ADVERTISEMENT

ಒಳನೋಟ | ಭೂಮಾಫಿಯಾದ ಮಾಯಾಜಾಲ: ನಿಮ್ಮ ಮನೆಯನ್ನೂ ಕಸಿದಾರು ಹುಷಾರು

ಜಯಸಿಂಹ ಆರ್.
Published 12 ಅಕ್ಟೋಬರ್ 2025, 0:01 IST
Last Updated 12 ಅಕ್ಟೋಬರ್ 2025, 0:01 IST
<div class="paragraphs"><p>ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಕೆರೆಕತ್ತಿಗನೂರು ಗ್ರಾಮದ, ನಾಗಯ್ಯ ಮತ್ತು ನಿಂಗಯ್ಯ ಕುಟುಂಬದವರ ಮಧ್ಯೆ ಭೂ ವ್ಯಾಜ್ಯಕ್ಕೆ ಗುರಿಯಾಗಿದ್ದ ಜಮೀನಿನ ಪಕ್ಷಿನೋಟ </p></div>

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಕೆರೆಕತ್ತಿಗನೂರು ಗ್ರಾಮದ, ನಾಗಯ್ಯ ಮತ್ತು ನಿಂಗಯ್ಯ ಕುಟುಂಬದವರ ಮಧ್ಯೆ ಭೂ ವ್ಯಾಜ್ಯಕ್ಕೆ ಗುರಿಯಾಗಿದ್ದ ಜಮೀನಿನ ಪಕ್ಷಿನೋಟ

   

ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್‌ ಪಿ.ಎಸ್‌.

ಬೆಂಗಳೂರು: ಮೈಚಾಚುತ್ತಲೇ ಇರುವ ಮಹಾನಗರ, ಆಕಾಶವನ್ನೇ ಚುಂಬಿಸುವಂತೆ ಮೇಲೇಳುತ್ತಿರುವ ಕಟ್ಟಡಗಳು, ಚಿನ್ನವನ್ನೇ ಉದುರಿಸು ವಂತಹ ಬಾಡಿಗೆ ತರುವ ವಾಣಿಜ್ಯ ಸಂಕೀರ್ಣ ನಿರ್ಮಾಣ... ಹೀಗೆಲ್ಲ ಕಾರಣ ಗಳಿಂದಾಗಿ ಭೂಮಿಯ ಬೆಲೆ ಹಳದಿ ಲೋಹವನ್ನು ಮೀರಿಸುವತ್ತ ಸಾಗುತ್ತಿದೆ. ಇದರ ಬೆನ್ನಲ್ಲೇ, ಮುಗ್ಧರು, ಅಸಹಾಯಕರು, ಹಿರಿಯ ನಾಗರಿಕರ ಹಾಗೂ ಸರ್ಕಾರಿ ಭೂಮಿಯನ್ನು ಕಬಳಿಸುವ ವ್ಯವಸ್ಥಿತ ಜಾಲವೂ ಬೆಳೆಯುತ್ತಿದೆ. ಭೂಗಳ್ಳತನ ತಡೆಗೆ ಸರ್ಕಾರ ನಾನಾ ಸುಧಾರಣೆಗಳನ್ನು ತಂದಿದ್ದರೂ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳು, ವಕೀಲರು, ಭೂಗತ ಜಗತ್ತಿನ ನಂಟುಳ್ಳವರ ‘ಕಾರ್ಯಪಡೆ’ ಭೂಗಳ್ಳತನದ ಬಲೆಯನ್ನು ಬೀಸುತ್ತಲೇ ಇದೆ.

ADVERTISEMENT

ಕಾನೂನಿನ ಕುಣಿಕೆಗೆ ಸಿಲುಕದಂತೆ, ಅಕಸ್ಮಾತ್ ಸಿಲುಕಿದರೂ ನುಣುಚಿಕೊಂಡು ಪಾರಾಗುವಂತೆ ತಂತ್ರಗಾರಿಕೆಗಳನ್ನು ಹೊಸೆಯಬಲ್ಲ ಚಾತುರ್ಯ ಹೊಂದಿದ ‘ಭೂಗಳ್ಳರ ಕೂಟ’ ಪಾಳು ಬಿದ್ದ ಖಾಲಿ ಭೂಮಿ, ಅನಾಥ ಜಾಗ ಕಂಡರೆ ಭೂ ಬಕಾಸುರನಾಗಿ ಬೆಳೆಯತೊಡಗುತ್ತದೆ.

ಇದಕ್ಕಾಗಿ, ಭೂ ದಾಖಲೆಗಳ ತಿದ್ದುವಿಕೆ, ಸ್ವಾತಂತ್ರ್ಯ ಪೂರ್ವದಲ್ಲಿಯೋ ಅಥವಾ ಮೈಸೂರು ಮಹಾರಾಜರಿಂದ ಮಂಜೂರಾಗಿದೆ ಎಂಬಂತೆ ನಕಲಿ ದಾಖಲೆ ಸೃಷ್ಟಿ, ದಾಖಲೆಗಳನ್ನೇ ಕಣ್ಮರೆ ಮಾಡುವ ಕೈಚಳಕ ಪ್ರದರ್ಶಿಸುವ ಭೂಮಾಫಿಯಾದ ಗುಂಪು ಸಕ್ರಿಯವಾಗಿದೆ.

ಬೆಂಗಳೂರಿನಲ್ಲಷ್ಟೇ ಮೊದಲು ಪ್ರಭಾವಶಾಲಿಯಾಗಿದ್ದ ಭೂಗಳ್ಳರ ಕೂಟ, ವಿವಿಧ ಜಿಲ್ಲೆಗಳಿಗೂ ವ್ಯಾಪಿಸಲಾರಂಭಿಸಿದೆ. ಬೆಂಗಳೂರು ಮಗ್ಗುಲಿನಲ್ಲಿರುವ ನಗರ‍–ಪಟ್ಟಣ ಪ್ರದೇಶಗಳಿಗೂ ತನ್ನ ಕಬಂಧಬಾಹು ಚಾಚುತ್ತಿರುವ ದುಷ್ಟಕೂಟ, ಸರ್ಕಾರಿ ಹಾಗೂ ಬಡವರ ಭೂಮಿಯನ್ನೇ ಗುರಿಯಾಗಿಸಿಕೊಂಡು ಕಾರ್ಯಪ್ರವೃತ್ತವಾಗಿದೆ.

ರಾಜಧಾನಿಯನ್ನು ಒಂದು ಕಾಲದಲ್ಲಿ ಆಳುತ್ತಿದ್ದ ಭೂಗತ ಜಗತ್ತಿನ ರೌಡಿಗಳು, ಡಾನ್‌ಗಳು ಭೂ ಕಬಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ತಮ್ಮ ಪಾತಕ ಕೃತ್ಯಕ್ಕಾಗಿ ಕೊಲೆ, ಹಲ್ಲೆಗೂ ಹೇಸದ ಈ ರೌಡಿಗಳಿಗೆ ಪೊಲೀಸರ ಬೆಂಬಲವೂ ಸಿಗುತ್ತಿತ್ತು. ಕಾಲಾನಂತರದಲ್ಲಿ ಮಚ್ಚು, ಲಾಂಗ್‌, ರಿವಾಲ್ವರ್ ಬಿಟ್ಟು ಮೆತ್ತನೆ ದಾರಿ ಹಿಡಿದ ರೌಡಿಗಳು, ರಾಜಕಾರಣಿಗಳಾಗಿ ಬದಲಾದವರು ಇದರ ಮೇಲೆ ಹಿಡಿತ ಸಾಧಿಸಿದರು. ಒಂದು ಕಾಲದಲ್ಲಿ ರೌಡಿ ಜಗತ್ತಿನ ನಂಟಿದ್ದು, ಈಗ ಪ್ರಭಾವಿಗಳಾಗಿ ಗುರುತಿಸಿಕೊಂಡವರು ಭೂಮಾಫಿಯಾದ ಮೇಲೆ ಈಗಲೂ ಹಿಡಿತ ಸಾಧಿಸಿರುವುದು ರಹಸ್ಯವೇನಲ್ಲ. ಅದಕ್ಕಾಗಿ, ವಿಶೇಷ ಪತ್ತೇದಾರಿಕೆ ಮಾಡಬೇಕಿಲ್ಲ.

ಈಗಲೂ ನಾನಾ ರೀತಿಯ ಭೂಗಳವು ನಡೆಯುತ್ತಿದ್ದು, ಅದರ ಮುಂಚೂಣಿಯಲ್ಲಿ ಇರುವವರು ರಿಯಲ್ ಎಸ್ಟೇಟ್, ದಲ್ಲಾಳಿಗಳು, ವಕೀಲರು ಇದ್ದಾರೆ. ಅವರ ಬೆನ್ನ ಹಿಂದೆ ಇರುವವರು ರಾಜಕೀಯ ಪ್ರಭಾವಿಗಳೇ ಆಗಿರುತ್ತಾರೆ. ಹೀಗಾಗಿಯೇ, ಸಬ್ ರಿಜಿಸ್ಟ್ರಾರ್‌, ಕಂದಾಯ ಅಧಿಕಾರಿ, ಕೆಎಎಸ್‌ ಹಾಗೂ ಐಎಎಸ್ ಅಧಿಕಾರಿಗಳು, ಪೊಲೀಸ್‌ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಇದರಲ್ಲಿ ಭಾಗಿಯಾಗುವುದು ಸಾಮಾನ್ಯ ಎಂಬಂತಾಗಿದೆ.

