ADVERTISEMENT

ಒಳನೋಟ: ‘ಗಂಗಾ ಕಲ್ಯಾಣ’ದಲ್ಲಿ ಅಕ್ರಮದ್ದೇ ಪಾರಮ್ಯ!

ರಾಜೇಶ್ ರೈ ಚಟ್ಲ
Published 7 ಆಗಸ್ಟ್ 2022, 3:00 IST
Last Updated 7 ಆಗಸ್ಟ್ 2022, 3:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿವಿಧ ಅಭಿವೃದ್ಧಿ ನಿಗಮಗಳ ಸಹಾಯಧನದಲ್ಲಿ ಬಡ ಹಾಗೂ ಮಧ್ಯಮ ವರ್ಗದ ರೈತರ ಜಮೀನಿಗೆ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಸರ್ಕಾರದ ‘ಗಂಗಾ ಕಲ್ಯಾಣ’ ಯೋಜನೆಯಲ್ಲಿ ಅಕ್ರಮದ್ದೇ ಪಾರಮ್ಯ. ಕೊಳವೆಬಾವಿ ಕೊರೆಯುವ ಹೆಸರಿನಲ್ಲಿ ಫಲಾನುಭವಿಯ ಪಾಲಿನ ‘ಅನುದಾನ’ಕ್ಕೆ ಶೇ 30ರಿಂದ 40ರಷ್ಟು ಕನ್ನ ಕೊರೆದಿರುವ ನೂರಾರು ಪ್ರಕರಣಗಳು ಬಹಿರಂಗವಾಗಿವೆ.

ಯೋಜನೆಯಡಿ ಟೆಂಡರ್‌ ಕರೆಯದೆ ಕಾಮಗಾರಿಗೆ ಪರವಾನಗಿ, ಬೋಗಸ್‌ ಬಿಲ್‌ ನೀಡಿ ಹಣ ಲೂಟಿ ರಾಜಾರೋಷವಾಗಿ ನಡೆದಿದೆ. ಅನುದಾನ ಡ್ರಿಲ್ಲರ್ಸ್‌, ಪಂಪ್‌ ಸೆಟ್‌ ಪೂರೈಕೆದಾರರು, ಪಟ್ಟಭದ್ರ ಹಿತಾಸಕ್ತಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು, ಮಧ್ಯವರ್ತಿಗಳ ಪಾಲಾಗಿದೆ. ಕೊಳವೆಬಾವಿ ಕೊರೆಯುವ ಡ್ರಿಲ್ಲರ್‌ಗಳೇ ಇಲ್ಲಿ ವಸೂಲಿಗಾರರಾಗಿದ್ದಾರೆ. ಕೊಳವೆಬಾವಿ ಕೊರೆಸುವ ಕುರಿತು ಅವರೇ ಪ್ರಮಾಣಪತ್ರ ಕೊಡುವುದರಿಂದ, ತೋಟಕ್ಕೆ ಕಳ್ಳರನ್ನೇ ಕಾವಲಿಟ್ಟಂತಾಗಿದೆ!

ರೈತರಿಗೆ ಕಳಪೆ ಗುಣಮಟ್ಟದ ಸಾಮಗ್ರಿ ನೀಡಿ ಹೆಚ್ಚು ಬಿಲ್ ಮಾಡಿಕೊಂಡಿರುವುದು, ಕೊಳವೆಬಾವಿಗಳನ್ನು ಕಡಿಮೆ ಆಳಕ್ಕೆ ಕೊರೆಸಿದ್ದರೂ, ಹೆಚ್ಚು ಆಳಕ್ಕೆ ಕೊರೆಸಿರುವುದಾಗಿ ದಾಖಲೆ ಸೃಷ್ಟಿಸಿ ಬಿಲ್ ಮಾಡಿಕೊಂಡಿರುವುದು, ಕೊಳವೆಬಾವಿಯನ್ನೇ ಕೊರೆಸದೆ ಬಿಲ್ ಮಾಡಿಕೊಂಡಿರುವುದು ಸೇರಿದಂತೆ ಹಲವು ರೀತಿಯ ಅಕ್ರಮ ಎಸಗಿ ಕೋಟಿ ಕೋಟಿ ಭ್ರಷ್ಟಾಚಾರ ನಡೆಸಿರುವುದು ಈಗಾಗಲೇ ಪತ್ತೆಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರದಲ್ಲಿ ಎರಡು ಸಾವಿರ ಅಡಿ ಕೊರೆದರೂ ನೀರು ಸಿಗಲ್ಲ. ಆದರೆ, ನೀರು ಬಂದಿದೆ ಎಂದು ದಾಖಲೆ ನೀಡಿ ಹಣ ಗುಳುಂ ಮಾಡಲಾಗಿದೆ. ಕೊಳವೆಬಾವಿ ಕೊರೆಯುವ ಕಂಪನಿಗಳ ಹಿತಾಸಕ್ತಿ ಇದರ ಹಿಂದಿದೆ ಎಂದು ಶಾಸಕರೇ ಪಕ್ಷತಾತೀತವಾಗಿ ವಿಧಾನಮಂಡಲದಲ್ಲಿ ಧ್ವನಿ ಎತ್ತಿದ್ದಾರೆ.

