ADVERTISEMENT

ಒಳನೋಟ | ರಾಜ್ಯದಲ್ಲಿ ವಿದೇಶಿ ಹಣ್ಣುಗಳ ದಿಬ್ಬಣ

ಬೆಳೆಗಾರರಿಗೆ ಬೇಕಿದೆ ಮಾರ್ಗದರ್ಶನ * ನಡೆಯಬೇಕಿದೆ ಸಂಶೋಧನೆ, ಮಾರುಕಟ್ಟೆ ಅಧ್ಯಯನ

ಗಾಣಧಾಳು ಶ್ರೀಕಂಠ
Published 14 ಜೂನ್ 2025, 23:30 IST
Last Updated 14 ಜೂನ್ 2025, 23:30 IST
<div class="paragraphs"><p>ವಿದೇಶಿ ಹಣ್ಣುಗಳ ದಿಬ್ಬಣ</p></div>

ವಿದೇಶಿ ಹಣ್ಣುಗಳ ದಿಬ್ಬಣ

   

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಬೆಳ್ತಂಗಡಿ ಭಾಗದಲ್ಲಿ ಸುತ್ತಾಡುತ್ತಿದ್ದರೆ ತೆಂಗು–ಅಡಿಕೆ ತೋಟಗಳ ನಡುವೆ ಬಿಳಿ ಬಲೆಗಳನ್ನು ಹೊದ್ದ ಮರಗಳ ದರ್ಶನವಾಗುತ್ತದೆ. ಅವೆಲ್ಲ ರಂಬುಟಾನ್‌ ಹಣ್ಣಿನ ತೋಟಗಳು. ಹಣ್ಣಗಳನ್ನು ಪಕ್ಷಿಗಳಿಂದ ರಕ್ಷಿಸಲು ಮರಗಳಿಗೆ ಹೊದಿಸಿರುವ ಬಲೆಗಳು..!

ವಿಜಯನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಕೆಲ ಊರುಗಳಲ್ಲಿ ಕೃಷಿ ಜಮೀನುಗಳತ್ತ ಅಡ್ಡಾಡುತ್ತಿದ್ದರೆ, ಎಕರೆಗಟ್ಟಲೆ ಸಾಲು ಕಂಬಗಳ ಮೇಲೆ ಕಳ್ಳಿಯಂತಹ ಬಳಿಗಳು ಜೋತುಬಿದ್ದು, ಮುಳ್ಳಿನ ಆಕಾರದ ಕೆಂಪು, ಬಿಳಿ ಹಣ್ಣುಗಳು ಜೋತಾಡುತ್ತಿರುತ್ತವೆ. ಅವೆಲ್ಲ ಡ್ರ್ಯಾಗನ್ ಫ್ರೂಟ್ ಬೆಳೆಯುವ ಜಮೀನುಗಳು..!

ADVERTISEMENT

ಕೊಡಗಿನ ಕಾಫಿ ತೋಟಗಳು, ಹಾಸನ, ಶಿವಮೊಗ್ಗ, ದೊಡ್ಡಬಳ್ಳಾಪುರದ ಭಾಗದ ತೆಂಗಿನ ತೋಟಗಳ ಸಾಲಿನಲ್ಲಿ ಹಸಿರು ಲೋಲಾಕಿನಂತಹ ಕಾಯಿಗಳು ತೊನೆದಾಡುವ ಮರಗಳ ಸಾಲು ಇಣುಕುತ್ತವೆ. ಅವೆಲ್ಲ ಅವಕಾಡೊ ಅರ್ಥಾತ್ ಬೆಣ್ಣೆಹಣ್ಣಿನ (ಬಟರ್‌ಫ್ರೂಟ್‌) ತೋಟಗಳು !

ಮೂರ್ನಾಲ್ಕು ದಶಕಗಳಿಂದಲೂ ರಾಜ್ಯದ ವಿವಿಧೆಡೆ ಹವ್ಯಾಸಕ್ಕಾಗಿ ವಿದೇಶಿ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಈಗಲೂ ಹವ್ಯಾಸಿ ಬೆಳೆಗಾರರ ತೋಟಗಳಲ್ಲಿ 250ಕ್ಕೂ ಹೆಚ್ಚು ವಿಧದ ವಿದೇಶಿ ಹಣ್ಣುಗಳಿವೆ. ಈ  ಹಣ್ಣುಗಳ ದಿಬ್ಬಣದಲ್ಲಿ ಮಲೇಷ್ಯಾದ ರಂಬುಟಾನ್, ದುರಿಯನ್, ಮೆಕ್ಸಿಕೊ ದೇಶದ ಡ್ರ್ಯಾಗನ್ ಫ್ರೂಟ್, ಅವಕಾಡೊ, ಥಾಯ್ಲೆಂಡ್‌ನ ಮ್ಯಾಂಗೊಸ್ಟಿನ್, ಬ್ರೆಜಿಲ್‌–ಪೆರುವಿನ ಅಬಿಯು, ಫ್ರಾನ್ಸ್‌ನ ಮೆಕೆಡೊನಿಯಾ, ಗ್ರ್ಯಾಕ್ ಫ್ರೂಟ್‌, ಮಿಲ್ಕಿ ಫ್ರೂಟ್, ಲಾಂಗ್‌ಆನ್‌ನಂತಹ ಹಣ್ಣುಗಳು ಸೇರಿಕೊಂಡಿವೆ. ಇದರಲ್ಲಿ ನಾಲ್ಕೈದು ಹಣ್ಣುಗಳನ್ನು ಸಾವಿರಾರು ಎಕರೆಗಳಲ್ಲಿ ಬೆಳಯಲಾಗುತ್ತಿದ್ದು, ಕೋಟಿಗಳ ಲೆಕ್ಕದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ.  .   

ಪರ್ಯಾಯ ಬೆಳೆಗಳಾಗಿ..  

