ADVERTISEMENT

Explainer | ಭಾರತ–ಚೀನಾ ಗಡಿ ಸಮಸ್ಯೆಯತ್ತ ಒಂದು ನೋಟ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 9:37 IST
Last Updated 17 ಜೂನ್ 2020, 9:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭಾರತ, ಚೀನಾ ನಡುವೆ ಗಡಿ ಸಮಸ್ಯೆ ಇತ್ತೀಚೆಗೆ ಬಿಗಡಾಯಿಸಿದೆ. ಪೂರ್ವ ಲಡಾಖ್‌ನ ‍ಪಾಂಗಾಂಗ್‌ ಸರೋವರದ ಬಳಿಯಲ್ಲಿ ಗಡಿ ಬಿಕ್ಕಟ್ಟು ಹಿಂಸಾತ್ಮಕ ರೂಪ ಪಡೆದಿದೆ. ಎರಡೂ ದೇಶಗಳ ನಡುವಣ ಗಡಿ ಸಮಸ್ಯೆಯತ್ತ ಒಂದು ನೋಟ ಇಲ್ಲಿದೆ.

**

ಭಾರತದ ಅತ್ಯಂತ ಉತ್ತರದ ವಾಯುನೆಲೆ ದೌಲತ್‌‌ ಬೇಗ್ ಓಲ್ಡಿಯಲ್ಲಿ ಇದೆ. 1962ರ ಭಾರತ–ಚೀನಾ ಯುದ್ಧದ ವೇಳೆ ಇದನ್ನು ನಿರ್ಮಿಸಲಾಗಿತ್ತು. ಯುದ್ಧದ ನಂತರ ಈ ವಾಯುನೆಲೆ ನಿಷ್ಕ್ರಿಯವಾಗಿತ್ತು. 2008ರಲ್ಲಿ ವಾಯುನೆಲೆ ಮತ್ತೆ ಕಾರ್ಯಾರಂಭ ಮಾಡಿತು. 2013ರಲ್ಲಿ ಏರ್‌ಸ್ಟ್ರಿಪ್‌ ನಿರ್ಮಿಸಿ, ವಾಯುಪಡೆಯ ಭಾರಿ ಸರಕುಸಾಗಣೆ ವಿಮಾನವನ್ನು ಇಳಿಸಲಾಯಿತು.

ADVERTISEMENT

ಈಗ ಲೇಹ್‌ನಿಂದ ಇಲ್ಲಿಗೆ ಸರ್ವಋತು ರಸ್ತೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಶಯೋಕ್‌ನಿಂದ ದೌಲತ್‌ ಬೇಗ್ ಓಲ್ಡಿವರೆಗೆ 255 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಶಯೋಕ್‌, ಗಾಲ್ವನ್ ಕಣಿವೆ ಮತ್ತು ಮುರ್ಗೋ ಬಳಿ ಸೇತುವೆ ನಿರ್ಮಿಸಬೇಕಿದೆ. ಗಾಲ್ವನ್ ಬಳಿ ಸೇತುವೆ ನಿರ್ಮಿಸುವ ಕಾಮಗಾರಿಯನ್ನು ನಿಲ್ಲಿಸಿ ಎಂದು ಚೀನಾ ಒತ್ತಾಯಿಸುತ್ತಿದೆ. ದೌಲತ್ ಬೇಗ್ ಓಲ್ಡಿ ವಾಯುನೆಲೆಗೆ ಸರ್ವಋತು ರಸ್ತೆ ಕಾರ್ಯಾರಂಭ ಮಾಡಿದರೆ, ಸಿಯಾಚಿನ್ ನೀರ್ಗಲ್ಲು ಪ್ರದೇಶಕ್ಕೆ ಈ ನೆಲೆಯಿಂದಲೇ ವಾಯು ಸಂಪರ್ಕ ಕಲ್ಪಿಸಬಹುದು.

ಗಡಿ ಸಂಘರ್ಷಕ್ಕೇನು ಕಾರಣ?