ಇಂತಹ ಭೂಗಳವಿನ ಹಿಂದಿನ ಕಾಣದ ಕೈಗಳ ಹುಡುಕಾಟಕ್ಕೆ ಮುಂದಾದ ‘ಪತ್ರಿಕೆ’ಗೆ ದಿಗ್ಭ್ರಮೆ ಮೂಡಿಸುವಂತಹ ಹಲವು ಪ್ರಕರಣಗಳು ಸಿಕ್ಕಿದವು. ಇಂತಹದೇ ಸಾಮ್ಯತೆ ಇರುವ ನೂರಾರು ಪ್ರಕರಣಗಳು ನಡೆಯುತ್ತಲೇ ಇದ್ದು, ಕಾನೂನಿನ ಚಕ್ರಕ್ಕೆ ಸಿಕ್ಕಿಹಾಕಿಕೊಂಡು, ಶಿಕ್ಷೆ ಅನುಭವಿಸಿದ ಪ್ರಕರಣಗಳನ್ನಷ್ಟೇ ಇಲ್ಲಿ ಸಾಕ್ಷೀಕರಿಸುವ ಯತ್ನ ಮಾಡಲಾಗಿದೆ. ದೂರನ್ನೇ ಕೊಡದ ಪ್ರಕರಣಗಳು, ಹಣ, ಭಯದ ಕಾರಣಕ್ಕೆ ರಾಜಿಯಾದ ಪ್ರಕರಣಗಳು, ರೌಡಿಸಂ–ಪ್ರಭಾವಿ ರಾಜಕಾರಣಿಗಳ ಒತ್ತಡದಿಂದ ಮುಚ್ಚಿ ಹೋದ ಪ್ರಕರಣಗಳು ಸಮಾಧಿ ಸೇರಿವೆ. ಅವು ಸಮಾಧಿಯಿಂದ ಎದ್ದು ಬಂದರಷ್ಟೇ ಭೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿ, ಭೂಗಳ್ಳರಿಗೆ ಶಿಕ್ಷೆಯಾಗಬಹುದು.

ಇಂತಹ ಅಕ್ರಮಗಳಿಗೆಲ್ಲ ಕಡಿವಾಣ ಹಾಕಿ, ಜನರಿಗೆ ನೆರವಾಗಲು ರಾಜ್ಯ ಸರ್ಕಾರವು ‘ಭೂಸುರಕ್ಷಾ’ ಎಂಬ ಉಪಕ್ರಮವನ್ನು ಆರಂಭಿಸಿದೆ. ದಾಖಲೆಗಳನ್ನೆಲ್ಲಾ, ಡಿಜಿಟಲೀಕರಣ ಮಾಡುವುದರಿಂದ ಭೂಮಾಫಿಯಾದ ಕುತಂತ್ರಗಳಿಗೆ ಕಡಿವಾಣ ಹಾಕಬಹುದೇ ಎಂಬುದು ಇದು ಪೂರ್ಣ ಪ್ರಮಾಣದಲ್ಲಿ ಜಾರಿಬಂದಾದ ಮೇಲಷ್ಟೇ ಗೊತ್ತಾಗಲಿದೆ. ಸರ್ಕಾರ ತರುವ ಕಾನೂನಿಗಳಲ್ಲಿ ಇರಬಹುದಾದ ಕಿರುಬಿರುಕುಗಳನ್ನೇ ಬಳಸಿ, ಕುಣಿಕೆಯಿಂದ ತಪ್ಪಿಸಿಕೊಳ್ಳುವ ಚಾಣಾಕ್ಷತನವನ್ನೂ ಭೂಗಳ್ಳರು ದಕ್ಕಿಸಿಕೊಳ್ಳುವ ಸಾಧ್ಯತೆಯೂ ಇದೆ.

‘ಪತ್ರಿಕೆ’ಯು ಸರ್ಕಾರಿ– ನ್ಯಾಯಾಲಯದ ದಾಖಲೆಗಳನ್ನು ತಲಸ್ಪರ್ಶಿ ಅಧ್ಯಯನ ಮಾಡಿದ ಬಳಿಕ ಖಚಿತ ದಾಖಲೆಗಳನ್ನು ಆಧರಿಸಿ, ಸಂತ್ರಸ್ತರ ಸ್ವಾನುಭವದ ಮಾತುಗಳನ್ನೇ ಉಲ್ಲೇಖಿಸಿ ಕಟ್ಟಿಕೊಡಲಾದ ವರದಿ ಇಲ್ಲಿದೆ.

₹350 ಕೋಟಿ ಆಸ್ತಿಗೆ ಕನ್ನ: ಐಎಎಸ್‌ ಅಧಿಕಾರಿಯೇ ಭಾಗಿ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನನ್ನು ಕಬಳಿಸುವುದು ಒಂದು ರೀತಿಯ ವಂಚನೆ. ಸರ್ಕಾರಿ ಅಧಿಕಾರಿಯೇ ಭಾಗಿಯಾದ ತಾಜಾ ಉದಾಹರಣೆ ಇದು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಿದ್ದ ನಾಲ್ವರು ಖಾಸಗಿ ವ್ಯಕ್ತಿಗಳಿಗೆ, ಬೆಂಗಳೂರಿನ ಹಿಂದಿನ ವಿಶೇಷ ಜಿಲ್ಲಾಧಿಕಾರಿ ಯಾಗಿದ್ದ ಬಿ.ವಿ.ವಾಸಂತಿ ಅಮರ್ ಅವರು 14 ಎಕರೆ ಸರ್ಕಾರಿ ಜಮೀನನ್ನು ಪರಭಾರೆ ಮಾಡಿದ ಪ್ರಕರಣವಿದು.

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಕೊಡಿಗೆಹಳ್ಳಿಯ ಹಳೆಯ ಸರ್ವೆ ನಂಬರ್ 86ರ ಈ ಜಮೀನು, ನೈಸ್‌ ರಸ್ತೆಗೆ ಹೊಂದಿಕೊಂಡಂತೆಯೇ ಇದೆ. ಸುಮಾರು ₹350 ಕೋಟಿ ಮಾರುಕಟ್ಟೆ ಮೌಲ್ಯದ ಈ ಜಮೀನಿಗೆ ಸಂಬಂಧಿಸಿದಂತೆ ಪುಟ್ಟಮ್ಮ, ಎಚ್‌.ಬಿ.ಶ್ರೀಧರ್‌, ಕೆ.ವಿ.ಚಂದ್ರನ್‌ ಮತ್ತು ಪುಟ್ಟಗೌರಮ್ಮ ಅವರು 2007ರಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

‘ಸರ್ವೆ ಸಂಖ್ಯೆ: 86ರ (ಹೊಸ ಸರ್ವೆ ಸಂಖ್ಯೆ 143, 144, 145 ಮತ್ತು 147) ಸುಮಾರು 14 ಎಕರೆ ಜಮೀನು ನಮಗೆ 1954ರಲ್ಲೇ ಸರ್ಕಾರದಿಂದ ಮಂಜೂರಾಗಿದೆ. ಅಂದಿನಿಂದ 1995ರವರೆಗೂ ಪಹಣಿಯಲ್ಲಿ ನಮ್ಮ ಹೆಸರು ಇದ್ದು, 1995ರ ನಂತರ ಪಹಣಿಯಿಂದ ನಮ್ಮ ಹೆಸರು ಕೈಬಿಡಲಾಗಿದೆ. ಕಂದಾಯ ದಾಖಲೆಗಳಿಗೆ ನಮ್ಮ ಹೆಸರು ಸೇರ್ಪಡೆ ಮಾಡಲು ತಹಶೀಲ್ದಾರರಿಗೆ ನಿರ್ದೇಶನ ನೀಡಿ’ ಎಂದು ಹೈಕೋರ್ಟ್‌ ಅನ್ನು ಕೋರಿದ್ದರು.

ಆ ಅರ್ಜಿಯ ವಿಚಾರಣೆ ವೇಳೆ ಬೆಂಗಳೂರು ಜಿಲ್ಲಾಧಿಕಾರಿ ಅವರಿಂದ ಹೈಕೋರ್ಟ್‌ ವಿವರಣೆ ಕೇಳಿತ್ತು. ಜಿಲ್ಲಾಧಿಕಾರಿಯು, ‘ಅರ್ಜಿದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸಿದ್ದಾರೆ. ಈ ಜಮೀನನ್ನು ಜನ ಸಾಮಾನ್ಯರಿಗೆ 1954ರಲ್ಲಿ ಮಂಜೂರು ಮಾಡಿದ ಮೂಲ ದಾಖಲೆಯಲ್ಲಿ ಈ ನಾಲ್ವರ ಹೆಸರು ಇಲ್ಲ. ಮೂಲ ಪಟ್ಟಿಯಲ್ಲಿ ಈ ನಾಲ್ವರಿಗಿಂತಲೂ ಮೊದಲು ಇರುವವರ ಹೆಸರು ಮತ್ತು ಈ ನಾಲ್ವರ ನಂತರ ಇರುವ ಹೆಸರುಗಳ ಕೈಬರಹ ಹಾಗೂ ಪೆನ್ನಿನ ಇಂಕ್‌ ಒಂದೇ ರೀತಿ ಇದೆ. ಆದರೆ ಈ ನಾಲ್ವರ ಹೆಸರಿನ ಕೈಬರಹ ಹಾಗೂ ಪೆನ್ನಿನ ಇಂಕ್‌ ಬೇರೆಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳೂ ಭಾಗಿಯಾಗಿ ಈ ನಾಲ್ವರ ಹೆಸರನ್ನು ಸೇರಿಸಿರುವುದು ಪತ್ತೆಯಾಗಿದೆ’ ಎಂದು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ವರದಿ ನೀಡಿದ ನಂತರ ಹೈಕೋರ್ಟ್‌, ಅರ್ಜಿದಾರರು ಮತ್ತು ದಾಖಲೆ ತಿದ್ದುವಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿ ಎಂದು 2007ರಲ್ಲೇ ಆದೇಶಿಸಿತ್ತು.