ದಾಳಿಂಬೆಯಲ್ಲಿ ಸೋತ ಹಗರಿಬೊಮ್ಮನಳ್ಳಿಯ ಕೆಲ ರೈತರು ಡ್ರ್ಯಾಗನ್‌ಫ್ರೂಟ್‌ ಬೆಳೆಯುತ್ತಿದ್ದಾರೆ. ಬೇಡಿಕೆ, ಬೆಲೆ ಗಮನಿಸಿ ದಕ್ಷಿಣ ಕನ್ನಡ, ಕೊಡಗು, ಮಲೆನಾಡಿನ ಕೆಲ ಭಾಗಗಳಲ್ಲಿ ಅಡಿಕೆ, ತೆಂಗಿನ ತೋಟಗಳ ನಡುವೆ ಅಂತರ ಬೆಳೆಯಾಗಿ ರಂಬುಟಾನ್, ಮ್ಯಾಂಗೊಸ್ಟಿನ್ ಬೆಳೆಯಲು ಆರಂಭಿಸಿದ್ದಾರೆ. ಸುಲಭವಾಗಿ ಬೆಳೆಯುತ್ತದೆ, ಮಾರುಕಟ್ಟೆಯೂ ಚೆನ್ನಾಗಿದೆ ಎನ್ನುತ್ತಾ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂರಾರು ರೈತರು ತೆಂಗಿನ ನಡುವೆ ಅಂತರ ಬೆಳೆಯಾಗಿ ಬೆಣ್ಣೆ ಹಣ್ಣು ಬೆಳೆಯುತ್ತಿದ್ದಾರೆ. 

ಕೃಷಿ, ತೋಟಗಾರಿಕೆಯಲ್ಲಿ ಅಷ್ಟಾಗಿ ಅನುಭವವಿಲ್ಲದವರು ವಿದೇಶಿ ಹಣ್ಣುಗಳ ಬೆಳೆಯುವ ಸಾಹಸಕ್ಕಿಳಿದಿದ್ದಾರೆ. ಕಾರ್ಪೊರೇಟ್ ಉದ್ಯೋಗ ತೊರೆದು ಈ ಹಣ್ಣಿನ ಕೃಷಿಗೆ ಏರಿದವರಿದ್ದಾರೆ. ದೂರದ ನಗರಗಳಲ್ಲಿದ್ದುಕೊಂಡೇ ತಮ್ಮ ತಮ್ಮ ಹಳ್ಳಿಗಳಲ್ಲಿ ವಾರಾಂತ್ಯದ ಕೃಷಿ ಮೂಲಕ, ವೈಜ್ಞಾನಿಕವಾಗಿ, ಶಿಸ್ತುಬದ್ಧವಾಗಿ ಈ ಹಣ್ಣುಗಳ ಕೃಷಿ ಮಾಡುವವರೂ ಇದ್ದಾರೆ.

ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ 12 ಸಾವಿರದಿಂದ 13 ಸಾವಿರ ಎಕರೆ ಪ್ರದೇಶದಲ್ಲಿ ವಿದೇಶಿ ಹಣ್ಣುಗಳನ್ನು ವಾಣಿಜ್ಯವಾಗಿ ಬೆಳೆಯುತ್ತಿದ್ದಾರೆ. ಇದು ಲೆಕ್ಕಕ್ಕೆ ಸಿಕ್ಕಿರುವುದು. ಇದಕ್ಕಿಂತೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಡ್ರ್ಯಾಗನ್ ಫ್ರೂಟ್‌ ಹಣ್ಣಿನದ್ದು ಸಿಂಹಪಾಲು. ನಂತರದ ಸ್ಥಾನ ಅವಕಾಡೊ ಹಣ್ಣಿಗೆ.

ರಾಜ್ಯದಲ್ಲಿ ಸುಮಾರು ಆರು ಸಾವಿರ ಎಕರೆಯಷ್ಟು ಡ್ರ್ಯಾಗನ್ ಫ್ರೂಟ್ ಕೃಷಿಯಿದೆ. ಐದು ಸಾವಿರ ಎಕರೆಯಲ್ಲಿ ಅವಕಾಡೊ, ಮೂರು ಸಾವಿರ ಎಕರೆ ರಂಬುಟಾನ್, ಮ್ಯಾಂಗೊಸ್ಟಿನ್ ಇದೆ. ದುರಿಯನ್, ಲಿಚಿ, ಸ್ಟ್ರಾಬೆರಿ, ಮೆಕೆಡೆಮಿಯಾ, ಅಬಿಯು ಮತ್ತಿತರರ ವಿದೇಶಿ ಹಣ್ಣುಗಳು ಸೇರಿ 2 ಸಾವಿರ ಎಕರೆ ಇರಬಹುದೆಂದು ಬೆಳೆಗಾರರು, ವಿಜ್ಞಾನಿಗಳು ಅಂದಾಜಿಸುತ್ತಾರೆ. ಆದರೆ ತೋಟಗಾರಿಕೆ ಇಲಾಖೆಯ ಅಂಕಿ ಅಂಶಗಳಲ್ಲಿ ವಿದೇಶಿ ಹಣ್ಣುಗಳ ಮಾಹಿತಿಗೂ ವಾಸ್ತವವಾಗಿರುವುದಕ್ಕೂ ಅಜಗಜಾಂತರವಿದೆ. 