ಐದು ದಶಕಗಳ ಬಳಿಕ ಭಾರತ–ಚೀನಾ ಗಡಿಯು ಭಾರತದ ಇಬ್ಬರು ಯೋಧರು ಮತ್ತು ಒಬ್ಬ ಅಧಿಕಾರಿಯ ಜೀವ ಬಲಿ ಪಡೆದಿದೆ. ಪೂರ್ವ ಲಡಾಖ್‌ನ ಪಾಂಗಾಂಗ್‌ ತ್ಸೊ ಸರೋವರದ ಉತ್ತರ ದಂಡೆಯಲ್ಲಿ ಮೇ 5ರಂದು ಎರಡೂ ದೇಶಗಳ ಸೈನಿಕ ನಡುವೆ ಮುಖಾಮುಖಿ ಆರಂಭವಾಗಿತ್ತು. ನಿಯಮಿತವಾಗಿ ಭಾರತದ ಯೋಧರು ಗಸ್ತು ನಡೆಸುತ್ತಿದ್ದ ಸ್ಥಳಕ್ಕೆ ಹೋಗಲು ಸಾಧ್ಯವಾಗದಂತೆ ಚೀನೀಯರು ಬಂಕರ್‌ ನಿರ್ಮಿಸಿದ್ದರು. ಇಲ್ಲಿಂದ ಸ್ವಲ್ಪ ಉತ್ತರಕ್ಕಿರುವ, ಗಾಲ್ವನ್‌ ಕಣಿವೆ ಪ್ರದೇಶದಲ್ಲಿ ಭಾರತವು ತನ್ನ ಭೂಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡುತ್ತಿದೆ ಮತ್ತು ಅಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸುತ್ತಿದೆ ಎಂಬುದು ಚೀನಾದ ಆರೋಪ. ಮಾತುಕತೆಯ ಬಳಿಕ, ಯೋಧರು ಹಿಂದಿರುಗುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ, ಸೋಮವಾರ ರಾತ್ರಿ ಅದು ಕರಾಳ ರೂಪ ಪಡೆಯಿತು.

ಗಡಿ ವಿವಾದದ ವ್ಯಾಪ‍್ತಿ

ಅಕ್ಷಾಯ್‌ ಚಿನ್‌ನಲ್ಲಿ, ತನ್ನ 38 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಚೀನಾ ವಶದಲ್ಲಿ ಇರಿಸಿಕೊಂಡಿದೆ ಎಂಬುದು ಭಾರತದ ಪ್ರತಿಪಾದನೆ. ಅಕ್ಷಾಯ್‌ ಚಿನ್‌ ಪ್ರದೇಶದ ಗಡಿ ಪೂರ್ವ ಲಡಾಖ್‌. ಭಾರತಕ್ಕೆ ಸೇರಿದ 5,180 ಚದರ ಕಿ.ಮೀ. ಪ್ರದೇಶವನ್ನು ಪಾಕಿಸ್ತಾನವು 1963ರಲ್ಲಿ ಚೀನಾಕ್ಕೆ ನೀಡಿತ್ತು. ಅರುಣಾಚಲ ಪ್ರದೇಶದ ಸುಮಾರು 90 ಸಾವಿರ ಚದರ ಕಿ.ಮೀ. ಪ್ರದೇಶ ಮತ್ತು ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಭಾಗವಾಗಿರುವ ಸುಮಾರು ಎರಡು ಸಾವಿರ ಚದರ. ಕಿ.ಮೀ. ಪ್ರದೇಶ ತನ್ನದು ಎಂದು ಚೀನಾ ವಾದಿಸುತ್ತಿದೆ.

ಪೂರ್ವ ಲಡಾಖ್‌ನಲ್ಲಿ ಏನು ನಡೆಯುತ್ತಿದೆ?

ಪೂರ್ವ ಲಡಾಖ್‌ನಲ್ಲಿ ಎರಡೂ ದೇಶಗಳು ಭಾರಿ ಸಂಖ್ಯೆಯ ಯೋಧರನ್ನು ಜಮಾಯಿಸಿವೆ. ಕಳೆದ ಕೆಲವು ವಾರಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಲ್ವನ್‌ ಕಣಿವೆಯಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಎರಡೂ ದೇಶಗಳು ಮಾತುಕತೆ ಮೂಲಕ ನಿರ್ಧರಿಸಿವೆ. ಹಿಂದಿರುಗುವಿಕೆ ಪ್ರಕ್ರಿಯೆಯ ನಡುವೆಯೇ ಹಿಂಸಾತ್ಮಕ ಮುಖಾಮುಖಿ ನಡೆದಿದೆ. ಪಾಂಗಾಂಗ್‌ ತ್ಸೊ ಸರೋವರ ಪ್ರದೇಶದ ಬಿಕ್ಕಟ್ಟಿಗೆ ಇನ್ನೂ ಪರಿಹಾರ ದೊರೆತಿಲ್ಲ.

