ಡೊನಾಲ್ಡ್ ಟ್ರಂಪ್
ರಾಯಿಟರ್ಸ್ ಚಿತ್ರ
Trump Tariff Update: ಚೀನಾ ಹೊರತುಪಡಿಸಿ ಉಳಿದ ರಾಷ್ಟ್ರಗಳಿಗೆ 90 ದಿನಗಳ ವಿರಾಮವೇಕೆ? ಭಾರತದ ಮೇಲಿನ ಪರಿಣಾಮವೇನು?
ವಾಷಿಂಗ್ಟನ್: ಅಮೆರಿಕ ಪ್ರವೇಶಿಸುವ ವಿವಿಧ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಪ್ರತೀಕಾರ ಸುಂಕ ವಿಧಿಸುವ ನಿರ್ಧಾರಕ್ಕೆ 90 ದಿನಗಳ ಮಟ್ಟಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಡೆ ನೀಡಿದ್ದಾರೆ. ಆದರೆ ಈ ನಿರ್ಧಾರ ಚೀನಾ ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರಗಳಿಗೂ ಅನ್ವಯವಾಗಲಿದೆ.
ಟ್ರಂಪ್ ಪ್ರತಿಸುಂಕದಿಂದ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ವ್ಯಾಪಾರ ವಹಿವಾಟು ಏರುಪೇರಾಗಿತ್ತು. ಷೇರುಪೇಟೆಯಲ್ಲಿ ರಕ್ತಪಾತವೇ ನಡೆದಿತ್ತು. ಹೂಡಿಕೆದಾರರು ನಷ್ಟ ಅನುಭವಿಸಿದ್ದರು. ಸುಂಕದ ಬರೆ ಹಾಕಿಸಿಕೊಂಡಿದ್ದ 75 ರಾಷ್ಟ್ರಗಳು ಪ್ರತೀಕಾರದ ಬದಲಾಗಿ, ಮಾತುಕತೆಗೆ ಮುಂದಾದವು. ಇದರ ಪರಿಣಾಮದಿಂದಾಗಿ ಸುಂಕ ಹೇರಿಕೆಗೆ ಟ್ರಂಪ್ ತಡೆ ನೀಡಿದ್ದಾರೆ ಎಂದೆನ್ನಲಾಗಿದೆ.
‘ಆದರೆ ಚೀನಾಗೆ ಈ ಮೊದಲು ವಿಧಿಸಿದ್ದ ಶೇ 104ರಷ್ಟು ಸುಂಕದ ಮೇಲೆ ಶೇ 125ರಷ್ಟು ಪ್ರತಿಸುಂಕವನ್ನು ಟ್ರಂಪ್ ಸರ್ಕಾರ ಹೆಚ್ಚಿಸಿದೆ. ಅಮೆರಿಕ ಹಾಗೂ ಇತರ ಯಾವುದೇ ರಾಷ್ಟ್ರದೊಂದಿಗೆ ಸಂಬಂಧ ಕಡಿದುಕೊಳ್ಳುವುದು ಸುಸ್ಥಿರವೂ ಅಲ್ಲ ಅಥವಾ ಒಪ್ಪಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಟ್ರೂಥ್ ಸೋಷಿಯಲ್‌ನಲ್ಲಿ ಟ್ರಂಪ್ ಬರೆದುಕೊಂಡಿದ್ದಾರೆ.
‘ಚೀನಾ ಒಪ್ಪಂದವನ್ನು ಬಯಸುತ್ತದೆ. ಆದರೆ ಅದನ್ನು ಸಾಧಿಸುವುದು ಹೇಗೆ ಎಂಬುದು ಅವರಿಗೆ ತಿಳಿದಿಲ್ಲ. ಷಿ ಜಿಂಗ್‌ಪಿಂಗ್ ಅವರು ಒಬ್ಬ ಉತ್ತಮ ವ್ಯಕ್ತಿ. ಆದರೆ, ಇತರ ರಾಷ್ಟ್ರಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಹೇಗೆ ಎಂಬುದು ಅವರಿಗೆ ತಿಳಿದಿಲ್ಲ’ ಎಂದಿದ್ದಾರೆ.