ಈ ಮಧ್ಯೆ 2015 ರಲ್ಲಿ ಬೆಂಗಳೂರು ಉತ್ತರ ವಿಭಾಗದ ವಿಶೇಷ ಜಿಲ್ಲಾಧಿಕಾರಿ–3 ಅವರ ನ್ಯಾಯಾಲಯಕ್ಕೆ ಪುಟ್ಟಮ್ಮ, ಎಚ್‌.ಬಿ.ಶ್ರೀಧರ್‌, ಕೆ.ವಿ.ಚಂದ್ರನ್‌ ಮತ್ತು ಪುಟ್ಟಗೌರಮ್ಮ ಅವರು ಅರ್ಜಿ ಸಲ್ಲಿಸಿ, ಸದರಿ ಜಮೀನನ್ನು ಪರಭಾರೆ ಮಾಡಿಕೊಡಿ ಎಂದು ಕೋರಿದ್ದರು. ಆದರೆ ಆಗಿನ ವಿಶೇಷ ಜಿಲ್ಲಾಧಿಕಾರಿಯು ಅರ್ಜಿಯನ್ನು ಪರಿಗಣಿಸಿರಲಿಲ್ಲ. 2021ರಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ಬಂದ ವಾಸಂತಿ ಅಮರ್ ಅವರು, ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದರು. ಉತ್ತರ ತಾಲ್ಲೂಕಿನ ತಹಶೀಲ್ದಾರ್ ಅವರಿಂದ ವಿವರಣೆ ಕೋರಿದ್ದರು. ‘ನಾಲ್ವರಿಗೂ 1954ರಲ್ಲಿ ಜಮೀನು ಮಂಜೂರಾದ ಮೂಲ ದಾಖಲೆಗಳು, ನಕಲು ಪ್ರತಿಗಳೂ ಲಭ್ಯವಿಲ್ಲ. ಅರ್ಜಿದಾರರ ಪಹಣಿ, ಸಾಗುವಳಿ ಚೀಟಿ ಮಾತ್ರವೇ ಲಭ್ಯವಿದೆ’ ಎಂದು ಉತ್ತರ ತಾಲ್ಲೂಕಿನ ತಹಶೀಲ್ದಾರ್‌ ವರದಿ ನೀಡಿದ್ದರು. ಆದರೆ ಈ ಹಿಂದೆ ಹೈಕೋರ್ಟ್‌ಗೆ ಜಿಲ್ಲಾಧಿಕಾರಿ ಸಲ್ಲಿಸಿದ್ದ ವರದಿಯನ್ನು ಕಡೆಗಣಿಸಿದ್ದರು. ವಾಸಂತಿ ಅಮರ್ ಅವರೂ ಈ ವರದಿಯನ್ನು ಕಡೆಗಣಿಸಿ, ಜಮೀನು ಪರಭಾರೆ ಮಾಡಿದ್ದರು.

ಭೂ ಸುರಕ್ಷಾ ಉಪಕ್ರಮವು ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿ ಇದ್ದಿದ್ದರೆ, ತಹಶೀಲ್ದಾರ್ ಅವರು ವರದಿ ಸಲ್ಲಿಸುವಾಗ ಹಿಂದೆ ಜಿಲ್ಲಾಧಿಕಾರಿ ನೀಡಿದ್ದ ವರದಿಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಒಂದು ಜಮೀನಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳು, ಗ್ರಾಮ ಆಡಳಿತಾಧಿಕಾರಿ, ಸರ್ವೇಯರ್‌, ತಹಶೀಲ್ದಾರ್‌, ಜಿಲ್ಲಾಧಿಕಾರಿಗಳು ನೀಡುವ ವರದಿ/ಆದೇಶಗಳೆಲ್ಲವೂ ಭೂ ಸುರಕ್ಷಾ ಪೋರ್ಟಲ್‌ಗೆ ಅಪ್‌ಲೋಡ್‌ ಆಗುತ್ತವೆ. ಯಾವುದೇ ಜಮೀನಿಗೆ ಸಂಬಂಧಿಸಿದಂತೆ ಅರ್ಜಿ/ವ್ಯಾಜ್ಯಗಳನ್ನು ಬಗೆಹರಿಸುವಾಗ ಸಂಬಂಧಿತ ಅಧಿಕಾರಿಯು ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ಅದನ್ನು ಕಡೆಗಣಿಸಿ ಪರಭಾರೆ ಮಾಡಿದರೆ ಅಥವಾ ಆದೇಶ ನೀಡಿದರೆ, ಆ ಲೋಪದ ಹೊಣೆಯನ್ನು ಅವರೇ ಹೊರಬೇಕಾಗುತ್ತದೆ ಎನ್ನುತ್ತಾರೆ ಸಚಿವ ಕೃಷ್ಣ ಬೈರೇಗೌಡ.

‘ಭೂ ಸುರಕ್ಷೆ: ಜನರಿಗೆ ಶ್ರೀರಕ್ಷೆ’

‘ಮೂಲ ದಾಖಲೆ ಪತ್ರಗಳನ್ನು ಸ್ಕ್ಯಾನ್‌ ಮಾಡಿ, ಅಪ್‌ಲೋಡ್‌ ಮಾಡುವ ಮೂಲಕ ಕಂದಾಯ ಇಲಾಖೆಯ ಎಲ್ಲ ವ್ಯವಹಾರಗಳೂ ಡಿಜಿಟಲ್‌ ರೂಪದಲ್ಲೇ ನಡೆಯಲಿವೆ. ತಿರುಚಿದ, ತಿದ್ದಿದ, ನಕಲಿ ದಾಖಲೆಗಳಿಗೆ ಕಡಿವಾಣ ಬೀಳಲಿದೆ. ಇವುಗಳ ಕಾರಣದಿಂದ ಭೂಮಿ ಕಳೆದುಕೊಂಡ ಜನರಿಗೆ ನೆರವಾಗಲು ಸರ್ಕಾರವು ‘ಭೂ ಸುರಕ್ಷಾ’ ಯೋಜನೆಯನ್ನು ರೂಪಿಸಿದೆ’ ಎನ್ನುತ್ತಾರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ.

‘ಭೂ ದಾಖಲೆಗಳ ದೃಢೀಕೃತ ಪ್ರತಿಯನ್ನು ಪಡೆದುಕೊಳ್ಳಲು ಜನರು ಅರ್ಜಿ ಸಲ್ಲಿಸಿದರೆ, ಅದು ಸಿಕ್ಕೇ ಸಿಗುತ್ತದೆ ಎಂಬುದು ಖಚಿತವಿರಲಿಲ್ಲ. ಕೆಲ ಅಧಿಕಾರಿಗಳು ಯಾವುದೋ ನೆಪವೊಡ್ಡಿ, ದಾಖಲೆಗಳು ಸಿಗುತ್ತಿಲ್ಲ ಎಂದು ಹಿಂಬರಹ ನೀಡಿ ಸಾಗಹಾಕುತ್ತಿದ್ದರು’ ಎಂದು ಅವರು ಹೇಳಿದ್ದಾರೆ.

‘ಭೂ ಸುರಕ್ಷಾ ಪೋರ್ಟಲ್‌ನಲ್ಲಿ ಜನರು, ದಾಖಲೆ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೆ ಕಡ್ಡಾಯವಾಗಿ ಕಾಲಮಿತಿಯಲ್ಲಿ ಅವರ ಇ–ಮೇಲ್‌ ಐ.ಡಿಗೆ ಡಿಜಿಟಲ್‌ ಪ್ರತಿ ರವಾನೆಯಾಗುತ್ತದೆ. ಅಧಿಕಾರಿಗಳ ಕೈಯಲ್ಲಿದ್ದ ಅಧಿಕಾರವನ್ನು ಭೂ ಸುರಕ್ಷಾ ಜನರ ಕೈಗಿಡಲಾಗುತ್ತಿದೆ’ ಎಂಬುದು ಅವರ ಪ್ರತಿಪಾದನೆ.

‘ಜನ ಸಾಮಾನ್ಯರು ಪೋರ್ಟಲ್‌ಗೆ ಲಾಗಿನ್‌ ಆಗಿ ತಮ್ಮ ಜಮೀನುಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಬಹುದು. ಅವು ಲಭ್ಯವಿದ್ದರೆ, ದೃಢೀಕೃತ ನಕಲು ಪ್ರತಿ ಪಡೆಯಲು ಶುಲ್ಕ ಪಾವತಿಸಿ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಅವಿನ್ನೂ ಸ್ಕ್ಯಾನ್‌ ಆಗದೇ ಇದ್ದರೆ, ಅವುಗಳನ್ನು ಹುಡುಕಿ ಸ್ಕ್ಯಾನ್‌ ಮಾಡಲಾಗುತ್ತದೆ’ ಎಂದು ವಿವರಿಸಿದರು.

ನಿಮ್ಮ ಮನೆಯನ್ನೂ ಕಸಿದಾರು ಹುಷಾರು

ಬೆಂಗಳೂರು: ನೀವು ಕಷ್ಟಪಟ್ಟು ದುಡಿದು ಹಣ ಉಳಿಸಿ ಕಟ್ಟಿದ ಮನೆ ನಾಳೆ ಇನ್ಯಾರದೋ ಆಗಬಹುದು. ನ್ಯಾಯಾಲಯದ ಆದೇಶ ಪಡೆದು, ಪೊಲೀಸರ ಭದ್ರತೆಯೊಂದಿಗೆ ಬಂದು ನಿಮ್ಮ ಸ್ವಂತದ ಮನೆಯನ್ನು ಖಾಲಿ ಮಾಡಿಸಬಹುದು. ಇವೆಲ್ಲಾ ಸಾಧ್ಯವೇ ಇಲ್ಲ ಎಂದು ನೀವು ಅಂದುಕೊಂಡರೆ, ಅದು ಸುಳ್ಳಾದೀತು. ಜನ ಸಾಮಾನ್ಯರ ಜಮೀನು, ನಿವೇಶನ, ಮನೆ, ವಾಣಿಜ್ಯ ಸಂಕೀರ್ಣವನ್ನು ಅವರ ಗಮನಕ್ಕೆ ಬರದೇ ಇರುವ ರೀತಿಯಲ್ಲಿ ಕಬಳಿಸಿದ ನೂರಾರು ಉದಾಹರಣೆಗಳು ನಮ್ಮೆದುರು ಇದೆ. ನಾಲ್ಕೈದು ಮಂದಿಯ ಸಣ್ಣ ಜಾಲವೊಂದು ಬೆಂಗಳೂರಿನಲ್ಲೇ ಹೀಗೆ 117 ನಿವೇಶನ ಮತ್ತು ಕಟ್ಟಡಗಳನ್ನು ಕಬಳಿಸಿತ್ತು. 118ನೇ ನಿವೇಶನವನ್ನು ಕಬಳಿಸುವ ವೇಳೆ ಈ ಜಾಲ ಸಿಕ್ಕಿಬಿದ್ದಿತು. 

