ADVERTISEMENT

ಒಳನೋಟ: ಎಲೆಕ್ಟ್ರಿಕ್‌ ಬಸ್‌ಗಳ ತಯಾರಿಯಲ್ಲೇ ಇದೆ ಕೆಎಸ್‌ಆರ್‌ಟಿಸಿ

ಇ–ಬಸ್ ಯುಗ: 6 ವರ್ಷಗಳ ಬಳಿಕ ಪರಿಕ್ಷಾರ್ಥ ಸಂಚಾರ ಆರಂಭಿಸಿದ ಬಿಎಂಟಿಸಿ

ವಿಜಯಕುಮಾರ್ ಎಸ್.ಕೆ.
Published 10 ಅಕ್ಟೋಬರ್ 2021, 2:48 IST
Last Updated 10 ಅಕ್ಟೋಬರ್ 2021, 2:48 IST
ಇ–ಬಸ್
ಇ–ಬಸ್   

ಬೆಂಗಳೂರು: ಬಿಎಂಟಿಸಿ ಮೂಲಕ ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ ಆರಂಭಿಸುವ ಕಾಲ ಕೊನೆಗೂ ಸನ್ನಿಹಿತವಾಗಿದೆ. ಆದರೆ, ಕೆಎಸ್‌ಆರ್‌ಟಿಸಿಗೆ ಮಾತ್ರ ಇನ್ನೂ ಕಾಲ ಕೂಡಿ ಬಂದಿಲ್ಲ.

ಡೀಸೆಲ್ ಬಸ್‌ಗಳಿಗೆ ಬದಲಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿಗೆ ಪರಿಚಯಿಸುವ ಪ್ರಸ್ತಾಪ ಇಂದು–ನಿನ್ನೆಯದಲ್ಲ. 2015ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರದ ‘ಫೇಮ್–1’ ಯೋಜನೆ ಆರಂಭವಾಯಿತು. 80 ಬಸ್‌ಗಳನ್ನು ರಸ್ತೆಗಳಿಸಲು ಸುಮಾರು ₹18.68 ಕೋಟಿ ನೆರವು ನೀಡಿತ್ತು. ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಬೇಕೋ, ಗುತ್ತಿಗೆ ಆಧಾರದಲ್ಲಿ ಪಡೆಯಬೇಕೋ ಎಂಬ ಕಗ್ಗಂಟಿನಲ್ಲೇ ಬಿಎಂಟಿಸಿ ಕಾಲ ತಳ್ಳಿದ್ದರಿಂದ ಆ ಹಣ ಬಳಕೆಯಾಗಲೇ ಇಲ್ಲ.

‌ಎರಡನೇ ಹಂತದ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಷರತ್ತು ವಿಧಿಸಿತು. ಆದರೆ, ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವುದು ಬೇಡ, ಖರೀದಿಸಬೇಕು ಎಂದು ಆಗಿನ ಸಾರಿಗೆ ಸಚಿವರು ಪಟ್ಟು ಹಿಡಿದಿದ್ದರಿಂದ ಯೋಜನೆ ಒಂದಷ್ಟು ಕಾಲ ನನೆಗುದಿಗೆ ಬಿದ್ದಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಟೆಂಡರ್ ಪ್ರಕ್ರಿಯೆಗೆ 2021ರಲ್ಲಿ ಕೊನೆಗೂ ಒಪ್ಪಿಗೆ ದೊರೆತಿದೆ. ಅಶೋಕ್ ಲೇಲ್ಯಾಂಡ್ ಕಂಪನಿ ಮೂಲಕ 300 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 12 ಮೀಟರ್ ಉದ್ದದ ಬಸ್‌ಗಳು ಆರು ತಿಂಗಳಲ್ಲಿ ರಸ್ತೆಗೆ ಇಳಿಯಲಿವೆ.

ADVERTISEMENT

ಮೊದಲ ಹಂತದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ 90 ಬಸ್‌ಗಳನ್ನು (9 ಮೀಟರ್ ಉದ್ದದ ಬಸ್) ಡಿಸೆಂಬರ್‌ ವೇಳೆಗೆ ರಸ್ತೆಗೆ ಇಳಿಸಲು ಬಿಎಂಟಿಸಿ ಮುಂದಾಗಿದೆ. ಗುತ್ತಿಗೆ ಪಡೆದಿರುವ ಕಂಪನಿಯೇ (ಜೆಬಿಎಂ) ಎನ್‌ಟಿಪಿಸಿ ಸಹಯೋಗದಲ್ಲಿ ಬಸ್‌ಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ನಡೆಸಲಿದೆ. ಆಡಳಿತ ಮಂಡಳಿ ಒಪ್ಪಿಗೆ ದೊರೆತರೆ ಮುಂದಿನ ಆರು ತಿಂಗಳಲ್ಲಿ ಕೆಎಸ್‌ಆರ್‌ಟಿಸಿಗೂ 50 ಎಲೆಕ್ಟ್ರಿಕ್ ಬಸ್‌ಗಳು ಬರಲಿವೆ.

