ಕಾರವಾರ: ‘ವಿಜಯಪುರ ಅಥವಾ ಕಲಬುರಗಿಯಲ್ಲಿ ದೊಡ್ಡ ಕಾರ್ಖಾನೆಗಳು ಇದ್ದಿದ್ದರೆ, ನಾನು ಬೆಂಗಳೂರಿಗೆ ಬಂದು ಎಲೆಕ್ಟ್ರಿಷಿಯನ್ ಆಗುವ ಪ್ರಮೇಯವೇ ಇರುತ್ತಿರಲಿಲ್ಲ. ನನ್ನ ಗೆಳೆಯರು ಇಲ್ಲಿನ ಹೋಟೆಲ್‌ಗಳಲ್ಲಿ ಕೆಲಸ ಮಾಡಬೇಕಿರಲಿಲ್ಲ. ಇಲ್ಲಿ ಎಷ್ಟು ದುಡಿದರೂ ಸಾಲದು. ನೆಮ್ಮದಿಯ ಬದುಕು ಕಟ್ಟಿಕೊಳ್ಳುವುದಿರಲಿ, ಊರಿನಲ್ಲಿರುವ ತಂದೆ–ತಾಯಿಗೆ ಹಣ ಕಳಿಸಲು ಆಗಲ್ಲ’ ಎಂದು ಈಶಪ್ಪ ಹೇಳುವಾಗ, ಕಣ್ಣಂಚಿನಲ್ಲಿ ನೀರಿತ್ತು. ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಗ್ರಾಮವೊಂದರ ಈಶಪ್ಪಗೆ ಹೇಳಲಾಗದಷ್ಟು ಸಂಕಟ ಇತ್ತು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನರಸಿಂಹಮೂರ್ತಿ ಮತ್ತು ಸಲೀಮ್ ಅವರ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಕೆಲಸಕ್ಕಾಗಿ ಅವರು ಆಂಧ್ರಪ್ರದೇಶದ ಹಿಂದೂಪುರ, ಅನಂತಪುರಕ್ಕೆ ಹೋಗಬೇಕು. ಅಲ್ಲಿನ ಸ್ಟೀಲ್, ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡಬೇಕು. ‘ಬೆಂಗಳೂರಿಗಿಂತ ನಮಗೆ ಈ ಊರುಗಳೇ ಹತ್ತಿರ. ಓದು, ಬರಹ ಕಲಿತಿದ್ದು ಕಡಿಮೆ. ಊರಿನಲ್ಲಿ ಕೆಲಸಕ್ಕಾಗಿ ಅಲೆಯುವ ಬದಲು ಆಂಧ್ರಪ್ರದೇಶದ ಫ್ಯಾಕ್ಟರಿಗೆ ಹೋಗ್ತೀವಿ. ಬದುಕಿಗೆ ಇದು ಅಲ್ಲದೇ ಬೇರೆ ದಾರಿಯಿಲ್ಲ’ ಎಂದು ಇಬ್ಬರೂ ಸಂಕಷ್ಟ ತೋಡಿಕೊಂಡರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಗೋಟೆಗಾಳಿ ಗ್ರಾಮದ ಕಲ್ಪೇಶ್ ನಾಯ್ಕ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಪದವೀಧರ. ಜಿಲ್ಲೆಯಲ್ಲಿ ಕೆಲಸ ಸಿಗದಿದ್ದಕ್ಕೆ ಗೋವಾ ರಾಜ್ಯದ ವೆರ್ನಾ ಕೈಗಾರಿಕಾ ಪ್ರದೇಶದಲ್ಲಿನ ಔಷಧ ತಯಾರಿಕೆ ಕಂಪನಿಯಲ್ಲಿ ಉದ್ಯೋಗಿ ಆಗಿದ್ದಾರೆ. ಅವರಂತೆಯೇ ಮೂರು ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಗೋವಾ ಮೊರೆ ಹೋಗಿದ್ದಾರೆ.
‘ಕಲಿತ ವಿದ್ಯೆಗೆ ತಕ್ಕ ಶಿಕ್ಷಣ ಇಲ್ಲಿ ಸಿಗುತ್ತಿಲ್ಲ. ಕೈತುಂಬ ಅಲ್ಲದಿದ್ದರೂ, ಜೀವನ ನಿರ್ವಹಣೆಗೆ ಅನಿವಾರ್ಯ ವೇತನಕ್ಕಾಗಿ ನಸುಕಿನಲ್ಲೇ ಊರು ಬಿಟ್ಟು 80 ಕಿ.ಮೀ ದೂರದ ಗೋವಾಕ್ಕೆ ಹೋಗಬೇಕು. ಮರಳಿ ಮನೆ ಸೇರುವುದು ತಡರಾತ್ರಿ. ವಯಸ್ಸಾದ ತಂದೆ–ತಾಯಿಯ ಮುಖ, ಊರಿನ ಹಗಲಿನ ವಾತಾವರಣ ನೋಡುವುದು ವಾರಕ್ಕೆ ಒಮ್ಮೆ ಮಾತ್ರ’ ಎಂಬ ನೋವು ಮಾಜಾಳಿ ಗ್ರಾಮದ ವಿರಾಜ್ ಶಿರೋಡ್ಕರ್ ಅವರದ್ದು. ಕಲ್ಪೇಶ್ ನಾಯ್ಕ್ ಅವರಿಗೂ ಇದು ಹೊರತುಪಡಿಸಿ, ಅನ್ಯಮಾರ್ಗವಿಲ್ಲ.
ಕೆಲಸಕ್ಕಾಗಿ ಗೋವಾಕ್ಕೆ ಹೋಗುವ ಹಾದಿ ಸುಲಭವಲ್ಲ. ವರ್ನಾಗೆ ಹೋಗಲು ನಸುಕಿನ 5.40ಕ್ಕೆ ಕಾರವಾರದ ಶಿರವಾಡದಿಂದ ಹೊರಡುವ ಡೆಮು ರೈಲು ಹತ್ತಬೇಕು. ಅಸ್ನೋಟಿ, ಶಿರವಾಡದ ರೈಲು ನಿಲ್ದಾಣದಲ್ಲಿ ರೈಲು ಏರಲು ನೂಕುನುಗ್ಗಲು ಆಗುತ್ತದೆ. ಅದೇ ರೈಲು ರಾತ್ರಿ 9 ಗಂಟೆಗೆ ಶಿರವಾಡಕ್ಕೆ ಮರಳುತ್ತದೆ. ಇದು ನಿತ್ಯದ ಸವಾಲು, ಸಂಕಟ.
