ADVERTISEMENT

ಒಳನೋಟ: ಆಟಕ್ಕೂ ಕೋವಿಡ್ ಕಾಟ

ಒಂದು ವರ್ಷದಲ್ಲಿ ಮುಚ್ಚಿದ ಎರಡು ಸಾವಿರಕ್ಕೂ ಹೆಚ್ಚು ಜಿಮ್‌

ಗಿರೀಶದೊಡ್ಡಮನಿ
Published 18 ಜುಲೈ 2021, 0:56 IST
Last Updated 18 ಜುಲೈ 2021, 0:56 IST
ಜಿಮ್ನಾಷಿಯಂವೊಂದರಲ್ಲಿ ಪರಿಕರಗಳನ್ನು ಸ್ಯಾನಿಟೈಸ್ ಮಾಡುತ್ತಿರುವುದು
ಜಿಮ್ನಾಷಿಯಂವೊಂದರಲ್ಲಿ ಪರಿಕರಗಳನ್ನು ಸ್ಯಾನಿಟೈಸ್ ಮಾಡುತ್ತಿರುವುದು   

ಬೆಂಗಳೂರು: ಧಾರವಾಡದ ದಿವ್ಯಾ ತಳವಾರ ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ಸ್‌ ಪದಕ ವಿಜೇತೆ. ಅಥ್ಲೆಟಿಕ್ಸ್‌ನಲ್ಲಿಯೂ ಸ್ಪರ್ಧಿಸುತ್ತಿದ್ದರು. ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ದಿವ್ಯಾ, ಬಡತನದಲ್ಲಿಯೇ ಈ ಸಾಧನೆ ಮಾಡಿದವರು. ಆದರೆ ಆಟೋ ಚಾಲಕರಾಗಿದ್ದ ಅಪ್ಪ ಕೊರೊನಾದ ಹೊಡೆತಕ್ಕೆ ಕೊನೆಯುಸಿರೆಳೆದ ನಂತರ ಕುಟುಂಬಕ್ಕೆ ದಿಕ್ಕುತೋಚದಂತಾಗಿದೆ. ದಿವ್ಯಾ ಮತ್ತು ಅವರ ತಂಗಿಯ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಗಾಗಿ ಅವರ ತಾಯಿ ಮನೆಗೆಲಸಕ್ಕೆ ಹೋಗುತ್ತಿದ್ದಾರೆ. ಬರುವ ಅಲ್ಪ ಆದಾಯವೇ ಆಸರೆ.

‘ಈ ಸಂಕಷ್ಟದಲ್ಲಿ ಕ್ರೀಡಾಪಟುವಾಗಿ ಮುಂದುವರಿಯುವುದು ಕಷ್ಟ. ಜಿಮ್‌ ಟ್ರೇನಿಂಗ್‌ ಅಲ್ಪಾವಧಿಯ ಕೋರ್ಸ್ ಮಾಡಿದ್ದೇನೆ. ಸಾಯ್‌ನಲ್ಲಿ ಜಿಮ್ನಾಸ್ಟಿಕ್ಸ್‌ ತರಬೇತಿ ಪಡೆದಿದ್ದೇನೆ. ಅದರ ಆಧಾರದಲ್ಲಿ ಕೋಚ್ ಹುದ್ದೆಗೆ ಪ್ರಯತ್ನಿಸಿದೆ. ಆದರೆ ಎನ್‌ಐಎಸ್ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್) ನಲ್ಲಿ ಕೋರ್ಸ್ ಮಾಡಬೇಕಂತೆ. ಆಗ ಮಾತ್ರ ನೌಕರಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಇಲಾಖೆಯಲ್ಲಿ ಹೇಳಿದರು. ನನಗೊಂದು ನೌಕರಿ ಸಿಕ್ಕರೆ, ಕ್ರೀಡೆ, ವಿದ್ಯಾಭ್ಯಾಸ ಮತ್ತು ಮನೆ ನಿರ್ವಹಣೆಗೆ ಸಹಾಯವಾಗುತ್ತದೆ‘ ಎಂದು ದಿವ್ಯಾ ಗದ್ಗದಿತರಾದರು.

ಖಾಸಗಿ ಕ್ರೀಡಾ ಕೇಂದ್ರಗಳಲ್ಲಿ ಸೇರಿಕೊಳ್ಳುವ ಅವರ ಪ್ರಯತ್ನಕ್ಕೂ ಫಲ ಸಿಕ್ಕಿಲ್ಲ.

