ADVERTISEMENT

ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ: ಹಸಿರಾಗುತ್ತಿದೆ ವಿಜಯಪುರ

ಬಸವರಾಜ ಸಂಪಳ್ಳಿ
Published 28 ಫೆಬ್ರುವರಿ 2026, 23:30 IST
Last Updated 28 ಫೆಬ್ರುವರಿ 2026, 23:30 IST
<div class="paragraphs"><p>ವಿಜಯಪುರ ನಗರ ಸಮೀಪದ ಭೂತನಾಳ ಕೆರೆ ದಡದಲ್ಲಿ ಬೆಳೆಸಲಾಗಿರುವ ಗಿಡಗಳ ರಾಶಿ‌</p></div>

ವಿಜಯಪುರ ನಗರ ಸಮೀಪದ ಭೂತನಾಳ ಕೆರೆ ದಡದಲ್ಲಿ ಬೆಳೆಸಲಾಗಿರುವ ಗಿಡಗಳ ರಾಶಿ‌

   

ವಿಜಯಪುರ: ರಾಜ್ಯದಲ್ಲೇ ಅತೀ ಕಡಿಮೆ ಅಂದರೆ, ಕೇವಲ ಶೇ 0.17ರಷ್ಟು ಅರಣ್ಯ ಪ್ರದೇಶ ಇರುವ ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದೂವರೆ ದಶಕದ ಈಚೆಗೆ ಅನುಷ್ಠಾನಗೊಂಡ ವಿವಿಧ ನೀರಾವರಿ ಯೋಜನೆಗಳು, ಮಹಾತ್ಮ ಗಾಂಧಿ ರಾಷ್ಟ್ರಿಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ), ಅರಣ್ಯ ಇಲಾಖೆಯ ಪ್ರೋತ್ಸಾಹ ಕಾರ್ಯಕ್ರಮ, ಸಚಿವ ಎಂ.ಬಿ.ಪಾಟೀಲ ಕೈಗೊಂಡ ‘ಕೋಟಿ ವೃಕ್ಷ ಅಭಿಯಾನ’ ಹಾಗೂ ಎಲ್ಲದಕ್ಕೂ ಹೆಚ್ಚಾಗಿ ಜನ ಸಹಭಾಗಿತ್ವದ ಫಲವಾಗಿ ಇದೀಗ ಶೇ 2ರಷ್ಟು ಭೂ ಪ್ರದೇಶ ಹಸಿರೀಕರಣವಾಗಿದೆ.

ಕೃಷ್ಣಾ, ಭೀಮಾ, ಡೋಣಿ ನದಿಗಳ ಹರಿವಿನಿಂದ ಕೂಡಿರುವ ಜಿಲ್ಲೆಯಾದರೂ ಸತತವಾಗಿ ಬರಗಾಲ ಎದುರಿಸುವ ಬಿಸಿಲು ನಾಡಾಗಿದೆ ವಿಜಯಪುರ. ಜಿಲ್ಲೆಯು ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ವಾರ್ಷಿಕ ಸರಾಸರಿ 529 ಮಿ.ಮೀ. ಮಳೆಯಾಗುತ್ತದೆ. ವರ್ಷದಲ್ಲಿ 37 ರಿಂದ 40 ದಿನಗಳು ಮಾತ್ರ ಮಳೆಗಾಲದ ದಿನಗಳಾಗಿವೆ.

ADVERTISEMENT

ಜಿಲ್ಲೆಯ ಹವಾಮಾನ ಸಹ ಬಹಳ ವೈಫರಿತ್ಯದಿಂದ ಕೂಡಿದೆ. ಬೇಸಿಗೆಯಲ್ಲಿ 42.5 ಡಿಗ್ರಿ ಸೆಲ್ಸಿಯಸ್‌ ವರೆಗೂ ಉಷ್ಣಾಂಶವಿರುತ್ತದೆ. ಅಲ್ಲದೇ, ಅರಣ್ಯ ಪ್ರದೇಶವೂ ಕಡಿಮೆ. ದಶಕದ ಮೊದಲು ಅರಣ್ಯ ಇಲಾಖೆಯು ಪ್ರತಿ ವರ್ಷ ಆಚರಿಸುತ್ತಿದ್ದ ವನಮಹೋತ್ಸವದ ವೇಳೆಯಲ್ಲಿ ನೆಟ್ಟ ಲಕ್ಷಾಂತರ ಗಿಡಗಳು ನೀರು, ನಿರ್ವಹಣೆ, ರಕ್ಷಣೆ ಇಲ್ಲದೇ ಹೇಳ ಹೆಸರಿಲ್ಲದಂತಾಗುತ್ತಿದ್ದವು.