ಪ್ರತೀಕಾರ ಸುಂಕ ಹೇರಿದ ದಿನದಿಂದ ಅದನ್ನು ತಕ್ಷಣ ನಿಲ್ಲಿಸುವಂತೆ ತಮ್ಮದೇ ರಿಪಬ್ಲಿಕನ್ ಪಕ್ಷದ ಸದಸ್ಯರಿಂದ ಮತ್ತು ವ್ಯಾಪಾರ ವಲಯದಿಂದ ಒತ್ತಡಗಳು ಬರುತ್ತಲೇ ಇದ್ದವು. ಇದರಿಂದ ಜಾಗತಿಕ ಮಟ್ಟದಲ್ಲಿ ದರ ಸಮರ ಉಂಟಾಗಲಿದೆ ಎಂದೂ ಅಂದಾಜಿಸಿದ್ದರು. ಜಾಗತಿಕ ಆರ್ಥಿಕ ಹಿನ್ನಡೆಯಿಂದ ಪಾರಾಗುವ ಉದ್ದೇಶದಿಂದ ತಡೆ ಹೇರಿದ್ದಾರೆ ಎಂದೆನ್ನಲಾಗಿದೆ.
ಆದರೆ, ‘ನನ್ನ ನೀತಿಗಳು ಎಂದಿಗೂ ಬದಲಾಗದು’ ಎಂದಿರುವ ಟ್ರಂಪ್ ಅವರ ಮಾತು ಆತಂಕವನ್ನೇನೂ ದೂರ ಮಾಡಿಲ್ಲ.
ಬಾಂಡ್ ಮಾರುಕಟ್ಟೆಯಲ್ಲಿ ಕೆಲ ಬೆಳವಣಿಗೆಗಳ ಕುರಿತು ಖಜಾನೆ ಇಲಾಖೆಯ ಕೆಲ ಆತಂಕಗಳಿಂದಾಗಿ ಟ್ರಂಪ್ ಅವರು ತಮ್ಮ ನಿರ್ಧಾರದಿಂದ ಕೆಲ ದಿನಗಳ ಮಟ್ಟಿಗೆ ಹಿಂದೆ ಸರಿದಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ. ವರದಿಗಳ ಪ್ರಕಾರ, ಖಜಾನೆಯ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಅವರು ಪ್ರತೀಕಾರದ ಸುಂಕದ ಪರಿಣಾಮಗಳ ಕುರಿತು ಅಧ್ಯಕ್ಷ ಟ್ರಂಪ್ ಅವರಿಗೆ ವಿವರಿಸಿದ್ದರು. ಜತೆಗೆ ಶ್ವೇತಭವನದ ಆರ್ಥಿಕ ಇಲಾಖೆ ಅಧಿಕಾರಿಗಳೂ ಈ ಕುರಿತು ಮಾಹಿತಿ ನೀಡಿದ್ದರು.
‘ಬಾಂಡ್ ಮಾರುಕಟ್ಟೆಯನ್ನು ನೋಡುತ್ತಿದ್ದೇನೆ. ಇದನ್ನು ಅರ್ಥಮಾಡಿಕೊಳ್ಳುವುದು ಬಹಳಾ ಕಷ್ಟಕರ. ಸದ್ಯಕ್ಕೆ ಬಾಂಡ್ ಮಾರುಕಟ್ಟೆಯು ಉತ್ತಮವಾಗಿದೆ. ಆದರೆ ಕಳೆದ ರಾತ್ರಿ ಹೂಡಿಕೆದಾರರು ಸ್ವಲ್ಪ ಗಲಿಬಿಲಿಗೊಂಡಿದ್ದರು. ಜನರು ಸ್ವಲ್ಪ ದಾರಿ ಬಿಟ್ಟು ಅತ್ತಕಡೆ ಜಿಗಿದಿದ್ದರು. ಹೀಗಾಗಿ ಗಲಿಬಿಲಿಗೆ ಕಾರಣವಾಗಿತ್ತು. ಆದರೆ ಎಲ್ಲಾ ಪರಿಸ್ಥಿತಿಗೂ ಹೊಂದಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು‘ ಎಂದು ಟ್ರಂಪ್ ಸಲಹೆ ನೀಡಿದ್ದಾರೆ.
