ADVERTISEMENT

Explainer | ಸೋಂಕು ಹರಡುವ ವನ್ಯಜೀವಿ ಮಾರುಕಟ್ಟೆ

ಆಳ–ಅಗಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 1:36 IST
Last Updated 10 ಏಪ್ರಿಲ್ 2020, 1:36 IST
   

ಕಾಡುಪ್ರಾಣಿಗಳ ಕಳ್ಳಸಾಗಣೆ ಮತ್ತು ಮಾರಾಟದಿಂದ ಸಾಂಕ್ರಾಮಿಕ ರೋಗಗಳು ಈ ಹಿಂದೆ ಹರಡಿವೆ. ಮುಖ್ಯವಾಗಿ ಕಾಡು ಪ್ರಾಣಿಗಳಿಂದ ಮನುಷ್ಯರಿಗೆ, ನಂತರ ಮನುಷ್ಯರಿಂದ ಮನುಷ್ಯರಿಗೆ ಇಂತಹ ರೋಗಗಳು ಹರಡಿದ ಉದಾಹರಣೆ ಸಾಕಷ್ಟಿದೆ. ಆದರೆ, ಇಂತಹ ಎಲ್ಲಾ ರೋಗಗಳ ಜತೆ ಕಾಡುಪ್ರಾಣಿಗಳ ಮಾರಾಟವೂ ತಳಕುಹಾಕಿಕೊಂಡಿದೆ

ಕಾಡುಪ್ರಾಣಿಗಳಿಂದ ಮನುಷ್ಯನಿಗೆ ರೋಗ ದಾಟಿಕೊಳ್ಳುವ ಬಗೆ

1. ಪ್ರಾಣಿಗಳಿಂದ ಪ್ರಾಣಿಗಳಿಗೆ
ಕೆಲವು ಪ್ರಾಣಿಗಳಲ್ಲಿ ವೈರಾಣುಗಳಿರುತ್ತವೆ. ಆ ಪ್ರಾಣಿಗೆ (ವೈರಾಣು ಸಂಗ್ರಹವಾಗಿರುವ ಪ್ರಾಣಿ) ಆ ವೈರಾಣು ಯಾವುದೇ ಹಾನಿ ಮಾಡುವುದಿಲ್ಲ. ಆದರೆ ಆ ಪ್ರಾಣಿಯ ಸಂಪರ್ಕಕ್ಕೆ ಬಂದ ಬೇರೆ ಪ್ರಬೇಧ//ದ ಪ್ರಾಣಿಗಳಿಗೆ (ಸೋಂಕುವಾಹಕ ಪ್ರಾಣಿ) ವೈರಾಣು ದಾಟಿಕೊಳ್ಳುತ್ತದೆ. ವೈರಾಣು ತಗುಲಿದ ಪ್ರಾಣಿಯ ಆರೋಗ್ಯದ ಮೇಲೆ ವೈರಾಣು ಪರಿಣಾಮ ಬೀರುತ್ತದೆ. ನಂತರ ಪ್ರಾಣಿಯಿಂದ ಪ್ರಾಣಿಗೆ ಹರಡುತ್ತದೆ

ADVERTISEMENT

2. ಪ್ರಾಣಿಗಳಿಂದ ಮನುಷ್ಯನಿಗೆ
ವೈರಾಣು ಇರುವ ಪ್ರಾಣಿ ಮತ್ತು ಸೋಂಕು ತಗುಲಿರುವ ಪ್ರಾಣಿಯ ಸಂಪರ್ಕಕ್ಕೆ ಬಂದ ಮನುಷ್ಯನಿಗೆ ವೈರಾಣು ದಾಟಿಕೊಳ್ಳುತ್ತದೆ. ಈ ಪ್ರಾಣಿಗಳ ಬೇಟೆ, ಮಾಂಸಕ್ಕಾಗಿ ಕತ್ತರಿಸುವುದು, ಮಾರಾಟದ ವೇಳೆ ಸ್ಪರ್ಶ ಮೊದಲಾದ ಸಂದರ್ಭದಲ್ಲಿ ವೈರಾಣು ಮನುಷ್ಯನಿಗೆ ದಾಟಿಕೊಳ್ಳುತ್ತದೆ. ಇವುಗಳನ್ನು ಖರೀದಿಸಿ, ಸಾಕಿಕೊಳ್ಳುವವರಿಗೂ ವೈರಾಣು–ಸೋಂಕು ದಾಟಿಕೊಳ್ಳುತ್ತದೆ