ಆಲಮಟ್ಟಿ ಜಲಾಶಯದಲ್ಲಿ ಕೃಷ್ಣಾ ನದಿ ನೀರು ಜಿಲ್ಲೆಯ ಕೆರೆಗಳಿಗೆ ತುಂಬಿಸಿದ ಬಳಿಕ ಅಂತರ್ಜಲ ಮಟ್ಟ ಹೆಚ್ಚಾಯಿತು, ನೀರು ಎಲ್ಲೆಂದರಲ್ಲಿ ಸಿಗತೊಡಗಿತು. ಪರಿಣಾಮ ರೈತರು ತಮ್ಮ ಹೊಲಗಳ ಬದುಗಳಲ್ಲಿ ಬಗೆಬಗೆಯ ಗಿಡಗಳನ್ನು ನೆಡತೊಡಗಿದರು. ಅಲ್ಲದೇ, ಪಾಳು ಬಿದ್ದಿದ್ದ ನೂರಾರು ಎಕರೆ ಹೊಲಗಳಲ್ಲಿ ಗಿಡಗಳನ್ನು ನೆಡತೊಡಗಿದರು. ಇದಕ್ಕೆ ಅರಣ್ಯ ಇಲಾಖೆ ನೆರವಾಯಿತು ಎನ್ನುತ್ತಾರೆ ಕೆಬಿಜಿಎನ್‌ಎಲ್‌ ಅರಣ್ಯ ವಿಭಾಗದ ಆರ್‌ಎಫ್‌ಒ ಮಹೇಶ ಪಾಟೀಲ.

ಕೆಬಿಜಿಎನ್‌ಎಲ್‌ ಅರಣ್ಯ ವಿಭಾಗ ಆಲಮಟ್ಟಿ ನರ್ಸರಿಯಲ್ಲಿ ಪ್ರತಿ ವರ್ಷ ಲಕ್ಷಾಂತರ (65 ಲಕ್ಷ) ಸಸಿಗಳನ್ನು ಬೆಳೆಸಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಆರಂಭಿಸಿತು. ಅಲ್ಲದೇ, 2010ರಿಂದ ಸಸಿ ನೆಟ್ಟು, ಅವುಗಳನ್ನು ಉಳಿಸಲು ವಿಶೇಷ ಆದ್ಯತೆ ನೀಡಿತು. ಅರಣ್ಯ ಇಲಾಖೆಯ (ಪ್ರಾದೇಶಿ ಅರಣ್ಯ ವಿಭಾಗ 43 ಲಕ್ಷ ಹಾಗೂ ಸಾಮಾಜಿಕ ಅರಣ್ಯ ವಿಭಾಗ 45 ಲಕ್ಷ ಸಸಿಗಳನ್ನು ಬೆಳೆಸಿತು) ಈ ಕಾರ್ಯಕ್ಕೆ ನರೇಗಾ ಯೋಜನೆ ಬೆನ್ನೆಲುಬಾಗಿ ನಿಂತಿತು. ಇದರಿಂದ ಪ್ರತಿ ವರ್ಷ ದೊಡ್ಡ ಮೊಟ್ಟದಲ್ಲಿ ಹಸಿರಿಕರಣ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ಮಹೇಶ ಪಾಟೀಲ.

ವಿಜಯಪುರ ಜಿಲ್ಲೆಯ ರೈತರು ಎಂದೂ ನೋಡದ, ಕೇಳದ, ಬೆಳೆಯದ ಗಿಡಗಳನ್ನು ಅರಣ್ಯ ಇಲಾಖೆ ಪರಿಚಯಿಸಿತು. ಅರಣ್ಯ ಇಲಾಖೆಯ ನರ್ಸರಿ ಎದುರು ರೈತರು ಪಾಳೆ ಹಚ್ಚಿ ನಿಂತು, ಶ್ರೀಗಂಧ, ರಕ್ತ ಚಂದನ, ಸಾಗುವಾನಿ, ಮಾವು, ಹಲಸಿನ ಗಿಡಗಳನ್ನು ತೆಗೆದುಕೊಂಡು ಹೋಗಿ ತಮ್ಮ ಹೊಲಗಳಲ್ಲಿ ನೆಟ್ಟು ಪೋಷಿಸತೊಡಗಿದರು. ಅರಣ್ಯ ಇಲಾಖೆ ರೈತರಿಗೆ ಗುಣಮಟ್ಟದ ಸಸಿಗಳನ್ನು ಶೇ 70ರಷ್ಟು ರಿಯಾಯಿತಿ ದರದಲ್ಲಿ ವಿತರಿಸಿತು.

