ADVERTISEMENT

ಒಳನೋಟ| ಸಂಪರ್ಕ ಸಾಧಿಸಲು ವಿಫಲವಾದ ಭಾಷಾ ಸೇತುವೆ

ಮಾರುಕಟ್ಟೆ ಸಮಸ್ಯೆಯಿಂದ ಉಗ್ರಾಣದಲ್ಲೇ ರಾಶಿ ಬಿದ್ದ ಪುಸ್ತಕಗಳು

ವರುಣ ಹೆಗಡೆ
Published 24 ನವೆಂಬರ್ 2019, 1:14 IST
Last Updated 24 ನವೆಂಬರ್ 2019, 1:14 IST
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ   

ಬೆಂಗಳೂರು: ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ಎಂಬ ಹಿರಿಮೆಗೆ ಕನ್ನಡ ಭಾಜನವಾಗಿದೆ. ಈ ಭಾಷೆಯ ಶ್ರೀಮಂತ ಸಾಹಿತ್ಯವನ್ನು ಅಂತರರಾಷ್ಟ್ರೀಯ ಮಟ್ಟದ ಭಾಷೆಗಳ ಔನ್ನತ್ಯಕ್ಕೆ ಏರಿಸುವ ಉದ್ದೇಶದಿಂದ ಸರ್ಕಾರ ಪ್ರತ್ಯೇಕ ಪ್ರಾಧಿಕಾರವನ್ನೂ ಆರಂಭಿಸಿ, ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಅನುದಾನ ನೀಡುತ್ತಿದೆ. ಆದರೆ, ಪ್ರಕಟಗೊಂಡ ಅನುವಾದಿತ ಕೃತಿಗಳು ಎಷ್ಟು ಮಂದಿ ತಲುಪಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಅನುವಾದದ ಮಹತ್ವವನ್ನು ಮನಗಂಡ ಸರ್ಕಾರ 2005ರಲ್ಲಿ ಅನುವಾದ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿತು. ದೇಶದಲ್ಲಿಯೇ ಪ್ರಪ್ರಥಮವಾಗಿ ಪ್ರತ್ಯೇಕ ಅಕಾಡೆಮಿ ಪ್ರಾರಂಭಿಸಿದ ಹಿರಿಮೆಗೆ ರಾಜ್ಯ ಭಾಜನವಾಗಿತ್ತು. 2009ರಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ರಚನೆಯಾಗಿ, ಅಕಾಡೆಮಿಯನ್ನು ಅದರಲ್ಲಿ ವಿಲೀನ ಮಾಡಲಾಯಿತು. ಅನುವಾದ ಪ್ರಕಾರದ ಮೂಲಕವೇ ಕನ್ನಡದ ಶ್ರೇಷ್ಠ ಸಾಹಿತ್ಯ ಕೃತಿಗಳು ಮತ್ತು ನಾಡಿನ ಸಾಹಿತಿಗಳ ವಿಚಾರಧಾರೆಗಳನ್ನು ದೇಶದಾದ್ಯಂತ ಪಸರಿಸುವುದು ಪ್ರಮುಖ ಉದ್ದೇಶವಾಗಿತ್ತು. ಆದರೆ, ಅನುವಾದಿತ ಕೃತಿಗಳು ಓದುಗ ವರ್ಗದ ಕೈ ಸೇರಿಸುವಲ್ಲಿ ಪ್ರಾಧಿಕಾರ ವಿಫಲವಾಗಿದ್ದರಿಂದ ಉಗ್ರಾಣದಲ್ಲಿರುವ ಪುಸ್ತಕಗಳು ಇಲಿಗಳ ಆಶ್ರಯ ತಾಣವಾಗಿದೆ.