3. ಮನುಷ್ಯನಿಂದ ಮನುಷ್ಯನಿಗೆ
ವೈರಾಣು–ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದ ಬೇರೆ ವ್ಯಕ್ತಿಗಳಿಗೂ ಸೋಂಕು ತಗಲುತ್ತದೆ. ಹೀಗೆಯೇ ಇದು ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಬಹುವೇಗವಾಗಿ ಹರಡುತ್ತದೆ. ಮನುಷ್ಯನ ದೇಹಕ್ಕೆ ಬಂದ ಮೇಲೆ ವೈರಾಣುಗಳ ರೋಗ ಹರಡುವ ರೀತಿಯಲ್ಲಿಯೂ ವ್ಯತ್ಯಾಸ ಆಗಬಹುದು.

ವನ್ಯಜೀವಿಗಳ ಮಾರಾಟ ಮತ್ತು ಜಾಗತಿಕ ಸೋಂಕುಗಳು

ಸಾರ್ಸ್‌ |2002-2003
ಚೀನಾದ ಗಾಂಗಝೌ ವನ್ಯಜೀವಿ ಮಾರುಕಟ್ಟೆಯಲ್ಲಿ ಮೊದಲು ಪತ್ತೆ
8,098 ಜನರಿಗೆ ಸೋಂಕು ಹರಡಿತ್ತು
774 ಜನ ಮೃತಪಟ್ಟಿದ್ದರು
ಚೀನಾದ ಕಾಡುಗಳಲ್ಲಿ ಇರುವ ಸಿವೆಟ್‌ಗಳಿಂದ ಈ ವೈರಾಣು ಮನುಷ್ಯನಿಂಗೆ ದಾಟಿಕೊಂಡಿತ್ತು

ಎಚ್‌5ಎನ್‌1 |2003–2015
ಥಾಯ್ಲೆಂಡ್‌ನಿಂದ ಬೆಲ್ಜಿಯಂಗೆ ಕಳ್ಳಸಾಗಣೆ ಮಾಡಲಾಗಿದ್ದ ಹದ್ದು, ಗಿಡುಗಗಳ ಮೂಲಕ ಸೋಂಕು ಹರಡಿದ್ದು ಪತ್ತೆಯಾಗಿತ್ತು
826 ಜನರಿಗೆ ಸೋಂಕು ಹರಡಿತ್ತು
440 ಸಾವುಗಳು
ಗಿಡುಗಗಳ ಮೂಲಕ ಸೋಂಕು ಮನುಷ್ಯನಿಗೆ ತಗುಲಿತ್ತು

ಮಂಕಿಪಾಕ್ಸ್‌ (ಎಂಪಿಎಕ್ಸ್‌) |2003
ಘಾನದ ಕಾಡು ಇಲಿಗಳನ್ನು ಸಾಕುವ ಉದ್ದೇಶದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳಲಾಗಿತ್ತು. ಈ ಇಲಿಗಳಿಂದ ಸೋಂಕು ಹರಡಿದ್ದು ಪತ್ತೆಯಾಗಿತ್ತು
ಈ ಇಲಿಗಳ ಸಂಪರ್ಕಕ್ಕೆ ಬಂದ ಉತ್ತರ ಅಮೆರಿಕದ ಪ್ರೇರಿ ಕಾಡು ಇಲಿಗಳಿಗೆ ಈ ಸೋಂಕು ತಗುಲಿತ್ತು

ಎಬೋಲಾ |2013–2016
ಪಶ್ಚಿಮ ಆಫ್ರಿಕಾದಲ್ಲಿ ಮೊದಲು ಪತ್ತೆ
28,616 ಜನರಿಗೆ ಸೋಂಕು ತಗುಲಿತ್ತು
11,310 ಜನರು ಮೃತಪಟ್ಟಿದ್ದರು
ಬಾವಲಿಗಳಿಂದ ಮತ್ತು ವಾನರಗಳಿಂದ ಸೋಂಕು ಹರಡಿತ್ತು