ಶಾ ಹರಿಲಾಲ್ ಬಿಖಾಬಾಯ್‌ ಅಂಡ್‌ ಕಂಪನಿಯು 1954ರಲ್ಲಿ, ನಗರದ ಯಶವಂತಪುರ ಬಳಿಯ ಗೋಕುಲ ರಸ್ತೆಯಲ್ಲಿ ನಿವೇಶನವೊಂದನ್ನು ಖರೀದಿಸಿತ್ತು. ಅಲ್ಲಿ ಸಣ್ಣ ಶೆಡ್‌ ಹೊರತುಪಡಿಸಿ, ನಿವೇಶನದ ಬಹುಪಾಲು ಖಾಲಿಯೇ ಇತ್ತು. ಅಂದಿನಿಂದಲೂ ನಿವೇಶನ ಆ ಕಂಪನಿಯ ಸುಪರ್ದಿಯಲ್ಲಿಯೇ ಇತ್ತು. ಕಂಪನಿಯ ಪ್ರವರ್ತಕ ಹರಿಲಾಲ್ ಮತ್ತು ಪಾಲುದಾರ ರವೀಂದ್ರ ಶಾ ಅವರು 2019–20ನೇ ಆರ್ಥಿಕ ಸಾಲಿನವರೆಗೆ ಬಿಬಿಎಂಪಿಗೆ ಆಸ್ತಿ ತೆರಿಗೆಯನ್ನೂ ಪಾವತಿಸಿದ್ದರು.

2020ರ ಒಂದು ದಿನ, ಆ ನಿವೇಶನವನ್ನು ತೆರವು ಮಾಡಿಸಲು ಇಬ್ಬರು ವ್ಯಕ್ತಿಗಳು ಜೆಸಿಬಿಯೊಂದಿಗೆ ಬಂದರು. ಆ ಇಬ್ಬರ ಭದ್ರತೆಗೆ ಪೊಲೀಸರೂ ಬಂದಿದ್ದರು. ಅದನ್ನು ಪ್ರಶ್ನಿಸಿದ ರವೀಂದ್ರ ಅವರ ಕೈಗೆ, ಸೆಂದಿಲ್‌ ಕುಮಾರ್‌ ಎಂಬುವವರು ಬೆಂಗಳೂರಿನ ಸಣ್ಣ ವ್ಯಾಜ್ಯಗಳ ನ್ಯಾಯಾಲಯದ ಆದೇಶದ ಪ್ರತಿಯೊಂದನ್ನು ನೀಡಿದ್ದರು.

ಸುಮಾರು 65 ವರ್ಷಗಳಿಂದ ತಮ್ಮ ಸುಪರ್ದಿಯಲ್ಲಿರುವ ಕಂಪನಿಯ ಕಟ್ಟಡ ಮತ್ತು ನಿವೇಶನ ಇನ್ಯಾರದ್ದೋ ಎಂದು ನ್ಯಾಯಾಲಯ ಆದೇಶ ನೀಡಿರುವುದನ್ನು ನೋಡಿ ರವೀಂದ್ರ ದಿಕ್ಕೆಟ್ಟರು. ಅವರು, ತಡ ಮಾಡದೆ ಕರ್ನಾಟಕ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದರು. ಇಂತಹ ಕಬಳಿಕೆ ಹಿಂದೆ ದೊಡ್ಡ ಜಾಲವೇ ಇದೆ ಎಂಬುದು ಅರ್ಜಿಯ ವಿಚಾರಣೆ ವೇಳೆ ಪತ್ತೆಯಾಯಿತು.

ಗೋಕುಲ ರಸ್ತೆಯಂತಹ ವಾಣಿಜ್ಯ ಕೇಂದ್ರದಲ್ಲಿ ಹಲವು ದಶಕಗಳಿಂದ ಖಾಲಿ ಇದ್ದ ನಿವೇಶನವು, ಭೂ ಮಾಫಿಯಾದವರ ಕಣ್ಸೆಳೆಯುವಂತಿತ್ತು. ವಕೀಲರಾದ ಬಿ. ದಿನಮಣಿ, ನಗರದ ಸಣ್ಣ ವ್ಯಾಜ್ಯಗಳ ನ್ಯಾಯಾಲಯದಲ್ಲಿ 2018ರ ಏಪ್ರಿಲ್‌ 26ರಂದು ಒಂದು ಅರ್ಜಿ (ಎಸ್‌.ಸಿ.678/2028) ಸಲ್ಲಿಸಿದ್ದರು. ‘ಸದರಿ ನಿವೇಶನವು ನನ್ನ ಕಕ್ಷಿದಾರ ಸೆಂದಿಲ್‌ ಕುಮಾರ್ ಅವರಿಗೆ ಸೇರಿದ್ದು, ಜಿಪಿಎ ಮೂಲಕ ಅವರು ಅದನ್ನು ಪಡೆದುಕೊಂಡಿದ್ದರು. ಈ ನಿವೇಶನವನ್ನು ಅರುಣ ಎಂಬುವವರಿಗೆ ಬಾಡಿಗೆ ಕರಾರಿನ ಮೇಲೆ ನೀಡಲಾಗಿತ್ತು. ಅವರು ಕರಾರಿನ ಷರತ್ತುಗಳನ್ನು ಉಲ್ಲಂಘಿಸಿದ್ದು, ನಿವೇಶನ ಖಾಲಿ ಮಾಡಿಸಿಕೊಡಬೇಕು’ ಎಂದು ಕೋರಿದ್ದರು. ನ್ಯಾಯಾಲಯದಲ್ಲಿ ಅರ್ಜಿಯನ್ನು ವಿಚಾರಣೆಗೆ ನಿಗದಿ ಮಾಡಲಾಯಿತು. 

ತಿಂಗಳೊಂದರಲ್ಲೇ (2018ರ ಮೇ 31ರಂದು) ನ್ಯಾಯಾಲಯಕ್ಕೆ ಮಣಿ ಪ್ರಮಾಣ ಪತ್ರ ಸಲ್ಲಿಸಿ, ‘ನನ್ನ ಕಕ್ಷಿದಾರ ಸೆಂದಿಲ್‌ ಕುಮಾರ್ ಮತ್ತು ಪ್ರತಿವಾದಿ ಅರುಣ ರಾಜಿ ಮಾಡಿಕೊಂಡಿದ್ದಾರೆ. ನಿವೇಶನ ತೆರವಿಗೆ ಅವಕಾಶ ಮಾಡಿಕೊಡಬೇಕು’ ಎಂದು ಅರಿಕೆ ಮಾಡಿಕೊಂಡಿದ್ದರು. ಅರುಣ ಪರ ವಕೀಲ ವೆಂಕಟೇಶ ಎಂಬುವವರೂ ಇದೇ ತರನಾದ ಪ್ರಮಾಣ ಪತ್ರ ಸಲ್ಲಿಸಿದ್ದರು. ರಾಜಿಯನ್ನು ಒಪ್ಪಿಕೊಂಡ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತ್ತು. ರಾಜಿ ಪ್ರಮಾಣ ಪತ್ರದ ಆಧಾರದಲ್ಲಿ ನಿವೇಶನ ತೆರವಿಗೆ ಸೆಂದಿಲ್‌ ಕುಮಾರ್ ಆದೇಶ ಪಡೆದುಕೊಂಡಿದ್ದರು.

ರವೀಂದ್ರ ಅವರ ರಿಟ್ ಅರ್ಜಿಯ ವಿಚಾರಣೆ ವೇಳೆ ಅವರ ವಕೀಲರು, ಸೆಂದಿಲ್‌ ಕುಮಾರ್ ಹೆಸರಿನಲ್ಲಿನ ಜಿಪಿಎ ಮತ್ತು ಅರುಣ ಹೆಸರಿನಲ್ಲಿನ ಬಾಡಿಗೆ ಕರಾರು ಪತ್ರ ನಕಲಿ ಎಂದು ವಾದ ಮಂಡಿಸಿದರು. ಈ ಪತ್ರಗಳ ನೈಜತೆಯನ್ನು ಪರಿಶೀಲಿಸಲು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಸಣ್ಣ ವ್ಯಾಜ್ಯಗಳ ನ್ಯಾಯಾಲಯಗಳ ರಿಜಿಸ್ಟ್ರಾರ್‌ಗೆ ಸೂಚಿಸಿದರು. ಅವು ನಕಲಿ ಎಂದು ವರದಿ ಬಂದ ನಂತರ, ಸೆಂದಿಲ್‌ ಕುಮಾರ್‌ಗೆ ನೋಟಿಸ್‌ ನೀಡಲಾಯಿತು. ಆದರೆ ಸೆಂದಿಲ್‌ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಮತ್ತು ತಲೆಮರೆಸಿಕೊಂಡರು.

ಇವೆಲ್ಲವನ್ನೂ ಪರಿಗಣಿಸಿದ ಹೈಕೋರ್ಟ್‌ ಪೀಠವು, ‘ಪ್ರತಿವಾದಿ ಸೆಂದಿಲ್‌ ಕುಮಾರ್‌ ತಲೆಮರೆಸಿಕೊಂಡಿರುವುದನ್ನು ಗಮನಿಸಿದರೆ ಇಲ್ಲಿ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಹೀಗಾಗಿ ರವೀಂದ್ರ ಅವರ ಸುಪರ್ದಿಗೇ ನಿವೇಶನವನ್ನು ಮರಳಿಸಬೇಕು’ ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಜತೆಗೆ ‘ಅಧೀನ ನ್ಯಾಯಾಲಯದಲ್ಲಿ ಅತ್ಯಂತ ತ್ವರಿತವಾಗಿ ಆದೇಶ ಪಡೆದಿರುವುದೂ ಅನುಮಾನಕ್ಕೆ ಎಡೆಮಾಡಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಸಣ್ಣ ವ್ಯಾಜ್ಯಗಳ ನ್ಯಾಯಾಲಯಗಳ ರಿಜಿಸ್ಟ್ರಾರ್‌ಗೆ ಸೂಚಿಸಿತ್ತು. 