ಗಾಲ್ವನ್‌ ಕಣಿವೆ ಮತ್ತು ಪಾಂಗಾಂಗ್‌ ಸರೋವರ ಎಲ್ಲಿವೆ?

ಗಾಲ್ವನ್‌ ನದಿಯು ಅಕ್ಷಾಯ್‌ ಚಿನ್‌ನಿಂದ ಲಡಾಖ್‌ಗೆ ಹರಿಯುತ್ತದೆ. ನದಿಯ ಪಶ್ಚಿಮ ಭಾಗವು ತನಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ. ಆದರೆ, ಇಡೀ ಅಕ್ಷಾಯ್‌ ಚಿನ್‌ ತನ್ನದು ಎಂಬುದು ಭಾರತದ ಪ್ರತಿಪಾದನೆ.

ಪಾಂಗಾಂಗ್ ತ್ಸೊ ಜಗತ್ತಿನಲ್ಲಿ ಅತಿ ಎತ್ತರದಲ್ಲಿರುವ ಉಪ್ಪು ನೀರಿನ ಸರೋವರ. ಸಮುದ್ರ ಮಟ್ಟದಿಂದ ಇದು 4,350 ಮೀಟರ್‌ ಎತ್ತರದಲ್ಲಿದೆ. ಇದರ ವಿಸ್ತಾರ ಸುಮಾರು 600 ಚದರ ಕಿ.ಮೀ. ಪೂರ್ವ ಲಡಾಖ್‌ ಮತ್ತು ಟಿಬೆಟ್‌ಗೆ ಇದು ವ್ಯಾಪಿಸಿದೆ.

ಪಾಂಗಾಂಗ್‌ ಸರೋವರದ ಬಿಕ್ಕಟ್ಟು ಏನು?

ಭಾರತ ಮತ್ತು ಚೀನಾ ನಡುವೆ ಪರಸ್ಪರ ಒಪ್ಪಿತವಾದ ಗಡಿ ರೇಖೆ ಇಲ್ಲ. ಪಶ್ಚಿಮ ಭಾಗದಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನೇ (ಎಲ್‌ಎಸಿ) ಗಡಿ ರೇಖೆ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಎಲ್‌ಎಸಿಯ ಬಗ್ಗೆಯೂ ಭಿನ್ನಾಭಿಪ್ರಾಯ ಇದೆ. ಎಲ್‌ಎಸಿ ಪ್ಯಾಂಗಾಂಗ್‌ ಸರೋವರದ ಮಧ್ಯೆ ಹಾದು ಹೋಗುತ್ತದೆ. ಆದರೆ, ರೇಖೆ ಎಲ್ಲಿ ಹಾದು ಹೋಗುತ್ತದೆ ಎಂಬ ವಿಚಾರದಲ್ಲಿ ಒಮ್ಮತ ಇಲ್ಲ. ಸರೋವರದ ಉತ್ತರ ದಂಡೆಯಲ್ಲಿನ ಪರ್ವತಗಳ ಮುಂಚಾಚು ಹಸ್ತ ಮತ್ತು ಬೆರಳುಗಳಂತೆ ಕಾಣಿಸುತ್ತದೆ. ನಕ್ಷೆಯಲ್ಲಿ ಈ ಮುಂಚಾಚುಗಳನ್ನು ‘ಬೆರಳುಗಳು’ (ಫಿಂಗರ್ಸ್‌) ಎಂದೇ ನಮೂದಿಸಲಾಗಿದೆ. ಪಶ್ಚಿಮದ ಕೊನೆಯಲ್ಲಿ ‘ಬೆರಳು 1’ ಇದ್ದರೆ ಪೂರ್ವದ ಕೊನೆಯಲ್ಲಿ ‘ಬೆರಳು–8’ ಇದೆ. ಎಲ್‌ಎಸಿ 4ನೇ ಬೆರಳಿನ ಮೂಲಕ ಹಾದು ಹೋಗುತ್ತದೆ ಎಂದು ಚೀನಾ ಹೇಳಿದರೆ, 8ನೇ ಬೆರಳನ್ನು ಹಾದು ಹೋಗುತ್ತದೆ ಎಂದು ಭಾರತ ಪ್ರತಿಪಾದಿಸುತ್ತಿದೆ. ಹೀಗಾಗಿ, ಇಲ್ಲಿ ಭಾರತ–ಚೀನಾ ಯೋಧರ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇರುತ್ತದೆ.