ವಿಜಯಪುರ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ನೈಜ ಚಿತ್ರಣವಿದು. ಪ್ರತಿಷ್ಠಿತ, ಬೃಹತ್ ಉದ್ಯಮಗಳು ರಾಜ್ಯದಲ್ಲಿ ನೆಲೆಯೂರಲು ಆಸಕ್ತಿ ತೋರುತ್ತಿಲ್ಲ. ಆರಂಭದಲ್ಲಿ ಆಶಾಭಾವ ವ್ಯಕ್ತಪಡಿಸಿದರೂ ನಂತರದಲ್ಲಿ ಬಂಡವಾಳ ಹೂಡುತ್ತಿಲ್ಲ. ಹೊಸ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತಿಲ್ಲ.
ಕಲ್ಯಾಣ ಕರ್ನಾಟಕದ ಪರಿಸ್ಥಿತಿಯಂತೂ ಇನ್ನೂ ಶೋಚನೀಯ. ಪಿಎಂ ಮಿತ್ರ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಮಂಜೂರಾಗಿ ಎರಡು ವರ್ಷಗಳು ಆಗಿವೆ. ರಸ್ತೆ, ವಿದ್ಯುತ್ ಸಂಪರ್ಕ ಮೂಲಸೌಲಭ್ಯದ ಟೆಂಡರ್ ಕರೆಯಲಾಗಿದೆ. ಕಲ್ಯಾಣ ಕರ್ನಾಟಕದ ಪ್ರಭಾವಿ ಸಚಿವರು ಇದ್ದರೂ ಜವಳಿ ಪಾರ್ಕ್‌ಗೆ ಕನಿಷ್ಠ ಪರಿಸರ ಅನುಮತಿ ಕೊಡಿಸಲೂ ಆಗುತ್ತಿಲ್ಲ.
‘ಕಲ್ಯಾಣ’ಕ್ಕೆ ಬರುವ ಯೋಜನೆಗಳನ್ನು ಮುಂಬೈ, ದಕ್ಷಿಣ ಕರ್ನಾಟಕದವರು ಕಸಿದುಕೊಂಡು ಹೋಗುತ್ತಾರೆ. ಬಂಡವಾಳ ಹೂಡಿಕೆಗೆ ಬೇಕಾದ ಕನಿಷ್ಠ ಮೂಲಸೌಲಭ್ಯ ಒದಗಿಸಲು ಸಹ ಅವರಿಂದ ಆಗುತ್ತಿಲ್ಲ. ಲಭ್ಯ ಇರುವ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳು ಸದ್ಬಳಕೆಯಾಗದೆ, ಜನರ ಶ್ರಮವೆಲ್ಲಾ ಗುಳೆ ಹೋಗುತ್ತಿದೆ’ ಎಂಬ ಬೇಸರ ಉದ್ಯಮಿಗಳದ್ದು.
ರಾಜ್ಯದ ಗಡಿಭಾಗವಾಗಿರುವ ಕಾರವಾರದಲ್ಲಿ ಉದ್ಯೋಗ ಸೃಷ್ಟಿಸಬಹುದಾದ ಒಂದೂ ಕೈಗಾರಿಕೆಗಳಿಲ್ಲ. ಸ್ಥಾಪನೆ ಆಗಿದ್ದ ಕೈಗಾರಿಕೆಗಳು ಕಚ್ಚಾವಸ್ತುಗಳ ಪೂರೈಕೆಗೆ ಸೂಕ್ತ ಸಾರಿಗೆ ಸಂಪರ್ಕವಿಲ್ಲದೆ ಬಾಗಿಲು ಮುಚ್ಚಿವೆ. ಕಚ್ಚಾ ವಸ್ತು ತರಿಸಿಕೊಳ್ಳಲು ಸಾರಿಗೆ ವ್ಯವಸ್ಥೆ ಇಲ್ಲದ ಕಾರಣಕ್ಕೆ ಮೂರು ದಶಕಗಳ ಹಿಂದೆ ರಾಘೋಜಿ ಸಿಮೆಂಟ್ ಇಂಡಸ್ಟ್ರಿ ಬಾಗಿಲು ಮುಚ್ಚಿತ್ತು. ಬಿಣಗಾದಲ್ಲಿ ಬಿರ್ಲಾ ಗ್ರಾಸಿಮ್ ಇಂಡಸ್ಟ್ರಿ ಇದ್ದರೂ ಉದ್ಯೋಗಾವಕಾಶ ಸೀಮಿತವಾಗಿದೆ.
ಉತ್ತರ ಕರ್ನಾಟಕ ಮತ್ತು ಕರಾವಳಿ ಬೆಸೆಯುವ ರಾಷ್ಟ್ರೀಯ ಹೆದ್ದಾರಿ ಇದ್ದರೂ ಮಳೆಗಾಲದಲ್ಲಿ ಭೂಕುಸಿತದ ಸಮಸ್ಯೆಯಿಂದ ಸಂಚಾರ ಸ್ಥಗಿತಗೊಳ್ಳುವ ಆತಂಕ ಇದ್ದೇ ಇದೆ. ಕೊಂಕಣ ರೈಲು ಹಾದುಹೋದರೂ ಸಂಪರ್ಕ ಕರಾವಳಿ ಭಾಗಕ್ಕೆ ಸೀಮಿತವಾಗಿದೆ. ಬಹುನಿರೀಕ್ಷಿತ ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆಗೆ ಪರಿಸರ ನಾಶದ ಕಾರಣ ನೀಡಿ ಪರಿಸರವಾದಿಗಳು ಹೋರಾಟ ನಡೆಸಿ, ಕೋರ್ಟ್ ಮೆಟ್ಟಲೇರಿದ್ದರಿಂದ ದಶಕಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ.
‘ಈ ಹಿಂದೆ ಕಾಶ್ಮೀರ ಮೂಲದ ಲಿಬರ್ಟಿ ಆಯಿಲ್, ಟಾಟಾ ಸ್ಟೀಲ್ ಕಂಪನಿಯ ಘಟಕಗಳು ಕಾರ್ಯಾರಂಭಿಸಲು ಮಾಜಾಳಿ ಬಳಿ ಜಾಗ ಹುಡುಕಾಡಿದ್ದವು. ಪರಿಸರ ನಾಶದ ನೆಪವೊಡ್ಡಿ ನಡೆಸಿದ ಹೋರಾಟದ ಪರಿಣಾಮ ಆ ಕೈಗಾರಿಕೆಗಳು ಕಾಲ್ಕಿತ್ತವು’ ಎಂದು ತೆರಿಗೆ ಸಲಹೆಗಾರ ಜಗದೀಶ ಬಿರ್ಕೋಡಿಕರ್ ತಿಳಿಸಿದರು.
