ADVERTISEMENT

ವರ್ಗಾವಣೆ ಜಾಲ: ಹಣವೇ ‘ಹೈ’ಕಮಾಂಡ್‌

ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದವರೆಗೆ ಹಬ್ಬಿರುವ ವರ್ಗಾವಣೆ ಜಾಲ

ವೈ.ಗ.ಜಗದೀಶ್‌
Published 2 ಫೆಬ್ರುವರಿ 2019, 20:06 IST
Last Updated 2 ಫೆಬ್ರುವರಿ 2019, 20:06 IST
ವರ್ಗಾವಣೆ ಜಾಲ
ವರ್ಗಾವಣೆ ಜಾಲ   

ಬೆಂಗಳೂರು: ಮೈ ಬಗ್ಗಿಸಿ ದುಡಿಯಬೇಕಿಲ್ಲ; ಚಿಕ್ಕಾಸು ಬಂಡವಾಳವಾಗಲಿ, ಕಾರ್ಯತತ್ಪರಯಿಂದ ತೊಡಗಿಸಿಕೊಳ್ಳುವ ಬುದ್ಧಿಮತ್ತೆಯೂ ಬೇಕಿಲ್ಲ. ಜಾತಿ, ಪ್ರಭಾವ ಇದ್ದರೆ ಲಕ್ಷಗಟ್ಟಲೇ ಅನಾಮತ್ತಾಗಿ ದುಡಿಯುವ ಏಕೈಕ ಅವಕಾಶ ಇರುವುದು ‘ವರ್ಗಾವಣೆ’ ಎಂಬ ಅಡ್ಡಕಸುಬಿನಲ್ಲಿ ಮಾತ್ರ.

ಸರ್ಕಾರಿ ನೌಕರರ ವರ್ಗಾವಣೆ ಎಂಬ ಕೈ ಬದಲಾವಣೆಯ ಜಾಲದಾಟದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ ₹500 ಕೋಟಿಗೂ ಮಿಗಿಲು ವಹಿವಾಟು ನಡೆಯುತ್ತದೆ.

ವಿಧಾನಸೌಧದಿಂದ ಗ್ರಾಮಪಂಚಾಯ್ತಿವರೆಗಿನ ಸರ್ಕಾರಿ ಆಡಳಿತಾಂಗವನ್ನುಚಾಚಿ ಬಳಸಿ ಬೆಳೆದುಕೊಂಡಿರುವ ಭ್ರಷ್ಟಾಚಾರವೆಂಬ ವಿಷವೃಕ್ಷದ ತಾಯಿ ಬೇರಿನಂತಿರುವುದು ವರ್ಗಾವಣೆ. ಕುರುಡು ಕಾಂಚಾಣದ ಥಕಥೈ ಕುಣಿತದ ಈ ಕರಾಳ ಜಾಲದಲ್ಲಿ ಅಧಿಕಾರಿಗಳು, ಶಾಸಕರು, ಸಚಿವರು, ಜನಪ್ರತಿನಿಧಿಗಳ ಕುಟುಂಬಸ್ಥರು ಹಾಗೂ ಮಧ್ಯವರ್ತಿಗಳ ಶಾಮೀಲುದಾರಿಕೆ ಜಗಜ್ಜಾಹೀರು. ಇದೊಂಥರ ಹಗಲು ದರೋಡೆ.