ರೈತರಾದ ಬಣಕಾರ ರುದ್ರಪ್ಪ ಶಿವನಾಗಪ್ಪ ಸಹೋದರರ ತೋಟದಲ್ಲಿ ಬೆಳೆದಿರುವ ಡ್ರ್ಯಾಗನ್‌ ಫ್ರೂಟ್‌ 

ವ್ಯಾಪಕವಾದ ಡ್ರ್ಯಾಗನ್‌ ಫ್ರೂಟ್‌ 

ನಾಟಿ ಮಾಡಿದ ಒಂದು ವರ್ಷದೊಳಗೆ ಫಸಲು ನೀಡುವ ಡ್ರ್ಯಾಗನ್‌ಫ್ರೂಟ್‌ಹಣ್ಣಿನ ಬೆಳೆ, ಬೀದರ್‌ನಿಂದ ಚಾಮರಾಜನಗರದವರೆಗೂ ವಿಸ್ತರಿಸಿಕೊಂಡಿದೆ. ‘ಕೆಫಾ’ದ 600 ಸದಸ್ಯರು 3 ಸಾವಿರ ಎಕರೆಯಲ್ಲಿ ಈ ಹಣ್ಣಿನ ಕೃಷಿ ಮಾಡುತ್ತಿದ್ದಾರೆ. ಕೆಲವರು ಆಫ್‌ ಸೀಸನ್‌ನಲ್ಲಿ ಕೃತಕ ಬೆಳೆಕಿನಲ್ಲಿ(ಲೈಟ್‌) ಡ್ರ್ಯಾಗನ್ ಫ್ರೂಟ್ ಕೃಷಿ ಮಾಡುತ್ತಿದ್ದಾರೆ. ‘ಈ ವರ್ಷ ಈ ಹಣ್ಣಿನ ಕೃಷಿ ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಉತ್ಪಾದನೆ ಪ್ರಮಾಣವೂ 50 ಸಾವಿರ ಟನ್ ದಾಟಬಹುದು’ ಎಂದು ಅಂದಾಜಿಸುತ್ತಾರೆ ಮುಂಡರಗಿಯ ಮನ್ನೆ ವೇಣುಗೋಪಾಲಕೃಷ್ಣ. ಇವರು 10 ವರ್ಷಗಳಿಂದ 7 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ವಿದೇಶಿ ಹಣ್ಣುಗಳ ಕೃಷಿ ಮಾಡುತ್ತಿದ್ದಾರೆ.

‘ಎಕರೆಗೆ ನಾಲ್ಕೈದು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಕೃಷಿ ಆರಂಭಿಸಿದರೆ, ಎರಡನೇ ವರ್ಷದಿಂದ ಫಸಲು ಆರಂಭ. ಸಮರ್ಪಕ ನಿರ್ವಹಣೆ ಇದ್ದರೆ ಪ್ರತಿ ವರ್ಷ ಗರಿಷ್ಠ 20 ಟನ್‌ವರೆಗೂ ಇಳುವರಿ ಪಡೆಯಬಹುದು‘ ಎನ್ನುವುದು ವಿದೇಶಿ ಹಣ್ಣುಗಳ ಬೆಳೆಗಾರ ಬೆಂಗಳೂರಿನ ಅರುಣ್‌ ಮಾತು. ಇವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ಸಮೀಪ 15 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ನಾಲ್ಕು ವರ್ಷಗಳಿಂದ ಫಸಲು ಪಡೆದು ಮಾರ್ಕೆಟ್‌ಮಾಡುತ್ತಿದ್ದಾರೆ.

ಕೆ.ಜಿ. ಹಣ್ಣಿಗೆ ₹80ರಿಂದ ₹150ರವರೆಗೂ ಬೆಲೆ ಇರುತ್ತದೆ. ಸೀಸನ್‌ನಲ್ಲಿ ₹220 ರವರೆಗೂ ಹೋಗುತ್ತದೆ. ಗಾತ್ರ, ಗುಣಮಟ್ಟ, ಸೀಸನ್‌ಗೆ ಅನುಗುಣವಾಗಿ ಬೆಲೆ ಏರಿಳಿತ ಸಾಮಾನ್ಯ ಎನ್ನುತ್ತಾರೆ ಬೆಳೆಗಾರರು.

ಹೆಸರಘಟ್ಟದ ಐಐಎಚ್‌ಆರ್‌ನ ವಿಜ್ಞಾನಿ ಡಾ. ಜಿ. ಕರುಣಾಕರನ್, ಡ್ರ್ಯಾಗನ್ ಫ್ರೂಟ್‌ ಬೆಳೆಯುವ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ‘ಐಐಎಚ್‌ಆರ್‌ನಲ್ಲಿ ಡ್ರ್ಯಾಗನ್ ಫ್ರೂಟ್‌ ಮೌಲ್ಯರ್ಧಿಸಿ  ಜ್ಯೂಸ್, ಜ್ಯಾಮ್, ಪುಡಿಗಳನ್ನು ತಯಾರಿಸಲಾಗುತ್ತಿದೆ. ಈ ತಂತ್ರಜ್ಞಾನವನ್ನು ಆಸಕ್ತ ರೈತರಿಗೆ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು. 

ಕೊಡಗಿನ ಸುಧೀರ್ ಅವರ ತೋಟದ ರಂಬುಟಾನ್

ವಿಸ್ತರಿಸುತ್ತಿದೆ ರಂಬುಟಾನ್

ದಕ್ಷಿಣ ಕನ್ನಡ, ಉಡುಪಿ, ಮಲೆನಾಡಿನ ಜಿಲ್ಲೆಗಳಲ್ಲಿ ತೆಂಗು, ಅಡಿಕೆಯ ನಡುವೆ ಹಾಗೂ ಕೊಡಗು ಭಾಗದಲ್ಲಿ ಕಾಫಿ ತೋಟಗಳ ಜತೆಗೆ ರಂಬುಟಾನ್ ವ್ಯಾಪಕವಾಗಿದೆ. ಪ್ರತಿ ವರ್ಷ ವಿಸ್ತರಿಸುತ್ತಿದೆ.

ಕೃಷಿಕ ಸಿ.ಎಫ್‌. ಜಾಕೋಬ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಂಸೆ ಸಮೀಪದಲ್ಲಿ 120 ಎಕರೆಯಲ್ಲಿ ರಂಬುಟಾನ್ ಬೆಳೆದಿದ್ದಾರೆ. ಅಜಿತ್‌ಶೆಟ್ಟಿ ಅವರು ಸುಬ್ರಹ್ಮಣ್ಯ ಸಮೀಪ 10 ಎಕರೆಯಲ್ಲಿ ಈ ಹಣ್ಣಿನ ಕೃಷಿ ಮಾಡುತ್ತಿದ್ದಾರೆ. ಹೀಗೆ ಹತ್ತು ಗಿಡಗಳಿಂದ ಹತ್ತಾರು ಎಕರೆವರೆಗೆ ಈ ಹಣ್ಣನ್ನು ಕೃಷಿ ಮಾಡುತ್ತಿದ್ದಾರೆ.