‘ಕಾರವಾರದಿಂದ ಕೇವಲ 45 ರಿಂದ 50 ಕಿ.ಮೀ ಅಂತರದಲ್ಲಿ ಗೋವಾ ರಾಜ್ಯದ ಮಡಗಾಂವನಿಂದ ಕೈಗಾರಿಕೆ ಪ್ರದೇಶಗಳಿವೆ. ಅಲ್ಲಿ ನೂರಾರು ಕಂಪನಿಗಳಿವೆ. ಗೋವಾ ರಾಜ್ಯದ ಕೈಗಾರಿಕಾ ಸ್ನೇಹಿ ನೀತಿ ಕೈಗಾರಿಕೆ ಸ್ಥಾಪನೆಗೆ ವರವಾಗುತ್ತಿದೆ. ಆದರೆ, ಅಂತಹ ಕೈಗಾರಿಕೆ ಪರ ನೀತಿ ಕರ್ನಾಟಕದಲ್ಲಿ ಇಲ್ಲದಿರುವುದೂ ಕೈಗಾರಿಕೋದ್ಯಮಿಗಳು ಹೂಡಿಕೆಗೆ ಹಿಂದೇಟು ಹಾಕಲು ಇನ್ನೊಂದು ಕಾರಣ’ ಎಂದು ಬೇಸರದಿಂದ ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಮಾನವ ಶಕ್ತಿ, ಕಚ್ಚಾ ಸಾಮಗ್ರಿ, ವಿದ್ಯುತ್, ನೀರು ಹಾಗೂ ಸಾರಿಗೆ ವ್ಯವಸ್ಥೆ ಸಾಕಷ್ಟು ಸಮೃದ್ಧವಾಗಿದೆ. ಆದರೆ, ಅಗತ್ಯದಷ್ಟು ಭೂಮಿ ಇಲ್ಲದ ಕಾರಣ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಹಿನ್ನಡೆಯಾಗಿದೆ. ಇದರಿಂದ ಮಹಾರಾಷ್ಟ್ರ ಹಾಗೂ ಗೋವಾದ ನಗರಗಳಿಗೆ ದುಡಿಯಲು ವಲಸೆ ಹೋಗುವುದೂ ಮುಂದುವರಿದಿದೆ. ಮಳೆಗಾಲದಲ್ಲಿ ಕೃಷಿ ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸಗಳು ಸಿಗುತ್ತವೆ. ಆದರೆ, ಬೇಸಿಗೆಯಲ್ಲಿ ವಲಸೆ ಹೋಗುವುದು ಅನಿವಾರ್ಯವಾಗಿದೆ. ಈಗಲೂ ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಜನ ಪುಣೆ, ಮುಂಬೈ, ಕೊಲ್ಹಾಪುರ, ಗೋವಾದ ನಗರಗಳಿಗೆ ದುಡಿಯಲು ಹೋಗುತ್ತಾರೆ.
ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 1,000ಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಇವೆ. ನಗರದಲ್ಲಿ ಉತ್ಪಾದನೆ ಆಗುವ ಹೈಡ್ರಾಲಿಕ್, ವಿವಿಧ ಆಟೊಮೊಬೈಲ್, ಬಾಹ್ಯಾಕಾಶ ಸಂಶೋಧನೆಯ ಬಿಡಿಭಾಗಗಳು, ವಾಯುಯಾನ ಉದ್ಯಮದ ಅಗತ್ಯತೆಗಳು, ರಕ್ಷಣಾ ಉತ್ಪನ್ನಗಳನ್ನು, ದ್ರಾಕ್ಷಿ ಹಣ್ಣು, ಬೆಲ್ಲ, ಸಕ್ಕರೆ ಮುಂತಾದ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಆದರೆ, ಇಲ್ಲಿ ‘ಕೈಗಾರಿಕಾ ವಸಾಹತು’ ಸ್ಥಾಪಿಸಬೇಕು ಎಂಬ ಬಹುದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ.
2022ರಲ್ಲಿ ಮುರುಗೇಶ ನಿರಾಣಿ ಕೈಗಾರಿಕಾ ಸಚಿವರಾಗಿದ್ದಾಗ 50 ಸಾವಿರ ಎಕರೆ ‘ಭೂ ಬ್ಯಾಂಕ್’ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದರು. ಸರ್ಕಾರ ಬದಲಾದ ಬಳಿಕ ಆ ಯೋಜನೆ ಮೂಲೆ ಸೇರಿದೆ. ಬೆಳಗಾವಿ ತಾಲ್ಲೂಕಿನ ಯಮನಾಪುರ ಬಳಿ 4,000 ಎಕರೆ ಸರ್ಕಾರಿ ಜಾಗವಿದೆ. ಅಲ್ಲಿ ಕೈಗಾರಿಕಾ ಹಬ್ ಮಾಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದರು. ಈ ಬಗ್ಗೆ ಯಾವುದೇ ಬೆಳವಣಿಗೆಗಳು ಕೂಡ ಆಗಿಲ್ಲ.
‘ಆ್ಯಪಲ್ ಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿಗೆ ಬಿಡಿಭಾಗಗಳನ್ನು ತಯಾರಿಸಿಕೊಡುವ ಎಸ್‌ಎಫ್‌ಎಸ್ ಕಂಪನಿಯು ಬೆಳಗಾವಿಯಲ್ಲಿ ₹250 ಕೋಟಿ ಬಂಡವಾಳ ಹೂಡಲು ಮುಂದೆ ಬಂದಿದೆ. ಇದಕ್ಕೆ 30 ಎಕರೆ ಭೂಮಿ ಕೇಳಿದ್ದು, ಒದಗಿಸಲಾಗುವುದು’ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದ್ದರು. ವರ್ಷ ಕಳೆದರೂ ಒಂದು ಇಂಚು ಜಾಗ ಕೂಡ ಗುರುತಿಸಲಾಗಿಲ್ಲ.
ಜಿಲ್ಲೆಯಲ್ಲಿ 26 ಸಕ್ಕರೆ ಕಾರ್ಖಾನೆಗಳಿವೆ. ಹೀಗಾಗಿ, ಕಬ್ಬು ಬೆಳೆಗಾರರಿಗೆ ಅವಕಾಶಗಳು ಹೆಚ್ಚು. ಅಥಣಿ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ದ್ರಾಕ್ಷಿ ಸಂಸ್ಕರಣಾ ಘಟಕ, ಶೀಥಲೀಕರಣ ಘಟಕ ಸ್ಥಾಪಿಸಬೇಕು ಎಂಬ ಬೇಡಿಕೆ 50 ವರ್ಷಗಳಿಂದ ಇದೆ. ಶೇ 90ರಷ್ಟು ದ್ರಾಕ್ಷಿ ಒಣದ್ರಾಕ್ಷಿ ಉತ್ಪಾದನೆಗೆ ಅವಕಾಶವಿದೆ. ಆದರೂ ಸರ್ಕಾರ ಇದರತ್ತ ಗಮನ ಹರಿಸಿಲ್ಲ. ಇದರಿಂದ ಎಲ್ಲ ದ್ರಾಕ್ಷಿ ಮಹಾರಾಷ್ಟ್ರದ ಪಾಲಾಗುತ್ತಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಕೈಗಾರಿಕೆಗಳನ್ನು ತೆರೆದಿರುವ ರಾಜ್ಯದ 60 ಕೈಗಾರಿಕೋದ್ಯಮಿಗಳು, ತಮ್ಮ ತಾಯ್ನಾಡಾದ ಬೆಳಗಾವಿ ಜಿಲ್ಲೆಯಲ್ಲಿ ಉದ್ಯಮ ಸ್ಥಾಪನೆಗೆ ಆಸಕ್ತಿ ವಹಿಸಿದ್ದಾರೆ. ಖಾನಾಪುರ ತಾಲ್ಲೂಕಿನಲ್ಲಿ ಜಮೀನು ಒದಗಿಸುವಂತೆ ಕೋರಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಇದಕ್ಕೆ ಕಿವಿಗೊಟ್ಟಿಲ್ಲ.
ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರೇ ಲೋಕಸಭೆಯ ‘ವಾಣಿಜ್ಯ ಹಾಗೂ ಕೈಗಾರಿಕೆ ಸಂಸಧಿಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ರೈಲ್ವೆ ಮಾರ್ಗ ನಿರ್ಮಾಣಕ್ಕೆ ವಹಿಸಿದಷ್ಟು ಆಸಕ್ತಿಯನ್ನು ಅವರು ಕೈಗಾರಿಕಾ ವಸಾಹತು ಸ್ಥಾಪನೆಗೆ ವಹಿಸುತ್ತಿಲ್ಲ’ ಎಂಬುದು ಉದ್ಯಮಿಗಳ ದೂರು.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಕೂಡಗಿಯಲ್ಲಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರ (ಎನ್‌ಟಿಪಿಸಿ) ಮತ್ತು 10 ಸಕ್ಕರೆ ಕಾರ್ಖಾನೆಗಳನ್ನು ಹೊರತುಪಡಿಸಿದರೆ ಇನ್ನಾವುದೇ ಬೃಹತ್ ಕೈಗಾರಿಕೆಗಳು ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಭೂಮಿ, ನೀರು, ವಿದ್ಯುತ್, ರೈಲ್ವೆ, ಹೆದ್ದಾರಿಗಳಿವೆ. ಕೈಗಾರಿಕೆಗಳು ಬಂಡವಾಳ ಹೂಡಿಕೆಗೆ ಈವರೆಗೂ ಇತ್ತ ಮುಖ ಮಾಡದ ಕಾರಣ ಸಾವಿರಾರು ಜನರು ಉದ್ಯೋಗ ಅರಸಿ ನೆರೆಯ ಪುಣೆ, ಮುಂಬೈ, ಹೈದರಾಬಾದ್, ಬೆಂಗಳೂರು, ಮಂಗಳೂರು, ಪಣಜಿ ಸೇರಿ ವಿವಿಧ ನಗರ, ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯು ಸಮೀಪ ಇದೆ. ಆದರೆ, ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿ ದೊಡ್ಡ ಮಟ್ಟದಲ್ಲಿ ಆಗಿಲ್ಲ. ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶವೇ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಪ್ರಮುಖ ಕೈಗಾರಿಕಾ ಪ್ರದೇಶವಾಗಿದೆ. ಈ ಕೈಗಾರಿಕಾ ಪ್ರದೇಶದಲ್ಲಿಯೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇಂದಿಗೂ ನಿರೀಕ್ಷಿತ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿಲ್ಲ. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಾಗಿ 2,800 ಎಕರೆ ವಶಕ್ಕೆ ಪಡೆಯಲು ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಧಿಸೂಚನೆ ಹೊರಡಿಸಿದೆ. ಆದರೆ, ಇದಕ್ಕೆ ರೈತರ ವಿರೋಧವಿದೆ.
ಮಂಗಳೂರಿನ ಬ್ಲೂಬೆರಿ ಹಿಲ್ಸ್‌ನಲ್ಲಿ ಕಿಯೋನಿಕ್ಸ್‌ನ 3.5 ಎಕರೆ ಜಾಗವನ್ನು ಐಟಿ ಪಾರ್ಕ್ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಹಲವಾರು ವರ್ಷಗಳ ಹಿಂದೆ ಜಾಗ ನಿಗದಿ ಮಾಡಿದ್ದರೂ, ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಐಟಿ ಉದ್ಯೋಗಿಯೊಬ್ಬರು ಹೇಳುತ್ತಾರೆ.
‘ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯು ದೂರದರ್ಶಿತ್ವದ ಯೋಜನೆಗಳ ಕೊರತೆಯಿಂದ ಸೊರಗಿದೆ. 1980ರ ನಂತರ ಈ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳು ಅಷ್ಟಾಗಿ ಹುಟ್ಟಿಕೊಂಡಿಲ್ಲ. ಪರಿಸರ ರಕ್ಷಣೆ ಆಗಬೇಕು ಜೊತೆಗೆ ದೊಡ್ಡ ಉದ್ಯಮಗಳು ಜಿಲ್ಲೆಗೆ ಬರಬೇಕು. ಅಂತಹ ಯೋಜನೆಗಳನ್ನು ಜಿಲ್ಲೆಯ ಜನಪ್ರತಿನಿಧಿಗಳು ರೂಪಿಸಬೇಕಾಗಿತ್ತು. 1990ರ ನಂತರದ ವರ್ಷಗಳಲ್ಲಿ ಘಟಿಸಿದ ಕೋಮು ಸಂಘರ್ಷಗಳು ಜಿಲ್ಲೆಯ ಅಭಿವೃದ್ಧಿಯ ಮೇಲೆ ಕರಿನೆರಳು ಬೀರಿವೆ’ ಎನ್ನುತ್ತಾರೆ ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ.
‘ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿ 250 ಐಟಿ ಕಂಪನಿಗಳು ಇವೆ, 200ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಇವೆ. ಪರಿಸರ ಸೂಕ್ಷ್ಮ ಪ್ರದೇಶ, ಪಶ್ಚಿಮ ಘಟ್ಟ ಇರುವ ಕಾರಣ ಇಲ್ಲಿ ದೊಡ್ಡ ಉದ್ಯಮಕ್ಕೆ ಅಗತ್ಯವಾದ ಭೂಮಿ ಸಿಗುವುದು ಸವಾಲಾಗಿದೆ. ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್), ಗೇಲ್ ಕಂಪನಿ, ಪೆಟ್ರೊ ಕೆಮಿಕಲ್ ಉದ್ಯಮಗಳು ಪ್ರಸ್ತುತ ಇವೆ. ಸೇವಾ ಕ್ಷೇತ್ರ, ಉತ್ಪಾದಕ ವಲಯದಲ್ಲಿ ಪ್ರಗತಿ ಇದ್ದು, ಮುಂದಿನ 5–10 ವರ್ಷಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಗುವ ಭರವಸೆ ಇದೆ’ ಎನ್ನುತ್ತಾರೆ ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಹಮ್ಮದ್ ಮುದಸ್ಸರ್.