2016–2019ರ ಮಧ್ಯೆ, ಇದೇ ರೀತಿಯಲ್ಲಿ ನಿವೇಶನ/ಕಟ್ಟಡ ಕಬಳಿಸುವ 117 ಪ್ರಕರಣಗಳು ನಡೆದಿರುವುದು ತನಿಖೆಯಲ್ಲಿ ಪತ್ತೆಯಾಯಿತು. ಇವುಗಳಲ್ಲಿ 71 ಪ್ರಕರಣಗಳಲ್ಲಿ ಇದೇ ಸೆಂದಿಲ್‌ ಕುಮಾರ್‌, ಮಣಿ ಬಿ., ಅರುಣ ಮತ್ತು ವೆಂಕಟೇಶ್‌ ವಾದಿ–ಪ್ರತಿವಾದಿಗಳಾಗಿ ನ್ಯಾಯಾಲಯಕ್ಕೆ ದಾವೆ ಹೂಡಿರುವುದು ಮತ್ತು ರಾಜಿ ಪ್ರಮಾಣ ಪತ್ರ ಸಲ್ಲಿಸಿ ತಮ್ಮ ಪರವಾಗಿ ಆದೇಶ ಪಡೆದಿರುವುದು ಪತ್ತೆಯಾಯಿತು. 22 ಪ್ರಕರಣಗಳಲ್ಲಿ ಸೆಂದಿಲ್‌ ಅರ್ಜಿದಾರನಾಗಿದ್ದರೆ, 31 ಪ್ರಕರಣಗಳಲ್ಲಿ ಅರುಣ ಅರ್ಜಿದಾರನಾಗಿದ್ದರು. ಈ ಎಲ್ಲ ಪ್ರಕರಣಗಳನ್ನೂ ಒಳಗೊಂಡಂತೆ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮಣಿ ಇಲ್ಲವೇ ವೆಂಕಟೇಶ್ ವಕಾಲತ್ತು ವಹಿಸಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಯಿತು.

ಸರ್ಕಾರಿ ಸಿಬ್ಬಂದಿಯೂ ಭಾಗಿ

ಇನ್ನೂ 14 ಮಂದಿ ಈ ಜಾಲದಲ್ಲಿ ಭಾಗಿಯಾಗಿದ್ದರು. ಹಿಂದಿನ ಬಿಬಿಎಂಪಿ, ಬಿಡಿಎ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿಯೂ ಈ ವಂಚನೆಯಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸಿಐಡಿ ಪತ್ತೆ ಮಾಡಿತ್ತು.

ಈ 117 ಪ್ರಕರಣಗಳಲ್ಲೂ ಮೂಲ ದಾಖಲೆಗಳನ್ನು ಮರೆಮಾಚಿ, ನ್ಯಾಯಾಲಯದಿಂದ ಆದೇಶ ಪಡೆದುಕೊಳ್ಳಲಾಗಿತ್ತು. ಮೂಲ ದಾಖಲೆಗಳನ್ನು ನೀಡಿ ಎಂದು ಸಂಬಂಧಿತ ಇಲಾಖೆ ಅಥವಾ ಪ್ರಾಧಿಕಾರವನ್ನು ನ್ಯಾಯಾಲಯ ಕೋರಿದಾಗ, ‘ದಾಖಲೆ ಲಭ್ಯವಿಲ್ಲ’ ಎಂದೇ ಬಹುತೇಕ ಪ್ರಕರಣಗಳಲ್ಲಿ ಉತ್ತರ ಬಂದಿತ್ತು. ಈ ಜಾಲದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಈ ರೀತಿ ಉತ್ತರ ನೀಡಿದ್ದರು ಎಂದು ಸಿಐಡಿ ಹೇಳಿತ್ತು.

ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಈವರೆಗೆ 18 ಮಂದಿಯನ್ನು ಸಿಐಡಿ ಬಂಧಿಸಿದೆ. 51 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಿದೆ. ಈ ಜಾಲ ಎಷ್ಟು ಪ್ರಬಲವಾಗಿ ಇದೆಯೆಂದರೆ, ತನಿಖೆಯ ಯಾವ ಅಂಶವೂ ಮಾಧ್ಯಮಗಳಿಗೆ ಸೋರಿಕೆಯಾಗದ ರೀತಿಯಲ್ಲಿ ತಡೆಯಾಜ್ಞೆ ತಂದಿದೆ. ಪರಿಣಾಮವಾಗಿ ಸಿಐಡಿಯು 51 ಪ್ರಕರಣಗಳಲ್ಲೂ ಆರೋಪ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ.

ಬೆಂಗಳೂರು ನಗರ ಜಿಲ್ಲೆಯ ಉತ್ತರ ತಲ್ಲೂಕಿನ ಯಶವಂತಪುರ ಹೋಬಳಿಯ ಕೊಡಿಗೆಹಳ್ಳಿ ಗ್ರಾಮದ ಹಳೆಯ ಸರ್ವೆ ನಂಬರ್‌ 86 ವಿವಾದಿತ ಜಮೀನಿನ ಪಕ್ಷಿನೋಟ. ನೈಸ್‌ ರಸ್ತೆಗೆ ಹೊಂದಿಕೊಂಡಂತೆಯೇ ಈ ಜಮೀನು ಇದೆ ಪ್ರಜಾವಾಣಿ

ಹರಿಲಾಲ್‌ ಬಿಖಾಬಾಯ್ ಕಂಪನಿಯ ನಿವೇಶನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಅಧೀನ ನ್ಯಾಯಾಲಯಗಳಲ್ಲಿ ಅತ್ಯಂತ ಕ್ಷಿಪ್ರವಾಗಿ ಆದೇಶ ನೀಡಲಾಗಿದೆ ಎಂಬುದರ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು
ಕೊಡಿಗೆಹಳ್ಳಿಯ ಸರ್ವೆ ನಂಬರ್ 86ರ ಜಮೀನಿಗೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದ ವರದಿಯನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಅರ್ಜಿದಾರರು ದಾಖಲೆಗಳನ್ನು ತಿರುಚಿದ್ದಾರೆ ಎಂಬುದನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಆದರೆ ಈ ಎಲ್ಲ ವರದಿ ಮತ್ತು ಹೈಕೋರ್ಟ್‌ ಆದೇಶವನ್ನು ಕಡೆಗಣಿಸಿ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿದ್ದ ವಾಸಂತಿ ಅಮರ್ ಅವರು ಅರ್ಜಿದಾರರ ಹೆಸರಿಗೆ 14 ಎಕರೆ ಪರಭಾರೆ ಮಾಡಿದ್ದರು
ಕೊಡಿಗೆಹಳ್ಳಿಯ ಸರ್ವೆ ನಂಬರ್ 86ರ ಜಮೀನಿಗೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದ ವರದಿಯನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಅರ್ಜಿದಾರರು ದಾಖಲೆಗಳನ್ನು ತಿರುಚಿದ್ದಾರೆ ಎಂಬುದನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಆದರೆ ಈ ಎಲ್ಲ ವರದಿ ಮತ್ತು ಹೈಕೋರ್ಟ್‌ ಆದೇಶವನ್ನು ಕಡೆಗಣಿಸಿ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿದ್ದ ವಾಸಂತಿ ಅಮರ್ ಅವರು ಅರ್ಜಿದಾರರ ಹೆಸರಿಗೆ 14 ಎಕರೆ ಪರಭಾರೆ ಮಾಡಿದ್ದರು

ನಾಗಯ್ಯ ಆಸ್ತಿ ನಿಂಗಯ್ಯಗೆ ಹೋಯ್ತು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಕೆರೆಕತ್ತಿಗನೂರು ಗ್ರಾಮದ ಜಮೀನೊಂದಕ್ಕೆ ಸಂಬಂಧಿಸಿದ ಪ್ರಕರಣವಿದು. ಅಣ್ಣತಮ್ಮಂದಿರಾದ ನಾಗಯ್ಯ ಮತ್ತು ನಿಂಗಯ್ಯ ಅವರು ತಮಗೆ ಪಿತ್ರಾರ್ಜಿತವಾಗಿ ಬಂದಿದ್ದ ಜಮೀನೀನ ಪೈಕಿ ತಲಾ 6 ಎಕರೆ 30 ಗುಂಟೆಯಂತೆ ವಿಭಾಗ ಪತ್ರ ಮಾಡಿಕೊಂಡಿದ್ದರು. ಅಣ್ಣ ನಾಗಯ್ಯ ಮತ್ತು ಅವರ ಪತ್ನಿ ಅಕಾಲಿಕವಾಗಿ ಮೃತಪಟ್ಟಿದ್ದರು ಮತ್ತು ಅವರ 12 ವರ್ಷದ ಮಗಳು ಕಲಾ ಒಬ್ಬರಷ್ಟೇ ಉಳಿದಿದ್ದರು. ಆಕೆಗೆ ಸುಮಾರು 20 ವರ್ಷವಾದಾಗ ಜಮೀನನ್ನು ತನ್ನ ಹೆಸರಿಗೆ ಪೌತಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಆದರೆ ನಾಗಯ್ಯ ಅವರ ಹೆಸರಿನಲ್ಲಿ ಯಾವ ಜಮೀನೂ ಇಲ್ಲ ಎಂದು ತಹಶೀಲ್ದಾರರು ಹಿಂಬರಹ ನೀಡಿದ್ದರು. ಜತೆಗೆ ತಾವು ಉಲ್ಲೇಖಿಸಿರುವ ಜಮೀನು ನಿಂಗಯ್ಯ ಎಂಬುವವರ ಹೆಸರಿನಲ್ಲಿದೆ ಎಂಬುದನ್ನು ತಿಳಿಸಿದ್ದರು.

