ADVERTISEMENT

ಕೊಬ್ಬರಿ: ಅರಳಿ ಮರದ ಕೆಳಗೆ ಪಿಸುಗುಡುವ ಬೆಲೆ!

ಎನ್.ಸಿದ್ದೇಗೌಡ
Published 27 ಏಪ್ರಿಲ್ 2019, 20:47 IST
Last Updated 27 ಏಪ್ರಿಲ್ 2019, 20:47 IST
ಕೊಬ್ಬರಿ ರಾಶಿ
ಕೊಬ್ಬರಿ ರಾಶಿ   

ತುಮಕೂರು: ಏಷ್ಯಾದ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಬೆಲೆ ಮಾತ್ರ ಪ್ರಾಂಗಣದಲ್ಲಿರುವ ಅರಳಿ ಮರದ ಕೆಳಗೆ ನಿರ್ಧಾರವಾಗುತ್ತದೆ.

ಹರಾಜಿನ ದಿನ ಮಧ್ಯಾಹ್ನ ಮೂರು ಗಂಟೆಯಾಗುತ್ತಿದ್ದಂತೆ ಅರಳಿ ಮರದ ಕೆಳಗೆ ಏಜೆಂಟರು ಗುಂಪು ಸೇರುತ್ತದೆ. ರವಾನೆದಾರರ ಕಡೆ ವ್ಯಕ್ತಿಯೊಬ್ಬ ಏಜೆಂಟರ ಕಿವಿಯಲ್ಲಿ ಏನೋ ಪಿಸುಗುಟ್ಟಿ ತೆರಳುತ್ತಾನೆ. ಅಲ್ಲಿಗೆ ಮಾರುಕಟ್ಟೆಯಲ್ಲಿ ಬೆಲೆ ನಿರ್ಧಾರವಾಗುತ್ತದೆ. ಆ ಬೆಲೆಯಿಂದ ಆಚೀಚೆ ಯಾರೂ ಹರಾಜು ಕೂಗುವುದಿಲ್ಲ! ಇದು ಎಪಿಎಂಸಿ ಅಧಿಕಾರಿಗಳು ಮತ್ತು ವರ್ತಕರ ನಡುವಿನ ಮಹಾ ‘‘ಮೈತ್ರಿ’’ಯ ವ್ಯವಸ್ಥೆ.

ಕೊಬ್ಬರಿ ಮಾರಾಟ ಕಥೆ ಎರಡು ರೀತಿಯದು, ತಿಪಟೂರು, ಅರಸೀಕೆರೆ ಎಪಿಎಂಸಿಯಲ್ಲಿರುವ ದಲ್ಲಾಳಿಗಳನ್ನು (ಎಪಿಎಂಸಿ ಲೈಸೆನ್ಸ್ ಪಡೆದವರು) ಏಜೆಂಟರು ಎಂದು ಕರೆಯಲಾಗುತ್ತದೆ. ಇವರು ರೈತರಿಂದ ಕೊಬ್ಬರಿಯನ್ನು ಹರಾಜಿಗೆ ಖರೀದಿಸುತ್ತಾರೆ. ಇವರಿಂದ ರವಾನೆದಾರರು ಕೊಬ್ಬರಿ ಪಡೆದು ಹೊರರಾಜ್ಯಗಳಿಗೆ ಹಾಗೂ ಹೊರದೇಶ ಗಳಿಗೆ ಕಳುಹಿಸುತ್ತಾರೆ. ಕೊಬ್ಬರಿ ರವಾನೆದಾರರ ಸಂಖ್ಯೆ ಏಳೆಂಟು ಮಂದಿ ಮಾತ್ರ. ಇವರೇ ಕೊಬ್ಬರಿ ಬೆಲೆಯನ್ನು ನಿರ್ಧರಿಸುವವರು. ಇವರು ಹಾಕಿದ ಗೆರೆಯನ್ನು ಏಜೆಂಟರು ದಾಟುವುದಿಲ್ಲ. ದಾಟಿದರೆ ಅವರಿಂದ ಕೊಬ್ಬರಿಯನ್ನು ಖರೀದಿಸುವವರೇ ಸಿಗುವುದಿಲ್ಲ.