ಚೀನಾದ ಅತಿಕ್ರಮಣಕಾರಿ ವರ್ತನೆಗೇನು ಕಾರಣ?

ಭಾರತ ನಿರ್ಮಿಸುತ್ತಿರುವ ಒಂದು ರಸ್ತೆ ಮತ್ತು ಒಂದು ಸೇತುವೆ ಚೀನಾದ ಅಸಮಾಧಾನಕ್ಕೆ ಕಾರಣ. ಒಂದು ರಸ್ತೆಯು ಪಾಂಗಾಂಗ್‌ ಸರೋವರದ ಮುಂಚೂಣಿ ನೆಲೆಯನ್ನು ಸಂಪರ್ಕಿಸುತ್ತದೆ; ಇನ್ನೊಂದು ರಸ್ತೆಯು ದರ್ಬುಕ್‌–ಶಯೋಕ್‌ ಮೂಲಕ ದೌಲತ್‌ ಬೇಗ್‌ ಓಲ್ಡಿ ನೆಲೆಯನ್ನು ಸಂಪರ್ಕಿಸುತ್ತದೆ. ಈ ರಸ್ತೆಯ ಉದ್ದ 255 ಕಿ.ಮೀ. ಎಲ್‌ಎಸಿಯ ಈ ಭಾಗದಲ್ಲಿ ಭಾರತವು ಕೈಗೆತ್ತಿಕೊಂಡಿರುವ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳು ಚೀನಾದ ನಿದ್ದೆಗೆಡಿಸಿವೆ. ಅಕ್ಷಾಯ್‌ ಚಿನ್‌ಗೆ ಸೇನೆಯನ್ನು ರವಾನಿಸುವ ಹವಣಿಕೆ ಇದು ಎಂದು ಚೀನಾ ಹೇಳುತ್ತಿದೆ. 2019ರ ಆಗಸ್ಟ್‌ 6ರಂದು ಲೋಕಸಭೆಯಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್‌ ಶಾ ಅವರು, ಅಕ್ಷಾಯ್‌ ಚಿನ್‌ ಮೇಲೆ ಹಕ್ಕು ಪ್ರತಿಪಾದನೆ ಮಾಡಿದ್ದರು. ಈ ಹಕ್ಕು ಪ್ರತಿಪಾದನೆಯು ಭಾರತದ ಉದ್ದೇಶದ ಬಗ್ಗೆ ಚೀನಾದಲ್ಲಿ ಅನುಮಾನ ಮೂಡಿಸಿದೆ ಎನ್ನಲಾಗುತ್ತಿದೆ.

ಇತ್ತೀಚಿನ ಸೌಹಾರ್ದದ ಬಳಿಕವೂ ಬಿಕ್ಕಟ್ಟು ಯಾಕೆ?