ಕಲಾ ಅವರು ತಹಶೀಲ್ದಾರರ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದರು. ‘ಪಹಣಿ ದಾಖಲೆ ಮತ್ತು ನೋಂದಣಿಗಳಲ್ಲಿ ನನ್ನ ತಂದೆಯ ಹೆಸರು ‘ನಾಗಯ್ಯ’ ಎಂಬುದನ್ನು ತಿದ್ದಲಾಗಿದೆ. ‘ನಾ’ ಎಂಬ ಅಕ್ಷರವನ್ನು ಬ್ಲೇಡ್‌ನಿಂದ ಕೆರೆದು ‘ನಿಂ’ ಎಂದು ಕಾಣುವಂತೆ ಮಾಡಲಾಗಿದೆ. ಈ ಮೂಲಕ ನನ್ನ ಚಿಕ್ಕಪ್ಪ ನಿಂಗಯ್ಯ ಅವರು ನನ್ನ ತಂದೆಯ ಜಮೀನನ್ನು ಕಬಳಿಸಿದ್ದಾರೆ. ಇದನ್ನು ಸರಿಪಡಿಸಿ ಜಮೀನನ್ನು ನನ್ನ ಹೆಸರಿಗೆ ಮಾಡಿಕೊಡಿ’ ಎಂದು ಕೋರಿದ್ದರು. ಹಲವು ವರ್ಷಗಳ ವಿಚಾರಣೆಯ ನಂತರ ಅವರ ಅರ್ಜಿ ತಿರಸ್ಕೃತವಾಯಿತು. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲೂ ವರ್ಷಗಳ ಅಲೆದಾಟದ ನಂತರ ಅವರ ಅರ್ಜಿ ತಿರಸ್ಕೃತವಾಯಿತು. 

2018ರ ವೇಳೆಗೆ ಕಲಾ ಅವರ ಮಗ ಮಂಜುನಾಥ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ತಾತನ ಹೆಸರಿಗೆ ಜಮೀನು ಹಿಸ್ಸೆ ಆಗಿದ್ದ ದಾಖಲೆ ಕಂದಾಯ ಪಾವತಿ ಮಾಡುವಂತೆ ಅವರಿಗೆ ಬಂದಿದ್ದ ನೋಟಿಸ್‌ ಕಂದಾಯ ಪಾವತಿ ರಶೀದಿಗಳನ್ನೂ ಅರ್ಜಿಯಲ್ಲಿ ಸಲ್ಲಿಸಿದ್ದರು. ಜತೆಗೆ ತಿರುಚಲಾಗಿದ್ದ ದಾಖಲೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲು ನಿರ್ದೇಶನ ನೀಡಿ ಎಂದು ಕೋರಿದ್ದರು.

ಈ ಮಧ್ಯೆ ನಿಂಗಯ್ಯ ಕುಟುಂಬದವರು ಜಮೀನು ಮಾರಾಟ ಮಾಡಲು ಯತ್ನಿಸಿದಾಗ ಹೈಕೋರ್ಟ್‌ ತಡೆ ನೀಡಿತ್ತು. ಆದರೆ ವಿಧಿವಿಜ್ಞಾನ ಪರೀಕ್ಷೆಗೆ ಆದೇಶ ನೀಡಿರಲಿಲ್ಲ. ಈ ಮಧ್ಯೆ ಕೋವಿಡ್‌ ಬಂದ ಕಾರಣ ಹಲವು ವರ್ಷ ವಿಚಾರಣೆ ನಡೆಯಲೇ ಇಲ್ಲ.  ಈ ಮಧ್ಯೆ ಕೆರೆಕತ್ತಿಗನೂರಿನ ಜಮೀನುಗಳನ್ನೂ ಒಳಗೊಂಡು ಪಕ್ಕದ ಸುಮಾರು ಹತ್ತು ಹಳ್ಳಿಗಳ ಜಮೀನುಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನಕ್ಕೆ ತೆಗೆದುಕೊಂಡು ಗಟ್ಟಿಗೆರೆ–ಕಾಸರಘಟ್ಟ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿತು. ವಿವಾದಿತ ಜಮೀನಿನಿಂದ 200 ಮೀಟರ್‌ನಷ್ಟು ಹತ್ತಿರದವರೆಗೂ ಕೈಗಾರಿಕಾ ಪ್ರದೇಶ ಬಂದಿತು.

ಬೆಂಗಳೂರು–ಮುಂಬೈ ಹೆದ್ದಾರಿಯಿಂದ 300 ಮೀಟರ್‌ನಷ್ಟೇ ದೂರವಿದ್ದ ಈ ಜಮೀನಿನ ಮಾರುಕಟ್ಟೆ ಮೌಲ್ಯವೇ ಎಕರೆಗೆ ₹4 ಕೋಟಿಯಿಂದ ₹5 ಕೋಟಿಯಷ್ಟಾಯಿತು. 2021ರ ವೇಳೆಗೆ ಪ್ರಾದೇಶಿಕ ಪಕ್ಷವೊಂದರ ಶಾಸಕರೊಬ್ಬರ ಆಪ್ತರು ಈ ಜಮೀನಿಗೆ ಹೊಂದಿಕೊಂಡಂತೆಯೇ ಇದ್ದ ಮತ್ತೊಂದು ಜಮೀನನ್ನು ಖರೀದಿಸಿದರು. ಮಂಜುನಾಥ್ ಅವರ ಜಮೀನು ವಿವಾದಕ್ಕೆ ಗುರಿಯಾಗಿದ್ದ ಕಾರಣ ಆ ಇನ್ನೊಂದು ಜಮೀನಿಗೆ ರಸ್ತೆ ಇಲ್ಲದಂತಾಯಿತು. ಪ್ರಕರಣ ವಾಪಸ್‌ ಪಡೆಯುವಂತೆ ಶಾಸಕರ ಆಪ್ತರು ಮತ್ತು ಕೆಲ ರೌಡಿಶೀಟರ್‌ಗಳಿಂದ ಮಂಜುನಾಥ್ ಅವರ ಮೇಲೆ ಒತ್ತಡ ಹೆಚ್ಚಾಯಿತು. 2021–22ರ ಹೊತ್ತಿಗೆ ಹೈಕೋರ್ಟ್‌ನಲ್ಲಿ ಈ ಪ್ರಕರಣ ನಿರ್ಣಾಯಕ ಘಟ್ಟಕ್ಕೆ ಬಂದಿತ್ತು. ಇದೇ ವೇಳೆಗೆ ನಿಂಗಯ್ಯ ಅವರ ಕುಟುಂಬದ ರಾಮಣ್ಣ ‘ಹಿಟ್‌ ಅಂಡ್‌ ರನ್’ ಅಪಘಾತದಲ್ಲಿ ಮೃತಪಟ್ಟರು.

ಒಂದೆರಡೇ ತಿಂಗಳಲ್ಲಿ ಮಂಜುನಾಥ್ ಸಹ ಹೈಕೋರ್ಟ್‌ನಲ್ಲಿ ತಮ್ಮ ಪ್ರಕರಣವನ್ನು ಹಿಂಪಡೆದರು. ನಿಂಗಯ್ಯ ಅವರ ಕುಟುಂಬದವರು ವಿವಾದಿತ ಜಮೀನಿನ ಬಹುಪಾಲು ಜಾಗವನ್ನು ಶಾಸಕರ ಆಪ್ತರಿಗೆ ಮಾರಾಟ ಮಾಡಿದರು. ಆದರೆ ವಾಸ್ತವದಲ್ಲಿ ಮಂಜುನಾಥ್ ಅವರಿಗೆ ಬೆದರಿಕೆ ಹಾಕಿ ಪ್ರಕರಣ ವಾಪಸ್‌ ಪಡೆದುಕೊಳ್ಳುವಂತೆ ಮಾಡಲಾಗಿತ್ತು. ಆದರೆ ಹೀಗೆ ಮೂಲ ದಾಖಲೆಗಳನ್ನು ತಿದ್ದಿದ ಸಂದರ್ಭದಲ್ಲೂ ಜನ ಸಾಮಾನ್ಯರನ್ನು ‘ಭೂ ಸುರಕ್ಷಾ’ ಕಾಪಾಡುತ್ತದೆ ಎನ್ನುತ್ತಾರೆ ಸಚಿವ ಕೃಷ್ಣ ಬೈರೇಗೌಡ.

ರಾಜ್ಯದ ಎಲ್ಲ ಜಮೀನುಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಈಗ ಸ್ಕ್ಯಾನಿಂಗ್‌ ಮಾಡಲಾಗುತ್ತಿದೆ. ಅವುಗಳನ್ನು ತಿದ್ದಿರುವುದು ಮತ್ತು ತಿರುಚಿರುವುದರ ಬಗ್ಗೆ ಸಣ್ಣ ಅನುಮಾನ ಮೂಡಿದರೂ ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲು ಆದೇಶಿಸಲಾಗಿದೆ. ತಿದ್ದಿರುವುದು ಖಚಿತವಾದರೆ ಅವುಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ದಾಖಲೆಯೇ ನಕಲಿಯಾಗಿದ್ದರೆ ಅವುಗಳನ್ನು ಶಾಶ್ವತವಾಗಿ ನಾಶ ಮಾಡಲಾಗುತ್ತದೆ. ಅವುಗಳಿಗೆ ಸಂಬಂಧಿಸಿದ ವರದಿಯನ್ನು ಕಾಪಿಟ್ಟುಕೊಳ್ಳಲಾಗುತ್ತದೆ. ಅರ್ಜಿದಾರರು ಕೋರಿದ ಸಂದರ್ಭದಲ್ಲೂ ವಿಧಿವಿಜ್ಞಾನ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಇದರಿಂದ ಜನ ಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂಬುದು ಅವರ ವಿವರಣೆ. ಆದರೆ ಈವರೆಗೆ ನಕಲಿ ಮತ್ತು ತಿರುಚಿದ ದಾಖಲೆಪತ್ರಗಳ ಆಧಾರದಲ್ಲಿ ನಡೆದಿರುವ ವಂಚನೆಗಳಲ್ಲಿ ಕಾನೂನು ಪ್ರಕಾರ ಏನೂ ಮಾಡಲಾಗದ ಸ್ಥಿತಿ ಇದೆ. ಹೀಗೆ ಒತ್ತಡ ಸೃಷ್ಟಿಸಿ ಬೆದರಿಕೆ ಹಾಕಿ ಜನ ಸಾಮಾನ್ಯರ ಭೂಮಿ ಕಸಿಯುವ ಭೂಮಾಫಿಯಾಗೆ ಸಂಪೂರ್ಣ ಕಡಿವಾಣ ಬೀಳುವುದಂತೂ ದೂರದ ಮಾತು.