ಈಗ ಕೋವಿಡ್–19 ಸರದಿ |2019–2020
ಚೀನಾದ ವುಹಾನ್‌ನಲ್ಲಿನ ವನ್ಯಜೀವಿಗಳ ಮಾರುಕಟ್ಟೆಯಿಂದ ಮನುಷ್ಯನಿಗೆ ಸೋಂಕು ತಗುಲಿದೆ. ಈ ಸೊಂಕು ತಗುಲಿದ ಗುಂಪು ಇತರ ಮಾರುಕಟ್ಟೆಗಳ ಜತೆ ಸಂಪರ್ಕ ಹೊಂದಿತ್ತು

ಈ ಗುಂಪನಿಂದ ವುಹಾನ್‌ ನಗರವಾಸಿಗಳಿಗೆ ನಂತರ ಬೇರೆ ದೇಶಗಳಿಗೆ ಮತ್ತು ಈಗ ಜಾಗತಿಕವಾಗಿ ಹರಡಿದೆ

ಯಾವ ಪ್ರಾಣಿಯಿಂದ ಈ ವೈರಾಣು ಬಂದಿದೆ ಎಂಬುದು ದೃಢಪಟ್ಟಿಲ್ಲ. ಆದರೆ ಸಾರ್ಸ್‌ ಸೋಂಕಿಗೆ ಕಾರಣವಾಗಿದ್ದ ಬಾವಲಿಗಳ ಕೊರೊನಾವೈರಾಣುವನ್ನೇ ಹೋಲುವ, ಕೋವಿಡ್–19 ಕೊರೊನಾವೈರಾಣುವಿಂದ ಹರಡಿದೆ. ಬಾವಲಿಯಿಂದ ಸಿವೆಟ್‌ಗಳಿಗೆ, ನಂತರ ಸಿವೆಟ್‌ಗಳಿಂದ ಮನುಷ್ಯರಿಗೆ ಹರಡಿದೆ ಎಂಬ ಪ್ರತಿಪಾದನೆ ಇದೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ

ನೂರಾರು ಕೋಟಿ ವಹಿವಾಟಿನ ಕಾಳಸಂತೆ
* ಕಾಡುಪ್ರಾಣಿಗಳ ಜತೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಮಾನವ ಸಂಪರ್ಕದಿಂದ ಪ್ರಾಣಿಗಳ ಸೋಂಕು ಮನುಷ್ಯರಿಗೂ ಅಂಟುತ್ತಿದೆ ಎಂದು ಅಮೆರಿಕ ಹಾಗೂ ಆಸ್ಟ್ರೇಲಿಯಾ ಸಂಶೋಧಕರ ತಂಡದ ಅಧ್ಯಯನ ವರದಿ ಹೇಳಿದೆ

* ಪ್ರಾಣಿಗಳಿಂದ ಇದುವರೆಗೆ 142 ವಿಧದ ವೈರಾಣುಗಳು ಮನುಷ್ಯರಿಗೆ ತಗುಲಿವೆ ಎಂದು ಅಂದಾಜಿಸಲಾಗಿದೆ

* ಪ್ರಾಣಿಗಳಿಂದ ಇದುವರೆಗೆ ಮನುಷ್ಯರಿಗೆ ಅಂಟಿದ ಶೇ 75ರಷ್ಟು ವೈರಾಣುಗಳಲ್ಲಿ ವಾನರಗಳು, ಇಲಿಗಳು ಹಾಗೂ ಬಾವಲಿಗಳು ಕಾರಣವಾಗಿವೆ. ಬಾವಲಿಗಳು ಸಾರ್ಸ್‌, ಎಬೊಲಾದಂತಹ ಸಾಂಕ್ರಾಮಿಕ ರೋಗಗಳ ವೈರಾಣು ಹರಡಲು ಕಾರಣ ಎನ್ನುತ್ತವೆ ಸಂಶೋಧನಾ ವರದಿಗಳು

* ವಾರ್ಷಿಕ ಸಾವಿರಾರು ಕೋಟಿ ಡಾಲರ್‌ ವಹಿವಾಟಿಗೆ ಕಾರಣವಾಗುವ ವನ್ಯಜೀವಿ ಹಾಗೂ ವನಸ್ಪತಿಗಳ ಜಾಗತಿಕ ಮಾರುಕಟ್ಟೆಗಳನ್ನು ಕಾಯಂ ಆಗಿ ಮುಚ್ಚುವಂತೆ ಪ್ರಪಂಚದಾದ್ಯಂತ ಒತ್ತಡಗಳು ಹೆಚ್ಚುತ್ತಿವೆ