‘ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕಾ ಕ್ರಾಂತಿಯಾಗಲು ಪ್ರತ್ಯೇಕ ಕೈಗಾರಿಕಾ ನೀತಿ ಜಾರಿ ಮಾಡಿ, ಸ್ಥಿರ ಬಂಡವಾಳ ಹೂಡಿಕೆ ಸಬ್ಸಿಡಿ ಹಾಗೂ ಹೂಡಿಕೆ ಉತ್ತೇಜನ ಯೋಜನೆಗಳನ್ನು ರೂಪಿಸಬೇಕು. ಬಿಯಾಂಡ್ ಬೆಂಗಳೂರಿನಿಂದ ಹೊರ ಬಂದು ಕಲ್ಯಾಣದತ್ತ ದೃಷ್ಟಿ ಹಾಯಿಸಬೇಕು. ನೀರು, ವಿಶಾಲವಾದ ಭೂಪ್ರದೇಶವಿದೆ. ಏರೋಸ್ಪೇಸ್, ಸೆಮಿಕಂಡೆಕ್ಟರ್ ಚಿಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಬೇಕು’ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ.
ಕಲಬುರಗಿ ಏಳೆಂಟು ಸಿಮೆಂಟ್ ಕಾರ್ಖಾನೆಗಳಿದ್ದರೂ ಸ್ಥಳೀಯರಿಗೆ ಉದ್ಯೋಗ ಅವಕಾಶಗಳಿಲ್ಲ. ಸಿಮೆಂಟ್ ಕಾರ್ಖಾನೆಗೆ ಪೂರೈಕೆಯಾಗುವ ಸುಣ್ಣದ ಕಲ್ಲು ಗಣಿಗಾರಿಕೆಯು ನಿಜಾಮನ ಕಾಲದಲ್ಲಿದೆ. ಗಣಿಗಾರಿಕೆ ಮಾಡುವವರಿಗೆ ಸರಿಯಾಗಿ ಬ್ಯಾಂಕ್ ಸಾಲ ಸಿಗುವುದಿಲ್ಲ. ವ್ಯವಸ್ಥಿತವಾದ ಸಂಘಟನೆಯೂ ಇಲ್ಲವಾಗಿದೆ. ಒಂದು ಜಿಲ್ಲೆ ಉತ್ಪನ್ನದಡಿ ಸುಣ್ಣದ ಕಲ್ಲು ಆಯ್ಕೆಯಾಗಿದ್ದರೂ ಕ್ವಾರಿ ಮಾಲೀಕರಿಗೆ ನಯಾಪೈಸೆ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಬೇಸರ.
ರಾಯಚೂರು ಜಿಲ್ಲೆಯ ವಿಷಯದಲ್ಲೂ ಸರ್ಕಾರ ಗಂಭೀರವಾಗಿಲ್ಲ. ಬಂಡವಾಳ ಹೂಡಿಕೆ ಅವಕಾಶಗಳಿದ್ದರೂ ಸರ್ಕಾರಗಳು ಅದಕ್ಕೆ ದಾರಿ ಮಾಡಿಕೊಡುತ್ತಿಲ್ಲ. ಜನ ಸಾಮಾನ್ಯರು, ಕಾರ್ಮಿಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. 2022ರಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಒಟ್ಟು 7 ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಮಾಡಲು ತೀರ್ಮಾನಿಸಿದೆ. ಕರ್ನಾಟಕದಲ್ಲಿ ಮಾತ್ರ ಸ್ಥಳ ಆಯ್ಕೆ ಮಾಡುವಲ್ಲೇ ಎಡವಿದೆ.
ರಾಯಚೂರು ಜಿಲ್ಲೆಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಪೂರಕ ವಾತಾವರಣ ಇದೆ. ಮೂಲಸೌಕರ್ಯ ಒದಗಿಸಿದರೂ ಸಾಕು ಜವಳಿ ಉದ್ಯಮ ಕೋಟ್ಯಂತರ ರೂಪಾಯಿ ವಹಿವಾಟು ಮಾಡಲು ಸಾಧ್ಯವಾಗಲಿದೆ. ಕೇಂದ್ರ ಸರ್ಕಾರ ಕಲಬುರ್ಗಿಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಮಂಜೂರಾತಿ ನೀಡಿದೆ. ಅಲ್ಲಿ ಸಿಮೆಂಟ್ ಕಾರ್ಖಾನೆಗಳು ಇರುವುದರಿಂದ ಜಿನ್ನಿಂಗ್ ಫ್ಯಾಕ್ಟರಿ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ರಾಯಚೂರು ನಗರದಲ್ಲಿ 65 ಜಿನ್ನಿಂಗ್ ಪ್ರೆಸಿಂಗ್ ಮಿಲ್‌ಗಳು ಇವೆ. ಜಿಲ್ಲೆಯಲ್ಲಿ ಒಟ್ಟು 118 ಫ್ಯಾಕ್ಟರಿಗಳಿರುವುದರಿಂದ 10 ಲಕ್ಷ ವರೆಗೆ ಹತ್ತಿ ಬೇಲ್‌ಗಳನ್ನು ತಯಾರಿಸಲಾಗುತ್ತಿದೆ. ವರ್ಷದಲ್ಲಿ ಒಟ್ಟು 14 ಲಕ್ಷ ಬೇಲ್‌ಗಳನ್ನು ಸಿದ್ಧಪಡಿಸಲಾಗುತ್ತದೆ.
‘ಜಿಲ್ಲೆಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಮಾಡಿದರೆ ಸಾಗಣೆ ವೆಚ್ಚ ಕಡಿಮೆಯಾಗಲಿದೆ. ರೈತರ ಹತ್ತಿಗೂ ಉತ್ತಮ ಬೆಲೆ ಕೊಡಬಹುದು. ಜಿಲ್ಲೆಯಲ್ಲಿ ಪರಿಸರ ಮಾಲಿನ್ಯವಿಲ್ಲ. ಉತ್ಕೃಷ್ಟವಾದ ಬೇಲ್‌ಗಳನ್ನು ತಯಾರಿಸಬಹುದು. ಅಲ್ಲದೇ 15 ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಅನುಕೂಲವಾಗಲಿದೆ’ ಎಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಹೇಳುತ್ತಾರೆ.