ADVERTISEMENT

ಏಕೆಂದರೆ, ಜಿಮ್ನಾಷಿಯಂ, ಈಜುಕೇಂದ್ರ, ಹೆಲ್ತ್ ಮತ್ತು ಫಿಟ್‌ನೆಸ್‌ ಸಂಸ್ಥೆಗಳು ನಷ್ಟದಲ್ಲಿವೆ. ಫಿಟ್‌ನೆಸ್‌ಗಾಗಿ ಕ್ರೀಡಾಪಟುಗಳು, ಯುವಕ– ಯುವತಿಯರು ಜಿಮ್‌ಗಳಿಗೆ ಹೋಗುತ್ತಿದ್ದರು. ಆದರೆ, ಕೊರೊನಾದ ಎರಡು ಅಲೆಗಳಲ್ಲಿ ಜಿಮ್, ಈಜು ಕೇಂದ್ರಗಳು ಮುಚ್ಚಿದ್ದು ಅಪಾರ ನಷ್ಟ ಅನುಭವಿಸಿದವು.

‘ರಾಜ್ಯದ ಸುಮಾರು ಹತ್ತು ಸಾವಿರ ಜಿಮ್ನಾಷಿಯಂಗಳ ಪೈಕಿ ಎರಡು ಸಾವಿರಕ್ಕೂ ಹೆಚ್ಚು ಬಾಗಿಲು ಹಾಕಿವೆ. ನಿರ್ವಹಣೆ ಮಾಡಲಾಗದೆ, ಕಟ್ಟಡ ಬಾಡಿಗೆ, ಬ್ಯಾಂಕ್ ಸಾಲ ಕಟ್ಟಲಾಗದೆ ಮಾಲೀಕರು ಕೈಚೆಲ್ಲಿದರು. ಟ್ರೇನರ್‌ಗಳು, ಸಿಬ್ಬಂದಿ ನಿರುದ್ಯೋಗಿಗಳಾದರು. ಹೊಟ್ಟೆಪಾಡಿಗೆ ಬೇರೆ ಉದ್ಯೋಗ ಅರಸಿ ಹೊರಟರು. ಸರ್ಕಾರವು ನಮಗಾಗಿ ಯಾವುದೇ ಪ್ಯಾಕೇಜ್ ಘೋಷಿಸಲಿಲ್ಲ. ಈಗ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ‘ ಎಂದು ಕರ್ನಾಟಕ ಜಿಮ್ ಮತ್ತು ಫಿಟ್‌ನೆಸ್ ಮಾಲೀಕರ ಸಂಘದ ಅಧ್ಯಕ್ಷ ರವಿಕುಮಾರ್ ಹೇಳುತ್ತಾರೆ.

ಇದು ಒಬ್ಬಿಬ್ಬರು ಕ್ರೀಡಾಪಟುಗಳ ಕಥೆಯಲ್ಲ. ಅದರಲ್ಲೂ ದೈಹಿಕವಾಗಿ ನಿಕಟ ಸಂಪರ್ಕಕ್ಕೆ ಬರುವ ಆಟಗಳಾದ ಬಾಕ್ಸಿಂಗ್, ಕುಸ್ತಿ, ಜುಡೊ, ಕರಾಟೆ, ಕಳರಿಪಯಟ್ಟು ತರಬೇತಿ ಬಹುತೇಕ ಸ್ತಬ್ಧವಾಗಿದೆ. ಫುಟ್‌ ಬಾಲ್, ಬ್ಯಾಸ್ಕೆಟ್‌ಬಾಲ್‌ ಕ್ರೀಡಾಚಟುವಟಿಕೆಗಳು ಗರಿಗೆದರಿಲ್ಲ. ಹಾಕಿ, ವಾಲಿಬಾಲ್, ಕಬಡ್ಡಿ ಟೂರ್ನಿಗಳು ನೇಪಥ್ಯಕ್ಕೆ ಸರಿದಿವೆ. ಪ್ರೊ ಕಬಡ್ಡಿ ಲೀಗ್‌ನಂತಹ ಜನಪ್ರಿಯ ಟೂರ್ನಿಯೂ ಎರಡು ವರ್ಷಗಳಿಂದ ನಡೆದಿಲ್ಲ. ಅಭ್ಯಾಸವಿಲ್ಲದೇ ಕ್ರೀಡಾಪಟುಗಳ ಫಿಟ್‌ನೆಸ್ ಕ್ಷೀಣಿಸಿದೆ. ಕ್ರೀಡೆಗಳನ್ನೇ ನೆಚ್ಚಿಕೊಂಡು ಬದುಕುವವರ ಜೀವನ ಒಂದೂವರೆ ವರ್ಷದಿಂದ ಏರುಪೇರಾಗಿದೆ. ಶ್ರೀಮಂತಿಕೆ ಜಗಮಗಿಸುವ ಕ್ರಿಕೆಟ್‌ ಅಂಗಳದಲ್ಲೂ ಕತ್ತಲೆ ಇದೆ!