ADVERTISEMENT

ಲಂಚದ ಹಣದ ಚಲಾವಣೆ, ವರ್ಗಾವಣೆ, ಚುನಾವಣೆ ಈ ಮೂರೂ ಒಂದಕ್ಕೊಂದು ಬೆಸೆದುಕೊಂಡಿವೆ. ಲಾಭಕಟ್ಟಿನ ಹುದ್ದೆ ಗಿಟ್ಟಿಸಲು ಅವಶ್ಯವಾದ ದುಡ್ಡಿಗಾಗಿ ಅಧಿಕಾರಿ/ ನೌಕರರು ಲಂಚ ಹೊಡೆದು, ಕಾಮಗಾರಿಗಳಲ್ಲಿ ಕಮಿಷನ್‌ ಲಪಟಾಯಿಸುತ್ತಾರೆ. ಅದೇ ಇಡುಗಂಟನ್ನು ಶಾಸಕ/ಸಚಿವರಿಗೆ ಅಥವಾ ಅವರ ಆಪ‍್ತರಿಗೆ ಕೊಟ್ಟು ವರ್ಗ ಮಾಡಿಸಿಕೊಳ್ಳುತ್ತಾರೆ. ಅದೇ ದುಡ್ಡನ್ನು ಬಳಸಿ ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಗೆದ್ದ ಮೇಲೆ ಮತ್ತೆ ಹಣ ಸಂಪಾದಿಸಲು ವರ್ಗಾವಣೆಗೆ ಕೈ ಹಾಕುತ್ತಾರೆ. ಈ ವಿಷವರ್ತುಲ ವ್ಯವಸ್ಥೆಯನ್ನು ಸರ್ವಾಂಗ ಭ್ರಷ್ಟವಾಗಿಸಿರುವುದು ರಹಸ್ಯವೇನಲ್ಲ.

ವಿಧಾನಸೌಧವನ್ನು ಕಟ್ಟಿಸಿದ ಕೆಂಗಲ್ ಹನುಮಂತಯ್ಯನವರು ಆ ಬೃಹತ್ ಕಟ್ಟಡದ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಕೆತ್ತಿಸಿದರು. ಅಲ್ಲಿ ‘ದೇವರ’ ಬದಲು ‘ದುಡ್ಡಿನ’ ಎಂದಿರಬೇಕಾಗಿತ್ತು ಎಂಬ ಟೀಕೆ ಈಕಟ್ಟಡ ಕಟ್ಟಿದಾಗಿನಿಂದಲೂ ಚಾಲ್ತಿಯಲ್ಲಿದೆ.

ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹೊತ್ತಿನಲ್ಲಿ, ‘ವಿಧಾನಸೌಧದಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳ ಕಾಟ ಮಿತಿ ಮೀರಿದೆ. ಪ್ರತಿನಿತ್ಯ ದಲ್ಲಾಳಿಗಳು ಓಡಾಡುತ್ತಿರುವುದು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದೆ. ಅದಕ್ಕೆ ಕಡಿವಾಣ ಹಾಕುತ್ತೇನೆ’ ಎಂದು ಏರುಧ್ವನಿಯಲ್ಲಿ ಗುಡುಗಿದ್ದರು. ಆ ದಿಕ್ಕಿನತ್ತ ಅವರು ಮನಸ್ಸು ಮಾಡಲೇ ಇಲ್ಲ.

ಅವರ ಹೇಳಿಕೆಗೆ ಸಾಕ್ಷಿಯೆಂಬಂತೆ ತಿಂಗಳ ಹಿಂದಷ್ಟೇ,ಹಿಂದುಳಿದ ವರ್ಗಗಳ ಇಲಾಖೆ ಸಚಿವ ಸಿ. ಪುಟ್ಟರಂಗ ಶೆಟ್ಟಿ ಆಪ್ತ ಮೋಹನಕುಮಾರ್ ಬಳಿ ಇದ್ದ ₹25.76 ಲಕ್ಷವನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದರು. ವರ್ಗಾವಣೆ, ಉದ್ಯೋಗದ ಹೆಸರಿನಲ್ಲಿ ಲಕ್ಷಗಟ್ಟಲೇ ಲಂಚ ಸ್ವೀಕರಿಸಿದ್ದ ಇಬ್ಬರು ದಲ್ಲಾಳಿಗಳು ಪೊಲೀಸರ ಸೆರೆಗೆ ಬಿದ್ದಿದ್ದರು.