2015–16ರಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕಡಿಮೆ ಇರುವುದನ್ನು ಮನಗಂಡು ‘ಕೋಟಿ ವೃಕ್ಷ ಅಭಿಯಾನ’ ಆರಂಭಿಸಿದರು. ಈ ಅಭಿಯಾನದ ಪರಿಣಾಮ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಒಂದು ಕೋಟಿ ವೃಕ್ಷ ನೆಟ್ಟು ಕಾಪಾಡಲಾಯಿತು. ಸಚಿವ ಪಾಟೀಲ ಅವರಿಂದ ಪ್ರೇರಿತರಾದ ಇತರೆ ಶಾಸಕರು, ಸಚಿವರು ಕೂಡ ತಮ್ಮ ಕ್ಷೇತ್ರಗಳಲ್ಲಿ ಕಾಡು ಬೆಳೆಸತೊಡಗಿದರು. ಇದೊಂದು ಟ್ರೆಂಡ್‌ ಆಗಿ ರೂಪುಗೊಂಡಿತು. ಪರಿಣಾಮ ಹಸಿರಿಕರಣ ಹೆಚ್ಚಾಗಿದೆ ಎನ್ನುತ್ತಾರೆ ಅವರು.

ಜೊತೆಗೆ, ಕೂಡಗಿ ಎನ್‌ಟಿಪಿಸಿ (ರಾಷ್ಟ್ರೀಯ ಉಷ್ಣ ವಿದ್ಯುತ್‌ ಘಟಕ)ಯು ಜಿಲ್ಲೆಯಲ್ಲಿ ಹರಿಸೀಕರಣಕ್ಕೆ ಕೈಜೋಡಿಸಿತು. ತನ್ನ ಹತ್ತಾರು ಕೋಟಿ ಸಿಎಸ್‌ಆರ್‌ ಅನುದಾನವನ್ನು ವಿನಿಯೋಗಿಸಿತು. ಇದೆಲ್ಲದರ ಪರಿಣಾಮ ಅರಣ್ಯ ಪ್ರದೇಶ ಹೆಚ್ಚಳವಾಗತೊಡಗಿದೆ ಎಂದು ತಿಳಿಸಿದರು.

ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ವೇಳೆ ಗಿಡಮರಗಳನ್ನು ಬೆಳೆಸಲು ಪ್ರೇರಣೆ ನೀಡಿದ ಪರಿಣಾಮ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಮದುವೆ, ನಾಮಕರಣ ಮತ್ತಿತರರ ಶುಭ ಕಾರ್ಯಗಳಲ್ಲಿ ಸಸಿಗಳನ್ನು ನೀಡುವ ಸಂಪ್ರದಾಯ ಹೆಚ್ಚಿತು. ಇದೆಲ್ಲದರ ಪರಿಣಾಮ ಜಿಲ್ಲೆ ನಿಧಾನವಾಗಿ ಹಸಿರಾಗತೊಡಗಿದೆ ಎನ್ನುತ್ತಾರೆ ಅವರು.