ಪ್ರತೀಕಾರ ಸುಂಕಕ್ಕೆ ಟ್ರಂಪ್ ತಡೆ ನೀಡಿದ ನಂತರ ವಾಲ್ ಸ್ಟ್ರೀಟ್ ಸ್ಟಾಕ್‌ಗಳು ಬುಧವಾರ ಉತ್ತಮ ಏರಿಕೆ ಕಂಡಿವೆ. ಸತತ ಕುಸಿತದಿಂದ ಅಮೆರಿಕದಲ್ಲಿ ಆರ್ಥಿಕ ಹಿಂಜರಿಕೆಯ ಅಪಾಯ ಎದುರಾಗಿತ್ತು. ಆದರೆ ಮಾರುಕಟ್ಟೆ ಏರಿಕೆ ಕಂಡಿದೆ. ಸುಂಕ ಹೇರಿಕೆಗೆ ತಡೆ ನೀಡಿದ ಕೆಲವೇ ಕ್ಷಣಗಳಲ್ಲಿ ಡೋ ಸೂಚ್ಯಂಕವು 2,500 ಅಂಶಗಳಿಗೆ ಏರಿಕೆ ಕಂಡಿತು. ಇದು ಶೇ 8ರಷ್ಟು ಏರಿಕೆಯಾಗಿದೆ. ನ್ಯಾಸ್‌ಡ್ಯಾಕ್ ಶೇ 12.2ರಷ್ಟು ಏರಿಕೆ ಕಂಡಿದೆ. ಇದು ಕಳೆದ 24 ವರ್ಷಗಳಲ್ಲೇ ಅತ್ಯುತ್ತಮ ಎಂದೆನ್ನಲಾಗಿದೆ.
ತೈಲ ಬೆಲೆ ಶೇ 4ರಷ್ಟು ಹೆಚ್ಚಾಗಿದೆ. ಜತೆಗೆ ಡಾಲರ್ ಮೌಲ್ಯವೂ ಹೆಚ್ಚಳವಾಗಿದೆ.
ಭಾರತದಿಂದ ಆಮದಾಗುವ ವಸ್ತುಗಳಿಗೆ ಶೇ 27ರಷ್ಟು ಪ್ರತೀಕಾರ ಸುಂಕ ಹೇರಿದ್ದರಿಂದ ಭಾರತೀಯ ಮಾರುಕಟ್ಟೆಯೂ ಗಣನೀಯ ಕುಸಿತಕ್ಕೆ ಸಾಕ್ಷಿಯಾಗಿತ್ತು. ಆದರೆ 90 ದಿನಗಳ ತಡೆ ನೀಡಿದ್ದರಿಂದ, ಹಲವು ಸ್ಟಾಕ್‌ಗಳು ಈಗ ಸ್ವಲ್ಪ ಉಸಿರಾಡುವಂತಾಗಿವೆ. ಕೇಂದ್ರ ಸರ್ಕಾರವು ಅಮೆರಿಕದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸುಂಕ ಹಿಂಪಡೆಯುವ ಪ್ರಯತ್ನ ನಡೆಸಿದೆ.
ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾಹಿತಿ ನೀಡಿ, ‘ಭಾರತ ಮತ್ತು ಅಮೆರಿಕ ವ್ಯಾಪಾರದಲ್ಲಿ ಪ್ರತೀಕಾರ ಸುಂಕ ಕುರಿತು ಮಾತುಕತೆಗಳು ನಡೆದಿವೆ. ಎರಡೂ ದೇಶಗಳ ಹಿತ ಕಾಯುವ ನಿಟ್ಟಿನಲ್ಲಿ ಹಲವು ಹಂತಗಳ ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತಿದೆ ಎಂದಿದ್ದರು.
‘ವ್ಯಾಪಾರ ಸಂಬಂಧ, ಆರ್ಥಿಕ, ಹೂಡಿಕೆ, ವಾಣಿಜ್ಯ ಸಂಬಂಧದಲ್ಲಿ ಭಾರತ ಮತ್ತು ಅಮೆರಿಕ ಉತ್ತಮ ಬಾಂದವ್ಯವನ್ನು ಹೊಂದಿವೆ. ಇದು ಭವಿಷ್ಯದಲ್ಲೂ ಮುಂದುವರಿಯಲಿದೆ. ಸದ್ಯ ಎದುರಾಗಿರುವ ಸಮಸ್ಯೆಯನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಲಾಗುವುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.