ಒಟ್ಟಾರೆ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕ ಪ್ರಗತಿ ಆಶಾದಾಯಕವಾಗಿಲ್ಲ. ಒಂದು ವೇಳೆ ಸ್ಥಾಪನೆಯ ಸಿದ್ಧತೆ ನಡೆದರೂ ನೂರೆಂಟು ತೊಡಕುಗಳಿವೆ. ಅನಿವಾರ್ಯವಾಗಿ ಕೆಲಸ ಹುಡುಕಿಕೊಂಡು, ಅವರು ಪರವೂರುಗಳಿಗೆ ಹೋಗುವಂತಹ ಪರಿಸ್ಥಿತಿ ಇದೆ.
ಪರಿಕಲ್ಪನೆ: ಜಿ.ಡಿ.ಯತೀಶ್ ಕುಮಾರ್
ಪೂರಕ ಮಾಹಿತಿ: ವಿವಿಧ ಬ್ಯೂರೊಗಳಿಂದ
ಆಹಾರ ಸಂಸ್ಕರಣೆ ವಲಯದಲ್ಲಿ ಕಬ್ಬನ್ನು ಆಧರಿಸಿ ಎಥೆನಾಲ್ ಚಾಕೊಲೇಟ್ ಮತ್ತು ತಂಪು ಪಾನೀಯ ತಯಾರಿಕೆ ಘಟಕಗಳಿಗೆ ಹೆಚ್ಚು ಅವಕಾಶವಿದೆ. 20ಕ್ಕೂ ಹೆಚ್ಚು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ. ಮಾತುಕತೆ ಪ್ರಗತಿಯಲ್ಲಿದೆಎಂ.ಬಿ.ಪಾಟೀಲ ಸಚಿವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ
ಪ್ರತಿಭಾವಂತರ ವಲಸೆ ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದೇವೆ. ಜಿಲ್ಲೆಯ ಮೂಲದವರು ವಾಪಸ್ ಊರಿಗೆ ಬಂದು ಉದ್ಯಮ ಆರಂಭಿಸುವಂತೆ ಪ್ರೇರೇಪಿಸಿ ಹಲವು ಸಂಘಟನೆಗಳು ಸೇರಿ ಸರಣಿ ಕಾರ್ಯಕ್ರಮ ನಡೆಸಲಾಗಿದೆಪಿ.ಬಿ.ಅಹಮ್ಮದ್ ಮುದಸ್ಸರ್ ಅಧ್ಯಕ್ಷ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಕೆಸಿಸಿಐ)
ಉತ್ತರ ಕನ್ನಡದಂತಹ ಗಡಿ ಜಿಲ್ಲೆಯಲ್ಲಿ ಪರಿಸರ ಪೂರಕ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಪರಿಸರ ಹಾನಿ ಮಾಡದ ಕೈಗಾರಿಕೆ ಸ್ಥಾಪನೆ ಆಗಬೇಕಿದೆ. ಪರಿಸರ ಉದ್ಯೋಗ ಬೇಕು ವಲಸೆ ಬೇಡ ಎಂಬ ಧ್ಯೇಯದೊಂದಿಗೆ ಸರ್ಕಾರ ಯೋಜನೆ ರೂಪಿಸಲಿಯಮುನಾ ಗಾಂವ್ಕರ ಕಾರ್ಮಿಕ ಪರ ಹೋರಾಟಗಾರ್ತಿ
ಶಿಕ್ಷಣ ಪಡೆದರೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಅವಕಾಶವನ್ನೇ ಮಾಡಿಕೊಡದ ಕಾರಣದಿಂದ ಗೋವಾಕ್ಕೆ ದುಡಿಮೆಗೆ ವಲಸೆ ಹೋಗುವ ಸ್ಥಿತಿ ಸಾವಿರಾರು ಯುವಕರಿಗೆ ಬಂದಿದೆ ಸಂತೋಷಗೋವೇಕರ. ಉದ್ಯೋಗಿ ಉತ್ತರ ಕನ್ನಡ
ಇಲ್ಲಿ ಕಚೇರಿ ಹೊರ ರಾಜ್ಯದಲ್ಲಿ ಕೈಗಾರಿಕೆ!
ಕರ್ನಾಟಕದಲ್ಲಿ ಕಚೇರಿ ಮಾಡಿ ಹೊರರಾಜ್ಯಗಳಲ್ಲಿ ಉತ್ಪಾದನಾ ಘಟಕ ಹೊಂದಿರುವ ಕಂಪನಿಗಳು ಸಾಕಷ್ಟಿವೆ. ಕರ್ನಾಟಕಕ್ಕಿಂತ ನೆರೆಯ ರಾಜ್ಯಗಳಲ್ಲಿ ಕೈಗಾರಿಕೆ ಸ್ನೇಹಿ ವಾತಾವರಣ ಇರುವುದು ಇಂತಹ ನಿರ್ಧಾರದ ಅನಿವಾರ್ಯತೆ ಸೃಷ್ಟಿಸಿದೆ ಎಂಬುದು ಉದ್ಯಮಿಗಳ ವಾದ. ವಿದ್ಯುತ್ ಚಾಲಿತ ಸ್ಕೂಟರ್ ತಯಾರಿಕಾ ಕಂಪನಿ ‘ಏಥರ್ ಎನರ್ಜಿ’ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಇಲ್ಲಿಯೇ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಮಧ್ಯಮ ಮಟ್ಟದ ತಯಾರಿಕಾ ಘಟಕ ಹೊಂದಿರುವ ಕಂಪನಿಯು ಈಚೆಗೆ ಮಹಾರಾಷ್ಟ್ರದಲ್ಲಿ ಬೃಹತ್ ತಯಾರಿಕಾ ಘಟಕವನ್ನು ಸ್ಥಾಪಿಸಿದೆ. ಮಹಾರಾಷ್ಟ್ರ ಸರ್ಕಾರವು ಕಡಿಮೆ ದರದಲ್ಲಿ ಭೂಮಿ ಒದಗಿಸಿದೆ ಮತ್ತು ಹೆಚ್ಚಿನ ಮಟ್ಟದ ತೆರಿಗೆ ವಿನಾಯತಿ ನೀಡಿದೆ. ‘ಓಲಾ’ ಕಂಪನಿ ಕೂಡ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದರೂ ತಮಿಳುನಾಡಿನ ಹೊಸೂರಿಗೆ ಹೊಂದಿಕೊಂಡಂತೆ ವಿದ್ಯುತ್ ಚಾಲಿತ ಸ್ಕೂಟರ್ ತಯಾರಿಕಾ ಘಟಕ ‘ಗಿಗಾ ಫ್ಯಾಕ್ಟರಿ’ಯನ್ನು ಆರಂಭಿಸಿದೆ. ಘಟಕದ ವಿಸ್ತರಣೆ ಕಾರ್ಯವೂ ನಡೆದಿದೆ. ‘ಕೈಗಾರಿಕಾ ಭೂಮಿಯ ಬೆಲೆ ಕರ್ನಾಟಕಕ್ಕಿಂತ ಆಂಧ್ರಪ್ರದೇಶ ತಮಿಳುನಾಡು ಮಹಾರಾಷ್ಟ್ರದಲ್ಲಿ ಕಡಿಮೆ ಇದೆ. ಆ ರಾಜ್ಯಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಅತ್ಯಂತ ತ್ವರಿತವಾಗಿ ನಡೆಸಿ ಉದ್ಯಮಿಗಳಿಗೆ ಹಸ್ತಂತರಿಸಲಾಗುತ್ತದೆ. ಕೈಗಾರಿಕಾ ನಿವೇಶನ ಹಸ್ತಾಂತರಕ್ಕೂ ಮುನ್ನವೇ ಬಹುತೇಕ ಮೂಲಸೌಕರ್ಯಗಳನ್ನು