ADVERTISEMENT

ವಿಶ್ವ ದಾಸೋಹ ದಿನ: ಸಿದ್ಧಗಂಗಾದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:29 IST
Last Updated 21 ಜನವರಿ 2026, 4:29 IST
<div class="paragraphs"><p>ಡಾ.ಶಿವಕುಮಾರ ಸ್ವಾಮೀಜಿ</p></div>

ಡಾ.ಶಿವಕುಮಾರ ಸ್ವಾಮೀಜಿ

   

ಜಗತ್ತು ಕಂಡ ಒಂದು ಅಚ್ಚರಿ. ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಶ್ರೀಗಳು ತಾರುಣ್ಯದಲ್ಲಿಯೇ ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ಧಪುರುಷರು ಸಿದ್ಧಗಂಗೆಯ  ಪೂಜ್ಯ ಸ್ವಾಮೀಜಿಯವರು. 

ಬಾಲ್ಯ-ವೈರಾಗ್ಯ-ವಿರಕ್ತಾಶ್ರಮ ಡಾ.ಶಿವಕುಮಾರ ಸ್ವಾಮೀಜಿ 1907ರ ಜನವರಿ 04ರಲ್ಲಿ ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ  ಹೊನ್ನಪ್ಪ ಪಟೇಲ್ ಮತ್ತು ಗಂಗಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ವೀರಾಪುರ ಮತ್ತು ನಾಗವಲ್ಲಿಯಲ್ಲಿ ಮುಗಿಸಿದ ಶ್ರೀಗಳು ತುಮಕೂರಿನ ಸರಕಾರಿ ಶಾಲೆಯಲ್ಲಿ  ಫ್ರೌಡ ಶಿಕ್ಷಣವನ್ನು ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದ ಶ್ರೀಗಳು ಆಂಗ್ಲಭಾಷೆ ಮತ್ತು ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.

ADVERTISEMENT

ಅನಿರೀಕ್ಷಿತ ಮಠಾಧಿಪತಿ

ಬೆಂಗಳೂರಿನ ಗುಬ್ಬಿ ತೋಟದಪ್ಪ ಛತ್ರದಲ್ಲಿದ್ದುಕೊಂಡು, ಪದವಿ ವಿಧ್ಯಾಭ್ಯಾಸ ಮಾಡುತ್ತಿದ್ದರು. 1930 ರಲ್ಲಿ ಉದ್ಧಾನ ಶಿವಯೋಗಿಗಳ ನಂತರದ ಉತ್ತರಾಧಿಕಾರಿ ಸ್ವಾಮಿಗಳಾದ ಶ್ರಿ ಮರುಳಾರಾಧ್ಯರ ನಿಧನವಾಗುತ್ತದೆ. ಅವರ ಸಮಾಧಿ ಕಾರ್ಯಕ್ರಮಗಳಿಗೆ ಬಂದಿದ್ದ, ಮೊದಲೇ ಪರಿಚಯವಿದ್ದ ಶಿವಕುಮಾರ ಸ್ವಾಮಿಗಳ ಕಡೆಗೆ ಉದ್ಧಾನ ಶಿವಯೋಗಿಗಳ ನೋಟ ಹರಿಯುತ್ತದೆ. ತಕ್ಷಣವೇ ಉದ್ಧಾನ ಶಿವಯೋಗಿಗಳು ಶಿವಣ್ಣನೇ ತಮ್ಮ ಮುಂದಿನ ಉತ್ತರಾಧಿಕಾರಿ ಎಂದು ಘೋಷಿಸುತ್ತಾರೆ. ಹೀಗೆ ಸನ್ಯಾಸಿಯಾದ ಶಿವಕುಮಾರ ಸ್ವಾಮಿಗಳು ತಮ್ಮ ಸನ್ಯಾಸ ಧರ್ಮಗಳನ್ನು ಪಾಲಿಸುತ್ತಲೇ ಪದವಿ ಮುಗಿಸಿ, ನಂತರ 1930ರಲ್ಲಿ ತಮ್ಮ ಯೌವ್ವನಾವಸ್ಥೆಯಲ್ಲಿಯೇ ವಿರಕ್ತಾಶ್ರಮ ದೀಕ್ಷೆ ಪಡೆದು ಸಿದ್ಧಗಂಗಾ ಕ್ಷೇತ್ರ ಪ್ರವೇಶಿಸಿದರು. ಅಂದಿನಿಂದ ಸಿದ್ಧಗಂಗಾ ಮಠದಲ್ಲಿ ಹೊಸ ಬೆಳಕು ಮೂಡಿತು.

ಜಂಗಮ ಮೂರ್ತಿಗಳಾದ ಶಿವಕುಮಾರ ಮಹಾಸ್ವಾಮಿಗಳು ಉದ್ಧಾನ ಶಿವಯೋಗಿಗಳ ಅಣತಿಯಂತೆ 1941ರಲ್ಲಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ನಂತರ ಸಿದ್ಧಗಂಗಾ ಕ್ಷೇತ್ರದ ಸ್ವರೂಪದಲ್ಲಿ ಆಮೂಲಾಗ್ರವಾಗಿ ಬದಲಾವಣೆಯಾಯಿತು. ತ್ರಿವಿಧ ದಾಸೋಹಿ  ಈ ಶತಮಾನ ಕಂಡ ಅಪರೂಪದ ಶರಣರಾಗಿರುವ ಶ್ರೀಗಳು ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹಗಳ ಮೂಲಕ ತ್ರಿವಿಧ ದಾಸೋಹದಲ್ಲಿ ತೊಡಗಿದ್ದಾರೆ. ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅದರ ಅಡಿಯಲ್ಲಿ  ಬಾಲ್ಯದಿಂದ ಪದವಿಯವರೆಗೂ ಸಂಪೂರ್ಣ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿ ಯಾವುದೇ ಜಾತಿ-ಧರ್ಮ ಭೇದವಿಲ್ಲದೇ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದೊಂದಿಗೆ ಉಚಿತ ವಸತಿ ಮತ್ತು ಉಚಿತ ಆಹಾರ ಕೂಡ ನೀಡಲಾಗುತ್ತದೆ. ಪ್ರಸ್ತುತ ಸುಮಾರು 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕರ್ನಾಟಕದ ವಿವಿಧ ಮೂಲೆಗಳ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಮಾತ್ರವಲ್ಲದೇ ರೈತಾಪಿ ವರ್ಗದ ಅನುಕೂಲಕ್ಕಾಗಿ ಪ್ರತಿವರ್ಷ ಒಂದು ತಿಂಗಳ ಕಾಲ ರೈತಜಾತ್ರೆಯನ್ನು ನಡೆಸಿಕೊಡುತ್ತಿದ್ದರು.