ADVERTISEMENT

‘2015 ರಿಂದ 2019ರವರೆಗೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ 2,381, ವಾಲ್ಮೀಕಿ ಅಭಿವೃದ್ಧಿ ನಿಗಮದಡಿ 2,344, ಹಿಂದುಳಿದ ಅಭಿವೃದ್ಧಿ ನಿಗಮದಡಿ 863, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿ 325 ಸೇರಿ ಒಟ್ಟು 5,913 ಕೊಳವೆಬಾವಿ ಕೊರೆಯಿಸಲಾಗಿದೆ. ಈ ಎಲ್ಲ ಕೊಳವೆಬಾವಿಗಳು ಕಾರ್ಯರೂಪಕ್ಕೆ ಬಂದಿದ್ದರೆ, 20 ಸಾವಿರ ಎಕರೆಗೆ ನೀರುಣಿಸಬಹುದಾಗಿತ್ತು. ಆದರೆ, ಬೇಜವಾಬ್ದಾರಿ ಹಾಗೂ ಅಕ್ರಮಗಳಿಂದ 2 ಸಾವಿರ ಕೊಳವೆಬಾವಿಗಳು ನೀರನ್ನೇ ಕಂಡಿಲ್ಲ’ ಎನ್ನುತ್ತಾರೆ ನಿಗಮವೊಂದರ ಹಿರಿಯ ಅಧಿಕಾರಿ.

‘ಯೋಜನೆಯಡಿ 2019-20, 2020-21ರ ಸಾಲಿನಲ್ಲಿ 14,577 ಕೊಳವೆಬಾವಿ ಕೊರೆಸಲು ₹ 431 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಅಕ್ರಮ ನಡೆದಿದೆ. ಅರ್ಹರಿಲ್ಲದ ಗುತ್ತಿಗೆದಾರರಿಗೆ ಕೊಳವೆಬಾವಿ ಕೊರೆಸುವ ಗುತ್ತಿಗೆ ನೀಡಲಾಗಿದೆ’ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಯೋಜನೆಯ ಹೆಸರಿನಲ್ಲಿ ಶೋಷಿತ ವರ್ಗಗಳ ಹಣದ ಲೂಟಿಯ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಹಿಂದೇಟು ಹಾಕುತ್ತಿದೆ ಎಂದು ಸಮಿತಿಯ ಸಭೆಗೆ ಹಾಜರಾಗದೆ ಪ್ರತಿಭಟಿಸಿದ್ದಾರೆ.

ಯೋಜನೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ವಿಷಯ ವಿಧಾನಪರಿಷತ್ತಿನಲ್ಲಿಪ್ರತಿಧ್ವನಿಸಿದ ಬಳಿಕ, ಅಕ್ರಮ, ಲೋಪದೋಷಗಳನ್ನು ಕಂಡುಹಿಡಿಯಲು ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಧಾನ ಪರಿಷತ್ತಿನ ವಿಶೇಷ ಸದನ ಸಮಿತಿ ರಚಿಸಲಾಗಿದೆ. ಹಲವು ಜಿಲ್ಲೆಗಳಿಗೆ ತೆರಳಿ ಯೋಜನೆಯ ಅನುಷ್ಠಾನದ ಬಿಲದೊಳಗೆ ನುಸುಳಿರುವ ಈ ಸಮಿತಿ, ಹಣ ನುಂಗಿರುವ ಹಲವು ಪ್ರಕರಣಗಳನ್ನು ಈ ಪತ್ತೆ ಮಾಡಿದೆ. 2015ನೇ ಸಾಲಿನಿಂದ ಇಲ್ಲಿಯವರೆಗೆ 1,630 ಕೊಳವೆ ಬಾವಿಗಳಿಗೆ ಪಂಪ್‌ಸೆಟ್‌ ಪೂರೈಸುವ ಕೆಲಸವೇ ಆಗಿಲ್ಲ. 474 ಕೊಳವೆಬಾವಿಗಳು ವಿದ್ಯುದ್ಧೀಕರಣವನ್ನೇ ಕಂಡಿಲ್ಲ. ಒಟ್ಟು ಯೋಜನೆಯಲ್ಲಿ ಶೇ 35ರಷ್ಟು ಕೆಲಸವೂಪೂರ್ಣವಾಗಿಲ್ಲ. ಅರೆಬರೆ ಕೆಲಸವಾಗಿದ್ದು, ಗುಣಮಟ್ಟದ ಸಲಕರಣೆಯಿಂದ ಫಲಾನುಭವಿಗಳು ವಂಚಿತರಾಗಿರುವುದನ್ನು ಸಮಿತಿ ಗುರುತಿಸಿದೆ.