ಒದಗಿಸಿರುತ್ತಾರೆ. ಇವೆಲ್ಲದರ ಪರಿಣಾಮವಾಗಿ ಉದ್ಯಮಗಳು ಕರ್ನಾಟಕಕ್ಕಿಂತ ಈ ರಾಜ್ಯಗಳನ್ನೇ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುತ್ತಿವೆ’ ಎನ್ನುತ್ತಾರೆ ಎಫ್‌ಕೆಸಿಸಿಐ ಹಿಂದಿನ ಅಧ್ಯಕ್ಷರೊಬ್ಬರು. ‘ಬಿಡದಿ ಘಟಕದಲ್ಲಿ ಬೇರೆ–ಬೇರೆ ಕಾರಣಗಳಿಗೆ ವರ್ಷವೊಂದರಲ್ಲಿ ಹಲವು ದಿನ ಕೆಲಸ ನಡೆಯುವುದೇ ಇಲ್ಲ. ಇಂತಹ ಬೆಳವಣಿಗೆಯನ್ನು ವಿದೇಶಿ ಹೂಡಿಕೆದಾರರು ಗಮನಿಸುತ್ತಿರುತ್ತಾರೆ. ಈ ಕಾರಣದಿಂದಲೇ ಹೊಸ ತಯಾರಿಕಾ ಘಟಕಗಳು ಕರ್ನಾಟಕಕ್ಕೆ ಬಂದಿಲ್ಲ’ ಎನ್ನುತ್ತಾರೆ. ‘ಕೆಲ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಹೀರೊ ಮೋಟೊಕಾರ್ಪ್ ದ್ವಿಚಕ್ರ ತಯಾರಿಕಾ ಘಟಕ ಆರಂಭಿಸುವ ಸಂಬಂಧ ಮಾತುಕತೆಯೂ ನಡೆದಿತ್ತು. ಕಂಪನಿ ಕೇಳಿದಷ್ಟು ವಿನಾಯತಿಯನ್ನು ಕರ್ನಾಟಕ ಸರ್ಕಾರ ನೀಡಲಿಲ್ಲ. ಈ ವಿಚಾರದಲ್ಲಿ ಕಂಪನಿ ಮತ್ತು ಸರ್ಕಾರ ವರ್ಷ ಕಾಲ ಜಗ್ಗಾಡಿದವು. ಇದೇ ಅವಕಾಶ ಬಳಸಿಕೊಂಡು ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರ ವಿಪರೀತ ಎನಿಸುವಷ್ಟು ರಿಯಾಯತಿ ಘೋಷಿಸಿದವು. ಕಡೆಗೆ ಹೀರೋ ಮೋಟೊಕಾರ್ಪ್ ತಯಾರಿಕಾ ಘಟಕ ಆಂಧ್ರ ಪ್ರದೇಶದ ಪಾಲಾಯಿತು’ ಎಂದು ವಿವರಿಸಿದರು.
ಬಾಲಕೃಷ್ಣ ಚಿತ್ರ ಬಳಸಿ ಸವಾಲುಗಳ ಕಾರಣದಿಂದ ಹಿಂದೇಟು
‘ಹೊಸ ಉದ್ಯಮ ಸ್ಥಾಪಿಸಬೇಕಾದರೆ ವಿವಿಧ ಇಲಾಖೆಗಳ ಅನುಮತಿ ಬೇಕು. ಈ ಇಲಾಖೆಗಳಿಗೆ ಅಲೆದಾಡಿ ಅನುಮತಿ ಪಡೆಯಲು 1 ವರ್ಷ ಬೇಕು. ಹೀಗಾದರೆ ಉದ್ಯಮಗಳು ರಾಜ್ಯದಲ್ಲಿ ಸ್ಥಾಪಪಿಸುವುದು ಯಾವಾಗ ಮತ್ತು ಹೇಗೆ? ಉದ್ಯಮ ಸ್ಥಾಪನೆಗೆ ಹಣಕಾಸಿನ ನೆರವು ಸಿಗುವುದಿಲ್ಲ. ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಲು ಪರಿವರ್ತಿಸುವಂತೆ ಮನವಿ ಸಲ್ಲಿಸಿ ಶುಲ್ಕ ಕಟ್ಟಿದರೂ ಪ್ರಯೋಜನ ಆಗುತ್ತಿಲ್ಲ. ಮೂಲಸೌಲಭ್ಯದ ಕೊರತೆ ಇದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ತಿಳಿಸಿದರು. ‘ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳಿಂದ ಪ್ರಸ್ತುತ ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ರಾಜ್ಯದ ಜಿಎಸ್‌ಟಿ ಸಂಗ್ರಹಕ್ಕೆ ಹೋಲಿಸಿದರೆ ನಮ್ಮದು ಕಡಿಮೆ. ಸರ್ಕಾರವು ರಾಜ್ಯದ ಇತರ ಕೈಗಾರಿಕೆಗಳಿಗೂ ಸೌಲಭ್ಯ ಕಲ್ಪಿಸಿದರೆ ಮೊದಲ ಸ್ಥಾನಕ್ಕೆ ತಲುಪಲಿದೆ. ರಾಜ್ಯದಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ₹15800 ಇದೆ. ಇದನ್ನು ಅಂದಾಜು ₹26 ಸಾವಿರಕ್ಕೆ ಹೆಚ್ಚಿಸಬೇಕು ಎನ್ನುತ್ತಿದ್ದಾರೆ’ ಎಂದು ಅವರು ವಿವರಿಸಿದರು. ‘ಪಕ್ಕದ ಆಂಧ್ರಪ್ರದೇಶ ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಕನಿಷ್ಠ ವೇತನ ರಾಜ್ಯಕ್ಕಿಂತಲೂ ಕಡಿಮೆ ಇದೆ. ಈ ರೀತಿ ವೇತನ ಹೆಚ್ಚಳದಿಂದ ತಯಾರಿಕಾ ವೆಚ್ಚವು ಹೆಚ್ಚಳವಾಗುತ್ತದೆ. ಇದು ಅಂತಿಮವಾಗಿ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಇಂದು ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಇದೆ. ಬೇರೆ ರಾಜ್ಯಗಳು ಕಡಿಮೆ ದರಕ್ಕೆ ಸರಕು ನೀಡುತ್ತಿರುವಾಗ ನಮ್ಮದು ಹೆಚ್ಚಿದ್ದರೆ ಖರೀದಿಗೆ ಜನ ಹಿಂಜರಿಯುತ್ತಾರೆ’ ಎನ್ನುತ್ತಾರೆ ಅವರು. ‘ಉದ್ಯಮ ಸ್ಥಾಪನೆಗೆ ರಾಜ್ಯದಲ್ಲಿ ಸವಾಲುಗಳಿರುವುರಿಂದ ಬೆಂಗಳೂರಿಗೆ ಸನಿಹದಲ್ಲೇ ಇರುವ ಆಂಧ್ರಪ್ರದೇಶದ ಪೆನುಕೊಂಡ ಮತ್ತು ಹಿಂದೂಪುರ ತಮಿಳುನಾಡಿನ ಹೊಸೂರು ಉದ್ಯಮಗಳನ್ನು ಆಕರ್ಷಿಸುತ್ತಿವೆ. ಅಲ್ಲಿನ ಸರ್ಕಾರಗಳು ಉದ್ಯಮಕ್ಕೆ ಪೂರಕವಾದ ಸವಲತ್ತು ಕಲ್ಪಿಸುತ್ತಿದೆ’ ಎಂದರು.