* ಜಾಗತಿಕ ವನ್ಯಜೀವಿ ಮಾರುಕಟ್ಟೆಯಲ್ಲಿ ಮಂಗಗಳು, ನರಿಗಳು, ಜಿಂಕೆಗಳು, ಮೊಸಳೆ, ಹಾವು ಸೇರಿದಂತೆ ಸರೀಸೃಪಗಳು, ಸಿವೆಟ್‌ಗಳು ಅಳಿಲುಗಳು, ಮೊಲಗಳು, ಇಲಿಗಳು, ನೂರಾರು ಪ್ರಭೇದಗಳ ಪಕ್ಷಿಗಳು ಮಾರಾಟವಾಗುತ್ತವೆ. ಚೀನಾದ ಗುವಾಂಗ್‌ಝೌನಲ್ಲಿ ಜೀವಂತ ಪ್ರಾಣಿಗಳ ಅತಿ ದೊಡ್ಡ ಮಾರುಕಟ್ಟೆಯಿದೆ. ಇಂಡೋನೇಷ್ಯಾ ಹಾಗೂ ಥಾಯ್ಲೆಂಡ್‌ಗಳು ಸಹ ಏಷ್ಯಾದ ಪ್ರಮುಖ ವನ್ಯಜೀವಿ ಮಾರುಕಟ್ಟೆ ಎನಿಸಿವೆ

* ಆಫ್ರಿಕಾದಲ್ಲಿ ಪ್ರತಿವರ್ಷ ಒಂದು ಲಕ್ಷ ಟನ್‌ ಕಾಡುಪ್ರಾಣಿಗಳ ಮಾಂಸ ಬಿಕರಿಯಾಗುತ್ತದೆ ಎನ್ನುವುದು ಒಂದು ಲೆಕ್ಕಾಚಾರ. ಕಾಳಸಂತೆಗಳ ಮೂಲಕ ಅದು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ

* ಭಾರತದಂತಹ ಕೆಲವು ದೇಶಗಳಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುವುದು ಅಥವಾ ಹಿಡಿದು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಚೀನಾದಲ್ಲಿ ಕೆಲವು ಕಾಡುಪ್ರಾಣಿಗಳ ಮಾರಾಟಕ್ಕೆ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲಿನ ವನ್ಯಜೀವಿ ಮಾರುಕಟ್ಟೆಗಳಲ್ಲಿ ಬಾವಲಿಗಳು, ನವಿಲುಗಳು ಹಾಗೂ ವಿವಿಧ ಪ್ರಭೇದಗಳ ಪಕ್ಷಿಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಕೊರೊನಾ ವೈರಾಣು ಹರಡಿದ ಮೇಲೆ ಚೀನಾ ದೇಶವು ವನ್ಯಜೀವಿ ಮಾರುಕಟ್ಟೆ ವಹಿವಾಟನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ

* ವನ್ಯಜೀವಿ ಮಾರುಕಟ್ಟೆಯಲ್ಲಿ ವಾರ್ಷಿಕ 23 ಶತಕೋಟಿ ಡಾಲರ್‌ನಷ್ಟು ವಹಿವಾಟು ನಡೆಯುತ್ತದೆ ಎಂದು ಅಂದಾಜಿಸಲಾಗಿದೆ

* ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಚೀನಾ ಹಾಗೂ ಇತರ ರಾಷ್ಟ್ರಗಳಿಂದ ಪೆಂಗೋಲಿನ್‌ಗಳನ್ನು ಸಾಗಿಸುವ ಜಾಲ ಹರಡಿದ್ದು, ಹಾಂಗ್‌ಕಾಂಗ್‌ನಲ್ಲಿ ಪ್ರತಿವರ್ಷ ಭಾರಿ ಪ್ರಮಾಣದಲ್ಲಿ ಪೆಂಗೋಲಿನ್‌ಗಳನ್ನು ವಶಕ್ಕೆ ಪಡೆದು, ರಕ್ಷಿಸಲಾಗುತ್ತದೆ