‘ಎಕರೆಗೆ ಒಂದು ಟನ್ ಇಳುವರಿ ಸಿಕ್ಕಿದೆ. ಕಳೆದ ವರ್ಷ 120 ಎಕರೆಯಿಂದ 150 ಟನ್ ಬಂದಿದೆ. ಐದಾರು ವರ್ಷಗಳ ಹಿಂದೆ ರಂಬುಟಾನ್ ಬೆಳೆಯುವವರು ಕಡಿಮೆ ಇದ್ದರು. ಆಗ ಬೆಲೆ ಕೆ.ಜಿ. ₹400  ಇತ್ತು. ಈಗ ಬೆಳೆಯುವವರು ಹೆಚ್ಚಾಗಿದ್ದಾರೆ. ಬೆಲೆ ಕೆ.ಜಿ.ಗೆ ₹120 ಆಗಿದೆ. ಕೆಲವು ಸಾರಿ ₹80ಕ್ಕೆ ಇಳಿಯುತ್ತದೆ‘ ಎನ್ನುತ್ತಾರೆ ಜಾಕೋಬ್‌.

‘ಕೇರಳದಿಂದ ಖರೀದಿದಾರರೇ ತೋಟಕ್ಕೆ ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ. ಮಾರುಕಟ್ಟೆ ಸಮಸ್ಯೆಯಿಲ್ಲ. ಹಕ್ಕಿಗಳು ದಾಳಿ, ಪ್ರತಿಕೂಲ ಹವಾಮಾನದಿಂದ ವಿಪರೀತ ಹಣ್ಣುಗಳು ಉದುರುತ್ತವೆ‘ ಎನ್ನುತ್ತಾರೆ ಅಜಿತ್.  

ಸುಧೀರ್ ಅವರು ಕಾಫಿ ಬೆಳೆ ನಡುವೆ ಮ್ಯಾಂಗೊಸ್ಟಿನ್ ಬೆಳೆದಿರುವುದು

ಅಂತರ ಬೆಳೆ ಮ್ಯಾಂಗೊಸ್ಟಿನ್‌

ಕೊಡಗು, ದಕ್ಷಣ ಕನ್ನಡ, ಕರಾವಳಿ ಭಾಗದಲ್ಲಿ ದಶಕದ ಹಿಂದಿನಿಂದ ಮ್ಯಾಂಗೊಸ್ಟಿನ್‌ ಬೆಳೆಯನ್ನು ಅಡಿಕೆ ತೋಟದ ನಡುವೆ ಅಂತರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಬೀಜದಿಂದ ಮಾಡಿದ ಸಸಿಯಾದರೆ, ನಾಟಿ ಮಾಡಿ ಏಳೆಂಟು ವರ್ಷಕ್ಕೆ ಫಸಲು ಆರಂಭ ವಾಗುತ್ತದೆ. ಕಸಿ ಗಿಡವಾದರೆ, ನಾಲ್ಕೈದು ವರ್ಷದಿಂದ ಶುರುವಾಗುತ್ತದೆ ಎನ್ನುತ್ತಾರೆ ಕೊಡಗಿನ ಸುಧೀರ್. 

ಜಾಕೋಬ್ ಅವರು ಸುಮಾರು 40 ಎಕರೆಯಲ್ಲಿ ಮ್ಯಾಂಗೊಸ್ಟಿನ್ ಬೆಳೆದಿದ್ದಾರೆ. ‘ಇದು ನಿಧಾನವಾಗಿ ಬೆಳೆಯುತ್ತದೆ. ಎಂಟು ವರ್ಷಕ್ಕೆ ಫಲಕೊಡುತ್ತದೆ. ತೆಂಗಿನಂತೆ ಪ್ರತಿ ವರ್ಷ ಫಸಲು ನೀಡುತ್ತದೆ’ ಎನ್ನುತ್ತಾರೆ ಅವರು.

‘ಒಂದು ಮರ 30 ಕೆ.ಜಿಯಿಂದ 40 ಕೆ.ಜಿವರೆಗೂ ಇಳುವರಿ ಕೊಡುತ್ತಿದೆ. ಉತ್ತಮ ಮಾರ್ಕೆಟ್ ಇರುವುದರಿಂದ, ಕಡಿಮೆ ಜಾಗದಲ್ಲಿ ಬೆಳೆದುಕೊಂಡರೂ ಲಾಭ’ ಎನ್ನುತ್ತಾರೆ ಸುಧೀರ್‌. ‘ಕೆ.ಜಿಗೆ ₹400 ರಂತೆ ತಮ್ಮ ತೋಟದ ಬಾಗಿಲಲ್ಲೇ ಮ್ಯಾಂಗೊಸ್ಟಿನ್ ಮಾರಾಟ ಮಾಡುತ್ತಿದ್ದೇನೆ. ಪ್ರತಿ ವರ್ಷ ನಮ್ಮ ನರ್ಸರಿಯಿಂದ ಸುಮಾರು 5 ಸಾವಿರ ಗಿಡಗಳು ಮಾರಾಟವಾಗಿವೆ. ಇದರಲ್ಲಿ ಬಹುಪಾಲು ಕರ್ನಾಟಕದ ರೈತರು ಖರೀದಿಸಿದ್ದಾರೆ’ ಎನ್ನುತ್ತಾರೆ ಸಕ್ರೆಬೈಲಿನ ಕೃಷಿಕ ಹಾಗೂ ನರ್ಸರಿ ಮಾಲೀಕ ಬಿ.ಆರ್. ಕೃಷ್ಣ.  