ಅಕ್ರಮ ತಡೆಗೆ ‘ಟರ್ನ್‌ ಕೀ’ ಪದ್ಧತಿ
ಯೋಜನೆಯಲ್ಲಿನ ಅಕ್ರಮ ತಡೆಗೆ ಸರ್ಕಾರ 'ಟರ್ನ್‌ ಕೀ' ಜಾರಿಗೆ ತಂದಿದೆ. ಹಿಂದೆ ಇದ್ದ ‘ಕನ್ಸೋರ್ಟಿಯಂ‘ ಪದ್ಧತಿಯಡಿ ಕೊಳವೆ ಬಾವಿ ಕೊರೆಯಲು, ಪಂಪ್‌ಸೆಟ್‌ ಪೂರೈಸಲು ಹಾಗೂ ವಿದ್ಯುದ್ದೀಕರಣಕ್ಕೆ ಪ್ರತ್ಯೇಕ ಟೆಂಡರ್‌ಗಳನ್ನು ಕರೆಯಬೇಕಿತ್ತು. ಇದರಿಂದ ಸಾಮರ್ಥ್ಯ ಇಲ್ಲದ ಏಜೆನ್ಸಿಗಳು ಟೆಂಡರ್‌ ಪಡೆದು ಕೊಳವೆಬಾವಿ ಕೊರೆಯದೆ ನಕಲಿ ಬಿಲ್‌ ಮೂಲಕ ಹಣ ಗುಳುಂ ಮಾಡುತ್ತಿದ್ದವು. ಹೊಸ ಪದ್ಧತಿಯಡಿ ಕೆಟಿಟಿಪಿ ಕಾಯ್ದೆಯಡಿ ಟೆಂಡರ್‌ ನಡೆಸಿ ಕೊಳವೆಬಾವಿ, ಪಂಪ್‌ಸೆಟ್‌ ಅಳವಡಿಕೆ ಹಾಗೂ ವಿದ್ಯುದ್ದೀಕರಣ ಕೆಲಸಗಳನ್ನು ಒಟ್ಟಿಗೆ ನಿರ್ವಹಿಸಲು ಟೆಂಡರ್‌ ಕರೆಯಲಾಗುತ್ತದೆ. ಇದರಿಂದ ಸಾಮರ್ಥ್ಯ ಹೊಂದಿರುವ 15-20 ಅರ್ಹ ಗುತ್ತಿಗೆದಾರರು ಟೆಂಡರ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ.

‘ಹಿಂದಿನ ವ್ಯವಸ್ಥೆಯಲ್ಲಿ ಅಂದಾಜು 70 ಗುತ್ತಿಗೆದಾರರಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶವಾಗುತ್ತಿತ್ತು. ಹೀಗಾಗಿ, ಸರ್ಕಾರದ ಈ ಆದೇಶವನ್ನು ವಿರೋಧಿಸಿ ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಸರ್ಕಾರದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಕನ್ಸೋರ್ಟಿಯಂ ಪದ್ಧತಿಯಡಿ ಕೆಲವು ಗುತ್ತಿಗೆದಾರರು ಒಂದು ಜಿಲ್ಲೆಯಲ್ಲಿ 2-3 ತಾಲ್ಲೂಕುಗಳನ್ನಾಗಿ ವಿಂಗಡಿಸಿ ಪ್ರತ್ಯೇಕ ಪ್ಯಾಕೇಜ್‌ ಮಾಡಿಕೊಂಡು ಕೊಳವೆಬಾವಿ ಕೊರೆಯುತ್ತಿದ್ದರು. ಹೊಸ ಪದ್ಧತಿಯಡಿ ಪ್ರತಿ ಜಿಲ್ಲೆಗೆ ಒಂದು ಪ್ಯಾಕೇಜ್‌ನಂತೆ 30 ಪ್ಯಾಕೇಜ್‌ ಮಾಡಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದ ಅಕ್ರಮಕ್ಕೆ ತಡೆಬಿದ್ದಿದೆ’ ಎನ್ನುವುದು ಅವರ ಸಮರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.