ADVERTISEMENT

ಒಳನೋಟ: ಮಗುವಿನ ಆಟ ಕಿತ್ತುಕೊಂಡ ‘ಅಪೌಷ್ಟಿಕತೆ

ಪೌಷ್ಟಿಕ ಆಹಾರ ಸಿಗದ ಕಾರಣ ಕಾಲುಗಳ ಶಕ್ತಿ ಕಳೆದುಕೊಂಡ ನಾಲ್ಕು ವರ್ಷದ ರಜಾಬಿ

ಸಂತೋಷ ಈ.ಚಿನಗುಡಿ
Published 14 ಆಗಸ್ಟ್ 2021, 20:03 IST
Last Updated 14 ಆಗಸ್ಟ್ 2021, 20:03 IST
ತಾಯಿ ಶಾಹೀದಾ ಆಸರೆಯಿಂದ ಎದ್ದುನಿಲ್ಲಲು ಪ್ರಯತ್ನಿಸುತ್ತಿರುವ ಮಗಳು ರಜಾಬಿ
ತಾಯಿ ಶಾಹೀದಾ ಆಸರೆಯಿಂದ ಎದ್ದುನಿಲ್ಲಲು ಪ್ರಯತ್ನಿಸುತ್ತಿರುವ ಮಗಳು ರಜಾಬಿ   

ಸಿಂಧನೂರ (ರಾಯಚೂರು ಜಿಲ್ಲೆ): ಇಲ್ಲಿಯ ಮೆಹಬೂಬ್‌ ಕಾಲೊನಿಯ ನಾಲ್ಕು ವರ್ಷದ ಪುಟಾಣಿ ರಜಾಬಿಗೆ ಎಲ್ಲಾ ಮಕ್ಕಳಂತೆ ಓಡಾಡಿಕೊಂಡು, ಆಟವಾಡುವ ಆಸೆ. ಆದರೆ, ಅಪೌಷ್ಟಿಕತೆಯ ಕಾರಣ ಈ ಮಗುವಿನ ಕಾಲುಗಳಿಗೆ ಶಕ್ತಿ ಬಂದಿಲ್ಲ. ಕುಣಿದು ನಲಿಯಬೇಕಾದ ವಯಸ್ಸಿನಲ್ಲಿ ಮಗು ತೆವಳಿಕೊಂಡೇ ಹೋಗುತ್ತಿದೆ.

ರಜಾಬಿ ತಂದೆ ಶಬ್ಬೀರ್‌ (25) ಹಾಗೂ ತಾಯಿ ಶಾಹೀದಾ (23) ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಚಿಕ್ಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಈ ದಂಪತಿಯ ಬಡತನದ ಕಾರಣ, ಮಗಳಿಗೆ ಪೌಷ್ಟಿಕ ಆಹಾರ ನೀಡಲು ಆಗುತ್ತಿಲ್ಲ. ಶಾಹೀದಾ ಅವರು ಗರ್ಭಿಣಿ ಇದ್ದಾಗಲೇರಕ್ತಹೀನತೆಯ ತೊಂದರೆ ಅನುಭವಿಸಿದರು. ಹೆರಿಗೆ ನಂತರ ಮಗು ಕಡಿಮೆ ತೂಕವಿತ್ತು. ಇದೀಗ ನಾಲ್ಕು ವರ್ಷ ಕಳೆದ ಮೇಲೂ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡಿಲ್ಲ. ತೂಕ ಕೂಡ 8.4 ಕೆ.ಜಿ ಇದೆ.

ಸಿಂಧನೂರು, ರಾಯಚೂರು, ಕಲಬುರ್ಗಿ ಸರ್ಕಾರಿ ಆಸ್ಪತ್ರೆಗಳಿಗೆ ಹಲವು ಬಾರಿ ತೋರಿಸಿದ್ದಾರೆ. ‘ಕಾಲುಗಳಿಗೆ ಏನೂ ತೊಂದರೆ ಇಲ್ಲ. ಶಕ್ತಿ ಇಲ್ಲದ ಕಾರಣ ಮಗು ನಡೆಯುತ್ತಿಲ್ಲ. ಸತ್ವಯುತ ಆಹಾರ ಕೊಟ್ಟರೆ ಸರಿಯಾಗುತ್ತಾಳೆ ಎಂದು ವೈದ್ಯರು ಹೇಳಿ ಕಳುಹಿಸಿದ್ದಾರೆ. ಎನ್‌ಆರ್‌ಸಿ ಕೇಂದ್ರಗಳಲ್ಲೂ ತಿಂಗಳವರೆಗೆ ದಾಖಲಿಸಿದ್ದೇವೆ. ಆದರೂ ಸುಧಾರಣೆ ಕಂಡಿಲ್ಲ’ ಎನ್ನುವುದು ದಂಪತಿಯ ನೋವಿನ ನುಡಿ.

ADVERTISEMENT

‘ಗರ್ಭ ಧರಿಸಿದ್ದಾಗ ಸರ್ಕಾರಿ ಆಸ್ಪತ್ರೆಯ ವೈದ್ಯರು, ಅಂಗನವಾಡಿಯವರು ಹೇಳಿದ ಎಲ್ಲ ನಿಯಮಗಳನ್ನು ಪಾಲಿಸಿದ್ದೇನೆ. ಆದರೆ, ಸರ್ಕಾರದಿಂದ ನೀಡುವ ಧಾನ್ಯಗಳು ಎರಡು ದಿನಕ್ಕೂ ಸಾಲುತ್ತಿಲ್ಲ. ಅಕ್ಕಿ, ತೊಗರಿ ಬೇಳೆ, ಹೆಸರು ಬೇಳೆ, ಸಕ್ಕರೆ, ಬೆಲ್ಲ, ಗೋಧಿ ಎಲ್ಲವನ್ನೂ ಅರ್ಧ ಕೆ.ಜಿ ಮಾತ್ರ ಕೊಡುತ್ತಾರೆ. ಹಾಲಿನ ಪುಡಿ ಒಂದು ಪಾಕೀಟು, ಆರು ಮೊಟ್ಟೆ... ಇದು ಒಂದು ತಿಂಗಳಿಗೆ ಹೇಗೆ ಸಾಲುತ್ತದೆ? ಹೆರಿಗೆ ಸಂದರ್ಭದಲ್ಲಿ ಅನಿವಾರ್ಯ ಆಗಬಹುದು ಎಂದು ಸ್ವಲ್ಪ ಹಣ ಕೂಡಿಟ್ಟುಕೊಳ್ಳಬೇಕಾಯಿತು. ಸಮತೋಲಿತ ಆಹಾರ ಸೇವಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ನಮ್ಮ ಮಗಳು ಅಂಗವಿಕಲೆಯಾಗುತ್ತಾಳೇನೋ’ ಎಂದು ಕಣ್ಣೀರಿಟ್ಟರು ಶಾಹೀದಾ.

‘ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಶಕ್ತಿ ನನ್ನಲ್ಲಿಲ್ಲ. ಮಗಳು ತೆವಳುತ್ತ ಹೋಗುವುದನ್ನು ನೋಡಲು ಹಿಂಸೆಯಾಗುತ್ತಿದೆ’ ಎಂಬ ಅಸಹಾಯಕತೆ ಶಬ್ಬೀರ್‌ ಅವರದು.‌ ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಶಾಹೀದಾ, ಮಗಳಿಗೆ ಪೌಷ್ಟಿಕ ಆಹಾರ ನೀಡುವ ಸವಾಲಿನ ಜತೆಗೆ ತಮ್ಮ ಆರೋಗ್ಯವನ್ನೂ ನೋಡಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.