6.5 ಸಾವಿರ ಹೆಕ್ಟೆರ್‌ನಲ್ಲಿ ಹಸೀರಿಕರಣ:
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ 1300 ಹೆಕ್ಟೇರ್‌, ಭೂತನಾಳದಲ್ಲಿ 200 ಹೆಕ್ಟೇರ್‌, ಮಮದಾಪುರದಲ್ಲಿ 400 ಹೆಕ್ಕೇರ್‌. ಎನ್‌ಟಿಪಿಸಿ 100, ಬೇನಾಳ 100 ಹೆಕ್ಟೇರ್‌, ಮದಬಾವಿ, ಹಲಗುಣಕಿ, ಬಬಲಾದ, ಸಾವಳಸಂಗ, ಮರಗೂರ, ಗೊಣಸಗಿ, ಬಿಜ್ಜರಗಿ, ಹಂದ್ರಾಳ, ಮಲಗಲದಿನ್ನಿ, ಚಿಕ್ಕರೂಗಿ ಸೇರಿದಂತೆ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಮತ್ತು ಜಿಲ್ಲಾ ರಸ್ತೆಗಳ ಇಕ್ಕೆಲಗಳಲ್ಲಿ, ವಿವಿಧ ಸಂಘ– ಸಂಸ್ಥೆ, ಇಲಾಖೆಯ ಖಾಲಿ ಜಾಗದಲ್ಲಿ ಕಳೆದ ಒಂದು ದಶಕದಲ್ಲಿ 6.5 ಸಾವಿರ ಹೆಕ್ಟೇರ್‌ನಲ್ಲಿ 1.5 ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದು ವಿಜಯಪುರ ವಲಯ ಅರಣ್ಯಾಧಿಕಾರಿ(ಆರ್‌ಎಫ್‌ಒ) ಸಂತೋಷ ಆಜೂರ ತಿಳಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಎಂಎನ್‌ಆರ್‌ಜಿ) ಅನುದಾನ, ಅರಣ್ಯ ಇಲಾಖೆ ಅನುದಾನ, ಎನ್‌ಟಿಪಿಸಿ ಸಿಎಸ್‌ಆರ್‌ ಅನುದಾನ, ರಾಜ್ಯ ಸರ್ಕಾರದ ವಿಶೇಷ ಅನುದಾನ ಸೇರಿದಂತೆ ಸುಮಾರು ₹100 ಕೋಟಿಗೂ ಅಧಿಕ ಹಣವನ್ನು ಜಿಲ್ಲೆಯ ಹಸಿರಿಕರಣಕ್ಕೆ ಈಗಾಗಲೇ ವಿನಿಯೋಗಿಸಲಾಗಿದೆ ಎಂದು ಹೇಳಿದರು.

ಹಸಿರು ಹೊದಿಕೆ ಹೆಚ್ಚಳ:
‘ವಿಜಯಪುರ ಜಿಲ್ಲೆಯಲ್ಲಿ ಲಭ್ಯವಿರುವ ಕಂದಾಯ (ಸಿ ಮತ್ತು ಡಿ ವರ್ಗದ) ಜಮೀನುಗಳನ್ನು ಅರಣ್ಯ ಇಲಾಖೆಗೆ ಪರಿಹಾರಾತ್ಮಕ ನೆಡುತೋಪು ಬೆಳೆಸಲು ಹಂಚಿಕೆ ಮಾಡುವಂತೆ ಕೋರಿದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿಯವರು 187 ಹೆಕ್ಟೇರ್‌ ಅರಣ್ಯೇತರ ಪ್ರದೇಶವನ್ನು ಇಲಾಖೆಯ ಹೆಸರಿಗೆ ಇಂಡೀಕರಣಗೊಳಿಸುವ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ. ಇದಲ್ಲದೇ, ವಿಜಯಪುರ ಜಿಲ್ಲೆಯಲ್ಲಿ 325 ಹೆಕ್ಟೇರ್‌ ಪರಿಭಾವಿತ ಅರಣ್ಯ ಪ್ರದೇಶವನ್ನು(ಡೀಮ್ಡ್‌) ಅಧಿಸೂಚಿತಗೊಳಿಸುವ ಪ್ರಕ್ರಿಯೆ ಕೂಡ ಜಾರಿಯಲ್ಲಿದೆ. ಇದರಿಂದ ಮುಂದಿನ ದಿನಗಳಲ್ಲಿ 2318 ಹೆಕ್ಟೇರ್‌ ಅರಣ್ಯ ಪ್ರದೇಶ ಲಭ್ಯವಾಗುವುದರಿಂದ ಜಿಲ್ಲೆಯಲ್ಲಿ ಶೇ 2.07 ರಷ್ಟು ಹಸಿರು ಹೊದಿಕೆ ಹೆಚ್ಚಳವಾಗಲಿದೆ’ ಎಂದು ಬೆಳಗಾವಿ ಅರಣ್ಯ ವಿಭಾಗದ ಸಿಸಿಎಫ್‌ ಮಂಜುನಾಥ ಚವ್ಹಾಣ ಖಚಿತಪಡಿಸಿದ್ದಾರೆ.