ದೇಶಪಾಂಡೆ ಚಿತ್ರ ಬಳಸಿ ಮರೀಚಿಕೆಯಾದ ಬೃಹತ್ ಕೈಗಾರಿಕೆ
ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಲು ಅಂತರರಾಷ್ಟ್ರೀಯ ರಾಷ್ಟ್ರೀಯ ಕಂಪನಿಗಳನ್ನು ಕರೆತರುವ ಪ್ರಯತ್ನ ಇಂದಿಗೂ ನನೆಗುದಿಗೆ ಬಿದ್ದಿದೆ. ಉತ್ತರ ಕನ್ನಡವೂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಕ್ಕು ಕೈಗಾರಿಕೆಗಳ ಸ್ಥಾಪನೆಗೆ ಕಂಪನಿಗಳು ಆರಂಭಿಕ ಆಸಕ್ತಿ ತೋರಿಸಿದ್ದವು. ಆದರೆ ಜನರ ವಿರೋಧ ಸರ್ಕಾರದ ನೀತಿಯ ಕಾರಣದಿಂದ ಹಿಂದೆ ಸರಿದವು ಎಂಬ ಆರೋಪಗಳಿವೆ. ‘ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ಉಕ್ಕು ಘಟಕ ಆರಂಭಕ್ಕೆ ಟಾಟಾ ಸ್ಟೀಲ್ ಜೊಯಿಡಾದಲ್ಲಿ ಕಲ್ಯಾಣಿ ಸ್ಟೀಲ್ ಮುಂದೆ ಬಂದಿದ್ದವು. ಕಾರವಾರದ ಮಾಜಾಳಿಯಲ್ಲಿ ತೈಲ ಘಟಕ ಆರಂಭಿಸಲು ಲಿಬರ್ಟಿ ಆಯಿಲ್ ಕಂಪನಿ ಮುಂದಾಗಿತ್ತು. ಪರಿಸರ ನಾಶದ ಕಾರಣ ನೀಡಿ ವಿರೋಧ ಹೆಚ್ಚಿದ್ದರಿಂದ ಕೈಗಾರಿಕೆ ಸ್ಥಾಪನೆ ಮರೀಚಿಕೆಯಾಯಿತು’ ಎಂದು ಹಿರಿಯ ತೆರಿಗೆ ಸಲಹೆಗಾರ ಜಗದೀಶ ಬಿರ್ಕೋಡಿಕರ್ ಹೇಳುತ್ತಾರೆ. ‘ಬಳ್ಳಾರಿ ಜಿಲ್ಲೆಯ ಕುಡತಿನಿ ಬಳಿ ತಾವು ಸಚಿವರಾಗಿದ್ದ ಅವಧಿಯಲ್ಲಿ ಆರ್ಸೆಲರ್ ಕಂಪನಿಗೆ ಉಕ್ಕಿನ ಕಾರ್ಖಾನೆ ಆರಂಭಿಸಲು 5 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಡಲಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನ ಕೈಗಾರಿಕೆ ವಿರೋಧಿ ನೀತಿಯಿಂದ ಕಂಪನಿ ಮುಂದಡಿ ಇಡಲಿಲ್ಲ’ ಎಂದು ಶಾಸಕ ಜನಾರ್ಧನ ರೆಡ್ಡಿ ಈಚೆಗಷ್ಟೆ ಆರೋಪಿಸಿದ್ದರು. ‘ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜನೆ ಮೂಲಕ ಕೈಗಾರಿಕೆಗಳನ್ನು ರಾಜ್ಯಕ್ಕೆ ಸೆಳೆಯಲು ಹಲವು ವರ್ಷದಿಂದ ಪ್ರಯತ್ನ ನಡೆಯುತ್ತಿದೆ. ಅಲ್ಲದೇ ಕೈಗಾರಿಕೆ ಸ್ನೇಹಿ ವಾತಾವರಣ ರೂಪಿಸಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕಾರ್ಖಾನೆ ಆರಂಭಕ್ಕೆ ಪ್ರಯತ್ನ ನಡೆಯಿತು. ಪೈಪೋಟಿ ಹೆಚ್ಚಿದ್ದು ಅನ್ಯರಾಜ್ಯಗಳು ಕೈಗಾರಿಕೆಗಳನ್ನು ತಮ್ಮತ್ತ ಸೆಳೆಯಲು ಕೈಗಾರಿಕೆ ನೀತಿ ಸಡಿಲಗೊಳಿಸಿದ್ದರಿಂದ ಹಲವು ಕಂಪನಿಗಳು ಕರ್ನಾಟಕದ ಬದಲು ಬೇರೆ ರಾಜ್ಯಗಳತ್ತ ಈ ಹಿಂದೆ ವಲಸೆ ಹೋದವು’ ಎನ್ನುತ್ತಾರೆ ಸುದೀರ್ಘ ಅವಧಿಗೆ ಬೃಹತ್ ಕೈಗಾರಿಕೆ ಸಚಿವರಾಗಿದ್ದ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.