ಬೆಂಗಳೂರಿನ ಮಧ್ಯಮವರ್ಗದ ಕುಟುಂಬದ ಆ ಹುಡುಗ (ಹೆಸರು ಬೇಡ) ರಾಜ್ಯ ಕ್ರಿಕೆಟ್ ತಂಡದಲ್ಲಿ ಆಡುವಷ್ಟು ಪ್ರತಿಭಾವಂತ. ಮಗನ ಕ್ರಿಕೆಟ್‌ಪ್ರೀತಿಯನ್ನು ಅಪ್ಪ–ಅಮ್ಮ ಪೋಷಿಸಿದ್ದರು. ಆದರೆ, ಕೊರೊನಾ ಹೊಡೆತಕ್ಕೆ ಅಪ್ಪನ ಬಿಸಿನೆಸ್ ಮಂಕಾಯಿತು. ಅನಿವಾರ್ಯವಾಗಿ ಕ್ರಿಕೆಟ್ ಕಿಟ್ ಮೂಲೆಗಿಟ್ಟಮಗ, ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ. ನಿತ್ಯ 9–10 ತಾಸುಗಳ ಕೆಲಸ; ಕ್ರಿಕೆಟ್ ಅಭ್ಯಾಸಕ್ಕೆ ಈಗ ಸಮಯವೇ ಇಲ್ಲ.

ಮತ್ತೊಂದೆಡೆ; ಕ್ರಿಕೆಟ್ ಅಂಪೈರಿಂಗ್, ಕೋಚಿಂಗ್ ಮಾಡುತ್ತ 25 ವರ್ಷಗಳಿಂದ ಬೆಂಗಳೂರಿನಲ್ಲಿದ್ದ ರಮೇಶ್ (ಹೆಸರು ಬದಲಿಸಲಾಗಿದೆ) ಕೋವಿಡ್‌ ಮೊದಲ ಅಲೆ ಸಂದರ್ಭದಲ್ಲೇ ಮಲೆನಾಡಿನ ತಮ್ಮೂರು ಸೇರಿಕೊಂಡಿದ್ದಾರೆ.

‘ಬದುಕು ದುಸ್ತರವಾಗಿದೆ. ನನ್ನ ಪತ್ನಿ ಹೊಸೆದುಕೊಡುವ ಹತ್ತಿ ಬತ್ತಿ ಮಾರುತ್ತೇನೆ. ಒಡವೆ ಅಡವಿಟ್ಟು ಮಕ್ಕಳ ಶಾಲಾ ಶುಲ್ಕ ಕಟ್ಟಿದ್ದೇನೆ. ಹೋದ ಸಲ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸ್ವಲ್ಪ ಸಾಲ ಸಹಾಯ ನೀಡಿದ್ದು ಆಸರೆಯಾಗಿತ್ತು‘ ಎನ್ನುತ್ತಾರೆ ರಮೇಶ್.

ಇದರೊಂದಿಗೆ, ‘ಗೃಹಬಂಧನ’ದಲ್ಲಿರುವ ಮಕ್ಕಳು ಆನ್‌ಲೈನ್, ಟಿವಿ ವೀಕ್ಷಣೆಯ ಗೀಳಿಗೆ ಬೀಳುತ್ತಿದ್ದು, ಮನೋದೈಹಿಕ ತೊಂದರೆಗಳಿಂದ ಬಳಲುತ್ತಿದ್ದಾರೆ.

ಇನ್ನೊಂದೆಡೆ, ಶಾಲೆಗಳಿಲ್ಲದೇ, ಕ್ರೀಡಾ ಚಟುವಟಿಕೆಗಳೂ ನಡೆಯದೇ ಕ್ರೀಡಾ ಸಾಮಗ್ರಿ ವಹಿವಾಟು ನೆಲಕಚ್ಚಿದೆ. ಬೆಂಗಳೂರಿನ ಹಳೆಯದಾದ ‘ಹ್ಯಾಟ್ರಿಕ್ ಸ್ಪೋರ್ಟ್ಸ್‌’ ತನ್ನ ಮಳಿಗೆಗಳನ್ನು ಮುಚ್ಚುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿ, ಐಪಿಎಲ್ ಮತ್ತು ಒಲಿಂಪಿಕ್ಸ್‌ನಂಥ ಕೂಟಗಳು ನಡೆದಾಗ ಬಹಳಷ್ಟು ಮಕ್ಕಳು, ಯುವಜನ ಆಟದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಅದೇ ಹುರುಪಿನಲ್ಲಿ ಬೀದಿಗಿಳಿದು ಆಡಲೂ ಮುಂದಾಗುತ್ತಾರೆ. ಆಗಲೂ ಕ್ರೀಡಾ ಪರಿಕರಗಳ ವಹಿವಾಟು ನಡೆಯುತ್ತದೆ. ಇದೇ ತಿಂಗಳ 23ರಿಂದ ಆಗಸ್ಟ್‌ 8ರವರೆಗೆ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಸಮಯದಲ್ಲಿಯಾದರೂ ತುಸು ಚೇತರಿಕೆ ಕಾಣುವುದೇ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.