ಖಾಸಗೀಕರಣದ ಹುನ್ನಾರ: ಆರೋಪ
ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನುಖಾಸಗಿ ಕಂಪನಿಗಳ ಮೂಲಕ ಮಾಡಿಸುವುದಕ್ಕೆ ಸಾರಿಗೆ ಸಂಸ್ಥೆಗಳ ನೌಕರರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

‘ಪರಿಸರದ ದೃಷ್ಟಿಯಿಂದ ಇ–ಬಸ್‌ಗಳಿಗೆ ಒಗ್ಗಿಕೊಳ್ಳಬೇಕಿದೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಸಹಾಯಧನವನ್ನು ಖಾಸಗಿ ಕಂಪನಿಗಳಿಗೆ ಕೊಡುವ ಬದಲು ಅದನ್ನು ಸಾರಿಗೆ ನಿಗಮಗಳಿಗೇ ಕೊಟ್ಟು ಅವುಗಳ ಮೂಲಕವೇ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಿಸಬೇಕು’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ನ (ಸಿಐಟಿಯು ಸಂಯೋಜಿತ) ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಹೇಳುತ್ತಾರೆ.

‘ಒಪ್ಪಂದದ ಪ್ರಕಾರ ದಿನಕ್ಕೆ ₹9 ಸಾವಿರಕ್ಕೂ ಹೆಚ್ಚು ಮೊತ್ತವನ್ನು ಒಂದು ಎಲೆಕ್ಟ್ರಿಕ್ ಬಸ್‌ ನಿರ್ವಹಣೆಗೆ ಖಾಸಗಿ ಕಂಪನಿಗೆ ನೀಡಬೇಕಿದೆ. ಒಂದು ಬಸ್‌ನಿಂದ ಟಿಕೆಟ್‌ ರೂಪದಲ್ಲಿ ಬರುವ ವರಮಾನ ₹5 ಸಾವಿರದಿಂದ ₹6 ಸಾವಿರ ದಾಟುವುದೇ ದೊಡ್ಡ ವಿಷಯ. ಉಳಿದ ₹3 ಸಾವಿರದಿಂದ ₹4 ಸಾವಿರವನ್ನು ಬೇರೆ ಬಸ್‌ಗಳಿಂದ ಬರುವ ವರಮಾನದಿಂದ ತುಂಬಿಕೊಡಬೇಕಾಗುತ್ತದೆ’ ಎಂದರು.

‘ಚಾಲಕ ಮತ್ತು ತಾಂತ್ರಿಕ ಸಿಬ್ಬಂದಿಗಳ ಉದ್ಯೋಗಕ್ಕೆ ಕುತ್ತು ಬರಲಿದೆ. ‍ಪರಿಸರ ಮಾಲಿನ್ಯ ತಪ್ಪಿಸುವ ನೆಪದಲ್ಲಿ ಕ್ರಮೇಣ ಈ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಹುನ್ನಾರ ಇದರ ಹಿಂದಿದೆ’ ಎಂದು ಹೇಳಿದರು.

*
ಆಡಳಿತ ಮಂಡಳಿಯ ಸಭೆಯಲ್ಲಿ ಒಪ್ಪಿಗೆ ಸಿಕ್ಕರೆ ಕೆಎಸ್‌ಆರ್‌ಟಿಸಿಗೆ ಶೀಘ್ರವೇ 50 ಎಲೆಕ್ಟ್ರಿಕ್‌ ಬಸ್‌ಗಳು ಬರಲಿವೆ. ಮುಂದಿನ 3 ವರ್ಷಗಳಲ್ಲಿ 1,500 ಬಸ್‌ಗಳನ್ನು ಪಡೆಯುವ ಉದ್ದೇಶ ಇದೆ.
–ಶಿವಯೋಗಿ ಸಿ. ಕಳಸದ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.