ದುಡ್ಡೇ ದೊಡ್ಡಪ್ಪ, ವರ್ಗ ಅದರಪ್ಪ: ಪ್ರತಿ ವರ್ಷ ಮಾರ್ಚ್‌–ಏಪ್ರಿಲ್‌ ಬಂತೆಂದರೆ ‘ವರ್ಗಾವಣೆ ಸುಗ್ಗಿ’ ಆರಂಭ. ನಿಗದಿತ ‘ಕಪ್ಪ’ ಕೊಡದೇ ಇದ್ದರೆ ವರ್ಗಾವಣೆ ಎಂಬುದು ನೌಕರರಿಗೆ ಜೀವನಪೂರ್ತಿ ಗಗನ ಕುಸುಮವೇ. ಎಷ್ಟೇ ನಿಯಮಾವಳಿಗಳಿದ್ದರೂ ರಾಜಕೀಯ ಹಸ್ತಕ್ಷೇಪ ನಿಷೇಧವಾಗಿದ್ದರೂ ವರ್ಗಾವಣೆ ಎಂಬ ‘ದಂಧೆ’ಗೆ ಎಗ್ಗಿಲ್ಲ.

ಹುದ್ದೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು, ಯೋಜನೆಗಳ ಮೊತ್ತ ಆಧರಿಸಿ ಎಂಜಿನಿಯರ್‌ಗಳು, ಬಾರ್, ಮಸಾಜ್ ಕೇಂದ್ರ, ಇಸ್ಪೀಟ್ ಅಡ್ಡೆ, ವಾಣಿಜ್ಯ ಕೇಂದ್ರಗಳ ವಹಿವಾಟಿನ ಲೆಕ್ಕದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌, ಡಿವೈಎಸ್‌ಪಿ, ಅಬಕಾರಿ ಡಿಸಿ ಹಾಗೂ ಇನ್‌ಸ್ಪೆಕ್ಟರ್‌ಗಳು, ಭೂಮಿ ನೋಂದಣಿ ವ್ಯವಹಾರ ಲೆಕ್ಕ ಹಾಕಿ ಸಬ್ ರಿಜಿಸ್ಟ್ರಾರ್‌ಗಳು, ಭೂ ಪರಿವರ್ತನೆ– ಭೂಮಿಯ ಬೆಲೆಯ ಆಧರಿಸಿ ಎಸಿ ಹುದ್ದೆಗಳಿಗೆ ಅಲಿಖಿತವಾಗಿ ‘ದರ’ ನಿಗದಿಯಾಗಿಬಿಟ್ಟಿದೆ. ಯಾವ ಪಕ್ಷದ ಸರ್ಕಾರವೇ ಇರಲಿ ‘ಮಾಮೂಲು’ ಕೊಡದಿದ್ದರೆ ವರ್ಗಾವಣೆ ಆದೇಶ ಕೈಗೆ ಸಿಗುವುದಿಲ್ಲ.

ಉಳಿದ ಇಲಾಖೆಗಳ ಲೆಕ್ಕ ಒಂದಾದರೆ, ಆರ್‌ಟಿಒ, ಆರ್‌ಟಿಒ ವರ್ಗಾವಣೆಗೆ ‘ಹುದ್ದೆ ಹರಾಜು’ ಪದ್ಧತಿ ಚಾಲ್ತಿಯಲ್ಲಿದೆ. ಆರ್‌ಟಿಒಗಳೇ ಸೇರಿಕೊಂಡು ವರ್ಷಕ್ಕೆ ಅಥವಾ ಮೂರು ವರ್ಷದ ಲೆಕ್ಕಕ್ಕೆ ಹರಾಜು ಕೂಗುತ್ತಾರೆ. ಅತಿ ಹೆಚ್ಚು ಕಮಾಯಿ ತರುವ ಹುದ್ದೆ ಬೇಕಾದರೆ ಹರಾಜು ಕೂಗಬೇಕು. ಹೀಗೆ ಬಂದ ಒಟ್ಟು ಮೊತ್ತ ಎಲ್ಲ ಹಂತದವರಿಗೂ ಹಂಚಿಕೆಯಾಗುತ್ತದೆ.

‘ಕಾಣಿಕೆ’ ಕೊಡುವುದು ಹೇಗೆ: ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಅಧಿಕಾರಿಗಳನ್ನು ಹಾಕಿಸಿಕೊಳ್ಳು ವಾಗ ಕೆಲವು ಶಾಸಕರು ನೇರವಾಗಿ ದುಡ್ಡು ಪಡೆದುಕೊಳ್ಳುವ ಪದ್ಧತಿ ಇದೆ. ಅನುಭವಸ್ಥರಾದರೆ ಪಿಎ ಅಥವಾ ತಮ್ಮ–ಅಣ್ಣ–ಮಗ ಯಾರಾದರೊಬ್ಬ ಮಧ್ಯವರ್ತಿಯನ್ನು ಇಟ್ಟುಕೊಂಡಿರುತ್ತಾರೆ.

