ADVERTISEMENT

ಒಳನೋಟ | ಉತ್ತರ ಕರ್ನಾಟಕ: ನಿರ್ಜೀವವಾದ ಟ್ರಸ್ಟ್‌ಗಳು: ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 13:03 IST
Last Updated 14 ಆಗಸ್ಟ್ 2022, 13:03 IST
ರವಿಕುಮಾರ ಜಾಧವ, ಹಂಪಿ
ರವಿಕುಮಾರ ಜಾಧವ, ಹಂಪಿ   

‘ನಾಮಬಲವೇ ಆಸ್ತಿ: ಕಾಯಕ ನಾಸ್ತಿ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಆಗಸ್ಟ್‌ 14) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ಹೊಸಬರನ್ನು ನೇಮಿಸಿ’

ಖ್ಯಾತನಾಮರ ಹೆಸರಿನಲ್ಲಿರುವ ಟ್ರಸ್ಟ್‌ ಮತ್ತು ಪ್ರತಿಷ್ಠಾನಗಳಲ್ಲಿ ಕೆಲವರುಆಜೀವ ಪರ್ಯಂತ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುವುದರಿಂದ ಸಹಜವಾಗಿಯೇ ಜಡತ್ವ ಆವರಿಸುತ್ತದೆ. ಇದರಿಂದ ಅವರಲ್ಲಿ ಸರ್ವಾಧಿಕಾರಿ ಧೋರಣೆ ಬೆಳೆಯುವ ಸಾಧ್ಯತೆ ಇರುತ್ತದೆ. ಆಯಾ ಸಾಹಿತಿಗಳ ಆದರ್ಶಗಳಿಗೆ ವಿರುದ್ಧವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಅವರನ್ನು ಪ್ರಶ್ನಿಸಲಾರದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ನಾಡಿನ ಸಾಹಿತಿಗಳ, ಕಲಾವಿದರ ಚಿಂತನೆಗಳನ್ನು, ಆದರ್ಶಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರಬಲ್ಲವರನ್ನು ಗುರುತಿಸಿ ಪದಾಧಿಕಾರಿಗಳನ್ನಾಗಿ ನೇಮಿಸಬೇಕು. ಕಾಲ ಕಾಲಕ್ಕೆ ಹೊಸಬರನ್ನು ನೇಮಕ ಮಾಡುವುದರಿಂದ ವಿನೂತನ ಯೋಜನೆಗಳಿಂದ ಪ್ರತಿಷ್ಠಾನಗಳಿಗೆ ಹೊಸ ಜೀವಕಳೆ ಬರುತ್ತದೆ.

ADVERTISEMENT

–ಕಿಶೋರ್ ಸೇನಾನಿ

***

‘ಮೂಲ ಉದ್ದೇಶವನ್ನೇ ಮರೆತ ಟ್ರಸ್ಟ್‌ಗಳು’

ರಾಜ್ಯದ ಕೆಲವು ಟ್ರಸ್ಟ್‌ಗಳು ತಮ್ಮ ಮೂಲ ಉದ್ದೇಶವನ್ನೇ ಮರೆತಿವೆ. ಹಣದಾಸೆಗೆ ಬಲಿಯಾಗಿ ಅನರ್ಹ ವ್ಯಕ್ತಿಗಳಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡುತ್ತಿವೆ. ಸರ್ಕಾರ ಕೆಲವು ಸಾಹಿತ್ಯವನ್ನು ಉಳಿಸಿ ಬೆಳೆಸಬೇಕೆನ್ನುವ ಉದ್ದೇಶದಿಂದ ಟ್ರಸ್ಟ್‌ಗಳನ್ನು ಸ್ಥಾಪಿಸಿದೆ. ಆದರೆ, ಕೆಲವು ಟ್ರಸ್ಟ್‌ಗಳು ಪ್ರಶಸ್ತಿ, ಪುರಸ್ಕಾರಗಳನ್ನು ನೀಡುವಲ್ಲಿ ಪಾರದರ್ಶಕತೆ ಇಲ್ಲದಿರುವುದು, ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತಿಲ್ಲ. ಸಾಹಿತ್ಯ ಮತ್ತು ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸಗಳನ್ನು ಮಾಡಲಿ. ಸರ್ಕಾರ ನೀಡುವ ಅನುದಾನ ಸರಿಯಾಗಿ ಬಳಕೆಯಾಗಲಿ.

- ರವಿಕುಮಾರ ಜಾಧವ, ಹಂಪಿ

***

‘ಅನುದಾನ ಹೆಚ್ಚಿಸಲಿ’

ಕನ್ನಡ ಸಾಹಿತ್ಯ-ಸಂಸ್ಕೃತಿ ಬೆಳೆಯಬೇಕಾದರೆ ಕೆಲವು ಪುಸ್ತಕಗಳನ್ನು ಹೊರ ತಂದು, ಪರಿಚಯಿಸಬೇಕಾಗುತ್ತದೆ. ಆದರೆ, ಟ್ರಸ್ಟ್‌ಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಕಡಿಮೆ ಇರುವುದರಿಂದ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹೆಸರಿಗೆ ಮಾತ್ರ ಟ್ರಸ್ಟ್‌ಗಳಾಗಿ ಉಳಿದಿರುವುದು ವಿಪರ್ಯಾಸ. ಸರ್ಕಾರಕ್ಕೆ ನವೆಂಬರ್ 1 ಬಂದಾಗ ಮಾತ್ರ ಸಾಹಿತ್ಯ ಸಂಸ್ಕೃತಿ ವಿಚಾರಗಳು ನೆನಪಾಗುತ್ತದೆ. ಟ್ರಸ್ಟ್‌ಗಳು ಹೆಸರಿಗೆ ಮಾತ್ರ ಇದ್ದು, ಭೂತಬಂಗಲೆ ರೀತಿ ಕಾಣುವ ಹಂತಕ್ಕೆ ಬಂದು ನಿಂತಿವೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಇವುಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಅನುಷಾ ಎಚ್.ಜಿ., ಹೆಬ್ಬಾಳು ಕೊಪ್ಪಲು, ಮೈಸೂರು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.