ಚೀನಾದ ಅಪಾಯಕಾರಿ ಮಾರುಕಟ್ಟೆಗಳು
ಪ್ರಾಣಿಗಳಿಂದ ವಿವಿಧ ಸ್ವರೂಪದಲ್ಲಿ ಮನುಷ್ಯನಿಗೆ ಸೋಂಕು ಅಂಟುತ್ತದೆ. ಸೊಳ್ಳೆಗಳ ಕಡಿತ, ಅನಾರೋಗ್ಯಪೀಡಿತ ಪ್ರಾಣಿಗಳ ಸಂಪರ್ಕ, ಕಾಡಿಪ್ರಾಣಿಗಳ ಮಾಂಸವನ್ನು ಬೇಯಿಸದೇ ತಿನ್ನುವುದು ಹೀಗೆ ಯಾವುದೇ ವಿಧದಲ್ಲಿ ಸೋಂಕು ತಗುಲಬಹುದು. ಬ್ಯಾಕ್ಟೀರಿಯಾಗಳು, ಪರಾವಲಂಬಿ ಜೀವಿಗಳು, ವೈರಾಣುಗಳು ಹಾಗೂ ಶೀಲಿಂಧ್ರಗಳು – ಇವುಗಳಲ್ಲಿ ಯಾವುದೇ ರೂಪದಲ್ಲಿ ಸೋಂಕು ಮನುಷ್ಯನ ಶರೀರವನ್ನು ಸೇರಬಹುದು. ಜಗತ್ತಿನ ಶೇ 16ರಷ್ಟು ಪ್ರಮಾಣದ ಸಾವುಗಳಿಗೆ ಸೋಂಕು ಕಾರಣ ಎಂದು ಅಮೆರಿಕ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಲೆಕ್ಕ ಹಾಕಿದೆ.

ಕೊರೊನಾ ಕಂಟಕ ವಿಪರೀತ ಪ್ರಮಾಣ ತಲುಪಿರುವ ಈ ಹಂತದಲ್ಲಿ ಜಗತ್ತಿನ ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಮಾತನಾಡಲಾಗುತ್ತಿದೆ. ಆದರೆ, ಇಂತಹ ಸೋಂಕುಗಳು ಭವಿಷ್ಯದಲ್ಲಿ ಕಾಡದಿರಬೇಕಾದರೆ ಕಾಡುಪ್ರಾಣಿಗಳ ಜತೆ ಅಂತರ ಕಾಯ್ದುಕೊಳ್ಳುವುದು ಮುಖ್ಯವಾದುದು ಎಂಬುದು ವಿಜ್ಞಾನಿಗಳ ಸಲಹೆಯಾಗಿದೆ.

ಚೀನಾ, ಥಾಯ್ಲೆಂಡ್‌, ಇಂಡೋನೇಷ್ಯಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಜೀವಂತ ಕಾಡುಪ್ರಾಣಿಗಳ ಮಾರುಕಟ್ಟೆಗಳು ಮಾನವ–ಪ್ರಾಣಿಗಳ ನೇರ ಸಂಪರ್ಕಕ್ಕೆ ಆಸ್ಪದ ನೀಡುವುದರಿಂದ ಸೋಂಕು ಹರಡುವ ಪ್ರಮುಖ ತಾಣಗಳಾಗಿವೆ ಎಂದು ವಿಶ್ಲೇಷಿಸಲಾಗಿದೆ.

ಜಗತ್ತಿನ ಜನಸಂಖ್ಯೆ ಇದೀಗ 900 ಕೋಟಿಗೆ ಹತ್ತಿರವಾಗಿದೆ. ಇಷ್ಟೊಂದು ಪ್ರಮಾಣದ ಜನರಿಗೆ ಆಹಾರ ಉತ್ಪಾದನೆ ಮಾಡುವುದೂ ಒಂದು ದೊಡ್ಡ ಸವಾಲಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ವನ್ಯಜೀವಿ ವಲಯವನ್ನು ಆಕ್ರಮಿಸುವ ಪರಿಪಾಟ ಜಗತ್ತಿನ ಎಲ್ಲ ಭಾಗಗಳಲ್ಲೂ ನಡೆದಿದೆ. ಪ್ರತಿವರ್ಷ 30 ಲಕ್ಷ ಹೆಕ್ಟೇರ್‌ನಷ್ಟು ಕಾಡು ಬಲಿಯಾಗುತ್ತಿದೆ ಎನ್ನುತ್ತವೆ ಸಂಶೋಧನಾ ವರದಿಗಳು.

ಆಧಾರ: ವೈಲ್ಡ್‌ಲೈಫ್‌ ಕನ್ಸರ್ವೇಷನ್ ಸೊಸೈಟಿ ಇಂಡಿಯಾ, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.