ಸಚಿವರು, ಮುಖ್ಯಮಂತ್ರಿ ಹಂತದಲ್ಲಿ ಇದಕ್ಕೊಂದು ಬೇರೆ ವ್ಯವಸ್ಥೆ ಇರುತ್ತದೆ. ಯಾವುದೇ ಕೆಲಸವಾಗಬೇಕಾದರೆ ಅವರ ‘ಆಪ್ತ’ ಬಳಗದಲ್ಲಿ ಗುರುತಿಸಿಕೊಂಡವರಿಗೆ ‘ಕಾಣಿಕೆ’ ತಲುಪಬೇಕು. ಕೆಲವರು ತಮ್ಮ ನಂಬಿಕಸ್ಥ ‘ಅಡುಗೆ’ಯವನನ್ನು ಇದಕ್ಕೆ ನೇಮಿಸಿಕೊಂಡಿದ್ದುಂಟು. ಮತ್ತೊಬ್ಬರು, ನಿವೃತ್ತ ಅಧಿಕಾರಿಯಾಗಿದ್ದ ತಮ್ಮ ಅಣ್ಣ, ಮತ್ತೊಬ್ಬರು ತಮ್ಮ ಪತ್ನಿಗೆ ಈ ಜವಾಬ್ದಾರಿ ವಹಿಸಿದ್ದರು. ತಮ್ಮ ಕಚೇರಿಯಲ್ಲಿ ಕೆಲಸ ಮಾಡದ ಆದರೆ ಬೇರೆ ಯಾವುದೋ ನಿಗಮದಲ್ಲಿ ಕೆಲಸ ಮಾಡುವ ನಂಬಿಕಸ್ಥರನ್ನು ಇದಕ್ಕಾಗಿ ನಿಯೋಜಿಸಿದ್ದ ನಿದರ್ಶನಗಳು ಇವೆ. ಕೆಲವರು ತಮ್ಮ ಖಾಸಾ ಸಂಬಂಧಿಗಳನ್ನೇ ಈ ಕೆಲಸಕ್ಕೆ ಇಟ್ಟುಕೊಂಡ ನಿದರ್ಶನಗಳೂ ಇವೆ.

ಹಣ ತಲುಪಿದರೆ ಕೆಲಸ: ವರ್ಗಾವಣೆ ಎಂಬುದು ನಿಯತ್ತು, ನಂಬಿಕೆ ಮೇಲೆ ನಡೆಯುವ ಕೆಲಸ. ಮಿನಿಟ್‌ (ಶಿಫಾರಸು ಪತ್ರ) ಹಾಕಿಸುವುದರಿಂದ ಹಿಡಿದು, ವರ್ಗಾವಣೆ ಆದೇಶ ಕೊಡಿಸುವವರೆಗೆ ಬೇರೆ ಬೇರೆ ಹಂತದಲ್ಲಿ ಹಣ ಸ್ವೀಕರಿಸುವ ಪದ್ಧತಿ ಚಾಲ್ತಿಯಲ್ಲಿದೆ. ಯಾವುದೇ ಗುರುತಿಲ್ಲದ ಬರೇ ಶಿಫಾರಸು ಪತ್ರ ಕೊಟ್ಟರೆ ಅದನ್ನು ಪಡೆದದ್ದಷ್ಟೇ ಭಾಗ್ಯ. ವರ್ಗಾವಣೆ ಇಲ್ಲ.