ಅಪಹರಣ ಕೊಲೆ ಬೆದರಿಕೆ...

ಭೂಮಾಫಿಯಾದವರು ರಾಜಿ ಮಾತುಕತೆಗೆ ಕರೆದು ಹೇಗೆ ಜಮೀನನ್ನು ಕಬಳಿಸಿದರು ಎಂಬುದನ್ನು ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ವಿವರಿಸಿದರು. ‘ರಾಜಿ ಮಾತುಕತೆಗೆ ಎಂದು ನೆಲಮಂಗಲದ ಸಮೀಪದ ಶೆಡ್‌ ಒಂದಕ್ಕೆ ನಮ್ಮನ್ನು ಕರೆದಿದ್ದರು. ನಮ್ಮ ಆಪ್ತರೊಬ್ಬರ ಮೂಲಕ ನಮ್ಮನ್ನು ಕರೆಸಲಾಗಿತ್ತು. ನಾನು ನನ್ನ ತಾತ ಮತ್ತು ತಂದೆ ಹೋಗಿದ್ದೆವು. ನನ್ನ ಹೆಂಡತಿ ಮತ್ತು ಎರಡು ವರ್ಷದ ಮಗು ಮನೆಯಲ್ಲಿದ್ದರು. ನಾವು ಅಲ್ಲಿಗೆ ಹೊಗುತ್ತಿದ್ದಂತೆಯೇ ನಮ್ಮ ಆಪ್ತರಿಗೆ ನಮ್ಮೆದುರೇ ₹1.50 ಕೋಟಿ ನೀಡಿ ಹೊರಗೆ ಕಳುಹಿಸಿದರು. ನಮಗೆ ಒಂದು ವಿಡಿಯೊ ಕಾಲ್‌ ತೋರಿಸಲಾಯಿತು. ಕೆಲವರು ನಮ್ಮ ಮನೆಗೆ ನುಗ್ಗಿ ನನ್ನ ಹೆಂಡತಿ ಮತ್ತು ಮಗುವನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಹೈಕೋರ್ಟ್‌ನಲ್ಲಿನ ಪ್ರಕರಣವನ್ನು ತಕ್ಷಣವೇ ವಾಪಸ್‌ ಪಡೆಯಬೇಕು ಇಲ್ಲವೇ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಅನಿವಾರ್ಯವಾಗಿ ಪ್ರಕರಣ ವಾಪಸ್‌ ಪಡೆದೆ’ ಎನ್ನುತ್ತಾರೆ ಮಂಜುನಾಥ್. ‘6 ಎಕರೆ 20 ಗುಂಟೆ ಜಮೀನಿನ ಅಂದಿನ ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ನಮಗೆ ಕೇವಲ 10 ಗುಂಟೆಯಷ್ಟು ಹಣ ನೀಡಿ ಸುಮ್ಮನಾಗಿಸಿದರು. ಕೆಲ ದಿನಗಳ ನಂತರ ನಾನು ಪೊಲೀಸರಿಗೆ ದೂರು ನೀಡಿದೆ. ಆದರೆ ಏನೂ ಆಗಿಲ್ಲ’ ಎಂದು ಅಸಾಯಕತೆ ತೋಡಿಕೊಂಡರು.

ಬಿಡಿಎ ಎಡವಟ್ಟು ಜನರಿಗೆ ಕುತ್ತು

ಬನಶಂಕರಿ 6ನೇ ಹಂತದ ಬಡಾವಣೆ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹೆಮ್ಮಿಗೆಪುರ ಕೆಂಗೇರಿ ಮತ್ತು ಗಾಣಕಲ್ಲು ಗ್ರಾಮಗಳ ಸುಮಾರು 2138 ಎಕರೆ ಜಮೀನಿನ ಸ್ವಾಧೀನಕ್ಕೆ 2000ನೇ ಇಸವಿಯ ನವೆಂಬರ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದರೂ 2001ರ ಆಗಸ್ಟ್‌ನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. 

ಬಿಡಿಎಯು 2007ರಲ್ಲೂ ಜಮೀನನ್ನು ಸ್ವಾಧೀನಕ್ಕೆ ಪಡೆದಿರಲಿಲ್ಲ. ಇದರ ವಿರುದ್ಧ ಕೆಲ ಭೂ ಮಾಲೀಕರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಸ್ವಾಧೀನಕ್ಕೆ ಪಡೆಯದೇ ಇರುವುದನ್ನು ತೋರಿಸಿ ಭೂಸ್ವಾಧೀನದಿಂದ ಕೈಬಿಡುವಂತೆ ಕೋರಿ 2010ರಲ್ಲಿ ಅಂದಿನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಅದನ್ನು ಆಧರಿಸಿ ಡಿನೋಟಿಫೈ ಮಾಡುವಂತೆ ಮುಖ್ಯಮಂತ್ರಿ ಆದೇಶಿಸಿದ್ದರು. ಹೀಗಿದ್ದರೂ ಬಿಡಿಎ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆಗ ಇನ್ನಷ್ಟು ಭೂ ಮಾಲೀಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಜಮೀನಿನ ಪಹಣಿಯಲ್ಲಿ ಇನ್ನೂ ತಮ್ಮ ಹೆಸರೇ ಇರುವುದನ್ನು ಹೈಕೋರ್ಟ್‌ಗೆ ಮನವಿ ಮಾಡಿಕೊಟ್ಟರು. ಈ ವೇಳೆಗೆ ಬಿಡಿಎಯು ಕೆಲ ಪ್ರದೇಶದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಿಬಿಟ್ಟಿತು. ಅವುಗಳನ್ನು ಖರೀದಿಸಿದವರಲ್ಲಿ ಕೆಲವರು ಮನೆಗಳನ್ನೂ ನಿರ್ಮಿಸಿಬಿಟ್ಟಿದ್ದರು. ಆದರೆ ಅದೇ ಜಮೀನುಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವ್ಯಾಜ್ಯಗಳು ನಡೆಯುತ್ತಲೇ ಇದ್ದವು. ಇಂತಹ ಹತ್ತಾರು ಅರ್ಜಿಗಳ ಪೈಕಿ ರಿಟ್‌ ಅರ್ಜಿ 16865/2022ಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಇ.ಎಸ್‌.ಇಂದಿರೇಶ್‌ ಅವರು ಇದೇ ಜನವರಿ 27ರಂದು ತೀರ್ಪನ್ನಿತ್ತರು. ಎಚ್‌.ನಾಗರಾಜಯ್ಯ ನಾಗರಾಜ ವಜ್ರಪ್ಪ ಮತ್ತು ಸಿದ್ದಗಂಗಪ್ಪ ಎಂಬ ನಾಲ್ವರು ಅರ್ಜಿದಾರರ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡಬೇಕು ಮತ್ತು ಅವರಿಗೆ ಭೂಮಿ ಹಿಂತಿರುಗಿಸಬೇಕು ಎಂದು ಆದೇಶಿಸಿತು. ಆದರೆ ಈ ಜಮೀನುಗಳ ಪೈಕಿ ಕೆಲವೆಡೆ ಈಗಾಗಲೇ ನಿವೇಶನ ಅಭಿವೃದ್ಧಿಪಡಿಸಿ ಹಂಚಿಕೆಯನ್ನೂ ಮಾಡಲಾಗಿದೆ. ಜತೆಗೆ ಮನೆಗಳನ್ನೂ ನಿರ್ಮಿಸಲಾಗಿದೆ. ಇದು ಬಿಡಿಎಯದ್ದೇ ಲೋಪ ಎಂದೂ ಹೈಕೋರ್ಟ್‌ ಹೇಳಿತು. ಅರ್ಜಿದಾರರಿಗೆ ಇಲ್ಲಿ ನ್ಯಾಯ ಸಿಕ್ಕಿತಾದರೂ ಹಣ ವೆಚ್ಚ ಮಾಡಿ ನಿವೇಶನ ಖರೀದಿಸಿದವರು ಮತ್ತು ಮನೆ ನಿರ್ಮಿಸಿದವರಿಗೆ ಬರ ಸಿಡಿಲೆರಗಿದಂತಾಯಿತು. ಅವರೆಲ್ಲರೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಡೆ ತಂದಿದ್ದಾರೆ. ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಕಾನೂನುಬದ್ಧವಾಗಿ ಹಣ ಪಾವತಿಸಿ ನಿವೇಶನ ಪಡೆದು ಮನೆ ನಿರ್ಮಿಸಿದವರು ಸರ್ಕಾರದ ಪ್ರಾಧಿಕಾರವೊಂದರ ಲೋಪದ ಕಾರಣದಿಂದ ಅವುಗಳನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಭೂ ಸುರಕ್ಷಾ ಉಪಕ್ರಮದ ಈಗಿನ ಸ್ಥಿತಿಯಲ್ಲಿ ಇಂತಹ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರವಿಲ್ಲ. ಆದರೆ ಭೂ ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ನ್ಯಾಯಾಲಯದ ಪ್ರಕ್ರಿಯೆಗಳೂ ‘ಭೂ ಸುರಕ್ಷಾ’ ಮೂಲಕ ನಡೆಸಿದರೆ ಇಂತಹ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿನ ಪರಿಹಾರ ದೊರಕಬಹುದು.