ಮೈಸೂರಿನ ಬಳಿ ಬೆಳವಲ ಫಾರಂನಲ್ಲಿ ಕೆ. ರಾಮಕೃಷ್ಣಪ್ಪ ಅವರು ಬೆಳೆಸಿರುವ ಅವಕಾಡೊ(ಬೆಣ್ಣೆ ಹಣ್ಣು)

ಎಲ್ಲೆಲ್ಲೂ ಅವಕಾಡೊ

ಅವಕಾಡೊ/ ಬೆಣ್ಣೆಹಣ್ಣು ಅಥವಾ ಬಟರ್ ಫ್ರೂಟ್ ಹಣ್ಣಿನ ಕೃಷಿ ರಾಜ್ಯದಲ್ಲಿ ವ್ಯಾಪಕವಾಗಿದೆ. ಉಷ್ಣಪ್ರದೇಶಕ್ಕೆ ಹೊಂದಿಕೊಳ್ಳುವ ಈ ಹಣ್ಣನ್ನು ಮೈಸೂರು ಚಾಮರಾಜನಗರದಿಂದ ಉತ್ತರ ಕರ್ನಾಟಕದ ಹಾವೇರಿ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಯ ಜೊತೆಗೆ, ನೆರೆ ಹೊರೆಯ ರಾಜ್ಯಗಳಿಗೂ ಮಾರಾಟವಾಗುತ್ತಿದೆ.

ರಾಜ್ಯದಲ್ಲಿ 11 ವಿವಿಧ ತಳಿಗಳ ಅವಕಾಡೊ ಬೆಳೆಯಲಾಗುತ್ತಿದೆ. ಸದ್ಯ ಮೆಕ್ಸಿಕೊ ಹ್ಯಾಸ್ ತಳಿ ಜನಪ್ರಿಯವಾಗಿದೆ. ನಾಟಿ ಮಾಡಿದ ಮೂರು ವರ್ಷದಿಂದ ಫಸಲು ಆರಂಭವಾಗುತ್ತದೆ. ಸದ್ಯ ಸುಮಾರು ಐದೂವರೆ ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯುತ್ತಿರಬಹುದೆಂಬ ಅಂದಾಜು ಇದೆ. ಎಕರೆಗೆ 7 ಟನ್‌ ಅಂದಾಜು ಇಳುವರಿ ಇದೆ. ರಾಜ್ಯದಲ್ಲಿ ವಾರ್ಷಿಕವಾಗಿ 40 ಸಾವಿರ ಟನ್‌ವರೆಗೂ ಹಣ್ಣು ಉತ್ಪಾದನೆಯಾಗುತ್ತಿದೆ ಎಂಬ ಅಂದಾಜಿದೆ. ಕೆ.ಜಿಗೆ ₹60 ರಿಂದ ₹250 ವರೆಗೂ ಬೆಲೆ ಇದೆ ಈ ಹಣ್ಣಿಗೆ ಎಂದು ಬೆಳೆಗಾರರು ಹೇಳುತ್ತಾರೆ.

‘ತೋಟಕ್ಕೆ ಬಂದು ಖರೀದಿ ಮಾಡುವ ವ್ಯಾಪಾರಿಗಳಿದ್ದಾರೆ. ಬೇರೆ ರಾಜ್ಯದ ಮಾರುಕಟ್ಟೆಗೂ ಕಳಿಸುತ್ತೇವೆ’ ಎನ್ನುತ್ತಾರೆ ಅರಕಲಗೂಡು ಸಮೀಪದ ದೊಡ್ಡಮಗ್ಗೆಯಲ್ಲಿ 25 ಎಕರೆಯಲ್ಲಿ ತೆಂಗಿನ ನಡುವೆ ಅವಕಾಡೊ ಬೆಳೆಯುತ್ತಿರುವ ಕೃಷಿಕ ಶಿರೀನ್‌ ರಂಗಸ್ವಾಮಿ. ಇವರು ನಾಲ್ಕು ವರ್ಷಗಳಿಂದ ಫಸಲು ಪಡೆದು ಮಾರುಕಟ್ಟೆ ಮಾಡುತ್ತಿದ್ದಾರೆ.

‘ನಮ್ಮ ತೋಟದಲ್ಲಿ ಬಿಸಿಲು ಚೆನ್ನಾಗಿರುವ ಜಾಗದಲ್ಲಿ ಬೆಳೆಯುತ್ತಿರುವ ಮರಗಳು 200 ಹಣ್ಣುಗಳವರೆಗೂ ಬಿಡುತ್ತವೆ. ಒಂದೊಂದು ಹಣ್ಣು 600 ಗ್ರಾಂವರೆಗೂ ತೂಗುತ್ತದೆ. ಕೆ.ಜಿಗೆ ₹70ರಿಂದ ₹220ವರೆಗೂ ಮಾರಾಟ ಮಾರಾಟವಾಗಿದೆ’ ಎನ್ನುತ್ತಾರೆ ಶಿರೀನ್‌.

‘ಸಂಘಟಿತ’ ಮಾರುಕಟ್ಟೆ ಅಗತ್ಯ:

ಕೃಷಿಕರ ಆಸಕ್ತಿಯಿಂದ ರಾಜ್ಯದಲ್ಲಿ ವಿದೇಶಿ ಹಣ್ಣುಗಳ ಪರಿಚಯವಾಗಿದೆ, ವಿಸ್ತಾರವಾಗುತ್ತಿದೆ. ವ್ಯಾಪಾರಸ್ಥರು ತೋಟದ ಬಾಗಿಲಿನಿಂದಲೇ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಬೆಂಗಳೂರಿನ ಆನೇಕಲ್‌ ತಾಲ್ಲೂಕಿನ ಹುಸ್ಕೂರಿನಲ್ಲಿ ಹಣ್ಣಿನ ಮಾರುಕಟ್ಟೆ ಮೂಲಕ ಅಲ್ಪ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೆ ಮಾರಾಟವಾಗುತ್ತಿದೆ. ಇಷ್ಟನ್ನು ಹೊರತುಪಡಿಸಿ ವಿದೇಶಿ ಹಣ್ಣುಗಳ ವಾರ್ಷಿಕ ಉತ್ಪಾದನೆ, ಮಾರಾಟದ ಪ್ರಮಾಣ, ಬೇಡಿಕೆ, ರಫ್ತು, ಬೆಲೆ ನಿಗದಿ ಹೇಗೆ ಎಂಬ ನಿಖರವಾದ ಮಾಹಿತಿ ಲಭ್ಯವಿಲ್ಲ. ಈಗಿರುವ ಮಾಹಿತಿ, ಬೆಳೆಗಾರರ ಅಂದಾಜಿಗೆ ಸಿಕ್ಕಿರುವುದು. ‘ಇನ್ನಷ್ಟು ಸಂಘಟಿತ ಮಾರುಕಟ್ಟೆ ರೂಪಿತವಾದರೆ, ಸರ್ಕಾರದ ಬೆಂಬಲ ದೊರಕಿದರೆ, ಬೆಳೆಗಾರರಿಗೆ ವಿಶ್ವಾಸ ಬರುತ್ತದೆ, ಬೆಳೆಯೂ ವಿಸ್ತರಣೆಯಾಗುತ್ತದೆ’ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ

ಪೂರಕ ಮಾಹಿತಿ: ಗಿರೀಶ್ ಕೆ.ಎಸ್, ಮಡಿಕೇರಿ

A street vendor was seen selling Rambutan fruits at Napoklu-Bhagamandala road.
ಡ್ರ್ಯಾಗನ್ ಫ್ರೂಟ್ ರಂಬುಟಾನ್ ಸೇರಿದಂತೆ ಎಲ್ಲ ಹಣ್ಣಿನ ಬೆಳೆ ಬೆಳೆಯಲು ತೋಟಗಾರಿಕೆ ಇಲಾಖೆ ಪ್ರೋತ್ಸಾಹಿಸುತ್ತಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್‌ (ಎನ್‌ಎಚ್‌ಎಂ) ಅಡಿ ಬೆಂಬಲ ನೀಡುತ್ತಿದೆ. ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮಾರುಕಟ್ಟೆಗೂ ನೆರವಾಗುತ್ತಿದೆ
ಕೆ.ಬಿ.ದುಂಡಿ ಹೆಚ್ಚುವರಿ ನಿರ್ದೇಶಕರು(ಹಣ್ಣು ವಿಭಾಗ) ತೋಟಗಾರಿಕೆ ಇಲಾಖೆ ಬೆಂಗಳೂರು.

ಸಮಸ್ಯೆ ಸವಾಲು ಪರಿಹಾರ...

ವಿದೇಶಿ ಹಣ್ಣುಗಳನ್ನು ರುಚಿಗಿಂತ ಆರೋಗ್ಯದ ಕಾಳಜಿಗಾಗಿ ತಿನ್ನುವವರ ಸಂಖ್ಯೆ ಹೆಚ್ಚಿದೆ. ಆರೋಗ್ಯದ ಕಾಳಜಿ ಹೆಚ್ಚುತ್ತಿರುವಂತೆ ಈ ಹಣ್ಣುಗಳು ಸೂಪರ್‌ಫುಡ್‌ಗಳಾಗಿವೆ. ಬೇಡಿಕೆ ಬೆಲೆಯೂ ಹೆಚ್ಚಾಗಿ ಬೆಳೆಯುವ ಪ್ರಮಾಣ ವಿಸ್ತಾರವಾಗುತ್ತಿದೆ.

ಬೆಳೆ ಪ್ರಮಾಣ ವಿಸ್ತಾರವಾಗುತ್ತಿರುವಂತೆ ಹಣ್ಣುಗಳ ಕೃಷಿಯಲ್ಲಿ ಸಮಸ್ಯೆಗಳೂ ಎದುರಾಗುತ್ತಿವೆ. ಕೆಲವು ರೈತರಿಗೆ ಇದು ಸವಾಲಾಗಿದೆ. ರಂಬುಟಾನ್‌ ಹಣ್ಣುಗಳಿಗೆ ಹಕ್ಕಿಗಳ ಕಾಟ. ಎರಡು ವರ್ಷಗಳಿಂದ ಗಿಡಗಳಿಂದ  ರಾಶಿ ರಾಶಿ ಹಣ್ಣುಗಳು ಉದುರುತ್ತಿವೆ. ಕಾರಣ ಏನು ಅಂತ ತಿಳಿಯುತ್ತಿಲ್ಲ. ಪರಿಹಾರ ನೀಡುವವರಿಲ್ಲ ಎಂದು ಕೃಷಿಕರಾದ ಜಾಕೋಬ್‌ ಸುಧೀರ್ ಸೇರಿದಂತೆ ಹಲವು ಬೆಳೆಗಾರರು ಹೇಳಿದರು.

‘ಪರಿಹಾರಕ್ಕಾಗಿ ತೋಟಗಾರಿಕೆ ಸಂಶೋಧನೆ ಕೇಂದ್ರವೊಂದಕ್ಕೆ ಕರೆ ಮಾಡಿದರೆ ವಿಜ್ಞಾನಿಗಳು ಸರಿಯಾಗಿ ಸ್ಪಂದಿಸಲಿಲ್ಲ’ ಎಂದು ಬೆಳೆಗಾರರೊಬ್ಬರು ಬೇಸರಿಸಿದರು. ಡ್ರ್ಯಾಗನ್‌ಫ್ರೂಟ್ ಕೃಷಿಯಲ್ಲಿ ಕೆಲವರಿಗೆ ಮಾರುಕಟ್ಟೆ ಸಮಸ್ಯೆ ಎದುರಾದರೆ ಹಲವರಿಗೆ ತಳಿಗಳ ಆಯ್ಕೆಯ ಸಮಸ್ಯೆಯಾಗಿದೆ. ಒಂದೇ ಬಾರಿಗೆ ಮಾರುಕಟ್ಟೆಗೆ ಹಣ್ಣುಗಳು ಪ್ರವೇಶಿಸಿ ಬೆಲೆ ಕುಸಿತದ ಬಿಸಿ ಕಂಡವರೂ ಇದ್ದಾರೆ. ನಿರೀಕ್ಷಿತ ಬೆಲೆ ಸಿಗದೇ ಹತಾಶೆಯಿಂದ ಬೆಳೆ ತೆಗೆದವರೂ ಇದ್ದಾರೆ. ಬಟರ್‌ಫ್ರೂಟ್ ವಿಷಯದಲ್ಲೂ ತಮ್ಮ ಪ್ರದೇಶಕ್ಕೆ ಯಾವುದು ಸೂಕ್ತ ತಳಿ ಎಂದು ತಿಳಿಯದೇ ಬೆಳೆದು ಸಮಸ್ಯೆ ಎದುರಿಸುತ್ತಿದ್ದಾರೆ. ಇವು ನೈಜ ಸವಾಲುಗಳು. 