ಸಿಂಗಲ್‌ ಸ್ಟಾರ್ ಅಥವಾ ನೀಲಿ ಬಣ್ಣದ ಗುರುತು ಇದ್ದರೆ ಕಾನೂನು ಪ್ರಕಾರ ಇರುವ ಅವಕಾಶ ಬಳಸಿ ಮಾಡಲೇಬೇಕು. ಡಬ್ಬಲ್‌ ಸ್ಟಾರ್ ಅಥವಾ ಹಸಿರು ಬಣ್ಣದಲ್ಲಿ ಗುರುತು ಹಾಕಿದ್ದರೆ ‘ಸೂಕ್ತ–ಲಾಭ ಕಟ್ಟಿನ’ ಜಾಗಕ್ಕೆ ವರ್ಗಾವಣೆ ಮಾಡಬೇಕು. ತ್ರಿಬ್ಬಲ್ ಸ್ಟಾರ್ ಹಾಗೂ ಕೆಂಪು ಗುರುತು ಇದ್ದರೆ ಕಡ್ಡಾಯವಾಗಿ ಆತ ಕೇಳಿದ ಜಾಗಕ್ಕೆ ವರ್ಗಾವಣೆ ಮಾಡಬೇಕು ಎಂಬುದು ಅಲಿಖಿತ ನಿಯಮ. ಮಿನಿಟ್‌ನ ಮೌಲ್ಯಕ್ಕೆ ತಕ್ಕಂತೆ ಹಣ ನಿಗದಿಯಾಗಿರುತ್ತದೆ.

ಹಾಗಂತ ಹಣ ಕೊಟ್ಟು ಬಂದವರಿಗೆ ಆ ಹುದ್ದೆ ಕಾಯಂ ಎಂದೇನೂ ಅಲ್ಲ. ಕೆಲವು ವರ್ಗಾವಣೆಗಳಲ್ಲಿ ಆ ಹುದ್ದೆಯನ್ನು ವಹಿಸಿಕೊಳ್ಳುವವರೆಗೆ ಮಾತ್ರ ಹಣದ ಬದ್ಧತೆ ಇರುತ್ತದೆ. ಇನ್ನು ಕೆಲವೊಮ್ಮೆ ವರ್ಷ, ಮೂರು ವರ್ಷ ನಿಗದಿ ಮಾಡಲಾಗಿರುತ್ತದೆ. ಅದಕ್ಕಿಂತ ಹೆಚ್ಚು ಹಣ ಕೊಡುವವರು ಬಂದರೆ ಅವರನ್ನು ಎತ್ತಂಗಡಿ ಮಾಡಿಸಿ, ಬೇಕಾದವರನ್ನು ಹಾಕಿಸಿಕೊಂಡ ನಿದರ್ಶನಗಳೂ ಇವೆ.

ಕೊಟ್ಟ ಹಾಗೂ ಸ್ವೀಕರಿಸಿದ ಹಣಕ್ಕೆ ಯಾವುದೇ ಆಧಾರ ಇಲ್ಲದೇ ಇರುವುದರಿಂದ ‘ನಿಯತ್ತು’ ಎಂಬುದೇ ಇಲ್ಲಿ ಪ್ರಧಾನ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಹಾಲಿ ವಿಧಾನಪರಿಷತ್ತಿನ ಸದಸ್ಯರೊಬ್ಬರು ಇಂತಹ ‘ನಿಯತ್ತಿ’ ಗೆ ಹೆಸರುವಾಸಿ. ಹುದ್ದೆಯ ವರ್ಗಾವಣೆಗೆ ₹10 ಲಕ್ಷ ಇದ್ದರೆ, ಮಿನಿಟ್ ಹಾಕಿಸಿದ ಕೂಡಲೇ ₹2 ಲಕ್ಷ, ಕಡತ ಸಿದ್ಧವಾದ ಕೂಡಲೇ ₹2 ಲಕ್ಷ ಇಸಿದುಕೊಳ್ಳುತ್ತಿದ್ದರು. ಹೀಗೆ ಹಂತಹಂತವಾಗಿ ವಸೂಲು ಮಾಡಿ, ವರ್ಗಾವಣೆಯ ಆದೇಶ ನೀಡುವ ಹೊತ್ತಿಗೆ ಲೆಕ್ಕ ಚುಕ್ತಾ ಆಗಿರುತ್ತಿತ್ತು. ಒಂದು ವೇಳೆ ವರ್ಗಾವಣೆಯಾಗದೇ ಇದ್ದರೆ ಖರ್ಚು ಕಳೆದು ಹಣ ವಾಪಸು ಕೊಡುವಷ್ಟು ‘ವ್ಯಾವಹಾರಿಕ’ ನೈಪುಣ್ಯ ಅವರಿಗಿದೆ ಎಂದು ಆಪ್ತರೇ ಹೇಳುವುದುಂಟು.‌