ಪ್ರಾಧಿಕಾರ ಆರಂಭವಾಗಿ ದಶಕ ಉರುಳಿದರೂ ಪ್ರಕಟಿತ ಕೃತಿಗಳಿಗೆ ಮಾರುಕಟ್ಟೆಯನ್ನು ನಿರ್ಮಿಸಿಕೊಳ್ಳಲು ಸಫಲವಾಗದೆ ಪುಸ್ತಕಗಳ ರಾಶಿಗಳ ನಡುವೆಯೇ ಧ್ಯೇಯೋದ್ದೇಶಗಳು ಕೂಡಾ ಮೂಲೆಗುಂಪಾಗುವ ಕಳವಳವನ್ನು ಅಲ್ಲಗಳೆಯುವಂತಿಲ್ಲ. ಅನುದಾನ ಬಳಕೆಯಲ್ಲೂ ಹಿಂದೆ ಬಿದ್ದಿದ್ದರಿಂದ ವಾರ್ಷಿಕ ಅನುದಾನವನ್ನು ಸರ್ಕಾರ ₹ 50 ಲಕ್ಷಕ್ಕೆ ಇಳಿಕೆ ಮಾಡಿರುವುದು ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅದೇ ರೀತಿ, ಪ್ರಾಧಿಕಾರದ ಕಟ್ಟಡದಲ್ಲಿಯೇ ರಾಷ್ಟ್ರೀಯ ನಾಟಕ ಶಾಲೆಗೆ (ಎನ್ಎಸ್‌ಡಿ) ಕೂಡಾ ಸ್ಥಳ ನೀಡಿರುವುದರಿಂದ ಕೆಲ ವರ್ಷಗಳಿಂದ ನಿಯಮಿತವಾಗಿ ಗೋಷ್ಠಿ, ಕಮ್ಮಟ ಹಾಗೂ ಕಾರ್ಯಾಗಾರಗಳು ನಡೆಯುತ್ತಿಲ್ಲ. ಅನುವಾದಕರ ಸಮಸ್ಯೆ ಹೆಚ್ಚಳವಾಗಲು ಇದು ಪ್ರಮುಖ ಕಾರಣ.

ADVERTISEMENT

‘ಅಂಬೇಡ್ಕರ್‌ ಸಂಪುಟಗಳು, ದೀನ ದಯಾಳ್‌ ಉಪಾಧ್ಯಾಯರ ಸಂಪುಟಗಳು, ಕಥಾಸರಿತ್ಸಾಗರ, ಸಂವಿಧಾನ ರಚನಾ ಸಭೆಯ ಚರ್ಚೆಗಳ ಸಂಪುಟಗಳಿಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ತಮಿಳು, ತೆಲುಗು, ಮರಾಠಿ, ಗುಜರಾತಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಿಗೆ ಅನುವಾದಗೊಂಡ ಕೃತಿಗಳ ಒಂದು ಪ್ರತಿ ಮಾರಾಟ ಮಾಡುವುದು ಸವಾಲಾಗಿದೆ’ ಎಂದು ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಡಾ.ಕೆ.ಮರುಳಸಿದ್ಧಪ್ಪ ಹೇಳುತ್ತಾರೆ.

‘ಕುವೆಂಪು ಅವರ ಕೃತಿಗಳು 15 ಭಾಷೆಗೆ ಅನುವಾದವಾಗಿದೆ. ಆದರೆ, ಅನ್ಯ ಭಾಷಿಕರಿಗೆ ಆ ಕೃತಿಯ ಮಹತ್ವ ಅರಿವಿಗೆ ಬಂದಿರುವುದಿಲ್ಲ.ಕಾನೂನು, ವಿಜ್ಞಾನ, ತಂತ್ರಜ್ಞಾನ, ಹಣಕಾಸು ಸೇರಿದಂತೆ ವಿವಿಧ ವಿಷಯದಲ್ಲಿ ಅನುವಾದಕರ ಸಮಸ್ಯೆ ಎದುರಾಗಿದ್ದರಿಂದ ಆ ಪ್ರಕಾರಗಳಲ್ಲಿ ಪ್ರಕಟಣೆ ಇಳಿಮುಖವಾಗಿವೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ್ ಭಟ್ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.