ಹೊಸ ಬೆಳೆಗಳ ಪ್ರದೇಶ ವಿಸ್ತರಣೆಯಾಗುತ್ತಿರುವ ಈ ಹಂತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಸಂಶೋಧನಾ ಕೇಂದ್ರಗಳು ವಿದೇಶಿ ಹಣ್ಣುಗಳ ಕೃಷಿಯ ಅಧ್ಯಯನ ಮಾಡಿ ನಮ್ಮ ವಾತಾವರಣದಲ್ಲಿ ಅವುಗಳನ್ನು ಬೆಳೆಯಬಹುದಾದ ಅವಕಾಶ ಸಾಮರ್ಥ್ಯ ದೌರ್ಬಲ್ಯ ಹಣ್ಣುಗಳ ಮಾರುಕಟ್ಟೆ ಸಾಧ್ಯತೆ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಮತ್ತೊಂದು ವೆನಿಲ್ಲಾ ಅಗರ್‌ವುಡ್ ದುರಂತವನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ನಿವೃತ್ತ ತೋಟಗಾರಿಕೆ ಅಧಿಕಾರಿ ಮತ್ತು ಬೆಳವಲ ಫೌಂಡೇಷನ್‌ನ ಕೆ.ರಾಮಕೃಷ್ಣಪ್ಪ. ಬೆಳೆಯುವ ಮುನ್ನ.. ಉಷ್ಣವಲಯ ವಾತಾವರಣದಲ್ಲಿ ಬೆಳಯುವ ಹಣ್ಣುಗಳ ಎಲ್ಲ ತಳಿಗಳು ನಮ್ಮ ಪ್ರದೇಶಕ್ಕೆ ಹೊಂದಲೇ ಬೇಕಂತಿಲ್ಲ. ‘ಮೈಸೂರಲ್ಲಿ ಬೆಳೆಯುವ ತಳಿ ಕೊಪ್ಪಳದಲ್ಲಿ ಬೆಳೆಯದಿರಬಹುದು. ಹೀಗಾಗಿ ಲಕ್ಷದ ಗಳಿಸುವ ಮಾತಿಗೆ ಲಕ್ಷ್ಯ ಕೊಟ್ಟು ಹೊಸ ತಳಿಯ ಗಿಡಗಳನ್ನು ಎಕರೆಗಟ್ಟಲೆ ಬೆಳೆಯಬೇಡಿ. ನಾಲ್ಕೈದು ಗಿಡಗಳನ್ನು ನೆಟ್ಟು ನೋಡಿ. ಮೂರು ಕಾಲಗಳಲ್ಲೂ ತಳಿಯ ಬೆಳವಣಿಗೆ ಗಮನಿಸಿ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ನಂತರ ವಿಸ್ತರಿಸುವುದು ಒಳ್ಳೆಯದು’ ಎಂದು ಸಲಹೆ ನೀಡುತ್ತಾರೆ ವಿದೇಶಿ ಹಣ್ಣುಗಳ ಬೆಳೆಗಾರ ಬಳಂಜ ಫಾರ್ಮ್‌ನ ಅನಿಲ್ ಬಳಂಜ.

ಬೆಳೆಗಾರರ ಸಂಘ ‘ಕೆಫಾ’ ....

ರಾಜ್ಯದಲ್ಲಿ ಡ್ರ್ಯಾಗನ್ ಫ್ರೂಟ್ ಸೇರಿದಂತೆ ವಿವಿಧ ವಿದೇಶಿ ಹಣ್ಣುಗಳನ್ನು ಬೆಳೆಯುವವರ ಸಂಖ್ಯೆ ಹೆಚ್ಚಾದ ನಂತರ ಬೆಳೆಗಾರರೆಲ್ಲ ಸೇರಿ 2022 ರಲ್ಲಿ ಕರ್ನಾಟಕ ಎಕ್ಸೊಟಿಕ್ ಫ್ರೂಟ್ ಫಾರ್ಮರ್ಸ್‌ ಅಸೋಸಿಯೇಷನ್‌ (ಕೆಫಾ–KEFFA) ರಚಿಸಿಕೊಂಡಿದ್ದಾರೆ. ಸಂಘದಲ್ಲಿ 600 ಮಂದಿ ಸದಸ್ಯರಿದ್ದಾರೆ. ಇವರಲ್ಲಿ ಡ್ರ್ಯಾಗನ್‌ಫ್ರೂಟ್ ಬೆಳೆಗಾರರೇ ಹೆಚ್ಚು. ‘ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ವಿಜ್ಞಾನಿ ಡಾ.ಜಿ.ಕರುಣಾಕರನ್‌ ಈ ಸಂಘದ ತಾಂತ್ರಿಕ ಸಲಹೆಗಾರರಾಗಿದ್ದಾರೆ. ಈ ಸಂಬಂಧ ಕೆಫಾ– ಐಐಎಚ್‌ಆರ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ಸಂಘದ ನಿರ್ದೇಶಕ ಮತ್ತು ಖಚಾಂಚಿ ಅರುಣ್ ಮಾಹಿತಿ ನೀಡಿದರು. ಸಂಘ ಡ್ರ್ಯಾಗನ್ ಫ್ರೂಟ್ ಸೇರಿದಂತೆ ವಿವಿಧ ವಿದೇಶಿ ಹಣ್ಣುಗಳನ್ನು ಬೆಳೆಯುವರಿಗೆ ಮಾರ್ಗದರ್ಶನ ನೀಡುತ್ತಿದೆ. ಡ್ರ್ಯಾಗನ್‌ ಫ್ರೂಟ್‌ ಹಣ್ಣಿನಿಂದ ಜ್ಯೂಸ್ ಪೌಡರ್ ಸೇರಿದಂತೆ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಪ್ರಯತ್ನವೂ ನಡೆದಿದೆ. ‘ಕೆಫಾ’ ಕುರಿತು ಹೆಚ್ಚಿನ ಮಾಹಿತಿಗೆ: 8150835090

