಳ ಕಾಲ ನಡೆದ ಯುದ್ಧದ ನಂತರ ದೇಗುಲ ಸೇರಿ ನಗರವನ್ನೂ ವಶಪಡಿಸಿಕೊಂಡು, ಅಪಾರ ಸಂಪತ್ತನ್ನು ಲೂಟಿ ಮಾಡಿದ್ದನು. ಜತೆಗೆ ದೇಗುಲದ ರಚನೆಯನ್ನೂ ನಾಶಪಡಿಸಿದ್ದನು. ಶತಮಾನಗಳವರೆಗೆ ದಾಳಿ ಮುಂದುವರಿದಿತ್ತು. 1706ರಲ್ಲಿ ಕೊನೆಯದಾಗಿ ಮೊಘಲ್ ದೊರೆ ಔರಂಗಜೇಬ್ ನೇತೃತ್ವದಲ್ಲಿ ದೇಗುಲದ ಮೇಲೆ ಮತ್ತೆ ದಾಳಿಯಾಗಿತ್ತು. ದಾಳಿಗಳ ಹೊಡೆತಕ್ಕೆ ಸಿಲುಕಿ ದೇಗುಲ ಅಸ್ತಿತ್ವವನ್ನೇ ಕಳೆದುಕೊಂಡಿತ್ತು.
ಭಾರತದ ಸ್ವಾತಂತ್ರ್ಯದ ನಂತರ, 1950 ರಲ್ಲಿ ಅದೇ ಸ್ಥಳದಲ್ಲಿ ಆಧುನಿಕ ದೇವಾಲಯವನ್ನು ಪುನರ್ನಿರ್ಮಿಸಲಾಯಿತು. ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1947 ನವೆಂಬರ್ 12 ರಂದು ರಾಷ್ಟ್ರೀಯ ಪುನರುಜ್ಜೀವನ ಮತ್ತು ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿ ಅಡಿಪಾಯ ಹಾಕುವ ಮೂಲಕ ಸೋಮನಾಥ ದೇಗುಲದ ಪುನರ್ನಿರ್ಮಾಣವನ್ನು ಪ್ರಾರಂಭಿಸಿದ್ದರು. 1951ರಲ್ಲಿ ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಗುಜರಾತ್‌ನ ನಾಗರ ದೇವಾಲಯ ಶೈಲಿಯ ಒಂದು ರೂಪವಾದ ಮರು-ಗುರ್ಜರ ವಾಸ್ತುಶಿಲ್ಪ ಎಂದೂ ಕರೆಯಲ್ಪಡುವ ಚಾಲುಕ್ಯ ಶೈಲಿಯಲ್ಲಿ ಈ ದೇಗುಲವನ್ನು ನಿರ್ಮಿಸಲಾಗಿದೆ. ಸ್ಥಳೀಯವಾಗಿ ಸಿಗುವ ಹಳದಿ ಮರಳುಗಲ್ಲಿನಲ್ಲಿ ದೇಗುಲ ನಿರ್ಮಾಣವಾಗಿದೆ. ಗುಜರಾತ್‌ನ ಸಾಂಪ್ರದಾಯಿಕ ಕಲ್ಲುಕುಟಿಗರ ಚಾಕಚಕ್ಯತೆಯಲ್ಲಿ ಮೂಡಿಬಂದಿರುವ ನೃತ್ಯ ಮಂಟಪ, ಸಭಾಂಗಣ, ಗರ್ಭಗುಡಿ, ಬಾಣದ ಕಂಬಗಳನ್ನು ದೇಗುಲದಲ್ಲಿ ಕಾಣಬಹುದು.
ದಾಳಿಗಳ ಹೊರತಾಗಿಯೂ ಸಾವಿರ ವರ್ಷಗಳಿಂದ ಪವಿತ್ರ ಕ್ಷೇತ್ರವಾಗಿ ಉಳಿದಿರುವ ಸೋಮನಾಥ ದೇಗುಲದ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಗುಜರಾತ್‌ನ ಸೋಮನಾಥ ದೇವಾಲಯವು ಭಾರತೀಯ ನಾಗರಿಕತೆಯ ಚೇತರಿಕೆ ಮತ್ತು ನಿರಂತರತೆಯ ಪ್ರಬಲ ಸಂಕೇತವಾಗಿದೆ, ಪದೇ ಪದೇ ನಡೆದ ದಾಳಿಗಳ ಹೊರತಾಗಿಯೂ ಅದರ ಅಸ್ತಿತ್ವವು ರಾಷ್ಟ್ರದ ಅದಮ್ಯ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.