**

ಭ್ರಷ್ಟತೆ ಹೆಚ್ಚಿದರೆ ಮುಖ್ಯಸ್ಥನೇ ಹೊಣೆ

ಭ್ರಷ್ಟಾಚಾರ ತೊಡೆದುಹಾಕುವುದು ಪ್ರತಿ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಮೂಲಭೂತ ಕರ್ತವ್ಯ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಲ್ಲ ಇಲಾಖೆಗಳಲ್ಲೂ ರಚಿಸಲಾಗುವ ಸಾರ್ವಜನಿಕ ವ್ಯವಹಾರ ಮಂಡಳಿಯು ಆಯಾ ಇಲಾಖೆಯ ಪ್ರತಿ ವರ್ಷದ ಕೆಲಸಗಳ ವರದಿ ಪಡೆದು, ಭ್ರಷ್ಟಾಚಾರದ ಪ್ರಮಾಣವನ್ನು ಪರಾಮರ್ಶೆ ಮಾಡುವ ವ್ಯವಸ್ಥೆ ಜಾರಿಗೆ ತರಲಿದೆ. ಇಲಾಖೆಯಲ್ಲಿ ಕಂಡು ಬರುವ ಭ್ರಷ್ಟಾಚಾರದ ಏರಿಕೆ–ಇಳಿಕೆಗಳಿಗೆ ಆಯಾ ಇಲಾಖೆಯ ಮುಖ್ಯಸ್ಥರೇ ಹೊಣೆಯಾಗಲಿದ್ದಾರೆ.

(ವಿಧಾನಸಭೆ ಚುನಾವಣೆಯ ಹೊತ್ತಿಗೆ ಜೆಡಿಎಸ್‌ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಿವು..)

ಪ್ರಬಲ ಬೇರು

ವರ್ಗಾವಣೆಯ ಅಕ್ರಮ ನಡೆಯುವುದೇ ಸಚಿವಾಲಯದಿಂದ. ಏಕೆಂದರೆ ಪ್ರತಿ ಯೊಂದು ಆದೇಶ ಹೊರಡುವುದು ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದಲ್ಲಿರುವ ಸಚಿವಾಲಯದ ಅಧೀನ ಕಾರ್ಯದರ್ಶಿಗಳ ಹೆಸರಿನಲ್ಲಿ. ಈ ಸಚಿವಾಲ ಯದ ಸಿಬ್ಬಂದಿಗೆ ವರ್ಗಾವಣೆಯೇ ಇಲ್ಲ. ಹೆಚ್ಚೆಂದರೆ ವಿಧಾನಸೌಧ, ವಿಶ್ವೇಶ್ವರಯ್ಯ ಗೋಪುರ, ಫೋಡಿಯಂ ಬ್ಲಾಕ್‌ನಲ್ಲಿರುವ ಸಚಿವಾಲಯ ಕಚೇರಿಗಳಿಗೆ ವರ್ಗ ಮಾಡ ಬಹುದು. ಅವರನ್ನು ದೂರದ ಊರಿಗೆ ವರ್ಗಾವಣೆ ಮಾಡಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ.

**

ಟಾಪ್‌ 5 ದುಡ್ಡಿನ ಗಿಡಗಳು

1. ಲೋಕೋಪಯೋಗಿ

2. ಕಂದಾಯ

3. ಸಾರಿಗೆ

4. ಪೊಲೀಸ್

5. ಅಬಕಾರಿ

**

ಪೊಲೀಸ್, ಕಂದಾಯ, ಸಾರಿಗೆ, ಲೋಕೋಪಯೋಗಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗುವುದು.

-ಎಚ್‌.ಡಿ. ಕುಮಾರಸ್ವಾಮಿ,(ಜೆಡಿಎಸ್‌ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ)

ಇನ್ನಷ್ಟು ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.