- ಮ್ಯಾಂಗೊಸ್ಟಿನ್ ಗ್ರಾಮ

‘ಪರಿಯಾರಂ’ ಕೇರಳದಲ್ಲಿ ದಶಕದಿಂದ ವಿದೇಶಿ ಹಣ್ಣುಗಳ ವಾಣಿಜ್ಯ ಕೃಷಿ ದೊಡ್ಡ ಮಟ್ಟದಲ್ಲಿ ಏರುತ್ತಿದೆ. ಅಲ್ಲಿ ರಂಬುಟಾನ್ ಮೊದಲ ಸ್ಥಾನ ಮ್ಯಾಂಗೊಸ್ಟಿನ್ ಎರಡನೇ ಸ್ಥಾನದಲ್ಲಿದೆ. ತ್ರಿಶ್ಯೂರ್ ಜಿಲ್ಲೆಯ ಪರಿಯಾರಂ ಗ್ರಾಮದ ತುಂಬಾ ಮ್ಯಾಂಗೊಸ್ಟಿನ್ ಬೆಳೆಯುತ್ತಿದ್ದು ಅದನ್ನು ‘ಮ್ಯಾಂಗೊಸ್ಟಿನ್ ಗ್ರಾಮ’ ಎಂದು ಕರೆಯುತ್ತಾರೆ. ಹೊಸ ಹಣ್ಣಿನ ಬೆಳೆಗಳನ್ನು ಬೆಳೆಯಲು ಕ್ಷೇತ್ರಾಧ್ಯಯನ ಅಗತ್ಯ. ಇದರಿಂದ ಹೊಸದಾಗಿ ಕೃಷಿ ಮಾಡುವವರಿಗೆ ಮೌಲಿಕ ಸುಳಿವುಗಳು ಸಿಗುತ್ತವೆ. ಈ ನಿಟ್ಟಿನಲ್ಲಿ ಕರ್ನಾಟಕದ ಕೃಷಿಕರು ಕೇರಳದ ಹಣ್ಣಿನ ತೋಟಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದರೆ ಇನ್ನಷ್ಟು ವಿದೇಶಿ ಹಣ್ಣಿನ ಕೃಷಿ ವಿಸ್ತರಿಸಲು ಸಾಧ್ಯವಿದೆ.

–ಶ್ರೀಪಡ್ರೆ ಕೃಷಿ ಪತ್ರಕರ್ತರು

- ಚೆಟ್ಟಹಳ್ಳಿಯಲ್ಲಿ ‘ಜರ್ಮ್‌ಪ್ಲಾಸಂ’

ಕೊಡಗಿನ ಚೆಟ್ಟಹಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ 250ಕ್ಕೂ ಅಧಿಕ ವಿದೇಶಿ ಹಣ್ಣುಗಳ ಗಿಡಗಳನ್ನು ಸಂರಕ್ಷಿಸಲಾಗಿದೆ. ಇತ್ತೀಚೆಗೆ ರಂಬುಟಾನ್‌ ಮತ್ತು ಅವಕಾಡೊ ಹಣ್ಣುಗಳ ತಲಾ 2 ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಕೇಂದ್ರದಲ್ಲಿ 15ಕ್ಕೂ ಅಧಿಕ ವಿದೇಶಿ ಹಣ್ಣುಗಳ 500ಕ್ಕೂ ಹೆಚ್ಚು ಮೂಲ ತಳಿ( ಜರ್ಮ್‌ಪ್ಲಾಸಂ) ಸಂರಕ್ಷಿಸಲಾಗಿದೆ. ಅವಕಾಡೊ ಒಂದರಲ್ಲೇ ಸುಮಾರು 100ಕ್ಕೂ ಅಧಿಕ ಜರ್ಮ್ ಪ್ಲಾಸಂ ಇದೆ. ದೇಶದ ವಿವಿಧ ಭಾಗಗಳಲ್ಲಿ ಸಿಗುವ ವೈವಿಧ್ಯಮಯ ಗುಣಲಕ್ಷಣಗಳನ್ನು ಹೊಂದಿರುವ ತಳಿಗಳನ್ನು ತಂದು ಇಲ್ಲಿ ಬೆಳೆಸಲಾಗುತ್ತಿದೆ. ‘ಈ ಜರ್ಮ್‌ ಪ್ಲಾಸಂ ತಳಿ ಸಂರಕ್ಷಣೆಗಲ್ಲದೇ ರೋಗ ನಿರೋಧಕ ಅಧಿಕ ಇಳುವರಿ ಕೊಡುವ ತಳಿಗಳನ್ನು ಅಭಿವೃದ್ಧಿಪಡಿಸಲೂ ಬಳಕೆಯಾಗುತ್ತಿದೆ’ ಎಂದು ಕೇಂದ್ರದ ಹಿರಿಯ ಹಣ್ಣು ವಿಜ್ಞಾನಿ ಡಾ.ಬಿ.ಎಂ.ಮುರಳೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು. ಇಲ್ಲಿ ರಂಬುಟನ್ ಬೆಣ್ಣೆಹಣ್ಣು ಲಾಂಗ್‌ಆನ್ ದುರಿಯನ್ ಜಾಬೊಟಿಕಾ ಸೇರಿದಂತೆ ‌ಸುಮಾರು 50 ವಿದೇಶಿ ಹಣ್ಣುಗಳ ವೈವಿಧ್ಯಮಯವಾದ ತಳಿಗಳು ಲಭ್ಯವಿವೆ. ಸಂಪರ್ಕಕ್ಕೆ: 7892882351

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.