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ನಡುವೆ 2018ರ ಏ‍ಪ್ರಿಲ್‌ನಲ್ಲಿ ಮೊದಲ ಅನೌಪಚಾರಿಕ ಶೃಂಗಸಭೆ ವುಹಾನ್‌ನಲ್ಲಿ ನಡೆದಿತ್ತು. ಈ ಸಭೆಯ ಬಳಿಕ ಎರಡೂ ದೇಶಗಳ ನಡುವಣ ಸಂಬಂಧ ಸ್ವಲ್ಪ ಉತ್ತಮಗೊಂಡಿತ್ತು. ಅದಕ್ಕೆ ಒಂದು ವರ್ಷ ಮೊದಲು, ದೋಕಲಾದಲ್ಲಿ ಭಾರತ–ಚೀನಾ ಸೈನಿಕರ ನಡುವೆ 72 ದಿನಗಳ ಮುಖಾಮುಖಿ ಉಂಟಾಗಿತ್ತು. ಅನೌಪಚಾರಿಕ ಸಭೆಯ ಬಳಿಕ, ಸೌಹಾರ್ದವನ್ನು ಉಳಿಸಿಕೊಳ್ಳುವ ಬಗ್ಗೆ ಭಾರತ ಎಚ್ಚರ ವಹಿಸಿತ್ತು. ಟಿಬೆಟ್‌ ಮತ್ತು ತೈವಾನ್‌ ವಿಚಾರದಲ್ಲಿ ಚೀನಾದ ವಿರುದ್ಧ ಮಾತನಾಡಿರಲಿಲ್ಲ. ಆದರೆ, ಚೀನಾ ಇದೇ ರೀತಿಯಲ್ಲಿ ಸ್ಪಂದಿಸಲಿಲ್ಲ. ಪಾಕಿಸ್ತಾನದ ವಶದಲ್ಲಿರುವ ಭಾರತದ ಭೂಪ್ರದೇಶವನ್ನು ಹಾದು ಹೋಗುವ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆಯನ್ನು ಮುಂದುವರಿಸಿತು.

ಹುತಾತ್ಮರಾದ ಸೈನಿಕರು

ಚೀನಾ ಸೈನಿಕರ ಜತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರುತೆಲಂಗಾಣದ ಸೂರ್ಯಪೇಟೆಯವರು. ಅವರು ತಮ್ಮ ತಾಯಿ, ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

‘ಆತ 37 ವರ್ಷಗಳಿಂದ ಸೇನೆಯಲ್ಲಿ ಇದ್ದುದ್ದರ ಬಗ್ಗೆ ನಮ್ಮ ಕುಟುಂಬಕ್ಕೆ ಹೆಮ್ಮೆ ಇತ್ತು. ಕರ್ನಲ್ ಆಗಿ ಬಡ್ತಿ ಪಡೆದದ್ದೂ ದೊಡ್ಡ ಸಾಧನೆ. ನನ್ನ ಒಬ್ಬನೇ ಮಗನನ್ನು ಕಳೆದುಕೊಂಡದಕ್ಕೆ ದುಃಖವಿದೆ. ಆದರೆ, ಆತ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದನೆಂದು ಹೆಮ್ಮೆಯೂ ಇದೆ’ ಎನ್ನುತ್ತಾರೆ ಸಂತೋಷ್ ಅವರ ತಾತಿ ಉಪೇಂದರ್ ಬಿಕ್ಕುಮಲ್ಲಾ.

ಈ ಸಂಘರ್ಷದಲ್ಲಿ ಹುತಾತ್ಮರಾದ ಹವಾಲ್ದಾರ್ ಪಳನಿ (40) ಅವರು ತಮಿಳುನಾಡಿನ ರಾಮನಾಥಪುರ ಜಿಲ್ಲೆಯವರು. ಜಿಲ್ಲೆಯ ಕಾಡುಕಲೂರ್ ಎಂಬ ಕುಗ್ರಾಮದವಾರದ ಪಳನಿ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ದುಃಖತಪ್ತ ಕುಟುಂಬದವರಿಗೆ ರಾಜಕೀಯ ನಾಯಕರು ಸಾಂತ್ವನ ಹೇಳಿದ್ದಾರೆ. ರಾಜ್ಯ ಸರ್ಕಾರ ₹ 20 ಲಕ್ಷ ಪರಿಹಾರ ಘೋಷಿಸಿದೆ.

ಪಳನಿ ವಾರದ ಹಿಂದಷ್ಟೇ ತಮ್ಮ ಪತ್ನಿಗೆ ಕರೆ ಮಾಡಿದ್ದರು. ಗಾಲ್ವನ್‌ನಲ್ಲಿ ಸಂಘರ್ಷದ ವಾತಾವರಣವಿದ್ದು, ಕೆಲವು ದಿನಗಳ ಕಾಲ ಕರೆ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ಪತ್ನಿಗೆ ತಿಳಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಂಘರ್ಷದಲ್ಲಿ ಹುತಾತ್ಮರಾಗಿರುವ ಸಿಪಾಯಿ ಓಝಾ ಎಂಬುವವರು ಜಾರ್ಖಂಡ್ ರಾಜ್ಯದವರು. ಅವರ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.