ADVERTISEMENT

ಇದಕ್ಕೆ ಇತಿಶ್ರೀ ಹಾಕಲು ರಾಜ್ಯ ಸರ್ಕಾರ ಆನ್ ಲೈನ್ ಟ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಿತು. ‘ರೆಮ್ಸ್’ ಎಂಬ ಸಂಸ್ಥೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ ಕಮೀಷನ್ ಜೇಬಿಗಿಳಿಸುವ ಕೆಲಸ ಮಾಡುತ್ತದೆ. ಸುಧಾರಣೆ ಮಾತ್ರ ಆಗಲಿಲ್ಲ. ಆನ್‌ಲೈನ್‌ ಕೇವಲ ಕಾಗದದ ಮೇಲಿದೆ. ಈಗಲೂ ವ್ಯಾಪಾರ ಮೊದಲಿನಂತೆಯೇ ಆಗುತ್ತದೆ. ಏಜೆಂಟರು ಕೊಬ್ಬರಿ ತರುವ ರೈತರಿಗೆ ಬಿಳಿ ಚೀಟಿ ಕೈಗಿಡುತ್ತಾರೆ. ಚೀಲಕ್ಕೆ ಎರಡು- ಮೂರು ಕೆಜಿ ಕೊಬ್ಬರಿಗೆ ಕತ್ತರಿ ಹಾಕುತ್ತಾರೆ, ಆನ್‌ಲೈನ್ ಟ್ರೇಡಿಂಗ್ ನಲ್ಲಿ ವ್ಯಾಪಾರ ಮಾಡಿದ ಬಳಿಕ ಹಣವನ್ನು ರೈತರ ಖಾತೆಗೆ ಹಾಕಬೇಕು. ಆದರೆ ಇಲ್ಲಿ ಅದು ಜಾರಿಯಲ್ಲಿಯೇ ಇಲ್ಲ. ಎಪಿಎಂಸಿ ಆಡಳಿತಕ್ಕೆ ಕೇಳುವುದಿಲ್ಲ. ಆನ್‌ಲೈನ್‌ನಲ್ಲಿ ಈ ವರ್ಷ ಹೊರಗಿನಿಂದ ಬಿಡ್ ಕೂಗಿದ ಒಬ್ಬೇ ಒಬ್ಬ ವರ್ತಕನು ಇಲ್ಲ!

ಜಿಲ್ಲೆಯ ಎಲ್ಲ ಎಪಿಎಂಸಿಗಳ ಅಧಿಕಾರಿಗಳ ಮಹಾವಂಚನೆ ಏನೆಂದರೆ, ಹಳ್ಳಿ-ಹಳ್ಳಿಗಳಲ್ಲಿ ರಾಜಾರೋಷವಾಗಿ ಕೊಬ್ಬರಿ ಮಳಿಗೆಗಳಿದ್ದು, ಯಾವುದೇ ನಿಯಮ ಪಾಲಿಸದೇ ರೈತರಿಂದ ಕೊಬ್ಬರಿ ಖರೀದಿಸುತ್ತವೆ. ನಿಯಮದ ಪ್ರಕಾರ ಕೊಬ್ಬರಿಯನ್ನು ಎಪಿಎಂಸಿ ಹೊರಗೆ ಖರೀದಿ ಮಾಡುವಂತಿಲ್ಲ. ಇಲ್ಲಿಯ ರೈತರು, ಅಧಿಕಾರಿಗಳ ಬಾಯಲ್ಲಿ ಹೀಗೆ ಖರೀದಿ ಮಾಡು ವವರನ್ನು ಸೆಕೆಂಡ್ಸ್ ಖರೀದಿದಾರರು ಎನ್ನುತ್ತಾರೆ, ಇವರುಗಳು ಎಪಿಎಂಸಿಗೆ ಸರಿಯಾದ ಶುಲ್ಕವನ್ನೂ ಕಟ್ಟುವುದಿಲ್ಲ. ಸರ್ಕಾ ರಕ್ಕೆ ಜಿಎಸ್‌ಟಿಯನ್ನೂ ಪಾವತಿಸುವುದಿಲ್ಲ.

ತೆರಿಗೆ ತಪ್ಪಿಸಿ ಕಳ್ಳಮಾಲು ತೆಗೆದುಕೊಂಡು ಹೋಗುವ ಕೊಬ್ಬರಿ ಲಾರಿಗಳನ್ನು ರೈತ ಸಂಘದವರೇ ಎಪಿಎಂಸಿ ಅಧಿಕಾರಿಗಳಿಗೆ ಹಿಡಿದುಕೊಡುತ್ತಾರೆ. ಹೀಗೆ ಸಿಕ್ಕ ಲಾರಿಗಳಿಗೆ ಒಂದಿಷ್ಟು ದಂಡ ಹಾಕಿ ಎಪಿಎಂಸಿ ಅಧಿಕಾರಿಗಳು ಮೆಲ್ಲಗೆ ನಗುತ್ತಾರೆ. ‘ತಿಪಟೂರು, ಅರಸೀಕೆರೆ ಎಪಿಎಂಸಿ ಎನ್ನುವುದು ಅಧಿಕಾರಿಗಳಿಗೆ ದುಡ್ಡು ಮಾಡುವ ದಂಧೆಯ ನೆಚ್ಚಿನ ತಾಣ’ ಎಂಬುದನ್ನು ಹಲವು ಅಧಿಕಾರಿಗಳು, ಸಿಬ್ಬಂದಿ ಖಾಸಗಿಯಾಗಿ ಯಾವುದೇ ಎಗ್ಗಿಲ್ಲದೇ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.