ನ್ಯಾಯಾಲಯಗಳು ಒಪ್ಪಿದರೆ ಪ್ರಬಲ ಅಸ್ತ್ರ

‘ಭೂ ಸುರಕ್ಷಾ’ ಉಪಕ್ರಮದಿಂದ ರಾಜ್ಯದ ಎಲ್ಲ ಕಂದಾಯ ದಾಖಲೆಗಳು ಡಿಜಿಟಲ್‌ ರೂಪದಲ್ಲಿ ಸಂಗ್ರಹವಾಗುತ್ತದೆ ಮತ್ತು ಜನರಿಗೆ ಬೆರಳ ತುದಿಯಲ್ಲಿ ಲಭ್ಯವಿರಲಿದೆ. ಒಂದು ಜಮೀನಿಗೆ ಸಂಬಂಧಿಸಿದ ಎಲ್ಲ ಅಧಿಕೃತ ದಾಖಲೆಗಳನ್ನೂ ಈ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಉದಾಹರಣೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಮೈಲನಹಳ್ಳಿ ಗ್ರಾಮದ ಸರ್ವೆ ನಂಬರ್ 51ರ ಜಮೀನನ್ನು ದರಖಾಸ್ತು ಅಡಿಯಲ್ಲಿ ಯಾರಿಗೆ ಯಾವಾಗ ಮಂಜೂರು ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ 1954ರಿಂದಲೂ ದಾಖಲೆಗಳು ಲಭ್ಯವಿದೆ. ‘ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಸರ್ಕಾರದ ವಿವಿಧ ಪ್ರಾಧಿಕಾರಗಳಿಂದ ನ್ಯಾಯಾಲಯಗಳು ಕಡತಗಳನ್ನು ತರಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಯನ್ನು ಭೂ ಸುರಕ್ಷಾ ಪೋರ್ಟಲ್‌ ಮೂಲಕವೇ ನಡೆಸಿದರೆ ದೃಢೀಕೃತ ಮತ್ತು ಅಸಲಿ ದಾಖಲೆಗಳಷ್ಟೇ ನ್ಯಾಯಾಲಯ ತಲುಪುತ್ತವೆ. ಈ ಬಗ್ಗೆ ನ್ಯಾಯಾಲಯಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ನ್ಯಾಯಾಲಯಗಳು ಇದನ್ನು ಒಪ್ಪಿದರೆ ಖಂಡಿತವಾಗಿಯೂ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ನ್ಯಾಯದಾನ ತ್ವರಿತವಾಗಿ ಆಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಕಲಿ ಮತ್ತು ತಿರುಚಿದ ದಾಖಲೆಗಳ ಮೂಲಕ ನ್ಯಾಯಾಲಯಗಳ ಹಾದಿ ತಪ್ಪಿಸುವ ಯತ್ನಗಳಿಗೆ ಕಡಿವಾಣ ಬೀಳಲಿದೆ. ಪರಿಣಾಮವಾಗಿ ವಿವಿಧ ಸ್ವರೂಪದಲ್ಲಿ ಭೂಕಬಳಿಕೆ ಪ್ರಕರಣಗಳು ಕಡಿಮೆಯಾಗಲಿವೆ’ ಎಂಬುದು ಕೃಷ್ಣ ಬೈರೇಗೌಡ ಅವರ ಪ್ರತಿಪಾದನೆ.

ನಕಲಿ ತಿರುಚಿದ ದಾಖಲೆಗಳನ್ನು ಸರಿಪಡಿಸುವ ಇಲ್ಲವೇ ತೆಗೆದುಹಾಕುವ ಪ್ರಕ್ರಿಯೆಯೂ ಇದರ ಭಾಗವಾಗಿ ನಡೆಯುತ್ತಿದೆ. ಭೂ ಕಬಳಿಕೆ ಮಾರಾಟ–ಖರೀದಿ ವಂಚನೆಗಳ ವೇಳೆ ಈ ಉಪಕ್ರಮವು ಜನ ಸಾಮಾನ್ಯರ ನೆರವಿಗೆ ಹೇಗೆ ಬರಲಿದೆ ಎಂಬುದನ್ನು ಕೆಲ ಪ್ರಕರಣಗಳ ನಿದರ್ಶನದ ಮೂಲಕ ಪರಿಶೀಲಿಸಲಾಗಿದೆ. ಆದರೆ ಈ ಹಿಂದೆ ನಡೆದು ಈಗಾಗಲೇ ಇತ್ಯರ್ಥವಾಗಿರುವ ಭೂ ವಂಚನೆ ಪ್ರಕರಣಗಳ ವಿಚಾರದಲ್ಲಿ ‘ಭೂ ಸುರಕ್ಷಾ’ ಯೋಜನೆಯಿಂದ ಗಣನೀಯ ಪ್ರಮಾಣದಲ್ಲಿ ನೆರವು ಸಿಗುವುದಿಲ್ಲ ಎಂಬುದಂತೂ ಸ್ಪಷ್ಟ. ಆದರೆ ಇನ್ನೂ ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿ ‘ಭೂ ಸುರಕ್ಷಾ’ದ ನೆರವು ಪಡೆಯಲು ಅವಕಾಶವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದೆ ನಡೆಯಬಹುದಾಗಿದ ಇಂತಹ ವಂಚನೆಗಳನ್ನು ಈ ಉಪಕ್ರಮವು ತಡೆಯುವ ಸಾಧ್ಯತೆಯಂತೂ ಗಟ್ಟಿಯಾಗಿಯೇ ಇದೆ. ನ್ಯಾಯಾಲಯದ ಪ್ರಕ್ರಿಯೆಗಳಿಗೂ ಈ ಪೋರ್ಟಲ್‌ನ ಮೂಲಕ ದಾಖಲೆಗಳನ್ನು ಒದಗಿಸುವುದು ಅನುಷ್ಠಾನಕ್ಕೆ ಬಂದರೆ ‘ಭೂ ಸುರಕ್ಷಾ’ವು ಇನ್ನಷ್ಟು ಶಕ್ತಿಯುತವಾಗಲಿದೆ.

ಸಚಿವರ ಪ್ರತಿಪಾದನೆ

‘ಈ ಎಲ್ಲ ಪ್ರಕ್ರಿಯೆ ಆನ್‌ಲೈನ್‌ ಮೂಲಕವೇ ಆಗುತ್ತದೆ. ಜನರು ನಾಡ ಕಚೇರಿಗೆ ತಾಲ್ಲೂಕು ಕಚೇರಿಗೆ ಭೇಟಿ ನೀಡುವ ಅವಶ್ಯಕತೆಯೇ ಬೀಳುವುದಿಲ್ಲ. ಭೂ ಸುರಕ್ಷಾ ಆರಂಭವಾದ ನಂತರ ಈವರೆಗೆ 4.50 ಲಕ್ಷ ಮಂದಿ ಈ ಪೋರ್ಟಲ್‌ ಮೂಲಕ ಮನವಿ ಸಲ್ಲಿಸಿ ಒಟ್ಟು 18 ಲಕ್ಷ ಪುಟಗಳಷ್ಟು ದಾಖಲೆಪತ್ರಗಳ ಡಿಜಿಟಲ್‌ ಪ್ರತಿ ಪಡೆದುಕೊಂಡಿದ್ದಾರೆ. ಇದರಲ್ಲಿ 1.25 ಲಕ್ಷ ಮಂದಿ ತಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿಯೇ ದಾಖಲೆ ಪತ್ರಗಳನ್ನು ಪಡೆದುಕೊಂಡಿದ್ದಾರೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.

ಫಲಾನುಭವಿಗಳ ಅನಿಸಿಕೆ ಭೂ ಸುರಕ್ಷಾ ಯೋಜನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ತುಮಕೂರು ನಿವಾಸಿ ಲಿಂಗರಂಗಣ್ಣ ಅವರನ್ನು ಸಂಪರ್ಕಿಸಲಾಯಿತು. ‘ನೆಲಮಂಗಲ ತಾಲ್ಲೂಕಿನ ಹುರಿಯಪ್ಪನಪಾಳ್ಯದ ಸರ್ವೆ ನಂ:55ರಲ್ಲಿ ನಮ್ಮ ಜಮೀನಿದ್ದು 30 ವರ್ಷಗಳಿಂದ ಭೂ ವ್ಯಾಜ್ಯವಿದೆ. ಕೆಲವು ದಾಖಲೆಗಳನ್ನು ಒದಗಿಸುವಂತೆ ನಾಡಕಚೇರಿ ಮತ್ತು ತಾಲ್ಲೂಕು ಕಚೇರಿಯಲ್ಲಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದೆವು. ಕಡತ ಲಭ್ಯವಿಲ್ಲ ಎಂದು ಹಿಂಬರಹ ಬರೆದುಕೊಡುತ್ತಿದ್ದರು. ಈಚೆಗೆ ಭೂ ಸುರಕ್ಷಾ ಪೋರ್ಟಲ್‌ ಬಗ್ಗೆ ವಕೀಲರೊಬ್ಬರು ತಿಳಿಸಿದರು. ಆನಂತರ ನಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಅದರಲ್ಲಿ ಪರಿಶೀಲಿಸಿದೆ. 1941ನೇ ವರ್ಷದಿಂದ ಎಲ್ಲ ಮೂಲ ದಾಖಲೆಗಳೂ ಅದರಲ್ಲಿ ಲಭ್ಯವಿದೆ. ಇದರಿಂದ ಬಹಳ ಅನುಕೂಲವಾಗಿದೆ’ ಎಂದರು. ‘ನಮ್ಮ ಜಮೀನಿನ ಭಾಗವಾಗಿರುವ ಖರಾಬು ಜಮೀನಿಗೆ ಸಂಬಂಧಿಸಿದಂತೆ ನಮ್ಮ ದಾಯಾದಿಗಳೇ ನಕಲಿ ದಾಖಲೆ ಸೃಷ್ಟಿಸಿ ಪಹಣಿ ಮಾಡಿಸಿಕೊಂಡಿದ್ದಾರೆ. ಅದರ ಆಧಾರದಲ್ಲಿ ಪೋಡಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಭೂ ಸುರಕ್ಷಾ ಪೋರ್ಟಲ್‌ನಲ್ಲಿ ಮೂಲ ಪೋಡಿ ಲಭ್ಯವಿದ್ದು ಅದರ ಆಧಾರದಲ್ಲಿ ಪೋಡಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ನಮ್ಮ ಪ್ರಯತ್ನವೇ ಇಲ್ಲದೆ ಭೂ ಸುರಕ್ಷಾ ಕಾರಣದಿಂದ ನಮಗೆ ಒಂದು ಹಂತದ ಜಯ ಸಿಕ್ಕಂತಾಗಿದೆ’ ಎನ್ನುತ್ತಾರೆ ಲಿಂಗರಂಗಣ್ಣ ಅವರ ಅಣ್ಣನ ಮಗ ಆರ್‌.ವಿ.ರಂಗನಾಥ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.