ಪ್ರಶಸ್ತಿಗಳು ಜಂಗಮ, ಸಮಾಜದ ಯಾವುದೇ ಪ್ರಖ್ಯಾತಿ-ಪುರಸ್ಕಾರಕ್ಕೆ ಆಸೆ ಪಡದೆ ಮುನ್ನೆಡೆದರೂ ಅವರ ಕಾರ್ಯಕ್ಕೆ ಋಣಭಾರ ಸಲ್ಲಿಸುವ ಹೊಣೆ ಸಮಾಜದ್ದು. ಶ್ರೀಗಳ ಸಮಾಜಿಮುಖಿ ಜೀವನಕ್ಕೆ ಪದ್ಮಭೂಷಣ, ಕರ್ನಾಟಕ ರತ್ನ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ. 1965 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಕೂಡ ಪಡೆದಿದ್ದಾರೆ. ಶ್ರೀಗಳ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ `ಭಾರತ ರತ್ನ' ಪ್ರಶಸ್ತಿ ನೀಡಬೇಕು ಎಂಬುದು ಇಡೀ ಕನ್ನಡ ಜನತೆಯ ಒತ್ತಾಸೆ.

ಆರದ ಚೇತನ  ಶ್ರೀಗಳು

2019ರ ಜನವರಿ 21 ರಂದು ಮಧ್ಯಾಹ್ನ ಶ್ರೀಗಳು ಇಹಯಾತ್ರೆ ಮುಗಿಸಿದರು. ಶ್ರೀಗಳು ದೈಹಿಕವಾಗಿ ದೂರವಾದರೂ ತಮ್ಮ ಕಾರ್ಯಗಳ ಮೂಲಕ ಸದಾ ಬೆಳಗುತ್ತಿದ್ದಾರೆ . ಲಕ್ಷಾಂತರ ವಿದ್ಯಾರ್ಥಿಗಳ ಸ್ಮೃತಿಪಟಲದಲ್ಲಿ ಜ್ಞಾನವಾಗಿ, ಸಾವಿರಾರು ಭಕ್ತರ ಹೃದಯದಲ್ಲಿ ಅರಿವಿನ ಜ್ಯೋತಿಯಾಗಿ ಅದಮ್ಯವಾಗಿ ಅನಂತದವರೆಗೂ ಬೆಳಗಲಿದ್ದಾರೆ.

ಡಾ.ಶಿವಕುಮಾರ ಸ್ವಾಮೀಜಿ ಜೀವನ

ಪೂರ್ವಾಶ್ರಮ ಹೆಸರು -ಶಿವಣ್ಣ

1922- ಫ್ರೌಢಶಾಲಾ ಶಿಕ್ಷಣಕ್ಕೆ ತುಮಕೂರಿಗೆ ಬಂದರು

1926- ಮೆಟ್ರಿಕುಲೇಷನ್ ಪೂರ್ಣ

1927- ಸಿದ್ಧಗಂಗಾ ಮಠದ ಸಂಪರ್ಕಕ್ಕೆ ಬಂದರು

1927- ಸಾಮಾನ್ಯ ಪರೀಕ್ಷೆ ಉತ್ತೀರ್ಣ ಮತ್ತು ಪದವಿ ಸೇರ್ಪಡೆ

1930- ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು

1965- ಕರ್ನಾಟಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪ್ರದಾನ

1975 - ಎರಡು ಸಾವಿರ ಮಕ್ಕಳಿಗಾಗಿ ಶಾಲೆ ತೆರೆದರು.

1977 - ನಾಲ್ಕು ಸಾವಿರ ದಾಟಿದ ಶಾಲಾ ಮಕ್ಕಳು 

2007- ಕರ್ನಾಟಕ ರತ್ನ ಪ್ರಶಸ್ತಿ

2015- ಭಾರತ ಸರ್ಕಾರದ ಪದ್ಮಭೂಷಣ

ವಿಶೇಷತೆಗಳು

128 - ಶೈಕ್ಷಣಿಕ ಸಂಸ್ಥೆಗಳು

2,255 -ಶಿಕ್ಷಕ ಮತ್ತು ಭೋಧಕ ವರ್ಗ

25,000- ಪ್ರತಿದಿನ ದಾಸೋಹದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು

2026 ರ ಜನವರಿ 21 ರಂದು ದಾಸೋಹ ದಿನವೆಂದು ಇಡೀ ವಿಶ್ವವೇ ಸಂಭ್ರಮಿಸುತ್ತದೆ.

ಲೇಖಕರು: ಸಾಧಕರು, ವಿರಕ್ತ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.