ಇಳಿದ ಬಿಸಿಲಿನ ಝಳ, ಏರಿದ ಮಳೆ ದಿನ

ಅದು 2016ನೇ ಇಸವಿ. ಇಡೀ ವಿಜಯಪುರ ಜಿಲ್ಲೆಯಲ್ಲಿ ಕೇವಲ ಶೇಕಡ 0.17ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ ಎಂದು ತಿಳಿದಾಗ ಆಘಾತವಾಯಿತು. ಆಗ ಕೂಡಲೇ ಎಚ್ಚೆತ್ತುಕೊಂಡು ಬಿ.ಎಲ್.ಡಿ.ಇ ಅಸೋಸಿಯೇಷನ್ ನೇತೃತ್ವದಲ್ಲಿ ಪಕ್ಷಾತೀತವಾಗಿ ಹಲವು ಸಂಘಟನೆಗಳು ಮತ್ತು ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ವೃಕ್ಷಥಾನ್- ಕೋಟಿ ವೃಕ್ಷ ಅಭಿಯಾನ ರೂಪಿಸಲಾಯಿತು. ಪರಿಣಾಮವಾಗಿ ಒಂಬತ್ತು ವರ್ಷಗಳಲ್ಲಿ ‌ಜಿಲ್ಲೆಯಲ್ಲಿ ಒಂದೂವರೆ ಕೋಟಿ ಗಿಡಗಳನ್ನು ನೆಡಲಾಗಿದೆ. ಜೊತೆಗೆ ಇವನ್ನೆಲ್ಲ ಹನಿ ನೀರಾವರಿ ಮೂಲಕ ಪೋಷಿಸಲಾಗಿದೆ. ಇದರಲ್ಲಿ ರೈತರನ್ನೂ ಸೇರಿಸಿಕೊಳ್ಳಲಾಗಿದ್ದು, ಅವರು ಕೇಳಿದ ಗಿಡಗಳನ್ನು ಪೂರೈಸಲಾಗುತ್ತಿದೆ.

ಈ ಉಪಕ್ರಮದಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದ್ದು, ಬಿಸಿಲಿನ ಝಳ 0.5 ರಿಂದ 1.5 ಡಿ.ಸೆ.ನಷ್ಟು ಕಡಿಮೆಯಾಗಿದೆ. ಜೊತೆಗೆ ಸರಾಸರಿ ಮಳೆಯ ಪ್ರಮಾಣವು 550 ಮಿ.ಲೀ.ನಿಂದ 650 ಮಿ.ಲೀ.ಗೆ ವರ್ಧಿಸಿದೆ. ಜಿಲ್ಲೆಯ ಹಸಿರು ಕವಚ ಈಗ ಶೇಕಡ 2.4ರಷ್ಟಾಗಿದೆ. ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಇನ್ನೂ 3.50 ಕೋಟಿ ಗಿಡಗಳನ್ನು ನೆಡಲಾಗುವುದು. ಈ ಮೂಲಕ ವೃಕ್ಷಥಾನ್ ಅಡಿಯಲ್ಲಿ ನಾವು ನೆಡುವ ಗಿಡಗಳ ಸಂಖ್ಯೆ 5 ಕೋಟಿ ಆಗಲಿದೆ. ಒಟ್ಟಾರೆಯಾಗಿ ಇದರಿಂದ ಮಣ್ಣಿನ ಸವಕಳಿಗೆ ತಡೆ ಬಿದ್ದಿದ್ದು, ಮರು ಅರಣ್ಯೀಕರಣ ಕೂಡ ಸಾಧ್ಯವಾಗಿದೆ. ಪರಿಸರವನ್ನು ಕಾಪಾಡಿಕೊಳ್ಳುವುದು ಹೀಗೆ ಒಂದು ಆಂದೋಲನವಾಗಿ, ಸಾಮೂಹಿಕ ಹೊಣೆಗಾರಿಕೆಯ ರೂಪ ಪಡೆದುಕೊಳ್ಳಬೇಕು. ಇಂತಹ ಒಂದು ಹೆಜ್ಜೆಯಿಂದ ವಿಜಯಪುರವು ಈಗ ಬರಪೀಡಿತ ಮತ್ತು ರಣಬಿಸಿಲಿನ ಪ್ರದೇಶ ಎನ್ನುವ ಕುಖ್ಯಾತಿ ಹಳೆಯ ಮಾತಾಗಿದ್ದು, ಈಗ ಹಸಿರಿನ ಕವಚ ಸೃಷ್ಟಿಯಾಗಿದೆ.

-ಎಂ.ಬಿ.ಪಾಟೀಲ, ವಿಜಯಪುರ ಜಿಲ್ಲಾ ಉಸ್ತುವಾರಿ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ
ಮೂಲಸೌಕರ್ಯ ಅಭಿವೃದ್ಧಿ ಸಚಿವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.